Thursday 17 May 2018

ಮಕ್ಕಳು ನಾಚಿಕೊಳ್ಳಬೇಕಾದ ವಿಧೇಯಕ

   

    ಇಡೀ ಜಗತ್ತಿನಲ್ಲಿ ಪತ್ರಕರ್ತರ ಕ್ಯಾಮರಾದ ಕಣ್ಣಿಗೆ ಮತ್ತು ಬರಹಗಾರರ ಲೇಖನಿಯ ಮೊನೆಗೆ ಸಿಗದ ಎರಡು
ಗುಂಪುಗಳೆಂದರೆ, ಹಿರಿಯರು ಮತ್ತು ಮಕ್ಕಳು. ಇದಕ್ಕೆ ಕಾರಣವೂ ಇದೆ. ಮಕ್ಕಳು ಮಾಧ್ಯಮಗಳ ಪಾಲಿಗೆ ಸಂಪನ್ಮೂಲಗಳಲ್ಲ. ಅವರು ಪತ್ರಿಕೆಗಳನ್ನು ಓದುವ ಸಾಧ್ಯತೆ ಕಡಿಮೆ. ಟಿ.ವಿ. ಚಾನೆಲ್‍ಗಳಲ್ಲಿ ಅವರ ಆಯ್ಕೆ ಕಾರ್ಟೂನ್ ಚಿತ್ರಗಳನ್ನು ಪ್ರಸಾರ ಮಾಡುವ ಚಾನೆಲ್‍ಗಳೇ ಹೊರತು ನ್ಯೂಸ್ ಅಥವಾ ಮನರಂಜನೆಯ ಚಾನೆಲ್‍ಗಳಲ್ಲ. ಸ್ವತಂತ್ರ ನಿರ್ಧಾರವನ್ನು ತಳೆಯಬಲ್ಲ ಸಾಮಥ್ರ್ಯ ಮಕ್ಕಳಿಗೆ ಇಲ್ಲದೇ ಇರುವುದರಿಂದ, ಅವರನ್ನು ಕೇಂದ್ರೀಕರಿಸಿ ಮಾಧ್ಯಮಗಳು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಅಗತ್ಯವೂ ಇರುವುದಿಲ್ಲ. ಆದ್ದರಿಂದಲೇ ಟಿ.ವಿ. ಚಾನೆಲ್‍ಗಳಲ್ಲಿ ಮತ್ತು ವಾರ್ತಾ ಮಾಧ್ಯಮಗಳಲ್ಲಿ ಮಕ್ಕಳು
ಸುದ್ದಿಯ ಕೇಂದ್ರವಾಗದೇ ಇರುವುದು. ಉತ್ತರ ಪ್ರದೇಶದ ಘೋರಕ್‍ಪುರ್ ಆಸ್ಪತ್ರೆಯಲ್ಲಿ ನಡೆದ ಮಕ್ಕಳ ಸಾವಿನಂಥ ಘಟನೆಗಳು ಮತ್ತು ಅತ್ಯಾಚಾರದಂಥ ಕ್ರೌರ್ಯಗಳು ನಡೆದಾಗ ಮಾತ್ರ ಮಕ್ಕಳು ಮಾಧ್ಯಮಗಳ ಕಣ್ಮಣಿ ಆಗಿಬಿಡುತ್ತಾರೆ. ಆಗ ಒಂದೆರಡು ದಿನಗಳ ಕಾಲ ಮಕ್ಕಳು ಮಾಧ್ಯಮಗಳಲ್ಲಿ ಸ್ಥಾನ ಪಡೆದುಕೊಳ್ಳುತ್ತಾರೆ. ಇದರಾಚೆಗೆ ಮಾಧ್ಯಮ ಜಗತ್ತಿಗೂ ಮಕ್ಕಳಿಗೂ ನಡುವೆ ಸಂಬಂಧ ಅಷ್ಟಕ್ಕಷ್ಟೇ. ಅಂದಹಾಗೆ, ಇಂಥ ಇನ್ನೊಂದು ಗುಂಪೂ ಇದೆ. ಅದು ದುಡಿಯಲು ಸಾಧ್ಯವಿಲ್ಲದ ಮತ್ತು ವೃದ್ಧಾಪ್ಯ ಸಹಜ ತೊಂದರೆಯನ್ನು ಅನುಭವಿಸುತ್ತಿರುವ ಹಿರಿಯರದ್ದು. ಅವರೂ ಕೂಡಾ ಮಾಧ್ಯಮಗಳ ಕಣ್ಣಿಗೆ ಗೋಚರಿಸುವುದು ಬಹಳ ಕಡಿಮೆ. ಇದಕ್ಕೆ ಕಾರಣ ಏನೆಂದರೆ, ಅವರಲ್ಲಿ ಮಾತನಾಡುವ ಶಕ್ತಿ ಕಡಿಮೆಯಾಗಿರುತ್ತದೆ. ಮಧ್ಯ ವಯಸ್ಕರಂತೆ ಪ್ರತಿಭಟಿಸುವ ಮತ್ತು ದೊಡ್ಡ ದನಿಯಲ್ಲಿ ತಮ್ಮ ವಿಚಾರಗಳನ್ನು ಮಂಡಿಸುವ ಶಕ್ತಿ ಅವರಲ್ಲಿ ಕುಗ್ಗಿರುತ್ತದೆ. ಸಾಮಾನ್ಯವಾಗಿ, ಮಾಧ್ಯಮಗಳ ಶಕ್ತಿ ಕೇಂದ್ರ ಇರುವುದು ಪಟ್ಟಣಗಳಲ್ಲಿ. ಹಿರಿಯರಾಗಲಿ ಕಿರಿಯರಾಗಲಿ ಪಟ್ಟಣ ಕೇಂದ್ರಿತವಾಗಿ ಸಭೆಗಳನ್ನು ನಡೆಸದ ಹೊರತು ಮಾಧ್ಯಮಗಳ ಗಮನ ಸೆಳೆಯುವುದಕ್ಕೆ ಅವಕಾಶಗಳು ಕಡಿಮೆ. ಹಿರಿಯರ ಸಮಸ್ಯೆ ಏನೆಂದರೆ, ಪಟ್ಟಣಗಳಿಗೆ ಬಂದು ಹೋಗುವ ದೈಹಿಕ ಸಾಮಥ್ರ್ಯ ಕುಗ್ಗಿರುತ್ತದೆ. ಒಂದು ವೇಳೆ, ಅವರು ಪಟ್ಟಣಕ್ಕೆ ಬಂದರೂ ಮಾತಾಡುವುದಾದರೂ ಯಾವ ಧೈರ್ಯದಿಂದ? ಮುಖ್ಯವಾಗಿ ವೃದ್ಧಾಪ್ಯಕ್ಕೆ ಕಾಲಿಟ್ಟಿರುವ ಮತ್ತು ಮನೆಯಲ್ಲಿ ಮಕ್ಕಳ ಸಹಾಯದ ಹೊರತು ಜೀವನ ಬಂಡಿ ಸಾಗಿಸಲು ಸಾಧ್ಯವಿಲ್ಲದ ಹಿರಿಯರ ಸಮಸ್ಯೆಗಳೇನಿದ್ದರೂ ಮನೆಯದ್ದೇ ಆಗಿರುತ್ತದೆ. ಅವರ ಆರೈಕೆಯ ಬಗ್ಗೆ, ಮನೆ ಮಂದಿಯ ಶುಶ್ರೂಷೆಯ ಕುರಿತು, ಕಾಡುತ್ತಿರುವ ಅನಾರೋಗ್ಯದ ಕುರಿತು.. ಹೀಗೆ ದೂರುಗಳೇನಿದ್ದರೂ ತನ್ನ ಮತ್ತು ತನ್ನ ಮನೆಯ ಸುತ್ತವೇ ಕೇಂದ್ರೀಕೃತವಾಗಿರುವ ಸಾಧ್ಯತೆಗಳೇ ಅಧಿಕವಿರುವುದರಿಂದ ಇವುಗಳನ್ನು ಸಾರ್ವಜನಿಕವಾಗಿ ಹಂಚಿಕೊಳ್ಳುವುದಕ್ಕೆ ಅನೇಕಾರು ಅಡೆತಡೆಗಳು ಖಂಡಿತ ಎದುರಾಗುತ್ತವೆ. ತನ್ನ ಮನೆಯವರು ತನ್ನನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಎಂದು ದೂರಿಕೊಳ್ಳಲು ವೃದ್ಧಾಪ್ಯದಲ್ಲಿರುವ ಯಾವ ಹಿರಿಯರೂ ಧೈರ್ಯ ತೋರುವ ಸಾಧ್ಯತೆ ಇಲ್ಲ. ಯಾಕೆಂದರೆ, ಹಾಗೆ ದೂರಿಕೊಂಡ ಬಳಿಕವೂ ಅದೇ ಮನೆಗೆ ಆ ವೃದ್ಧರು ಹೋಗಬೇಕಾಗುತ್ತದೆ. ಆ ಮನೆಯವರೇ ಆ ಬಳಿಕವೂ ಉಪಚರಿಸಬೇಕಾಗುತ್ತದೆ. ಸ್ವತಃ ಏನೇನೂ ಮಾಡಲಾಗದ ಮತ್ತು ದೈಹಿಕ ಸಾಮಥ್ರ್ಯ ಕಳಕೊಂಡಿರುವ ಹಿರಿಯರಿಂದ ಇಂಥದ್ದೊಂದು ಧೈರ್ಯದ ನಡೆಯನ್ನು ನಿರೀಕ್ಷಿಸಲು ಖಂಡಿತ ಸಾಧ್ಯವಿಲ್ಲ. ಆದ್ದರಿಂದಲೇ, ವೃದ್ಧರ ಪ್ರತಿಭಟನೆ ಎಂಬುದು ಶೂನ್ಯ ಅನ್ನುವಷ್ಟು ಅಪರೂಪವಾಗಿರುವುದು. ಹಾಗಂತ, ಈ ದೇಶದಲ್ಲಿ ವೃದ್ಧಾಪ್ಯದಲ್ಲಿರುವವರೆಲ್ಲ ಸುಖವಾಗಿ ಬದುಕುತ್ತಿದ್ದಾರೆ ಎಂದಲ್ಲ. ಈ ಹಿಂದಿನ ಹಲವು ಸಮೀಕ್ಷೆಗಳು ಅವರ ನರಕಮಯ ಬದುಕನ್ನು ದೇಶದ ಮುಂದಿಟ್ಟಿವೆ. ಶೇ. 70ಕ್ಕಿಂತ ಹೆಚ್ಚಿನ ಹಿರಿಯರು ಮನೆಯಲ್ಲಿ ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ ಅನ್ನುವುದನ್ನು ಒಂದಕ್ಕಿಂತ ಹೆಚ್ಚಿನ ಸಮೀಕ್ಷೆಗಳು ದೃಢಪಡಿಸಿವೆ. ಆದ್ದರಿಂದಲೇ, ಕೇಂದ್ರ ಸರಕಾರ ತರಲುದ್ದೇಶಿಸಿರುವ, ‘ಪೋಷಕರು ಮತ್ತು ಹಿರಿಯ ನಾಗರಿಕರ ಕಲ್ಯಾಣ ಮತ್ತು ಶ್ರೇಯೋಭಿವೃದ್ಧಿ 2018 ತಿದ್ದುಪಡಿ ವಿಧೇಯಕ’ ಎಂಬ ಹೊಸ ಕಾಯಿದೆಯು ಸ್ವಾಗತಾರ್ಹವೆನಿಸುವುದು. ಇದರ ಪ್ರಕಾರ, ವೃದ್ಧಾಪ್ಯದಲ್ಲಿರುವ ಪೋಷಕರನ್ನು ಮನೆಯಿಂದ ಹೊರದಬ್ಬುವ ಮತ್ತು ಅವರಿಗೆ ಕಿರುಕುಳ ನೀಡುವ ಮಕ್ಕಳಿಗೆ ಈ ಹಿಂದೆ ವಿಧಿಸಲಾಗುತ್ತಿದ್ದ ಶಿಕ್ಷೆಯ ಪ್ರಮಾಣವನ್ನು ದುಪ್ಪಟ್ಟುಗೊಳಿಸಲಾಗಿದೆ. ಈ ಹಿಂದೆ ಇಂಥ ಮಕ್ಕಳಿಗೆ ವಿಧಿಸಬಹುದಾಗಿದ್ದ ಜೈಲುಶಿಕ್ಷೆ 3 ತಿಂಗಳ ಅವಧಿಯದ್ದು. ಈಗ ಅದನ್ನು 6 ತಿಂಗಳಿಗೆ ವಿಸ್ತರಿಸಲು ನಿರ್ಧರಿಸಲಾಗಿದೆ. ಅಲ್ಲದೇ, ಮಲತಾಯಿ, ಮಲತಂದೆ, ಮಕ್ಕಳು, ಮೊಮ್ಮಕ್ಕಳು, ದತ್ತು ಮಕ್ಕಳು, ಅಳಿಯ, ಸೊಸೆ, ಅಪ್ರಾಪ್ತ ವಯಸ್ಕರು.. ಮುಂತಾದ ಪದಗಳ ವ್ಯಾಖ್ಯಾನವನ್ನು ವಿಸ್ತರಿಸಿ ನೋಡುವ ವಿಚಾರವೂ ಹೊಸ ವಿಧೇಯಕದಲ್ಲಿದೆ. ಈ ಹಿಂದಿನ ಕಾಯ್ದೆಯಲ್ಲಿ ನಿರ್ವಹಣೆ ಎಂಬ ಪದದ ವ್ಯಾಖ್ಯಾನವು ತೀರಾ ಸೀಮಿತವಾಗಿತ್ತು. ಆದ್ದರಿಂದ, ಈ ಪದದ ಅರ್ಥ ವ್ಯಾಖ್ಯಾನವನ್ನು, ಆಹಾರ, ಬಟ್ಟೆ, ವಸತಿ, ಆರೋಗ್ಯ, ಆರೈಕೆ, ಭದ್ರತೆಯ ಅಂಶಗಳ ಆಚೆಗೂ ವಿಸ್ತರಿಸುವ ಇರಾದೆಯನ್ನು ಕೇಂದ್ರ ಸರಕಾರ ಹೊಂದಿದೆ. ಈ ಹಿಂದಿನ ಕಾಯ್ದೆಯಲ್ಲಿರುವ ಇನ್ನೊಂದು ಪ್ರಮುಖ ಅಂಶವೆಂದರೆ, ತಂದೆ-ತಾಯಿಗೆ ನೀಡಬೇಕಿರುವ ಮಾಸಿಕ ನಿರ್ವಹಣಾ ವೆಚ್ಚದ ಗರಿಷ್ಠ ಮಿತಿ 10 ಸಾವಿರ ರೂಪಾಯಿಗಿಂತ ಹೆಚ್ಚಿರಬಾರದು ಅನ್ನುವುದು. ಆದರೆ 207ರ ಈ ಕಾಯ್ದೆಯ ಮಾನದಂಡವು ಈ 2018ರ ವೇಳೆಗೆ ಅಪ್ರಸಕ್ತವಾಗಿ ಕಾಣುತ್ತಿರುವುದರಿಂದ ಮಕ್ಕಳ ದುಡಿಮೆ ಮತ್ತು ವರಮಾನದ ಆಧಾರದ ಮೇಲೆ ಇದನ್ನು ನಿರ್ಧರಿಸುವುದು ಸೂಕ್ತ ಎಂಬ ನಿರ್ಧಾರಕ್ಕೆ ಕೇಂದ್ರ ಸರಕಾರ ಬಂದಿದೆ.
     ನಿಜವಾಗಿ, ವೃದ್ಧ ಪೋಷಕರ ಪೋಷಣೆಗೆ ವಿಧೇಯಕವನ್ನು ಹೊರಡಿಸಬೇಕಾದ ಸನ್ನಿವೇಶ ಈ ದೇಶದಲ್ಲಿದೆ ಅನ್ನುವುದೇ ಅತ್ಯಂತ ವಿಷಾದಕರ ಸಂಗತಿ. ಇವತ್ತು ವೃದ್ಧಾಪ್ಯಕ್ಕೆ ತಲುಪಿರುವ ಹೆತ್ತವರು ಒಂದು ಕಾಲದಲ್ಲಿ ಮಕ್ಕಳಾಗಿ ಬದುಕಿದವರು. ಯೌವನ, ಮಧ್ಯ ವಯಸ್ಕತನ ಮತ್ತು ಹಿರಿತನವನ್ನು ದಾಟಿ ಈ ಹಂತಕ್ಕೆ ಅವರು ಮುಟ್ಟಿರುತ್ತಾರೆ. ಇವತ್ತು ಈ ವೃದ್ಧ ಹೆತ್ತವರನ್ನು ಆರೈಕೆ ಮಾಡಲು ಯಾವ ಮಕ್ಕಳು ಹಿಂಜರಿಯುತ್ತಿದ್ದಾರೋ ಅವರೂ ಮುಂದೊಂದು ದಿನ ಅದೇ ವೃದ್ಧಾಪಕ್ಕೆ ತಲುಪುವವರೇ ಆಗಿರುತ್ತಾರೆ. ಈ ಮಕ್ಕಳ ಬಾಲ್ಯವನ್ನು ಸಂತಸಮಯಗೊಳಿಸಿದವರು ಈಗ ವೃದ್ಧಾಪ್ಯಕ್ಕೆ ತಲುಪಿರುವ ಹೆತ್ತವರೇ. ಇವರಿಗೆ ಶಿಕ್ಪಣ ನೀಡಿದವರು, ಹಗಲೂ ರಾತ್ರಿ ಇವರ ಶ್ರೇಯೋಭಿವೃದ್ಧಿಗಾಗಿ ಪರಿತಪಿಸಿದವರು, ಮಾರ್ಗದರ್ಶನ ಮಾಡಿ ಕಣ್ಣಲ್ಲಿ ಕಣ್ಣಿಟ್ಟು ಕಾಪಾಡಿದವರೂ ಇವರೇ. ಈ ಮಕ್ಕಳು ಇವತ್ತು ಉತ್ತಮ ಉದ್ಯೋಗದಲ್ಲಿರುವುದಾದರೆ ಮತ್ತು ದೊಡ್ಡ ಮೊತ್ತದ ಸಂಪಾದನೆಯಲ್ಲಿ ತೊಡಗಿರುವವರಾದರೆ ಅದಕ್ಕೆ ಬಹುಮುಖ್ಯ ಕಾರಣ ಈ ಹೆತ್ತವರೇ. ಇವತ್ತು ತಮ್ಮ ಕಾಲ ಮೇಲೆ ನಿಂತಿರುವ ಪ್ರತಿ ಮಗನೂ/ಮಗಳೂ ತಾವು ದಾಟಿ ಬಂದ ಆ ಬಾಲ್ಯವನ್ನು ಮತ್ತು ಆ ಬಳಿಕದ ಬದುಕನ್ನು ಒಮ್ಮೆ ಅವಲೋಕನಕ್ಕೆ ಒಳಪಡಿಸಿದರೆ ತಾವೆಷ್ಟು ತಮ್ಮ ಹೆತ್ತವರಿಗೆ ಋಣಿಯಾಗಿರಬೇಕೆಂಬುದು ಖಂಡಿತ ಮನವರಿಕೆಯಾಗುವುದು. ಮಾತ್ರವಲ್ಲ, ಹೀಗೆ ಆತ್ಮಾವಲೋಕನ ನಡೆಸಿದ ಯಾವ ಮಗುವೂ ತನ್ನ ಹೆತ್ತವರನ್ನು ನಿರ್ಲಕ್ಷಿಸಲು ಸಾಧ್ಯವೂ ಇಲ್ಲ. ಆದರೂ ವೃದ್ಧಾಪ್ಯಕ್ಕೆ ತಲುಪಿರುವ ಹೆಚ್ಚಿನ ಪೋಷಕರು ಇವತ್ತು ದುಃಖದಲ್ಲಿದ್ದಾರೆ. ಮಕ್ಕಳ ಮೇಲೆ ಅವರಲ್ಲಿ ಪುಟ್ಟಗಟ್ಟಲೆ ದೂರುಗಳಿವೆ. ಅವರ ಪರವಾಗಿ ಸರಕಾರವೇ ವಿಧೇಯಕ ತರಬೇಕಾದಷ್ಟು ಈ ದೂರುಗಳು ಗಂಭೀರವೂ ಆಗಿವೆ. ಪವಿತ್ರ ಕುರ್‍ಆನ್ ಅಂತೂ ಹೆತ್ತವರ ಪೋಷಣೆಗೆ ಎಷ್ಟು ಮಹತ್ವ ಕೊಟ್ಟಿದೆಯೆಂದರೆ, ಅವರ ಬಗ್ಗೆ ‘ಛೆ’ ಎಂಬ ಪದವನ್ನೂ ಮಕ್ಕಳು ಬಳಸಬಾರದು ಎಂದು ತಾಕೀತು ಮಾಡಿದೆ. ಹೆತ್ತವರ ಕೋಪಕ್ಕೆ ತುತ್ತಾದ ಮಕ್ಕಳು ನರಕಕ್ಕೆ ಮಾತ್ರ ಅರ್ಹರು ಎಂದೂ ಎಚ್ಚರಿಸಿದೆ. ಹೆತ್ತವರನ್ನು ನೋಯಿಸುವ ಮಕ್ಕಳ ಸಂಖ್ಯೆ ಶೂನ್ಯವಾಗಲಿ ಎಂದೇ ಪ್ರಾರ್ಥಿಸೋಣ.


No comments:

Post a Comment