Tuesday 8 September 2015

‘ದೊಡ್ಡವರ’ ಹೃದಯ ಹೀನತೆಯನ್ನು ಪ್ರತಿಭಟಿಸಿ ಹೊರಟು ಹೋದ ಮಗು

ಅಯ್ಲಾನ್ ಕುರ್ದಿ
     ನಿಲೋಫರ್ ಡೆಮಿಕ್ ಎಂಬ ಪತ್ರಕರ್ತ ಕ್ಲಿಕ್ಕಿಸಿದ ಪೋಟೋವೊಂದು ಜಗತ್ತಿನ ಕಣ್ಣನ್ನೇ ಮಂಜಾಗಿಸಿದೆ. ಕೆಂಪು ಟೀ ಶರ್ಟ್, ನೀಲಿ ಚಡ್ಡಿ, ಶೂಸ್ ಧರಿಸಿರುವ 3 ವರ್ಷದ ಪುಟ್ಟ ಮಗುವೊಂದು ಟರ್ಕಿಯ ಬೋರ್ಡಮ್ ಸಮುದ್ರ ದಂಡೆಯಲ್ಲಿ ಬೋರಲಾಗಿ ಬಿದ್ದಿರುವ ಪೋಟೋವನ್ನು ನೋಡಿ ಫ್ರಾನ್ಸಿನ ಅಧ್ಯಕ್ಷ ಫ್ರಾಂಕೊಯಿಸ್ ಹಾಲೆಂಡ್‍ರು ಟರ್ಕಿಯ ಅಧ್ಯಕ್ಷ ಉರ್ದುಗಾನ್‍ರಿಗೆ ದೂರವಾಣಿ ಕರೆ ಮಾಡಿದ್ದಾರೆ. ಆ ಪೋಟೋವು ನಿರಾಶ್ರಿತರ ಬಗ್ಗೆ ಜಗತ್ತಿನ ಹೊಣೆಗಾರಿಕೆಯನ್ನು ನೆನಪಿಸಿತು ಎಂದು ಹೇಳಿದ್ದಾರೆ. ಬ್ರಿಟನ್ನಿನ ಪ್ರಧಾನಿ ಡೇವಿಡ್ ಕ್ಯಾಮರೂನ್, ಐರಿಶ್ ಪ್ರಧಾನಿ ಎಂಡಾ ಕೆನ್ನಿ ಸಹಿತ ಎಲ್ಲರೂ ಸಹಿತ ಆ ಪೋಟೋಗೆ ಮರುಗಿದ್ದಾರೆ. ನಿರಾಶ್ರಿತರಿಗಾಗಿ ತನ್ನ ಎರಡನೇ ಮನೆಯನ್ನೇ ಬಿಟ್ಟು ಕೊಡುವುದಾಗಿ ಐರಿಶ್ ಪ್ರಧಾನಿಯವರು ಹೇಳಿಕೊಂಡಿದ್ದಾರೆ. ದಿ ಸ್ಪೆಕ್ಟೇಟರ್, ದಿ ಗಾರ್ಡಿಯನ್ ಸಹಿತ ಜಗತ್ತಿನ ಪ್ರಸಿದ್ಧ ಪತ್ರಿಕೆಗಳಿಂದ ಹಿಡಿದು ಸ್ಥಳೀಯ ಪತ್ರಿಕೆಗಳ ವರೆಗೆ ಎಲ್ಲವೂ ಅಯ್ಲಾನ್ ಕುರ್ದಿ ಎಂಬ ಆ ಮಗುವಿನ ಬಗ್ಗೆ ಬರೆದಿವೆ. ‘ಮೈಗ್ರಾಂಟ್ ಆಫ್‍ಶೋರ್ ಏಡ್ ಸ್ಟೇಷನ್’ (Migrant Offshore Aid Station) ಎಂಬ ಹೆಸರಲ್ಲಿ ನಿರಾಶ್ರಿತರಿಗೆ ನೆರವು ಸಂಗ್ರಹಿಸುವ ಪ್ರಯತ್ನಕ್ಕೆ ಈ ಪೋಟೋ ಕಾರಣವಾಗಿದೆ. ಒಂದು ರೀತಿಯಲ್ಲಿ, 2014ರಲ್ಲಿ ಪ್ರಕಟವಾಗಿದ್ದ ಪುಟ್ಟ ಫೆಲೆಸ್ತೀನಿ ಬಾಲಕನ ಪೋಟೋದ ಬಳಿಕ ಜಗತ್ತನ್ನು