Monday, 10 June 2013

ಜಿಯಾಗ್ರಫಿ ಚಾನೆಲ್‍ನ ಪ್ರಾಣಿ ಮತ್ತು ಅದನ್ನು ಸೆರೆ ಹಿಡಿಯುವ ಮನುಷ್ಯ

ಅನಂತರಾಮ ಶೆಟ್ಟಿ
    ಕಳೆದವಾರ ಕನ್ನಡಿಗರ ಮಧ್ಯೆ ಅತ್ಯಂತ ಹೆಚ್ಚು ಚರ್ಚೆಗೆ ಒಳಗಾಗಿರುವ ವಿಷಯ ಮನುಷ್ಯತ್ವ . ರಾಜಕೀಯ, ಕ್ರಿಕೆಟ್ಟು, ಗುಟ್ಕಾ.. ಸಹಿತ ಹತ್ತು-ಹಲವು ವಿಷಯಗಳ ಮಧ್ಯೆಯೂ ಮನುಷ್ಯತ್ವವನ್ನು ಪ್ರಧಾನ ಚರ್ಚಾ ವಸ್ತುವಾಗಿ ಮುನ್ನಲೆಗೆ ತಂದ ಕೀರ್ತಿ 35 ವರ್ಷದ ಹೇಮಾವತಿ, 93ರ ಅನಂತರಾಮ ಶೆಟ್ಟಿ, 48ರ ಹನುಮಂತಪ್ಪ.. ಮತ್ತಿತರರಿಗೆ ಸಲ್ಲಬೇಕು. ಇಷ್ಟಕ್ಕೂ, 'ಮನುಷ್ಯತ್ವವನ್ನು ಚರ್ಚಾವಸ್ತುವಾಗಿ ಆಯ್ಕೆ ಮಾಡಿಕೊಳ್ಳಿ' ಎಂದು ಇವರೇನೂ ಪ್ರತಿಭಟನೆ ಮಾಡಿಲ್ಲ. ಹೇಳಿಕೆಯನ್ನೂ ಕೊಟ್ಟಿಲ್ಲ. ಮನುಷ್ಯತ್ವವೇ ಇಲ್ಲದವರ ಕೈಯಲ್ಲಿ ಸಿಲುಕಿ ಪಡಬಾರದ ಕಷ್ಟವನ್ನು ಅನುಭವಿಸುತ್ತಾ ಇವರೆಲ್ಲ ಮನುಷ್ಯತ್ವವನ್ನು ಚರ್ಚೆಯ ವಸ್ತುವಾಗಿ ತೇಲಿಸಿಬಿಟ್ಟರು. ಕೈ ಕಾಲಿಗೆ ಸರಪಳಿ ಬಿಗಿದ, ದನದ ಕೊಟ್ಟಿಗೆಯಲ್ಲಿ ಮಲಗಿಸಿದ, ವರ್ಷಗಟ್ಟಲೆ ಸ್ನಾನವನ್ನೇ ಮಾಡಿಸದ, ವಾರಗಟ್ಟಲೆ ಉಪವಾಸ ಕೆಡವಿದ, ನಾಯಿಗೂಡಿನಲ್ಲಿ ಕೂರಿಸಿ ಬೀಗ ಹಾಕಿದ.. ಅನೇಕ ಪ್ರಕರಣಗಳು ಇವರ ಮುಖಾಂತರ ಬೆಳಕಿಗೆ ಬಂದುವು. ನಗ್ನ ಶಿಕ್ಷೆಗೆ ಒಳಗಾಗಿದ್ದ ಬೆಂಗಳೂರಿನ ಹೇಮಾವತಿ, ಸರಪಳಿ ಶಿಕ್ಷೆಗೆ ಗುರಿಯಾಗಿದ್ದ ಅನಂತರಾಮ ಶೆಟ್ಟಿ, ಕೊಟ್ಟಿಗೆಯಲ್ಲಿದ್ದ ಹನುಮಂತಪ್ಪರು,  ಮೋದಿ-ಅಡ್ವಾಣಿಯವರನ್ನು ಪಕ್ಕಕ್ಕೆ ಸರಿಸುವಷ್ಟು ಜನರ ಮಧ್ಯೆ ಚರ್ಚೆಗೊಳಗಾದರು.
