Friday 15 December 2017

ಬುಡನ್ ಗಿರಿಯ ಭಕ್ತಿ ಎಲ್ಲಿಯವರೆಗೆ?

      ಚಿಕ್ಕಮಗಳೂರು ಮತ್ತು ಹುಣಸೂರಿನಲ್ಲಿ ನಡೆದ ಬೆಳವಣಿಗೆಗಳು ಕೆಲವು ಪ್ರಮುಖ ಪ್ರಶ್ನೆಗಳನ್ನು ಎತ್ತುತ್ತಿವೆ. ಎರಡೂ ಕಡೆಯ ಮೆರವಣಿಗೆಗೆ ನೇತೃತ್ವ ನೀಡಿರುವುದು ಬಿಜೆಪಿ. ಹುಣಸೂರಿನ ವಿವಾದಿತ ಕಲ್ಕುಣಿಕೆಯ ರಂಗನಾಥ ಬಡಾವಣೆಯಲ್ಲಿ ಮೆರವಣಿಗೆ ಸಾಗಬಾರದೆಂದು ಜಿಲ್ಲಾಡಳಿತ ನಿರ್ಬಂಧ ವಿಧಿಸಿತ್ತು. ಆದರೆ ಹನುಮಂತೋತ್ಸವ ಮೆರವಣಿಗೆಯನ್ನು ಅಲ್ಲಿಂದಲೇ ಆರಂಭಿಸುವುದಾಗಿ ಬಿಜೆಪಿ ಸಂಸದರು ಘೋಷಿಸಿದರು. ಬಾಬಾ ಬುಡನ್‍ಗಿರಿಯಲ್ಲೂ ನಿರ್ಬಂಧಿತ ಪ್ರದೇಶವಿದೆ. ಮೆರವಣಿಗೆಕೋರರು ಅಲ್ಲಿಗೇ ನುಗ್ಗಿದರು. ಎರಡೂ ಕಡೆಯ ಬೆಳವಣಿಗೆಗಳು ಧರ್ಮ ಮತ್ತು ಭಕ್ತಿಯ ಹೆಸರಲ್ಲಿ ನಡೆದಿದೆ. ಸದ್ಯ ನಮ್ಮನ್ನು ನಾವು ಕೇಳಬೇಕಾದ ಪ್ರಶ್ನೆ ಏನೆಂದರೆ, ಭಕ್ತಿಯ ಮೂಲ ಉದ್ದೇಶ ಏನು? ದತ್ತಾತ್ರೇಯ ಸ್ವಾಮಿಯ ಭಕ್ತನಿಗೆ ಅಥವಾ ಹನುಮಂತನ ಭಕ್ತನಿಗೆ ಕಾನೂನನ್ನು ಮೀರಿ ನಡೆದುಕೊಳ್ಳಬೇಕೆಂಬ ಇಚ್ಛೆ ಬರುವುದು ಹೇಗೆ? ಭಕ್ತಿಯ ಇನ್ನೊಂದು ಅರ್ಥವೇ ಶಾಂತಿ ಮತ್ತು ಸರ್ವಹಿತ. ಆದ್ದರಿಂದಲೇ, ಧಾರ್ಮಿಕ ಕ್ಷೇತ್ರಗಳಲ್ಲಿ ನಡೆಯುವ ಕಾರ್ಯಕ್ರಮಗಳು ರಾಗ-ದ್ವೇಷಗಳಿಂದ ಮುಕ್ತವಾಗಿರುತ್ತವೆ. ಕುಂಭ ಮೇಳದಲ್ಲಿ ಸಾವಿರಾರು ಮಂದಿ ಸೇರುತ್ತಾರೆ. ಇಂಥ ಅನೇಕಾರು ಉದಾಹರಣೆಗಳನ್ನು ಕೊಡಬಹುದು. ಈ ದೇಶದಲ್ಲಿ ಮಂದಿರ-ಮಸೀದಿ-ಚರ್ಚ್‍ಗಳು ಪ್ರತಿದಿನವೆಂಬಂತೆ ತುಂಬಿಕೊಂಡಿರುತ್ತವೆ. ಭಕ್ತರು ತಮಗಿಷ್ಟ ಬಂದಂತೆ ನಡಕೊಂಡು ತೃಪ್ತಿಪಡುತ್ತಾರೆ. ಅಲ್ಲಿ ಲಾಠಿ ಪ್ರಹಾರ ಮಾಡಬೇಕಾದ, ಕೇಸು ದಾಖಲಿಸಿಕೊಳ್ಳಬೇಕಾದ ಯಾವ ಸನ್ನಿವೇಶವೂ ನಿರ್ಮಾಣವಾಗುವುದಿಲ್ಲ. ಇವಕ್ಕೆ ಭಿನ್ನವಾಗಿ ಬಾಬಾ ಬುಡನ್‍ಗಿರಿ ಯಾಕಿದೆ? ನಿರ್ಬಂಧವನ್ನು ಮುರಿದೇ ಭಕ್ತಿ ಪ್ರದರ್ಶಿಸುತ್ತೇವೆ ಎಂಬ ಹಠದ ಹಿಂದಿರುವುದು ಏನು?
