Thursday 29 October 2015

15 ವರ್ಷಗಳ ಪ್ರತಿಭಟನೆ ಮತ್ತು ಆತಂಕ

       ಇರೋಮ್ ಶರ್ಮಿಳಾ ಆತಂಕದಲ್ಲಿದ್ದಾರೆ. ತಾನು ಒಂಟಿಯಾಗುತ್ತಿರುವೆನೇ ಎಂಬ ಅನುಮಾನವೊಂದು ಅವರನ್ನು ಕಾಡತೊಡಗಿದೆ. ಮಾಧ್ಯಮಗಳ ಮುಂದೆ ತನ್ನ ಆತಂಕವನ್ನು ಅವರು ಬಹಿರಂಗವಾಗಿಯೇ ತೋಡಿಕೊಂಡಿದ್ದಾರೆ. ತನ್ನ ನಿರಾಹಾರ ಸತ್ಯಾಗ್ರಹ ಪ್ರತಿಭಟನೆಯನ್ನು ಮುಂದುವರಿಸಬೇಕೋ ಕೈ ಬಿಡಬೇಕೋ ಎಂಬ ಕುರಿತು ಜನಮತ ಸಂಗ್ರಹ ನಡೆಸಬೇಕೆಂಬ ಇರಾದೆಯನ್ನೂ ವ್ಯಕ್ತಪಡಿಸಿದ್ದಾರೆ. ಮಣಿಪುರದ ಮೇಲೆ ಹೇರಲಾಗಿರುವ ಸಶಸ್ತ್ರ ದಳದ ವಿಶೇಷಾಧಿಕಾರ ಕಾಯ್ದೆ(AFSPA)ಯನ್ನು ಹಿಂತೆಗೆದುಕೊಳ್ಳಬೇಕೆಂದು ಆಗ್ರಹಿಸಿ ಪ್ರತಿಭಟಿಸುತ್ತಿರುವವರು ಈ ಶರ್ಮಿಳಾ. 1980 ಸೆ. 8ರಂದು ಕೇಂದ್ರ ಸರಕಾರವು ಮಣಿಪುರದಲ್ಲಿ ಈ ಕಾಯ್ದೆಯನ್ನು ಹೇರಿದಾಗ ಶರ್ಮಿಳಾ ಪುಟ್ಟ ಹುಡುಗಿ. ಈ ಕಾಯ್ದೆಯ ಬಗ್ಗೆ ಮತ್ತು ಅದು ಪೊಲೀಸರಿಗೆ ಒದಗಿಸುವ ಅಪರಿಮಿತ ಅಧಿಕಾರಗಳ ಬಗ್ಗೆ ತಿಳಿದುಕೊಳ್ಳುವ ವಯಸ್ಸು ಅದಾಗಿರಲಿಲ್ಲ. ಆದರೆ 2000ನೇ ಇಸವಿ ನವೆಂಬರ್ 2ರಂದು ಸಶಸ್ತ್ರ ಪಡೆಯ ಯೋಧರು ಮಣಿಪುರದ ರಾಜಧಾನಿ ಇಂಫಾಲ್‍ನಿಂದ 8 ಕಿ.ವಿೂ. ದೂರದ ಮಲ್ಲಮ್‍ನಲ್ಲಿ ಬಸ್ಸಿಗಾಗಿ ಕಾಯುತ್ತಿದ್ದ 10 ಮಂದಿಯ ಗುಂಪನ್ನು ಸುತ್ತುವರಿದು ಗುಂಡಿಕ್ಕಿ ಹತ್ಯೆಗೈದಾಗ ಶರ್ಮಿಳಾ ಬೆಳೆದಿದ್ದರು. ಈ ಪರಿಸರದಲ್ಲಿ ಆ ಮೊದಲು ಸ್ಫೋಟಗೊಂಡಿದ್ದ ಬಾಂಬನ್ನು (ಅದರಲ್ಲಿ ಯಾರೂ ಗಾಯಗೊಂಡಿರಲೂ ಇಲ್ಲ) ಆ ಗುಂಡಿನ ದಾಳಿಗೆ ಯೋಧರು ಕಾರಣವಾಗಿ ಕೊಟ್ಟದ್ದನ್ನು ಶರ್ಮಿಳಾ ಒಪ್ಪಿಕೊಳ್ಳಲಿಲ್ಲ. ಈ ಘಟನೆಯ ಎರಡು ದಿನಗಳ ಬಳಿಕ ಆಕೆ ನಿರಾಹಾರ ಸತ್ಯಾಗ್ರಹವನ್ನು ಆರಂಭಿಸಿದರು. ಯೋಧರಿಗೆ ನಿರಂಕುಶ ಅಧಿಕಾರವನ್ನು ಕೊಡುವ ಕಾನೂನನ್ನು ಕೇಂದ್ರ ಸರಕಾರವು ರಾಜ್ಯದಿಂದ ಮರಳಿ ಪಡೆಯದೇ ತಾನು ಸತ್ಯಾಗ್ರಹವನ್ನು ನಿಲ್ಲಿಸಲಾರೆ ಎಂದು ಘೋಷಿಸಿದರು. ಆ ಸಂದರ್ಭದಲ್ಲಿ ಶರ್ಮಿಳಾ ತುಂಬು ಯೌವನೆ. ಎಲ್ಲರಂತೆ ಉದ್ಯೋಗ, ಮದುವೆ, ಮಕ್ಕಳು, ಕುಟುಂಬ ಎಂದು ಕನಸು ಕಾಣುವ ವಯಸ್ಸು. ಶರ್ಮಿಳಾ ದಿನಗಳೆದಂತೆ ರಾಷ್ಟ್ರೀಯ ಸುದ್ದಿಯಾದಳು. ಮಣಿಪುರದಲ್ಲಿ ಸಶಸ್ತ್ರ ಪಡೆಯ ಯೋಧರು ನಡೆಸುತ್ತಿರುವ ದೌರ್ಜನ್ಯಗಳನ್ನು ಮಾಧ್ಯಮಗಳು ವಿಶೇಷ ಆಸಕ್ತಿಯಿಂದ ಪ್ರಕಟಿಸತೊಡಗಿದುವು. ಶರ್ಮಿಳಾ ನಿಶ್ಶಕ್ತಳಾದಳು. ಸರಕಾರ ಆಕೆಯನ್ನು ಬಂಧಿಸಿ ಮೂಗಿನ ಮೂಲಕ ದ್ರವಾಹಾರ ನೀಡಲೇಬೇಕಾದ ಅನಿವಾರ್ಯತೆಗೆ ಸಿಲುಕಿತು. ಮಾನವ ಹಕ್ಕು ಹೋರಾಟಗಾರರು ಶರ್ಮಿಳಾರ ಪರ ಧ್ವನಿಯೆತ್ತಿದರು. ‘ಸೇವ್ ಶರ್ಮಿಳಾ ಆರ್ಗನೈಝೇಶನ್' ಎಂಬ ಹೆಸರಲ್ಲಿ ತಂಡವೊಂದೂ ರಚನೆಯಾಯಿತು. ಶರ್ಮಿಳಾ ಆಸ್ಪತ್ರೆಯಿಂದ ಬಿಡುಗಡೆಗೊಂಡಾಗ ಸ್ವಾಗತಿಸುವುದಕ್ಕೆ ಸಾವಿರಾರು ಮಂದಿ ಸೇರುತ್ತಿದ್ದರು. ಆಕೆಯ ಸಂದರ್ಶನ, ವರದಿ, ಸುದ್ದಿಗಳು ರಾಷ್ಟ್ರಮಟ್ಟದಲ್ಲಿ ಆಗಾಗ ಪ್ರಕಟಗೊಳ್ಳುತ್ತಲೇ ಇದ್ದುವು. ಹೀಗೆ ಕಳೆದ 15 ವರ್ಷಗಳಿಂದ ಅತ್ಯಂತ ಬದ್ಧತೆಯಿಂದ ಸತ್ಯಾಗ್ರಹವನ್ನು ಮುಂದುವರಿಸಿಕೊಂಡು ಬಂದಿರುವ ಶರ್ಮಿಳಾರಿಗೆ ಈಗ ಒಂಟಿತನದ ಅನುಭವವಾಗುತ್ತಿದೆ. ಆಕೆ ಬಂಧನಕ್ಕೀಡಾದರೂ ಬಿಡುಗಡೆಗೊಂಡರೂ ಈಗ ಜನ ಸೇರುತ್ತಿಲ್ಲ. ಸೇವ್ ಶರ್ಮಿಳಾ ಆರ್ಗನೈಝೇಶನ್‍ನ ಮಂದಿಯೇ ಪ್ರತಿಭಟನೆಯಲ್ಲಿ ಆಸಕ್ತಿಯನ್ನು ಕಳಕೊಂಡಿದ್ದಾರೆ. ಮಾನವ ಹಕ್ಕು ಹೋರಾಟಗಾರರು ತಣ್ಣಗಾಗಿದ್ದಾರೆ. ಏರು ಯೌವನದಲ್ಲಿ ಹೋರಾಟವೊಂದನ್ನು ಹುಟ್ಟು ಹಾಕಿದ ಶರ್ಮಿಳಾರಿಗೆ ಈಗ ಮಧ್ಯವಯಸ್ಸು. ಜೊತೆಗಿದ್ದವರೆಲ್ಲ ಮದುವೆ, ಮಕ್ಕಳು, ಕುಟುಂಬ ಎಂದು ಚೆಲ್ಲಾಪಿಲ್ಲಿಯಾಗಿರುವಾಗ ಮತ್ತು ಹೊಸ ತಲೆಮಾರು ಈ ಸತ್ಯಾಗ್ರಹದಲ್ಲಿ ಆಕರ್ಷಣೆ ಕಳಕೊಂಡಿರುವಾಗ ಶರ್ಮಿಳಾ ಸಹಜವಾಗಿ ಮರು ಅವಲೋಕನಕ್ಕೆ ಇಳಿದಿದ್ದಾರೆ. ಈ ಪ್ರತಿಭಟನೆ ಎಲ್ಲಿಯ ವರೆಗೆ ಎಂಬೊಂದು ಪ್ರಶ್ನೆ ಅವರನ್ನು ಆಳವಾಗಿ ಇರಿಯತೊಡಗಿದೆ. ಅಷ್ಟಕ್ಕೂ,
  ಮಣಿಪುರದ ಜೆ.ಎನ್. ಇನ್ಸ್ ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಆಸ್ಪತ್ರೆಯ ಸುಸಜ್ಜಿತ ಕೋಣೆಯಲ್ಲಿ ಮೂಗಿನಲ್ಲಿ ದ್ರವಾಹಾರ ಸೇವಿಸುತ್ತಿರುವ ಶರ್ಮಿಳಾರಿಗಾಗಿ ಪ್ರತಿ ತಿಂಗಳು 80 ಸಾವಿರ ರೂಪಾಯಿ ಖರ್ಚು ಮಾಡುತ್ತಿರುವ ಅಲ್ಲಿನ ಸರಕಾರಕ್ಕೆ ಈ ಸುದ್ದಿ ಅತ್ಯಂತ ಇಷ್ಟ ಆಗಬಹುದು. ಶರ್ಮಿಳಾ ಸತ್ಯಾಗ್ರಹ ತ್ಯಜಿಸುವುದನ್ನು ಅದು ಎರಡೂ ಕೈಗಳಿಂದ ಸ್ವಾಗತಿಸಬಹುದು. ಆದರೆ ಈ ಬೆಳವಣಿಗೆ ಪ್ರತಿಭಟನೆಯ ಮೇಲೆ ಬೀರಬಹುದಾದ ಪರಿಣಾಮಗಳೇನು? ಪ್ರಜಾತಂತ್ರ ನೀಡಿರುವ ಪ್ರತಿಭಟನೆ ಎಂಬ ಅಸ್ತ್ರದ ಬಗ್ಗೆ ಯುವ ಪೀಳಿಗೆ ಹೊಂದಿರುವ ತೀವ್ರ ವೈರಾಗ್ಯದ ಸೂಚನೆಯಲ್ಲವೇ ಶರ್ಮಿಳಾರ ಆತಂಕ? ಶರ್ಮಿಳ ದ್ರವಾಹಾರ ಸೇವಿಸಿದರೂ ಘನಾಹಾರ ಸೇವಿಸಿದರೂ ಏನೂ ಬದಲಾವಣೆ ಆಗದು ಎಂಬೊಂದು ವಾತಾವರಣ ಸೃಷ್ಟಿಯಾಗಲು ಏನು ಕಾರಣ, ಯಾರು ಕಾರಣ? ಹಾಗಂತ, ವೈಯಕ್ತಿಕವಾಗಿ ಈ ಪ್ರತಿಭಟನೆಯ ಅಗತ್ಯ ಶರ್ಮಿಳಾರಿಗೆ ಖಂಡಿತಕ್ಕೂ ಇಲ್ಲ. ಮಲ್ಲಮ್‍ನಲ್ಲಿ ಸಾವಿಗೀಡಾಗ 16 ಮಂದಿಯಲ್ಲಿ ಆಕೆಯ ಮನೆಯವರು ಬಿಡಿ ಸಂಬಂಧಿಕರೂ ಇರುವ ಸಾಧ್ಯತೆ ಇಲ್ಲ. ಆಕೆ ಮನಸ್ಸು ಮಾಡಿದ್ದರೆ ಆಕೆಯ ವಯಸ್ಸಿನವರು ಇವತ್ತು ಆರಾಮವಾಗಿ ಬದುಕುತ್ತಿರುವಂತೆ, ಮಕ್ಕಳು, ಕುಟುಂಬ ಎಂದು ಎಲ್ಲೋ ಬದುಕುತ್ತಿರಬಹುದಿತ್ತು. ಇಷ್ಟಿದ್ದೂ, ಒಂದು ರಾಜ್ಯದ ಜನತೆಯ ಮೇಲಿನ ಕಾಳಜಿಯಿಂದ ಅತಿ ಕಷ್ಟಕರವಾದ ನಿರಾಹಾರ ಸತ್ಯಾಗ್ರಹಕ್ಕೆ ಮುಂದಾಗಿ ಇವತ್ತು ಆಕೆ ಜನ ಬೆಂಬಲದ ಕೊರತೆಯನ್ನು ಎದುರಿಸುತ್ತಿದ್ದರೆ ಅದಕ್ಕೆ ಹೊಸ ತಲೆಮಾರನ್ನೇ ಹೊಣೆಯಾಗಿಸಬೇಕಾಗುತ್ತದೆ. ಆಧುನಿಕ ಪೀಳಿಗೆಯ ಭಾಷೆಯಲ್ಲಿ ಹೇಳುವುದಾದರೆ ಪ್ರತಿಭಟನೆ ಎಂಬುದೇ ನಾಲಾಯಕ್ಕು. ಹೊಸ ತಲೆಮಾರು ಇವತ್ತು ಪ್ರತಿಭಟನೆಯಲ್ಲಿ ಆಸಕ್ತಿಯನ್ನೇ ಕಳಕೊಳ್ಳತೊಡಗಿದೆ. ಆಧುನಿಕ ಜೀವನ ಕ್ರಮವು ಎಂಜಾಯ್‍ಮೆಂಟ್ ಲೈಫ್‍ಸ್ಟೈಲ್ ಅನ್ನು ಕಲಿಸುತ್ತಿದೆಯೇ ಹೊರತು ಹೋರಾಟ ಮನೋಭಾವವನ್ನೇ ಸಮಾಜದಿಂದ ಕಿತ್ತುಕೊಳ್ಳುತ್ತಿದೆ. ‘ನಮ್ಮಷ್ಟಕ್ಕೆ ನಾವು' ಎಂಬೊಂದು ಸ್ವಹಿತಾಸಕ್ತಿ ಮನೋಭಾವವು ಯುವಪೀಳಿಗೆಯಲ್ಲಿ ಸ್ಪಷ್ಟವಾಗಿ ಎದ್ದು ಕಾಣುತ್ತಿದೆ. ಇನ್ನು, ಗೋವಿನ ವಿಷಯದಲ್ಲೋ ಭಿನ್ನ ಧರ್ಮದ ಯುವಕ-ಯುವತಿಯರ ಪ್ರೇಮದ ವಿಷಯದಲ್ಲೋ ಅಥವಾ ಮಸೀದಿ-ಮಂದಿರಕ್ಕೆ ಬಿದ್ದ ಕಲ್ಲಿನ ಹೆಸರಿನಲ್ಲೋ ತಕ್ಷಣಕ್ಕೆ ಸೇರುವ ನೂರಾರು ಯುವಕರಲ್ಲಿ ಬಹುತೇಕ ಯಾರೊಬ್ಬರೂ ಜನಪರ ಪ್ರತಿಭಟನೆಯಲ್ಲಿ ಕಾಣಿಸಿಕೊಳ್ಳುವುದೇ ಇಲ್ಲ. ನೀರು, ವಿದ್ಯುತ್, ರಸ್ತೆ, ನಿರುದ್ಯೋಗ, ಬೆಲೆ ಏರಿಕೆ.. ಮುಂತಾದ ವಿಷಯಗಳನ್ನೆತ್ತಿಕೊಂಡು ಏರ್ಪಡಿಸಲಾಗುವ ಪ್ರತಿಭಟನೆಗಳಲ್ಲಿ ಜನಸಂಖ್ಯೆ ಶೂನ್ಯ ಅನ್ನುವಷ್ಟು ಕಡಿಮೆ. ಇಂಥ ಸ್ಥಿತಿಯಲ್ಲಿ ಶರ್ಮಿಳಾರ ಆತಂಕವನ್ನು ನಾವು ಕೇವರ ಅವರೊಬ್ಬರಿಗೇ ಸೀಮಿತಗೊಳಿಸಿ ನೋಡಬೇಕಿಲ್ಲ. ನಿಜವಾಗಿ, ಪ್ರತಿಭಟನೆಯಲ್ಲಿ ಜನರು ಆಸಕ್ತಿಯನ್ನು ಕಳೆದುಕೊಂಡು ಬಿಟ್ಟರೆ ಅದರಿಂದ ಅತ್ಯಂತ ಖುಷಿಯಾಗುವುದು ಪ್ರಭುತ್ವಕ್ಕೆ. ಪ್ರತಿಭಟನೆಯನ್ನು ಪ್ರತಿ ಸಂದರ್ಭದಲ್ಲೂ ಸೋಲಿಸುವುದಕ್ಕೆ ಪ್ರಭುತ್ವ ಯಾವಾಗಲೂ ಹೊಂಚು ಹಾಕುತ್ತಲೇ ಇರುತ್ತದೆ. ಶರ್ಮಿಳಾ ಅದರ ಸೂಚನೆಯನ್ನು ನೀಡಿದ್ದಾರೆ. ಹಾಗಂತ, ಒಂದೂವರೆ ದಶಕದಿಂದ ನಿರಾಹಾರ ಸತ್ಯಾಗ್ರಹದಲ್ಲಿರುವ ಶರ್ಮಿಳಾ, ಇನ್ನೂ ಆಕೆಯೇ ಆ ಪ್ರತಿಭಟನೆಯನ್ನು ಮುಂದಕ್ಕೆ ಕೊಂಡೊಯ್ಯಬೇಕೆಂದು ಹೇಳುವುದು ಕ್ರೌರ್ಯವಾಗುತ್ತದೆ. ತನ್ನ ಬದುಕಿನ ಬಹು ಅಮೂಲ್ಯ ಸಮಯವನ್ನು ಆಕೆ ಆ ಹೋರಾಟಕ್ಕಾಗಿ ಅರ್ಪಿಸಿದ್ದಾರೆ. ಇವತ್ತು ಅವರು ಈ ಪ್ರತಿಭಟನೆಯಿಂದ ಬಿಡುವನ್ನು ಬಯಸುವುದಾದರೆ ಜನರು ಅದಕ್ಕೆ ಅವಕಾಶ ಮಾಡಿಕೊಡಬೇಕು. ಇತರರು ಆ ಪ್ರತಿಭಟನೆಯ ನೇತೃತ್ವವನ್ನು ವಹಿಸಿಕೊಳ್ಳಬೇಕು. ಪ್ರತಿಭಟನೆಗೆ ಭಿನ್ನ ದಿಕ್ಕು, ಹೊಸ ಚೈತನ್ಯವನ್ನು ಒದಗಿಸಬೇಕು.
  ಏನೇ ಆಗಲಿ, ಪ್ರತಿಭಟನೆ ಎಂಬ ಪ್ರಜಾತಂತ್ರ್ಯದ ಬಹು ಅಮೂಲ್ಯ ಅಸ್ತ್ರವು ನಾಲಾಯಕ್ಕು ಆಗದಂತೆ ನೋಡಿಕೊಳ್ಳಬೇಕಾದ ಅಗತ್ಯ ಎಲ್ಲರ ಮೇಲೂ ಇದೆ. ಬದಲಾದ ಕಾಲಕ್ಕೆ ತಕ್ಕಂತೆ ಅದಕ್ಕೆ ಹೊಸ ರೂಪ, ಭಾವ, ಅಂದವನ್ನು ನೀಡಬೇಕಾಗಿದೆ. ಶರ್ಮಿಳಾರ ಆತಂಕವು ಸುಳ್ಳಾಗಲಿ ಮತ್ತು ಅವರಿಗೆ ಯಶಸ್ಸು ಸಿಗಲಿ ಎಂದೇ ಹಾರೈಸೋಣ.

No comments:

Post a Comment