Tuesday 26 December 2017

ತಲಾಕ್: ಸುಧಾರಣೆಯೋ, ಸಮಸ್ಯೆಯೋ?

   ಮತ್ತೊಂದು ಸುತ್ತಿನ ಚರ್ಚೆಗೆ ತಲಾಕ್ ಸಿದ್ಧವಾಗಿದೆ. ತ್ರಿವಳಿ ತಲಾಕನ್ನು ಸಂವಿಧಾನ ಬಾಹಿರವೆಂದು ಕಳೆದ ಆಗಸ್ಟ್ ನಲ್ಲಿ ಸುಪ್ರೀಮ್ ಕೋರ್ಟ್ ಘೋಷಿಸಿದ ಬಳಿಕ ಒಂದೆರಡು ವಾರಗಳ ತನಕ ‘ಮಾಧ್ಯಮ ಡಾರ್ಲಿಂಗ್’ ಆಗಿ ಗುರುತಿಸಿಕೊಂಡು ಬಳಿಕ ತಣ್ಣಗಾದ ‘ತಲಾಕ್’, ಮತ್ತೆ ಬಹು ಚರ್ಚಿತಗೊಳ್ಳುವುದಕ್ಕೆ ವೇದಿಕೆ ಸಿದ್ಧಗೊಳ್ಳುತ್ತಿದೆ. ಗೃಹ ಸಚಿವ ರಾಜನಾಥ್ ಸಿಂಗ್ ಅವರ ಅಧ್ಯಕ್ಷತೆಯಲ್ಲಿ ‘ಮುಸ್ಲಿಮ್ ಮಹಿಳೆಯ ವಿವಾಹ ಮತ್ತು ಹಕ್ಕು ರಕ್ಷಣಾ ಮಸೂದೆ’ಯನ್ನು ಕೇಂದ್ರ ಸರಕಾರ ಸಿದ್ಧಪಡಿಸಿದೆ. ಈ ಮಸೂದೆಯ ಸಂಪೂರ್ಣ ವಿವರಗಳು ಇನ್ನೂ ಬಹಿರಂಗವಾಗಿಲ್ಲದಿದ್ದರೂ ಬಹಿರಂಗವಾಗಿರುವ ವಿಷಯಗಳಲ್ಲಿ ಒಂದಷ್ಟು ಅನುಮಾನ ಮತ್ತು ಆತಂಕಕ್ಕೆ ಎಡೆ ಮಾಡಿಕೊಡುವ ಅಂಶಗಳಿವೆ. ಇಡೀ ಮಸೂದೆಯನ್ನು ಕೇಂದ್ರ ಸಚಿವರ ಆಂತರಿಕ ಸಮಿತಿ ರಚಿಸಿದೆ. ತ್ರಿವಳಿ ತಲಾಕ್ ನೀಡುವ ವ್ಯಕ್ತಿಗೆ ಮೂರು ವರ್ಷ ಜೈಲು ಶಿಕ್ಷೆ ಮತ್ತು ದಂಡ ವಿಧಿಸುವ ಅವಕಾಶವು ಈ ಮಸೂದೆಯಲ್ಲಿದೆ. ತ್ರಿವಳಿ ತಲಾಕನ್ನು ಜಾಮೀನುರಹಿತ ಅಪರಾಧವಾಗಿ ಪರಿಗಣಿಸಲಾಗುತ್ತದೆ. ತ್ರಿವಳಿ ತಲಾಕ್ ಪಡೆದುಕೊಂಡ ಮಹಿಳೆ ಪರಿಹಾರವನ್ನು ಬಯಸಿ ಮತ್ತು ಅಪ್ರಾಪ್ತ ಮಕ್ಕಳನ್ನು ತನ್ನ ಬಳಿ ಇರಿಸಿಕೊಳ್ಳುವುದಕ್ಕಾಗಿ ನ್ಯಾಯಾಲಯದ ಮೊರೆ ಹೋಗಬಹುದು. ಜಮ್ಮು-ಕಾಶ್ಮೀರವನ್ನು ಹೊರತುಪಡಿಸಿ ಭಾರತದಾದ್ಯಂತದ ತ್ರಿವಳಿ ತಲಾಕ್‍ಗಳು ಈ ಮಸೂದೆಯ ವ್ಯಾಪ್ತಿಗೆ ಒಳಪಡಲಿದೆ.
    ವಿಚಿತ್ರ ಏನೆಂದರೆ, ಮುಸ್ಲಿಮ್ ಸಮುದಾಯದ ಯಾರೊಬ್ಬರಲ್ಲೂ ಈ ಮಸೂದೆಗೆ ಸಂಬಂಧಿಸಿ ಚರ್ಚಿಸಲಾಗಿಲ್ಲ. ಈ ದೇಶದಲ್ಲಿ ಸುಮಾರು 20 ಕೋಟಿಯಷ್ಟು ಮುಸ್ಲಿಮರಿದ್ದಾರೆ. ಇಷ್ಟೊಂದು ಬೃಹತ್ ಜನಸಮುದಾಯದಲ್ಲಿ ತಪ್ಪಾಗಿ ಚಾಲ್ತಿಯಲ್ಲಿರುವ ಒಂದು ಸಂಪ್ರದಾಯದ ಮೇಲೆ ಕಾನೂನು ರಚಿಸುವಾಗ ಆ ಸಮುದಾಯದ ಧ್ವನಿಯನ್ನೇ ನಿರ್ಲಕ್ಷಿಸಬೇಕಾದ ಅಗತ್ಯ ಏನಿತ್ತು? ತ್ರಿವಳಿ ತಲಾಕ್ ಎಂಬುದು ಮುಸ್ಲಿಮ್ ಸಮುದಾಯವು ಸರ್ವಾನುಮತದಿಂದ ಬೆಂಬಲಿಸುತ್ತಿರುವ ವಿಚ್ಛೇದನ ಕ್ರಮವಲ್ಲ. ಇಸ್ಲಾಮಿನ ಪ್ರಕಾರ ವಿವಾಹವೆಂಬುದು ಒಂದು ಒಪ್ಪಂದ. ಯಾವ ಒಪ್ಪಂದವೇ ಆಗಲಿ, ಅದರ ಸಿಂಧುತ್ವಕ್ಕೆ ಕೆಲವು ನಿಯಮಗಳಿವೆ. ಸಾಕ್ಷಿಗಳು ಮತ್ತು ಅನುಮೋದಕರ ಹೊರತಾಗಿ ಒಪ್ಪಂದ ವೊಂದು ಊರ್ಜಿತಗೊಳ್ಳಲು ಸಾಧ್ಯವಿಲ್ಲ. ಇಸ್ಲಾಮಿನ ವಿವಾಹವೆಂಬುದು ಸಾಕ್ಷಿಗಳ ರುಜು ಮತ್ತು ಆಯಾ ಮಸೀದಿಗಳ ಅನುಮೋದನೆಯೊಂದಿಗೆ ನಡೆಯುತ್ತದೆ. ಒಂದು ವೇಳೆ, ಈ ಒಪ್ಪಂದವನ್ನು ಅನೂರ್ಜಿತಗೊಳಿಸುವುದಾದರೂ ಅದಕ್ಕೂ ಕೆಲವು ನಿಯಮಗಳಿವೆ. ವಿವಾಹಕ್ಕೆ ಸಾಕ್ಷಿಗಳು ಬೇಕಿರುವಂತೆಯೇ ವಿವಾಹ ವಿಚ್ಛೇದನಕ್ಕೂ ಸಾಕ್ಷಿಗಳ ಅಗತ್ಯ ಇದೆ. ತಲಾಕ್ ಎಂಬುದು ಏಕಮುಖ ಅಲ್ಲ. ಅದು ಬಹುಮುಖಿಯಾದುದು. ತಲಾಕನ್ನು ಪತಿ ಮತ್ತು ಪತ್ನಿಯ ನಡುವಿನ ಖಾಸಗಿ ವಿಷಯ ವಾಗಿ ಇಸ್ಲಾಮ್ ಪರಿಗಣಿಸುವುದಿಲ್ಲ. ಯಾವಾಗ ಅದು ಖಾಸಗಿ ವಿಷಯವಾಗಿ ಮಾರ್ಪಡುತ್ತದೋ ಆಗ ತ್ರಿವಳಿ ತಲಾಕ್‍ನಂತಹ ತಪ್ಪಾದ ಕ್ರಮಗಳು ರೂಢಿಗೆ ಬರುತ್ತವೆ. ನಿಜವಾಗಿ, ತಲಾಕ್ ನೀಡಬಯಸುವ ವ್ಯಕ್ತಿ ಅದಕ್ಕಾಗಿ ಕೆಲವು ನೀತಿ-ಸಂಹಿತೆಗಳನ್ನು ಪಾಲಿಸಬೇಕಾಗುತ್ತದೆ. ಮೊದಲು ಆತ ಆ ಬಗ್ಗೆ ಪತ್ನಿಗೆ ತಿಳಿಸಬೇಕಾಗುತ್ತದೆ. ಬಳಿಕ, ಪತ್ನಿಯ ಮತ್ತು ತನ್ನ ಕುಟುಂಬದ ತಜ್ಞರಲ್ಲಿ ವಿಷಯ ಪ್ರಸ್ತಾಪಿಸಬೇಕಾಗುತ್ತದೆ. ಕನಿಷ್ಠ ಮೂರು ತಿಂಗಳ ಅವಧಿಯ ಹೊರತು ತಲಾಕ್ ನೀಡಲು ಅಸಾಧ್ಯವಾಗಬಹುದಾದ ನಿಯಮವು ಇಸ್ಲಾಮಿನದ್ದು. ಹಾಗಂತ, ಈ ನೀತಿಸಂಹಿತೆ ನೂರು ಶೇಕಡಾ ಪಾಲನೆಯಾಗುತ್ತಿದೆ ಎಂದಲ್ಲ. ಮುಸ್ಲಿಮ್ ಸಮುದಾಯದಲ್ಲಿ ನಗಣ್ಯ ಸಂಖ್ಯೆಯಲ್ಲಾದರೂ ತ್ರಿವಳಿ ತಲಾಕನ್ನು ಪಾಲಿಸುವವರಿದ್ದಾರೆ. ಇದನ್ನು ಯಾರೂ ನಿರಾಕರಿಸುತ್ತಲೂ ಇಲ್ಲ. ಹಾಗಂತ, ಇಡೀ ಮುಸ್ಲಿಮ್ ಸಮುದಾಯವನ್ನೇ ಅಪರಾಧಿಯಂತೆ ಕಾಣುವ ಅಗತ್ಯ ಏನಿದೆ? ಮುಸ್ಲಿಮ್ ಸಮುದಾಯದ ಸುಧಾರಣೆಯೇ ಕೇಂದ್ರ ಸರಕಾರದ ಉದ್ದೇಶವೆಂದಾದರೆ, ಆ ಸಮುದಾಯದ ಧ್ವನಿಯನ್ನು ಆಲಿಸುವುದೂ ಮುಖ್ಯವಾಗಬೇಡವೇ? ಮುಸ್ಲಿಮ್ ಸಮುದಾಯದ ಕಲ್ಯಾಣವನ್ನು ಬಯಸಿ ಚಟುವಟಿಕೆಯಿಂದಿರುವ ಮಹಿಳೆಯರ ಮತ್ತು ಪುರುಷರ ಹಲವು ಸಂಘಟನೆಗಳು ಈ ದೇಶದಲ್ಲಿವೆ. ತ್ರಿವಳಿ ತಲಾಕ್‍ಗೆ ಸಂಬಂಧಿಸಿ ಸುಪ್ರೀಮ್ ಕೋರ್ಟ್‍ನಲ್ಲಿ ಮುಸ್ಲಿಮ್ ವೈಯಕ್ತಿಕ ಕಾನೂನು ಮಂಡಳಿ ತನ್ನ ವಾದವನ್ನು ಮಂಡಿಸಿದೆ. ಅದರ ನಿಲುವುಗಳು ಏನೇ ಇರಲಿ, ಸುಪ್ರೀಮ್ ಕೋರ್ಟ್‍ನ ತೀರ್ಪನ್ನು ಅದೂ ಒಪ್ಪಿಕೊಂಡಿದೆ. ಹೀಗಿರುವಾಗ, ಕರಡು ರಚನೆಯ ವೇಳೆ ಈ ಕಾನೂನು