   ಅಂದಹಾಗೆ;  ಹುಲಿ, ಸಿಂಹ, ಚಿರತೆ.. ಮುಂತಾದುವುಗಳನ್ನು ಅಪಾಯಕಾರಿ ಪ್ರಾಣಿಗಳು ಎಂದು ನಾವು ಈಗಾಗಲೇ ಸಾರಿಬಿಟ್ಟಿದ್ದೇವೆ. ಪ್ರಾಣಿ ಸಂಗ್ರಹಾಲಯದಲ್ಲಿ ಇವುಗಳನ್ನು ಕಂಡ ಕೂಡಲೇ ನಮ್ಮ ಮಕ್ಕಳು ಅಂಜುತ್ತವೆ. ಇದಕ್ಕೆ ಕಾರಣ, ಮಕ್ಕಳು ಆ ಪ್ರಾಣಿಗಳ ಅಪಾಯಕಾರಿ ವರ್ತನೆಯನ್ನು ನೋಡಿರುವುದಲ್ಲ. ಮಕ್ಕಳಿಗೆ ಅದನ್ನು ಅಪಾಯಕಾರಿಗಳು ಎಂದು ನಾವೇ ಕಲಿಸಿಕೊಟ್ಟಿದ್ದೇವೆ. ಅದಕ್ಕೆ ಪೂರಕವಾಗಿ, ಎನಿಮಲ್ ಪ್ಲಾನೆಟ್‍ನಲ್ಲಿ ಅಥವಾ ನ್ಯಾಷನಲ್ ಜಿಯಾಗ್ರಫಿ ಚಾನೆಲ್‍ನಲ್ಲಿ, ಒಂದು ಪ್ರಾಣಿ ಇನ್ನೊಂದು ಪ್ರಾಣಿಯನ್ನು ಅಟ್ಟಾಡಿಸಿಕೊಂಡು ಬೇಟೆಯಾಡುವ, ಕೊಂದು ತಿನ್ನುವ ದೃಶ್ಯ ಗಳೂ ಪ್ರಸಾರ ಆಗುತ್ತಾ ಇರುತ್ತವೆ. ಪ್ರಾಣಿಗಳು ಇಡೀ ದಿನ ಪರಸ್ಪರ ಕೊಂದು ತಿನ್ನುವುದನ್ನೇ ಮಾಡುತ್ತಿರುತ್ತವೆ ಎಂದು ಮಕ್ಕಳು ನಂಬುವಷ್ಟು ಈ ಪ್ರಸಾರಗಳು ಏಕಮುಖವಾಗಿರುತ್ತವೆ. ಅಂದಹಾಗೆ, ಇಂಥ ದೃಶ್ಯಗಳನ್ನು ಸೆರೆ ಹಿಡಿದು ಪ್ರಸಾರ ಮಾಡುವುದು ಪ್ರಾಣಿಗಳೇನೂ ಅಲ್ಲವಲ್ಲ. ಒಂದು ವೇಳೆ, ಮನುಷ್ಯರು ಎಸಗುವ ಕ್ರೌರ್ಯ, ಕೊಲೆಪಾತಕಗಳನ್ನು ಸೆರೆಹಿಡಿದು ಪ್ರಸಾರ ಮಾಡುವ ಸಾಮರ್ಥ್ಯ ಪ್ರಾಣಿಗಳಿಗಿರುತ್ತಿದ್ದರೆ, ಜಗತ್ತಿನಲ್ಲಿ ಮನುಷ್ಯರ ಇಮೇಜು ಹೇಗಿರುತ್ತಿತ್ತು? ಚಾನೆಲ್‍ಗಳಲ್ಲಿ ಅಂಥ ದೃಶ್ಯಗಳನ್ನು ನೋಡುವ ಅವಕಾಶ ಮಕ್ಕಳಿಗೆ ಸಿಗುತ್ತಿದ್ದರೆ, ಅವರು ಯಾರನ್ನು ಅಪಾಯಕಾರಿ ಪಟ್ಟಿಯಲ್ಲಿ ಸೇರಿಸುತ್ತಿದ್ದರು? ಪ್ರಾಣಿಗಳಂತೆ ಮನುಷ್ಯರನ್ನೂ ಪ್ರಾಣಿ ಸಂಗ್ರಹಾಲಯಗಳಲ್ಲಿ ಯಾಕೆ ಕೂಡಿ ಹಾಕಿಲ್ಲ ಎಂದು ಅವು ತಲೆ ಕೆಡಿಸುವ ಸಾಧ್ಯತೆ ಇತ್ತೇ, ಇಲ್ಲವೇ?