    ನಿಜವಾಗಿ, ಬಾಬ ಬುಡನ್‍ಗಿರಿ ಎಂಬುದು ಸಾಮಾನ್ಯ ಜನರಿಗೆ ಸಂಬಂಧಿಸಿ ಹೇಳುವುದಾದರೆ, ಯಾರೊಬ್ಬರ ಸೊತ್ತೂ ಅಲ್ಲ. ಹೆಸರು ಬಾಬ ಬುಡನ್‍ಗಿರಿ ಎಂದಿದ್ದರೂ ಹಿಂದೂ ಮತ್ತು ಮುಸ್ಲಿಮರಿಬ್ಬರೂ ಸಮಾನವಾಗಿ ಅಲ್ಲಿ ನಡಕೊಳ್ಳುತ್ತಿದ್ದಾರೆ. ವಿವಾದಕ್ಕಿಂತ ಮೊದಲೂ ಮತ್ತು ಆ ಬಳಿಕವೂ ಇದು ಮುಂದುವರಿದೇ ಇದೆ. ಹೀಗಿರುವಾಗ, ಬುಡನ್‍ಗಿರಿಯ ಬೆಟ್ಟವನ್ನು ವರ್ಷಕ್ಕೊಮ್ಮೆ ಹತ್ತಿ ಅವರು ಮತ್ತು ನಾವು ಎಂದು ಸಮಾಜವನ್ನು ವರ್ಗೀಕರಿಸುವುದು ಯಾಕೆ? ಈ ದೇಶದಲ್ಲಿ 80%ದಷ್ಟಿರುವ ಬೃಹತ್ ಸಮುದಾಯವೊಂದಕ್ಕೆ 15%ದಷ್ಟಿರುವ ಪುಟ್ಟ ಸಮುದಾಯದಿಂದ ಬೆದರಿಕೆ ಇದೆ ಎಂಬಂತೆ ಬಿಂಬಿಸುವುದರ ನಿಜ ಉದ್ದೇಶ ಏನು? ಯಾವುದೇ ಕಾಲದಲ್ಲಿ 15%ದಷ್ಟಿರುವ ಪುಟ್ಟ ಗುಂಪೊಂದು 80%ದಷ್ಟಿರುವ ಬೃಹತ್ ಗುಂಪನ್ನು ಬೆದರಿಸಿದ್ದಿದೆಯೇ? ಹಾಗಂತ, ಈ ಪುಟ್ಟ ಗುಂಪಿನ ಬಳಿ ಅಧಿಕಾರ ಇಲ್ಲ. ಕಾರ್ಯಾಂಗದ ಮೇಲೆ ಯಾವ ಹಿಡಿತವೂ ಇಲ್ಲ. ನ್ಯಾಯಾಂಗದಲ್ಲಿ ಅದರ ಪ್ರತಿನಿಧಿಗಳು ಭೂತಗನ್ನಡಿ ಹಿಡಿದು ಹುಡುಕಿದರೂ ಸಿಗದಷ್ಟು ಅಲ್ಪ ಪ್ರಮಾಣದಲ್ಲಿದ್ದಾರೆ. ಶೈಕ್ಷಣಿಕವಾಗಿ ಹಿಂದುಳಿದಿರುವ, ಆರ್ಥಿಕವಾಗಿ ಪ್ರಪಾತದಲ್ಲಿರುವ ಮತ್ತು ರಾಜಕೀಯವಾಗಿ ಗುರುತೇ ಇಲ್ಲದ ಪುಟ್ಟ ಗುಂಪನ್ನು ಪ್ರತಿವರ್ಷ ಬಾಬಬುಡನ್ ಗಿರಿಯಲ್ಲಿ ನಿಂತು ಆಕ್ಷೇಪಿಸುವುದು ಮತ್ತು ಆ ಗುಂಪೇ ಬಾಬಾಬುಡನ್ ಗಿರಿ ಬೆಟ್ಟವನ್ನು ದತ್ತಾತ್ರೇಯ ಸ್ವಾಮಿ ಬೆಟ್ಟವಾಗುವುದರಿಂದ ತಡೆದಿದೆ ಎಂದೆಲ್ಲಾ ಆರೋಪಿಸುವುದು ಎಷ್ಟು ಸರಿ? ಒಂದು ವೇಳೆ, ಈ ಪುಟ್ಟ ಗುಂಪು ಅಷ್ಟೊಂದು ಪ್ರಭಾವಶಾಲಿಯಾಗಿರುತ್ತಿದ್ದರೆ ಈ ದೇಶದ ಕೋಟ್ಯಾಧಿಪತಿಗಳ ಪಟ್ಟಿಯಲ್ಲಿ ಮುಂಚೂಣಿಯಲ್ಲಿ ಅವರೇ ಇರಬೇಕಿತ್ತಲ್ಲವೇ? ಉದ್ಯಮ ಕ್ಷೇತ್ರವನ್ನು ಅವರೇ ಆಳಬೇಕಿತ್ತಲ್ಲವೇ? ರಾಜಕೀಯವಾಗಿ ಉನ್ನತ ಸ್ಥಾನವೆಲ್ಲ ಅವರೊಳಗೇ ಹಂಚಿಕೆಯಾಗಬೇಕಿತ್ತಲ್ಲವೇ? ಶೈಕ್ಪಣಿಕ ಸಂಸ್ಥೆಗಳು, ಆರೋಗ್ಯ ಕೇಂದ್ರಗಳು ಅವರ ಸುಪರ್ದಿಯಲ್ಲೇ  ಇರಬೇಕಿತ್ತಲ್ಲವೇ? ಆದರೆ ಮಾನವಾಭಿವೃದ್ಧಿಗೆ ಸಂಬಂಧಿಸಿ ಈ ದೇಶದಲ್ಲಿ ಇರುವ ಯಾವ ಅಂಕಿ-ಅಂಶಗಳನ್ನೇ ಎತ್ತಿಕೊಂಡರೂ ಅದರಲ್ಲಿ ಮುಸ್ಲಿಮರ ಸ್ಥಾನ ತೀರಾ ಕೆಳಮಟ್ಟದ್ದು. ಇಷ್ಟೊಂದು ದುರ್ಬಲ ಸಮುದಾಯ ಎಲ್ಲ ಕ್ಷೇತ್ರಗಳಲ್ಲೂ ಬಲಿಷ್ಟವಾಗಿರುವ ಸಬಲ ಸಮುದಾಯಕ್ಕೆ ಬೆದರಿಕೆಯಾಗಿದೆ ಎಂಬ ಪ್ರಚಾರದ ಹಿಂದಿರುವುದು ನಿಜಕ್ಕೂ ಯಾವುದು- ಭಕ್ತಿಯೋ ರಾಜಕೀಯವೋ?
