Thursday 4 May 2017

ಅಸ್ಪೃಶ್ಯತೆಯನ್ನು ತೊಲಗಿಸಲು ವಿಫಲವಾದ ಸಂವಿಧಾನ ಮತ್ತು ತಲಾಕ್

      ಸಮಾನ ನಾಗರಿಕ ಸಂಹಿತೆ ಮತ್ತು ತಲಾಕ್‍ನ ಕುರಿತಾದ ಚರ್ಚೆಯನ್ನು ಆಲ್ ಇಂಡಿಯಾ ಮುಸ್ಲಿಮ್ ಪರ್ಸನಲ್ ಲಾ ಬೋರ್ಡ್ (AIMPLB) ಹೊಸದೊಂದು ಮಜಲಿಗೆ ಒಯ್ದಿದೆ. ತಲಾಕನ್ನು ದುರುಪಯೋಗಿಸುವವರ ವಿರುದ್ಧ ಸಾಮಾಜಿಕ ಬಹಿಷ್ಕಾರ ಹೇರಬೇಕೆಂದು ಅದು ಕರೆಕೊಟ್ಟಿದೆ. ತಲಾಕನ್ನು ದುರುಪಯೋಗಿಸಿದವರ ವಿರುದ್ಧ ಹರ್ಯಾಣದ ಮೇವಾತ್‍ನಲ್ಲಿ 25 ವರ್ಷಗಳ ಹಿಂದೆಯೇ ಸಾಮಾಜಿಕ ಬಹಿಷ್ಕಾರ ಹೇರಲಾದುದನ್ನು ಮತ್ತು ದುರುಪಯೋಗವನ್ನು ತಡೆಯುವಲ್ಲಿ ಅದು ಪರಿಣಾಮಕಾರಿಯಾದುದನ್ನು ಬೋರ್ಡ್ ಉಲ್ಲೇಖಿಸಿದೆ. ನಿಜವಾಗಿ, ಬೋರ್ಡ್‍ನ ಈ ಕರೆ ಬಹು ಆಯಾಮವುಳ್ಳದ್ದು. ಒಂದು ಕಡೆ, ಕೇಂದ್ರ ಸರಕಾರವು ತಲಾಕ್‍ನ ವಿಷಯದಲ್ಲಿ ಅತಿ ಆಸಕ್ತಿಯನ್ನು ತೋರುತ್ತಿದೆ. ಮುಸ್ಲಿಮ್ ಮಹಿಳೆಯರ ಹಿತ ರಕ್ಷಕನಂತೆ ತನ್ನನ್ನು ಬಿಂಬಿಸಿಕೊಳ್ಳುತ್ತಿದೆ. ತ್ರಿವಳಿ ತಲಾಕ್‍ನಿಂದ ಕಂಗೆಟ್ಟ ಮಹಿಳೆಯರನ್ನು ಭೇಟಿಯಾಗುವಂತೆ ಪ್ರಧಾನಿ ನರೇಂದ್ರ ಮೋದಿಯವರು ತನ್ನ ಕಾರ್ಯಕರ್ತರಿಗೆ ಆದೇಶಿಸಿದ್ದಾರೆ. ಇನ್ನೊಂದು ಕಡೆ, ತಲಾಕ್‍ಗೆ ಸಂಬಂಧಿಸಿ ಸುಪ್ರೀಮ್ ಕೋರ್ಟ್‍ನಲ್ಲಿ ಒಂದಕ್ಕಿಂತ ಹೆಚ್ಚು ದೂರುಗಳಿವೆ. ಸಮಾನ ನಾಗರಿಕ ಸಂಹಿತೆಯನ್ನು ಜಾರಿಗೊಳಿಸುವ ಕುರಿತೂ ಅದು ಕೇಂದ್ರದ ಅಭಿಪ್ರಾಯವನ್ನು ಕೇಳಿದೆ. ಇಂಥ ಸಂದರ್ಭದಲ್ಲಿ ಮುಸ್ಲಿಮ್ ಪರ್ಸನಲ್ ಲಾ ಬೋರ್ಡ್‍ನ ನಿಲುವು ಮಹತ್ವಪೂರ್ಣವಾಗುತ್ತದೆ. ಯಾವುದೇ ಒಂದು ಸಮಸ್ಯೆಯನ್ನು ಬಗೆಹರಿಸುವುದಕ್ಕಿಂತ ಮೊದಲು ಸಮಸ್ಯೆ ಇದೆ ಎಂದು ಒಪ್ಪಿಕೊಳ್ಳುವುದು ಬಹುಮುಖ್ಯ ಅಂಶ. ಮುಸ್ಲಿಮ್ ಪರ್ಸನಲ್ ಲಾ ಬೋರ್ಡ್ ಈಗ ಮತ್ತು ಈ ಮೊದಲೂ ಸಮಸ್ಯೆ ಇದೆ ಎಂಬುದನ್ನು ಒಪ್ಪಿಕೊಂಡಿದೆ. ಭಿನ್ನಾಭಿಪ್ರಾಯ ಇರುವುದು ಇದನ್ನು ಪರಿಹರಿಸುವ ವಿಧಾನ ಯಾವುದು ಎಂಬುದರಲ್ಲಿ. ಕಾನೂನಿನ ಮೂಲಕ ಪರಿಹಾರ ಕಂಡುಕೊಳ್ಳಲು ಕೇಂದ್ರ ಸರಕಾರವು ಒಲವು ತೋರುತ್ತಿದ್ದರೆ, ಆಂತರಿಕ ಸುಧಾರಣೆಯನ್ನು ಇದಕ್ಕೆ ಪರಿಹಾರವಾಗಿ ಮುಸ್ಲಿಮ್ ಪರ್ಸನಲ್ ಲಾ ಬೋರ್ಡ್ ಮುಂದಿಡುತ್ತಿದೆ. ಸಾಮಾಜಿಕ ಬಹಿಷ್ಕಾರ ಎಂಬುದು ಈ ನಿಟ್ಟಿನಲ್ಲಿ ಅತ್ಯಂತ ಕ್ರಾಂತಿಕಾರಿ ಪ್ರಸ್ತಾಪ. ನಿಜವಾಗಿ ವಿವಾಹ, ವಿಚ್ಛೇದನ, ಆಸ್ತಿ ಹಕ್ಕು, ದತ್ತು ಸ್ವೀಕಾರ.. ಮುಂತಾದ ವಿಷಯಗಳನ್ನು ಕೋರ್ಟ್‍ನ ಹೊರಗೆ ಶರೀಅತ್‍ನಂತೆ ಬಗೆಹರಿಸಿಕೊಳ್ಳುವ ಸ್ವಾತಂತ್ರ್ಯವನ್ನು ಮುಸ್ಲಿಮರಿಗೆ ಒದಗಿಸಿದ್ದು ಕೇಂದ್ರ ಸರಕಾರವೋ ಸುಪ್ರೀಮ್ ಕೋರ್ಟೋ ಅಲ್ಲ, ಅಂಬೇಡ್ಕರ್ ಕೊಡಮಾಡಿದ ಭಾರತೀಯ ಸಂವಿಧಾನ. ಅದೇ ಸಂವಿಧಾನವು ಅಸ್ಪೃಶ್ಯತೆಯನ್ನು ಉಚ್ಛಾಟಿಸುವುದಕ್ಕೆ ಬಿಗಿ ನಿಯಮಗಳನ್ನೂ ಘೋಷಿಸಿದೆ. ಒಂದಕ್ಕಿಂತ ಹೆಚ್ಚು ಪರಿಚ್ಛೇದಗಳನ್ನೂ ಅಳವಡಿಸಿಕೊಂಡಿದೆ. ಆದರೆ, ಈ ಸಂವಿಧಾನಕ್ಕೆ 6 ದಶಕಗಳು ಸಂದ ಬಳಿಕವೂ ಅದರ ಪರಿಚ್ಛೇದಗಳನ್ನು ಮತ್ತು ಬಿಗು ನಿಲುವುಗಳನ್ನು ಭಾರತೀಯ ಸಮಾಜವು ಎಷ್ಟು ಬಾಲಿಶವಾಗಿ ಪರಿಗಣಿಸಿದೆ ಎಂಬುದಕ್ಕೆ ಪ್ರತಿದಿನ ದೇಶದಲ್ಲಿ ನಡೆಯುತ್ತಿರುವ ದಲಿತ ದೌರ್ಜನ್ಯ ಪ್ರಕರಣಗಳೇ ಸಾಕ್ಷಿ. ಇವತ್ತಿಗೂ ದಲಿತರಿಗೆ ದೇಗುಲ ಪ್ರವೇಶವು ಅತಿ ಸಾಹಸದ ಚಟುವಟಿಕೆಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ. ಈ ದೇಶದ ಆಯಕಟ್ಟಿನ ಭಾಗಗಳಿಗೆ ದಲಿತ ಇನ್ನೂ ಏರಿಲ್ಲ ಅಥವಾ ಏರುವ ಪ್ರಯತ್ನವನ್ನು ಮಧ್ಯದಲ್ಲೇ ತಡೆಯಲಾಗುತ್ತದೆ. ಸಂವಿಧಾನ ರಚಿಸುವಾಗ ಈ ದೇಶದಲ್ಲಿ ಯಾವ ವರ್ಗ ನಿರ್ಣಾಯಕ ಸ್ಥಾನವನ್ನು ಅಲಂಕರಿಸಿತ್ತೋ ಮತ್ತು ನೀತಿ-ನಿರೂಪಣೆಯ ಸ್ಥಾನದಲ್ಲಿ ಕುಳಿತಿತ್ತೋ ಬಹುತೇಕ ಇಂದೂ ಅದೇ ವರ್ಗ ಆ ಸ್ಥಾನವನ್ನು ಉಳಿಸಿಕೊಂಡಿದೆ. ಸಂವಿಧಾನ ರಚಿಸುವಾಗ ಇದ್ದ ತಲೆಮಾರು ಗತಿಸಿ ಹೋಗಿ ಹೊಸ ತಲೆಮಾರು ಬಂದ ಬಳಿಕವೂ ಪರಿಸ್ಥಿತಿಯಲ್ಲಿ ನಿರೀಕ್ಷಿತ ಸುಧಾರಣೆ ಉಂಟಾಗದಿರಲು ಕಾರಣವೇನು? ನಿಜವಾಗಿ, ಅಸ್ಪೃಶ್ಯತೆಯು ಮನಸ್ಸಿಗೆ ಸಂಬಂಧಿಸಿದ್ದು. ಕಾನೂನು ಎಂಬುದು ಭಯ ಹುಟ್ಟಿಸಬಹುದೇ ಹೊರತು ಮನಸ್ಸಿನ ಕಾಯಿಲೆಗೆ ಔಷಧಿ ಆಗಲಾರದು. ಮನಸ್ಸಿನಲ್ಲಿ ಅಸ್ಪೃಶ್ಯತೆಯ ರೋಗವನ್ನು ಉಳಿಸಿಕೊಂಡಿರುವ ವ್ಯಕ್ತಿ ಕಾನೂನಿನಿಂದ ತಪ್ಪಿಸಿಕೊಳ್ಳಲು ತಂತ್ರವನ್ನು ಹುಡುಕಬಹುದೇ ಹೊರತು ರೋಗದಿಂದ ಮುಕ್ತವಾಗಲು ಪ್ರಯತ್ನಿಸಲಾರ. ಆತನೊಳಗಿನ ರೋಗವು ಅಸ್ಪೃಶ್ಯತೆಯನ್ನು ಆಚರಿಸುವುದಕ್ಕೆ ಹೊಸ ವಿಧಾನಗಳನ್ನು ಖಂಡಿತ ಹುಡುಕುತ್ತದೆ. ರೋಹಿತ್ ವೇಮುಲನನ್ನು ಕೊಂದದ್ದು ಆ ಕಾಯಿಲೆಯ ಸುಧಾರಿತ ವಿಧಾನ. ಮೇಲ್ವರ್ಗಕ್ಕೆ ಹೋಲಿಸಿದರೆ ಅಸ್ಪೃಶ್ಯರ ಸಂಖ್ಯೆ ಈ ದೇಶದಲ್ಲಿ ಬಹಳ ದೊಡ್ಡದು. ಆದರೆ ರಾಜಕೀಯ ಕ್ಷೇತ್ರದಲ್ಲಿ ಅವರು ನಿರ್ಧಾರ ಕೈಗೊಳ್ಳುವ ನಿರ್ಣಾಯಕ ಸ್ಥಾನದಲ್ಲಿ ಇದ್ದಾರೆಯೇ? ಮಾಧ್ಯಮ ಕ್ಷೇತ್ರದಲ್ಲಿ ಅವರ ಪಾತ್ರ ಏನು? ಸಂಪಾದಕರಲ್ಲಿ ಎಷ್ಟು ಮಂದಿ ದಲಿತರಿದ್ದಾರೆ? ಶೈಕ್ಷಣಿಕ ರಂಗದಲ್ಲಿ ಎಷ್ಟು ಮಂದಿ ದಲಿತರು ನಿರ್ಣಾಯಕ ಹುದ್ದೆಯಲ್ಲಿದ್ದಾರೆ? ಆರ್ಥಿಕವಾಗಿ ಅವರ ಸ್ಥಾನಮಾನ ಏನು? ಅಂಬಾನಿಯಂಥ ಒಬ್ಬನೇ ಒಬ್ಬ ದಲಿತ ಉದ್ಯಮಿ ಯಾಕೆ ಬೆಳೆದು ಬರುತ್ತಿಲ್ಲ? ಯಾಕೆಂದರೆ ಸಂವಿಧಾನ ರಚಿಸುವಾಗ ಆಚರಣೆಯಲ್ಲಿದ್ದ ಅಸ್ಪೃಶ್ಯತಾ ಮನಸ್ಸು ಈಗಲೂ ಜೀವಂತವಿದೆ. ಕಾನೂನಿಗೆ ಹೆದರಿ ಕೆಲವೊಮ್ಮೆ ಅನಿವಾರ್ಯ ಸಂದರ್ಭದಲ್ಲಿ ಅದು ಮುಟ್ಟಿಸಿಕೊಳ್ಳುತ್ತದೆ. ಆದರೆ ಈ ಮುಟ್ಟಿಸಿಕೊಳ್ಳುವ ಅನಿವಾರ್ಯತೆಯು ಅವರೊಳಗೆ ಇನ್ನೊಂದು ಬಗೆಯ ದ್ವೇಷವನ್ನೂ ಹುಟ್ಟು ಹಾಕಿದೆ. ಆ ದ್ವೇಷ ಎಷ್ಟು ಅಪಾಯಕಾರಿಯಾಗಿದೆಯೆಂದರೆ, ದಲಿತರು ಸಾಮಾಜಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ ಮತ್ತು ಶೈಕ್ಷಣಿಕವಾಗಿ ಬೆಳೆಯದಂತೆ ಮಟ್ಟ ಹಾಕಲಾಗುತ್ತದೆ. ಬಾಹ್ಯವಾಗಿ ಅವರನ್ನು ಮುಟ್ಟುತ್ತಲೇ ಆಂತರಿಕವಾಗಿ ಮಾರು ದೂರ ಎಸೆಯಲಾಗುತ್ತದೆ. ಕ್ರಿಮಿನಲ್ ಕೃತ್ಯಗಳಲ್ಲಿ ಅವರನ್ನು ಸಿಲುಕಿಕೊಳ್ಳುವಂತೆ ಮಾಡಲಾಗುತ್ತದೆ. ಒಂದು ರೀತಿಯಲ್ಲಿ, ಅಸ್ಪೃಶ್ಯ ವಿರೋಧಿ ಕಾನೂನಿನ ಅಡ್ಡ ಪರಿಣಾಮವಿದು. ಅಸ್ಪೃಶ್ಯ ಮನಸು ಈ ದೇಶದಲ್ಲಿ ಜಾಗೃತವಾಗಿರುವುದರಿಂದಲೇ, ಮುಸ್ಲಿಮ್ ಸಂಘಟನೆಗಳೆಲ್ಲ ಒಟ್ಟು ಸೇರಿಕೊಂಡು ಮುಸ್ಲಿಮ್ ಪರ್ಸನಲ್ ಲಾ ಬೋರ್ಡ್ ಎಂಬ ಏಕ ವೇದಿಕೆಯನ್ನು ರಚಿಸಿಕೊಂಡಂತೆ ಮತ್ತು ತಲಾಕ್ ದುರುಪಯೋಗದ ವಿರುದ್ಧ ಬಹಿಷ್ಕಾರ ಘೋಷಣೆ ಹೊರಡಿಸಿದಂತೆ ಹಿಂದೂ ಸಂಘಟನೆಗಳೆಲ್ಲ ಒಂದೇ ವೇದಿಕೆ ರಚಿಸಿಕೊಂಡು ಅಸ್ಪೃಶ್ಯತೆಯನ್ನು ಆಚರಿಸುವವರ ವಿರುದ್ಧ ಬಹಿಷ್ಕಾರ ಘೋಷಣೆ ಹೊರಡಿಸದೇ ಇರುವುದು.
     ನಿಜವಾಗಿ, ಕೇಂದ್ರ ಸರಕಾರ ಇವತ್ತು ಆಸಕ್ತಿ ತೋರಿಸಬೇಕಾಗಿರುವುದು ತಲಾಕ್‍ನ ವಿಚಾರದಲ್ಲಿ ಅಲ್ಲ. ಹಿಂದೂ ಸಂಘಟನೆಗಳ ಏಕ ವೇದಿಕೆಯನ್ನು ರಚಿಸುವುದಕ್ಕೆ ಪ್ರೇರಣೆ ಕೊಟ್ಟು ದಲಿತರ ಬಾಳನ್ನು ಹಸನುಗೊಳಿಸುವುದಕ್ಕೆ ಶ್ರಮಿಸಬೇಕಾಗಿತ್ತು. ಅಂದಹಾಗೆ, ದಲಿತರಿಗೆ ಬೀದಿಯಲ್ಲಿ ಥಳಿಸುವುದಷ್ಟೇ ದೌರ್ಜನ್ಯವಲ್ಲ. ಅವರು ಬೆಳೆಯದಂತೆ ಮತ್ತು ಸದಾ ಅಪರಾಧಿಗಳಾಗಿಯೋ ಆರೋಪಿಗಳಾಗಿಯೋ ಉಳಿಯುವಂತೆ ಮಾಡುವುದೇ ಅತೀ ದೊಡ್ಡ ದೌರ್ಜನ್ಯ. ಇದಕ್ಕೆ ಹೋಲಿಸಿದರೆ ತಲಾಕ್ ದುರುಪಯೋಗ ಏನೇನೂ ಅಲ್ಲ. ದುರುಪಯೋಗ ಎಂಬ ಪದವೇ ಅದು ತಪ್ಪಾದ ಕ್ರಮ ಎಂಬುದನ್ನು ಸಾರುತ್ತದೆ. ಯಾವುದೇ ಒಂದು ಧರ್ಮದಲ್ಲಿ ಅದರ ನಿಯಮವನ್ನು ತಪ್ಪಾಗಿ ಪಾಲಿಸುವವರ ಸಂಖ್ಯೆಯೇ ಅಧಿಕವಾಗಿರುವುದಕ್ಕೆ ಸಾಧ್ಯವಿಲ್ಲವಲ್ಲ. ತಲಾಕ್ ದುರುಪಯೋಗದ ಸ್ಥಿತಿಯೂ ಇದುವೇ.
