Wednesday 14 October 2015

ಅಖ್ಲಾಕ್‍ ನ ಮಾಂಸ, ಕಲ್ಬುರ್ಗಿ ವೈಚಾರಿಕತೆ ಮತ್ತು ಪ್ರಶಸ್ತಿಗಳ ಪ್ರತಿಭಟನೆ

      ಹಿಂಸೆ ಮತ್ತು ಪಾರಿತೋಷಕ ಜೊತೆಜೊತೆಗೇ ಸಾಗಲು ಸಾಧ್ಯವಿಲ್ಲ ಎಂಬ ಪ್ರತಿಭಟನಾ ಸಂದೇಶವೊಂದು ಸಾಹಿತ್ಯ
ವಲಯದಿಂದ ರವಾನೆಯಾಗಿದೆ. ಈ ಪ್ರತಿಭಟನೆಗೆ ನೇತೃತ್ವ ನೀಡಿರುವವರು 88 ವರ್ಷದ ಸಾಹಿತಿ ನಯನತಾರಾ ಸೆಹಗಲ್. ಅವರು ತಮಗೆ ಸಂದಿರುವ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿಯನ್ನು ಹಿಂತಿರುಗಿಸಿದ್ದಾರೆ. 1975ರಲ್ಲಿ ಇಂದಿರಾಗಾಂಧಿಯವರು ತುರ್ತು ಪರಿಸ್ಥಿತಿಯನ್ನು ಹೇರಿದಾಗ ಅದನ್ನು ಖಂಡಿಸಿ ಪ್ರತಿಭಟಿಸಿದವರು ಸೆಹಗಲ್. ಆಗ ಅವರ ಜೊತೆಗೆ ಅರುಣ್ ಶೌರಿ, ಕುಲದೀಪ್ ನಯ್ಯರ್, ರಜನಿ ಕೊಟಾರಿ, ಜಾರ್ಜ್ ಫರ್ನಾಂಡಿಸ್ ಮುಂತಾದವರು ಸೇರಿಕೊಂಡಿದ್ದರು. ಅವತ್ತು ಬಿಜೆಪಿಯ ಮಂದಿ ಸೆಹಗಲ್‍ರನ್ನು ಎಷ್ಟು ಮೆಚ್ಚಿಕೊಂಡಿದ್ದರೆಂದರೆ ಅವರನ್ನು ಮಾದರಿ ಸಾಹಿತಿಯೆಂದು ಘೋಷಿಸಿದ್ದರು. ಅದೇ ಸೆಹಗಲ್‍ರು ಇವತ್ತು ನರೇಂದ್ರ ಮೋದಿಯವರ ವಿರುದ್ಧ ದನಿಯೆತ್ತಿದ್ದಾರೆ. ಅವರ ಮೌನವನ್ನು ಪ್ರಶ್ನಿಸಿದ್ದಾರೆ. ಗೋವಿನ ಹೆಸರಲ್ಲಿ ನಡೆಯುತ್ತಿರುವ ಕ್ರೌರ್ಯ ಮತ್ತು ಪ್ರಗತಿಪರರ ಮೇಲಿನ ದಾಳಿಗೆ ಅವರು ತಮ್ಮ ತೀವ್ರ ವಿರೋಧವನ್ನು ವ್ಯಕ್ತಪಡಿಸಿದ್ದಾರೆ. ಹಾಗಂತ, ಈ ಪ್ರತಿಭಟನೆಯಲ್ಲಿ ಸೆಹಗಲ್ ಒಂಟಿಯಲ್ಲ. ಚಂಪಾ, ಕುಂವೀ, ಅರವಿಂದ ಮಾಲಗತ್ತಿ, ಅಮನ್ ಸೇಥಿ, ಅಶೋಕ್ ವಾಜಪೇಯಿ, ರಹಮತ್ ತರೀಕೆರೆ ಸೇರಿದಂತೆ ದೇಶದ ವಿವಿಧ ರಾಜ್ಯಗಳ ಸಾಹಿತಿಗಳು ತಮ್ಮ ಪ್ರಶಸ್ತಿಗಳನ್ನು ವಾಪಸು ಮಾಡಿಯೋ ಅಥವಾ ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯತ್ವಕ್ಕೆ ರಾಜೀನಾಮೆ ನೀಡಿಯೋ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ. ಹೀಗಿರುವಾಗಲೇ ಸಾಹಿತಿ ಸುಧೀಂದ್ರ ಕುಲಕರ್ಣಿಯವರಿಗೆ ಮಸಿ ಬಳಿಯಲಾಗಿದೆ. ಪಾಕ್ ಗಾಯಕ ಗುಲಾಮ್ ಅಲಿಯವರ ಕಾರ್ಯಕ್ರಮವನ್ನು ಶಿವಸೇನೆಯ ಒತ್ತಡದ ಮೇರೆಗೆ ರದ್ದುಗೊಳಿಸಲಾಗಿದೆ. ಒಂದು ರೀತಿಯಲ್ಲಿ, ‘ದ್ವಿತೀಯ ತುರ್ತು ಪರಿಸ್ಥಿತಿಯೊಂದು’ ಭಾಗಶಃ ಜಾರಿಯಲ್ಲಿರುವಂತೆ ತೋರುತ್ತಿದೆ. ನರೇಂದ್ರ ಮೋದಿ ನೇತೃತ್ವದ ಸರಕಾರದ ಬಗ್ಗೆ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಏನೆಲ್ಲ ಅನುಮಾನ ಪಡಲಾಗಿತ್ತೋ ಅವೆಲ್ಲವನ್ನೂ ನಿಜಗೊಳಿಸುವ ತುರ್ತೊಂದು ಇವತ್ತು ಎಲ್ಲೆಡೆಯೂ ಕಾಣಿಸುತ್ತಿದೆ. ಬಿಜೆಪಿ ಮತ್ತು ಅದರ ಬೆಂಬಲಿಗ ವಲಯವು ಹಿಂದೆಂದಿಗಿಂತಲೂ ಹೆಚ್ಚು ಆವೇಶಭರಿತವಾಗಿ ಮಾತಾಡುತ್ತಿದೆ. ಈ ಗುಂಪು ತಮಗೆ ವಿರುದ್ಧವಾದ ಯಾವುದನ್ನು ಸಹಿಸುತ್ತಿಲ್ಲ. ವೈಚಾರಿಕ ಭಿನ್ನಾಭಿಪ್ರಾಯಕ್ಕೆ ಬೆಲೆಯನ್ನೇ ನೀಡುತ್ತಿಲ್ಲ. ತಮ್ಮ ಅಭಿಪ್ರಾಯಕ್ಕೆ ವಿರುದ್ಧವಾದುದನ್ನೆಲ್ಲ ದೇಶವಿರೋಧಿ ಮತ್ತು ಧರ್ಮ ವಿರೋಧಿಯಂತೆ ಚಿತ್ರೀಕರಿಸುತ್ತಿದೆ. ಅಖ್ಲಾಕ್‍ನ ಸಾವನ್ನೂ ಸಮರ್ಥಿಸುವಷ್ಟರ ಮಟ್ಟಿಗೆ ಈ ಗುಂಪು ಸಂವೇದನಾರಹಿತವಾಗಿ ವರ್ತಿಸುತ್ತಿದೆ. ಈ ಎಲ್ಲ ಸಂದರ್ಭಗಳಲ್ಲಿ ಮಾತಾಡಬೇಕಿದ್ದ ಪ್ರಧಾನಿಯವರು ದೀರ್ಘ ಮೌನಕ್ಕೆ ಜಾರಿದ್ದಾರೆ. ಅಡ್ಡಾದಿಡ್ಡಿಯಾಗಿ ಮಾತಾಡುತ್ತಿರುವ ತನ್ನ ಸಂಪುಟ ಸಹೋದ್ಯೋಗಿಗಳನ್ನು ಮತ್ತು ಕಾರ್ಯಕರ್ತ ಪಡೆಯನ್ನು ತರಾಟೆಗೆತ್ತಿಕೊಳ್ಳುವ ಯಾವ ಪ್ರಯತ್ನವನ್ನೂ ಅವರು ಮಾಡುತ್ತಿಲ್ಲ. ದುರಂತ ಏನೆಂದರೆ, 1975ರಲ್ಲಿ ಸೆಹಗಲ್‍ರನ್ನು ಬೆಂಬಲಿಸಿದ್ದ ಅದೇ ಬಿಜೆಪಿ ಈ 2015ರಲ್ಲಿ ಅವರನ್ನು ವಿರೋಧಿಯಂತೆ ಕಾಣುತ್ತಿದೆ. ಅವರ ನಿಲುವನ್ನು ಗೇಲಿ ಮಾಡುತ್ತಿದೆ. ಆದ್ದರಿಂದಲೇ, ಸದ್ಯದ ವಾತಾವರಣವನ್ನು ನಾವು `ತುರ್ತು ಸ್ಥಿತಿ ಮರಳುವ' ಸೂಚನೆಯೆಂದೇ ಪರಿಗಣಿಸಬೇಕಾಗಿದೆ.
