
ಇವೆಲ್ಲವೂ ಮುಸ್ಲಿಮರನ್ನು ಸಿನಿಕರನ್ನಾಗಿ ಮಾಡುವುದಕ್ಕೆ ಪ್ರಚೋದಕ ಆಗಬಾರದು. ಈ ದೇಶದ ನ್ಯಾಯ ವ್ಯವಸ್ಥೆ ಇವತ್ತಿಗೂ ನಂಬಿಗಸ್ಥವಾಗಿದೆ. ಅತ್ಯಂತ ಪಾರದರ್ಶಕ ಮತ್ತು ನ್ಯಾಯಪರವಾಗಿದೆ. ಅಲ್ಲೊಂದು ಇಲ್ಲೊಂದು ರಾಜಕೀಯ ಒತ್ತಡಗಳ ಮಾಹಿತಿಗಳು ಹೊರಬೀಳುತ್ತಿದ್ದರೂ ಅವು ಈ ನ್ಯಾಯವ್ಯವಸ್ಥೆಯ ಮೇಲೆ ಅಪನಂಬಿಕೆ ಹೊಂದುವುದಕ್ಕೆ ಖಂಡಿತ ಮಾನದಂಡ ಆಗಲಾರದು, ಆಗಬಾರದು ಕೂಡ. ಆದ್ದರಿಂದಲೇ, ಯಾಕೂಬ್ ಮೆಮನ್‍ನ ಗಲ್ಲು ಶಿಕ್ಷೆಯನ್ನು ಎತ್ತಿಕೊಂಡು ಇಡೀ ನ್ಯಾಯವ್ಯವಸ್ಥೆಯ ಮೇಲೆಯೇ ನಂಬಿಕೆ ಕಳಕೊಂಡವರಂತೆ ವರ್ತಿಸುವುದನ್ನು ಯಾವ ಕಾರಣಕ್ಕೂ ಸಮರ್ಥಿಸಲು ಸಾಧ್ಯವಿಲ್ಲ. ಇವತ್ತು ವಾಟ್ಸಪ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಕೆಲವೊಂದು ಅಭಿಪ್ರಾಯಗಳನ್ನು ಓದುವಾಗ ಆಘಾತವಾಗುತ್ತದೆ. ಯಾಕೂಬ್ ಪ್ರಕರಣವನ್ನು ನಾವು ಭಾವನಾತ್ಮಕ ಚೌಕಟ್ಟಿನಿಂದ ಹೊರತಂದು ವಿಶ್ಲೇಷಿಸಬೇಕಾಗಿದೆ. ಆತನನ್ನು ಸಾರಾಸಗಟು ಮುಗ್ಧನೆಂದೋ, ‘ಶಹೀದ್' (ಹುತಾತ್ಮ) ಎಂದೋ, ಜುಲೈ 8ನ್ನು ಕಪ್ಪು ದಿನವೆಂದೋ ಹೇಳುವುದು ಅಸಾಧುವಾದುದು. ಅದರಲ್ಲಿ ಅತಿರೇಕವಿದೆ, ಉತ್ಪ್ರೇಕ್ಷೆ ಇದೆ. ಈ ಬಗೆಯ ಬೀಸು ಹೇಳಿಕೆಗಳನ್ನು ಅತ್ಯಂತ ಇಷ್ಟಪಡುವುದು ಬಲಪಂಥೀಯರು. ಇಂಥ ಅಭಿಪ್ರಾಯಗಳೇ ಅವರ ಬಂಡವಾಳ. ಮುಖ್ಯವಾಹಿನಿಯಿಂದ ಮುಸ್ಲಿಮರನ್ನು ಪ್ರತ್ಯೇಕಗೊಳಿಸಿ
