Monday 17 April 2017

ಕುರೇಶಿ: ಕೆಲವು ಪ್ರಶ್ನೆಗಳು

     ಅಹ್ಮದ್ ಕುರೇಶಿ ಅನ್ನುವ ಹೆಸರು ಮುಸ್ಲಿಮ್ ಸಮುದಾಯವನ್ನು ಪ್ರತಿನಿಧಿಸುವುದರಿಂದಲೋ ಏನೋ ‘ಮಾನವ ಹಕ್ಕು’ ಎಂಬ ವಿಶಾಲ ವಿಷಯದಡಿ ಚರ್ಚೆಗೊಳಗಾಗಬೇಕಿದ್ದ ಮತ್ತು ಮನುಷ್ಯರೆಲ್ಲರೂ ಮಾತಾಡಬೇಕಿದ್ದ ಪ್ರಕರಣವೊಂದು ‘ಒಂಟಿ’ಯಾಗಿದೆ. ಕುರೇಶಿ ಮಂಗಳೂರಿನ ಯುವಕ. ಆತ ಸದ್ಯ ಆಸ್ಪತ್ರೆಯ ತೀವ್ರ ನಿಗಾ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಆತನ ಎರಡೂ ಕಿಡ್ನಿಗಳು ವಿಫಲಗೊಂಡಿವೆ. ಮಂಗಳೂರಿನ ಕ್ರೈಂ ಬ್ರಾಂಚ್ ಪೆÇಲೀಸರು 6 ದಿನಗಳ ಕಾಲ ಅಕ್ರಮ ಬಂಧನದಲ್ಲಿರಿಸಿ ನೀಡಿದ ದೌರ್ಜನ್ಯದ ಫಲಿತಾಂಶವೇ ಈ ಕಿಡ್ನಿ ವೈಫಲ್ಯ ಎಂಬ ಆರೋಪ ಆತನ ಕುಟುಂಬ ಮತ್ತು ವಕೀಲರದ್ದು. ನಿಜವಾಗಿ, ಕುರೇಶಿ ಪ್ರಕರಣವು ಯಾವ ಕಾರಣಕ್ಕೂ ಮುಸ್ಲಿಮ್ ಸಮುದಾಯದ ಪ್ರಕರಣವಾಗಿ ಗುರುತಿಸಿಕೊಳ್ಳುವುದಕ್ಕೆ ಸಾಧ್ಯವೇ ಇಲ್ಲ. ಆತನ ಮೇಲೆ ಗೋಸಾಗಾಟದ ಆರೋಪ ಇಲ್ಲ. ‘ಲವ್ ಜಿಹಾದ್’ನ ತಕರಾರು ಇಲ್ಲ. ಹಲ್ಲೆ ಪ್ರಕರಣವೊಂದಕ್ಕೆ ಸಂಬಂಧಿಸಿ ವಿಚಾರಣೆಗೆ ಬೇಕಾಗಿದ್ದ ಎಂಬುದನ್ನು ಬಿಟ್ಟರೆ ಆತ ಸಹಜ ಮನುಷ್ಯ. ಆದ್ದರಿಂದಲೇ, ಪ್ರತಿಭಟನೆಯಲ್ಲಿ ಕೂಡ ಈ ಸಹಜತೆ ವ್ಯಕ್ತವಾಗಬೇಕಿತ್ತು ಎಂದು ಅನಿಸುವುದು. ಕುರೇಶಿಯ ಮೇಲೆ ನಡೆದಿರುವ ದೌರ್ಜನ್ಯವನ್ನು ಬಜರಂಗದಳ ಖಂಡಿಸಬಹುದಿತ್ತು. ಆರೆಸ್ಸೆಸ್, ವಿಶ್ವ ಹಿಂದೂ ಪರಿಷತ್, ಶ್ರೀರಾಮ ಸೇನೆ ಸಹಿತ ಎಲ್ಲ ಸಂಘಟನೆಗಳೂ ಏಕಧ್ವನಿಯಲ್ಲಿ ಖಂಡಿಸುವುದಕ್ಕೆ ಅರ್ಹ ಪ್ರಕರಣ ಇದು. ಯಾಕೆ ಹಿಂದೂ ಸಂಘಟನೆಗಳು ಈ ಪ್ರಕರಣದಲ್ಲಿ ತಮ್ಮ ಧ್ವನಿಯನ್ನು ಎತ್ತಬೇಕಿತ್ತು ಅಂದರೆ ಇಂಥ ದೌರ್ಜನ್ಯ ನಾಳೆ ಯಾರ ಮೇಲೂ ಆಗಬಹುದು. ದೌರ್ಜನ್ಯಕ್ಕೆ ಒಳಗಾಗುವ ವ್ಯಕ್ತಿ ಬಜರಂಗದಳವೋ ವಿಶ್ವಹಿಂದೂ ಪರಿಷತ್ತೋ ಇನ್ನಾವುದಕ್ಕೋ ಸೇರಿರಬಹುದು ಅಥವಾ ಯಾವ ಸಂಘಟನೆಗೂ ಸೇರದ ಮತ್ತು ಮನುಷ್ಯ ಎಂಬ ವಿಶಾಲ ಜಗತ್ತಿನ ಪ್ರತಿನಿಧಿ ಮಾತ್ರವೂ ಆಗಿರಬಹುದು. ಅನ್ಯಾಯವನ್ನು ಖಂಡಿಸುವುದಕ್ಕೆ ಅನ್ಯಾಯಕ್ಕೊಳಗಾದವನ ಧರ್ಮ-ಜಾತಿ-ಭಾಷೆ ಮುಖ್ಯ ಆಗಬಾರದಲ್ಲ. ದುರಂತ ಏನೆಂದರೆ, ಸದ್ಯ ಮನುಷ್ಯ ವಿಭಜನೆಗೊಂಡಿದ್ದಾನೆ. ಹಾಗಂತ ಆತ ಮಾತ್ರ ವಿಭಜನೆಗೊಂಡಿರುವುದಲ್ಲ. ನ್ಯಾಯ-ಅನ್ಯಾಯ, ಒಳಿತು-ಕೆಡುಕು, ಸರಿ-ತಪ್ಪುಗಳೂ ವಿಭಜನೆಗೊಂಡಿವೆ. ಮುಸ್ಲಿಮರಿಗೆ ಅನ್ಯಾಯವಾದರೆ ಆ ಬಗ್ಗೆ ಹೇಳಿಕೆಯನ್ನೇ ಕೊಡಬಾರದ ನಿಯಮವೊಂದು ಬಜರಂಗದಳದಲ್ಲಿ ಇದೆ ಎಂದು ನಂಬುವಷ್ಟರ ಮಟ್ಟಿಗೆ ಅದು ಮೌನ ಪಾಲಿಸುತ್ತದೆ. ಹಿಂದೂಗಳಿಗೆ ಅನ್ಯಾಯವಾದರೆ ಆ ಬಗ್ಗೆ ಮೌನ ಪಾಲಿಸುವ ಸ್ಥಿತಿಯು ಕೆಲವು ಮುಸ್ಲಿಮ್ ಸಂಘಟನೆಗಳಲ್ಲೂ ಇವೆ. ಈ ಬಿರುಕನ್ನು ಸರಿಪಡಿಸುವುದು ಹೇಗೆ? ಮಾನವ ಹಕ್ಕು ಎಂಬುದು ಹಿಂದೂ ಸಂಘಟನೆಗಳಿಗೂ ಮುಸ್ಲಿಮ್ ಸಂಘಟನೆಗಳಿಗೂ ಸಮಾನವಾದುದು. ನೋವು, ಹಸಿವು, ಕಣ್ಣೀರು ಇತ್ಯಾದಿ ಇತ್ಯಾದಿಗಳಲ್ಲಿ ಮುಸ್ಲಿಮರಿಗೂ ಹಿಂದೂಗಳಿಗೂ ವ್ಯತ್ಯಾಸವೇನೂ ಇಲ್ಲ. ವ್ಯಕ್ತಿ ಯಾವ ಸಂಘಟನೆಯಲ್ಲೇ ಗುರುತಿಸಿಕೊಳ್ಳಲಿ, ರಾತ್ರಿಯಾದಾಗ ನಿದ್ದೆ ಮಾಡುತ್ತಾನೆ. ಹಸಿವಾದಾಗ ಉಣ್ಣುತ್ತಾನೆ. ಮಕ್ಕಳೊಂದಿಗೆ ಕರಗುತ್ತಾನೆ. ಸಾವಿಗೆ ಕಣ್ಣೀರು ಸುರಿಸುತ್ತಾನೆ. ಮನುಷ್ಯ ಎಂಬ ನೆಲೆಯಲ್ಲಿ ಹಿಂದೂ-ಮುಸ್ಲಿಮರ ಮಧ್ಯೆ ಶೇ. 