Tuesday, 7 February 2017

ಮೂತ್ರದಲ್ಲಿ ಚಿನ್ನ ಹುಡುಕುವವರ ಮಧ್ಯೆ...

      ಚಂದ್ರನ ಅಂಗಳದಲ್ಲಿ ಕೊನೆಯ ಬಾರಿ ಹೆಜ್ಜೆ ಊರಿದ ವ್ಯಕ್ತಿಯಾಗಿ ಗುರುತಿಸಿಕೊಂಡಿರುವ ಅಮೇರಿಕದ ಗಗನಯಾತ್ರಿ ಯುಗೆನೆ ಸೆರ್ನಾನ್ ಅವರ ನಿಧನದ ಎರಡು ದಿನಗಳ ಬಳಿಕ ವಿಜ್ಞಾನಿಗಳು ಮಂಗಳ ಗ್ರಹಕ್ಕೆ ಸಂಬಂಧಿಸಿ ಹೊಸ ಸಾಹಸವೊಂದಕ್ಕೆ ಕೈ ಹಾಕಿರುವ ಸುದ್ದಿ ಪ್ರಕಟವಾಗಿದೆ. ಈ ಸಾಹಸಕ್ಕೆ ವಿಜ್ಞಾನಿಗಳು ಹವಾಯಿ ದ್ವೀಪವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಅದಕ್ಕಾಗಿ ಅವರು ಸಮುದ್ರದಿಂದ 8,200 ಅಡಿ ಎತ್ತರದಲ್ಲಿ 1,200 ಚದರ ಅಡಿ ವಿಸ್ತೀರ್ಣದ ಗೋಲಾಕೃತಿಯ ಗುಮ್ಮಟವನ್ನು ತಯಾರಿಸಿದ್ದಾರೆ. ಮುಂದಿನ 8 ತಿಂಗಳ ಕಾಲ 6 ಮಂದಿ ವಿಜ್ಞಾನಿಗಳು ಅದರೊಳಗೆ ಸಂಶೋಧನೆಯಲ್ಲಿ ನಿರತರಾಗುತ್ತಾರೆ. ಇದರ ಸಂಪೂರ್ಣ ವೆಚ್ಚವನ್ನು ಅಮೇರಿಕದ ವ್ಯೋಮ ಯಾನ ಸಂಸ್ಥೆ ‘ನಾಸಾ’ ಭರಿಸಲಿದೆ. ಮಂಗಳಗ್ರಹ ಯಾತ್ರೆಯ ಸುತ್ತ ಸಂಶೋಧನೆಯಲ್ಲಿ ತೊಡಗುವುದು ಇದರ ಉದ್ದೇಶ. ಮುಂದಿನ 8 ತಿಂಗಳ ಕಾಲ ಈ 6 ಮಂದಿ ವಿಜ್ಞಾನಿಗಳು ಹೊರ ಜಗತ್ತಿನೊಂದಿಗೆ ಸಂಪರ್ಕವನ್ನು ಕಡಿದುಕೊಂಡಿರುತ್ತಾರೆ. ತಾವು ವಾಸಿಸುವ ಗುಮ್ಮಟದೊಳಗೆ ಮಂಗಳ ಗ್ರಹದ ವಾತಾವರಣವನ್ನು ಕೃತಕವಾಗಿ ಸೃಷ್ಟಿಸಿಕೊಂಡು ನಡೆಸುವ ಅಧ್ಯಯನ ಇದು. ಮಾನವ ಸಹಿತ ಮುಂದಿನ ಮಂಗಳ ಯಾನಕ್ಕೆ ನೆರವಾಗುವ ಗುರಿಯನ್ನು ವಿಜ್ಞಾನ ವಲಯ ಈ ಮೂಲಕ ಇಟ್ಟುಕೊಂಡಿದೆ.
