Wednesday 22 January 2014

ಗಗನಕ್ಕೆ ಹಾರುವ ರಾಕೆಟ್ ಗಳೂ, ನಿದ್ದೆಗೆ ಜಾರುವ ಸುನಂದಾರೂ

ಈ ಸುದ್ದಿಗಳನ್ನು ಓದಿ
  1. ಕೇಂದ್ರ ಮಂತ್ರಿ ಶಶಿ ತರೂರ್ ಅವರ ಪತ್ನಿ ಸುನಂದಾ ಪುಷ್ಕರ್ ಅಸಹಜ ರೀತಿಯಲ್ಲಿ ಸಾವಿಗೀಡಾಗಿದ್ದಾರೆ. ಪಾಕಿಸ್ತಾನದ ಪತ್ರಕರ್ತೆಯೊಂದಿಗೆ ತರೂರ್ ಅವರಿಗಿರುವ ಗೆಳೆತನವನ್ನು ಪುಷ್ಕರ್ ಪ್ರಶ್ನಿಸಿರುವ ಸುದ್ದಿ ಮಾಧ್ಯಮಗಳಲ್ಲಿ ಪ್ರಕಟವಾದ ಮರುದಿನವೇ ಅವರ ಸಾವು ಸಂಭವಿಸಿದೆ.
  2. ಕುಡುಕರು ಮತ್ತು ವರದಕ್ಷಿಣೆ ಬಯಸುವವರ ವಿವಾಹ ನಡೆಸಿ ಕೊಡುವುದಿಲ್ಲವೆಂದು ಜಾರ್ಖಂಡ್, ಬಿಹಾರ ಮತ್ತು ಒಡಿಸ್ಸಾಗಳಲ್ಲಿ ಮುಸ್ಲಿಮರ ಚಟುವಟಿಕೆಗಳನ್ನು ನಿಯಂತ್ರಿಸುವ ಇಮಾರತೆ ಶರಿಯಾ ಎಂಬ ವಿದ್ವಾಂಸರ ಮಂಡಳಿಯು ಘೋಷಿಸಿದೆ.
  3. ದೆಹಲಿಯಲ್ಲಿ ಡೆನ್ಮಾರ್ಕ್ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ..
  ಕಳೆದ ಒಂದೇ ವಾರದಲ್ಲಿ ಪ್ರಕಟವಾದ ಈ ಮೂರು ಸುದ್ದಿಗಳನ್ನು ಬರೇ ವಾರ್ತೆಗಳಾಗಿಯಷ್ಟೇ ನಾವು ಪರಿಗಣಿಸಬೇಕಿಲ್ಲ. ಹಾಗೆ ಪರಿಗಣಿಸುವುದಕ್ಕೆ ನಮ್ಮ ಸುತ್ತಮುತ್ತಲಿನ ವಾತಾವರಣ ಅನುಮತಿಸುತ್ತಲೂ ಇಲ್ಲ. ಅಂದಹಾಗೆ, ಜನವರಿ 5ರಂದು ಶ್ರೀಹರಿ ಕೋಟಾದಿಂದ ಜಿಎಸ್‍ಎಲ್‍ವಿ-ಡಿ5 ರಾಕೆಟ್ ಯಶಸ್ವಿಯಾಗಿ ಗಗನಕ್ಕೆ ಹಾರಿದುದನ್ನು ಮಾಧ್ಯಮಗಳು ಪ್ರಮುಖ ಸುದ್ದಿಯಾಗಿಸಿ ಸಂಭ್ರಮಿಸಿದುವು. ಕ್ರಯೋಜನಿಕ್ ತಂತ್ರಜ್ಞಾನದಲ್ಲೂ ಭಾರತ ಸ್ವಾವಲಂಬಿಯಾಗಿರುವುದಕ್ಕೆ ದೇಶ ಹರ್ಷಪಟ್ಟಿತು. ವೈಜ್ಞಾನಿಕ ಕ್ಷೇತ್ರದಲ್ಲಿ ಈ ದೇಶ ವಿಶ್ವದ ಪ್ರಮುಖ 5 ರಾಷ್ಟ್ರಗಳಲ್ಲಿ ಒಂದಾಗಿರುವುದಕ್ಕಾಗಿ ವಿಜ್ಞಾನಿ ಸಮೂಹವನ್ನು ಕೊಂಡಾಡಲಾಯಿತು. ಇಷ್ಟಕ್ಕೂ ಕೇವಲ ರಾಕೆಟ್ ಉಡ್ಡಯನವೊಂದೇ ಅಲ್ಲ, ಇನ್ಫೋಸಿಸ್, ವಿಪ್ರೋಗಳಂಥ ಬೃಹತ್ ಕಂಪೆನಿಗಳು ವರ್ಷಂಪ್ರತಿ ಸಾಧಿಸುತ್ತಿರುವ ನಿವ್ವಳ ಲಾಭದ ಬಗ್ಗೆ ಮಾಧ್ಯಮಗಳಲ್ಲಿ ಕೊಂಡಾಟದ ಪದಗಳು ಪ್ರಕಟವಾಗುತ್ತಲೇ ಇವೆ. ಪೋಲಿಯೋ ಮುಕ್ತ ಭಾರತಕ್ಕಾಗಿ ಪ್ರಶಂಸೆಯ ಸುರಿಮಳೆಗಳು ಹರಿದು ಬರುತ್ತಿವೆ. ಭವಿಷ್ಯದಲ್ಲಿ ಭಾರತವು ಅತಿ ದೊಡ್ಡ ಆರ್ಥಿಕ ಶಕ್ತಿಯಾಗಿ ಮೂಡಿ ಬರಲಿದೆ ಎಂಬ ರೋಮಾಂಚನಕಾರಿ ಭವಿಷ್ಯಗಳನ್ನು ಹೇಳಲಾಗುತ್ತಿದೆ. ಇವಕ್ಕೆ ಪೂರಕವಾಗಿ ಚತುಷ್ಪಥ ರಸ್ತೆಗಳು, ಮಾಲ್‍ಗಳು, ಗಗನಚುಂಬಿ ಕಟ್ಟಡಗಳ ನಿರ್ಮಾಣವು ಬಿರುಸಿನಿಂದ ನಡೆಯುತ್ತಿವೆ. ಆದರೆ ಈ ಎಲ್ಲ ಸಮಭ್ರಮಗಳ ಇನ್ನೊಂದು ಮಗ್ಗುಲು ಅತ್ಯಂತ ದಾರುಣವಾದದ್ದು ಅನ್ನುವುದನ್ನು ಸುನಂದಾ, ಇಮಾರತೆ ಶರಿಯಾ ಅಥವಾ ಡೆನ್ಮಾರ್ಕ್‍ ನ  ಮಹಿಳೆ ಸಾರುತ್ತಿದ್ದಾರೆ. ಗುಂಡಿಗಳಿಲ್ಲದ ರಸ್ತೆಗಳು ನಿರ್ಮಾಣವಾಗುವುದಕ್ಕಿಂತಲೂ ವೇಗವಾಗಿ ದೇಹವಿಡೀ ಗಾಯಗಳೆಂಬ ಗುಂಡಿಗಳಿಂದ ಜರ್ಝರಿತರಾಗುವ ಹೆಣ್ಣು ಮಕ್ಕಳು ತಯಾರಾಗುತ್ತಿದ್ದಾರೆ. ಕ್ರಯೋಜನಿಕ್ ತಂತ್ರಜ್ಞಾನದ ಖುಷಿಯನ್ನು ಅನುಭವಿಸಲೂ ಸಾಧ್ಯವಾಗದಷ್ಟು ಅಗಾಧ ಪ್ರಮಾಣದಲ್ಲಿ ಕೌಟುಂಬಿಕ ವಾತಾವರಣಗಳು ಛಿದ್ರವಾಗುತ್ತಿವೆ. ಒಂದು ರಾಕೆಟ್ ಆಕಾಶಕ್ಕೆ ಹಾರುವಾಗ, ಅಸಂಖ್ಯ ಸುನಂದಾರು ಭೂಮಿಯೊಳಗೆ ಸೇರುತ್ತಿದ್ದಾರೆ. ಕ್ರಯೋಜನಿಕ್ ತಂತ್ರಜ್ಞಾನದಲ್ಲಿ ನಾವು ಸ್ವಾವಲಂಬನೆ ಹೊಂದಿದಂತೆಯೇ ವರದಕ್ಷಿಣೆ ಎಂಬ ಅತಿ ಹೀನ ಪದ್ಧತಿಯಲ್ಲೂ ಸ್ವಾವಲಂಬನೆ ಸಾಧಿಸಿದ್ದೇವೆ. ಪೋಲಿಯೋ ವೈಕಲ್ಯದಿಂದ ನಾವು ಮುಕ್ತ ಆಗಿರಬಹುದು. ಆದರೆ ಹೆಣ್ಣು ಮಕ್ಕಳನ್ನು ಮಾನಸಿಕವಾಗಿ ಎಂದೆಂದೂ ವೈಕಲ್ಯಕ್ಕೆ ದೂಡುವ 'ಅತ್ಯಾಚಾರ'ವೆಂಬ ವೈಕಲ್ಯವನ್ನು ನಾವು ಸಂಶೋಧಿಸಿ ಇಟ್ಟುಕೊಂಡಿದ್ದೇವೆ.
   ನಿಜವಾಗಿ, ಮೇಲೆ ಉಲ್ಲೇಖಿಸಲಾದ ಮೂರೂ ಪ್ರಕರಣಗಳಲ್ಲಿ ಒಂದು ಸಮಾನ ಬಿಂದುವಿದೆ. ಅದುವೇ ನೈತಿಕತೆ. ಕೌಟುಂಬಿಕ ಸಂಬಂಧಗಳು ಬಿರುಕು ಬಿಡುತ್ತಿರುವ, ಸಾಮಾಜಿಕ ನಿಯಮಗಳು ಸಡಿಲಗೊಳ್ಳುತ್ತಿರುವ ಮತ್ತು ಧಾರ್ಮಿಕ ಮೌಲ್ಯಗಳು ಪ್ರಾಶಸ್ತ್ಯ ಕಳೆದುಕೊಳ್ಳುತ್ತಿರುವ ಸೂಚನೆಗಳನ್ನು ಪ್ರತಿದಿನದ ಬೆಳವಣಿಗೆಗಳು ಮತ್ತೆ ಮತ್ತೆ ಸಾರಿ ಹೇಳುತ್ತಿವೆ. ಅಂದಹಾಗೆ, ಕಾಂಗ್ರೆಸ್, ಬಿಜೆಪಿ, ಕಮ್ಯೂನಿಸ್ಟ್, ಆಮ್ ಆದ್ಮಿ.. ಸಹಿತ ರಾಜಕೀಯ ಪಕ್ಷಗಳ ಮಧ್ಯೆ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳು ಇರಬಹುದಾದರೂ ನೈತಿಕ ವಿಷಯದಲ್ಲಿ ಭಿನ್ನತೆಗಳಿರುವ ಸಾಧ್ಯತೆ ಇಲ್ಲ. ಕುಟುಂಬ, ಪತಿ-ಪತ್ನಿ, ಮಕ್ಕಳು ಮತ್ತು ಅಲ್ಲಿ ಪಾಲನೆಯಾಗಬೇಕಾದ ಮೌಲ್ಯಗಳ ವಿಷಯದಲ್ಲಿ ರಾಜಕಾರಣಿಗೂ ಸಾಮಾನ್ಯನಿಗೂ ನಡುವೆ ವ್ಯತ್ಯಾಸ ಇರುವುದಿಲ್ಲ. ಸಾಮಾನ್ಯನೊಬ್ಬ ತನ್ನ ಪತ್ನಿ ಮತ್ತು ಮಕ್ಕಳನ್ನು ಹೇಗೆ ಪ್ರೀತಿಸುತ್ತಾನೋ ಹಾಗೂ ಪತ್ನಿ ಮತ್ತು ಮಕ್ಕಳು ತನ್ನನ್ನು ಎಷ್ಟು