ಸೆಹಗಲ್

 ಅಷ್ಟಕ್ಕೂ, ಅಸಹಿಷ್ಣು ಭಾಷೆಯಲ್ಲಿ ಮಾತಾಡುತ್ತಿರುವ ಗುಂಪಿನ ಎದುರು ಸೆಹಗಲ್‍ರ ಗುಂಪು ಸಂಖ್ಯೆಯಲ್ಲಿ ತೀರ ಸಣ್ಣದು. ಅಸಹಿಷ್ಣು ಗುಂಪಿನ ಭಾಷೆಗೆ ವ್ಯಾಕರಣ ಇಲ್ಲ. ಪದ ಬಳಕೆಯಲ್ಲಿ ವಿವೇಚನೆಯಿಲ್ಲ. ದೇಹ ಭಾಷೆಯಲ್ಲಿ ಪ್ರೀತಿಯಿಲ್ಲ. ಆ ಗುಂಪು ಸಂದರ್ಭಕ್ಕೆ ತಕ್ಕಂತೆ ಅಸ್ತ್ರವನ್ನೂ ಎತ್ತಿಕೊಳ್ಳಬಲ್ಲುದು. ರಕ್ತವನ್ನೂ ಹರಿಸಬಲ್ಲುದು. ಅದು ದೇಶದ ಸಂವಿಧಾನವನ್ನು ಗೌರವಿಸುತ್ತಿಲ್ಲ. ಧಾರ್ಮಿಕ ವೈವಿಧ್ಯತೆಯನ್ನು ಇಷ್ಟಪಡುತ್ತಿಲ್ಲ. ಮನುಷ್ಯರನ್ನು ಹಿಂದೂ-ಮುಸ್ಲಿಮ್-ಕ್ರೈಸ್ತ ಎಂದು ಮುಂತಾಗಿ ಅದು ವಿಭಜಿಸುತ್ತಿದೆಯಲ್ಲದೇ ದ್ವೇಷವನ್ನೇ ಪೂರ್ಣಕಾಲಿಕ ಉದ್ಯೋಗವನ್ನಾಗಿ ನೆಚ್ಚಿಕೊಂಡಿದೆ. ಇದಕ್ಕೆ ಹೋಲಿಸಿದರೆ ಸೆಹಗಲ್‍ರ ಗುಂಪು ತೀರಾ ಅಲ್ಪಸಂಖ್ಯಾಕ. ಅದರ ಮುಂದಿರುವ ಆಯ್ಕೆಗಳೂ ಅಷ್ಟೇ ಅಲ್ಪಸಂಖ್ಯಾಕ. ಈ ಗುಂಪಿನ ಅಸ್ತ್ರವೆಂದರೆ ಪೆನ್ನು ಮಾತ್ರ. ಅದು ಬಳಸುವ ಭಾಷೆಯಲ್ಲಿ ವ್ಯಾಕರಣ ಇದೆ. ಪದ ಸೌಂದರ್ಯವಿದೆ. ದೇಹಭಾಷೆಯಲ್ಲಿ ಆಕರ್ಷಣೆಯಿದೆ. ಸಂದರ್ಭಕ್ಕೆ ತಕ್ಕಂತೆ ಅಸ್ತ್ರವನ್ನು ಎತ್ತಿಕೊಳ್ಳುವ ಮತ್ತು ದ್ವೇಷ ಕಾರುವ ಗುಣ ಈ ಗುಂಪಿಗೆ ಸಿದ್ಧಿಸಿಲ್ಲ. ಈ ಗುಂಪು ಹಿಂಸೆಗೆ ಕರೆ ಕೊಡುವುದಿಲ್ಲ. ಮನುಷ್ಯರನ್ನು ಹಿಂದೂ-ಮುಸ್ಲಿಮ್ ಆಗಿ ವಿಭಜಿಸುವುದಿಲ್ಲ. ಆದ್ದರಿಂದಲೇ ದಾಬೋಲ್ಕರ್, ಪನ್ಸಾರೆ, ಕಲ್ಬುರ್ಗಿಯವರ ಹತ್ಯೆ ನಡೆದ ಬಳಿಕವೂ ಈ ಗುಂಪು ಯಾರನ್ನೂ ಥಳಿಸಿ ಕೊಂದಿಲ್ಲ. ನಿಜವಾಗಿ, ಸಾಹಿತ್ಯ ವಲಯದ ಈ ಸಾತ್ವಿಕತೆಯು ಇವತ್ತು