Wednesday 24 May 2017

ಮುಸ್ಲಿಮ್ ಸಬಲೀಕರಣ: ಒಳ-ಹೊರಗೆ..

     ಸಾಚಾರ್ ವರದಿ ಮತ್ತು ರಂಗನಾಥ್ ಮಿಶ್ರಾ ವರದಿಗಳನ್ನು ಮುಂದಿಟ್ಟುಕೊಂಡು ಮುಸ್ಲಿಮ್ ಸಮುದಾಯದ ಒಳಗೂ ಹೊರಗೂ ಚರ್ಚೆಗಳಾಗುತ್ತಿವೆ. ವಿದ್ವತ್‍ಪೂರ್ಣ ಭಾಷಣಗಳಾಗುತ್ತಿವೆ. ಮುಸ್ಲಿಮ್ ಸಮುದಾಯದ ವಿವಿಧ ಸಂಘಟನೆಗಳು ಈ ವರದಿಗಳ ಆಧಾರದಲ್ಲಿಯೇ ಅಥವಾ ಈ ವರದಿಯನ್ನು ನೆಪ ಮಾಡಿಕೊಂಡೇ ಅಭಿವೃದ್ಧಿಯ ನೀಲನಕ್ಷೆಯನ್ನು ರೂಪಿಸುತ್ತಿವೆ. ಸರ್ವೇಗಳಾಗುತ್ತಿವೆ. ಬಾಹ್ಯನೋಟಕ್ಕೆ ಇವು ಅತ್ಯಂತ ಪ್ರಶಂಸಾರ್ಹ ಚಟುವಟಿಕೆಗಳಾಗಿ ಕಂಡರೂ ಇವು ಎತ್ತುವ ಅತಿ ಮಹತ್ವಪೂರ್ಣ ಪ್ರಶ್ನೆಗಳಿವೆ. ಸಾಚಾರ್ ಆಯೋಗವು ಪತ್ತೆ ಹಚ್ಚಿರುವ ಸಮಸ್ಯೆಗಳಿಗೆ ಮೂಲ ಕಾರಣಕರ್ತರು ಯಾರು? ರಂಗನಾಥ್ ಮಿಶ್ರಾ ಆಯೋಗವು ಎತ್ತಿ ಹೇಳಿರುವ ಸಮಸ್ಯೆಗಳ ಹೊಣೆಯನ್ನು ಯಾರು ಹೊರಬೇಕು? ಸರಕಾರಕ್ಕೆ ಒಂದು ಸಮುದಾಯದ ಸ್ಥಿತಿ-ಗತಿಗಳ ಕುರಿತು ಅಧ್ಯಯನ ನಡೆಸಬೇಕಾದ ಅಗತ್ಯ ಬರುತ್ತದೆಂದರೆ, ಅದನ್ನು ಬರೇ ಪ್ರಶಂಸನೀಯ ನಡೆಯೆಂಬುದಾಗಿ ಗುರುತಿಸಿದರಷ್ಟೇ ಸಾಕೇ ಅಥವಾ ಅದಕ್ಕೆ ನಕಾರಾತ್ಮಕವಾದ ಮುಖವೊಂದೂ ಇರಬಹುದೇ? ಇದ್ದರೆ ಅದು ಯಾವುದು? ಮುಸ್ಲಿಮ್ ಸಮುದಾಯದ ಒಳಗಿನ ಸಂಘಟನೆಗಳು ಈ ವರದಿಯ ಹೆಸರಲ್ಲಿ ರಚಿಸಿರುವ ನೀಲನಕ್ಷೆ ಮತ್ತು ಅಭಿವೃದ್ಧಿ ಚಟುವಟಿಕೆಗಳು ಎಷ್ಟು ಸಮತೋಲನದಿಂದ ಕೂಡಿವೆ? ಇದು ಮುಸ್ಲಿಮ್ ಸಮುದಾಯದ ವಿರುದ್ಧ ಇತರ ಸಮುದಾಯಗಳನ್ನು ಎತ್ತಿ ಕಟ್ಟುವ ಅಥವಾ ಅವರಲ್ಲಿ ಅಸೂಯೆಯೊಂದನ್ನು ಹುಟ್ಟು ಹಾಕುವುದಕ್ಕೆ ಪ್ರೇರಕವಾಗುವ ರೀತಿಯಲ್ಲಿ ಇವೆಯೇ?