98ರಷ್ಟು ಚಟುವಟಿಕೆಗಳೂ ಸಮಾನ. ಆಹಾರ, ಆರಾಧನೆ, ಭಾಷೆ ಮುಂತಾದ ಎಣಿಕೆಯ ಕೆಲವೇ ವಿಷಯಗಳನ್ನು ಹೊರತುಪಡಿಸಿದರೆ ಜೊತೆಯಾಗಿಯೇ ಕೂತು ಉಣ್ಣಬೇಕಾದವರು ಎಂದು ಹೇಳುವಷ್ಟು ಇವರಿಬ್ಬರ ನಡುವೆ ಸಮಾನತೆಗಳಿವೆ. ಇಂಥ ಮನುಷ್ಯರೆಲ್ಲ ಒಟ್ಟು ಸೇರಿಕೊಂಡು ತಮ್ಮಿಷ್ಟದ ಗುಂಪು ರಚಿಸಿಕೊಂಡ ಕೂಡಲೇ ಯಾಕೆ ನಾವು ಮತ್ತು ಅವರು ಆಗುತ್ತಾರೆ? ಅವರ ನೋವುಗಳು ನಮ್ಮ ಸಂಭ್ರಮವಾಗಿ ಅಥವಾ ನಮ್ಮ ನೋವುಗಳು ಅವರ ಸಂಭ್ರಮವಾಗಿ ಯಾಕೆ ಬದಲಾಗುತ್ತವೆ? ಕುರೇಶಿ ಇಲ್ಲಿ ಒಂದು ಉದಾಹರಣೆ ಮಾತ್ರ. ನಾಳೆ ಕುರೇಶಿಯ ಜಾಗದಲ್ಲಿ ಕುಮಾರನೂ ಕಾಣಿಸಿಕೊಳ್ಳಬಹುದು. ಆಗ ಬಜರಂಗದಳ ಮಾತ್ರ ಖಂಡಿಸಬೇಕೆ? ಇಂಥದ್ದೊಂದು ವಾತಾವರಣ ದೇಶವನ್ನು ಎಲ್ಲಿಗೆ ಕೊಂಡೊಯ್ದೀತು?
    ಸಂಘಟನೆಗಳಿಗೂ ಸಮಾಜಕ್ಕೂ ಸಂಬಂಧ ಇದೆ. ಎಲ್ಲ ಸಂಘಟನೆಗಳೂ ಸಮಾಜ ಸುಧಾರಣೆಯ ಉದ್ದೇಶವನ್ನಿಟ್ಟುಕೊಂಡೇ ಜನ್ಮತಾಳುತ್ತವೆ ಅಥವಾ ಅವು ಹಾಗೆ ಹೇಳಿಕೊಳ್ಳುತ್ತವೆ. ಈ ಸುಧಾರಣೆ ಎಂದರೆ ಏನು? ಸಂಘಟನೆಗಳಿಗೆ ಅವುಗಳದ್ದೇ ಆದ ಅಜೆಂಡಾ, ನೀತಿ, ನಿಯಮಗಳಿರುವುದು ತಪ್ಪಲ್ಲ. ಕಾರ್ಯ ಚಟುವಟಿಕೆಗಳಿಗೆ ಅಂಥ ಚೌಕಟ್ಟುಗಳು ಅನಿವಾರ್ಯ ಎಂದೂ ಹೇಳಬಹುದು. ಆದರೆ, ಆ ಅಜೆಂಡಗಳು ಮನುಷ್ಯ ವಿರೋಧಿ ಆಗಬಾರದು ಎಂಬುದಷ್ಟೇ ಮೂಲಭೂತ ನಿಯಮವಾಗಿರಬೇಕು. ಸದ್ಯ ಕಾರ್ಯ ಚಟುವಟಕೆಯಲ್ಲಿರುವ ಹಿಂದೂ ಮತ್ತು