Saturday 18 May 2019

ಹೊರಗೆ ಬಿಳಿ, ಒಳಗೆ ಕತ್ತಲು



‘ನೀನು ಪರಿಶುದ್ಧನಾಗಲು ಸಿದ್ಧನಿರುವೆಯಾ?’
ಇದು ಪವಿತ್ರ ಕುರ್‍ಆನ್‍ನಲ್ಲಿ ನಮೂದಾಗಿರುವ ಒಂದು ಪ್ರಶ್ನೆ. ಹೀಗೆ ಪ್ರಶ್ನಿಸಿದವರು ಪ್ರವಾದಿ ಮೂಸಾ(ಅ). ಪ್ರಶ್ನೆಯನ್ನು ಎದುರಿಸಿದವನು ದೊರೆ ಫಿರ್‍ಔನ್. ಹೀಗೆ ಪ್ರಶ್ನಿಸಬೇಕೆಂದು ಆದೇಶ ಕೊಟ್ಟವನು ಅಲ್ಲಾಹ್. ಪವಿತ್ರ ಕುರ್‍ಆನಿನ ಅನ್ನಾಝಿಆತ್  ಅಧ್ಯಾಯದ 18ನೇ ವಚನದಲ್ಲಿ ಈ ಬಗ್ಗೆ ಉಲ್ಲೇಖವಿದೆ. ನಿಜವಾಗಿ, ಪುರಾತನ ಕಾಲದ ಫಿರ್‍ಔನ್‍ಗೆ ಮಾತ್ರ ಅನ್ವಯಿಸಿ ನೋಡಬೇಕಾದ ಪ್ರಶ್ನೆಯಲ್ಲ ಇದು. ಈ ಪ್ರಶ್ನೆ ಸಾರ್ವಕಾಲಿಕ. ಪ್ರತಿ ವ್ಯಕ್ತಿಯೂ ತನ್ನ ಜೊತೆ ಇಂಥದ್ದೊಂದು ಪ್ರಶ್ನೆಯನ್ನು  ಕೇಳಿಕೊಳ್ಳಲೇಬೇಕು ಮತ್ತು ತನ್ನ ಹೃದಯ ಯಾವ ಬಗೆಯಲ್ಲಿ ಈ ಪ್ರಶ್ನೆಗೆ ಪ್ರತಿಕ್ರಿಯಿಸುತ್ತದೆ ಅನ್ನುವುದನ್ನು ಪರಿಶೀಲಿಸಬೇಕು. ‘ನೀನು ಪರಿಶುದ್ಧನಾಗಲು ಸಿದ್ಧನಿರುವೆಯಾ?’ ಎಂದು ಫಿರ್‍ಔನ್‍ನಲ್ಲಿ ಪ್ರವಾದಿ ಮೂಸಾ(ಅ)ರು ಪ್ರಶ್ನಿಸುವುದಕ್ಕೆ ಎರಡು  ಪ್ರಮುಖ ಕಾರಣಗಳಿದ್ದುವು. 1. ಫಿರ್‍ಔನ್ ಸೃಷ್ಟಿಕರ್ತನನ್ನು ನಿರಾಕರಿಸಿ ಬದುಕುತ್ತಿದ್ದ. 2. ಸೃಷ್ಟಿಗಳ ಮೇಲೆ ಹಿಂಸೆಯೆಸಗುತ್ತಿದ್ದ. ಅಲ್ಲಾಹನ ಪ್ರಕಾರ ಇವೆರಡೂ ಪರಿಶುದ್ಧತೆಗೆ ವಿರುದ್ಧ. ಈ ಬಗ್ಗೆ ಪವಿತ್ರ ಕುರ್‍ಆನ್‍ನಲ್ಲಿ ಬೇರೆ ಕೆಲವು ಉಲ್ಲೇಖಗಳೂ ಇವೆ.  ‘ಪರಿಶುದ್ಧ ಹೃದಯದ ಹೊರತು ಸೊತ್ತು-ಸಂತಾನಗಳಾವುವೂ ನಾಳೆ ಪರಲೋಕದಲ್ಲಿ ಫಲಕಾರಿಯಾಗುವುದಿಲ್ಲ’ ಎಂದು ಅಶ್ಶುಅರಾ ಅಧ್ಯಾಯದ 88-89ನೇ ವಚನದಲ್ಲಿ ಅಲ್ಲಾಹನು ಹೇಳಿದ್ದಾನೆ. ‘ಯಾರು ಆತ್ಮವನ್ನು ಪರಿಶುದ್ಧಗೊಳಿಸಿಕೊಂಡನೋ  ಅವನು ವಿಜಯಿಯಾದನು’ ಎಂದು ಅಶ್ಶಮ್ಸ್ ಅಧ್ಯಾಯದ 9ನೇ ವಚನದಲ್ಲಿ ಹೇಳಲಾಗಿದೆ. ‘ಪ್ರವಾದಿ ಇಬ್ರಾಹೀಮರು ತನ್ನ ಪ್ರಭುವಿನ ಸನ್ನಿಧಿಗೆ ಪರಿಶುದ್ಧ ಮನಸ್ಸಿನಿಂದ ಬಂದರು’ ಎಂಬ ಉಲ್ಲೇಖವು ಪವಿತ್ರ ಕುರ್‍ಆನಿನ ಅಸ್ಸಾಫ್ಫಾತ್ ಅಧ್ಯಾಯದ  37ನೇ ವಚನದಲ್ಲಿದೆ. ‘ಪರಿಶುದ್ಧತೆಯನ್ನು ಕೈಗೊಂಡವನು ಯಶಸ್ವಿಯಾದನು’ ಎಂದು ಅಲ್ ಅಅïಲಾ ಅಧ್ಯಾಯದ 14ನೇ ವಚನವು ಹೇಳುತ್ತದೆ. ಅಂದಹಾಗೆ, ಈ ಎಲ್ಲ ವಚನಗಳಲ್ಲಿ ಪರಿಶುದ್ಧತೆಯ ಬೇರೆ ಬೇರೆ ವ್ಯಾಖ್ಯಾನಗಳಿವೆ. ಫಿರ್‍ಔನನಲ್ಲಿ ಯಾವ  ಎರಡು ಕೆಟ್ಟ ಗುಣಗಳಿದ್ದುವೋ ಅವು ಮಾತ್ರ ಅಪರಿಶುದ್ಧತೆಯ ಮಾನದಂಡ ಅಲ್ಲ. ಸೊತ್ತು ಮತ್ತು ಸಂತಾನಗಳ ಮೇಲಿನ ಅತಿ ವ್ಯಾಮೋಹವೂ ಹೃದಯವನ್ನು ಅಶುದ್ಧಗೊಳಿಸಬಹುದು. ಪರಿಶುದ್ಧಗೊಳ್ಳಬೇಕಾದುದರ ಪಟ್ಟಿಯಲ್ಲಿ ಆತ್ಮವೂ ಇದೆ.  ಆತ್ಮವೂ ಕಳಂಕಕ್ಕೆ ಒಳಗಾಗಬಹುದು. ಅಪರಿಶುದ್ಧಗೊಳ್ಳಬಹುದು. ಒಂದು ರೀತಿಯಲ್ಲಿ, ಪರಿಶುದ್ಧ ಅನ್ನುವುದು ಬದುಕಿನ ಯಾವುದಾದರೊಂದು ನಿರ್ದಿಷ್ಟ ಕ್ಷೇತ್ರಕ್ಕೆ ಸಂಬಂಧಿಸಿ ಹೇಳಬೇಕಾದ ಪದವಲ್ಲ. ಓರ್ವ ವ್ಯಕ್ತಿ ಅಡಿಯಿಂದ ಮುಡಿವರೆಗೆ  ಬಿಳಿಯಾಗುವುದು ಎಂದು ಸರಳವಾಗಿ ಇದನ್ನು ವಿವರಿಸಬಹುದು. ಬಿಳಿ ಎಂಬುದು ಶುದ್ಧತೆಯ ಪ್ರತೀಕ. ಶುಕ್ರವಾರದಂದು ಮುಸ್ಲಿಮರಲ್ಲಿ ಬಹುತೇಕರೂ ಬಿಳಿ ಬಟ್ಟೆಯನ್ನು ಧರಿಸುತ್ತಾರೆ. ಮೃತದೇಹದ ಮೇಲೂ ಬಿಳಿ ಬಟ್ಟೆಯನ್ನು ಹೊದೆಸಲಾಗುತ್ತದೆ.  ಸದ್ಯದ ಅಗತ್ಯ ಏನೆಂದರೆ, ಬಾಹ್ಯವಾಗಿರುವ ಈ ಬಿಳಿಯನ್ನು ಆಂತರಿಕವಾಗಿ ಸ್ವೀಕರಿಸಿಕೊಳ್ಳುವುದು. ಹೊರಗಿನ ವೇಷ ವಿಧಾನಗಳು ಹೇಗೆ ಬಿಳಿಯೋ ಹಾಗೆಯೇ ಒಳಗಿನ ಭಾವ-ಬಿಂಬಗಳೂ ಬಿಳಿ ಎಂಬುದನ್ನು ಸಾರಲು ಯಾವ P್ಷÀಣದಲ್ಲೂ ನಾವು  ಸಿದ್ಧವಾಗಿರುವುದು. ಇದು ಸುಲಭ ಅಲ್ಲ. ಒಳ್ಳೆಯವರಂತೆ ನಟಿಸುವುದಕ್ಕೂ ಒಳ್ಳೆಯವರಾಗುವುದಕ್ಕೂ ವ್ಯತ್ಯಾಸ ಇದೆ. ಕಷ್ಟವೂ ಇದೆ. ನಟನೆ ಈ ಜಗತ್ತಿನಲ್ಲಿ ಸುಲಭ. ಅದೊಂದು ಕಲೆ. ಈ ಕಲೆಯನ್ನು ಕರಗತ ಮಾಡಿಕೊಂಡ ವ್ಯಕ್ತಿಯೋರ್ವ ಅಪರಿ ಶುದ್ಧನಾಗಿದ್ದೂ ಪರಿಶುದ್ಧನಂತೆ ಜನರನ್ನು ನಂಬಿಸಿ ಬಿಡಬಲ್ಲ. ತನ್ನ ಈ ಕಲೆಯನ್ನು ಬಳಸಿ ವಿವಿಧ ಸ್ಥಾನ-ಮಾನಗಳನ್ನು ಪಡೆಯಬಲ್ಲ. ಆದರೆ ಇದು ಪರಿಪೂರ್ಣ ಯಶಸ್ಸಲ್ಲ ಎಂದು ಪವಿತ್ರ ಕುರ್‍ಆನ್ ಹೇಳುತ್ತದೆ. ಯಶಸ್ಸು ಯಾವುದರಲ್ಲಿ ಅಡಗಿದೆ  ಎಂದರೆ, ಹೊರಗೆ ಕಾಣದ ಹೃದಯವನ್ನು ಕಾಮ, ಕ್ರೋಧ, ಮೋಹ, ಲೋಭಗಳಾದಿಯಾಗಿ ಎಲ್ಲ ಕೆಡುಕುಗಳಿಂದಲೂ ಪರಿಶುದ್ಧಗೊಳಿಸುವುದು. ಹೊರಗೊಂದು ಒಳಗೊಂದು ಎಂಬ ವೇಷವನ್ನು ಕಳಚಿಡುವುದು. ಅಪ್ಪಟ ಪಾರದರ್ಶಕ ಬದುಕನ್ನು  ಬದುಕುವುದು. ರಮಝಾನ್ ತಿಂಗಳ ಉಪವಾಸ ವ್ರತದ ಬಹುಮುಖ್ಯ ಉದ್ದೇಶ ಇದು. ಉಪವಾಸಿಗರೆಲ್ಲರ ಹೃದಯವನ್ನು ಪರಿಶುದ್ಧಗೊಳಿಸುವ ವಾರ್ಷಿಕ ಸ್ವಚ್ಛತಾ ಕಾರ್ಯಕ್ರಮ ಇದು. ಇದರರ್ಥ ವಿಶ್ವಾಸಿಗಳಲ್ಲಿ ಯಾರೂ ಪರಿಶುದ್ಧರಿಲ್ಲ ಎಂದಲ್ಲ.  ಇದೊಂದು ಅಭಿಯಾನ. ಜಾಗೃತಿ ಕಾರ್ಯಕ್ರಮ. ಒಂದು ತಿಂಗಳ ವರೆಗೆ ಈ ಜಾಗೃತಿ ಕಾರ್ಯಕ್ರಮ ಚಾಲ್ತಿಯಲ್ಲಿರುತ್ತದೆ. ಪ್ರತಿದಿನವೂ ಪ್ರತಿಕ್ಷಣವೂ ‘ಪರಿಶುದ್ಧರಾಗಿ’ ಎಂಬ ಸಂದೇಶವನ್ನು ಈ ಒಂದು ತಿಂಗಳು ಉಪವಾಸಿಗರಲ್ಲಿ ಸಾರುತ್ತಲೇ ಇರುತ್ತದೆ.  ಹಸಿವು ಈ ಸಂದೇಶವನ್ನು ಪ್ರಬಲಗೊಳಿಸುವ ಒಂದು ಆಯುಧ ಮಾತ್ರ. ಈ ಸ್ವಚ್ಛತಾ ಕಾರ್ಯಕ್ರಮದಲ್ಲಿ ಯಾರೆಲ್ಲ ಮನಃಪೂರ್ವಕ ಭಾಗಿಯಾಗುತ್ತಾರೋ ಅವರು ಪರಿಶುದ್ಧರಾಗುತ್ತಾರೆ. ಅಡಿಯಿಂದ ಮುಡಿವರೆಗೆ ಬಿಳಿಯಾಗುತ್ತಾರೆ. ಯಾರು ವೇಷ  ಕಟ್ಟುತ್ತಾರೋ ಅವರು ಹೊರಗಡೆಗೆ ಮಾತ್ರ ಬಿಳಿಯಾಗುತ್ತಾರೆ. ಒಳಗಡೆ ಕತ್ತಲೆಯಿರುತ್ತದೆ.
ಇನ್ನು ತೀರ್ಮಾನ ನಿಮ್ಮದು.

No comments:

Post a Comment