ಪ್ರೀತಿಸಬೇಕೆಂದು ಆಸೆ ಪಡುತ್ತಾನೋ ಅಂಥದ್ದೇ ಆಸೆ ಮತ್ತು ನಿರೀಕ್ಷೆ ರಾಜಕಾರಣಿಯಲ್ಲೂ ಇರುತ್ತದೆ. ಕಾಲೇಜಿಗೆ ಹೋದ ತನ್ನ ಮಗಳ ಸುರಕ್ಷಿತತೆಯ ಬಗ್ಗೆ ಸಾಮಾನ್ಯ ಹೆತ್ತವರು ನಿತ್ಯ ಅನುಭವಿಸುವ ಒತ್ತಡದಷ್ಟು ಅಲ್ಲದಿದ್ದರೂ ಒಂದು ಹಂತದ ವರೆಗೆ ರಾಜಕಾರಣಿ ಹೆತ್ತವರೂ ಅನುಭವಿಸುತ್ತಾರೆ. ದೆಹಲಿಯ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಈ ಹಿಂದೆ ಇಂಥದ್ದೇ ಆಂತಕವನ್ನು ವ್ಯಕ್ತಪಡಿಸಿದ್ದರು. ಆಧುನಿಕ ಸಂಸ್ಕøತಿಯ ಥಳಕು-ಬಳುಕಿನಲ್ಲಿ ಎಲ್ಲಿ ತನ್ನ ಮಕ್ಕಳು ಹೆಜ್ಜೆ ತಪ್ಪುತ್ತಾರೋ ಅನ್ನುವ ಭೀತಿ ಮಧ್ಯಮ ವರ್ಗದ ಕುಟುಂಬಗಳಲ್ಲಿ ಮಾತ್ರ ಇರುವುದಲ್ಲ, ರಾಜಕಾರಣಿಗಳಂಥ ಶ್ರೀಮಂತ ಕುಟುಂಬಗಳಲ್ಲೂ ಇರುತ್ತದೆ. ಹಾಗಿದ್ದೂ, ನೈತಿಕತೆಯೇ ಈ ದೇಶದ ಅತಿದೊಡ್ಡ ಸಮಸ್ಯೆಯಾಗಿ ಇವತ್ತು ಗುರುತಿಸಿಕೊಳ್ಳುತ್ತಿರುವುದಕ್ಕೆ ಕಾರಣ ಏನು? ಧರ್ಮವನ್ನು ಅತೀ ಹೆಚ್ಚು ಅನುಸರಿಸುವವರುಳ್ಳ ದೇಶವೊಂದು ಧರ್ಮಬಾಹಿರ ಕೃತ್ಯಗಳಲ್ಲಿ ಹೆಚ್ಚೆಚ್ಚು ಸುದ್ದಿಯಾಗುತ್ತಿರುವುದು ಯಾವುದರ ಸೂಚನೆ? ವರದಕ್ಷಿಣೆ ಮತ್ತು ಮದ್ಯಪಾನವು ಮುಸ್ಲಿಮರ ಪಾಲಿಗೆ ಧಾರ್ಮಿಕವಾಗಿಯೇ ನಿಷಿದ್ಧ. ಪ್ರವಾದಿ ಮುಹಮ್ಮದ್ ಮತ್ತು ಪವಿತ್ರ ಕುರ್‍ಆನಿನ ಅನುಯಾಯಿ ಎಂದು ಗುರುತಿಸಿಕೊಳ್ಳುವ ಮತ್ತು ಮುಸ್ಲಿಮರ ಹೆಸರಿಟ್ಟ ವ್ಯಕ್ತಿ ಈ ನಿಯಮವನ್ನು ಪಾಲಿಸುವುದು ಕಡ್ಡಾಯ. ಮುಸ್ಲಿಮ್ ಕುಡುಕರು, ಮುಸ್ಲಿಮ್ ವರದಕ್ಷಿಣೆಕೋರರು ಎಂಬ ಪದಗಳೇ ಇಸ್ಲಾಮಿಗೆ ಅನ್ಯ. ಆದರೆ ಇವತ್ತು ಪರಿಸ್ಥಿತಿ ಎಷ್ಟು ಹದಗೆಟ್ಟಿದೆಯೆಂದರೆ, ಇವುಗಳ ವಿರುದ್ಧವೇ ಮುಸ್ಲಿಮ್ ವಿದ್ವಾಂಸರು ಫತ್ವಾ ಹೊರಡಿಸಬೇಕಾದ ಸ್ಥಿತಿ ಬಂದಿದೆ. ಅಷ್ಟಕ್ಕೂ, ಸುನಂದ ಅವರ ಅಸಹಜ ಸಾವು ಮುಂದಿನ ದಿನಗಳಲ್ಲಿ ಸಹಜ ಸಾವಾಗಿಯೋ ಆತ್ಮಹತ್ಯೆಯಾಗಿಯೋ ಗುರುತಿಸಿಕೊಳ್ಳಬಹುದು. ಈ ಸಾವಿನಲ್ಲಿ ತರೂರ್ ನಿರಪರಾಧಿ ಎಂದೂ ಘೋಷಿತವಾಗಬಹುದು. ಯಾಕೆಂದರೆ, ಸುನಂದ ಅನುಭವಿಸಿದ ಮಾನಸಿಕ ಒತ್ತಡವನ್ನು ದಾಖಲಿಸುವುದಕ್ಕೆ ನಮ್ಮಲ್ಲಿ ಯಾವುದೇ ತಂತ್ರಜ್ಞಾನಗಳು ಇಲ್ಲವಲ್ಲ. ಅಲ್ಲದೇ ಕೋರ್ಟು ದೈಹಿಕ ಗಾಯಗಳನ್ನು ಪರಿಗಣಿಸುತ್ತದೆಯೇ ಹೊರತು ಮಾನಸಿಕ ಗಾಯಗಳನ್ನು ಅಲ್ಲವಲ್ಲ. ಹಾಗಂತ, ಇದು ಓರ್ವ ಸುನಂದರ ಸಮಸ್ಯೆ ಮಾತ್ರವೇ ಅಲ್ಲ. ಈ ದೇಶದಲ್ಲಿ ಅಸಂಖ್ಯಾ ಕುಟುಂಬಗಳು ಅನುಭವಿಸುತ್ತಿರುವ ಸಮಸ್ಯೆಯ ಒಂದು ಮುಖವಷ್ಟೇ ಆಕೆ. ಪತಿಗೆ ಪತ್ನಿಯ ಮೇಲೆ ಮತ್ತು ಪತ್ನಿಗೆ ಪತಿಯ ಮೇಲೆ ಪರಸ್ಪರ ಪ್ರೀತಿಗಿಂತ ಅನುಮಾನಗಳೇ ಹೆಚ್ಚುತ್ತಿರುತ್ತಿರುವ ದಿನಗಳಿವು. ಮದುವೆ, ವಿಚ್ಛೇದನ, ವಿವಾಹೇತರ ಸಂಬಂಧ.. ಮುಂತಾದುವುಗಳೆಲ್ಲ 'ಸಹಜ' ಅನ್ನುವಷ್ಟರ ಮಟ್ಟಿಗೆ ಇವತ್ತು ಮಾಮೂಲು ಆಗತೊಡಗಿವೆ. ಇಂಥದ್ದೊಂದು ಸ್ಥಿತಿಯಲ್ಲಿ ನಾವು ಕೇವಲ ರಾಕೆಟ್ಟು, ಪೋಲಿಯೋ ಮುಕ್ತ ಭಾರತವನ್ನು ಕಲ್ಪಿಸಿಕೊಂಡು ಖುಷಿಪಟ್ಟರೆ ಏನು ಪ್ರಯೋಜನವಿದೆ? ಈ ಎಲ್ಲ ಖುಷಿಯನ್ನೂ ಮುಂದೊಂದು ದಿನ ವಿಷಾದವಾಗಿ ಪರಿವರ್ತಿಸಿಬಿಡಬಲ್ಲ ಸಮಸ್ಯೆಯ ಕುರಿತು ನಾವು ಎಷ್ಟಂಶ ಗಂಭೀರವಾಗಿದ್ದೇವೆ?
