Friday 17 November 2017

870 ದಿನಗಳು ಮತ್ತು...

      ಯೋಧರ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಪಕ್ಷದ ನಾಯಕರು ಆಗಾಗ ವ್ಯಕ್ತಪಡಿಸುತ್ತಿರುವ ಹೆಮ್ಮೆ, ಅಭಿಮಾನ, ಗೌರವಗಳೆಲ್ಲ ಎಷ್ಟು ಪ್ರಾಮಾಣಿಕ ಎಂಬುದನ್ನು ಕಳೆದವಾರ ದೆಹಲಿಯ ಜಂತರ್ ಮಂತರ್ ಸ್ಪಷ್ಟಪಡಿಸಿತು. ಏಕ ಶ್ರೇಣಿ, ಏಕ ಪಿಂಚಣಿ ಎಂಬ ಆಗ್ರಹವನ್ನು ಮುಂದಿಟ್ಟು ಕಳೆದ 870 ದಿನಗಳಗಿಂತಲೂ ಅಧಿಕ ಸಮಯದಿಂದ ಜಂತರ್ ಮಂತರ್‍ನಲ್ಲಿ ಪ್ರತಿಭಟಿಸುತ್ತಿದ್ದ ಮಾಜಿ ಯೋಧರನ್ನು ದೆಹಲಿ ಪೊಲೀಸರು ಬಲವಂತದಿಂದ ತೆರವುಗೊಳಿಸಿದರು. ಹಾಗೆ ತೆರವುಗೊಂಡ ಈ ವಯೋವೃದ್ಧ ಯೋಧರು ಪಾರ್ಲಿಮೆಂಟ್ ರಸ್ತೆಯಲ್ಲಿ ಪ್ರತಿಭಟನೆಗೆ ಕುಳಿತರು. ಅಲ್ಲಿಂದಲೂ ತೆರವುಗೊಳಿಸಲಾಯಿತು. ಹಾಗಂತ, ಜಂತರ್ ಮಂತರ್‍ನಲ್ಲಿ ಯಾವುದೇ ಪ್ರತಿಭಟನೆ ಹಮ್ಮಿಕೊಳ್ಳಬಾರದೆಂದು ರಾಷ್ಟ್ರೀಯ ಹಸಿರು ಆಯೋಗವು ನೀಡಿದ ನಿರ್ದೇಶನದಂತೆ ತಾವು ಕ್ರಮ ಕೈಗೊಂಡಿರುವುದಾಗಿ ದೆಹಲಿ ಪೊಲೀಸರು ತಮ್ಮನ್ನು ಸಮರ್ಥಿಸಿಕೊಳ್ಳಬಹುದು. ಆದರೆ ನಿವೃತ್ತ ಯೋಧರು (IESM - ಭಾರತದ ಮಾಜಿ ನಿವೃತ್ತ ಯೋಧರ ಚಳವಳಿ) ಜಂತರ್ ಮಂತರ್‍ನಲ್ಲಿ ಪ್ರತಿಭಟನೆ ಪ್ರಾರಂಭಿಸಿದ್ದು ನಿನ್ನೆ ಮೊನ್ನೆಯಲ್ಲ. 2015 ರಿಂದಲೇ ಈ ಪ್ರತಿಭಟನೆ ಆರಂಭವಾಗಿದೆ. ಮನ್‍ಮೋಹನ್ ಸಿಂಗ್ ನೇತೃತ್ವದ ಯುಪಿಎ ಸರಕಾರವು 6ನೇ ಕೇಂದ್ರೀಯ ವೇತನ ಆಯೋಗದ ಶಿಫಾರಸುಗಳನ್ನು ಜಾರಿಗೊಳಿಸುವಂತೆ ಒತ್ತಾಯಿಸಿ 2008ರಲ್ಲಿ ಹುಟ್ಟಿಕೊಂಡದ್ದೇ IESM. ಏಕ ಶ್ರೇಣಿ, ಏಕ ಪಿಂಚಣಿಯನ್ನು