ಅಖ್ಲಾಕ್‍ನನ್ನು ಕೊಂದ ಮತ್ತು ಕಲ್ಬುರ್ಗಿಯಂತಹವರ ಕೊಲೆಯನ್ನು ಸಮರ್ಥಿಸುತ್ತಿರುವ ಗುಂಪಿನಿಂದ ಪ್ರಬಲ ಸವಾಲನ್ನು ಎದುರಿಸುತ್ತಿದೆ. ಈ ಸವಾಲು ಮಾನದ್ದು, ಪ್ರಾಣದ್ದು ಮತ್ತು ವೈಯಕ್ತಿಕ ಸ್ವಾತಂತ್ರ್ಯದ್ದು. ಈ ಸವಾಲನ್ನು ಮೆಟ್ಟಿ ನಿಲ್ಲಲು ಸಾಹಿತ್ಯ ವಲಯಕ್ಕೆ ಸಾಧ್ಯವಾಗದೇ ಹೋದರೆ, ಆ ಬಳಿಕ ಸಾಹಿತ್ಯವೆಂಬುದು ಈ ಗುಂಪಿನ ಕರಪತ್ರವಾಗಿ ಬಿಡುವ ಅಪಾಯವಿದೆ. ಈ ಗುಂಪು ಪ್ರಬಲವಾಗಿ ಬಿಟ್ಟರೆ ಅಥವಾ ಈ ಗುಂಪಿನ ಬೆದರಿಕೆಗೆ ಸಾಮಾಜಿಕ ಮನ್ನಣೆ ದೊರಕಿಬಿಟ್ಟರೆ ಅದರಿಂದಾಗಿ ಕಳೆದು ಹೋಗುವುದು ಸಾಹಿತಿಗಳಷ್ಟೇ ಅಲ್ಲ, ಸಾಹಿತ್ಯವೂ ಕೂಡ. ಆ ಬಳಿಕ ಕುಂವೀ ಏನನ್ನು ಬರೆಯಬೇಕೆಂದು ಈ ಗುಂಪು ನಿರ್ಧರಿಸುತ್ತದೆ. ಸೆಹಗಲ್‍ರು ಪ್ರಶಸ್ತಿ ವಾಪಸು ಮಾಡಬೇಕೋ ಬೇಡವೋ ಎಂಬುದು ಈ ಗುಂಪಿನ ಅಭಿಪ್ರಾಯದ ಆಧಾರದಲ್ಲಿ ನಿರ್ಧರಿತವಾಗುತ್ತದೆ. ಚಂಪಾ ಅವರು ಏನು ಮಾತಾಡಬೇಕೆಂಬುದನ್ನು ಅದು ನಿರ್ಧರಿಸುತ್ತದೆ. ಸರ್ವಾಧಿಕಾರಿಗಳ ಆಡಳಿತದಲ್ಲಿ ಉದ್ದಕ್ಕೂ ನಡೆದಿರುವುದು ಇದುವೇ. ತನ್ನ ವಿರೋಧಿಗಳ ಲಕ್ಷಾಂತರ ಪುಸ್ತಕಗಳನ್ನು ಸುಡುವ ಮೂಲಕವೇ ಹಿಟ್ಲರ್ ತನ್ನ ಆಡಳಿತಕ್ಕೆ ಚಾಲನೆ ಕೊಟ್ಟಿದ್ದ. ತನ್ನ ನಿರ್ದೇಶನವನ್ನು ಒಪ್ಪದ ಸಾಹಿತಿಗಳನ್ನು ಆತ ಒಂದೋ ಬಲವಂತದಿಂದ ಒಪ್ಪಿಸುತ್ತಿದ್ದ ಅಥವಾ ಕಲ್ಬುರ್ಗಿಯವರಂತೆ ನಡೆಸಿಕೊಳ್ಳುತ್ತಿದ್ದ. ಅಂದಹಾಗೆ,
