Thursday 17 May 2018

ಅವರು ಎಲ್ಲರ ಮುಹಮ್ಮದ್(ಸ)

      ಪ್ರವಾದಿ ಮುಹಮ್ಮದ್(ಸ) ಎರಡು ಕಾರಣಗಳಿಂದಾಗಿ ಸದಾ ಚರ್ಚೆಯಲ್ಲಿರುತ್ತಾರೆ.
1. ಅವರ ಅಂಧ ಅನುಯಾಯಿಗಳು.
2. ಅವರ ಅಂಧ ವಿರೋಧಿಗಳು.
    ಪ್ರವಾದಿ ಮುಹಮ್ಮದ್‍ರನ್ನು(ಸ) ಈ ಎರಡು ಗುಂಪಿನಿಂದ ಹೊರತಂದು ಚರ್ಚೆಗೊಳಗಾಗಿಸಬೇಕಾದ ಅಗತ್ಯ ಇದೆ. ಪ್ರವಾದಿ ಮುಹಮ್ಮದ್‍ರಿಗಿಂತ ಮೊದಲು ಮತ್ತು ಆ ಬಳಿಕ ಸಾಕಷ್ಟು ವರ್ಚಸ್ವಿ ನಾಯಕರು ಈ ಜಗತ್ತಿಗೆ ಬಂದು ಹೋಗಿದ್ದಾರೆ. ಅಲ್ಲದೇ, ದೊಡ್ಡದೊಂದು ಅನುಯಾಯಿ ವರ್ಗವನ್ನೂ ಗಿಟ್ಟಿಸಿಕೊಂಡಿದ್ದಾರೆ. ಆದರೆ ಇವರೆಲ್ಲರ ಮಿತಿ ಏನೆಂದರೆ, ಬರಬರುತ್ತಾ ಇವರ ಅನುಯಾಯಿಗಳ ಸಂಖ್ಯೆಯಲ್ಲಿ ವ್ಯವಕಲನ ಆಗುತ್ತಾ ಹೋಗುವುದು. ಅವರ ವಿಚಾರಧಾರೆಯಲ್ಲಿ ಸವಕಲು ಅನ್ನಬಹುದಾದ ವಿಷಯಗಳು ದಿನ ಕಳೆದಂತೆಯೇ ಹೆಚ್ಚುತ್ತಾ ಸಾಗುವುದು. ಇವತ್ತು ಜಗತ್ತಿನ ಅತ್ಯಂತ ಹೆಚ್ಚು ಜನಪ್ರಿಯ ಹೆಸರುಗಳಲ್ಲಿ ಮುಹಮ್ಮದ್ ಎಂಬುದು ಒಂದು. ಮಾತ್ರವಲ್ಲ, ಈ ಹೆಸರನ್ನು ತಮ್ಮ ಮಕ್ಕಳಿಗೆ ಆಯ್ಕೆ ಮಾಡಿಕೊಳ್ಳುವವರ ಸಂಖ್ಯೆಯಲ್ಲೂ ಏರಿಕೆ ಆಗುತ್ತಲೇ ಇದೆ. ಒಂದು ವೇಳೆ ಈ ಬೆಳವಣಿಗೆಯನ್ನು ಜಗತ್ತಿನ ಇತರ ಜನಪ್ರಿಯ ನಾಯಕರಿಗೆ ಹೋಲಿಕೆ ಮಾಡಿ ನೋಡುವುದಾದರೆ, ಗಾಢ ನಿರಾಶೆಯೊಂದು ಕಾಡುತ್ತದೆ. ಮಾವೋ, ಕಾರ್ಲ್‍ಮಾರ್ಕ್ಸ್, ಬಸವಣ್ಣ, ಮಹಾವೀರ, ಬುದ್ಧ, ಗಾಂಧೀಜಿ, ಮದರ್ ಥೆರೆಸಾ... ಮುಂತಾದ ಎಲ್ಲರೂ ತಂತಮ್ಮ ಕಾಲಗಳಲ್ಲಿ ಬಹುದೊಡ್ಡ ಸುಧಾರಣೆಯ ನೊಗ ಹೊತ್ತು ಬದುಕಿದವರು. ಅವರ ವಿಚಾರಧಾರೆಗೆ ಜಾಗತಿಕವಾಗಿ ಇವತ್ತೂ ಮಾನ್ಯತೆಯಿದೆ. ಪಠ್ಯ ಪುಸ್ತಕಗಳಲ್ಲಿ ಅವರನ್ನು ಕಲಿಸುವ ಏರ್ಪಾಟೂ ಇದೆ. ಇಷ್ಟಿದ್ದೂ ಮೋಹನ್ ದಾಸ್ ಕರಮ್ ಚಂದ್ ಗಾಂಧಿ ಎಂಬ ಹೆಸರನ್ನು ತಮ್ಮ ಮಕ್ಕಳಿಗೆ ಹೆಸರಾಗಿ ಆಯ್ಕೆ ಮಾಡಿಕೊಳ್ಳುವ ಹೆತ್ತವರು ಇವತ್ತು ವಿರಳಾತಿ ವಿರಳವಾಗುತ್ತಿದ್ದಾರೆ. ಗಾಂಧಿ ಹುಟ್ಟಿರುವ ಗುಜರಾತ್‍ನಲ್ಲೇ ಈ ಹೆಸರಿನ ಬರ ಎದ್ದು ಕಾಣುತ್ತಿದೆ. ಮಾರ್ಕ್ಸ್ ಆಗಲಿ, ಮಾವೋ ಆಗಲಿ, ಬುದ್ಧ ಆಗಲಿ ಎಲ್ಲರೂ ಈ ಬಿಸಿಯನ್ನು ತಟ್ಟಿಸಿಕೊಂಡವರೇ. ಈ ಎಲ್ಲರ ಕಾಲಾನಂತರ ಜಗತ್ತು ಅವರನ್ನು ಮರೆತೋ ಅಥವಾ ಅವರ ಬೋಧನೆಯ ಕೆಲವೊಂದಿಷ್ಟನ್ನು ಮಾತ್ರ ಸ್ವೀಕರಿಸಿ ಉಳಿದುದನ್ನು ಕೈಬಿಟ್ಟೋ ತನ್ನ ಪಾಡಿಗೆ ತಾನು ಬದುಕುತ್ತಿದೆ. ಆದರೆ ಪ್ರವಾದಿ ಮುಹಮ್ಮದ್(ಸ) ಇಂಥದ್ದೊಂದು ಅವಜ್ಞೆಗೆ ಒಳಗಾಗಲೇ ಇಲ್ಲ. ಅವರು ಹುಟ್ಟಿದ್ದು ಅರಬ್ ರಾಷ್ಟ್ರದಲ್ಲಿ. ಆದರೆ ಇವತ್ತು ಅರಬ್ ರಾಷ್ಟ್ರಗಳು ಹೇಗೋ ಹಾಗೆಯೇ ಅರಬ್ ರಾಷ್ಟ್ರಗಳಿಗಿಂತ ಹೊರಗೂ ಅವರು ಅನುಯಾಯಿಗಳನ್ನು ಪಡೆದುಕೊಂಡಿದ್ದಾರೆ. ಅರಬಿ ಭಾಷೆ ಬಲ್ಲವರಿಗಷ್ಟೇ ಅವರು ಪರಿಚಿತರಲ್ಲ. ಜಗತ್ತಿನ ಬಹುತೇಕ ಎಲ್ಲ ಭಾಷೆ ಬಲ್ಲವರಿಗೂ ಅವರು ಪರಿಚಿತರು. ಪ್ರತಿ ಭಾಷೆಯಲ್ಲೂ ಅವರನ್ನು ವಿವರಿಸುವ ಪುಸ್ತಕಗಳಿವೆ. ಅವರ ವಚನಗಳ ಸಂಗ್ರಹವಿದೆ. ಅವರು ಜಗತ್ತಿನ ಮುಂದಿರಿಸಿದ ಪವಿತ್ರ ಕುರ್‍ಆನಿನ ಅನುವಾದ ಗ್ರಂಥಗಳಿವೆ. ಬಹುಶಃ ಪ್ರವಾದಿ ಮುಹಮ್ಮದ್(ಸ)ರಷ್ಟು ವೇಗವಾಗಿ ಬೆಳೆದ, ವ್ಯಾಪಿಸಿದ, ಜನಪ್ರಿಯಗೊಂಡ ಇನ್ನೋರ್ವ ವ್ಯಕ್ತಿ ಈ ಜಗತ್ತಿನಲ್ಲಿ ಬೇರೆ ಇರಲಾರರು ಎಂದು ಹೇಳುವುದಕ್ಕೆ ಪುರಾವೆಗಳ ಅಗತ್ಯ ಬೇಕಾಗದು.
