Monday 6 November 2017

ಅಕ್ಟೋಬರ್ 30ರ ಪತ್ರಿಕೆಗಳು

     ರಾಜಕೀಯಕ್ಕೆ ಸಂಬಂಧಿಸಿದ ಸುದ್ದಿ, ವರದಿ, ವಿಶ್ಲೇಷಣೆಗಳಿಗೆ ಮಾಧ್ಯಮ ಕ್ಷೇತ್ರದಲ್ಲಿ ಸಿಗುವ ಆದರ ಮತ್ತು ಆದ್ಯತೆಯು ಇತರ ಸುದ್ದಿಗಳಿಗೆ ಲಭ್ಯವಾಗುವುದಿಲ್ಲ ಎಂಬ ದೂರನ್ನು ಕಳೆದವಾರ ಮಾಧ್ಯಮ ಕ್ಷೇತ್ರ ಮತ್ತೊಮ್ಮೆ ಸಾಬೀತುಪಡಿಸಿದೆ. ಅಕ್ಟೋಬರ್ 29ರ ಆದಿತ್ಯವಾರದಂದು ರಾಯಚೂರಿನಲ್ಲಿ ರಾಜ್ಯಮಟ್ಟದ ಸಮಾವೇಶವೊಂದು ನಡೆಯಿತು. 10 ಸಾವಿರಕ್ಕಿಂತಲೂ ಅಧಿಕ ಮಂದಿ ಇದರಲ್ಲಿ ಭಾಗವಹಿಸಿದರು. ಹೆಚ್ಚಿನವರು ಮಹಿಳೆಯರು. ‘ಮದ್ಯ ನಿಷೇಧ ಆಂದೋಲನ ಕರ್ನಾಟಕ’ ಎಂಬ ಏಕ ವೇದಿಕೆಯ ಅಡಿ ಸುಮಾರು 32 ಸಂಘಟನೆಗಳು ಜೊತೆಗೂಡಿ ಏರ್ಪಡಿಸಿದ ಈ ಸಭೆಯಲ್ಲಿ ‘ನಶಾ ಮುಕ್ತ್ ಭಾರತ್’ ಸಂಘಟನೆಯ ಮುಖ್ಯಸ್ಥೆ ಮೇಧಾ ಪಾಟ್ಕರ್ ಭಾಗವಹಿಸಿ ದ್ದರು. ರಾಜ್ಯದಲ್ಲಿ ಸಂಪೂರ್ಣ ಪಾನ ನಿಷೇಧ ಜಾರಿಯಾಗಬೇಕು ಎಂದು ಸಭೆ ಒತ್ತಾಯಿಸಿತು. ಅಂದಹಾಗೆ ಕೃಷಿಗೆ ಹೆಸರುವಾಸಿಯಾದ ನಾಡೊಂದು ಕೃಷಿಗೆ ಸಂಬಂಧಿಸಿಯೇ ಇಲ್ಲದ ವಿಷಯದ ಮೇಲೆ ಬೃಹತ್ ಸಭೆಯೊಂದನ್ನು ಏರ್ಪಡಿಸುವುದು, ಚರ್ಚೆ ನಡೆಸುವುದು ಮತ್ತು ಭಾರೀ ಸಂಖ್ಯೆಯಲ್ಲಿ ಜನ ಸೇರುವುದೆಲ್ಲ ಅಕ್ಟೋಬರ್ 30 ರಂದು ಪ್ರಕಟವಾಗುವ ಪತ್ರಿಕೆಗಳಲ್ಲಿ ಮುಖ್ಯ ಸುದ್ದಿಯಾಗಬೇಕಿತ್ತು, `ಸಂಪಾದಕೀಯ ವಸ್ತು’ ಆಗಬೇಕಿತ್ತು ಎಂದು ಬಯಸುವುದು ತಪ್ಪಲ್ಲ. ಆದರೆ ಈ ನಿರೀಕ್ಷೆಗೆ ವಿರುದ್ಧವಾಗಿ ಪತ್ರಿಕೆಗಳು ವರ್ತಿಸಿದುವು. ನಿಜವಾಗಿ, ಈ ದೇಶದಲ್ಲಿ ಪ್ರತಿದಿನ ರಾಜಕೀಯ ರಹಿತ ಅಸಂಖ್ಯ ಜನಮುಖಿ ಕಾರ್ಯಕ್ರಮಗಳು ನಡೆಯುತ್ತವೆ. ಯೋಜನೆಗಳು ರೂಪು ಪಡೆಯುತ್ತವೆ. ಮನೆಯಿಲ್ಲದವರಿಗೆ ಮನೆ ಕಟ್ಟಿ ಕೊಡುವ, ಆಹಾರದ ವ್ಯವಸ್ಥೆ ಮಾಡುವ, ಮಾಸಾಶನ ನೀಡುವ, ಸ್ವಉದ್ಯೋಗಕ್ಕೆ ನೆರವು ನೀಡುವ, ಬಾವಿ ತೋಡುವ, ಚಿಕಿತ್ಸೆ ವೆಚ್ಚವನ್ನು ಭರಿಸುವ, ಸಾಮಾಜಿಕ ಪಿಡುಗುಗಳ ವಿರುದ್ಧ ಜನಜಾಗೃತಿ ಮೂಡಿಸುವ.. ಇತ್ಯಾದಿ ಘಟನೆಗಳು ನಡೆಯುತ್ತಲೇ ಇರುತ್ತವೆ. ರಾಜಕಾರಣಿಯೋರ್ವರ ಹಳಸಲು ಹೇಳಿಕೆಗಿಂತ ಎಷ್ಟೋ ಪಾಲು ಬೆಲೆಬಾಳುವ ಚಟುವಟಿಕೆಗಳು ಇವು. ಆದರೆ ಇಂಥ ಚಟುವಟಿಕೆಗಳು ಸಾಮಾನ್ಯವಾಗಿ ಪತ್ರಿಕೆಗಳ ಒಳಪುಟದ ತೀರಾ ಒಳಗೆ ಒಂದು ಕಾಲಂನಲ್ಲಿ ಸತ್ತು ಹೋಗುವುದೇ ಹೆಚ್ಚು. ಒಂದು ವೇಳೆ, ರಾಜಕಾರಣಿಗಳು ಇಂಥ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರೆ ಪತ್ರಿಕೆಗಳ ಒಂದು ಕಾಲಂ ಅವಮಾನದಿಂದ ಇಂಥ ಸುದ್ದಿಗಳು ಪಾರುಗೊಂಡು ಎರಡು ಕಾಲಂ ಎಂಬಷ್ಟು ಮೇಲ್ದರ್ಜೆಗೇರುವುದಿದೆ. ಅದರಾಚೆಗೆ ಇಂಥ ಚಟುವಟಿಕೆಗಳಿಗೆ ಪತ್ರಿಕೆಗಳಲ್ಲಿ ಮಾನ್ಯತೆ ಲಭ್ಯವಾಗುವುದಿಲ್ಲ. ಇದನ್ನು ಬದಲಿಸುವುದು ಹೇಗೆ? ರಾಜಕೀಯ ಸುದ್ದಿಗಳೇಕೆ ಮಾಧ್ಯಮಗಳಿಗೆ ಇಷ್ಟ?
     ಸಾಮಾನ್ಯವಾಗಿ ಇವತ್ತು ಜನರ ಆದ್ಯತೆಯನ್ನು ನಿರ್ಧರಿಸುವುದೇ ಪತ್ರಿಕೆಗಳು. ಅವು ಯಾವುದನ್ನು ಚರ್ಚಾರ್ಹ ಎಂಬುದಾಗಿ ಬಿಂಬಿಸುತ್ತದೋ ಅದನ್ನೇ ಜನರು ಚರ್ಚಾರ್ಹವಾಗಿ ಸ್ವೀಕರಿಸುತ್ತಾರೆ. ಸಾಮಾಜಿಕ ಜಾಲತಾಣಗಳನ್ನು ಪರಿಶೀಲಿಸಿದರೂ ಇದು ವ್ಯಕ್ತವಾಗುತ್ತದೆ. ಅಲ್ಲಿ ಅತ್ಯಂತ ಹೆಚ್ಚು ಬರಹಗಳು ಕಾಣಿಸಿಕೊಳ್ಳುವುದೇ ರಾಜಕೀಯದ ಮೇಲೆ. ತನ್ನ ಮನೆಯ ಪಕ್ಕವೇ ಇರುವ `ಚರಂಡಿ’ ಅವ್ಯವಸ್ಥೆಯನ್ನು ಹೇಳಿಕೊಳ್ಳುವುದಕ್ಕಿಂತ ಮೋದಿಯನ್ನೋ ಸಿದ್ಧರಾಮಯ್ಯರನ್ನೋ ಗುರಿಯಾಗಿ ಬರೆಯುವುದರಲ್ಲಿ ವ್ಯಕ್ತಿ ಸುಖ ಪಡುತ್ತಾನೆ. ನೀರಿಲ್ಲದ ಊರಿಗೆ ಬಾವಿ ತೋಡಿಸಿಕೊಟ್ಟ ಸುದ್ದಿಗಿಂತ ಹೆಚ್ಚು ರಾಜಕಾರಣಿಯೋರ್ವರ ಹೇಳಿಕೆಯ ಮೇಲಿನ ಪ್ರತಿಕ್ರಿಯೆಗೆ ಲೈಕ್ ಮತ್ತು ಕಾಮೆಂಟ್‍ಗಳು ಲಭ್ಯವಾಗುತ್ತವೆ. ಅಷ್ಟಕ್ಕೂ, ಪತ್ರಿಕೆಯೊಂದು ರಾಯಚೂರಿನಲ್ಲಿ ನಡೆದ ಮದ್ಯನಿಷೇಧದಂತಹ ಕಾರ್ಯ ಕ್ರಮಕ್ಕೆ ಆದ್ಯತೆಯನ್ನು ಕೊಟ್ಟರೆ ಏನಾದೀತು? ರಾಜಕೀಯ ಸುದ್ದಿಗಳ ಬದಲು ಸಾಮಾಜಿಕ ಸುದ್ದಿಗಳಿಗೆ ಅವು ಮಹತ್ವ ಕೊಡುವುದರಿಂದ ಏನೆಲ್ಲ ಬದಲಾವಣೆಗಳಾಗಬಹುದು? ಇದರ ಸಕಾರಾತ್ಮಕ ಮತ್ತು ನಕಾರಾತ್ಮಕ ಪರಿಣಾಮಗಳು ಏನೇನು? ರಾಜಕೀಯವು ಜನರ ನಾಡಿಮಿಡಿತವನ್ನು ನಿರ್ಧರಿಸುತ್ತದೆ ಎಂಬುದು ನಿಜ. ದೇಶದ ಭವಿಷ್ಯ ರಾಜಕೀಯ ನಿರ್ಧಾರವನ್ನು ಅವಲಂಬಿಸಿಕೊಂಡಿದೆ. ಪಾಕ್‍ನ ವಿರುದ್ಧ ಯುದ್ಧ ಬೇಕೋ ಬೇಡವೋ ಎಂಬುದನ್ನು ಜನಸಾಮಾನ್ಯ ನಿರ್ಧರಿಸಲಾರ. ಜನರ ಜೀವನ ಮಟ್ಟವನ್ನು ಹೆಚ್ಚಿಸುವ ಮತ್ತು ತಗ್ಗಿಸುವ ಎರಡೂ ಸಾಮರ್ಥ್ಯ ರಾಜಕೀಯಕ್ಕಿದೆ.  ಆದರೂ ಇವತ್ತು ಮಾಧ್ಯಮಗಳು ರಾಜಕೀಯ ಸುದ್ದಿಗಳಿಗೆ ಕೊಡುತ್ತಿರುವ ಆದ್ಯತೆಗಳು ಬರೇ ಇವನ್ನು ಮಾತ್ರ ಅವಲಂಬಿಸಿರುವುದೇ ಅಥವಾ ನಿರ್ಲಕ್ಷ್ಯ ಧೋರಣೆಯೇ?
       ಮಾಧ್ಯಮ ಕ್ಷೇತ್ರವೆಂಬುದು ಸ್ವತಂತ್ರ ವ್ಯವಸ್ಥೆ. ಇಲ್ಲಿ ರಾಜಕಾರಣಿ ವಿಮರ್ಶೆಗೊಳಗಾಗಬೇಕು. ಆಡಳಿತ ವ್ಯವಸ್ಥೆಯನ್ನು ಪರೀಕ್ಷೆಗೊಡ್ಡಬೇಕು. ಪಕ್ಪಮೋಹ, ಜಾತಿಮೋಹ, ಭಾಷೆ ಮೋಹಗಳಂ ಹೊರಗೆ ನಿಂತು ನೋಡುವ ಕಣ್ಣು ಇರಬೇಕು. ಜೊತೆಗೇ ರಾಜಕೀಯ ವ್ಯವಸ್ಥೆಯ ತಪ್ಪುಗಳನ್ನು ಎತ್ತಿ ಹೇಳುತ್ತಾ, ಜನರನ್ನು ಎಚ್ಚರಿಸುತ್ತಾ ಮತ್ತು ಅಗತ್ಯವೆಂದು ಕಂಡುಬಂದಾ ಗಲೆಲ್ಲ ಜನರನ್ನು ಪ್ರತಿಚಳವಳಿಗೆ ಸಜ್ಜುಗೊಳಿಸುತ್ತಾ ನಿರ್ಮಾಣಾತ್ಮಕ ಪಾತ್ರದಲ್ಲಿ ಗುರುತಿಸಿಕೊಳ್ಳಬೇಕು. ರಾಯಚೂರು ಸಮಾವೇಶವು ಪತ್ರಿಕೆಗಳ ಆದ್ಯತಾ ಪಟ್ಟಿಯಲ್ಲಿ ಕಾಣಿಸಿಕೊಳ್ಳಬೇಕಿತ್ತೆಂದು ಅನಿಸುವುದು ಈ ಕಾರಣಕ್ಕೆ. ಮದ್ಯ ಒಂದು ಸಾಮಾಜಿಕ ಪಿಡುಗು. ಬಡವರೇ ಹೆಚ್ಚಿರುವ ಈ ದೇಶದ ಪಾಲಿಗೆ ಮದ್ಯವು ನಿಧಾನ ರೋಗವಾಗಿ ಮಾರ್ಪಟಿರುವುದು ಎಲ್ಲರಿಗೂ ಗೊತ್ತು. ಅಲ್ಲದೇ ಇದರಿಂದ ತೊಂದರೆಗೊಳಪಡುತ್ತಿರುವವರಲ್ಲಿ ಅತ್ಯಂತ ಹೆಚ್ಚಿರುವುದು ಮಹಿಳೆಯರೇ. ಇವನ್ನೆಲ್ಲ ಸರಕಾರವೇ ಬಿಡುಗಡೆಗೊಳಿಸುವ ಅಂಕಿ ಅಂಶಗಳೇ ಕಾಲಕಾಲಕ್ಕೆ ದೃಢಪಡಿಸುತ್ತಲೂ ಇವೆ. ಇಷ್ಟಿದ್ದೂ, ಮದ್ಯವು ಯಾಕೆ ನಿಷೇಧಕ್ಕೆ ಒಳಪಡುತ್ತಿಲ್ಲ ಅನ್ನುವ ಪ್ರಶ್ನೆ ಅಸಹಜವೋ ಅಗಂಭೀರವೋ ಆಗಬೇಕಿಲ್ಲ. ಜನರ ನಾಡಿಮಿಡಿತಕ್ಕೆ ಸ್ಪಂದಿಸಬೇಕಾದ ರಾಜಕಾರಣಿಗಳು ಅದರಲ್ಲಿ ವಿಫಲವಾದಾಗ ಜನರು ಸಂಘಟಿತರಾಗುತ್ತಾರೆ. ಸಭೆ ಸೇರುತ್ತಾರೆ. ಇಂಥ ಸಮಯದಲ್ಲಿ ಪತ್ರಿಕೆಗಳು ತಮ್ಮ ಆದ್ಯತಾ ಪಟ್ಟಿಯಲ್ಲಿ ಬದಲಾವಣೆ ತರದೇ ಹೋದರೆ, ಅವು ರಾಜಕಾರಣದ ಮುಖವಾಣಿ ಎಂಬ ಬಿರುದಿಗೆ ಹೆಚ್ಚು ನಿಕಟವಾಗುತ್ತದೆ. ಒಂದು ರೀತಿಯಲ್ಲಿ, ಪ್ರತಿಭಟನೆ, ಸಾಮಾಜಿಕ ಚಟುವಟಿಕೆಗಳೆಂಬುದು ರಾಜಕೀಯ ವ್ಯವಸ್ಥೆಯ ವೈಫಲ್ಯದ ಸಂಕೇತ. ವ್ಯವಸ್ಥೆ ಸರಿ ಇದ್ದರೆ ಪ್ರತಿಭಟನೆಯ ಅಗತ್ಯವೇ ಇಲ್ಲ. ಆದ್ದರಿಂದ ರಾಜಕೀಯರಹಿತ ಸುದ್ದಿಗಳಿಗೆ ಆದ್ಯತೆಯನ್ನು ಕೊಟ್ಟು ಪತ್ರಿಕೆಗಳು ರಾಜಕೀಯ ವ್ಯವಸ್ಥೆಯನ್ನು ತರಾಟೆಗೆತ್ತಿಕೊಳ್ಳಲಿ ಎಂದು ಬಯಸುವುದು. ರಾಯಚೂರು ಸಮಾವೇಶ ಮುಖ್ಯವಾಗಬೇಕಾದದ್ದೂ ಈ ಹಿನ್ನೆಲೆಯಲ್ಲೇ. ಆದರೆ ಹಾಗಾಗಿಲ್ಲ ಅನ್ನುವುದು ವಿಷಾದಕರ.


No comments:

Post a Comment