    ಈ ದೇಶದ ಎಲ್ಲರಿಗೂ ಇರುವುದು ಒಂದೇ ಸಂವಿಧಾನ. ಅದು ಮನುಷ್ಯರ ನಡುವೆ ತಾರತಮ್ಯಕ್ಕೆ ಅವಕಾಶ ಮಾಡಿಕೊಟ್ಟಿಲ್ಲ. ಬ್ರಾಹ್ಮಣ ಶ್ರೇಷ್ಠತೆಯನ್ನೂ ದಲಿತ ನಿಕೃಷ್ಟತೆಯನ್ನೂ ಅದು ತಳ್ಳಿ ಹಾಕಿದೆ. ಮುಸ್ಲಿಮರ ಅಸ್ತಿತ್ವವನ್ನೂ ಮತ್ತು ಫಾರ್ಸಿಗಳ ಅಸ್ತಿತ್ವವನ್ನೂ ಅದು ಸಮಾನವಾಗಿ ಗೌರವಿಸಿದೆ. ಹಾಗಿದ್ದೂ, ಸ್ವಾತಂತ್ರ್ಯದ ಬಳಿಕದ ಈ ದೀರ್ಘ 7 ದಶಕಗಳ ಅವಧಿಯಲ್ಲಿ ಅಭಿವೃದ್ಧಿ ಯೋಜನೆಗಳು ಯಾಕೆ ಎಲ್ಲರನ್ನೂ ಸಮಾನವಾಗಿ ತಲುಪಿಲ್ಲ? ಒಂದು ಸರಕಾರವು ಮುಸ್ಲಿಮರ ಸ್ಥಿತಿಗತಿಯ ಬಗ್ಗೆ ಅಧ್ಯಯನ ನಡೆಸಲು ಸಾಚಾರ್ ಆಯೋಗವನ್ನು ರಚಿಸುತ್ತದೆಂದರೆ ಅದು ಮುಸ್ಲಿಮ್ ಸಮುದಾಯವನ್ನು ಸಮಾನ ನೆಲೆಯಲ್ಲಿ ನೋಡಿಲ್ಲ ಎಂದೂ ಆಗುತ್ತದಲ್ಲವೇ? ಸಂವಿಧಾನಕ್ಕೆ ಎಲ್ಲರೂ ಸಮಾನವೆಂದ ಮೇಲೆ ಸರಕಾರದ ಅಭಿವೃದ್ಧಿ ಯೋಜನೆಗಳೂ ಸಮಾನವಾಗಿ ಹಂಚಿಕೆಯಾಗಬೇಕಲ್ಲವೇ? ಎಲ್ಲ ಭಾರತೀಯರೂ ಅದರ ಸಮಾನ ಫಲಾನುಭವಿಗಳಾಗಿರಬೇಕಲ್ಲವೇ? ಆದರೆ ಹೀಗೆ ಆಗಿಲ್ಲ ಅನ್ನುವುದಕ್ಕೆ ಸಾಚಾರ್ ಮತ್ತು ರಂಗನಾಥ್ ಮಿಶ್ರಾ ವರದಿಗಳೇ ಪುರಾವೆ. ಮಾತ್ರವಲ್ಲ, ಈ ಎರಡೂ ಆಯೋಗಗಳನ್ನು ರಚಿಸುವ ಮೂಲಕ ಖುದ್ದು ಸರಕಾರವೇ ತನ್ನ ವೈಫಲ್ಯವನ್ನು ಒಪ್ಪಿಕೊಂಡಿದೆ. ಒಂದು ವ್ಯವಸ್ಥೆ ಈ ಮಟ್ಟದಲ್ಲಿ ವಿಫಲವಾದುದಕ್ಕೆ ಕಾರಣಗಳೇನು? ಉದ್ದೇಶಪೂರ್ವಕ ಅಸಡ್ಡೆಯೋ ಅಥವಾ ಕಾರ್ಯಾಂಗದೊಳಗಿನ ಪಿತೂರಿಗಳೋ? ನಿಜವಾಗಿ, ಸಾಚಾರ್ ಮತ್ತು ರಂಗನಾಥ್ ಮಿಶ್ರಾ ವರದಿಗಳನ್ನಿಟ್ಟುಕೊಂಡು ಮುಸ್ಲಿಮ್ ಸಮುದಾಯದ ಸಬಲೀಕರಣದ ಚರ್ಚೆಗಳನ್ನು ಏರ್ಪಡಿಸುವಾಗಲೆಲ್ಲ ಈ ವಿಷಯಗಳು ಮುನ್ನೆಲೆಗೆ ಬರಬೇಕು. ಯಾಕೆಂದರೆ, ವರದಿಗಳು ಬರೇ ವರದಿಗಳಷ್ಟೇ. ಅದು ಕಾರ್ಯ ರೂಪಕ್ಕೆ ಬರುವುದು ಇದೇ ಶಾಸಕಾಂಗ ಮತ್ತು ಕಾರ್ಯಾಂಗಗಳ ಮೂಲಕ. ಕಳೆದ 7 ದಶಕಗಳಲ್ಲಿ ನಮ್ಮ ಶಾಸಕಾಂಗ ಮತ್ತು ಕಾರ್ಯಾಂಗಗಳು ದಲಿತರನ್ನು ಮತ್ತು ಮುಸ್ಲಿಮರನ್ನು ಈ ದೇಶದ ಇತರ ಪ್ರಜೆಗಳಿಗೆ ಸರಿಸಮಾನವಾಗಿ ಕಾಣಲು ಹಿಂದೇಟು ಹಾಕಿವೆ ಎಂಬುದನ್ನು ವರದಿಗಳೇ ಸ್ಪಷ್ಟಪಡಿಸುತ್ತವೆ. ಅಭಿವೃದ್ಧಿ ಯೋಜನೆಗಳನ್ನು ರೂಪಿಸುವ ಜನಪ್ರತಿನಿಧಿಗಳು ಮತ್ತು ಅದನ್ನು ಜಾರಿಗೊಳಿಸುವ ಅಧಿಕಾರಿಗಳು ದಲಿತರು ಮತ್ತು ಮುಸ್ಲಿಮರನ್ನು ನಿಕೃಷ್ಟವಾಗಿ ನೋಡಿದ್ದಾರೆ. ಅದರ ಫಲಿತಾಂಶವೇ ಎರಡು ವರದಿಗಳು. ಇದರ ಇನ್ನೊಂದು ಪರಿಣಾಮ ಏನೆಂದರೆ, ಮುಸ್ಲಿಮರ ಸಬಲೀಕರಣವನ್ನು ಗುರಿಯಾಗಿಸಿಕೊಂಡು ಸಂಘಟನೆಗಳೂ ತಂಡಗಳೂ ಮುಸ್ಲಿಮರೊಳಗೇ ಹುಟ್ಟಿಕೊಂಡವು. ಅಭಿವೃದ್ಧಿಯ ನೀಲನಕ್ಷೆಗಳನ್ನು ಅವು ರಚಿಸತೊಡಗಿದುವು. ಇದು ತಪ್ಪು ಎಂದಲ್ಲ. ಆದರೆ ಇದರ ಇನ್ನೊಂದು ಮುಖ ಏನೆಂದರೆ, ಮುಸ್ಲಿಮ್ ಸಮುದಾಯವು ಇತರ ಸಮುದಾಯಗಳಿಂದ ನಿಧಾನಕ್ಕೆ ಪ್ರತ್ಯೇಕಗೊಂಡದ್ದು. ಅಭಿವೃದ್ಧಿಯ ನೀಲನಕ್ಷೆಗಳು ಮುಸ್ಲಿಮರನ್ನು ಮಾತ್ರ ಗುರಿಯಾಗಿಸಿಕೊಂಡಾಗ ಮತ್ತು ಮುಸ್ಲಿಮರಿಗಿಂತಲೂ ನಿಕೃಷ್ಟ ಸ್ಥಿತಿಯಲ್ಲಿರುವ ಇತರ ಸಮುದಾಯಗಳಿಗೆ ಅದು ವಿಸ್ತರಿಸುವ ಗುಣಲಕ್ಷಣ ಹೊಂದದಾಗ ಅಲ್ಲಿ ಸಹಜ ಪ್ರತ್ಯೇಕತೆಯೊಂದು ಏರ್ಪಡುತ್ತದೆ. ಬಡತನಕ್ಕೆ ಧರ್ಮದ ಹಂಗಿಲ್ಲ. ಬಡತನ ಮುಸ್ಲಿಮರ ಜೊತೆಗಿದ್ದರೂ ದಲಿತರ ಜೊತೆಗಿದ್ದರೂ ಪರಿಣಾಮದಲ್ಲಿ ವ್ಯತ್ಯಾಸವೇನಿಲ್ಲ. ಆದರೆ ಮುಸ್ಲಿಮರನ್ನೇ ಗುರಿಯಾಗಿಟ್ಟುಕೊಂಡು ಮಾಡಲಾಗುವ ಸಬಲೀಕರಣದ ಯೋಜನೆಗಳು ಮತ್ತು ಆಡಲಾಗುವ ಮಾತುಗಳು, ಸೆಮಿನಾರ್‍ಗಳು ಇತರ ಸಮುದಾಯಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರುವ ಸಾಧ್ಯತೆಗಳೂ ಇರುತ್ತವೆ ಅಥವಾ ಅವರನ್ನು ಮುಸ್ಲಿಮರ ಮೇಲೆ ಎತ್ತಿಕಟ್ಟುವುದಕ್ಕೆ ಸಮಯ ಸಾಧಕರಿಗೆ ಅವಕಾಶಗಳನ್ನು ಒದಗಿಸಿ ಕೊಡುವುದಕ್ಕೂ ಸಾಧ್ಯವಿದೆ. ಅಕ್ಕ-ಪಕ್ಕ ಇರುವ ಎರಡು ಸಮುದಾಯಗಳ ಎರಡು ಮನೆಗಳಲ್ಲಿ ಒಂದು ಮನೆಯವರು ಸಬಲರಾಗುತ್ತಾ ಹೋಗುವುದು ಮತ್ತು ಅದಕ್ಕೆ ಆ ಸಮುದಾಯದ ಸಂಘಟನೆಗಳ ನೀಲನಕ್ಷೆಗಳೇ ಕಾರಣವಾಗುತ್ತಿರುವುದನ್ನು ಇನ್ನೊಂದು ಮನೆಯವರು ಸಕಾರಾತ್ಮಕವಾಗಿಯೇ ನೋಡಬೇಕಿಲ್ಲ. ನಕಾರಾತ್ಮಕವಾದ ದೃಷ್ಟಿಕೋನಕ್ಕೂ ಅವಕಾಶ ಇದೆ. ಇದನ್ನೇ ಎತ್ತಿಕೊಂಡು ಕೋಮುವಾದಿಗಳು ಸಲಬಗೊಂಡ ಪಕ್ಕದ ಮನೆಯವರ ವಿರುದ್ಧ ಇವರನ್ನು ಎತ್ತಿ ಕಟ್ಟುವ ಮತ್ತು ಅಸೂಯೆ ಭಾವವನ್ನು ಬಿತ್ತುವುದಕ್ಕೂ ಅವಕಾಶ ಇದೆ. ತಮ್ಮ ಹಿಂದುಳಿಯುವಿಕೆಯ ಕೀಳರಿಮೆಯನ್ನು ಮುಂದುವರಿದವರ ಮೇಲೆ ಹಗೆ ತೀರಿಸುವ ಮೂಲಕ ತೃಪ್ತಿಪಡಿಸಿಕೊಳ್ಳುವುದಕ್ಕೂ ಅವಕಾಶ ಇದೆ. ಸದ್ಯ ಕೋಮುಗಲಭೆಯ ಹೆಸರಲ್ಲಿ ಮತ್ತು ಗೋವು ಮತ್ತಿತರವುಗಳ ನೆಪದಲ್ಲಿ ಮುಸ್ಲಿಮರ ಮೇಲೆ ಆಗುತ್ತಿರುವ ಹಲ್ಲೆ ಹಾಗೂ ಹತ್ಯೆಗಳಲ್ಲಿ ನಾವಿದನ್ನು ಗುರುತಿಸಬಹುದು. ದಲಿತ, ಬಡವ, ದಮನಿತ ವರ್ಗದ ಯುವಕರೇ ಈ ಕ್ರೌರ್ಯದಲ್ಲಿ ಮುಂಚೂಣಿಯಲ್ಲಿದ್ದಾರೆ. ಅವರನ್ನು ಮಂಪರು ಪರೀಕ್ಷೆಗೆ ಒಳಪಡಿಸಿದರೆ ಇನ್ನಷ್ಟು ಸತ್ಯಗಳು ಹೊರಬೀಳಲೂ ಬಹುದು.