        ನಿಜವಾಗಿ, ವರ್ಷದ 365 ದಿನಗಳಲ್ಲಿ ಅತ್ಯಂತ ಕಡಿಮೆ ಸುದ್ದಿಯಲ್ಲಿರುವ ಕ್ಷೇತ್ರವೆಂದರೆ ಅದು ವಿಜ್ಞಾನ ಕ್ಷೇತ್ರ. ರಾಜಕಾರಣಿಗಳು, ಸ್ವಘೋಷಿತ ಧರ್ಮರಕ್ಷಕರು, ಮಾನವ ದ್ವೇಷಿಗಳು.. ಇತ್ಯಾದಿಗಳು ಈ ಕ್ಷೇತ್ರದಲ್ಲಿ ಇಲ್ಲದೇ ಇರುವುದು ಇದಕ್ಕೆ ಕಾರಣ ಎಂದು ಥಟ್ಟನೆ ಹೇಳಿ ಬಿಡಬಹುದಾದರೂ ಇದುವೇ ಅಂತಿಮ ಅಲ್ಲ. ನಾವು ಇವತ್ತು ಅತ್ಯಂತ ಹೆಚ್ಚು ಅವಲಂಬಿತವಾಗಿರುವ ಮೊಬೈಲ್‍ನಿಂದ ಹಿಡಿದು ಟಿ.ವಿ.ಯ ವರೆಗೆ, ಕಂಪ್ಯೂಟರ್-ಇಂಟರ್‍ನೆಟ್‍ನಿಂದ ತೊಡಗಿ ಔಷಧಗಳ ವರೆಗೆ.. ಇವು ಯಾವುವೂ ರಾಜಕಾರಣಿಗಳ ನೇರ ಕೊಡುಗೆ ಅಲ್ಲ. ‘ಗೋವಿನ ಮೂತ್ರದಲ್ಲಿ ಚಿನ್ನದ ಅಂಶ ಇದೆ’ ಎಂದು ಓರ್ವ ರಾಜಕಾರಣಿ ಹೇಳಬಹುದೇ ಹೊರತು ಓರ್ವ ವಿಜ್ಞಾನಿ ಥಟ್ಟನೆ ಹೇಳಿಬಿಡಲಾರ. ಯಾಕೆ ಹೇಳಲಾರ ಅಂದರೆ, ಆತನ ಎದುರು ತಕ್ಷಣದ ಲಾಭ ಎಂಬುದಿಲ್ಲ. ಆತನಿಗೆ ಓಟು ಬೇಕಾಗಿಲ್ಲ. ಚಪ್ಪಾಳೆ ಗಿಟ್ಟಿಸಬಹುದಾದಂತಹ ಮಾತುಗಳು ಬೇಕಾಗಿಲ್ಲ. ಒಂದು ವಸ್ತುವಿನ ಸಂಶೋಧನೆಗಾಗಿ ಓರ್ವ ವಿಜ್ಞಾನಿ ವರ್ಷಗಳನ್ನು ಸವೆಸಿರುತ್ತಾನೆ. ಅಧ್ಯಯನಕ್ಕಾಗಿ ತನ್ನನ್ನೇ ಅರ್ಪಿಸಿರುತ್ತಾನೆ. ದುಡಿಮೆ, ದುಡಿಮೆ ಮತ್ತು ದುಡಿಮೆ.. ಇದು ವಿಜ್ಞಾನ ಕ್ಷೇತ್ರದ ಅತಿ ಮಹತ್ವಪೂರ್ಣ ಧ್ಯೇಯವಾಕ್ಯ. ಅದರ ಒಂದು ಸಣ್ಣ ಉದಾಹರಣೆಯನ್ನಷ್ಟೇ ನಾವು ಹವಾಯಿ ದ್ವೀಪದ ಸಂಶೋಧನಾ ಪ್ರಕ್ರಿಯೆಯಲ್ಲಿ ಕಾಣುತ್ತಿರುವುದು. ರಾತ್ರಿ ಬೆಳಗಾಗುವುದರೊಳಗೆ ಸ್ಟೀವ್ ಜಾಬ್ಸ್ ಗೆ ಐಪೋನನ್ನು ಸೃಷ್ಟಿಸುವುದಕ್ಕೆ ಸಾಧ್ಯವಾಗಿಲ್ಲ. ಗುರುತ್ವಾಕರ್ಷಣೆಯ ಸಿದ್ಧಾಂತವನ್ನು ಮಂಡಿಸುವುದರ ಹಿಂದೆ ನ್ಯೂಟನ್ ಅನೇಕ ನಿದ್ದೆಗಳನ್ನು ಕಳೆದಿರಬಹುದು. ಎಷ್ಟೋ ಏಕಾಂತದ ದಿನಗಳನ್ನು ಕಂಡಿರಬಹುದು. ಒಂದು ಮಾವು ತಲೆಗೆ ಬಿದ್ದ ತಕ್ಷಣ ನ್ಯೂಟನ್ ವಿಜ್ಞಾನಿಯಾಗುವುದಕ್ಕೆ ಸಾಧ್ಯವಿಲ್ಲ. ಆತ ಒಂದು ಗುಂಗಿನಲ್ಲಿದ್ದ. ಆ ಗುಂಗು ವರ್ಷಗಳ ವರೆಗೂ ಮುಂದುವರಿದಿರಬಹುದು. ಆ ದಿನಗಳಲ್ಲೆಲ್ಲ ಮಾವು ಮೇಲಿನಿಂದ ಕೆಳಕ್ಕೆ ಬೀಳುತ್ತಲೇ ಇತ್ತು. ಆದರೆ, ಒಂದು ಸಂದರ್ಭದಲ್ಲಿ ಆತನ ಹುಡುಕಾಟದ ಮನಸ್ಸನ್ನು ಅದು ತಾಗಿತು. ಒಂದು ವೇಳೆ, ನ್ಯೂಟನ್‍ನಲ್ಲಿ ರಾಜಕಾರಣಿಯ ಮನಸ್ಸಿರುತ್ತಿದ್ದರೆ ಏನಾಗುತ್ತಿತ್ತು? ಪ್ರತಿದಿನ ಆತ ಒಂದೊಂದು ಹೇಳಿಕೆಯನ್ನು ಕೊಡುವ ಸಕಲ ಸಾಧ್ಯತೆಯೂ ಇತ್ತು. ತಾನೊಂದು ಸಂಶೋಧನೆಯಲ್ಲಿದ್ದೇನೆ ಎಂದು ಒಂದು ದಿನ ಹೇಳುತ್ತಿದ್ದ. ಮರುದಿನ ಮತ್ತೊಂದು ಹೇಳಿಕೆಯನ್ನು ನೀಡುತ್ತಿದ್ದ. ಕೊನೆಗೆ ಸಂಶೋಧನೆ ಬಿಟ್ಟು ಜನಪ್ರಿಯ ಸುದ್ದಿ ಸೃಷ್ಟಿಸುವುದನ್ನೇ ಪೂರ್ಣಕಾಲಿಕ ಸಂಶೋಧನೆಯನ್ನಾಗಿ ಮಾಡಿಕೊಳ್ಳುತ್ತಿದ್ದ.
ರಾಜಕಾರಣಿಗಳು ಯಾವ ಪ್ರಾಣಿಯ ಮೂತ್ರದಲ್ಲಿ ಯಾವ್ಯಾವ ದಿವ್ಯೌಷಧವನ್ನು ಬೇಕಾದರೂ ಪತ್ತೆ ಹಚ್ಚಬಹುದು. ಆದರೆ ವಿಜ್ಡಾನ ಕ್ಷೇತ್ರದಿಂದ ಈ ಪವಾಡ ಸಾಧ್ಯವಿಲ್ಲ. ಅಲ್ಲಿ ದುಡಿಮೆ ಇದೆ. ಪ್ರಾಮಾಣಿಕ ಶ್ರಮ ಇದೆ. ಸದ್ಯದ ತುರ್ತು ಅಗತ್ಯ ಏನೆಂದರೆ, ಈ ಕ್ಷೇತ್ರವನ್ನು ಜನಪ್ರಿಯಗೊಳಿಸುವುದು. ಮಾನವ ದ್ವೇಷಿಗಳು, ಸ್ವಘೋಷಿತ ಧರ್ಮರಕ್ಷಕರ ಹಿಂಬಾಲಕರಾಗದಂತೆ ಆಧುನಿಕ ತಲೆಮಾರನ್ನು ತಡೆಯುವುದು. ಒಂದು ಕಡೆ ಅತ್ಯಂತ ಸುದ್ದಿಯಲ್ಲಿರುವ ರಾಜಕೀಯದಂಥ ಕ್ಷೇತ್ರವಿದ್ದರೆ, ಇನ್ನೊಂದು ಕಡೆ, ಸಂಪೂರ್ಣ ಕತ್ತಲು ಕವಿದಂತೆ ಕಾಣಿಸುವ ಸುದ್ದಿಯೇ ಇರದ ಕ್ಷೇತ್ರವೊಂದಿದೆ. ಆಧುನಿಕ ತಲೆಮಾರಿನ ಮಟ್ಟಿಗೆ ಈ ಎರಡರಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳುವ ಸಂದರ್ಭ ಎದುರಾಗುವಾಗ ಅವರು ಸುದ್ದಿಯಲ್ಲಿರುವುದರತ್ತ ಆಕರ್ಷಿತರಾಗುವುದು ಸಹಜ. ಆದ್ದರಿಂದ ಸುದ್ದಿಯಲ್ಲಿರದ ವಿಜ್ಞಾನ ಕ್ಷೇತ್ರವನ್ನು ಜನಪ್ರಿಯಗೊಳಿಸುವ ಪ್ರಯತ್ನಗಳು ತುರ್ತಾಗಿ ಆಗಬೇಕಾಗಿದೆ.


ಯುಗೆನೆ ಸೆರ್ನಾನ್
          ಜಗತ್ತು ಹೊಸ ಹೊಸ ಸೌಲಭ್ಯಗಳಿಂದ ಶ್ರೀಮಂತಗೊಳ್ಳುತ್ತಿರುವುದರ ಜೊತೆಗೇ ಅದರ ಅಡ್ಡ ಪರಿಣಾಮಗಳ ಆಘಾತದಿಂದ ಸಂಕಟ ಪಡುತ್ತಲೂ ಇದೆ. ಹೊಸ ಹೊಸ ಕಾಯಿಲೆಗಳು ಪರಿಚಿತವಾಗುತ್ತಿವೆ. ಮಣ್ಣು, ನೀರು, ವಾಯು ಮಲಿನವಾಗುತ್ತಿದೆ. ಉಸಿರಾಡುವ ಗಾಳಿಯಿಂದ ಹಿಡಿದು ತಿನ್ನುವ ಆಹಾರದ ವರೆಗೆ ಎಲ್ಲವೂ ವರ್ಜಿಸಲೇ ಬೇಕಾದ ಪಟ್ಟಿಯಲ್ಲಿ ಸ್ಥಾನ ಪಡಕೊಳ್ಳುತ್ತಿವೆ. ಅದರ ಜೊತೆಗೇ ಯಾವುದನ್ನೂ ವರ್ಜಿಸಲೇಬಾರದಂತಹ ಅನಿವಾರ್ಯತೆಯೂ ಎಲ್ಲರ ಎದುರಿದೆ. ಇದರ ಮಧ್ಯೆಯೇ ರಾಜಕಾರಣಿ ಎಂಬ ಇನ್‍ಸ್ಟಂಟ್ ವಿಜ್ಞಾನಿ, ವಿಜ್ಞಾನದ ಹೆಸರಲ್ಲಿ ದಿನಕ್ಕೊಂದು ಸುಳ್ಳುಗಳನ್ನು ಹೇಳುತ್ತಾ ತಿರುಗಾಡುತ್ತಿರುತ್ತಾರೆ. ಅವರಿಗೆ ತಮ್ಮ ಗುರಿಯತ್ತ ಸಾಗುವುದಕ್ಕೆ ಅಂಥ ಸುಳ್ಳುಗಳ ಅಗತ್ಯವಿರುತ್ತದೆ. ಇವೆಲ್ಲವುಗಳ ನಡುವೆಯೇ ಹೊಸ ಪೀಳಿಗೆಯಲ್ಲಿ ವಿಜ್ಞಾನ ಕ್ಷೇತ್ರವನ್ನು ಜನಪ್ರಿಯಗೊಳಿಸುವ ಜವಾಬ್ದಾರಿ ನಮ್ಮ ಮೇಲಿದೆ. ಮುಖ್ಯವಾಗಿ, ಶಾಲಾ ಹಂತದಲ್ಲಿಯೇ ಮಕ್ಕಳಲ್ಲಿ ಸಂಶೋಧನಾ ಪ್ರಜ್ಞೆಯನ್ನು ಬೆಳೆಸುವ ಪ್ರಯತ್ನ ಆಗಬೇಕು. ಪ್ರತಿಯೊಂದರಲ್ಲೂ ಕುತೂಹಲವನ್ನು ಹುಟ್ಟಿಸಬೇಕು. ಹೊಸತಿನ ಬಗ್ಗೆ ಆಲೋಚಿಸುವ ಮತ್ತು ಕಂಡು ಹುಡುಕುವ ಪ್ರಜ್ಞೆಯನ್ನು ಮಕ್ಕಳಲ್ಲಿ ಬೆಳೆಸಬೇಕು. ನಮಗೆ ಸದ್ಯ ಕುತೂಹಲಭರಿತ ಮಕ್ಕಳ ಅಗತ್ಯ ಇದೆ. ಶ್ರಮ ವಹಿಸಿ ದುಡಿಯುವ ಪೀಳಿಗೆಯ ಜರೂರತ್ತು ಇದೆ. ಒಂದು ದೇಶ ಬರೇ ರಾಜಕಾರಣಿಗಳಿಂದ ನಡೆಯಲಾರದು. ಒಂದು ವೇಳೆ ನಡೆದರೂ ಆ ನಡೆ ಪ್ರಚಲಿತ ಜಗತ್ತಿಗೆ ಹೋಲಿಸಿದರೆ ನೂರಾರು ವರ್ಷಗಳಷ್ಟು ಪುರಾತನ ಕಾಲದ್ದಾಗಿರಬಹುದು. ಜಗತ್ತನ್ನು ಆಧುನಿಕಗೊಳಿಸುವವರು ವಿಜ್ಞಾನಿಗಳು. ವಿಜ್ಞಾನಿಗಳೆಂದರೆ, ಹೊಸತನ್ನು ಕೊಡಲೇ ಬೇಕಾದವರು ಎಂದಲ್ಲ. ಒಂದು ಗುರಿಯನ್ನು ನಿಗದಿಪಡಿಸಿ ಅದರ ಸಾಕಾರಕ್ಕಾಗಿ ಶ್ರಮ ವಹಿಸಿ ದುಡಿಯುವವರು ಎಂದರ್ಥ. ತಮ್ಮ ಶ್ರಮದ ಮೇಲೆ ಅಪಾರ ಭರವಸೆಯನ್ನು ಇಟ್ಟವರು. ಈ ದೇಶಕ್ಕೆ ಸದ್ಯ ಈ ವರ್ಗದ ಅಗತ್ಯ ಇದೆ. ಆದ್ದರಿಂದಲೇ, ವಿಜ್ಞಾನ ಕ್ಷೇತ್ರವನ್ನು ಈಗಾಗಲೇ ಜನಪ್ರಿಯವಾಗಿರುವ ಕ್ಷೇತ್ರಕ್ಕೆ ಪರ್ಯಾಯವಾಗಿ ಬೆಳೆಸಬೇಕಾಗಿದೆ. ಹೊಸ ತಲೆಮಾರಿನ ಆದ್ಯತೆಯ ಪಟ್ಟಿಯಲ್ಲಿ ವಿಜ್ಞಾನ ಪ್ರಥಮ ಸ್ಥಾನದಲ್ಲಿ ಇರುವಂತೆ ನೋಡಿಕೊಳ್ಳಬೇಕಾಗಿದೆ. ಹವಾಯಿ ದ್ವೀಪದಲ್ಲಿ ಸಮುದ್ರ ಮಟ್ಟದಿಂದ 8,200 ಅಡಿ ಎತ್ತರದಲ್ಲಿ ಎಲ್ಲರಿಂದಲೂ ಎಲ್ಲದರಿಂದಲೂ ಕಳಚಿಕೊಂಡು ಸಂಶೋಧನೆಯಲ್ಲಿ ತೊಡಗಿರುವ ವಿಜ್ಞಾನಿಗಳು ನಿಜಕ್ಕೂ ಸುದ್ದಿಯಲ್ಲಿರುವುದಕ್ಕೆ ಅರ್ಹರಾದವರು. ಅವರ ಬದ್ಧತೆ, ತ್ಯಾಗ ಖಂಡಿತ ಅಭಿನಂದನಾರ್ಹ.

No comments:

Post a Comment