Wednesday, 11 November 2015

ತಲಾಕ್, ಬಹುಪತ್ನಿತ್ವ ಮತ್ತು ಸಮಾನ ನಾಗರಿಕ ಸಂಹಿತೆ

     
     ಬಹುಪತ್ನಿತ್ವ, ತಲಾಕ್ ಮತ್ತು ಜಿಹಾದ್ ಎಂಬೀ ಮೂರು ಪದಗುಚ್ಛಗಳು ಈ ದೇಶದಲ್ಲಿ ಚರ್ಚೆಗೆ ಒಳಗಾದಷ್ಟು ಬಹುಶಃ ಮುಸ್ಲಿಮರಿಗೆ ಸಂಬಂಧಿಸಿದ ಇನ್ನಾವ ಪದ ಪ್ರಯೋಗಗಳೂ ಚರ್ಚೆಗೊಳಗಾಗಿರುವ ಸಾಧ್ಯತೆ ಇಲ್ಲ. ಇದರಲ್ಲಿ ಜಿಹಾದ್‍ನ ಚರ್ಚೆ ಬಹುತೇಕ ಮುಗಿದಿದೆ. ಇದಕ್ಕೆ ಮುಖ್ಯ ಕಾರಣ - ಮುಸ್ಲಿಮ್ ವಿದ್ವಾಂಸರು, ಸಾಮಾಜಿಕ ಹೋರಾಟಗಾರರು ಮತ್ತು ಸಂಘಟನೆಗಳು ಜಿಹಾದ್ ಏನು ಮತ್ತು ಏನಲ್ಲ ಎಂಬುದನ್ನು ಪದೇ ಪದೇ ಈ ದೇಶದಲ್ಲಿ ಸಾರಿದ್ದು. ಅದಕ್ಕಾಗಿ ಈ ದೇಶದಾದ್ಯಂತ ಅಸಂಖ್ಯ ಸೆಮಿನಾರ್‍ಗಳು ನಡೆದಿವೆ. ಸಂವಾದ ಕಾರ್ಯಕ್ರಮಗಳು, ಚರ್ಚಾಗೋಷ್ಠಿಗಳಾಗಿವೆ. ಬಾಂಬ್ ಸ್ಫೋಟಿಸುವವರನ್ನು ‘ಜಿಹಾದಿ' ಅನ್ನುತ್ತಿದ್ದ ಮಾಧ್ಯಮಗಳು ಕ್ರಮೇಣ ಆ ಪದವನ್ನು ಕೈ ಬಿಡುವಷ್ಟು ಇವು ಪರಿಣಾಮಕಾರಿಯಾಗಿವೆ. ಆದರೆ ಬಹುಪತ್ನಿತ್ವ ಮತ್ತು ತಲಾಕ್‍ಗೆ ಸಂಬಂಧಿಸಿ ಹೀಗೆ ಹೇಳುವಂತಿಲ್ಲ. ಇವೆರಡರ ಬಗ್ಗೆ ತಪ್ಪು ಅಭಿಪ್ರಾಯಗಳು ಈ ದೇಶದ ಮುಸ್ಲಿಮೇತರರಲ್ಲಿ ಮಾತ್ರ ಇರುವುದಲ್ಲ, ಮುಸ್ಲಿಮರಲ್ಲಿಯೂ ಇದೆ. ಮುಸ್ಲಿಮೇತರರಲ್ಲಿ ಇದರ ಪ್ರಮಾಣ ‘ಭೀಕರ’ ಮಟ್ಟದಲ್ಲಿದ್ದರೆ, ಮುಸ್ಲಿಮರಲ್ಲಿ ತುಸು ಕಡಿಮೆಯಾದರೂ ಅಪಾಯಕಾರಿ ಮಟ್ಟದಲ್ಲಿಯೇ ಇದೆ. ತಲಾಕ್ ತಲಾಕ್ ತಲಾಕ್ ಎಂದು ಮೂರು ಬಾರಿ ಹೇಳಿಬಿಟ್ಟರೆ ದಾಂಪತ್ಯವೆಂಬ ಅತಿ ಪವಿತ್ರ ಮತ್ತು ಪಾವನ ಸಂಬಂಧವೊಂದು ಶಾಶ್ವತವಾಗಿ ಕಳಚಿಕೊಂಡು ಬಿಡುತ್ತದೆ ಎಂದು ನಂಬುವ ಮಂದಿ ಮುಸ್ಲಿಮರಲ್ಲೂ ಮುಸ್ಲಿಮೇತರರಲ್ಲೂ ಖಂಡಿತ ಇದ್ದಾರೆ. ‘ದೇವನು ಅತ್ಯಂತ ಹೆಚ್ಚು ಇಷ್ಟಪಡದ ಕಾರ್ಯ ತಲಾಕ್' ಎಂಬುದಾಗಿ ಪವಿತ್ರ ಕುರ್‍ಆನ್‍ನಲ್ಲಿ ಇದೆ ಎಂದು ಹೇಳಿದರೆ ಅಚ್ಚರಿಯಿಂದ ನೋಡುವಷ್ಟು ತಲಾಕ್‍ನ ಬಗ್ಗೆ ಅನುಮಾನಗಳಿವೆ. ಬಹುಪತ್ನಿತ್ವವನ್ನೂ ಇದರಿಂದ ಹೊರಗಿಟ್ಟು ನೋಡಬೇಕಿಲ್ಲ. ಒಂದು ಬಗೆಯ ಅನುಮಾನ, ಅಚ್ಚರಿ, ಆಘಾತಗಳನ್ನು ಹೊತ್ತುಕೊಂಡು ‘ತಲಾಕ್' ಮತ್ತು ‘ಬಹುಪತ್ನಿತ್ವ'ಗಳು ಈ ದೇಶದಲ್ಲಿ ಸುತ್ತಾಡುವಾಗ ಇದರ ಕುರಿತಂತೆ ಗುಜರಾತ್ ಹೈಕೋರ್ಟ್‍ನ ಅಭಿಪ್ರಾಯವನ್ನು ಅಚ್ಚರಿಯಿಂದ ನೋಡಬೇಕಿಲ್ಲ. ‘ಸಮಾನ ನಾಗರಿಕ ಸಂಹಿತೆಯನ್ನು ಜಾರಿಗೊಳಿಸುವುದೇ ಇವೆರಡರ ದುರುಪಯೋಗಕ್ಕಿರುವ ಮದ್ದು' ಎಂದು ಅದು ಹೇಳಿರುವುದರಲ್ಲಿ ಕೆಲವು ಗಮನಾರ್ಹ ಅಂಶಗಳಿವೆ. ಮಾತ್ರವಲ್ಲ, ಅಷ್ಟೇ ಭ್ರಮೆಗಳೂ ಇವೆ. ಸಮಾನ ನಾಗರಿಕ ಸಂಹಿತೆ ಜಾರಿಗೊಂಡ ಕೂಡಲೇ ಈ ದೇಶದ ಸರ್ವ ಸಮಸ್ಯೆಗಳೂ ಪರಿಹಾರವಾಗಿ ಬಿಡುತ್ತವೆ ಎಂದು ವಾದಿಸುವುದು ಪರಮ ದಡ್ಡತನ. ಈ ದೇಶದಲ್ಲಿ ಹಲವಾರು ಧರ್ಮಗಳಿವೆ. ಜಾತಿ ಪಂಗಡಗಳಿವೆ. ಹಾಗೆಯೇ ಪ್ರತಿಯೊಂದಕ್ಕೂ ಅವುಗಳದ್ದೇ ಆದ ವೈಯಕ್ತಿಕ ನಿಯಮ-ನಿಬಂಧನೆಗಳಿವೆ. ಅವುಗಳಲ್ಲಿ ಮೌಢ್ಯ ಇದ್ದರೆ ಅಥವಾ ಮನುಷ್ಯ ವಿರೋಧಿ ನಂಬುಗೆಗಳಿದ್ದರೆ ಅವುಗಳಿಗೆ ಕಾನೂನು ರೀತಿಯಲ್ಲಿ ತಡೆ ಒಡ್ಡಬೇಕಾದುದು ತೀರಾ ಅಗತ್ಯ. ಸತಿ, ಬೆತ್ತಲೆ ಸೇವೆ, ದೇವದಾಸಿ, ಮಾನವ ಬಲಿ, ವರ್ಣ ವ್ಯವಸ್ಥೆಯಂತಹ ಹತ್ತು-ಹಲವು ಆಚರಣೆಗಳನ್ನು ಸಮಾನ ನಾಗರಿಕ ಸಂಹಿತೆಯ ಹಂಗಿಲ್ಲದೆಯೇ ನಿರ್ಬಂಧಿಸಲಾಗಿದೆ. ಒಂದು ವೇಳೆ, ತಲಾಕ್ ಮತ್ತು ಬಹುಪತ್ನಿತ್ವಗಳು ದುರುಪಯೋಗಕ್ಕೀಡಾಗುತ್ತಿದ್ದರೆ ಅದನ್ನು ಈಗಿರುವ ಕಾನೂನುಗಳ ಮೂಲಕವೇ ಪರಿಹರಿಸುವುದಕ್ಕೆ ಸಾಧ್ಯವಿದೆ. ಅಷ್ಟಕ್ಕೂ, ದುರುಪಯೋಗಕ್ಕೀಡಾದ ನಿಯಮಗಳಾದರೂ ಯಾವುವು? ಪುಟಾಣಿಗಳ ಬಿಸಿಯೂಟದಿಂದ ಹಿಡಿದು ವೃದ್ಧಾಪ್ಯ ವೇತನದ ವರೆಗೆ ಪ್ರತಿಯೊಂದನ್ನೂ ದುರುಪಯೋಗಿಸಲಾಗುತ್ತಿರುವ ಇಂದಿನ ದಿನಗಳಲ್ಲಿ ಬಹುಪತ್ನಿತ್ವ ಅಥವಾ ತಲಾಕ್‍ಗಳು ದುರುಪಯೋಗವಾಗುತ್ತಿರುವುದನ್ನು ಅದ್ಭುತವೆಂಬಂತೆ ವ್ಯಾಖ್ಯಾನಿಸುವುದರಲ್ಲಿ ಏನರ್ಥವಿದೆ? ಸಮಾನ ನಾಗರಿಕ ಸಂಹಿತೆ ಜಾರಿಗೊಂಡ ಕೂಡಲೇ ವೈಯಕ್ತಿಕ ನಿಯಮಗಳ ದುರುಪಯೋಗಗಳೆಲ್ಲ ಸ್ಥಗಿತಗೊಳ್ಳಬಹುದೇ? ಇಲ್ಲಿನ ಸಮಸ್ಯೆಗಳಿಗೆ ಸಮಾನ ನಾಗರಿಕ ಸಂಹಿತೆ ಜಾರಿಯಾಗದಿರುವುದೇ ಕಾರಣವೇ ಅಥವಾ ಇರುವ ಕಾನೂನುಗಳನ್ನು ಸಮರ್ಪಕವಾಗಿ ಬಳಸದಿರುವುದೇ? ಹಾಗಂತ, ತಲಾಕ್ ಮತ್ತು ಬಹುಪತ್ನಿತ್ವಗಳು ದುರುಪಯೋಗವಾಗುತ್ತಿಲ್ಲ ಎಂದು ಹೇಳುತ್ತಿಲ್ಲ. ಆದರೆ, ಆಗುವ ದುರುಪಯೋಗಕ್ಕಿಂತ ಎಷ್ಟೋ ಪಟ್ಟು ಹೆಚ್ಚಿನ ಪ್ರಮಾಣದಲ್ಲಿ ಅದರ ದುರುಪಯೋಗವನ್ನು ಉಬ್ಬಿಸಿ ಮತ್ತು ಉತ್ಪ್ರೇಕ್ಷಿಸಿ ಹೇಳಲಾಗುತ್ತಿದೆ. ಈ ದೇಶದಲ್ಲಿ ಪತ್ನಿಯ ಜೊತೆಗೇ ಅನಧಿಕೃತವಾಗಿ ಇನ್ನೋರ್ವಳನ್ನು ಇಟ್ಟುಕೊಳ್ಳುವುದು `ಭೀಕರ' ಅನ್ನಿಸುವುದಿಲ್ಲ. ಲಿವಿಂಗ್ ಟುಗೆದರ್‍ನ ಹೆಸರಲ್ಲಿ ಹೆಣ್ಣು ಮತ್ತು ಗಂಡು ಮನ ಬಂದಂತೆ ಜೊತೆಗಿರುವುದು ಮತ್ತು ವಿಚ್ಛೇದನಗೊಳ್ಳುವುದು ಅಸಮರ್ಪಕವಾಗಿ ಕಾಣಿಸುವುದಿಲ್ಲ ಅಥವಾ ಸಿನಿಮಾ ಪ್ರಪಂಚವೂ ಸೇರಿದಂತೆ ಆಧುನಿಕ ಸಮಾಜದಲ್ಲಿ ತೀರಾ ಮಾಮೂಲಾಗಿರುವ ವಿಚ್ಛೇದನಗಳೂ ಹುಬ್ಬೇರಿಸುತ್ತಿಲ್ಲ. ಆದರೆ ಅಧಿಕೃತವಾಗಿ ಇಬ್ಬರನ್ನು (ಅತ್ಯಂತ ಸೂಕ್ತ ಮತ್ತು ಅನಿವಾರ್ಯ ಕಾರಣಗಳಿಗಾಗಿ ಮಾತ್ರ) ಇಟ್ಟುಕೊಳ್ಳುವುದನ್ನು ಅತ್ಯಂತ ಅನಾಗರಿಕವಾಗಿ ಸನ್ನಿವೇಶವಾಗಿ ನೋಡಲಾಗುತ್ತಿದೆ. ಏನೆನ್ನಬೇಕು ಇದಕ್ಕೆ?  
        ನಿಜವಾಗಿ, ಬಹುಪತ್ನಿತ್ವಕ್ಕೆ ಅತ್ಯಂತ ಕಠಿಣವಾದ ಶರತ್ತುಗಳಿವೆ. ಬಹುಪತ್ನಿತ್ವ ಒಂದು ಅನಿವಾರ್ಯ ಸಂದರ್ಭದ ಆಯ್ಕೆಯೇ ಹೊರತು ಅದು ಶರತ್ತು ರಹಿತವೂ ಅಲ್ಲ, ಬೇಕಾಬಿಟ್ಟಿಯೂ ಅಲ್ಲ. ಈ ಕುರಿತಂತೆ ಮುಸ್ಲಿಮ್ ಸಮಾಜದಲ್ಲಿ ಒಂದು ಹಂತದವರೆಗೆ ಅಜ್ಞಾನವಿದೆ ಎಂದು ಒಪ್ಪಿಕೊಂಡರೂ ಅದು ಇವತ್ತು ಬಿಂಬಿಸುವಂತೆ ಅಪಾಯಕಾರಿ ಮಟ್ಟದಲ್ಲಿಲ್ಲ ಎಂಬುದಕ್ಕೆ ಈ ದೇಶದಲ್ಲಿ ನಡೆಸಲಾದ ಜನಗಣತಿ ಸಮೀಕ್ಷೆಗಳೇ ಸಾಕ್ಷಿ. ಬಹುಪತ್ನಿತ್ವವನ್ನು ಈ ದೇಶದ ಹೆಚ್ಚಿನ ಮುಸ್ಲಿಮರು ಅನಿವಾರ್ಯ ಆಯ್ಕೆಯಾಗಿಯೇ ಇವತ್ತೂ ಪರಿಗಣಿಸಿದ್ದಾರೆ. ಆದ್ದರಿಂದಲೇ ಮುಸ್ಲಿಮೇತರರಿಗೆ ಹೋಲಿಸಿದರೆ ಈ ದೇಶದಲ್ಲಿ ಮುಸ್ಲಿಮರಲ್ಲಿ ಬಹುಪತ್ನಿತ್ವ ಕಡಿಮೆ. ಮುಸ್ಲಿಮರಲ್ಲಿ ಬಹುಪತ್ನಿತ್ವಕ್ಕೆ ಅವಕಾಶವಿದೆ ಎಂದು ಹೇಳುವ ಮಂದಿಯಲ್ಲಿ ತಂತಮ್ಮ ಪ್ರದೇಶದಲ್ಲಿ ಎಷ್ಟೆಷ್ಟು ಮುಸ್ಲಿಮರಿಗೆ ಬಹುಪತ್ನಿಯರಿದ್ದಾರೆ ಎಂದು ಪ್ರಶ್ನಿಸಿದರೆ ಉತ್ತರಿಸಲು ತಡವರಿಸುತ್ತಾರೆ. ತಲಾಕ್‍ನ ಸ್ಥಿತಿಯೂ ಇದುವೇ. ನಿಜವಾಗಿ, ಮೂರು ಬಾರಿ ತಲಾಕ್ ತಲಾಕ್ ಎಂದು ಹೇಳಿದರೆ ವಿಚ್ಛೇದನ ಆಗಿ ಬಿಡುತ್ತದೆ ಮತ್ತು ಮುಸ್ಲಿಮರನ್ನು ವಿಚ್ಛೇದನ ಬಹಳ ಸುಲಭ ಎಂದು ಹೇಳುವುದನ್ನು ನೋಡಿದರೆ, ಮುಸ್ಲಿಮರನ್ನು ವಿಚ್ಛೇದಿತೆಯರೇ ತುಂಬಿಕೊಂಡಿದ್ದಾರೆಂದೇ ನಂಬಬೇಕು. ಅಂದಹಾಗೆ, ತಲಾಕ್‍ಗೆ ಅದರದ್ದೇ ಆದ ನಿಯಮ-ನಿಬಂಧನೆಗಳಿವೆ. ತಲಾಕ್‍ಗೆ ಮೂರು ಹಂತಗಳಿವೆ. ಮೂರು ಬಾರಿ ಪಟಪಟನೆ ತಲಾಕ್ ಹೇಳುವುದು ಅತ್ಯಂತ ಅತಾರ್ಕಿಕ ಮತ್ತು ಅಸಮರ್ಪಕ ವಿಧಾನ. ಒಂದು ಬಾರಿ ತಲಾಕ್ ಹೇಳಿದ ಬಳಿಕ ಪತ್ನಿಯ ಜೊತೆಗೆ ಪತಿ ಒಂದು ಮುಟ್ಟಿನ ಕಾಲದ ವರೆಗೆ ಬದುಕಬೇಕು. ಅದರ ನಡುವೆ ಅವರು ಸೇರಿಕೊಂಡರೆ ತಲಾಕ್ ಅನೂರ್ಜಿತಗೊಳ್ಳುತ್ತದೆ. ಪುನಃ ತಲಾಕ್ ಹೇಳಿದರೆ ಪುನಃ ಮುಟ್ಟಿನ ವರೆಗೆ ಜೊತೆಗೆ ಬದುಕಬೇಕು ಮತ್ತು ಪರಸ್ಪರ ಸೇರಬಾರದು. ಹಾಗಾದರೆ ಅದು ಒಂದು ತಲಾಕ್ ಆಗುತ್ತದೆಯೇ ಹೊರತು ಸಂಪೂರ್ಣ ವಿಚ್ಛೇದನ ಅಲ್ಲ. ಹೀಗೆ ಮೂರು ಹಂತದಲ್ಲಿ ವಿಚ್ಛೇದನ ಕೋರುವುದು, ಅವುಗಳ ಮಧ್ಯೆ ಜೊತೆಯಾಗಿಯೇ ಬದುಕುವುದು ಮತ್ತು ಈ ಅವಧಿಯ ಮಧ್ಯೆ ಅವರು ಪರಸ್ಪರ ಸೇರದೇ ಇರುವುದು ನಡೆದರೆ ಪೂರ್ಣ ತಲಾಕ್ ಆಗುತ್ತದೆ. ಇದು ಒಂದು ನಿಮಿಷದ ಪ್ರಕ್ರಿಯೆ ಅಲ್ಲ. ಕನಿಷ್ಠ ಅಂದರೆ ಮೂರು ತಿಂಗಳು ಮತ್ತು ಗರಿಷ್ಠ ಅಂದರೆ ಎಷ್ಟು ತಿಂಗಳೂ ತಗಲಬಹುದಾದ ಒಂದು ದೀರ್ಘ ಪ್ರಕ್ರಿಯೆ. ಹಾಗಂತ, ಈ ಪ್ರಕ್ರಿಯೆಯನ್ನು ತೀರಾ ಹಾಸ್ಯಾಸ್ಪದಗೊಳಿಸುವವರು ಮುಸ್ಲಿಮರಲ್ಲಿ ವಿರಳ ಸಂಖ್ಯೆಯಲ್ಲಾದರೂ ಖಂಡಿತ ಇದ್ದಾರೆ. ಬಹುಪತ್ನಿತ್ವವನ್ನು ದುರುಪಯೋಗಿಸುವವರೂ ಇದ್ದಾರೆ. ಈ ಕುರಿತಂತೆ ಮುಸ್ಲಿಮರೊಳಗೆಯೇ ಜಾಗೃತಿ ಕಾರ್ಯಕ್ರಮ ಖಂಡಿತ ಆಗಲೇ ಬೇಕು. ಜಿಹಾದ್‍ನ ಬಗ್ಗೆ ಸಮಾಜಕ್ಕೆ ತಿಳಿಸಿಕೊಟ್ಟಂತೆಯೇ ಬಹುಪತ್ನಿತ್ವ ಮತ್ತು ತಲಾಕ್‍ಗಳ ನಿಜ ರೂಪವನ್ನು ಸಮಾಜಕ್ಕೆ ತಿಳಿಸಿಕೊಡಬೇಕು. ಇವುಗಳನ್ನು ಭೀಕರವಾಗಿಯೋ ಅಪಾಯಕಾರಿಯಾಗಿಯೋ ಕಲ್ಪಿಸಿಕೊಂಡವರಿಗೆ ಇದನ್ನು ತಿಳಿಸಿ ಕೊಡುವ ಅಗತ್ಯ ಖಂಡಿತಕ್ಕೂ ಇದೆ. ಆ ಬಳಿಕವೂ ಅವರು ಅದನ್ನು ಭೀಕರವಾಗಿಯೇ ಚಿತ್ರಿಸುವುದಾದರೆ ಆ ಬಗ್ಗೆ ಚರ್ಚೆಗಳಾಗಲಿ. ಸಂವಾದಗಳಾಗಲಿ. ಅದಕ್ಕಿಂತಲೂ ಮೊದಲು ತೀರ್ಮಾನ ಆಗದಿರಲಿ.

No comments:

Post a Comment