
ನಿಜವಾಗಿ, ಜನಸಂಖ್ಯೆಗೂ ಜನರ ಜೀವನ ಮಟ್ಟಕ್ಕೂ ಅಬೇಧ್ಯ ಸಂಬಂಧ ಇದೆ. ದುರಂತ ಏನೆಂದರೆ, ಜನರ ಜೀವನ ಮಟ್ಟವನ್ನು ಸುಧಾರಿಸಲು ವಿಫಲವಾದ ಪ್ರಭುತ್ವವು ತಾಯಂದಿರ ಹೊಟ್ಟೆಯನ್ನು ತೋರಿಸಿ ತನ್ನ ವೈಫಲ್ಯವನ್ನು ಅಡಗಿಸಿಕೊಳ್ಳಲು ಯತ್ನಿಸುತ್ತಿದೆ. ಹಸಿದ ಹೊಟ್ಟೆಗೆ ಅನ್ನವನ್ನು ಕೊಡುವ ಬದಲು ಹೊಟ್ಟೆಯಲ್ಲಿರುವ ಶಿಶುವನ್ನು ಕಿತ್ತುಕೊಳ್ಳಲು ಸಂಚು ರೂಪಿಸುವ ಈ ಕ್ರಮವನ್ನು ಕ್ರೌರ್ಯ ಎಂದಲ್ಲದೇ ಇನ್ನೇನೆಂದು ಕರೆಯಬೇಕು? ಅತ್ಯಂತ ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಇವತ್ತು ಜನಸಂಪತ್ತಿನ ಕೊರತೆಯನ್ನು ಎದುರಿಸುತ್ತಿವೆ. ಹೆಚ್ಚು ಮಕ್ಕಳನ್ನು ಹೊಂದುವ ಕುಟುಂಬಕ್ಕೆ ಅವು ಪಾರಿತೋಷಕಗಳನ್ನು ಘೋಷಿಸುತ್ತಿವೆ. ಮಕ್ಕಳೇ ಬೇಡ ಎಂದು ತೀರ್ಮಾನಿಸುವ ಯುವ ಪೀಳಿಗೆಯಿಂದಾಗಿ ಮುಂದೊಮ್ಮೆ ವೃದ್ಧರೇ ತುಂಬಿ ಹೋಗಬಹುದೆಂಬ ಅಂಜಿಕೆಯು ಅನೇಕ ರಾಷ್ಟ್ರಗಳನ್ನು ಇವತ್ತು ಕಾಡತೊಡಗಿದೆ. ಅದೇ ವೇಳೆ, ಹಿಂದುಳಿತ ಅಥವಾ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಜನನ ನಿಯಂತ್ರಣದ ಬಗ್ಗೆ ಪ್ರಭುತ್ವದಿಂದಲೇ ಹೇಳಿಕೆಗಳು ಹೊರಬೀಳುತ್ತಿವೆ. ಜನಸಂಖ್ಯೆಯನ್ನು ಆಪತ್ತೋ ಎಂಬ ರೀತಿಯಲ್ಲಿ ವ್ಯಾಖ್ಯಾನಿಸಲಾಗುತ್ತಿದೆ. ಅಷ್ಟಕ್ಕೂ ಮುಂದುವರಿದ ಮತ್ತು ಹಿಂದುಳಿದ ರಾಷ್ಟ್ರಗಳ ನಡುವೆ ಜನನ ಪ್ರಕ್ರಿಯೆಗೆ ಸಂಬಂಧಿಸಿ ಈ ವೈರುಧ್ಯಗಳೇಕೆ ಕಾಣಿಸುತ್ತಿವೆ? ಶೈಕ್ಷಣಿಕವಾಗಿ ಅತ್ಯಂತ ಮುಂದಿರುವ ಕೇರಳದಲ್ಲಿ ಜನನ ಅನುಪಾತ ದೇಶದಲ್ಲೇ ಅತ್ಯಂತ ಕಡಿಮೆಯಿದೆ. ಶೈಕ್ಷಣಿಕವಾಗಿ ಮುಂದಿರುವ ದಕ್ಷಿಣ ಭಾರತದಲ್ಲಿ ಜನನ ಪ್ರಕ್ರಿಯೆಯು ಉತ್ತರ ಭಾರತಕ್ಕೆ ಹೋಲಿಸಿದರೆ ಸಾಕಷ್ಟು ಕಡಿಮೆ. ಯಾಕೆ ಹೀಗೆ? ಒಂದು ರೀತಿಯಲ್ಲಿ, ತಾಯಂದಿರ ಹೊಟ್ಟೆಗೂ ಅವರು ಬದುಕುತ್ತಿರುವ ಪರಿಸರ, ಜೀವನ ಮಟ್ಟ, ಶಿಕ್ಷಣ, ಉದ್ಯೋಗ.. ಮುಂತಾದುವುಗಳಿಗೂ ಸಂಬಂಧ ಇದೆ. ಹಾಗಂತ, ಇದು ಪ್ರಭುತ್ವಕ್ಕೆ ಗೊತ್ತಿಲ್ಲ ಎಂದಲ್ಲ. ಈ ದೇಶದಲ್ಲಿ ಜನಸಂಖ್ಯೆಗೆ ಸಂಬಂಧಿಸಿ ಒಂದಕ್ಕಿಂತ ಹೆಚ್ಚು ಸವಿೂಕ್ಷೆಗಳಾಗಿವೆ. ಎಲ್ಲೆಲ್ಲಿ, ಯಾವ್ಯಾವ ಪ್ರದೇಶ ಮತ್ತು ಪರಿಸರದಲ್ಲಿ ಜನಸಂಖ್ಯೆ ಹೆಚ್ಚಿದೆ ಅಥವಾ ಕಡಿಮೆಯಿದೆ ಎಂಬುದನ್ನು ಅಂಥ ಸವಿೂಕ್ಷೆಗಳು ಪ್ರಭುತ್ವಕ್ಕೆ ಮನವರಿಕೆ ಮಾಡಿಕೊಟ್ಟಿವೆ. ಆದರೆ, ಬಡವರ ಹೊಟ್ಟೆಯನ್ನು ಕತ್ತರಿಸಿದಷ್ಟು ಸುಲಭವಾಗಿ ಜನರ ಜೀವನ ಮಟ್ಟವನ್ನು ಎತ್ತರಿಸಲು ಸಾಧ್ಯವಿಲ್ಲ ಅನ್ನುವುದು ಪ್ರಭುತ್ವಕ್ಕೆ ಚೆನ್ನಾಗಿ ಗೊತ್ತು. ಎಲ್ಲರಿಗೂ ಉತ್ತಮ ಶಿಕ್ಷಣ, ಆಹಾರ, ಉದ್ಯೋಗವನ್ನು ಒದಗಿಸುವುದಕ್ಕೆ ಪ್ರಬಲ ಇಚ್ಛಾಶಕ್ತಿ ಮತ್ತು ಬದ್ಧತೆಯ ಅಗತ್ಯವಿದೆ. ಅದಕ್ಕಿಂತ ತಾಯಂದಿರ ಹೊಟ್ಟೆಯನ್ನೇ ಅಪಾಯಕಾರಿಯಾಗಿ ಬಿಂಬಿಸುವುದು ಸುಲಭ ಮತ್ತು ಆಕರ್ಷಕ. ಅದನ್ನು ಪ್ರತಿಭಟಿಸುವ ಸಾಮರ್ಥ್ಯವಾಗಲಿ ಜ್ಞಾನವಾಗಲಿ ಬಡವರಲ್ಲಿರುವುದಿಲ್ಲ. ಸರಕಾರವು ಬಡವರನ್ನು ತೋರಿಸಿ ‘ಮಕ್ಕಳನ್ನು ಹುಟ್ಟಿಸುವ ಮೆಷೀನು’ಗಳೆಂದು ತಮಾಷೆ ಮಾಡುವಾಗ ಈ ವರ್ಗ ಒಳಗೊಳಗೇ ಅಪರಾಧಿ ಭಾವನೆಯಿಂದ ಕುಸಿಯತೊಡಗುತ್ತದೆ. ‘ನಿನಗೆಷ್ಟು ಮಕ್ಕಳು’ ಎಂದು ವೈದ್ಯರು ವ್ಯಂಗ್ಯದಿಂದ ಇರಿಯುತ್ತಾರೆ. ಜನಗಣತಿಗೆ ಬಂದವರು ‘ನಿಮ್ಮ ಮನೆ ಮಿನಿ ಅಂಗನವಾಡಿ’ ಎಂದು ಕುಟುಕುತ್ತಾರೆ. ಹಾಗೆಯೇ ಮಾಧ್ಯಮಗಳು ಕೂಡ ಜನನ ನಿಯಂತ್ರಣದ ಬಗ್ಗೆ ಮೇಲು ಮೇಲಿನ ವಿವರಣೆಗಳನ್ನು ನೀಡುತ್ತಿರುತ್ತವೆ. ಒಂದು ರೀತಿಯಲ್ಲಿ ಬಡವರನ್ನು ಅಣಕಿಸುವ ಸರಕಾರಿ ನಾಟಕವೇ ಜನಸಂಖ್ಯಾ ಸ್ಫೋಟ. ಬಡ ಹೊಟ್ಟೆಗೆ ಅನ್ನ ನೀಡುವ ಬದಲು ಹೊಟ್ಟೆಯನ್ನೇ ಅಪಾಯಕಾರಿ ಎಂದು ಘೋಷಿಸುವ ಕ್ರೌರ್ಯ ಇದು.