      ವಿವಾಹ ಮತ್ತು ವಿಚ್ಛೇದನಾ ಕ್ರಮಗಳು ಎಲ್ಲ ಮುಸ್ಲಿಮರ ಪಾಲಿಗೂ ಏಕ ಪ್ರಕಾರ. ತೀರಾ ತೀರಾ ತೀರಾ ಕಡಿಮೆ ಸಂಖ್ಯೆಯಲ್ಲಿ ಈ ಕ್ರಮದಂತೆ ವಿವಾಹವಾಗದ ಮತ್ತು ವಿಚ್ಛೇದನ ನೀಡದ ಘಟನೆಗಳು ನಡೆಯುತ್ತಿವೆ. ಈ ಸಂಖ್ಯೆಗೆ ಹೋಲಿಸಿದರೆ ಸಾಮಾಜಿಕ ಬಹಿಷ್ಕಾರವೆಂಬುದು ಅತಿದೊಡ್ಡ ಪ್ರಹಾರ. ಆದರೂ ಇದನ್ನು ಸ್ವಾಗತಿಸಬೇಕು. ಇಂಥ ಪ್ರಕರಣಗಳ ಸಂಖ್ಯೆ ಅತ್ಯಲ್ಪ ಎಂಬುದು ಸಂತ್ರಸ್ತರನ್ನು ನಿರ್ಲಕ್ಷಿಸುವುದಕ್ಕೆ ಕಾರಣವಾಗಬಾರದು. ತಲಾಕ್‍ನ ದುರುಪಯೋಗದಲ್ಲಿ ಮುಸ್ಲಿಮ್ ಸಮುದಾಯದ ಬಡತನಕ್ಕೆ ಬಹುಮುಖ್ಯ ಪಾತ್ರ ಇದೆ. ಆರ್ಥಿಕವಾಗಿ ಹಿಂದುಳಿದ ಮುಸ್ಲಿಮ್ ಕುಟುಂಬಗಳಲ್ಲೇ ಇಂಥ ದುರುಪಯೋಗದ ಪ್ರಕರಣಗಳು ಹೆಚ್ಚಾಗಿ ಕಾಣಿಸುತ್ತಿವೆ. ವಿಷಾದ ಏನೆಂದರೆ, ತಲಾಕ್ ದುರುಪಯೋಗದ ಬಗ್ಗೆ ಕಾಳಜಿ ತೋರುವ ಬಿಜೆಪಿಯು ತೆಲಂಗಾಣ ಸರಕಾರವು ಮುಸ್ಲಿಮರ ಸಬಲೀಕರಣಕ್ಕಾಗಿ ಜಾರಿಗೊಳಿಸಲು ಹೊರಟಿರುವ 12% ಮೀಸಲಾತಿಗೆ ತೀವ್ರ ವಿರೋಧವನ್ನು ವ್ಯಕ್ತಪಡಿಸುತ್ತಿದೆ. ಇದರ ಅರ್ಥ ಏನು?
ಏನೇ ಆಗಲಿ, ತಲಾಕ್‍ನ ದುರುಪಯೋಗದ ಬಗ್ಗೆ ಕಟು ನಿಲುವನ್ನು ತಾಳಿದ ಪರ್ಸನಲ್ ಲಾ ಬೋರ್ಡ್‍ಗೆ ಕೃತಜ್ಞತೆ ಸಲ್ಲಿಸುತ್ತಲೇ, ಜಾತಿ-ಕುಲದ ಹೆಸರಲ್ಲಿ ಆಗುತ್ತಿರುವ ಶೋಷಣೆಯಿಂದ ಭಾರತೀಯ ಸಮಾಜವನ್ನು ಮುಕ್ತಗೊಳಿಸಲು ಈ ನಿರ್ಧಾರ ಮೇಲ್ಪಂಕ್ತಿಯಾಗಲಿ ಎಂದು ಹಾರೈಸೋಣ.

No comments:

Post a Comment