   ನಿಜವಾಗಿ, ಈ ಜಗತ್ತಿನಲ್ಲಿ ಮನುಷ್ಯರ ಪಾಲಿಗೆ ಅತಿದೊಡ್ಡ ಶತ್ರು ಮನುಷ್ಯರೇ. ಇರಾಕಿನ ಮಕ್ಕಳಲ್ಲಿ; ಫೆಲೆಸ್ತೀನ್, ಅಫಘನ್ನಿನ ಮಕ್ಕಳಲ್ಲಿ ನಿಮ್ಮ ಶತ್ರುಗಳು ಯಾರು ಎಂದು ಪ್ರಶ್ನಿಸಿದರೆ ಅವರು ಪ್ರಾಣಿಗಳನ್ನು ತೋರಿಸುವುದಕ್ಕೆ ಸಾಧ್ಯವೇ ಇಲ್ಲ. ಅಮೇರಿಕ-ಇಸ್ರೇಲ್‍ಗಳೇ ಅವರ ಪಾಲಿನ ಶತ್ರುಗಳು. ಈ ಎರಡು ರಾಷ್ಟ್ರಗಳು ಜಗತ್ತಿನ ಇತರ ಮನುಷ್ಯರ ಪಾಲಿಗೆ ಎಷ್ಟು ಅಪಾಯಕಾರಿಗಳಾಗಿವೆಯೆಂದರೆ, ಅಪಾಯಕಾರಿಯೆಂದು ಹಣೆಪಟ್ಟಿ ಹಚ್ಚಿಕೊಂಡ ಜಗತ್ತಿನೆಲ್ಲಾ ಪ್ರಾಣಿಗಳು ಜೊತೆ ಸೇರಿದರೂ ಹತ್ಯೆ ಮಾಡಲು ಸಾಧ್ಯವಾಗದಷ್ಟು ಸಂಖ್ಯೆಯ ಮನುಷ್ಯರನ್ನು ಅವು ಹತ್ಯೆ ಮಾಡಿವೆ. ಅಂದಹಾಗೆ, ಅಮೇರಿಕದಿಂದ ಹಿಡಿದು ಹೇಮಾವತಿಯ ಹೆತ್ತವರ ವರೆಗೆ, ಇಸ್ರೇಲ್‍ನಿಂದ ಹಿಡಿದು ಅನಂತರಾಮ ಶೆಟ್ಟಿಯವರ ಮಕ್ಕಳ ವರೆಗೆ, ಕ್ರೌರ್ಯದ ರೂಪದಲ್ಲಿ ವ್ಯತ್ಯಾಸಗಳಿವೆಯೇ ಹೊರತು ಕ್ರೌರ್ಯದ ಭಾವನೆಯಲ್ಲಿ ಅಲ್ಲ. ಅಮೇರಿಕ ಒಂದು ರಾಷ್ಟ್ರವಾಗಿ ಬಾಂಬನ್ನು ಎತ್ತಿಕೊಳ್ಳುವಾಗ ಅನಂತರಾಮ ಶೆಟ್ಟಿಯವರ ಮಕ್ಕಳು ತಮ್ಮ ಇತಿ-ಮಿತಿಯೊಳಗೆ ಸರಪಳಿಯನ್ನು ಎತ್ತಿಕೊಳ್ಳುತ್ತಾರೆ. ಫೆಲೆಸ್ತೀನಿಯರನ್ನು ಇಸ್ರೇಲ್ ದಿಗ್ಬಂಧನಕ್ಕೆ ಒಳಪಡಿಸಿದಂತೆಯೇ ಹೇಮಾವತಿಯ ಹೆತ್ತವರು ಸಣ್ಣ ಮಟ್ಟದಲ್ಲಿ ಅದನ್ನೇ ಮಾಡುತ್ತಾರೆ.