    ಇಲ್ಲಿ ಎರಡು ರೀತಿಯ ತಪ್ಪುಗಳಾಗಿರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ. ಒಂದು, ಸರಕಾರದ ಕಡೆಯಿಂದಾದರೆ ಇನ್ನೊಂದು ಸಂಘಟನೆಗಳ ಕಡೆಯಿಂದ. ಬಡತನಕ್ಕೆ ಈ ಸಂಘಟನೆಗಳು ಗೆರೆಯನ್ನೆಳೆದಿವೆ. ಆ ಗೆರೆಯ ಹೊರಗಿನ ಬಡತನವನ್ನು ಅವು ಸಮುದಾಯದ ಬಡತನವಾಗಿ ಪರಿಗಣಿಸದೇ ಇರುವ ಸಾಧ್ಯತೆಗಳೂ ಉಂಟಾಗಿ, ನಾವು ಮತ್ತು ಅವರು ಎಂಬ ವಿಭಜನೆ ಅಗೋಚರವಾಗಿ ಸೃಷ್ಟಿಯಾಗಿರುವ ಸಾಧ್ಯತೆಗಳೂ ಇವೆ. ಎಲ್ಲರೂ ಇರುವ ಜನರ ಗುಂಪಿನಿಂದ ಕೆಲವರನ್ನು ಪ್ರತ್ಯೇಕಗೊಳಿಸಿ ಅವರ ಸಬಲೀಕರಣಕ್ಕಾಗಿ ಮಾತ್ರ ಪ್ರಯತ್ನಿಸುವುದು ಗುಂಪಿನ ಇತರರಲ್ಲಿ ದ್ವೇಷವನ್ನೂ ಹುಟ್ಟಿಸಬಹುದು. ಸಬಲಗೊಂಡವರ ಮೇಲೆ ಅಸೂಯೆಗೂ ಕಾರಣವಾಗಬಹುದು. ಸಂದರ್ಭ ನೋಡಿಕೊಂಡು ಅವರಿಗೆ ನಷ್ಟವನ್ನುಂಟು ಮಾಡುವುದಕ್ಕೂ ಅವರು ಯತ್ನಿಸಬಹುದು. ಆದ್ದರಿಂದಲೇ ಸಬಲೀಕರಣ ಎಂಬುದರ ವ್ಯಾಪ್ತಿಯೊಳಗೆ ಎಲ್ಲ ಮರ್ದಿತರು ಮತ್ತು ದುರ್ಬಲರನ್ನು ತರುವ ಪ್ರಯತ್ನಗಳಾಗಬೇಕಾಗಿದೆ. ಸಮುದಾಯ ಎಂಬ ಗೆರೆಯನ್ನು ಸಮಾಜ ಎಂಬ ಗೆರೆಯಾಗಿ ಪರಿವರ್ತಿಸಲು ಶ್ರಮಿಸಬೇಕಾಗಿದೆ. ಇದು ಇಂದಿನ ಅಗತ್ಯ.

No comments:

Post a Comment