ತೀವ್ರವಾಗಿ ಕಾಡಿದ ಪೋಟೋ ಇದು. ಗುಂಡಿನ ದಾಳಿಯಿಂದ ತೂತು ತೂತಾಗಿದ್ದ ಕಪ್ಪು ಬೋರ್ಡಿನಲ್ಲಿಫೆಲೆಸ್ತೀನಿನ ಆ ಬಾಲಕ ತದೇಕಚಿತ್ತದಿಂದ ಏನನ್ನೋ ಬರೆಯುತ್ತಿದ್ದ ದೃಶ್ಯ ಅದು. ಇಸ್ರೇಲ್‍ನ ದಾಳಿಯಿಂದ ಜರ್ಝರಿತಗೊಂಡ ಗಾಝಾದ ಬಗ್ಗೆ ಜಗತ್ತಿನ ಗಮನ ಸೆಳೆಯುವುದಕ್ಕೆ ಅಂದು ಆ ಬಾಲಕ ಕಾರಣವಾಗಿದ್ದರೆ ಇಂದು ಈ ಮಗು ಸಿರಿಯನ್ ನಿರಾಶ್ರಿತರ ಬಗ್ಗೆ ಜಾಗತಿಕ ಚರ್ಚೆ ನಡೆಯುವುದಕ್ಕೆ ಕಾರಣವಾಗಿದೆ. ಎರಡನೇ ಜಾಗತಿಕ ಯುದ್ಧದ ಬಳಿಕ ಜಗತ್ತು ಎದುರಿಸುತ್ತಿರುವ ಅತಿ ದೊಡ್ಡ ವಲಸೆ ಸಮಸ್ಯೆ ಇದು. ತಮ್ಮ ಗಡಿಗಳಲ್ಲಿ ತುಂಬಿಕೊಂಡಿರುವ ನಿರಾಶ್ರಿತರನ್ನು ಒಳಗೆ ಸೇರಿಸಲು ನಿರಾಕರಿಸುತ್ತಿದ್ದ ಹಂಗರಿ, ಬ್ರಿಟನ್, ಇಟಲಿ, ಪೋರ್ಚುಗೀಸ್, ಸ್ಪೈನ್‍ಗಳು ಈ ಮಗುವನ್ನು ನೋಡಿ ಬೆಚ್ಚಿ ಬಿದ್ದಿವೆ. ಮಾತ್ರವಲ್ಲ, ಈ ಎಲ್ಲ ರಾಷ್ಟ್ರಗಳು ನಿರಾಶ್ರಿತರಿಗೆ ತಂತಮ್ಮ ಗಡಿಯನ್ನು ತೆರೆದು ಬಿಡುವಷ್ಟು ಆ ಪೋಟೋ ಒತ್ತಡವನ್ನು ಹೇರಿದೆ. ನಿಜವಾಗಿ, ನಮ್ಮ ಕಣ್ಣನ್ನು ಮಂಜಾಗಿಸಬೇಕಾದ ಮತ್ತು ಹೃದಯವನ್ನು ಗಾಢವಾಗಿ ತಟ್ಟಬೇಕಾದ ಪೋಟೋ ಅದು. ದೊಡ್ಡವರ ಅಹಂಕಾರ, ಸ್ವಾರ್ಥಗಳಿಗೆ ಎಂದೂ ಬಲಿಯಾಗುವುದು ಮಕ್ಕಳೇ. ಕತ್ತಿ, ಚೂರಿ, ಬಾಂಬು, ಬಂದೂಕು.. ಎಲ್ಲವೂ ದೊಡ್ಡವರ ಅಸ್ತ್ರಗಳು. ಅದನ್ನು ಮಕ್ಕಳು ತಯಾರಿಸಿರುವುದಿಲ್ಲ. ಬಳಸುವುದೂ ಇಲ್ಲ. ದುರಂತ ಏನೆಂದರೆ, ಅಧಿಕಾರಕ್ಕೋ ಸಂಪತ್ತಿಗೋ ಅಥವಾ ಇನ್ನಾವುದಾದರೂ ಸ್ವಾರ್ಥ ಉದ್ದೇಶಕ್ಕೋ 'ದೊಡ್ಡವರು' ಈ ಅಸ್ತ್ರಗಳನ್ನೆಲ್ಲ ಹಿಡಿದು ಕಾದಾಡುವಾಗ ಮಕ್ಕಳು ಅದರ ಎಲ್ಲ ನೋವುಗಳನ್ನೂ ಅನುಭವಿಸುತ್ತಾ ಬದುಕಬೇಕಾಗುತ್ತದೆ. ಏನೆನ್ನಬೇಕು ಇದಕ್ಕೆ? ದೊಡ್ಡವರ ಉದ್ದೇಶಕ್ಕಾಗಿ ಮಕ್ಕಳನ್ನು ಬಲಿ ನೀಡುವುದು ಎಷ್ಟು ಸರಿ? ಮಕ್ಕಳಿಗೆ ಅಧಿಕಾರ ಬೇಕಿಲ್ಲ, ಸಂಪತ್ತು ಬೇಕಿಲ್ಲ, ಹುನ್ನಾರಗಳನ್ನು ಅರ್ಥ ಮಾಡಿಕೊಳ್ಳುವ ಸಾಮರ್ಥ್ಯವೂ ಅವಕ್ಕಿಲ್ಲ. ಅವುಗಳಿಗೆ ಬಾಲ್ಯವಷ್ಟೇ ಬೇಕು. ಅಮ್ಮ-ಅಪ್ಪನ ಬೆಚ್ಚನೆಯ ಪ್ರೀತಿ ಬೇಕು. ಶಾಲೆ ಬೇಕು, ಅಕ್ಷರ ಬೇಕು. ಅಪಾಯ ಮುಕ್ತ ಬಯಲು ಬೇಕು. ಆದರೆ ಇವೆಲ್ಲವನ್ನೂ ನಿರಾಕರಿಸಿದ ದೊಡ್ಡವರ ವರ್ತನೆಗೆ ಮುನಿಸಿಕೊಂಡು ಸಮುದ್ರ ದಂಡೆಯಲ್ಲಿ ಆ ಮಗು ಬೋರಲಾಗಿ ಮಲಗಿರುವಂತೆ ಅನಿಸುತ್ತಿದೆ. ಮರಳಿನಲ್ಲಿ ಆಟವಾಡಲು ಬಿಡದ ಹೆತ್ತವರೊಂದಿಗೆ ಮುನಿಸಿಕೊಳ್ಳುವಂತಹ ಹಠ. ಅಷ್ಟಕ್ಕೂ, ಪುಟ್ಟ ಅಯ್ಲಾನ್ ಕುರ್ದಿ ತನ್ನ ಹುಟ್ಟೂರು ಸಿರಿಯಾದಿಂದ ಟರ್ಕಿಗೆ ವಲಸೆ ಹೋಗಬೇಕೆಂದು ಬಯಸಿರುವ ಸಾಧ್ಯತೆ ಇಲ್ಲವೇ ಇಲ್ಲ. ಆದರೆ ‘ದೊಡ್ಡವರು’ ಸಿರಿಯಾದಲ್ಲಿ ಅಂಥದ್ದೊಂದು ವಾತಾವರಣವನ್ನು ನಿರ್ಮಿಸಿದ್ದರು. ಆದ್ದರಿಂದಲೇ, ಆತನ ತಂದೆ ಮತ್ತು ತಾಯಿ ಆತನನ್ನೂ ಆತನ ಅಣ್ಣ 5 ವರ್ಷದ ಗಾಲಿಬ್‍ನನ್ನೂ ಎತ್ತಿಕೊಂಡು ವರ್ಷಗಳ ಹಿಂದೆ ಸಿರಿಯದಿಂದ ಟರ್ಕಿಗೆ ಆಗಮಿಸಿದ್ದರು. ಅಲ್ಲಿ ಅಯ್ಲಾನ್ ಸುಖವಾಗಿರಲಿಲ್ಲ. ಎಲ್ಲೆಲ್ಲೂ ನಿರಾಶ್ರಿತರು. ಕೊನೆಗೆ ಅಲ್ಲಿಂದ 3 ಮೈಲುಗಳಷ್ಟು ದೂರ ಇರುವ ಗ್ರೀಸ್‍ಗೆ ತೆರಳಿ ಅಲ್ಲಿಂದ ಕೆನಡದಲ್ಲಿರುವ ಸಂಬಂಧಿಕರನ್ನು ಸೇರಲು  ಮಗುವಿನ ಹೆತ್ತವರು ತೀರ್ಮಾನಿಸಿದರು. ಪಾಸ್‍ಪೋರ್ಟ್, ನಿರ್ಗಮನ ವಿಸಾ ಮತ್ತು ದುಡ್ಡು ಇಲ್ಲದ ಕುಟುಂಬವು ವಿಮಾನ ಹತ್ತುವುದು ಸಾಧ್ಯವಿರಲಿಲ್ಲ. ಹಾಗಂತ, ಇದು ಕೇವಲ ಈ ಕುಟುಂಬವೊಂದರ ಸಮಸ್ಯೆ ಅಲ್ಲ, ಸಂಘರ್ಷ ಪೀಡಿತ ಪಶ್ಚಿಮೇಶ್ಯಾದ ಲಕ್ಷಾಂತರ ಕುಟುಂಬಗಳು ಇವೇ ಸಮಸ್ಯೆಯನ್ನು ಎದುರಿಸುತ್ತಿವೆ. ಆದ್ದರಿಂದಲೇ, ಕಳೆದ ವಾರ ಅಯ್ಲಾನ್‍ನ ಹೆತ್ತವರು 3 ಮೈಲಿನ ಸಮುದ್ರ ಪ್ರಯಾಣಕ್ಕಾಗಿ ರಬ್ಬರ್ ದೋಣಿಯನ್ನು ಏರಿದರು. 8 ಮಂದಿ ಪ್ರಯಾಣಿಸಬಹುದಾದ ದೋಣಿಯಲ್ಲಿ 15 ಮಂದಿ ಇದ್ದುದರಿಂದಲೇ ಏನೋ ಸಮುದ್ರದಲೆಗೆ ದೋಣಿ ಮಗುಚಿ ಬಿತ್ತು. ಅಯ್ಲಾನ್‍ನ ತಂದೆಯ ಹೊರತು ಉಳಿದವರೆಲ್ಲರೂ ಸಾವಿಗೀಡಾದರು. ಅದೇ ದಿನ ಆ ಮಗುವಿನ ಮೃತದೇಹ ಬೋರ್ಡಮ್ ಸಮುದ್ರ ಕಿನಾರೆಯಲ್ಲಿ ಬೋರಲಾಗಿ ಬಿದ್ದಿರುವ ರೀತಿಯಲ್ಲಿ ಪತ್ತೆಯಾಯಿತು.
ಫೆಲೆಸ್ತೀನಿನ  ಬಾಲಕ
    ಅಷ್ಟಕ್ಕೂ, ಸಂಘರ್ಷ ಪೀಡಿತ ಪಶ್ಚಿಮೇಶ್ಯಕ್ಕೆ ಈ ಸಾವು ಹೊಸತಲ್ಲ. ಹೀಗೆ ಅನಧಿಕೃತವಾಗಿ ಸಮುದ್ರ ಮಾರ್ಗವಾಗಿ ಪ್ರಯಾಣಿಸಿದ 26 ಸಾವಿರಕ್ಕಿಂತಲೂ ಅಧಿಕ ನಿರಾಶ್ರಿತರು ಈಗಾಗಲೇ ಸಾವಿಗೀಡಾಗಿದ್ದಾರೆ. ಇದರಲ್ಲಿ ದೊಡ್ಡದೊಂದು ಭಾಗ ಮಕ್ಕಳದ್ದು. ಸಿರಿಯದಲ್ಲಿ ಪ್ರತಿ 4ರಲ್ಲಿ ಒಂದು ಶಾಲೆ ನಿರಾಶ್ರಿತರ ಶಿಬಿರವಾಗಿ ಮಾರ್ಪಟ್ಟಿವೆ. ಇರಾಕ್‍ನಲ್ಲಿ 3 ಮಿಲಿಯನ್ ಜನರು ಶಾಲೆಗಳಲ್ಲಿ ನಿರಾಶ್ರಿತರಾಗಿ ಉಳಿದುಕೊಂಡಿದ್ದಾರೆ. ಸಿರಿಯ, ಇರಾಕ್, ಯಮನ್, ಲಿಬಿಯಗಳಲ್ಲಿ 13.4 ಮಿಲಿಯನ್ ಮಕ್ಕಳು ಶಾಲೆಯಿಂದ ಹೊರಗಿದ್ದಾರೆ. 8,850 ಶಾಲೆಗಳು ಉಪಯೋಗಶೂನ್ಯವಾಗಿ ಭಣಗುಟ್ಟುತ್ತಿದೆ. ಲಿಬಿಯದ ಶೇ. 