   ಜಗತ್ತು ಹೆಚ್ಚೆಚ್ಚು ಆಧುನಿಕಗೊಂಡಂತೆಯೇ, ಮಾನವೀಯತೆಯ ಮಟ್ಟ ಕುಸಿಯುತ್ತಿರುವುದೇಕೆ ಎಂಬ ಬಗ್ಗೆ ಗಂಭೀರ ಚರ್ಚೆಯೊಂದು ನಡೆಯಬೇಕಾದ ಅಗತ್ಯವನ್ನು ಈ ಪ್ರಕರಣಗಳು ಎತ್ತಿ ಹೇಳುತ್ತಿವೆ. ನಿಜವಾಗಿ, ಮನುಷ್ಯರನ್ನು ಇನ್ನಷ್ಟು ಹತ್ತಿರಕ್ಕೆ, ಆಪ್ತ ವಲಯಕ್ಕೆ ಕೊಂಡೊಯ್ದಿದ್ದು ಆಧುನಿಕ ಆವಿಷ್ಕಾರಗಳೇ. ತಾಯಿಯನ್ನು ಅತ್ಯಂತ ಹೃದ್ಯವಾಗಿ ಕಟ್ಟಿಕೊಡುವುದಕ್ಕೆ ಇಂದಿನ ಸಿನಿಮಾ, ಡಾಕ್ಯುಮೆಂಟರಿಗಳಿಗೆ ಸಾಧ್ಯವಾಗುತ್ತಿದೆ. ಮಕ್ಕಳನ್ನು ಬೆಳೆಸುವುದಕ್ಕೆ ಹೆತ್ತವರು ಯಾವ ರೀತಿಯಲ್ಲಿ ಶ್ರಮ ವಹಿಸುತ್ತಾರೆ ಅನ್ನುವುದನ್ನು ಅತ್ಯಂತ ಆಪ್ತವಾಗಿ, ನೈಜವಾಗಿ ಇಂದಿನ ತಂತ್ರಜ್ಞಾನಗಳು ಹೇಳಿ ಕೊಡುತ್ತಿವೆ. ಮಕ್ಕಳನ್ನು ಹೇಗೆ ಬೆಳೆಸಬೇಕು; ರೋಗಿಗಳನ್ನು ಹೇಗೆ ನೋಡಿಕೊಳ್ಳಬೇಕು; ಬದುಕು ಎಷ್ಟು ಅನಿಶ್ಚಿತ; ಸಂಪತ್ತು-ಆಯುಷ್ಯ.. ಎಲ್ಲವೂ ಹೇಗೆ ನಶ್ವರ ಎಂಬುದನ್ನೆಲ್ಲಾ ಇವತ್ತಿನ ವಿವಿಧ ಸಿನಿಮಾಗಳು, ಕಾದಂಬರಿಗಳು ಬಾರಿ ಬಾರಿಗೂ ಹೇಳುತ್ತಿವೆ. ಹಿಂದಿನವರಿಗೆ ಹೋಲಿಸಿದರೆ, ಇಂದಿನ ಪೀಳಿಗೆ ಅಪಾರ ಮಾಹಿತಿಯುಳ್ಳವು. ಇಷ್ಟೆಲ್ಲಾ ಇದ್ದೂ ಹೆತ್ತವರನ್ನೇ ಸರಪಳಿ ಬಿಗಿದು ಕಟ್ಟಿ ಹಾಕುವುದೆಂದರೆ, ಏನು ಕಾರಣ? ಮಗಳನ್ನೇ ಕೂಡಿ ಹಾಕುವ ಹೆತ್ತವರಿದ್ದಾರೆಂದರೆ ಏನೆನ್ನಬೇಕು?
   ಆಧುನಿಕ ಆವಿಷ್ಕಾರಗಳು ಮನುಷ್ಯರಲ್ಲಿ ಮಾನವೀಯತೆಯನ್ನು ತುಂಬಲು ಎಷ್ಟರ ಮಟ್ಟಿಗೆ ಸಫಲವಾಗಿವೆ ಎಂಬ ಪ್ರಶ್ನೆಗೆ ಅಮೇರಿಕದಿಂದ ಹಿಡಿದು ಬೆಂಗಳೂರಿನ ಅನಂತರಾಮ ಶೆಟ್ಟಿಯವರ ಮಕ್ಕಳ ವರೆಗೆ ನಕಾರಾತ್ಮಕ ಉತ್ತರಗಳಷ್ಟೇ ದೊರಕುತ್ತಿವೆ. ಆದ್ದರಿಂದ, ಆಧುನಿಕತೆ ಮತ್ತು ಧಾರ್ಮಿಕತೆಯ ನಡುವೆ ಇವತ್ತು ತುರ್ತಾಗಿ ಸಮನ್ವಯತೆ ಸಾಧ್ಯವಾಗಬೇಕಾಗಿದೆ.  ಧರ್ಮದ ಮೌಲ್ಯಗಳನ್ನು ಪಕ್ಕಕ್ಕಿಡುವ ಜೀವನ ಪದ್ಧತಿಗಳು ಅಂತಿಮವಾಗಿ ಅನಂತರಾಮ ಶೆಟ್ಟಿಯಂಥ ಅಪ್ಪಂದಿರನ್ನು, ಹೇಮಾವತಿಯಂಥ ಮಕ್ಕಳನ್ನು ಸೃಷ್ಟಿಸುವುದಕ್ಕೆ ಕಾರಣವಾಗುತ್ತಿದೆಯೇನೋ ಎಂಬ ಅನುಮಾನ ಮೂಡುತ್ತಿದೆ. ಹೆತ್ತವರನ್ನು, ಮಕ್ಕಳನ್ನು, ಹಿರಿಯರನ್ನು, ರೋಗಿಗಳನ್ನು ಹೇಗೆ ನೋಡಬೇಕೆಂದು ಧರ್ಮ ಕಲಿಸಬಲ್ಲುದೇ ಹೊರತು ವಿಜ್ಞಾನಿಗಳ ಬಾಂಬ್ ಅಲ್ಲ. ಆದ್ದರಿಂದ ಧರ್ಮದಂತೆ ಬದುಕುವ, ಇಲ್ಲಿನ ಪ್ರತಿಯೊಂದು ಕರ್ಮಗಳ ಬಗ್ಗೆಯೂ ಪರಲೋಕದಲ್ಲಿ ವಿಚಾರಣೆಯಿದೆ ಮತ್ತು ಶಿಕ್ಷೆ-ಪುರಸ್ಕಾರಗಳೂ ಲಭಿಸಲಿವೆ ಎಂದು ಬಲವಾಗಿ ನಂಬುವ ಜೀವನ ಕ್ರಮದ ಕಡೆಗೆ ಎಲ್ಲರೂ ಮರಳಬೇಕಾದ ಅಗತ್ಯ ಇದೆ. ಇಲ್ಲದಿದ್ದರೆ ಅನಂತರಾಮ ಶೆಟ್ಟಿಯಂಥವರ ಸಂಖ್ಯೆ ಹೆಚ್ಚಾದೀತು.

1 comment:

  1. ಮಾನ್ಯ ಸಂಪಾದಕರಿಗೆ,
    ಅಸ್ಸಲಾಮು ಅಲೈಕುಮ್.