    ಅಂಧತೆ ಎಂಬ ಪದವು ಕುರುಡುತನವನ್ನು ಸಂಕೇತಿಸುತ್ತದೆ. ಪ್ರವಾದಿ ಮುಹಮ್ಮದ್(ಸ)ರ ಅನುಯಾಯಿಗಳಲ್ಲಿ ಮತ್ತು ಅವರ ವಿರೋಧಿಗಳಲ್ಲಿ ಈ ಅಂಧತೆಗೆ ಪಾಲಂತೂ ಇದ್ದೇ ಇದೆ. ಇದು ಜಗತ್ತಿನ ಎಲ್ಲ ಮಹಾನ್ ವ್ಯಕ್ತಿಗಳು ಎದುರಿಸುತ್ತಿರುವ ಸಮಸ್ಯೆ. ಪ್ರವಾದಿ ಮುಹಮ್ಮದರು(ಸ) ಜಗತ್ತಿನ ಎಲ್ಲ ಭಾಷೆಗಳಲ್ಲೂ ಪರಿಚಿತರಾಗಿರುವುದರಿಂದ ಅಂಧ ಅನುಯಾಯಿಗಳು ಮತ್ತು ಅಂಧ ವಿರೋಧಿಗಳ ಸಂಖ್ಯೆಯಲ್ಲಿ ಏರಿಕೆಯಾಗಿರುವುದನ್ನು ಅಲ್ಲಗಳೆಯಬೇಕಿಲ್ಲ. ಸದ್ಯ ಪ್ರವಾದಿ ಮುಹಮ್ಮದ್(ಸ)ರ ಅನುಯಾಯಿಗಳ ಹೊಣೆಗಾರಿಕೆ ಏನೆಂದರೆ, ಅವರನ್ನು ಈ ಎರಡೂ ಗುಂಪಿನಿಂದ ಹೊರತಂದು ಸಮಾಜದ ಮುಂದಿಡುವುದು. ಅವರನ್ನು ನಿಜ ನೆಲೆಯಲ್ಲಿ ಓದುವ, ಚರ್ಚಿಸುವ, ಅಧ್ಯಯನ ನಡೆಸುವ ಮತ್ತು ವೈಚಾರಿಕ ನೆಲೆಯಲ್ಲಿ ವಾದ-ಪ್ರತಿವಾದಗಳಿಗೆ ಮುಕ್ತ ವಾತಾವರಣ ಉಂಟು ಮಾಡುವುದು. ಪ್ರವಾದಿಯವರು(ಸ) ತಮ್ಮ ಜೀವಿತ ಕಾಲದಲ್ಲಿ ಬದುಕಿದ್ದೇ ಹೀಗೆ. ಹುಟ್ಟಿದೂರನ್ನು ಮೀರಿ ವ್ಯಾಪಿಸಿದ್ದೂ ಹಾಗೆ. ಅವರು ಭಾಷಾತೀತ, ದೇಶಾತೀತ, ವರ್ಣಾತೀತ, ಕಾಲಾತೀತರು. ಅವರನ್ನು ಹಾಗೆಯೇ ಉಳಿಸಿಕೊಳ್ಳಬೇಕು ಮತ್ತು ಹಾಗೆಯೇ ಓದಿಸಬೇಕು. ಅವರು ಎಲ್ಲರ ಮುಹಮ್ಮದ್(ಸ).

No comments:

Post a Comment