ಮಂಡಳಿಯೂ ಸೇರಿದಂತೆ ವಿವಿಧ ಸಂಘಟನೆಗಳು ಮತ್ತು ಶರೀಅತ್ ತಜ್ಞರ ಅಭಿಪ್ರಾಯಗಳನ್ನು ಕೇಳಬಹುದಿತ್ತಲ್ಲವೇ? ಒಂದು ಸಮುದಾಯದ ಮೇಲೆ ಕಾನೂನನ್ನು ಹೇರುವುದಕ್ಕೂ ಅದರ ವಿಶ್ವಾಸವನ್ನು ಗಳಿಸಿ ಕಾನೂನು ರೂಪಿಸುವುದಕ್ಕೂ ವ್ಯತ್ಯಾಸ ಇದೆ. ಒಂದು ಸರ್ವಾಧಿಕಾರಿ ನಿಲುವಾದರೆ ಇನ್ನೊಂದು ಪ್ರಜಾತಂತ್ರ ನಿಲುವು. ಕೇಂದ್ರ ಸರಕಾರ ಯಾಕೆ ಸರ್ವಾಧಿಕಾರಿ ನಿಲುವನ್ನೇ ಆಯ್ಕೆ ಮಾಡಿಕೊಂಡಿದೆ? ಅದರ  ಗುರಿ ತ್ರಿವಳಿ ತಲಾಕನ್ನು ನಿಷ್ಕ್ರಿಯ ಗೊಳಿಸುವುದಕ್ಕಿಂತಲೂ ಮುಸ್ಲಿಮ್ ಸಮುದಾಯವನ್ನು ಚರ್ಚೆಯ ಮೊನೆಯಲ್ಲಿ ನಿಲ್ಲಿಸುವುದೇ ಆಗಿದೆಯೇ? ಮುಸ್ಲಿಮ್ ಸಮುದಾಯದ ಸಂಘಟನೆಗಳೊಂದಿಗೆ ಸಮಾಲೋಚನೆ ನಡೆಸಿ ಮಸೂದೆ ರೂಪಿಸುವುದೆಂದರೆ, ‘ವಿವಾದ ರಹಿತ’ ಮಸೂದೆಯನ್ನು ತಯಾರಿಸುವುದು ಎಂದೇ ಅರ್ಥ. ಹಾಗೊಂದು ವೇಳೆ ವಿವಾದ ರಹಿತ ಮಸೂದೆ ರಚನೆಯಾಗಿ ಬಿಟ್ಟರೆ ಅದರಿಂದ ಮುಸ್ಲಿಮರಿಗೆ ಸಂಬಂಧಿಸಿ ತನ್ನ ‘ಉಗ್ರ ವರ್ಚಸ್ಸಿಗೆ’ ಧಕ್ಕೆಯಾಗಬಹುದು ಎಂದು ಕೇಂದ್ರ ಸರಕಾರ ಭಾವಿಸಿತೆ? ತಲಾಕ್, ಬಹುಪತ್ನಿತ್ವ, ಜಿಹಾದ್, ವಂದೇ ಮಾತರಂ.. ಇತ್ಯಾದಿಗಳೆಲ್ಲ ವಿವಾದವಾದಷ್ಟು ಕೇಂದ್ರ ಸರಕಾರಕ್ಕೆ ಲಾಭ ಹೆಚ್ಚು ಎಂಬುದನ್ನು ಚುನಾವಣೆಗಳು ಸಾಬೀತುಪಡಿಸುತ್ತಿವೆ. ಮುಸ್ಲಿಮ್ ವಿರೋಧಿ ಹಣೆಪಟ್ಟಿಯೊಂದನ್ನು ಸದಾ ಧರಿಸಿರಬೇಕೆಂಬುದು ಬಿಜೆಪಿಯ ಅಲಿಖಿತ ಸಂವಿಧಾನ. ಆ ಸಂವಿಧಾನದಂತೆಯೇ ತ್ರಿವಳಿ ತಲಾಕ್ ಮಸೂದೆಯನ್ನು ತಯಾರಿಸಲಾಯಿತೇ?