    ಇಸ್ಲಾಮಿ ಕುಟುಂಬದ ಕಲ್ಪನೆಯೊಂದೆ ಇದಕ್ಕೆ ಸೂಕ್ತ ಪರಿಹಾರವಾಗಿದ್ದು ಹಳಸಿದ ಕುಟುಂಬ ಸಂಬಂಧಗಳನ್ನು ಧರ್ಮಾಧಾರಿತ ಜೀವನವೊಂದೆ ನೀಡಬಲ್ಲದು. ಬೆಂಗಳೂರಿನ ಎರಡು ಘಟನೆಗಳು ಮನುಷ್ಯನ ಸಂಬಂಧಗಳನ್ನು ಎಷ್ಟೊಂದು ಹಳಸಿ ಹೋಗಿದೆ ಎನ್ನುವುದನ್ನು ಸಾಬೀತು ಮಾಡುತ್ತವೆ. ತಂದೆ ತಮ್ಮ ಮಕ್ಕಳಿಗೆ ಒಳ್ಳೆಯ ತರಬೇತಿ ನೀಡಿದರೆ ಕೊನೆಗಾಲದಲ್ಲಿ ಕೈ ಕಾಲುಗಳಿಗೆ ಕೊಳ ಹಾಕಿಕೊಂಡು ಜೀವಿಸು ಪರಿಸ್ಥಿತಿಯೆ ಉದ್ಭವಿಸುತ್ತಿರಲಿಲ್ಲ. ಅಲ್ಲದೆ ಮಕ್ಕಳು ತಮ್ಮ ಮಾತಾಪಿತರನ್ನು ಯಾವು ದೃಷ್ಟಿಯಿಂದ ನೋಡುತ್ತಿದ್ದಾರೆ ಎನ್ನುವುದು ಇದರಿಂದ ಸಾಬೀತಾಗುತ್ತದೆ. ಪಾಲಕರು ತಮ್ಮ ಮಕ್ಕಳನ್ನು ಬೆಳೆಸುವ ರೀತಿಯಿಂದಲೆ ಅವರು ಮುಂದೆ ಏನಾಗಬಲ್ಲರು ಎನ್ನುವುದನ್ನು ತೋರಿಸಿಕೊಡುತ್ತದೆ. ಮೊದಲು ಸ್ವಚ್ಚಂದ ಜೀವನ ನಡೆಸಲು ಅವಕಾಶ ನೀಡಿ ಒಂದು ವಯಸ್ಸಿಗೆ ಬಂದ ನಂತರ ಕಡಿವಾಣ ಹಾಕಲು ಹೋದರೆ ಪರಿಸ್ಥಿತಿ ಹೀಗೆಯೆ ಆಗುವುದು. ಮಗಳು ಬೇರೊಬ್ಬನನ್ನು ಪ್ರೀತಿಸಿ ಮದುವೆಯಾಗುವುದಾಗಿ ತಿಳಿಸಿದ ಕಾರಣ ಆಕೆಯನ್ನು ೪ವರ್ಷಗಳ ಕಾಲ ಹುಚ್ಚಿಯಂತೆ ನೋಡಿಕೊಂಡರು. ಆಕೆಯ ಬೆರಳ ಉಗುರಗಳು ೨-೩ ಇಂಚು ಬೆಳೆದು ಎಂತಹ ನರಕಯಾತನೆ ಅನುಭವಿಸುತ್ತಿರುವುದನ್ನು ನಾವೆಲ್ಲೆ ದೃಶ್ಯ ಮಾಧ್ಯಮಗಳ ಮೂಲಕ ನೋಡಿದ್ದೇವೆ. ಆಕೆಗೆ ಸರಿಯಾದ ಚಿಕಿತ್ಸೆ ನೀಡುವುದಿರಲಿ ಆಕೆಯನ್ನು ಕತ್ತಲ ಕೋಣೆಗೆ ನೂಕಿರುವುದು ಎಂತಹ ಕಠೋರ ತಂದೆ-ತಾಯಿಗಳಿದ್ದರೂ ಅವರ ಕರುಳು ಕಿತ್ತು ಬರುವಂತೆ ಮಾಡುತ್ತದೆ.
    ನಮ್ಮ ಸಮಾಜದಲ್ಲಿ ಇಂತಹ ಒಂದು ವಾತವರಣ ಸೃಷ್ಟಿಸಿದ ವ್ಯಕ್ತಿಗಳ ವಿರುದ್ಧ ನಿಜಕ್ಕೂ ಕಠಿಣ ಕ್ರಮ ತೆಗೆದುಕೊಳ್ಳಬೇಕು.

    ReplyDelete