      ಕಲ್ಬುರ್ಗಿ ಮತ್ತು ಅಖ್ಲಾಕ್‍ರ ಮಧ್ಯೆ ಖಂಡಿತ ವ್ಯತ್ಯಾಸಗಳಿವೆ. ಮಾತ್ರವಲ್ಲ, ಆ ವ್ಯತ್ಯಾಸಕ್ಕೆ ತಕ್ಕಂತೆಯೇ ಅವರನ್ನು ಹತ್ಯೆ ಗೈಯಲಾಗಿದೆ. ಆತಂಕ ಏನೆಂದರೆ, ಈ ಎರಡೂ ಹತ್ಯೆಗಳನ್ನು ಸಮರ್ಥಿಸುತ್ತಿರುವುದು ಒಂದೇ ಗುಂಪು. ಕಲ್ಬುರ್ಗಿಯವರ ಹತ್ಯೆಯನ್ನು ಸಮರ್ಥಿಸುವುದಕ್ಕೆ ಅವರ ನಿಲುವುಗಳನ್ನು  ಈ ಗುಂಪು ಕಾರಣವಾಗಿ ನೀಡುವಾಗ ಅಖ್ಲಾಕ್‍ನ ಹತ್ಯೆಗೆ ದನವನ್ನು ಕಾರಣವಾಗಿ ನೀಡುತ್ತಿದೆ. ಅಲ್ಲದೇ ಇಂಥ ಕೃತ್ಯಗಳಿಗೆ ‘ಹತ್ಯೆಯೇ ಸರಿ’ ಎಂಬ ಪರೋಕ್ಷ ಸೂಚನೆಯನ್ನು ಈ ಗುಂಪು ರವಾನಿಸಲು ಪ್ರಯತ್ನಿಸುತ್ತಿದೆ. ಆ ಮೂಲಕ ಕ್ರೌರ್ಯವೊಂದಕ್ಕೆ ಸಾಮಾಜಿಕ ಮನ್ನಣೆಯನ್ನು ದೊರಕಿಸಿಕೊಳ್ಳುವ ಯತ್ನವನ್ನೂ ಮಾಡುತ್ತಿದೆ. ನಿಜವಾಗಿ, ಅತ್ಯಂತ ಅಪಾಯಕಾರಿ ಸನ್ನಿವೇಶ ಇದು. ಅಖ್ಲಾಕ್‍ರು ಕಾನೂನುಬಾಹಿರ ಆಹಾರವನ್ನು ಸೇವಿಸಿದ್ದರೆ ಅಥವಾ ಸಂಗ್ರಹಿಸಿದ್ದರೆ ಅದನ್ನು ಪ್ರಶ್ನಿಸಬೇಕಾದದ್ದು ಈ ನೆಲದ ನ್ಯಾಯಾಂಗ ವ್ಯವಸ್ಥೆ. ಕಲ್ಬುರ್ಗಿಯವರಿಗೂ ಇದೇ ಮಾನದಂಡ ಅನ್ವಯಿಸುತ್ತದೆ. ಆದರೆ, ಅಖ್ಲಾಕ್‍ನ ಮಾಂಸ ಮತ್ತು ಕಲ್ಬುರ್ಗಿಯವರ ವೈಚಾರಿಕತೆಯನ್ನು ಈ ಗುಂಪು ಅಪರಾಧವಾಗಿ ತೋರಿಸುತ್ತಿದೆಯೇ ಹೊರತು ಅದನ್ನು ತೀರ್ಮಾನಿಸಬೇಕಾದವರು ಯಾರು ಎಂಬ ಮೂಲಭೂತ ಪ್ರಶ್ನೆಗೆ ಉತ್ತರಿಸುತ್ತಲೇ ಇಲ್ಲ. ಆದ್ದರಿಂದ ಈ ಗುಂಪಿನ ಸವಾಲನ್ನು ಸಾಹಿತ್ಯ ವಲಯ ಎದುರಿಸಲೇಬೇಕು. ಈ ಗುಂಪು ಪರ್ಯಾಯ ಸಂವಿಧಾನ ಆಗದಂತೆ ನೋಡಿಕೊಳ್ಳಬೇಕು. ಈ ಹಿನ್ನೆಲೆಯಲ್ಲಿ ಸಾಹಿತಿಗಳ ಪ್ರತಿಭಟನೆಯು ಅತ್ಯಂತ ಯೋಗ್ಯ ಮತ್ತು ಸ್ವಾಗತಾರ್ಹ. ಈ ಪ್ರತಿಭಟನೆಗೆ ಗೆಲುವಾಗಲಿ.




No comments:

Post a Comment