
ಬಹಿಷ್ಕಾರ ಎಂಬ ಪದಕ್ಕೆ ಈ ದೇಶದಲ್ಲಿ ಪ್ರಾಚೀನ ಇತಿಹಾಸ ಇದೆ. ಈ ಪದದ ತೀವ್ರತೆಯನ್ನು ಮೊಟ್ಟಮೊದಲು ಅನುಭವಿಸಿದವರು ದಲಿತರು. ಅಂಬೇಡ್ಕರ್‍ರಿಗೂ ಇದರ ಬಿಸಿ ತಟ್ಟಿದೆ. ಸಾರ್ವಜನಿಕ ಬಾವಿಯಿಂದ, ಅಂಗಡಿಯಿಂದ, ದೇವಸ್ಥಾನಗಳಿಂದ, ಸಾರ್ವಜನಿಕ ಸ್ಥಳಗಳಿಂದ ಬಹಿಷ್ಕೃತಗೊಂಡೇ ಶತಮಾನವನ್ನು ಅವರು ಕಳೆದಿದ್ದಾರೆ. ಅದರ ಪರಿಣಾಮ ಎಷ್ಟು ಭೀಕರ ಪ್ರಮಾಣದಲ್ಲಿ ಆಗಿದೆಯೆಂಬುದು ಇವತ್ತಿಗೂ ಸರಕಾರಿ ಕಚೇರಿಗಳು, ಮಾಧ್ಯಮದ ಆಯಕಟ್ಟಿನ ಜಾಗಗಳು, ಪೊಲೀಸ್ ಇಲಾಖೆ, ಪ್ರಭುತ್ವ, ರಾಜಕೀಯ ಪಕ್ಷಗಳ ಪ್ರಮುಖ ಸ್ಥಾನಗಳಲ್ಲಿ ಯಾರಿದ್ದಾರೆಂಬುದನ್ನು ಪರಿಶೀಲಿಸಿದರೆ ಸ್ಪಷ್ಟವಾಗುತ್ತದೆ. ಸ್ವಾತಂತ್ರ್ಯಾನಂತರ ದಲಿತ ವರ್ಗಕ್ಕೆ ವಿೂಸಲಾತಿಯನ್ನು ಒದಗಿಸಿದ್ದರೂ ಅವರು ವ್ಯವಸ್ಥೆಯ ಆಯಕಟ್ಟಿನ ಜಾಗಕ್ಕೆ ತಲುಪಬೇಕಾದಷ್ಟು ಪ್ರಮಾಣದಲ್ಲಿ ತಲುಪಿಲ್ಲ. ರಾಜಕೀಯದಲ್ಲಿ ಅವರು ತಮ್ಮ ಸಂಖ್ಯೆಗೆ ಅನುಗುಣವಾಗಿ ಬಲಶಾಲಿಯಾಗಿಲ್ಲ. ಮಾಧ್ಯಮಗಳ ನೀತಿ ನಿರೂಪಣಾ ಹಂತಕ್ಕೆ ಅವರಿನ್ನೂ ಏರಿಲ್ಲ. ದಲಿತ ಸಬಲೀಕರಣಕ್ಕಾಗಿ ಸರಕಾರ ಸರಣಿ ಕಾನೂನುಗಳನ್ನು ರಚಿಸಿದ ಬಳಿಕವೂ ಇವತ್ತೂ ದಲಿತರೆಂಬ ಕಾರಣಕ್ಕಾಗಿ ಅವರ ಮೇಲೆ ದೌರ್ಜನ್ಯಗಳು ನಡೆಯುತ್ತಲೇ ಇವೆ. ಇದೀಗ, ದಲಿತರನ್ನು ಬಹಿಷ್ಕಾರದ ಮೂಲಕ ಸತಾಯಿಸಿದ ಅದೇ ಗುಂಪು ಬಹಿಷ್ಕಾರದ ಹೊಸ ನಮೂನೆಯನ್ನು ಪ್ರಸ್ತುತಪಡಿಸುತ್ತಿದೆ. ಆದಿವಾಸಿ-ಹಿಂದುಳಿದ ಮಂದಿಯೇ ಹೆಚ್ಚಿರುವ ಬಸ್ತಾರ್‍ನಂತಹ ಜಿಲ್ಲೆಯಿಂದಲೇ ಈ ಬಹಿಷ್ಕಾರವನ್ನು ಜಾರಿಗೊಳಿಸುವ ಅತ್ಯಂತ ಬುದ್ದಿsವಂತಿಕೆಯನ್ನು ಅದು ಪ್ರದರ್ಶಿಸುತ್ತಲೂ ಇದೆ. ಈ ಬಹಿಷ್ಕಾರ ದಲಿತ ಬಹಿಷ್ಕಾರಕ್ಕಿಂತ ಹೆಚ್ಚು ಭಯಾನಕವಾದುದು. ಗೋವಿನ ಹೆಸರಲ್ಲಿ, ಮತಾಂತರ, ಸಂಸ್ಕೃತಿ, ವಿದೇಶಿ ಮೂಲದ ಹೆಸರಲ್ಲಿ ಮುಸ್ಲಿಮರನ್ನು ಮತ್ತು ಕ್ರೈಸ್ತರನ್ನು ಭಾರತೀಯತೆಯಿಂದ ಪ್ರತ್ಯೇಕಿಸಿ ಹೇಳುವುದು ಸುಲಭ ಮತ್ತು ಹೆಚ್ಚು ಭಾವನಾತ್ಮಕ. ‘ನಮ್ಮ ಪೂಜಾರ್ಹ ಪ್ರಾಣಿಯನ್ನು ಅವರು ಬೇಕೆಂದೇ ಅವಮಾನಿಸುತ್ತಾರೆ’ ಎಂದು ಹೇಳುವಾಗ ಅಲ್ಲೊಂದು ಭಾವುಕತೆ ಸೃಷ್ಟಿಯಾಗುತ್ತದೆ. ‘ಅವರಿಂದಾಗಿ ನಮ್ಮ ಸಂಸ್ಕøತಿ ಹಾಳಾಗಿದೆ, ನಮ್ಮ ಆಹಾರದಲ್ಲಿ ಧರ್ಮ ವಿರೋಧಿ ಅಂಶಗಳು ಸೇರಿಕೊಂಡಿವೆ..’ ಎಂದೆಲ್ಲಾ ಹೇಳುವಾಗ ಒಂದರ ವೈಭವೀಕರಣ ಮತ್ತು ಇನ್ನೊಂದರ ಅಸಹ್ಯೀಕರಣ ಕೂಡ ನಡೆಯುತ್ತದೆ. ಈ ಅಸಹ್ಯೀಕರಣವೇ ಅಂತಿಮವಾಗಿ ಸಮಾಜವನ್ನು ನಾವು ಮತ್ತು ಅವರು ಎಂದು ವಿಭಜಿಸುವುದಕ್ಕೆ ನೀಲನಕ್ಷೆಯನ್ನು ಒದಗಿಸುತ್ತದೆ. ದಲಿತರನ್ನು ಈ ದೇಶದಲ್ಲಿ ಬಹಿಷ್ಕಾರಕ್ಕೆ ತುತ್ತಾಗಿಸಿದ್ದು ಅವರ ಆಹಾರ, ಸಂಸ್ಕೃತಿ, ವರ್ಣ, ವೇಷ-ಭೂಷಣಗಳನ್ನು ಅಸಹ್ಯಗೊಳಿಸುವ ಮೂಲಕವೇ ಆಗಿತ್ತು. ಅವರನ್ನು ಸಂಸ್ಕೃತಿಹೀನರಂತೆ ಕಾಣಲಾಯಿತು. ಪದೇ ಪದೇ ಅವರ ವರ್ಣವನ್ನು ಹೀನೈಸಲಾಯಿತು. ಅವರ ಆಹಾರ ಪದ್ಧತಿಯನ್ನು ತುಚ್ಛೀಕರಿಸಲಾಯಿತು. ಹೀಗೆ ನಿಧಾನವಾಗಿ ಅವರು ಸಮಾಜದ ಮುಖ್ಯ ಧಾರೆಯಿಂದ ಕಳೆದುಹೋಗುತ್ತಾ ಆತ್ಮವಿಶ್ವಾಸವನ್ನು ಕಳಕೊಳ್ಳತೊಡಗಿದರು. ಇದೀಗ ಅದೇ ಮಾದರಿಯ ಪ್ರಯೋಗವನ್ನು ದೇಶದಾದ್ಯಂತ ಜಾರಿಗೊಳಿಸುವ ಪ್ರಯತ್ನವೊಂದು ನಡೆಯುತ್ತಿರುವಂತೆ ತೋರುತ್ತಿದೆ. ನಾವು ಮತ್ತು ಅವರು ಎಂಬೊಂದು ವಿಭಜನೆ. ಅವರು ಗೋವು ತಿನ್ನುವವರು, ಮತಾಂತರ ಮಾಡುವವರು, ಹೆಣ್ಣು ಮಕ್ಕಳನ್ನು ದುರುಪಯೋಗಿಸುವವರು.. ಎಂದೆಲ್ಲಾ ಹೇಳುತ್ತಾ ‘ಅವರಿಂದ' ಮುಕ್ತವಾದ ಪ್ರದೇಶಗಳನ್ನು ಹುಟ್ಟು ಹಾಕುವುದು. ಅವರಿಲ್ಲದ ಸಮಾಜವನ್ನು ಕಟ್ಟಿಕೊಳ್ಳುವುದು. ಬಸ್ತಾರ್ ಇದರ ಮುನ್ಸೂಚನೆ ಎಂದೇ ಹೇಳಬೇಕಾಗುತ್ತದೆ.
ಅಷ್ಟಕ್ಕೂ, ಈ ದೇಶದಲ್ಲಿ ಮಾಂಸಾಹಾರವನ್ನು ಪ್ರಾರಂಭಿಸಿದ್ದು ಮುಸ್ಲಿಮರೂ ಅಲ್ಲ, ಅದನ್ನು ವಿದೇಶಕ್ಕೆ ರಫ್ತು ಮಾಡುವಲ್ಲಿ ಅವರ ಕೈವಾಡವೂ ಇಲ್ಲ. ಈ ದೇಶದ ಒಟ್ಟು ಕಸಾಯಿಖಾನೆಗಳಲ್ಲಿ ಆಗುತ್ತಿರುವ ಮಾಂಸಕ್ಕಿಂತ ಹೆಚ್ಚು ಮಾಂಸವು ವಿದೇಶಕ್ಕೆ ರಫ್ತಾಗುತ್ತಿರುವುದನ್ನು ಮುಚ್ಚಿಟ್ಟು ಇವತ್ತು ಗೋಹತ್ಯೆಯನ್ನು ಮುಸ್ಲಿಮರ ತಲೆಗೆ ಕಟ್ಟಲಾಗುತ್ತಿದೆ. ಅವರನ್ನು ಭಯೋತ್ಪಾದಕರಂತೆ ಮತ್ತು ಅಸಹಿಷ್ಣುಗಳಂತೆ ಬಿಂಬಿಸಲಾಗುತ್ತಾ ಇದೆ. ಆದರೆ ಇದು ವಾಸ್ತವ ಅಲ್ಲ. ಈ ಪ್ರಚಾರದ ಹಿಂದೆ ಮುಸ್ಲಿಮರನ್ನು ಮತ್ತು ಕ್ರೈಸ್ತರನ್ನು ದಲಿತೀಕರಣಗೊಳಿಸುವ ಸಂಚೊಂದು ನಡೆಯುತ್ತಿರುವಂತೆ ತೋರುತ್ತಿದೆ. ಒಂದು ಕಡೆ ಅಭಿವೃದ್ಧಿಯ ಬಗ್ಗೆ ಮಾತಾಡುತ್ತಲೇ ಇನ್ನೊಂದೆಡೆ ನಡೆಯುತ್ತಿರುವ ಈ ಸಂಚನ್ನು ಭಾರತೀಯರು ವಿಫಲಗೊಳಿಸಬೇಕು. ಈ ದೇಶ ಎಲ್ಲರದು. ಎಲ್ಲರೂ ಜೊತೆಯಾಗಿ ಬಾಳುವ ತಾರತಮ್ಯ ರಹಿತ ಭಾರತ ನಮ್ಮ ಗುರಿಯಾಗಬೇಕು. ಮಾಂಸವು ಆಹಾರವಾಗಿ ಇದ್ದರೂ ಇಲ್ಲದಿದ್ದರೂ..
No comments:
Post a Comment