ಜನನ ಮತ್ತು ಮರಣ ಎರಡೂ ಪ್ರಾಕೃತಿಕವಾದುದು. ಅದು ನಿರಂತರ ಮತ್ತು ಸಹಜ. ಇದರಲ್ಲಿ ಒಂದನ್ನು ಅಪಾಯಕಾರಿ ಮತ್ತು ಇನ್ನೊಂದನ್ನು ಸಜ್ಜನ ಎಂದು ವಿಂಗಡಿಸುವುದು ನಮ್ಮ ಅಪ್ರಬುದ್ಧತೆಯನ್ನೇ ಸೂಚಿಸುತ್ತದೆ. ಭೌತಿಕತೆಯನ್ನೇ ಮಾನದಂಡವಾಗಿಸಿಕೊಂಡು ಮಾಡಲಾಗುವ ಅಭಿವೃದ್ಧಿ ಎಷ್ಟು ಅಪಾಯಕಾರಿಯೋ ಬಡತನವನ್ನು ಉಳಿಸಿಕೊಂಡೇ ಅಥವಾ ಬಡತನ ನಿರ್ಮೂಲನಕ್ಕಾಗಿ ಕ್ರಮಗಳನ್ನು ಕೈಗೊಳ್ಳದೆಯೇ ತಾಯಂದಿರ ಹೊಟ್ಟೆಯನ್ನು ಆಪತ್ತು ಎಂದು ಘೋಷಿಸುವುದು ಕೂಡ ಅಷ್ಟೇ ಅಪಾಯಕಾರಿ. ಮುಂದುವರಿದ ಕೆಲವು ರಾಷ್ಟ್ರಗಳಲ್ಲಿ ಜನನ ಪ್ರಕ್ರಿಯೆ ನಿಂತು ಹೋಗುತ್ತಿರುವುದಕ್ಕೆ ಪ್ರಮುಖ ಕಾರಣ ಅಲ್ಲಿನ ಜೀವನ ದೃಷ್ಟಿಕೋನ. ಗರ್ಭ ಧರಿಸುವುದು, ಮಕ್ಕಳ ಪಾಲನೆ, ಕುಟುಂಬ ನಿರ್ವಹಣೆ ಮುಂತಾದ ಜವಾಬ್ದಾರಿಗಳನ್ನು ಹೊರಲು ಮುಂದುವರಿದ ಪೀಳಿಗೆ ತಯಾರಾಗುತ್ತಿಲ್ಲ. ಬದುಕು ಅನುಭವಿಸಲಿಕ್ಕೇ ಹೊರತು ಜವಾಬ್ದಾರಿ ಹೊರಲಲ್ಲ ಎಂಬೊಂದು ವಾತಾವರಣ ಅಲ್ಲಿ ನಿರ್ಮಾಣವಾಗುತ್ತಿದೆ. ಗಂಡು-ಹೆಣ್ಣು ಇಬ್ಬರೂ ದುಡಿಯುವುದು ಮತ್ತು ಇಷ್ಟ ಬಂದಂತೆ ಬದುಕುವುದರ ಹೊರತಾಗಿ ಸಾಮಾಜಿಕ ಜವಾಬ್ದಾರಿಗಳು ಮುಂದುವರಿದ ರಾಷ್ಟ್ರಗಳ ಆಧುನಿಕ ಪೀಳಿಗೆಗಳಲ್ಲಿ ಕಡಿಮೆಗೊಳ್ಳುತ್ತಿದೆ. ಆದ್ದರಿಂದ, ಜನಸಂಖ್ಯೆಯ ಸುತ್ತ ಚರ್ಚೆ ನಡೆಸುವಾಗ ಈ ಎಲ್ಲ ಮಗ್ಗುಲುಗಳನ್ನೂ ಗಣನೆಗೆ ತೆಗೆದುಕೊಳ್ಳಬೇಕು. ಪ್ರಭುತ್ವ ತನ್ನ ಜವಾಬ್ದಾರಿಯನ್ನು ಬದ್ಧತೆಯಿಂದ ನಿರ್ವಹಿಸಿದರೆ ಪ್ರಕೃತಿಯ ಧಾರಣಾ ಸಾಮರ್ಥ್ಯದಷ್ಟೇ ಮಕ್ಕಳು ಹುಟ್ಟಿಯಾವು. ನಾವು ಬೊಟ್ಟು ಮಾಡಬೇಕಾದದ್ದು ಬಡ ತಾಯಂದಿರ ಹೊಟ್ಟೆಯನ್ನಲ್ಲ, ಪ್ರಭುತ್ವದ ಅಸಾಮರ್ಥ್ಯವನ್ನು. ಇಲ್ಲದಿದ್ದರೆ, ಚೀನಾ ಇವತ್ತು ಎದುರಿಸುತ್ತಿರುವ ವೃದ್ಧರ ಸಮಸ್ಯೆಯನ್ನು ಮುಂದೆ ನಾವೂ ಎದುರಿಸಬೇಕಾದೀತು.
No comments:
Post a Comment