ಆಗ್ರಹಿಸಿ ಆ ಬಳಿಕದಿಂದ ನಿವೃತ್ತ ಯೋಧರು ವಿವಿಧ ಹಕ್ಕೊತ್ತಾಯಗಳನ್ನು ಮಂಡಿಸುತ್ತಾ ಬಂದರು. ಯುಪಿಎ ಸರಕಾರವು ಏಕ ಶ್ರೇಣಿ ಏಕ ಪಿಂಚಣಿ ಆಗ್ರಹವನ್ನು ಒಪ್ಪಿಕೊಳ್ಳುವ ಸೂಚನೆ ಕೊಟ್ಟಿತ್ತಾದರೂ 2014ರ ಚುನಾವಣೆಯ ಸಂದರ್ಭದಲ್ಲಿ ನರೇಂದ್ರ ಮೋದಿಯವರು ಯೋಧರ ಆಗ್ರಹಕ್ಕೆ ದನಿಗೂಡಿಸಿದರು. ಅಧಿಕಾರಕ್ಕೆ ಬಂದರೆ ಏಕ ಶ್ರೇಣಿ ಏಕ ಪಿಂಚಣಿ ಬೇಡಿಕೆಯನ್ನು ಪೂರೈಸುವುದಾಗಿ ಮಾತು ಕೊಟ್ಟರು. ಕೇವಲ ಇದೊಂದೇ ಅಲ್ಲ, ಗಡಿಯಲ್ಲಿ ಹುತಾತ್ಮಾರಾಗುತ್ತಿರುವ ಯೋಧರಿಗಾಗಿ ಚುನಾವಣಾ ಭಾಷಣ ಮಾಡಿದಲ್ಲೆಲ್ಲ ಅವರು ಮರುಗಿದರು. ಭಾರತೀಯ ಯೋಧರ ಒಂದು ತಲೆಗೆ ಪಾಕ್ ಯೋಧರ ಹತ್ತು ತಲೆಯನ್ನು ಕತ್ತರಿಸಿ ತರುವುದಾಗಿ ಬಿಜೆಪಿ ನಾಯಕರು ಘೋಷಿಸಿದ್ದು ಇದೇ ಸಂದರ್ಭದಲ್ಲಿ. ಯೋಧರು ಗಡಿಯಲ್ಲಿ ಎಚ್ಚರದಿಂದಿರುವುದರಿಂದ ನಾವು ಸುಖವಾಗಿ ನಿದ್ದೆ ಮಾಡುತ್ತೇವೆ ಎಂಬಂತಹ ಹತ್ತು ಹಲವು ಭಾವುಕ ಮಾತುಗಳನ್ನು ಅವರು ತೇಲಿಸಿ ಬಿಟ್ಟರು. ಆದರೆ ಯಾವಾಗ ನರೇಂದ್ರ ಮೋದಿಯವರು ಪ್ರಧಾನಿಯಾದರೋ ಏಕ ಶ್ರೇಣಿ ಏಕ ಪಿಂಚಣಿ ಎಂಬುದು ನಿಧಾನವಾಗಿ ತೆರೆಮರೆಗೆ ಸರಿಯತೊಡಗಿತು. ನಿವೃತ್ತ ಯೋಧರು 2015 ಜೂನ್‍ನಲ್ಲಿ ಮತ್ತೆ ಚಳವಳಿಗೆ ಧುಮುಕಿದರು. ಅದರ ಪರಿಣಾಮವಾಗಿ ನರೇಂದ್ರ ಮೋದಿ ಸರಕಾರವು ಏಕ ಶ್ರೇಣಿ ಏಕ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಿತಾದರೂ ಯೋಧರ ಒಂದು ದೊಡ್ಡ ಗುಂಪು ಅಸಮಾಧಾನ ವ್ಯಕ್ತಪಡಿಸಿತು. ತಮ್ಮ ಆಗ್ರಹದ ಪ್ರಕಾರ ಮತ್ತು ಭರವಸೆ ನೀಡಿದ ಪ್ರಕಾರ ನಿಯಮಾವಳಿಗಳನ್ನು ಇದರಲ್ಲಿ ರಚಿಸಲಾಗಿಲ್ಲ ಎಂದು ಅದು ಆರೋಪಿಸಿತು. ಪ್ರತಿಭಟನೆ ಪ್ರಾರಂಭಿಸಿತು. ಅಂದಿನಿಂದ ಇಂದಿನವರೆಗೆ ಈ ಯೋಧರು ಪ್ರತಿಭಟಿಸು ತ್ತಲೇ ಇದ್ದಾರೆ. 