   ನೈತಿಕ ಮೌಲ್ಯಗಳು ಪಾತಾಳ ಕಂಡಿರುವ ದೇಶವೊಂದು ವೈಜ್ಞಾನಿಕವಾಗಿ ಎಷ್ಟೇ ಮುಂದುವರಿದಿದ್ದರೂ ಪ್ರಯೋಜನವಿಲ್ಲ. ಒಂದು ದೇಶದ ಭವಿಷ್ಯವು ಆ ದೇಶದ ಸಾಮಾಜಿಕ ಅಭಿರುಚಿಗಳನ್ನು ಹೊಂದಿಕೊಂಡಿದೆ. ನೈತಿಕತೆಗೆ ಯಾವ ಬೆಲೆಯನ್ನೂ ಕೊಡದ ಸಮಾಜವೊಂದು ನೆಮ್ಮದಿಯ ದೇಶ ನಿರ್ಮಾಣಕ್ಕೆ ಯಾವ ಕೊಡುಗೆಯನ್ನೂ ಕೊಡಲಾರದು. ನೆಮ್ಮದಿಗೂ ಪ್ರಗತಿಗೂ ನಡುವೆ ದೊಡ್ಡ ವ್ಯತ್ಯಾಸ ಇದೆ. ಒಂದು ಕುಟುಂಬ ಅಥವಾ ದೇಶ ಸಂಪದ್ಭರಿತವಾಗಿದೆಯೆಂದ ಮಾತ್ರಕ್ಕೆ ಆ ಕುಟುಂಬ ನೆಮ್ಮದಿಯಿಂದಿದೆ ಎಂದರ್ಥವೂ ಅಲ್ಲ. ನೆಮ್ಮದಿ ಬರೇ ಶ್ರೀಮಂತಿಕೆಯನ್ನು ಹೊಂದಿಕೊಂಡಿಲ್ಲ. ಅದು ಆ ಕುಟುಂಬ ಪಾಲಿಸುತ್ತಿರುವ ಮೌಲ್ಯಗಳನ್ನು ಹೊಂದಿಕೊಂಡಿದೆ. ಈ ದೇಶ ಸದ್ಯ ನೆಮ್ಮದಿಯಿಲ್ಲದ ಶ್ರೀಮಂತಿಕೆಯೆಡೆಗೆ ಧಾವಿಸುತ್ತಿದೆಯೇನೋ ಎಂದು ಅನುಮಾನಿಸುವುದಕ್ಕೆ ಪ್ರತಿನಿತ್ಯ ಉದಾಹರಣೆಗಳು ಸಿಗುತ್ತಲೇ ಇವೆ. ಸುನಂದಾ ಪುಷ್ಕರ್, ಡೆನ್ಮಾರ್ಕ್ ಮಹಿಳೆ ಮತ್ತು ಇಮಾರತೆ ಶರಿಯಾಗಳು ಇದನ್ನು ಮತ್ತೊಮ್ಮೆ ದೃಢಪಡಿಸಿವೆ.

No comments:

Post a Comment