73 ಶಾಲೆಗಳಲ್ಲಿ ತರಗತಿಗಳೇ ನಡೆಯುತ್ತಿಲ್ಲ. ಸಿರಿಯದ ಸುಮಾರು 56 ಸಾವಿರ ಶಿಕ್ಷಕರು ಮತ್ತು ಅಧಿಕಾರಿಗಳು ಕೆಲಸ ತೊರೆದಿದ್ದಾರೆ... ಮಕ್ಕಳ ಜಗತ್ತಿನ ಪುಟ್ಟ ಚಿತ್ರಣ ಇದು. ದೊಡ್ಡವರೇಕೆ ಇಷ್ಟು ಕ್ರೂರಿಗಳಾಗುತ್ತಿದ್ದಾರೆ? ಹೃದಯವೇ ಇಲ್ಲದಂತೆ ಮತ್ತು ಸಂವೇದನೆಯೇ ಸತ್ತಂತೆ ವರ್ತಿಸುತ್ತಿದ್ದಾರೆ? ಶಾಲೆ ಮಕ್ಕಳದ್ದು. ಬಯಲು ಮಕ್ಕಳದ್ದು. ಬಾಲ್ಯವೂ ಮಕ್ಕಳದ್ದೇ. ಅದನ್ನು ಆ ಮಕ್ಕಳಿಗೆ ಒದಗಿಸಬೇಕಾದ ದೊಡ್ಡವರು ಬಾಂಬು, ಬಂದೂಕುಗಳ ಮೂಲಕ ಅವನ್ನು ನಿರಾಕರಿಸುತ್ತಿರುವುದಕ್ಕೆ ಏನೆನ್ನಬೇಕು? ಅಂದಹಾಗೆ, ಜಗತ್ತಿನ ಸರ್ವ ಆಂತರಿಕ ಸಮಸ್ಯೆಗಳಲ್ಲೂ ಸುದ್ದಿಗೀಡಾಗದೇ ಇರುವುದು ಮಕ್ಕಳು ಮಾತ್ರ. ಯಾಕೆಂದರೆ, ಅವಕ್ಕೆ ಪ್ರತಿಭಟಿಸಲು ಬರುವುದಿಲ್ಲ. ಹುದುಗಿಸಿಟ್ಟ ಬಾಂಬುಗಳ ಪರಿಜ್ಞಾನ ಇರುವುದಿಲ್ಲ. ಐಸಿಸ್‍ನ ಉದ್ದೇಶ, ಅಮೇರಿಕದ ಗುರಿ, ಇಸ್ರೇಲ್ ಬಯಕೆ ಅಥವಾ ಇನ್ನಾರೋ ದೊಡ್ಡವರ ಹುನ್ನಾರಗಳು ಅರ್ಥವಾಗಿರುವುದಿಲ್ಲ. ಹೆತ್ತವರು ಓಡುವಾಗ ಅವೂ ಓಡುತ್ತವೆ. ಅವರು ಅಳುವಾಗ ಅವೂ ಅಳುತ್ತವೆ. ಹಸಿವಾದರೂ ಅಮ್ಮ ಯಾಕೆ ಊಟ ಕೊಡಲ್ಲ ಎಂದು ಕೊರಗುತ್ತವೆ. ಹೀಗೆ ಇತರರನ್ನೇ ಆಶ್ರಯಿಸಿ ಬದುಕುವ ಪೀಳಿಗೆ ಅದು. ಆದ್ದರಿಂದಲೇ, ಅಪ್ಪನೊಂದಿಗೆ ಅಯ್ಲಾನ್ ಕುರ್ದಿ ರಬ್ಬರ್ ದೋಣಿ ಏರಿದ್ದಾನೆ. ಒಂದು ರೀತಿಯಲ್ಲಿ, ದೊಡ್ಡವರೆಲ್ಲ ಸೇರಿ ಮಾಡಿದ ಅಮಾನುಷ ಹತ್ಯೆ ಇದು. ನಿರಾಶ್ರಿತರಾಗಿ ಬದುಕುವುದು, ದೋಣಿ ಏರುವುದು, ಗ್ರೀಸ್‍ಗೆ ತೆರಳುವುದೆಲ್ಲ ಆ ಮಗುವಿನ ಅನಿವಾರ್ಯತೆಗಳಲ್ಲವಲ್ಲ. ಅದನ್ನು ಅನಿವಾರ್ಯಗೊಳಿಸಿದ್ದು ಸಿರಿಯ, ಐಸಿಸ್, ಅಮೇರಿಕ... ಮುಂತಾದ ದೊಡ್ಡವರು. ಆದ್ದರಿಂದ ಈ ಸಾವಿನ ಹೊಣೆಯನ್ನು ಅವರೆಲ್ಲ ಹೊತ್ತುಕೊಳ್ಳಲಿ. ಇನ್ನಾದರೂ ಈ ಜಗತ್ತನ್ನು ಮಕ್ಕಳಿಂದ  ಕಸಿಯದಿರಲಿ.

No comments:

Post a Comment