ಮುಸ್ಲಿಮ್ ಸಂಘಟನೆಗಳನ್ನೆಲ್ಲ ಈ ಮೂಲಭೂತ ನಿಯಮದ ಪರಿಧಿಯೊಳಗಿಟ್ಟು ತಪಾಸಿಸಿದರೆ, ಯಾವ ಫಲಿತಾಂಶ ಹೊರ ಬಿದ್ದೀತು? ಮನುಷ್ಯರ ನಡುವಿನ ಸಂಬಂಧವನ್ನು ಸುಧಾರಿಸುವುದಕ್ಕಿಂತ ಉತ್ತಮ ಸಂಬಂಧವನ್ನು ಕೆಡಿಸುವುದನ್ನೇ `ಸುಧಾರಣೆ’ಯಾಗಿ ಇವೆಲ್ಲ ತಮ್ಮ ಕಾರ್ಯ ನೀತಿಯಾಗಿ ಅಳವಡಿಸಿಕೊಂಡಿವೆಯೋ ಎಂದು ಅನುಮಾನಿಸುವಂಥ ಸ್ಥಿತಿ ನಿರ್ಮಾಣವಾಗಿರುವುದೇಕೆ? ಸಮಾಜದಲ್ಲಿ ಸುಧಾರಣೆಗೆ ಒಳಗಾಗಬೇಕಾದ ಅನೇಕಾರು ಅಂಶಗಳಿವೆ. ಮದುವೆ, ದುಬಾರಿ ಶಿಕ್ಷಣ, ಹಸಿವು, ನೀರುದ್ಯೋಗ, ಬಡತನ, ಕಾಯಿಲೆ.. ಹೀಗೆ ಪಟ್ಟಿ ಮಾಡಿದರೂ ಮುಗಿಯದಷ್ಟು ವಿಷಯಗಳಿವೆ. ಇವುಗಳನ್ನು ನಾವು ಹಿಂದೂ-ಮುಸ್ಲಿಮ್ ಎಂದು ವಿಭಜಿಸಬೇಕಿಲ್ಲ. ಯಾಕೆಂದರೆ, ಈ ವಿಷಯಗಳಲ್ಲಿ ಎರಡೂ ಸಮುದಾಯಗಳೂ ಸಮಾನ ದುಃಖಿಗಳು. ಆದ್ದರಿಂದ, ಹಿಂದೂ ಮತ್ತು ಮುಸ್ಲಿಮ್ ಸಂಘಟನೆಗಳು ಜೊತೆಯಾಗಿ ಈ ವಿಷಯಗಳ ಮೇಲೆ ಯಾಕೆ ಕಾರ್ಯಪ್ರವೃತ್ತವಾಗಬಾರದು? ಬಜರಂಗದಳದಲ್ಲಿರುವುದೂ ಮನುಷ್ಯರೇ. ಮುಸ್ಲಿಮ್ ಸಂಘಟನೆಗಳಲ್ಲಿರುವುದೂ ಮನುಷ್ಯರೇ. ಮಾತ್ರವಲ್ಲ ಇಲ್ಲಿರುವ ಸಮಸ್ಯೆಗಳೂ ಮನುಷ್ಯರದ್ದೇ. ಇಷ್ಟಿದ್ದೂ ಬಜರಂಗದಳವು ಮುಸ್ಲಿಮ್ ವಿರೋಧಿ ಹಣೆಪಟ್ಟಿಯನ್ನು ಹಚ್ಚಿಕೊಳ್ಳುವುದು ಮತ್ತು ಮುಸ್ಲಿಮ್ ಸಂಘಟನೆಗಳು ಹಿಂದೂ ವಿರೋಧಿಯಾಗಿ ಬಿಂಬಿತಗೊಳ್ಳುವುದೆಲ್ಲ ಯಾಕೆ? ಹಿಂದೂ ಮತ್ತು ಮುಸ್ಲಿಮರ ಮಧ್ಯೆ ಪರಸ್ಪರ ಶೇ. 98ರಷ್ಟು ಸಮಾನಾಂಶಗಳು ಇರುವಾಗ ಇಲ್ಲದೇ ಇರುವ ಜುಜುಬಿ ಶೇ. 