Wednesday, 1 January 2014

ಮೋದಿ ಎಂಬ ಗುಳ್ಳೆಯನ್ನು ಒಡೆದು ಹಾಕಿದ ಯಡಿಯೂರಪ್ಪ

    1. ಅರವಿಂದ್ ಕೇಜ್ರಿವಾಲ್
 2. ಯಡಿಯೂರಪ್ಪ
 ದೆಹಲಿ ಮತ್ತು ಬೆಂಗಳೂರಿನಲ್ಲಿ ಸದ್ಯ ಅತ್ಯಂತ ಹೆಚ್ಚು ಚರ್ಚೆಯಲ್ಲಿರುವ ಎರಡು ಹೆಸರುಗಳಿವು. ಈ ಹೆಸರುಗಳ ನಡುವೆ ಇರುವ ಸಮಾನ ಅಂಶ ಏನೆಂದರೆ, ವರ್ಷದ ಹಿಂದೆ ಇವರಿಬ್ಬರೂ ಹೊಸ ಪಕ್ಷವನ್ನು ಕಟ್ಟಿದರು. ಸಮಾನ ಅಂಶ ಬಹುತೇಕ ಇಲ್ಲಿಗೇ ಕೊನೆಗೊಳ್ಳುತ್ತದೆ. ಆದರೆ ವಿರುದ್ಧ ಅಂಶಗಳಂತೂ ಹತ್ತಾರು ಇವೆ. ಭ್ರಷ್ಟಾಚಾರವನ್ನು ನಿರ್ಮೂಲನಗೊಳಿಸುವುದೇ ಕೇಜ್ರಿವಾಲ್ ಪಕ್ಷದ ಮೂಲ ತಳಹದಿ. ಯಡಿಯೂರಪ್ಪರಾದರೋ ಭ್ರಷ್ಟಾಚಾರದ ಆರೋಪವನ್ನು ಹೊತ್ತುಕೊಂಡೇ ಪಕ್ಷ  ಕಟ್ಟಿದರು. ಜೈಲು ಸೇರಿದರು. ಅಧಿಕಾರ ಉಳಿಸಿಕೊಳ್ಳುವುದಕ್ಕಾಗಿ ‘ಆಪರೇಶನ್ ಕಮಲ’ ನಡೆಸಿದರು. ದುಡ್ಡಿಗಾಗಿ ಬಳ್ಳಾರಿಯನ್ನೇ ಮಾರಿದರು. ಮಠ, ಮಂದಿರಗಳನ್ನು ಕೊಂಡುಕೊಂಡರು. ಇಲ್ಲೆಲ್ಲಾ ಕೇಜ್ರಿವಾಲ್ ಸಂಪೂರ್ಣ ತದ್ವಿರುದ್ಧ. ಅಧಿಕಾರಕ್ಕಾಗಿ ‘ಆಪರೇಶನ್’ ನಡೆಸಬೇಕಾದ ಸನ್ನಿವೇಶ ಸೃಷ್ಟಿಯಾಗಿದ್ದರೂ ಕೇಜ್ರಿವಾಲ್ ಅಂಥದ್ದೊಂದು ಪ್ರಯತ್ನವನ್ನೇ ಮಾಡಲಿಲ್ಲ. ಕಾಂಗ್ರೆಸ್ ಪಕ್ಷವು ಬೆಂಬಲ ನೀಡಲು ಮುಂದೆ ಬಂದಾಗಲೂ 18 ಷರತ್ತುಗಳನ್ನು ಒಡ್ಡಿದರು. ನಿಜವಾಗಿ ಷರತ್ತುಗಳನ್ನು ಒಡ್ಡಬೇಕಾಗಿದ್ದುದು ಕಾಂಗ್ರೆಸ್. ಯಾಕೆಂದರೆ, ಅದರ ಬೆಂಬಲವೇ ನಿರ್ಣಾಯಕ. ಸರಕಾರವನ್ನು ಬೀಳಿಸುವ ಅಥವಾ ಉಳಿಸುವ ಸಾಮರ್ಥ್ಯ  ಆ ಬೆಂಬಲಕ್ಕಿದೆ. ಆದರೆ, ಕೇಜ್ರಿವಾಲ್‍ರು ಈ ಸಾಂಪ್ರದಾಯಿಕ ರಾಜಕೀಯವನ್ನೇ ತಿರಸ್ಕರಿಸಿದರು. ಅಧಿಕಾರಕ್ಕಾಗಿ ಮೌಲ್ಯಗಳೊಂದಿಗೆ ರಾಜಿಯಾಗಲಾರೆ ಎಂದು ದಿಟ್ಟವಾಗಿ ಸಾರಿದರು. ದೆಹಲಿಯ ಮಂದಿ ಕೇಜ್ರಿವಾಲರಲ್ಲಿ ಇವತ್ತು ನಂಬಿಕೆ ಇಟ್ಟಿರುವುದಕ್ಕೆ ಅವರ ಇಂಥ ನಿಷ್ಠುರ ನಡೆಗಳೇ ಕಾರಣ. ಒಂದು ವೇಳೆ, ಯಡಿಯೂರಪ್ಪರ ಬಗ್ಗೆ ಈ ರಾಜ್ಯದ ಮಂದಿಗೆ ನಂಬಿಕೆ ಇದ್ದದ್ದೇ ಆಗಿದ್ದರೆ ಅವರ ಕೆಜೆಪಿಯನ್ನು ಅವರು ಪರ್ಯಾಯವಾಗಿ ಆಯ್ಕೆ ಮಾಡಿಕೊಳ್ಳುತ್ತಿದ್ದರು. ದೆಹಲಿಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಗೆ ಆಮ್ ಆದ್ಮಿ ಪರ್ಯಾಯವಾದಂತೆ ಕರ್ನಾಟಕದಲ್ಲೂ ಕೆಜೆಪಿ ಪರ್ಯಾಯವಾಗಬಹುದಿತ್ತು. ಅಲ್ಲದೇ, ಕೇಜ್ರಿವಾಲ್‍ಗೆ ಇಲ್ಲದ ಹಲವಾರು ಅನುಕೂಲಗಳೂ ಯಡಿಯೂರಪ್ಪರಿಗಿದ್ದುವು. ಅವರು ಮಾಜಿ ಮುಖ್ಯಮಂತ್ರಿ. ಅವರ ಜೊತೆಗೆ ಮಾಜಿ ಮಂತ್ರಿಗಳೂ ಇದ್ದರು. ಕಾರ್ಯಕರ್ತರ ಪಡೆಯೂ ಇತ್ತು. ಇಷ್ಟೆಲ್ಲ ಇದ್ದೂ ರಾಜ್ಯದ ಮಂದಿ ಅವರ ಮೇಲೆ ಭರವಸೆ ಇಡದೇ ಇದ್ದುದಕ್ಕೆ ಕಾರಣ ಏನು? ಭ್ರಷ್ಟಾಚಾರಿ ಎಂಬ ಹಣೆಪಟ್ಟಿಯ ಹೊರತಾದ ಬೇರೆ ಯಾವ ಕಾರಣಗಳನ್ನು ಇದಕ್ಕೆ ಕೊಡಬಹುದು? ಯಡಿಯೂರಪ್ಪ ಮತ್ತು ಅವರ ಬೆಂಬಲಿಗರು ಏನೇ ಸಮರ್ಥನೆ ಕೊಡಲಿ, ಈ ರಾಜ್ಯದ ಮಂದಿ ಯಡಿಯೂರಪ್ಪರಲ್ಲಿ ಓರ್ವ ಭ್ರಷ್ಟನನ್ನು ಕಂಡಿದ್ದಾರೆ. ಆ 'ಭ್ರಷ್ಟ'ನನ್ನು ಈ ರಾಜ್ಯದ ಮಂದಿ ಎಷ್ಟರ ಮಟ್ಟಿಗೆ ದ್ವೇಷಿಸಿದರೆಂದರೆ, ಅವರಿಗೆ ಎರಡಂಕಿಯ ಶಾಸಕರನ್ನೂ ಕೊಡಲಿಲ್ಲ. ಮಠ, ಮಂದಿರಗಳು ಬಹುತೇಕ ಯಡಿಯೂರಪ್ಪರ ಪರ ನಿಂತರೂ ಜನ ತಿರಸ್ಕರಿಸಿದರು. ಇಂಥ ಯಡಿಯೂರಪ್ಪರನ್ನು ಬಿಜೆಪಿ ಸೇರಿಸಿಕೊಳ್ಳುತ್ತಿದೆಯೆನ್ನುವುದು