
ಸಾಮಾಜಿಕ ಜಾಲತಾಣಗಳಾದ ವಾಟ್ಸಪ್, ಫೇಸ್‍ಬುಕ್‍ಗಳು ಜನರ ದೈನಂದಿನ ಬದುಕಿನ ಅನಿವಾರ್ಯತೆಗಳಾಗಿ ಬದಲಾಗಿರುವ ಇಂದಿನ ದಿನಗಳಲ್ಲಿ ಒಂದು ಸ್ವಸ್ಥ ಸಮಾಜವನ್ನು ಅಸ್ವಸ್ಥಗೊಳಿಸುವುದಕ್ಕೆ ತುಂಬಾ ಕಷ್ಟವೇನೂ ಇಲ್ಲ. ವದಂತಿಗಳನ್ನು ಹೇಗೆ ಬೇಕಾದರೂ ಈ ಮಾಧ್ಯಮಗಳ ಮೂಲಕ ಬಿತ್ತರಿಸಬಹುದು. ವಾಟ್ಸಪ್ ಅಂತೂ ಪ್ರಚೋದನಕಾರಿ ಸಂದೇಶಗಳನ್ನು ರವಾನಿಸುವುದಕ್ಕೆ ಧಾರಾಳ ಬಳಕೆಯಾಗುತ್ತಿದೆ. ಹೆಣ್ಣು ಮಕ್ಕಳ ರಕ್ಷಣೆಯ ಹೆಸರಲ್ಲಿ, ಧರ್ಮರಕ್ಷಣೆಯ ನೆಪದಲ್ಲಿ ವಿವಿಧ ರೀತಿಯ ಗುಂಪುಗಳು ಈ ತಾಣಗಳಲ್ಲಿ ಹುಟ್ಟು ಪಡೆಯುತ್ತಿವೆ. ಕೋಮುವಾದಿ ಪೇಜ್‍ಗಳು ಕಾಣಿಸಿಕೊಳ್ಳುತ್ತಿವೆ. ನಿಜವಾಗಿ, ಇಂಥ ಸೌಲಭ್ಯಗಳನ್ನು ಬಳಸಿಕೊಂಡು ಸಮಾಜವನ್ನು ಉದ್ವಿಘ್ನಗೊಳಿಸುವುದು ಸುಲಭ. ಸಾಮಾನ್ಯವಾಗಿ, ಸಮಾಜ ಎರಡು ವಿಷಯಗಳಲ್ಲಿ ತುಂಬಾ ಸೆನ್ಸಿಟಿವ್ ಆಗಿರುತ್ತದೆ. ಅವುಗಳ ಮೇಲೆ ದಾಳಿಯೋ ಘಾಸಿಯೋ ಆದಾಗ ಅದು ಪ್ರಚೋದನೆಗೊಳ್ಳುತ್ತದೆ. ಅವುಗಳಲ್ಲಿ ಒಂದು, ಧಾರ್ಮಿಕ ಕ್ಷೇತ್ರಗಳಾದರೆ ಇನ್ನೊಂದು ಹೆಣ್ಣು ಮಕ್ಕಳು. ಸದ್ಯ ದೇಶದಾದ್ಯಂತ ದುಷ್ಕರ್ಮಿಗಳು ಈ ಎರಡು ಅಸ್ತ್ರಗಳನ್ನು ಬಳಸುತ್ತಿದ್ದಾರೆ. ಲವ್ ಜಿಹಾದ್ ಎಂಬ ಹೆಸರಲ್ಲಿ ಈಗಾಗಲೇ ಸಮಾಜದಲ್ಲಿ ಒಂದು ವ್ಯವಸ್ಥಿತ ಅಪಪ್ರಚಾರಕ್ಕೆ ಚಾಲನೆ ಕೊಡಲಾಗಿದೆ. ಕರಾವಳಿ ಪ್ರದೇಶದಲ್ಲಿ ಸದ್ಯ ಕಾಣಿಸಿಕೊಂಡಿರುವ ಕೋಮುಗಲಭೆಯ ವಾತಾವರಣಕ್ಕೂ ಎರಡ್ಮೂರು ತಿಂಗಳುಗಳಲ್ಲಿ ಇಲ್ಲಿ ಕಾಣಿಸಿಕೊಂಡಿರುವ ವಿಭಿನ್ನ ಧರ್ಮಗಳ ಯುವಕ-ಯುವತಿಯರ ಪ್ರೇಮ ಪ್ರಕರಣಕ್ಕೂ ಸಂಬಂಧ ಇದೆ. ಸಮಾಜ ಇಂಥ ಪ್ರಕರಣಗಳ ಸಂದರ್ಭದಲ್ಲಿ ಭಾವುಕವಾಗುತ್ತದೆ. ತನ್ನ ಮನೆಯ ಮಗಳು ಇನ್ನೊಂದು ಧರ್ಮದ ಯುವಕನನ್ನು ಪ್ರೀತಿಸಿ ವಿವಾಹವಾಗುವುದನ್ನು ಸೀದಾ ಸಾದಾ ಒಪ್ಪಿಕೊಳ್ಳುವ ಮನಸ್ಥಿತಿಯಂತೂ ಇವತ್ತಿನ ಸಮಾಜದಲ್ಲಿಲ್ಲ. ಈ ವಾತಾವರಣವು ಧುಷ್ಕರ್ಮಿಗಳ ಮಧ್ಯಪ್ರವೇಶಕ್ಕೆ ಅವಕಾಶ ಮಾಡಿಕೊಡುತ್ತದೆ. ವಿವಿಧ ಬಗೆಯ ವದಂತಿಗಳನ್ನು ಹಬ್ಬಿಸುವುದಕ್ಕೆ ಇದು ದಾರಿ ತೆರೆದುಕೊಡುತ್ತದೆ. ಇಂಥ ಪ್ರಕರಣಗಳ ಹಿಂದೆ ಷಡ್ಯಂತ್ರ ಇದೆಯೆಂದೋ ಧರ್ಮದ ನಾಶಕ್ಕೆ ಹೆಣೆದ ತಂತ್ರವೆಂದೋ ಅಥವಾ ಇನ್ನೇನೋ ಆಗಿ ಆ ಪ್ರಕರಣವನ್ನು ಭಾವನಾತ್ಮಕ ಧ್ರುವೀಕರಣಕ್ಕೆ ಬಳಸಿಕೊಳ್ಳಲಾಗುತ್ತದೆ. ಉತ್ತರ ಪ್ರದೇಶದ ವಿೂರತ್‍ನಿಂದ ಹಿಡಿದು ದಕ್ಷಿಣ ಕನ್ನಡದ ವರೆಗೆ ಸಮಾಜವನ್ನು ಉದ್ವಿಘ್ನಗೊಳಿಸುವಲ್ಲಿ ಇಂಥ ಪ್ರಕರಣಗಳೇ ಮುಖ್ಯ ಪಾತ್ರ ವಹಿಸುತ್ತಿವೆ. ಅಷ್ಟಕ್ಕೂ, ಹೆಣ್ಣು-ಗಂಡಿನ ನಡುವೆ ಪ್ರೇಮಾಂಕುರವಾಗುವುದಕ್ಕೂ ಷಡ್ಯಂತ್ರಕ್ಕೂ ಏನು ಸಂಬಂಧವಿದೆ? ಶಾಲೆಯಿಂದ ಹಿಡಿದು ಮಾರುಕಟ್ಟೆ, ಕಚೇರಿ ಸಹಿತ ಎಲ್ಲೆಡೆಯೂ ಹೆಣ್ಣು-ಗಂಡು ಮುಕ್ತವಾಗಿ ಬೆರೆಯುವ ವಾತಾವರಣ ಈ ದೇಶದಲ್ಲಿರುವಾಗ ಪ್ರೇಮಾಂಕುರಕ್ಕೆ ಷಡ್ಯಂತ್ರವಾದರೂ ಯಾಕೆ ಬೇಕು? ಪ್ರೇಮ ಎಂಬುದು ಷಡ್ಯಂತ್ರದ ಮತ್ತು ಬಂದೂಕಿನ ಮೊನೆಯಲ್ಲಿ ಚಿಗುರುವಂಥ ಸಂಗತಿಯೇ? ಎರಡು ಹೃದಯಗಳ ವಿಶ್ವಾಸದ ಆಧಾರದಲ್ಲಿ ಚಿಗುರುವ ಸಂಬಂಧವನ್ನು ಧರ್ಮದ ಷಡ್ಯಂತ್ರವಾಗಿ ಯಾಕೆ ನೋಡಬೇಕು?
ನೆಮ್ಮದಿ ಎಂಬುದು ಸರ್ವರ ಬಯಕೆ. ನಾಸ್ತಿಕನೂ ಆಸ್ತಿಕನೂ ನೆಮ್ಮದಿಯನ್ನು ಬಯಸುತ್ತಾನೆ. ಧರ್ಮಗಳಂತೂ ಸೌಖ್ಯ ಸಮಾಜದ ನಿರ್ಮಾಣದ ಉದ್ದೇಶದಿಂದಲೇ ಅಸ್ತಿತ್ವದಲ್ಲಿವೆ. ಈ ಹಿನ್ನೆಲೆಯಲ್ಲಿ ಸಮಾಜದ ಪ್ರತಿಯೋರ್ವ ವ್ಯಕ್ತಿ ಆತ್ಮಾವಲೋಕನ ನಡೆಸಿಕೊಳ್ಳಬೇಕು. ಧರ್ಮ ರಕ್ಷಣೆಯ ಹೆಸರಲ್ಲಿ ಎತ್ತಿಕೊಳ್ಳುವ ಪ್ರತಿ ಕಲ್ಲು, ಚೂರಿ, ಬೆಂಕಿಗಳು ಎತ್ತಿಕೊಂಡವರ ಧರ್ಮವನ್ನು ಅವಮಾನಿಸುತ್ತದೆಯೇ ಹೊರತು ಇನ್ನೊಂದು ಧರ್ಮವನ್ನೋ ಅದರ ಅನುಯಾಯಿಗಳನ್ನೋ ಅಲ್ಲ. ಚೂರಿ ಇರಿತದಿಂದ ಉದುರುವ ರಕ್ತ, ಬೆಂಕಿಯಿಂದ ಉರಿಯುವ ಕಟ್ಟಡ ಮತ್ತು ಕಲ್ಲಿನಿಂದ ಹಾನಿಗೀಡಾಗುವ ಗಾಜುಗಳೆಲ್ಲ ಪವಿತ್ರವಾದವುಗಳೇ. ಅವನ್ನು ತನ್ನ ಕಲ್ಲು, ಚೂರಿ, ಬೆಂಕಿ ನಾಶಪಡಿಸಿತೆಂದು ನಂಬಿದವರೇ ನಿಜವಾದ ಧರ್ಮದ್ರೋಹಿಗಳು.
No comments:
Post a Comment