Wednesday, 4 December 2013

ಲೈಂಗಿಕ ದೌರ್ಜನ್ಯದ ಆರೋಪಗಳು ಮತ್ತು ಅನುಮಾನಗಳು

ಏ.ಕೆ. ಗಂಗೂಲಿ
ಪ್ರಕರಣವೊಂದರ ಸರಿ-ತಪ್ಪುಗಳನ್ನು ಚರ್ಚಿಸುವುದಕ್ಕಿಂತ ಮೊದಲು ನಾವು ತೆಗೆದುಕೊಳ್ಳಲೇ ಬೇಕಾದ ಎಚ್ಚರಿಕೆಗಳು ಯಾವುವು? ಯಾವುದೇ ಒಂದು ಪ್ರಕರಣಕ್ಕೆ ಹೊರಗೆ ಕಾಣುವ ಮುಖವಷ್ಟೇ ಇರಬೇಕೆಂದಿಲ್ಲವಲ್ಲ. ಕಾಣದ್ದೂ ಇರಬಹುದಲ್ಲವೇ? ಆ ಕಾಣದ ಮುಖವನ್ನು ಪತ್ತೆ ಹಚ್ಚದೆಯೇ ಅಥವಾ ಆ ಬಗ್ಗೆ ಅನುಮಾನಿಸದೆಯೇ ಖಚಿತ ಅಭಿಪ್ರಾಯ ವ್ಯಕ್ತಪಡಿಸುವ ವಿಧಾನವನ್ನು ಏನೆಂದು ಕರೆಯಬೇಕು? ಅದರಿಂದಾಗಿ ತೊಂದರೆಗೆ ಒಳಗಾಗಬಹುದಾದ ವ್ಯಕ್ತಿಗಳಿಗೆ ನಾವು ಯಾವ ಪರಿಹಾರ ಕೊಡಬಲ್ಲೆವು? ತರುಣ್ ತೇಜ್‍ಪಾಲ್ ಮತ್ತು ಸುಪ್ರೀಮ್ ಕೋರ್ಟಿನ ಮಾಜಿ ನ್ಯಾಯಾಧೀಶ ಏ.ಕೆ. ಗಂಗೂಲಿ ಅವರ ಮೇಲೆ ಕೇಳಿ ಬಂದ ಲೈಂಗಿಕ ದೌರ್ಜನ್ಯದ ಆರೋಪಗಳು ಮತ್ತು ಆ ಬಗ್ಗೆ ಸುಪ್ರೀಮ್ ಕೋರ್ಟ್‍ನ ಮಾಜಿ ನ್ಯಾಯಾಧೀಶ ಅಲ್ತಮಷ್ ಕಬೀರ್ ಮತ್ತು ಮಾಜಿ ಅಟಾರ್ನಿ ಜನರಲ್ ಸೋಲಿ ಸೋರಾಬ್ಜಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಇಂಥದ್ದೊಂದು ಚರ್ಚೆಗೆ ವೇದಿಕೆ ಒದಗಿಸಿದೆ.
   ಲೈಂಗಿಕ ದೌರ್ಜನ್ಯದ ಆರೋಪ ಕೇಳಿ ಬಂದ ಕೂಡಲೇ ಆ ಆರೋಪವನ್ನು ಕಣ್ಣು ಮುಚ್ಚಿ ಒಪ್ಪಿಕೊಳ್ಳಬಹುದೇ? ಆರೋಪ ಹೊರಿಸಿದವರನ್ನು ಮುಗ್ಧೆ, ಸಂತ್ರಸ್ತೆ ಮತ್ತು ಆರೋಪಕ್ಕೀಡಾದವರನ್ನು ಪರಮದುಷ್ಟ ಎಂದು ಹಣೆಪಟ್ಟಿ ಹಚ್ಚುವುದು ನೈತಿಕವಾಗಿ ಸರಿಯೇ? ಅಂಥ ಆರೋಪಗಳಲ್ಲೂ ದುರುದ್ದೇಶ ಇರಬಾರದು ಎಂದಿದೆಯೇ? ಹಾಗಂತ, ಲೈಂಗಿಕ ದೌರ್ಜನ್ಯದ ಬಗ್ಗೆ ಕೇಳಿ ಬರುತ್ತಿರುವ ಎಲ್ಲ ಪ್ರಕರಣಗಳೂ ಈ ಪಟ್ಟಿಯಲ್ಲಿ ಸೇರಿವೆ ಎಂದಲ್ಲ. ಲೈಂಗಿಕ ದೌರ್ಜನ್ಯ ಎಂಬುದೇ ಓರ್ವ ಹೆಣ್ಣಿನ ಮಟ್ಟಿಗೆ ಅತಿ ಹೀನ ಮತ್ತು ಸದಾ ಕಾಡುವ ಹಿಂಸೆಯಾಗಿರುತ್ತದೆ. ಒಂದು ವೇಳೆ ಆಕೆ ಅಂಥ ದೌರ್ಜನ್ಯವನ್ನು ಬಹಿರಂಗಪಡಿಸದೇ ಒಳಗೊಳಗೇ ಸಹಿಸಿಕೊಂಡು ಬದುಕಿದರೆ ಸಮಾಜಕ್ಕೆ ಗೊತ್ತಾಗದೇ ಇರಬಹುದು. ಆದರೆ ಆ ಕ್ರೌರ್ಯ ಆಕೆಯನ್ನು ಜೀವನಪೂರ್ತಿ ನೆರಳಾಗಿ ಕಾಡುತ್ತಿರುತ್ತದೆ. ಕೂತಲ್ಲಿ, ನಿಂತಲ್ಲಿ, ನಿದ್ದೆಯಲ್ಲಿ, ಒಂಟಿತನದ ಸಂದರ್ಭದಲ್ಲಿ ಅದು ಮತ್ತೆ ದೌರ್ಜನ್ಯ ನಡೆಸು ತ್ತಲೇ ಇರುತ್ತದೆ. ಅದು ಬಿಟ್ಟು, ಈ ಕ್ರೌರ್ಯವೆಸಗಿದ ವ್ಯಕ್ತಿಗೆ ಶಿಕ್ಷೆಯಾಗಬೇಕೆಂದು ಆಕೆ ತೀರ್ಮಾನಿಸಿದರೆ ಅಲ್ಲೂ ಸಮಸ್ಯೆ ಎದುರಾಗುತ್ತದೆ. ಆವರೆಗೆ ತನಗಷ್ಟೇ ಗೊತ್ತಿದ್ದ ಕ್ರೌರ್ಯವೊಂದು ಸಮಾಜದ ಪಾಲಾಗುತ್ತದೆ. ಮಾಧ್ಯಮಗಳು ಅದನ್ನು ಹೊತ್ತು ತಿರುಗುತ್ತವೆ. ಗೆಳತಿಯರು, ನೆರೆಕರೆಯವರು ವಿಚಿತ್ರವಾಗಿ ನೋಡತೊಡಗುತ್ತಾರೆ. ವಿವಾಹದ ಸಂದರ್ಭದಲ್ಲೂ ‘ಅತ್ಯಾಚಾರ ಸಂತ್ರಸ್ತೆ' ಎಂಬ ಐಡೆಂಟಿಟಿ ಹಲವು ಸಮಸ್ಯೆಗಳನ್ನು ತಂದೊಡ್ಡುವ ಅಪಾಯವಿರುತ್ತದೆ. ಹೀಗಿರುವಾಗ, ತನ್ನದೇ ಆದ ಮತ್ತು ತನಗಷ್ಟೇ ಗೊತ್ತಿರುವ ಒಂದು ಕ್ರೌರ್ಯವನ್ನು ತನಗೆ ಗುರುತು-ಪರಿಚಯವೇ ಇಲ್ಲದ ಇತರರಿಗೆ ತಿಳಿಸುವುದು ಮತ್ತು ಕೋರ್ಟಿನ ಮೊರೆ ಹೋಗುವುದೆಲ್ಲ ಸಣ್ಣ ಸಂಗತಿಯಲ್ಲ. ಅದಕ್ಕೆ ಅಪಾರ ಧೈರ್ಯ, ಛಲದ ಅಗತ್ಯವಿದೆ. ಇವೆಲ್ಲವನ್ನೂ ಒಪ್ಪಿಕೊಳ್ಳುತ್ತಲೇ ಇಂಥ ದೌರ್ಜನ್ಯ ಆರೋಪಗಳಿಗೆ ಇರಬಹುದಾದ ಇನ್ನೊಂದು ಮುಖದ ಬಗ್ಗೆಯೂ ಅಷ್ಟೇ ಎಚ್ಚರಿಕೆಯಿಂದ ಚರ್ಚಿಸಬೇಕಾಗಿದೆ.
   ನಿಜವಾಗಿ, ಪ್ರಸಿದ್ಧಿಯ ತುತ್ತ ತುದಿಯಲ್ಲಿರುವವರನ್ನು ಒಂದೇ ಏಟಿಗೆ ಬೀಳಿಸುವ ಸಾಮರ್ಥ್ಯ  ಇರುವುದು ಲೈಂಗಿಕ ದೌರ್ಜನ್ಯದ ಆರೋಪಗಳಿಗೆ. ಅದು ವ್ಯಕ್ತಿಯನ್ನು ಜರ್ಝರಿತಗೊಳಿಸುತ್ತದೆ. ಸಮಾಜಕ್ಕೆ ಮುಖ ತೋರಿಸದಷ್ಟು ಕುಗ್ಗಿಸುತ್ತದೆ. ಮಾತ್ರವಲ್ಲ, ಮಾಧ್ಯಮಗಳು ಕೂಡ ಆರೋಪವನ್ನು ಖಚಿತಪಡಿಸಿಕೊಳ್ಳದೆಯೇ ತಕ್ಷಣ ಸುದ್ದಿಗೆ ಮಸಾಲೆ ಅರೆಯುತ್ತದೆ. ಗಂಗೂಲಿಯವರನ್ನೇ ಎತ್ತಿ ಕೊಳ್ಳೋಣ. ಪ್ರಕರಣಕ್ಕೆ ಒಂದು ವರ್ಷ ಸಂದಿದೆ. ಪ್ರಕರಣ ಇಷ್ಟು ತಡವಾಗಿ ಬೆಳಕಿಗೆ ಬರುವುದಕ್ಕೆ ಕಾರಣ ಏನು? ನಿರ್ಭಯಳ ಪರ ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭದಲ್ಲೇ ಈ ದೌರ್ಜನ್ಯ ನಡೆದಿದೆ ಎಂದಾದರೆ ಅದನ್ನು ಬಹಿರಂಗಪಡಿಸುವುದಕ್ಕೆ ಆ ಸಂದರ್ಭಕ್ಕಿಂತ ಉತ್ತಮವಾದುದು ಇನ್ನಾವುದಿತ್ತು? ಕೇವಲ ಗಂಗೂಲಿಯವರ ಹುದ್ದೆ, ಪ್ರಭಾವಕ್ಕೆ ಮಣಿದು ಹೀಗೆ ತಡ ಮಾಡುವುದಕ್ಕೆ ಸಾಧ್ಯವಿದೆಯೇ? ಅಲ್ತಮಷ್ ಕಬೀರ್ ಕೂಡಾ ಈ ಆರೋಪದ ವಾಸ್ತವಾಂಶಗಳ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಹಾಗಂತ, ಗಂಗೂಲಿ ಇಲ್ಲಿ ಸಂಕೇತ ಮಾತ್ರ. ರಾಜಕೀಯ ಅಥವಾ ಇನ್ನಿತರ ದುರುದ್ದೇಶಗಳಿಂದ ಒಂದು ಸಾಮಾನ್ಯ ಪ್ರಕರಣವು ಅಸಾಮಾನ್ಯ ಪ್ರಕರಣವಾಗಿ ಬಿಡುವುದಕ್ಕೆ ಇವತ್ತು ಅವಕಾಶ ಇದೆ. ಸಹಮತದ ಸೆಕ್ಸ್‍ನಲ್ಲಿ ಏರ್ಪಟ್ಟ ಜೋಡಿಗಳು ಆ ಬಳಿಕ ವಿರಸದ ಕಾರಣದಿಂದಾಗಿ ಅತ್ಯಾಚಾರ ಮೊಕದ್ದಮೆ ಹೂಡಿದ್ದಿದೆ. ಸದ್ಯದ ದಿನಗಳು ಎಷ್ಟು ನಾಜೂಕಿನವು ಅಂದರೆ, ಯಾರನ್ನು ಬೇಕಾದರೂ ಖೆಡ್ಡಾಕ್ಕೆ ಬೀಳಿಸಬಹುದು ಎಂಬ ವಾತಾವರಣವಿದೆ. ಮದ್ಯ, ಮಾನಿನಿಯರ ಮುಖಾಂತರ ವ್ಯಕ್ತಿತ್ವಕ್ಕೆ ಮಸಿ ಬಳಿಯುವುದು ತೀರಾ ಕಷ್ಟದ್ದೆಂದು ಹೇಳುವಂತಿಲ್ಲ. ಅಷ್ಟಕ್ಕೂ, ತರುಣ್ ತೇಜ್‍ಪಾಲ್ ಪ್ರಕರಣ ದಲ್ಲಿ ಇಂಥದ್ದೊಂದು ಅನುಮಾನ ತಪ್ಪೇ ಎಂದು ಹೇಳುವಾಗಲೂ ‘ರಾಜಕೀಯ'ಕ್ಕೆ ಯಾವುದೂ ಅಸಾಧ್ಯವಲ್ಲ ಎಂಬುದು ಕೂಡಾ ಅಷ್ಟೇ ನಿಜವಾಗಿದೆ.