2ರಷ್ಟು ವಿಷಯಗಳೇ ಮುಖ್ಯವಾಗಿ ಸುದ್ದಿಯಲ್ಲಿರುವುದು ಯಾತಕ್ಕಾಗಿ? ಒಂದು ವೇಳೆ, ಹಿಂದೂ ಮತ್ತು ಮುಸ್ಲಿಮ್ ಸಂಘಟನೆಗಳು ಜೊತೆಗೂಡಿಕೊಂಡು ಕಾರ್ಯ ಚಟುವಟಿಕೆಗೆ ಇಳಿದರೆ ಏನಾಗಬಹುದು? ಯಾವ ಪರಿವರ್ತನೆಗಳು ಉಂಟಾಗಬಹುದು? ದೇಶದ ಅಭಿವೃದ್ಧಿಗೆ ಏನೆಲ್ಲ ಕೊಡುಗೆಗಳು ಸಲ್ಲಿಕೆಯಾಗಬಹುದು? ಭಿನ್ನಾಭಿಪ್ರಾಯವಿರುವ ಶೇ. 2ರಷ್ಟು ಅಂಶಗಳನ್ನು ಮಾತುಕತೆಯ ಮೂಲಕವೋ ಕಾನೂನಿನ ಮೂಲಕವೋ ಬಗೆಹರಿಸಿಕೊಂಡು ಸರ್ವರ ಹಿತಕ್ಕಾಗಿ ಒಂದಾಗಿ ದುಡಿಯುವ ಸಂದರ್ಭವೊಂದನ್ನು ನಮಗೆ ಸೃಷ್ಟಿಸಿಕೊಳ್ಳಲು ಸಾಧ್ಯವಿಲ್ಲವೇ? ಕುರೇಶಿಯೂ ಕುಮಾರನೂ ಬೇರೆ ಬೇರೆ ಸಂಘಟನೆಯಲ್ಲಿದ್ದುಕೊಂಡೇ ಜೊತೆಗೂಡಲು ಮತ್ತು ನ್ಯಾಯಕ್ಕಾಗಿ ಹೋರಾಡಲು ಅವಕಾಶವಿಲ್ಲವೇ?
      ಕುರೇಶಿಯ ಮೇಲೆ ನಡೆದಿರುವ ದೌರ್ಜನ್ಯ ಮತ್ತು ಆ ಬಳಿಕದ ಬೆಳವಣಿಗೆಗಳು ಖಂಡಿತ ಆತಂಕಕಾರಿ. ಮಾನವ ಹಕ್ಕುಗಳು ಹಿಂದೂ-ಮುಸ್ಲಿಮ್ ಆಗಿ ವಿಭಜಿಸಿರುವುದಕ್ಕೆ ಇದು ಸ್ಪಷ್ಟ ಉದಾಹರಣೆ. ಇದು ಕೊನೆಗೊಳ್ಳಬೇಕು. ಮನುಷ್ಯರನ್ನೆಲ್ಲ ಒಂದುಗೂಡಿಸುವುದಕ್ಕೆ ಕಾರಣವಾಗಬೇಕಾದ ಪ್ರಕರಣವೊಂದು ಅವರನ್ನು ವಿಭಜಿಸಲು ಕಾರಣವಾದುದಕ್ಕೆ ನಾವೆಲ್ಲ ವಿಷಾದ ಪಡಬೇಕು. ಪೂಜಾರಿ ಮೇಲೆ ಸುರತ್ಕಲ್‍ನಲ್ಲಿ ನಡೆದಿರುವ ಹಲ್ಲೆ ಮತ್ತು ಉರ್ವ ಠಾಣೆಯ ಎ.ಎಸ್.ಐ. ಐತಪ್ಪರ ಮೇಲೆ ನಡೆದ ಹಲ್ಲೆಗಳು ಹೇಗೆ ಖಂಡನಾರ್ಹವೋ ಹಾಗೆಯೇ ಕುರೇಶಿ ವಿರುದ್ಧದ ದೌರ್ಜನ್ಯವೂ ಖಂಡನಾರ್ಹ. ಇವರೆಲ್ಲ ಮನುಷ್ಯರು. ಮನುಷ್ಯರ ಸಂಕಟಗಳು ಹಿಂದೂ-ಮುಸ್ಲಿಮ್ ಆಗಿ ವಿಭಜನೆಗೊಳ್ಳದಿರಲಿ. 

No comments:

Post a Comment