Tuesday 1 September 2015

ವೈಚಾರಿಕ ಭಿನ್ನಾಭಿಪ್ರಾಯಗಳನ್ನು ಉಳಿಸಿಕೊಳ್ಳುತ್ತಲೇ ಕಲಬುರ್ಗಿಯವರ ಹತ್ಯೆಯನ್ನು ಖಂಡಿಸೋಣ

    ವೈಚಾರಿಕ ಭಿನ್ನಾಭಿಪ್ರಾಯಗಳ ನೆಲೆ-ಬೆಲೆ ಮತ್ತು ಭವಿಷ್ಯವನ್ನು ಡಾ| ಕಲಬುರ್ಗಿಯವರ ಸಾವು ಮತ್ತೊಮ್ಮೆ ಪ್ರಶ್ನಾರ್ಹಗೊಳಿಸಿದೆ. ಈ ಪ್ರಶ್ನೆ ಮೊದಲಾಗಿ ಕಾಣಿಸಿಕೊಂಡದ್ದು ಅನಂತಮೂರ್ತಿಯವರ ಸಾವಿನೊಂದಿಗೆ. ಅವರ ಸಾವನ್ನು ಇಲ್ಲಿಯ ಒಂದು ವರ್ಗ ಪಟಾಕಿ ಸಿಡಿಸಿ ಸಂಭ್ರಮಿಸಿತ್ತು. ಅವರ ಸಾವಿಗೆ ಸಾಮಾಜಿಕ ಜಾಲತಾಣಗಳಲ್ಲಿ ಸಂತೋಷ ವ್ಯಕ್ತಪಡಿಸಲಾಗಿತ್ತು. ಇದೀಗ ಕಲಬುರ್ಗಿಯವರನ್ನೂ ಅದೇ ರೀತಿಯಲ್ಲಿ ಸ್ವಾಗತಿಸಲಾಗಿದೆ. ವಿಶೇಷ ಏನೆಂದರೆ, ಅನಂತಮೂರ್ತಿಯವರ ಸಾವು ಸಹಜವಾಗಿದ್ದರೆ ಕಲಬುರ್ಗಿಯವರದ್ದು ಅಸಹಜ ಮತ್ತು ಅಮಾನುಷ. ಅವರಿಗೆ ಗುಂಡಿಕ್ಕಿದವರು ಯಾರು ಮತ್ತು ಅದಕ್ಕೆ ಕಾರಣಗಳೇನು ಎಂಬುದು ಇನ್ನೂ ಗೊತ್ತಾಗುವ ಮೊದಲೇ ಈ ಸಂಭ್ರಮಾಚರಣೆ ನಡೆದಿದೆ. ಆದ್ದರಿಂದಲೇ ಈ ಬೆಳವಣಿಗೆಯನ್ನು ನಾವು ಆತಂಕದಿಂದಲೇ ನೋಡಬೇಕಾಗುತ್ತದೆ. ಬಾಂಗ್ಲಾದೇಶದಲ್ಲಿ ಇತ್ತೀಚೆಗೆ ಪ್ರಗತಿಪರ ಬ್ಲಾಗರುಗಳ (ಬರಹಗಾರರು) ಹತ್ಯೆ ನಡೆದಾಗ ‘ಶಂಕಿತ ಮುಸ್ಲಿಮ್ ಮೂಲಭೂತವಾದಿಗಳಿಂದ' ಎಂಬ ವಾಕ್ಯದ ಜೊತೆಗೇ ಆ ಸುದ್ದಿಯನ್ನು ಹೆಚ್ಚಿನ ಮಾಧ್ಯಮಗಳು ಪ್ರಕಟಿಸಿದ್ದುವು. ಕಲಬುರ್ಗಿಯವರ ಹತ್ಯೆಗೆ ಸಂಬಂಧಿಸಿ ಅಂತಹ ಯಾವ ‘ಶಂಕಿತ ಮೂಲಭೂತವಾದಿ’ ಪದಗಳೂ ಕನ್ನಡ ಮಾಧ್ಯಮಗಳಲ್ಲಿ ಕಾಣಿಸಿಕೊಂಡಿಲ್ಲ. ಅವರ ಹತ್ಯೆಯನ್ನು ಬೆಂಬಲಿಸಿ ಬಹಿರಂಗವಾಗಿಯೇ ಸಂತಸ ಹಂಚಿಕೊಂಡ ಘಟನೆಗಳು ಜರುಗಿದ ಹೊರತಾಗಿಯೂ ಹೀಗಾಗಿದೆ ಎಂಬುದು ಸ್ಪಷ್ಟ. ಹಾಗಂತ, ಇದು ಆರೋಪ ಅಲ್ಲ. ಮಾಧ್ಯಮಗಳ ಈ ಸಹನೆಯನ್ನು ನಾವು ಸದುದ್ದೇಶದಿಂದಲೇ ಸ್ವೀಕರಿಸೋಣ. ಹತ್ಯೆಕೋರರನ್ನೂ ಮತ್ತು ಹತ್ಯೆಗೆ ಸಂತೋಷ ವ್ಯಕ್ತಪಡಿಸಿದವರನ್ನೂ ಪ್ರತ್ಯೇಕವಾಗಿಯೇ ನೋಡುವ ಮಾಧ್ಯಮ ಎಚ್ಚರವನ್ನು ಗೌರವಿಸೋಣ ಮತ್ತು ಈ ಎಚ್ಚರ ಸದಾ ಇರುತ್ತದೆ ಎಂದು ನಿರೀಕ್ಷಿಸೋಣ.
   ಅಷ್ಟಕ್ಕೂ, ಕಲಬುರ್ಗಿಯವರ ಸಾವು ಮತ್ತು ಬದುಕನ್ನು ನಾವು ಈ ವಿಘ್ನ ಸಂತೋಷಿಗಳ ಗುಂಪಿನಿಂದ ಹೊರಗಿಟ್ಟು ನೋಡಬೇಕಾಗಿದೆ. ಅವರು ಬದುಕಿರುವಷ್ಟೂ ದಿನ ಪ್ರಶ್ನೆಗಳೊಂದಿಗೇ ಬದುಕಿದರು. ಆ ಪ್ರಶ್ನೆಗಳು ಎಷ್ಟು ಪ್ರಖರವಾಗಿದ್ದುವು ಎಂಬುದನ್ನು ನೂರಕ್ಕಿಂತಲೂ ಅಧಿಕಾರವಾಗಿರುವ ಅವರ ಸಾಹಿತ್ಯ ಕೃತಿಗಳೇ ಹೇಳುತ್ತವೆ. ಈ ಸಾಹಿತ್ಯ ಭಂಡಾರದಲ್ಲಿ ಇರುವುದೆಲ್ಲ ಸಂಶೋಧನಾತ್ಮಕ ಬರಹಗಳು ಮತ್ತು ಸಂಪಾದನೆಗಳೇ. ಬಹುಶಃ, ಅವರು ಕಾದಂಬರಿಯನ್ನು ಬರೆದೇ ಇಲ್ಲ. ಒಂದು ಕವನ, ಒಂದು ನಾಟಕ, ಒಂದು ಸಣ್ಣಾಟವನ್ನು ಬಿಟ್ಟರೆ ಉಳಿದಂತೆ ಕಲಬುರ್ಗಿಯವರ ಜೋಳಿಗೆಯ ತುಂಬ ಸಂಶೋಧನಾತ್ಮಕ ಬರಹಗಳೇ ತುಂಬಿಕೊಂಡಿದ್ದುವು. ಅವರೋರ್ವ ಪ್ರಶ್ನೆಗಳ ಸರದಾರ. ಅವರು ಮೂರ್ತಿಪೂಜೆಯನ್ನು ಪ್ರಶ್ನಿಸಿದರು. ನಾಗರ ಕಲ್ಲಿನ ಸುತ್ತ ಹರಡಿರುವ ಭಯವನ್ನು ದುರ್ಬಲಗೊಳಿಸಿದರು. ಚನ್ನ ಬಸವಣ್ಣನ ಹುಟ್ಟಿನ ಬಗ್ಗೆ ಬರೆದು ವೀರಶೈವರಿಂದ ವಿರೋಧ ಕಟ್ಟಿಕೊಂಡರು. ಹಿಂದೂ ಧರ್ಮದ ಅಸ್ತಿತ್ವವನ್ನೇ ಪ್ರಶ್ನೆಗೀಡು ಮಾಡಿದರು. ಭಗವದ್ಗೀತೆಯನ್ನು ಧರ್ಮಗ್ರಂಥವೇ ಅಲ್ಲ ಎಂದರು. ಲಿಂಗಾಯತ ಧರ್ಮವನ್ನು ಸ್ವತಂತ್ರ ಧರ್ಮವೆಂದು ಹೇಳಿದ ಅವರು, ವೀರಶೈವ ಧರ್ಮವನ್ನು ಧರ್ಮವೆಂದು ಒಪ್ಪಿಕೊಳ್ಳಲೇ ಇಲ್ಲ. ಅದೊಂದು ಆಚರಣೆ ಎಂದರು. ಸ್ಪಷ್ಟ ಮತ್ತು ನಂಬಲರ್ಹ ಇತಿಹಾಸವಿಲ್ಲದ ರೇಣುಕಾಚಾರ್ಯರು ಅದರ ಸ್ಥಾಪಕರೆನ್ನುವುದಕ್ಕೆ ಪುರಾವೆಯಿಲ್ಲ ಎಂದರು. ಅವರು ಪ್ರಶ್ನೆಯೊಂದಿಗೆ ಬೆಳೆದರು. 