870 ದಿನಗಳಿಗಿಂತಲೂ ಹೆಚ್ಚು ದಿನ ಈ ಹಿರಿ ವಯಸ್ಸಿನ ಯೋಧರನ್ನು ಬೀದಿ ಪಾಲಾಗಿಸಿದ ಸರಕಾರವೊಂದು ಇದೀಗ ಅವರ ತೆರವು ಕಾರ್ಯಾಚರಣೆಗೂ ತಮಗೂ ಸಂಬಂಧವಿಲ್ಲವೆಂಬಂತೆ ವರ್ತಿಸುತ್ತಿದೆ. ನಿಜವಾಗಿ, ಪ್ರಶ್ನಿಸಬೇಕಾದದ್ದು ತೆರವು ಕಾರ್ಯಾಚರಣೆಯನ್ನಲ್ಲ, 2 ವರ್ಷಕ್ಕಿಂತಲೂ ಹೆಚ್ಚು ಕಾಲ ಯೋಧರನ್ನು ಸರಕಾರವೊಂದು ಬೀದಿಪಾಲು ಮಾಡಿತಲ್ಲ, ಇದು ಎಷ್ಟು ಸರಿ? ಯೋಧರ ಸೇವೆಯನ್ನು ಪಟ್ಟಿ ಮಾಡಿ ಕೇಳುಗರನ್ನು ಭಾವುಕಗೊಳಿಸುವ ಪಕ್ಷವೊಂದು ಹೀಗೆ ಯೋಧರನ್ನು ನಿಷ್ಕರುಣೆಯಿಂದ ನಡೆಸಿಕೊಳ್ಳುವುದು ನೈತಿಕವೇ? ಏಕ ಶ್ರೇಣಿ ಏಕ ಪಿಂಚಣಿ ನಿಯಮವನ್ನು ಯೋಧರ ಒಂದು ಗುಂಪು ಒಪ್ಪಿಕೊಂಡಿದೆ ಎಂಬುದು ಇನ್ನೊಂದು ಗುಂಪನ್ನು ಸತಾಯಿಸುವುದಕ್ಕಿರುವ ಪರವಾನಿಗೆ ಆಗುತ್ತದೆಯೇ? ಸದ್ಯ ಪ್ರತಿಭಟನೆಯಲ್ಲಿ ತೊಡಗಿರುವವರಲ್ಲಿ ಭೂ, ವಾಯು ಮತ್ತು ನೌಕಾ ದಳದ ಪ್ರಮುಖ ನಿವೃತ್ತ ಅಧಿಕಾರಿಗಳಿದ್ದಾರೆ. ಕೇಂದ್ರದ ಏಕಶ್ರೇಣಿ ಏಕಪಿಂಚಣಿ ಯೋಜನೆಯನ್ನು ಒಪ್ಪಿಕೊಂಡ ಯೋಧರು ಹೇಗೆ ದೇಶ ಸೇವಕರೋ ಒಪ್ಪಿಕೊಳ್ಳದ ಇವರೂ ದೇಶಸೇವಕರೇ. ಯೋಧರ ಯೋಗಕ್ಷೇಮಕ್ಕೆ ಆದ್ಯತೆ ಕೊಡುವ ರೀತಿಯಲ್ಲಿ ಸೇನಾ ನೆಲೆಗಳಿಗೆ ಭೇಟಿ, ಯೋಧರ ಜೊತೆ ದೀಪಾವಳಿ ಆಚರಣೆ ಇತ್ಯಾದಿಗಳನ್ನು ಸರಕಾರ ಮಾಡುತ್ತದಲ್ಲ, ಇದರ
ಅರ್ಥವೇನು? ಇವೆಲ್ಲ ಕ್ಯಾಮರಾ ಕೇಂದ್ರಿತ ಕಾರ್ಯಕ್ರಮಗಳೇ? ಬರೇ ತುಟಿ ಸೇವೆಗಳೇ?