ಯಾವುದರ ಸೂಚನೆ? ಈ ಮೂಲಕ ಅದು ಈ ದೇಶದ ಮತದಾರರಿಗೆ ಯಾವ ಸಂದೇಶವನ್ನು ರವಾನಿಸಲು ಬಯಸುತ್ತಿದೆ? ಅಧಿಕಾರಕ್ಕಾಗಿ ಭ್ರಷ್ಟಾಚಾರದೊಂದಿಗೆ ರಾಜಿ ಮಾಡಿಕೊಳ್ಳಲೂ ಸಿದ್ಧ ಎಂಬ ಬಿಜೆಪಿಯ ಈ ನಿಲುವು ಮೋದಿಗೆ ಸಮ್ಮತವೇ? ‘ಮೋದಿಯನ್ನು ಪ್ರಧಾನಿ ಮಾಡುವುದಕ್ಕಾಗಿ ನಾನು ಬಿಜೆಪಿ ಸೇರುತ್ತಿದ್ದೇನೆ..’ ಅನ್ನುವ ಯಡಿಯೂರಪ್ಪ ಮತ್ತು ಕೇಂದ್ರ ಸರಕಾರದ ಭ್ರಷ್ಟಾಚಾರವನ್ನು ಖಂಡಿಸುತ್ತಾ ತಿರುಗುತ್ತಿರುವ ಮೋದಿ; ಯಾಕೆ ಈ ವೈರುಧ್ಯ? ತನ್ನ ಪಕ್ಷಕ್ಕೆ ಭ್ರಷ್ಟಾಚಾರಿಯನ್ನು ಆಹ್ವಾನಿಸುತ್ತಲೇ ಕೇಂದ್ರ ಸರಕಾರವನ್ನು ಖಂಡಿಸುವ ಮೋದಿಯವರು ಯಾರನ್ನು ವಂಚಿಸುತ್ತಿದ್ದಾರೆ?
 ಒಂದು ಪಕ್ಷದ ಪ್ರಮುಖ ಹುದ್ದೆಯಲ್ಲಿರುವ ವ್ಯಕ್ತಿ ಭ್ರಷ್ಟಾಚಾರಿಯಾಗುವುದಕ್ಕೂ ಭ್ರಷ್ಟಾಚಾರಿಯನ್ನು ಪಕ್ಷಕ್ಕೆ ಸೇರ್ಪಡೆಗೊಳಿಸುವುದಕ್ಕೂ ವ್ಯತ್ಯಾಸ ಇದೆ. ಲಕ್ಷಾಂತರ ಮಂದಿ ಕಾರ್ಯಕರ್ತರಿರುವ ಪಕ್ಷವೊಂದರಲ್ಲಿ ಎಲ್ಲರೂ ಪಕ್ಷದ ನೀತಿ, ಸಿದ್ಧಾಂತ, ಧೋರಣೆಗಳಿಗೆ ನೂರು ಶೇಕಡಾ ಬದ್ಧರಾಗಿ ಬದುಕುತ್ತಾರೆಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಪಕ್ಷದ ಧೋರಣೆಗಳಿಗೆ ವ್ಯತಿರಿಕ್ತವಾಗಿ ಓರ್ವ ಭ್ರಷ್ಟಾಚಾರಿಯಾಗಬಲ್ಲ. ಕೊಲೆಗಾರ, ಅತ್ಯಾಚಾರಿ.. ಏನೇನೋ ಆಗಬಲ್ಲ. ಆದರೆ ಪಕ್ಷಕ್ಕೆ ಇದು ಗೊತ್ತಾದ ಕೂಡಲೇ ಆತನನ್ನು ಪಕ್ಷದಿಂದ ಉಚ್ಛಾಟಿಸುವ ನಿಷ್ಠುರತೆಯನ್ನು ಪಕ್ಷ ಪ್ರದರ್ಶಿಸಬೇಕು. ಪಕ್ಷಕ್ಕೆ ಸಿದ್ಧಾಂತ ಮುಖ್ಯವೇ ಹೊರತು ವ್ಯಕ್ತಿಯಲ್ಲ ಎಂಬ ಸಂದೇಶವನ್ನು ಸಾರ್ವಜನಿಕರಿಗೆ ಮನವರಿಕೆ ಮಾಡಿಸುವ  ವಿಧಾನ ಇದು. ಯಡಿಯೂರಪ್ಪರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದ ಬಿಜೆಪಿಯು ಆ ಮೂಲಕ ಅವರ ಮೇಲಿನ ಭ್ರಷ್ಟಾಚಾರದ ಆರೋಪವನ್ನು ಒಂದು ಹಂತದವರೆಗೆ ಒಪ್ಪಿಕೊಂಡಿದೆ. ಯಡಿಯೂರಪ್ಪ ಕೆಜೆಪಿ ಕಟ್ಟಿದ ಬಳಿಕ ಬಿಜೆಪಿ ವರ್ತಿಸಿದ ರೀತಿಯನ್ನು ನೋಡಿದರೆ ಇದನ್ನು ಖಚಿತವಾಗಿ ಹೇಳಬಹುದು. ಮಾತ್ರವಲ್ಲ, ಆ ಆರೋಪದಿಂದ ಯಡಿಯೂರಪ್ಪ ಇನ್ನೂ ಮುಕ್ತರಾಗಿಲ್ಲ. ಹೀಗಿರುತ್ತಾ, ಅವರನ್ನು ಪಕ್ಷಕ್ಕೆ ಮತ್ತೆ ಸೇರ್ಪಡೆಗೊಳಿಸಿರುವುದಕ್ಕೆ ಬಿಜೆಪಿ ಯಾವ ಸಮರ್ಥನೆಯನ್ನು ಕೊಡಬಲ್ಲದು? ಬಿಜೆಪಿಗೆ ಅಂಥದ್ದೊಂದು ವ್ಯಕ್ತಿಯ ಅಗತ್ಯ ಏನಿತ್ತು? ಇವತ್ತು ಈ ದೇಶದಲ್ಲಿ ಭ್ರಷ್ಟಾಚಾರವನ್ನು ವಿರೋಧಿಸುವ ಕೋಟ್ಯಂತರ ಮಂದಿಯಿದ್ದಾರೆ. ವಿಶ್ವ ಪ್ರಸಿದ್ಧ ಆಪಲ್  ಕಂಪೆನಿಯಲ್ಲಿ ಒಂದು ಕೋಟಿ ರೂಪಾಯಿ ಸಂಬಳದ ಉದ್ಯೋಗವನ್ನು ಕೈ ಬಿಟ್ಟು ಲಾಲ್ ಬಹುದ್ದೂರ್ ಶಾಸ್ತ್ರಿಯವರ ಮೊಮ್ಮಗ ಆದರ್ಶ್ ಶಾಸ್ತ್ರಿಯವರು ಅಮ್ ಆದ್ಮಿ ಪಕ್ಷವನ್ನು ಸೇರಲು ಮುಂದಾಗಿರುವುದಕ್ಕೆ ಭ್ರಷ್ಟಾಚಾರ ವಿರೋಧಿ ಆಕ್ರೋಶವೇ ಕಾರಣ. ಇಂಥ ಅಸಂಖ್ಯಾತ ಯುವಕ-ಯುವತಿಯರು ಇವತ್ತು ಹೊಸತೊಂದು ಭಾರತದ ಕನಸು ಕಾಣುತ್ತಿದ್ದಾರೆ. ಈ ಕನಸಿಗೆ ಮೋದಿ ಹೇಗೆ ನಾಯಕತ್ವ ನೀಡಬಲ್ಲರು? ಭ್ರಷ್ಟಾಚಾರಕ್ಕಾಗಿ 6 ಕೋಟಿ ಕನ್ನಡಿಗರೇ ತಿರಸ್ಕರಿಸಿದ ವ್ಯಕ್ತಿಯನ್ನು ಮೋದಿ ತನ್ನ ಗೆಲುವಿಗಾಗಿ ಆಶ್ರಯಿಸುತ್ತಾರೆಂದರೆ, ಅವರು ಕಟ್ಟುವ ಭಾರತವಾದರೂ ಯಾವುದು? ಆ ಭಾರತದಲ್ಲಿ ಭ್ರಷ್ಟಾಚಾರಕ್ಕೆ ಮತ್ತು ಭ್ರಷ್ಟಾಚಾರಿಗಳಿಗೆ ಯಾವ ಶಿಕ್ಷೆ ಇದ್ದೀತು?