1992ರಲ್ಲಿ ನಡೆದ ಬಾಬರಿ ಮಸೀದಿ ಧ್ವಂಸದ ಬಳಿಕದಿಂದ ತೊಡಗಿ ಮುಂದಿನ ಕೆಲವು ವರ್ಷಗಳ ವರೆಗೆ ಈ ದೇಶದ ಅಸಂಖ್ಯ ಸಣ್ಣ-ಪುಟ್ಟ ಗುಡಿ-ದೇಗುಲಗಳು ಅದ್ದೂರಿ ಕಾರ್ಯಕ್ರಮಗಳನ್ನು ಹಾಕಿಕೊಂಡವು. ಆವರೆಗೆ ಕೌಟುಂಬಿಕ ಆಚರಣೆಯಂತೆ ನಡೆದು ಮುಗಿದು ಹೋಗುತ್ತಿದ್ದ ವಾರ್ಷಿಕ ಕಾರ್ಯಕ್ರಮಗಳು ಮೆರವಣಿಗೆ ಮತ್ತು ಭಾರೀ ಪ್ರಚಾರದೊಂದಿಗೆ ನಡೆದುವು. ತೀಕ್ಷ್ಣ  ನುಡಿಯ ಭಾಷಣಗಳೂ ನಡೆದುವು. ಆದರೆ ಆ ಧ್ವಂಸ ಘಟನೆಯ ಎರಡು ದಶಕಗಳ ಬಳಿಕ ಈಗ ಅವುಗಳ ಜಾಡು ಹಿಡಿದು ನಡೆದರೆ, ತೀವ್ರ ನಿರಾಶೆಯೇ ಎದುರಾಗುತ್ತದೆ. ಆ ದೈವ-ದೇವಸ್ಥಾನಗಳು ಇವತ್ತು ಗತ ದಿನಗಳತ್ತ ಮರಳಿವೆ. ತಿವಿಯುವ ಭಾಷಣಗಳಾಗಲಿ, ಅದ್ಧೂರಿ ಮೆರವಣಿಗೆಗಳಾಗಲಿ ಇಲ್ಲದೇ ಹಳೆ ದಿನಗಳಂತೆ ಸಹಜವಾಗಿ ನಡೆಯುತ್ತಿವೆ. ನಿಜವಾಗಿ, ಭಕ್ತಿಯೆಂದರೆ ಇದುವೇ. ಇನ್ನೋರ್ವರನ್ನು ಗುರಿಯಾಗಿಸಿಕೊಂಡು ನಡೆಯುವ ಆಚರಣೆಯಲ್ಲಿ ಭಕ್ತಿ ಇರುವುದಿಲ್ಲ. ಬರೇ ಸದ್ದು ಇರುತ್ತದೆ. ಅದರ ಗುರಿ ಭಕ್ತಿಯಲ್ಲ, ಆ ಇನ್ನೊಬ್ಬರು ಅಥವಾ ಆ ಇನ್ನೊಂದು. ಅದು ಸಾಧಿತವಾದ ಕೂಡಲೇ ಸದ್ದು ನಿಲ್ಲುತ್ತದೆ. 1992ರ ಬಳಿಕದ ಈ ‘ಭಕ್ತಿ’ ಪ್ರದರ್ಶನದ ಹಿಂದೆ ರಾಜಕೀಯ ಇತ್ತು. ಆ ರಾಜಕೀಯಕ್ಕೆ ಅಸಹಜವಾದ ಭಕ್ತಿ ಪ್ರದರ್ಶನದ ಅಗತ್ಯ ಇತ್ತು. ಜೊತೆಗೇ ಕಲ್ಪಿತ ವೈರಿಯೊಂದರ ಅಗತ್ಯವೂ ಇತ್ತು. ಗುಮ್ಮವನ್ನು ತೋರಿಸಿ ಮಗುವನ್ನು ಪಳಗಿಸುವಂತೆ 15%ದಷ್ಟಿರುವ ಪುಟ್ಟ ಗುಂಪನ್ನು ಅತ್ಯಂತ ವಿಕಾರವಾಗಿ ತೋರಿಸಿ 80%ದಷ್ಟಿರುವ ಬೃಹತ್ ಗುಂಪನ್ನು ವಶೀಕರಿಸಲು ಆ ರಾಜಕೀಯ ಯತ್ನಿಸಿತು. ಈ ಪುಟ್ಟ ಗುಂಪಿನಿಂದ ಗುಡಿ-ದೇವಸ್ಥಾನಗಳ ಮೇಲೆ ಇರುವ ಬೆದರಿಕೆಗಳ ಬಗ್ಗೆ ಪ್ರಚಾರ ನಡೆಸಲಾಯಿತು. ನಿಜವಾಗಿ, ಈ ಪುಟ್ಟ ಗುಂಪಿಗೆ ಈ ಗುಡಿ-ದೇವಸ್ಥಾನಕ್ಕೆ ಬೆದರಿಕೆ ಒಡ್ಡುವ ಸಾಮಥ್ರ್ಯ ಬಿಡಿ, ಈ ಗುಡಿಗಳು ರಸ್ತೆಯುದ್ದಕ್ಕೂ ಹಾಕುವ ದೀಪಗಳನ್ನೇ ಆನಂದಿಸುವ ಸ್ಥಿತಿಯಲ್ಲಷ್ಟೇ ಅವು ಇದ್ದುವು. ಹೀಗೆ ಕಲ್ಪಿತ ವೈರಿಯನ್ನು ವಿಕಾರವಾಗಿ ತೋರಿಸಿ ತೀರಾ ಸ್ಥಳೀಯವಾಗಿ ಮತ್ತು ಸಾಂಪ್ರದಾಯಿಕವಾಗಿ ನಡೆಯುತ್ತಿದ್ದ ಆಚರಣೆಗಳನ್ನು ಅದ್ದೂರಿಯಾಗಿ ನಡೆಸಲಾಯಿತು. ಸಮಾಜ ನಿಧಾನಕ್ಕೆ ಅವರು ಮತ್ತು ನಾವು ಎಂದಾಗತೊಡಗಿತು. ಮನುಷ್ಯರೇ ಮನುಷ್ಯರನ್ನು ದ್ವೇಷಿಸುವ ಸ್ಥಿತಿಗೆ ತಲುಪಿತು. ಗುಡಿ ಮತ್ತು ಮಸೀದಿಗಳೆರಡೂ ವೈರಿಗಳಂತೆ ಬದುಕತೊಡಗಿದುವು. ಹೀಗೆ ಈ ಸಾಮಾಜಿಕ ವಿಭಜನೆಯು ಅಂತಿಮವಾಗಿ ‘ಮತ’ವಾಗಿ ಮಾರ್ಪಾಟುಗೊಂಡಿತು. ಸ್ಥಳೀಯ ಚುನಾವಣೆಗಳಲ್ಲೂ ಅದು ಬಿಂಬಿತವಾಯಿತು. ರಾಜಕೀಯ ಅಧಿಕಾರವೇ ಈ ಎಲ್ಲದರ ಗುರಿ ಆಗಿತ್ತಾದ್ದರಿಂದ ಅದು ಲಭ್ಯವಾದ ಮೇಲೆ ಆ ರಾಜಕೀಯ ಪP್ಷÀದ ಗಮನ ಬೇರೆಡೆಗೆ ತಿರುಗಿತು. ನಿಧಾನಕ್ಕೆ ಗುಡಿ-ದೇಗುಲಗಳು ಹಿಂದಿನ ಸ್ವರೂಪಕ್ಕೆ ಮರಳಿದುವು. ಕೃತಕ ಭಕ್ತಿ-ವೈಭವಗಳು ಕಾಣೆಯಾದುವು.
ಒಂದು ವೇಳೆ, ಬಾಬಾಬುಡನ್ ಗಿರಿಯ ವಿವಾದವು ಬಿಜೆಪಿ ಬಯಸಿದಂತೆಯೇ ಇತ್ಯರ್ಥವಾದರೆ ಆ ಬಳಿಕದಿಂದ ಈ ಬೆಟ್ಟ ದತ್ತಮಾಲಾಧಾರಿಗಳಿಲ್ಲದೇ ಭಣಗುಡುವ ಸಾಧ್ಯತೆ ಇದೆ. ಯಾಕೆಂದರೆ, ಈಗ ವಿವಾದ ಹುಟ್ಟುಹಾಕಿದವರ ಗುರಿ ಭಕ್ತಿಯಲ್ಲ.

No comments:

Post a Comment