ಒಂಟಿಯಾಗಿಸುವುದಕ್ಕೆ ಇಂಥ ಅಭಿಪ್ರಾಯಗಳನ್ನು ಅವರು ಧಾರಾಳ ಬಳಸಿಕೊಳ್ಳುತ್ತಾರೆ. ಅಷ್ಟಕ್ಕೂ, ಯಾಕೂಬ್ ಮೆಮನ್ ಮುಸ್ಲಿಮರ ನಾಯಕನೋ ಮಾರ್ಗದರ್ಶಕನೋ ಅಲ್ಲ. ಆತನಿಗೆ ತನ್ನದೇ ಆದ ಹಿನ್ನೆಲೆಯಿದೆ. ಆತನಿಗೆ ನೀಡಲಾದ ಗಲ್ಲನ್ನು ವಿಶ್ಲೇಷಿಸುವ ಸಂದರ್ಭದಲ್ಲಿ ಪ್ರತಿಯೊಬ್ಬರಲ್ಲೂ ಈ ಎಚ್ಚರಿಕೆ ಇರಬೇಕಾಗಿದೆ. ಆತನಿಗೆ ಅನ್ಯಾಯವಾಗಿದೆ ಎಂದು ವಾದಿಸುವ ಭರದಲ್ಲಿ ಯಾವತ್ತೂ ದಾವೂದ್ ಇಬ್ರಾಹೀಮ್, ಟೈಗರ್ ಮೆಮನ್ ಅಥವಾ ಅವರಂಥ ತಲೆ ತಪ್ಪಿಸಿಕೊಂಡವರು ನಮ್ಮ ಮಾತು-ಕೃತಿಗಳಲ್ಲಿ ಅನುಕಂಪ ಗಿಟ್ಟಿಸಿಕೊಳ್ಳದಂತೆ ಎಚ್ಚರಿಕೆ ವಹಿಸಿಕೊಳ್ಳಬೇಕಿದೆ. ಹಾಗಂತ, ಯಾಕೂಬ್‍ನ ‘ಗಲ್ಲ'ನ್ನು ಮುಸ್ಲಿಮರು ಚರ್ಚಿಸಬೇಕಾದರೆ ಆತ ಮುಸ್ಲಿಮರ ನಾಯಕನೋ ಮಾರ್ಗದರ್ಶಕನೋ ಆಗಿರಬೇಕು ಎಂದು ಇದರರ್ಥವಲ್ಲ. ಓರ್ವ ವ್ಯಕ್ತಿಯ ಬಗ್ಗೆ ಚರ್ಚಿಸುವುದಕ್ಕೆ ಆತ/ಕೆ ಹಿಂದುವೋ ಮುಸ್ಲಿಮೋ ಕ್ರೈಸ್ತನೋ ಆಗಿರಬೇಕಿಲ್ಲ. ನಾಯಕನೋ ಕಾರ್ಮಿಕನೋ ಎಂಬ ವ್ಯತ್ಯಾಸವೂ ಬೇಕಿಲ್ಲ. ಮಾನವ ಹಕ್ಕು ಸರ್ವರಿಗೂ ಸಮಾನವಾದುದು. ಅದು ನಿರಾಕರಣೆಯಾಗಿದೆಯೆಂದು ಅನಿಸಿದಲ್ಲಿ ಆ ಬಗ್ಗೆ ಧ್ವನಿಯೆತ್ತುವುದಕ್ಕೆ ಯಾರ ಅಪ್ಪಣೆಯ ಅಗತ್ಯ ಖಂಡಿತಕ್ಕೂ ಇಲ್ಲ. ಈ ಖಚಿತತೆಯೊಂದಿಗೇ ನಾವು ಯಾಕೂಬ್ ಸಹಿತ ಪ್ರತಿ ಪ್ರಕರಣವನ್ನೂ ಚರ್ಚೆಗೆತ್ತಿಕೊಳ್ಳಬೇಕಿದೆ. ಮಾತ್ರವಲ್ಲ, ಅಷ್ಟೇ ವಿವೇಚನೆಯಿಂದಲೂ ವರ್ತಿಸಬೇಕಿದೆ. ಯಾಕೂಬ್ ಪ್ರಕರಣವನ್ನು ನಮ್ಮ ವ್ಯವಸ್ಥೆ ಸರಿಯಾಗಿ ನಿರ್ವಹಿಸಿಲ್ಲ ಎಂಬ ದೂರುಗಳೇನೇ ಇದ್ದರೂ ಈ ದೇಶದಲ್ಲಿ ಅತ್ಯಂತ ಜನಪರವಾದ ಸಂವಿಧಾನ ಇದೆ, ನ್ಯಾಯಾಲಯ ಇದೆ, ರಾಜಕೀಯ ವ್ಯವಸ್ಥೆಯಿದೆ ಎಂಬುದು ನಮಗೆ ಗೊತ್ತಿರಬೇಕು. ಇವುಗಳಲ್ಲಿ ದೌರ್ಬಲ್ಯಗಳಿರಬಹುದು. ಆದರೆ ಈ ದೌರ್ಬಲ್ಯಗಳನ್ನೂ ವಿೂರಿ ಅತ್ಯಂತ ಮಾನವೀಯವಾಗಿ ಮತ್ತು ನ್ಯಾಯಪರವಾಗಿ ನಡೆದುಕೊಳ್ಳುವ ಸಾಮರ್ಥ್ಯಈ ವ್ಯವಸ್ಥೆಗಿರುವುದನ್ನು ನಾವು ಅಲ್ಲಗಳೆಯಲಾಗದು. ಯಾಕೂಬ್ ಮೆಮನ್‍ನ ಗಲ್ಲು ಶಿಕ್ಷೆಯನ್ನು ಪ್ರಸಿದ್ಧ ನ್ಯಾಯವಾದಿಗಳು ಬಿಡಿ, ಸಾಮಾನ್ಯ ನಾಗರಿಕನೊಬ್ಬ ವೇದಿಕೆಯಲ್ಲಿ ನಿಂತು ಪ್ರಶ್ನಿಸುವುದಕ್ಕೂ ಇಲ್ಲಿ ಸ್ವಾತಂತ್ರ್ಯವಿದೆ. ರಾಜಕಾರಣಿಗಳನ್ನು ಬಹಿರಂಗವಾಗಿ ತಗಾದೆಗೆ ಎತ್ತಿಕೊಳ್ಳುವುದಕ್ಕೂ ಇಲ್ಲಿ ಅವಕಾಶವಿದೆ. ಮೈಲುಗಲ್ಲುಗಳೆನ್ನಬಹುದಾದ ಅನೇಕಾರು ತೀರ್ಪುಗಳನ್ನು ಇಲ್ಲಿನ ನ್ಯಾಯಾಲಯಗಳು ನೀಡಿವೆ. ಆದ್ದರಿಂದ ಯಾಕೂಬ್ ಪ್ರಕರಣದ ಮೇಲಿನ ಅಭಿಪ್ರಾಯಗಳು ಇವೆಲ್ಲವನ್ನೂ ಕಡೆಗಣಿಸುವ ರೂಪದಲ್ಲಿ ಇರಬಾರದು. ಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಸ್ವಾತಂತ್ರ್ಯವನ್ನು ಸದಾ ಬಳಸಿಕೊಂಡೇ ಈ ಅಭಿಪ್ರಾಯಗಳಿಂದ ಬಲಪಂಥೀಯರು ಲಾಭ ಎತ್ತಿಕೊಳ್ಳದಂತೆ ಎಚ್ಚರಿಕೆ ವಹಿಸಿಕೊಳ್ಳಬೇಕಾದ ಅನಿವಾರ್ಯತೆಯೂ ಇದೆ. ಈ ದೇಶ ಎಲ್ಲರದು. ಎಲ್ಲರಿಗೂ ಈ ದೇಶದಲ್ಲಿ ಸಮಾನ ಹಕ್ಕುಗಳಿವೆ. ಈ ದೇಶವನ್ನು ಪ್ರೀತಿಸಲು, ಇದರ ಏಳಿಗೆಗಾಗಿ ದುಡಿಯಲು ಮತ್ತು ದೇಶಕ್ಕೆ ನಿಷ್ಠರಾಗಿರಲು ಯಾರೂ ಯಾರಿಗೂ ಹೇಳಿಕೊಡಬೇಕಿಲ್ಲ. ದೇಶಪ್ರೇಮ ಯಾರ ಖಾಸಗಿ ಸೊತ್ತೂ ಅಲ್ಲ. ಯಾಕೂಬ್ ಪ್ರಕರಣದ ಮೇಲಿನ ಚರ್ಚೆಯು ಈ ಮೂಲಭೂತ ಬೇಡಿಕೆಗಳಿಗೆ ಧಕ್ಕೆ ತರುವಂತೆ ಅಥವಾ ಅದರಲ್ಲಿ ಚಂಚಲತೆ ಉಂಟು ಮಾಡುವಂತೆ ಯಾವತ್ತೂ ಇರಲೇಬಾರದು.
.
No comments:
Post a Comment