 ಒಂದು ಪಕ್ಷ ಒಂದು ದೇಶವನ್ನು ಆಳುವುದಕ್ಕೆ ಅರ್ಹತೆ ಪಡೆಯಬೇಕಾದದ್ದು ಆ ಪಕ್ಷದಲ್ಲಿರುವ ದುಡ್ಡು, ನಾಯಕರುಗಳ ಸಂಖ್ಯೆ ಅಥವಾ ಆ ಪಕ್ಷಕ್ಕೆ ಆಗಿರುವ ವಯಸ್ಸಿನ ಆಧಾರದಲ್ಲಿ ಆಗಿರಬಾರದು. ಅದು ಆ ಪಕ್ಷದ ಧೋರಣೆಯನ್ನು ಹೊಂದಿಕೊಂಡಿರಬೇಕು. ಪಕ್ಷದ ನಾಯಕರು ತಪ್ಪನ್ನೆಸಗಿದಾಗ ಕೈಗೊಳ್ಳುವ ನಿಲುವುಗಳೇನು ಎಂಬುದನ್ನು ನೋಡಿಕೊಂಡಿರಬೇಕು. ವ್ಯಕ್ತಿ ಮತ್ತು ಸಿದ್ಧಾಂತದ ನಡುವೆ ಆಯ್ಕೆಯ ಪ್ರಶ್ನೆ ಬಂದಾಗ ಅದು ಏನನ್ನು ಆಯ್ಕೆ ಮಾಡಿಕೊಳ್ಳುತ್ತದೆ ಎಂಬುದನ್ನು ಆಧರಿಸಿರಬೇಕು. ಕಾಂಗ್ರೆಸ್ ಪಕ್ಷಕ್ಕೆ 125 ವರ್ಷಗಳಾಗಿವೆ ಎಂಬ ಏಕೈಕ ಕಾರಣಕ್ಕಾಗಿ ರಾಹುಲ್ ಗಾಂಧಿ ಪ್ರಧಾನಿಯಾಗುವುನ್ನು ಯಾರೂ ಒಪ್ಪುವುದಿಲ್ಲ, ಒಪ್ಪಬಾರದು. ನರೇಂದ್ರ ಮೋದಿಯವರು ಗುಜರಾತ್‍ನಲ್ಲಿ ಸತತ 3ನೇ ಬಾರಿ ಜನಾದೇಶ ಪಡೆದಿದ್ದಾರೆ ಎಂಬುದು ಕೂಡ ಅವರ ಪ್ರಧಾನಿ ಅಭ್ಯರ್ಥಿತನಕ್ಕೆ ಮಾನದಂಡ ಆಗುವುದಿಲ್ಲ, ಆಗಬಾರದು ಕೂಡ. ನಿರ್ಣಾಯಕ ಸಂದರ್ಭಗಳಲ್ಲಿ ಈ ಇಬ್ಬರ ಧೋರಣೆಗಳು ಏನೇನು ಎಂಬುದೇ ಇವರಿಬ್ಬರಲ್ಲಿ ಯಾರು ಉತ್ತಮ ಎಂದು ನಿರ್ಣಯಿಸುವುದಕ್ಕೆ ಸರಿಯಾದ ಮಾನದಂಡ. ರಾಹುಲ್ ಗಾಂಧಿ ಈ ನಿಟ್ಟಿನಲ್ಲಿ ನರೇಂದ್ರ ಮೋದಿಗಿಂತ ಮುಂದಿದ್ದಾರೆ. ಭ್ರಷ್ಟ ಸಂಸದರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಬಾರದೆಂಬ ಸುಪ್ರೀಮ್ ಕೋರ್ಟಿನ ತೀರ್ಪಿನ ವಿರುದ್ಧ ಕೇಂದ್ರ ಸರಕಾರವು ಹೊರಡಿಸಿದ ಆಧ್ಯಾದೇಶವನ್ನು ಅವರು ಪತ್ರಿಕಾಗೋಷ್ಠಿಯಲ್ಲಿ ಎಲ್ಲರೆದುರೇ ಖಂಡಿಸಿದ್ದಾರೆ. ರಾಷ್ಟ್ರಪತಿಗಳ ಅಂಗೀಕಾರಕ್ಕಾಗಿ ಕಳುಹಿಸಲಾದ ಆ ಆಧ್ಯಾದೇಶವನ್ನು `ಕಸದ ಬುಟ್ಟಿಗೆ ಹಾಕಿ' ಎಂದು ನೇರವಾಗಿ ಹೇಳಿದ್ದಾರೆ. ಇದೀಗ, ಆದರ್ಶ್ ಸೊಸೈಟಿ ಹಗರಣದ ಕುರಿತಾದ ವರದಿಗೆ ಸಂಬಂಧಿಸಿಯೂ ಮಹಾರಾಷ್ಟ್ರದ ಕಾಂಗ್ರೆಸ್ ಸರಕಾರದ ನಿಲುವನ್ನು ಅವರು ಬಲವಾಗಿ ಖಂಡಿಸಿದ್ದಾರೆ. ಕಾಂಗ್ರೆಸ್ ಮುಖಂಡರು ಒಳಗೊಂಡಿರುವರೆನ್ನಲಾದ ಈ ಹಗರಣದ ವರದಿಯನ್ನು ತಿರಸ್ಕರಿಸುವ ಸರಕಾರದ ನಿರ್ಧಾರ ತಪ್ಪೆಂದು ಅಭಿಪ್ರಾಯ ಪಟ್ಟಿದ್ದಾರೆ. ಹಾಗಂತ, ಕಾಂಗ್ರೆಸ್ ಭ್ರಷ್ಟಮುಕ್ತವಾಗಿದೆ ಎಂದು ಇದರರ್ಥವಲ್ಲ. ಆದರೆ, ನಿರ್ಣಾಯಕ ಸಂದರ್ಭಗಳಲ್ಲಿ ಮುಲಾಜಿಲ್ಲದೇ ನಿಲುವು ವ್ಯಕ್ತಪಡಿಸುವ ಮತ್ತು ಭ್ರಷ್ಟಾಚಾರದೊಂದಿಗೆ ರಾಜಿಯಾಗದೇ ಇರುವ ಛಾತಿಯನ್ನು ರಾಹುಲ್ ಗಾಂಧಿ ತೋರಿಸಿದ್ದಾರೆ. ಇವರಿಗೆ ಹೋಲಿಸಿದರೆ ಮೋದಿ ತೀರಾ ಹಿಂದಿದ್ದಾರೆ. ಭ್ರಷ್ಟಾಚಾರ, ಜಾತ್ಯತೀತತೆ, ಗೋಧ್ರಾ ಹತ್ಯಾಕಾಂಡ.. ಸಹಿತ ಪ್ರತಿಯೊಂದರ ಬಗ್ಗೆಯೂ ಅವರಲ್ಲಿ ಆಳವಾದ ದ್ವಂದ್ವವಿದೆ. 