    ಅಷ್ಟಕ್ಕೂ, ವರದಕ್ಷಿಣೆ, ಅತ್ಯಾಚಾರ, ಗೃಹಹಿಂಸೆಯಂಥ ಅಪರಾಧಗಳ ವಿರುದ್ಧ ರಚಿಸಲಾದ ಕಾನೂನುಗಳು ಇವತ್ತು ದುರುಪಯೋಗವಾಗುತ್ತಿರುವುದು ಎಲ್ಲರಿಗೂ ಗೊತ್ತು. ಇಲ್ಲಿನ ನ್ಯಾಯಾಲಯಗಳೇ ಇದನ್ನು ಒಪ್ಪಿಕೊಂಡಿವೆ. ಒಂದು ರೀತಿಯಲ್ಲಿ ಪ್ರತಿ ಕಾನೂನೂ ದುರುಪಯೋಗದ ಸಾಧ್ಯತೆಯನ್ನು ಹೊಂದಿರುತ್ತವೆ ಎಂಬುದೇ ಸತ್ಯ. ಆಯಾ ಕ್ಷೇತ್ರದಲ್ಲಿ ತಜ್ಞರೆನಿಸಿಕೊಂಡವರೊಂದಿಗೆ ಸಮಾಲೋಚಿಸಿ ರೂಪಿಸಲಾದ ಈ ಮೇಲಿನ ಕಾನೂನುಗಳೇ ದುರುಪಯೋಗಕ್ಕೆ ಒಳಗಾಗಬಹುದಾದರೆ ಇನ್ನು ಮುಸ್ಲಿಮ್ ಸಮುದಾಯವನ್ನು ವಿಶ್ವಾಸಕ್ಕೆ ಪಡೆಯದೆಯೇ ರೂಪಿಸಲಾದ ಕಾನೂನು ಎಷ್ಟು ಪರಿಣಾಮಕಾರಿಯಾಗಬಹುದು? ಇನ್ನು ಮುಂದೆ, ‘ಸರಿ’ ತಲಾಕೂ ತ್ರಿವಳಿ ತಲಾಕ್ ಆಗಿ ಗುರುತಿಸಿಕೊಳ್ಳಬಹುದೇ? ಈ ವರೆಗೆ ಶೋಷಕ ಪಾತ್ರ ಪುರುಷನದ್ದಾಗಿತ್ತು. ಇನ್ನು ಅದು ಮಹಿಳೆಯ ಪಾಲಾಗಲಿದೆಯೇ? ಭಾರತೀಯ ನ್ಯಾಯಾಂಗ ವ್ಯವಸ್ಥೆಯು ಈಗಾಗಲೇ ‘ದೂರು ಭಾರ’ದಿಂದ ಕುಸಿದು ಕೂತಿದೆ. ಇನ್ನು ತ್ರಿವಳಿ ತಲಾಕ್‍ನ ಭಾರವು ಅದರ ಮೇಲೆ ಬಿದ್ದರೆ ಅದು ಅದರ ವೇಗವನ್ನು ಎಷ್ಟು ವರ್ಷಗಳ ಹಿಂದಕ್ಕೆ ಒಯ್ಯಬಹುದು? ದೂರು ಪ್ರತಿದೂರುಗಳ ಜಗ್ಗಾಟದಲ್ಲಿ ಯಾರು ಗೆಲ್ಲಬಹುದು? ಆ ಗೆಲುವಿನಲ್ಲಿ ನಿಜ ಗೆಲುವು ಯಾರಿಗೆಲ್ಲ ದಕ್ಕಬಹುದು? ಹಾಗೆ ನ್ಯಾಯ ಸಿಗುವಾಗ ದೂರುದಾರ ಪತಿ-ಪತ್ನಿ ಎಷ್ಟು ವರ್ಷಗಳನ್ನು ಖರ್ಚು ಮಾಡಬೇಕಾಗಬಹುದು?
ತಪ್ಪನ್ನು ತಿದ್ದಿಕೊಳ್ಳಬೇಕಾದುದು ಖಂಡಿತ ಅಗತ್ಯ. ಆದರೆ ಈ ತಿದ್ದುಪಡಿಗೆ ನೇತೃತ್ವವನ್ನು ನೀಡಿದವರ ವರ್ತನೆಯನ್ನು ನೋಡುವಾಗ ಈ ತಿದ್ದುಪಡಿಯೇ ಇನ್ನಷ್ಟು ತಪ್ಪುಗಳ ಉತ್ಪಾದಕವಾಗುವ ಸಾಧ್ಯತೆಯೇ ಕಾಣುತ್ತಿದೆ. ಇದು ಆತಂಕಕಾರಿ.



No comments:

Post a Comment