   ತೇಜ್‍ಪಾಲ್ ಮತ್ತು ಗಂಗೂಲಿ ಪ್ರಕರಣಗಳು ಹೇಗೆ ಕೊನೆ ಮುಟ್ಟುತ್ತೋ ಗೊತ್ತಿಲ್ಲ. ಆದರೆ, ಈ ಎರಡೂ ಪ್ರಕರಣಗಳಲ್ಲಿ ಆರೋಪಿಗಳು ಪ್ರಸಿದ್ಧ ವ್ಯಕ್ತಿಗಳೇ. ಅಲ್ಲದೇ ಅವರ ಮೇಲೆ ಆರೋಪ ಹೊರಿಸಿದವರು ಹೊರಗಿನವರಲ್ಲ, ಜೊತೆಗೇ ಕೆಲಸ ಮಾಡುತ್ತಿರುವವರು. ಮೋದಿಯವರ ‘ಅಕ್ರಮ ಬೇಹುಗಾರಿಕೆ' ಪ್ರಕರಣವು ಬಹಿರಂಗವಾದ ಬೆನ್ನಿಗೇ ಈ ಎರಡೂ ಪ್ರಕರಣಗಳು ಬಹಿರಂಗಗೊಂಡಿವೆ ಎಂಬುದೂ ಬಹಳ ಮುಖ್ಯ. ಭಾವಿ ಪ್ರಧಾನಿ ಅಭ್ಯರ್ಥಿ ಒಳಗೊಂಡಿರುವ ಪ್ರಕರಣದ ಕಾವನ್ನು ತಗ್ಗಿಸುವುದಕ್ಕಾಗಿ ತೇಜ್‍ಪಾಲ್ ಪ್ರಕರಣವನ್ನು ಉಬ್ಬಿಸಲಾಯಿತೇ? ಅಕ್ರಮ ಬೇಹುಗಾರಿಕಾ ಪ್ರಕರಣದ ಯುವತಿಗೂ ಮೋದಿಯವರಿಗೂ ನಡುವೆ ಇದ್ದ ಸಂಬಂಧವೇನು ಎಂಬ ಬಗ್ಗೆ ಮಾಧ್ಯಮಗಳು ಕುತೂಹಲ ವ್ಯಕ್ತಪಡಿಸುವ ಹೊತ್ತಿನಲ್ಲೇ ತೇಜ್‍ಪಾಲ್ ಹೆಜ್ಜೆ ತಪ್ಪಿರುವ ಪ್ರಕರಣವು ಸುದ್ದಿ ಮಾಡಿರುವುದರಲ್ಲಿ ಯಾವ ಅನುಮಾನಕ್ಕೂ ಅವಕಾಶ ಇಲ್ಲವೇ? ಅವರನ್ನು ಬೇಕೆಂತಲೇ ಹೆಜ್ಜೆ ತಪ್ಪಿಸಲಾಯಿತೇ ಅಥವಾ ಹೆಜ್ಜೆ ತಪ್ಪಿದ ಅವರನ್ನು ಬಳಸಿಕೊಳ್ಳಲಾಯಿತೇ?
    ರಾಜಕೀಯ ವಾತಾವರಣವು ಅತಿಹೀನ ಸ್ಥಿತಿಗೆ ತಲುಪಿರುವ ಇಂದಿನ ದಿನಗಳಲ್ಲಿ ಯಾವುದನ್ನೂ ನೇರವಾಗಿ ನಂಬುವಂಥ ಸ್ಥಿತಿಯಿಲ್ಲ. ಲೈಂಗಿಕ ದೌರ್ಜನ್ಯ ಪ್ರಕರಣಗಳೂ ಈ ಸಾಲಿಗೆ ಸೇರುತ್ತಿರು ವುದು ವಿಷಾದನೀಯ. ಆದರೆ, ಹಾಗೆ ಅನುಮಾನಿಸುವುದಕ್ಕೆ ಸದ್ಯದ ದಿನಗಳು ಒತ್ತಾಯಿಸುತ್ತಿವೆ ಅನ್ನುವುದನ್ನು ತಿರಸ್ಕರಿಸುವಂತಿಲ್ಲ.

No comments:

Post a Comment