11 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಗೋಧ್ರಾ ಹತ್ಯಾಕಾಂಡದ ಬಗ್ಗೆ ಅವರು ತೋಡಿಕೊಂಡ ವ್ಯಾಕುಲತೆಯಲ್ಲೂ ಇದು ಎದ್ದು ಕಾಣುತ್ತದೆ. ನಿಜವಾಗಿ, ಇತರ ಪಕ್ಷಗಳನ್ನು ಮತ್ತು ಅದರ ತಪ್ಪುಗಳನ್ನು ಹೆಕ್ಕಿ ಹೆಕ್ಕಿ ಟೀಕೆಗೆ ಒಳಪಡಿಸುವುದು ಸುಲಭ. ಆದರೆ ತನ್ನದೇ ಪಕ್ಷದ ತಪ್ಪುಗಳನ್ನು ಪ್ರಶ್ನಿಸುವುದು ಕಷ್ಟ. ಮೋದಿ ಈ ವರೆಗೆ ಬಿಜೆಪಿಯ ಆಂತರಿಕ ಭ್ರಷ್ಟತನದ ಬಗ್ಗೆ ಒಂದೇ ಒಂದು ಮಾತನ್ನೂ ಆಡಿಲ್ಲ. ಸ್ವಿಸ್ ಬ್ಯಾಂಕ್, ಕಾಮನ್‍ವೆಲ್ತ್ ಅಥವಾ 2ಜಿ ಹಗರಣಗಳ ಬಗ್ಗೆ ಅವರು ಮಾತಾಡುವ ಧಾಟಿ, ಆವೇಶವನ್ನು ನೋಡಿದರೆ ಅವರು ಯಡಿಯೂರಪ್ಪರನ್ನು ಒಪ್ಪಿಕೊಳ್ಳುವುದಕ್ಕೆ ಸಾಧ್ಯವೇ ಇರಲಿಲ್ಲ. ಆದರೆ ತನ್ನ ವಿರೋಧ ಏನಿದ್ದರೂ ಅದು ಕಾಂಗ್ರೆಸ್‍ನ ವಿರುದ್ಧ, ಭ್ರಷ್ಟಾಚಾರದ ವಿರುದ್ಧ ಅಲ್ಲ ಎಂಬುದನ್ನು ಯಡಿಯೂರಪ್ಪ ಪ್ರಕರಣದ ಮೂಲಕ ಅವರು ಸಾಬೀತುಪಡಿಸುತ್ತಿದ್ದಾರೆ.
   ಏನೇ ಆಗಲಿ, ಮೋದಿಯ ಸುತ್ತ ಬಿಜೆಪಿ ಮತ್ತು ಮಾಧ್ಯಮವು ಹರಡಿಬಿಟ್ಟಿರುವ ಭರವಸೆಯ ಗುಳ್ಳೆಯನ್ನು ಯಡಿಯೂರಪ್ಪ ಒಡೆದು ಹಾಕಿದ್ದಾರೆ. ನಿರ್ಣಾಯಕ ಸಂದರ್ಭಗಳಲ್ಲಿ ಮೋದಿ ಎಷ್ಟು ದುರ್ಬಲರು ಎಂಬುದನ್ನು ಅವರು ಸಾಬೀತುಪಡಿಸಿದ್ದಾರೆ. ಇಂಥ ನಾಯಕ ಈ ದೇಶವನ್ನು ಮುನ್ನಡೆಸಲು ಎಷ್ಟು ಸಮರ್ಥ ಎಂಬ ಬಹುಮುಖ್ಯ ಪ್ರಶ್ನೆಯನ್ನೂ ಅವರು ಜನರ ಮುಂದಿಟ್ಟಿದ್ದಾರೆ. ಈ ಕಾರಣಕ್ಕಾಗಿ ನಾವು ಯಡಿಯೂರಪ್ಪರನ್ನು ಅಭಿನಂದಿಸಬೇಕು.

No comments:

Post a Comment