80ರ ದಶಕದಲ್ಲೇ ಅವರ ಮೇಲೆ ದಾಳಿಗಳಾಗಿದ್ದುವು. ಬೆದರಿಕೆಗಳಿದ್ದುವು. ಪೊಲೀಸರ ರಕ್ಷಣೆಯಲ್ಲೇ ಅವರು ಪಾಠ ಮಾಡಿದ್ದಿದೆ. ಕಳೆದ ವರ್ಷ ಅವರು ತೀವ್ರ ವಿವಾದಕ್ಕೆ ಒಳಗಾಗಿದ್ದರು. ನಾಗರಕಲ್ಲಿಗೆ ಮೂತ್ರ ವಿಸರ್ಜಿಸುವ ಬಗ್ಗೆ ಅವರು ವ್ಯಕ್ತಪಡಿಸಿದ ಅಭಿಪ್ರಾಯವು ಒಂದು ವರ್ಗದ ತೀವ್ರ ಸಿಟ್ಟಿಗೆ ಕಾರಣವಾಗಿತ್ತು. ಅವರಿಗೆ ಸರಕಾರ ರಕ್ಷಣೆಯನ್ನೂ ಒದಗಿಸಿತ್ತು. ಇತ್ತೀಚೆಗಷ್ಟೇ ಅವರ ಕೋರಿಕೆಯ ಮೇರೆಗೆ ಸರಕಾರ ಭದ್ರತೆಯನ್ನು ಹಿಂದಕ್ಕೆ ಪಡೆದಿತ್ತು. ಅವರು ಸ್ವತಂತ್ರವಾಗಿಯೇ ಬದುಕಿದರು. ಸ್ವತಂತ್ರವಾಗಿಯೇ ಆಲೋಚಿಸಿದರು. ಸ್ವತಂತ್ರವಾಗಿಯೇ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಹೊರಟು ಹೋಗುವಾಗಲೂ ಭದ್ರತಾ ಪಡೆಗಳಿಂದ ಮುಕ್ತವಾಗಿ ಸ್ವಂತಿಕೆಯೊಂದಿಗೇ ಹೊರಟು ಹೋದರು.
  ನಿಜವಾಗಿ, ವೈಚಾರಿಕತೆ ಮತ್ತು ಸಾಂಪ್ರದಾಯಿಕತೆಯ ಮಧ್ಯೆ ಘರ್ಷಣೆ ಮೊದಲಿನಿಂದಲೂ ನಡೆಯುತ್ತಲೇ ಇದೆ. ವೈಚಾರಿಕತೆಯನ್ನು ಎದುರಿಸುವುದು ಹೇಗೆ ಎಂಬ ಬಗ್ಗೆ ಸಮಾಜದಲ್ಲಿ ಒಂದು ಬಗೆಯ ಗೊಂದಲ ಇದೆ. ಸಹನೆ, ಅಸಹನೆ, ಸ್ಪಷ್ಟ-ಅಸ್ಪಷ್ಟ ಅಭಿಪ್ರಾಯಗಳಿವೆ. ವೈಚಾರಿಕ ಭಿನ್ನಾಭಿಪ್ರಾಯಕ್ಕೆ ಹಿಂಸಾತ್ಮಕ ಪ್ರತಿಕ್ರಿಯೆಯೇ ಉತ್ತರವೆಂದು ವಾದಿಸುವ ಒಂದು ಗುಂಪೂ ಇವತ್ತಿನ ಸಮಾಜದಲ್ಲಿದೆ. ರುಶ್ದಿ, ತಸ್ಲೀಮಾ ಮುಂತಾದವರು ‘ಹೀರೋ'ಗಳಾದದ್ದು ಸಮಾಜದ ಈ ವೈಫಲ್ಯಗಳಿಂದಲೇ. ಕ್ರುದ್ಧಗೊಂಡ ಸಮಾಜದ ಅಪ್ರಬುದ್ಧ ಪ್ರತಿಕ್ರಿಯೆಗಳು ಅನೇಕ ಕೃತಿಗಳನ್ನು ವಿಶ್ವಮಾನ್ಯ ಮಾಡಿವೆ. ಅವುಗಳಿಗೆ ಪ್ರಸಿದ್ಧಿಯನ್ನೂ ತಂದುಕೊಟ್ಟಿವೆ. ಅಂದಹಾಗೆ, ವೈಚಾರಿಕತೆ, ಪ್ರಗತಿಪರ ಚಿಂತನೆ ಎಂಬುದೆಲ್ಲ ಯಾವ ಸಮಾಜದ ವೈರಿಯೂ ಅಲ್ಲ. ಸಮಾಜ ಎಂದ ಮೇಲೆ ಅಲ್ಲಿ ಒಂದಕ್ಕಿಂತ ಹೆಚ್ಚು ಅಭಿಪ್ರಾಯಗಳಿರಲೇಬೇಕು. ಹತ್ತು ಮಂದಿಯ ಗುಂಪನ್ನೇ ಎತ್ತಿಕೊಳ್ಳಿ. ಹತ್ತು ಮಂದಿಯೂ ಒಂದೇ ರೀತಿಯಲ್ಲಿರುವುದಕ್ಕೆ ಸಾಧ್ಯವೇ ಇಲ್ಲ. ರೂಪ, ಎತ್ತರ, ಉದ್ದ, ಅಗಲ, ಬಣ್ಣ, ನಗು, ಮಾತು, ಪ್ರತಿಭೆ, ಹವ್ಯಾಸ, ಅಭಿರುಚಿ.. ಎಲ್ಲದರಲ್ಲೂ ಹತ್ತು ಮಂದಿಯ ಮಧ್ಯೆಯೂ ವ್ಯತ್ಯಾಸ ಇರುತ್ತದೆ. ಪ್ರತಿಯೊಬ್ಬರಿಗೂ ಅವರವರದ್ದೇ ಆದ ಐಡೆಂಟಿಟಿಯಿರುತ್ತದೆ. ಅಂದಹಾಗೆ, ಒಂದೇ ಮನೆಯ ಒಂದೇ ರಕ್ತವನ್ನು ಹಂಚಿಕೊಂಡವರಲ್ಲೂ ಒಂದೇ ಅಭಿಪ್ರಾಯವನ್ನು ಕಾಣಲು ಸಾಧ್ಯವಿಲ್ಲದಿರುವಾಗ, ಸಮಾಜದಲ್ಲಿ ಅದು ಕಾಣಿಸಿಕೊಳ್ಳುವುದು ಹೇಗೆ? ಅನಂತಮೂರ್ತಿಯವರಿಗೆ ಧರ್ಮದ ಕುರಿತಂತೆ ಅವರದ್ದೇ ಆದ ಅಭಿಪ್ರಾಯಗಳಿವೆ. ನರೇಂದ್ರ ದಾಬೋಲ್ಕರ್‍ರಿಗೆ ಮೂಢನಂಬಿಕೆಗಳ ಬಗ್ಗೆ ತನ್ನದೇ ಆದ ನಿಲುವುಗಳಿವೆ. ಕಲಬುರ್ಗಿಯವರಾಗಲಿ, ತಸ್ಲೀಮಾ ಆಗಲಿ ಎಲ್ಲರಿಗೂ ಧರ್ಮ, ಸಂಸ್ಕ್ರಿತಿ, ಪುರಾಣ, ಇತಿಹಾಸ.. ಎಲ್ಲವುಗಳ ಬಗ್ಗೆಯೂ ಅವರವರದೇ ಆದ ಅಭಿಪ್ರಾಯಗಳಿರುವುದಕ್ಕೆ ಖಂಡಿತ ಸಾಧ್ಯವಿದೆ. ಆ ಅಭಿಪ್ರಾಯವನ್ನು ಪ್ರಶ್ನಿಸುವುದಕ್ಕೆ ಸಂಪ್ರದಾಯವಾದಿ ಸಮಾಜ ಯಾವುದನ್ನು ಆಯುಧವಾಗಿ ಎತ್ತಿಕೊಳ್ಳಬೇಕು ಎಂಬುದೇ ಇಲ್ಲಿನ ಮುಖ್ಯ ಪ್ರಶ್ನೆ. ಬಂದೂಕಂತೂ ಮನುಷ್ಯ ವಿರೋಧಿ. ತಲವಾರು, ಬಾಂಬು, ಕತ್ತಿ, ದೊಣ್ಣೆ ಮುಂತಾದ ಹಿಂಸಾ ಪ್ರತೀಕಗಳೆಲ್ಲ ವೈಚಾರಿಕ ಹೋರಾಟಕ್ಕೆ ಸೂಕ್ತ ಅಸ್ತ್ರಗಳಲ್ಲ. ಅವು ಜೀವಭಂಜಕ, ಕ್ರೌರ್ಯದ ಪ್ರತೀಕ ಮಾತ್ರವಲ್ಲ, ವೈಚಾರಿಕತೆಯನ್ನು ವೈಚಾರಿಕತೆಯಿಂದಲೇ ಎದುರಿಸಲಾಗದವರ ಅಸ್ತ್ರ. ಪ್ರಶ್ನೆ ಪತ್ರಿಕೆಗೆ ಉತ್ತರ ಪತ್ರಿಕೆಗಳ ಮೂಲಕ ಹೇಗೆ ಉತ್ತರಿಸಲಾಗುವುದೋ ಹಾಗೆಯೇ ವೈಚಾರಿಕತೆಯನ್ನು ವಿಚಾರಗಳ ಮೂಲಕವೇ ಎದುರಿಸಬೇಕು. ಹಾಡಿಗೆ ಹಾಡುಗಳ ಮೂಲಕ, ಲೇಖನಕ್ಕೆ ಲೇಖನಗಳ ಮೂಲಕ, ಭಾಷಣಕ್ಕೆ ಭಾಷಣಗಳ ಮೂಲಕ, ಸಾಕ್ಷ್ಯ ಚಿತ್ರಕ್ಕೆ ಸಾಕ್ಷ್ಯ ಚಿತ್ರಗಳ ಮೂಲಕ, ಸಿನಿಮಾಕ್ಕೆ ಸಿನಿಮಾಗಳ ಮೂಲಕ.. ಹೀಗೆ ಪ್ರತಿಯೊಂದನ್ನೂ ಅತ್ಯಂತ ಸಭ್ಯ ಮತ್ತು ಕಾನೂನುಬದ್ಧ ದಾರಿಗಳ ಮೂಲಕ ಎದುರಿಸಬೇಕೇ ಹೊರತು ಅಸ್ತ್ರಗಳಿಂದ ಅಲ್ಲ. ಬಂದೂಕಿಗೆ ಆತ್ಮವಿಲ್ಲ. ಜೀವವೂ ಇಲ್ಲ. ಒಂದು ವೇಳೆ ಇಂಥ ಜೀವರಹಿತ ಅಸ್ತ್ರಗಳು ಜೀವಂತ ವ್ಯಕ್ತಿಯನ್ನು ಬಲಿ ಪಡೆಯಬಹುದಾದರೂ ಆತನ ಅಭಿಪ್ರಾಯವನ್ನು ಬಲಿ ಪಡೆಯುವುದಕ್ಕೆ ಸಾಧ್ಯವೇ ಇಲ್ಲ. ಕಲಬುರ್ಗಿಯವರ ಮೇಲೆ ಗುಂಡು ಹಾರಿಸಿದವರು ಈ ಸತ್ಯವನ್ನು ಅರಿತುಕೊಳ್ಳುವಲ್ಲಿ ವಿಫಲರಾಗಿದ್ದಾರೆಂದೇ ಹೇಳಬೇಕಾಗಿದೆ.
  ಏನೇ ಆಗಲಿ, ವೈಚಾರಿಕ ಭಿನ್ನಾಭಿಪ್ರಾಯಗಳಿಗೆ ಹಿಂಸೆ ಎಂದೂ ಉತ್ತರವಲ್ಲ, ಆಗಬಾರದು ಕೂಡ. ಆದ್ದರಿಂದಲೇ, ಕಲಬುರ್ಗಿಯವರೊಂದಿಗೆ ವೈಚಾರಿಕ ಭಿನ್ನಾಭಿಪ್ರಾಯಗಳನ್ನು ಇಟ್ಟುಕೊಳ್ಳುತ್ತಲೇ ಅವರ ಹತ್ಯೆಯನ್ನು ಪ್ರಬಲ ದನಿಯಲ್ಲಿ ಖಂಡಿಸುವುದಕ್ಕೆ ಸಮಾಜಕ್ಕೆ ಸಾಧ್ಯವಾಗಬೇಕಿದೆ.

No comments:

Post a Comment