     2014ರ ಲೋಕಸಭಾ ಚುನಾವಣೆಯಲ್ಲಿ ಯೋಧರು ಮುಖ್ಯ ಚರ್ಚಾವಿಷಯವಾಗಿದ್ದರು. ಒಂದೆಡೆ ಪಾಕಿಸ್ತಾನವನ್ನು ಹಳಿಯುವುದು ಮತ್ತು ಇನ್ನೊಂದೆಡೆ ಭಾರತೀಯ ಯೋಧರ ಯೋಗ ಕ್ಷೇಮದ ಬಗ್ಗೆ ಕರುಣಾಭರಿತ ಮಾತುಗಳನ್ನಾಡುವುದನ್ನು ಬಿಜೆಪಿ ಅಭ್ಯಾಸ ಮಾಡಿಕೊಂಡಿತ್ತು. ಗಡಿಯಲ್ಲಿ ಯೋಧರ ಮೇಲೆ ನಡೆಯುವ ಪ್ರತಿ ದಾಳಿ ಪ್ರಕರಣವನ್ನೂ ಬಿಜೆಪಿ ಚುನಾವಣಾ ವಿಷಯವಾಗಿ ಮಾರ್ಪಡಿಸಿಕೊಂಡಿತ್ತು. ಒಂದು ವೇಳೆ, ಬಿಜೆಪಿ ಅಧಿಕಾರಕ್ಕೆ ಬಂದರೆ ಪಾಕ್ ಧ್ವಂಸಗೊಳ್ಳುತ್ತದೆ, ಗಡಿ ಶಾಂತವಾಗುತ್ತದೆ, ಯೋಧರೆಲ್ಲ ಚೆನ್ನಾಗಿ ನಿದ್ದೆ ಮಾಡುತ್ತಾರೆ.. ಇತ್ಯಾದಿ ಇತ್ಯಾದಿ ನಿರೀಕ್ಷೆಗಳ ಗಂಟನ್ನು ಬಿಜೆಪಿ ಬೆಂಬಲಿಗರು ದೇಶದಾದ್ಯಂತ ಹರಡಲು ಯಶಸ್ವಿಯಾಗಿದ್ದರು. ಸದ್ಯ ಆ ಪೌರುಷದ ಹೇಳಿಕೆ ಮತ್ತು ಹುಟ್ಟಿಸಿದ ನಿರೀಕ್ಷೆಗಳಿಗೆ ಮೂರೂವರೆ ವರ್ಷಗಳು ಸಂದಿವೆ. ದುರಂತ ಏನೆಂದರೆ, ಈ ಮೂರೂವರೆ ವರ್ಷಗಳಲ್ಲಿ 870ಕ್ಕಿಂತಲೂ ಅಧಿಕ ದಿನ ನಮ್ಮ ದೇಶದ ಹೆಮ್ಮೆಯ ಯೋಧರು ನ್ಯಾಯ ಕೇಳುತ್ತಾ ಬೀದಿಯಲ್ಲಿ ಕಳೆದಿದ್ದಾರೆ. ಗಡಿಯಲ್ಲಿರುವ ಯೋಧರ ಯೋಗಕ್ಷೇಮದ ವಿಷಯ ಬಿಟ್ಟು ಬಿಡಿ, ಗಡಿಯೊಳಗಿರುವ ವಯೋವೃದ್ಧ ಯೋಧರ ಯೋಗಕ್ಷೇಮಕ್ಕೇ ಸ್ಪಂದಿಸಲು ಈ ಸರಕಾರಕ್ಕೆ ಇನ್ನೂ ಸಾಧ್ಯವಾಗಿಲ್ಲ. ಗಡಿಯಂತೂ ಉದ್ವಿಘ್ನತೆಯಲ್ಲೇ  ಇದೆ. ಯುಪಿಎ ಸರಕಾರ ಇರುವಾಗ ಗಡಿಯಿಂದ ಯಾವೆಲ್ಲ ದುಃಖಕರ ಸುದ್ದಿಗಳು ಬರುತ್ತಿತ್ತೋ ಅವು ಈಗಲೂ ಮುಂದುವರಿದಿವೆ. ಪಾಕಿಸ್ತಾನವಂತೂ ಮೂರೂವರೆ ವರ್ಷಗಳ ಹಿಂದೆ ಹೇಗಿತ್ತೋ ಹಾಗೆಯೇ ಇದೆ. 2014ರಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಯೋಧರ ಕುರಿತಂತೆ ಮಾಡಿರುವ ಭಾಷಣದ ತುಣುಕುಗಳನ್ನು ಇವತ್ತು ಯಾರಾದರೂ ಮರು ಕೇಳಿಸಿಕೊಂಡರೆ ಆ ನರೇಂದ್ರ ಮೋದಿ ಈಗಿನ ಪ್ರಧಾನಿ ನರೇಂದ್ರ ಮೋದಿ ಅಲ್ಲವೇ ಅಲ್ಲ ಎಂದು ಖಂಡಿತ ಹೇಳಿಯಾರು. ಅಂದಿನ ಭಾಷಣಗಾರ ಮೋದಿಗೂ ಇಂದಿನ ಪ್ರಧಾನಿ ಮೋದಿಗೂ ವಿವರಿಸಲಾಗದ ಅಂತರ ಇದೆ. 870 ದಿನಗಳಿಂದ ಬೀದಿಯಲ್ಲಿರುವ ನಿವೃತ್ತ ಯೋಧರು ಇದಕ್ಕೆ ಒಂದು ಉದಾಹರಣೆ ಮಾತ್ರ.

No comments:

Post a Comment