Saturday 18 May 2019

ಸಾಧ್ವಿ ಪ್ರಜ್ಞಾಸಿಂಗ್ ಠಾಕೂರ್ ತೆರೆದಿರುವುದು ಬಾಯಲ್ಲ, ಬಾಗಿಲು


 

ಶ್ರೀಲಂಕಾದಲ್ಲಿ ನಡೆದ ಭೀಕರ ಭಯೋತ್ಪಾದನಾ ಕೃತ್ಯಕ್ಕಿಂತ ಒಂದು ವಾರ ಮೊದಲು ನಮ್ಮ ದೇಶದಲ್ಲಿ ಆಘಾತಕಾರಿ ಬೆಳವಣಿಗೆಯೊಂದು ನಡೆಯಿತು. ಈ ಬೆಳವಣಿಗೆಯ ಸೂತ್ರಧಾರ ಬಿಜೆಪಿ. ಮಾಲೆಗಾಂವ್ ಬಾಂಬ್ ಸ್ಫೋಟದ ಆರೋಪದಲ್ಲಿ ವರ್ಷಗಳ ಕಾಲ ಜೈಲಲ್ಲಿದ್ದ ಪ್ರಜ್ಞಾಸಿಂಗ್ ಠಾಕೂರ್‍ಳನ್ನು ಅದು ಲೋಕಸಭಾ ಚುನಾವಣೆಗೆ ತನ್ನ ಅಭ್ಯರ್ಥಿಯಾಗಿ ನೇಮಿಸಿತು. ಆ ಬಳಿಕ ಆಕೆ ನೀಡಿದ ಹೇಳಿಕೆಯು- ಭಾರತೀಯರು ಈವರೆಗೆ ನಂಬಿಕೊಂಡು ಬಂದಿದ್ದ ಮತ್ತು ಇಲ್ಲಿಯ ತನಿಖಾ ಸಂಸ್ಥೆಗಳು ನಂಬಿಸಿದ್ದ ಸಂಗತಿಗಳೆಲ್ಲವೂ ಪೊಳ್ಳು ಆಗಿರಬಹುದೇ ಎಂಬ ಸಂದೇಹವನ್ನು ಮೂಡಿಸಿದೆ. ನವೆಂಬರ್ 2011 (26/11)ರಲ್ಲಿ ಮುಂಬೈ ಮೇಲೆ ನಡೆದ ದಾಳಿಯ ರೂವಾರಿ ಪಾಕಿಸ್ತಾನ ಎಂಬುದು ಭಾರತೀಯರ ನಂಬಿಕೆ. ಈ ನಂಬಿಕೆಯನ್ನು ಹುಟ್ಟಿಸಿದ್ದು ಇಲ್ಲಿನ ತನಿಖಾ ಸಂಸ್ಥೆಗಳು. ಅಜ್ಮಲ್ ಕಸಬ್‍ನನ್ನು ಗಲ್ಲಿಗೇರಿಸುವ ಮೂಲಕ ಆ ದಾಳಿಗೆ ನ್ಯಾಯವನ್ನು ಒದಗಿಸಲಾಗಿದೆ ಎಂಬುದೂ ಈ ನಂಬಿಕೆಯ ಭಾಗ. ಹಾಗಂತ, ಈ ದಾಳಿಯ ಕುರಿತಂತೆ ಅನುಮಾನಗಳು ವ್ಯಕ್ತವಾಗಿರಲಿಲ್ಲ ಎಂದಲ್ಲ. ಮಾಲೆಗಾಂವ್ ಸ್ಫೋಟ, ಅಜ್ಮೀರ್ ದರ್ಗಾ ಸ್ಫೋಟ, ಸಂಜೋತಾ ಎಕ್ಸ್‍ಪ್ರೆಸ್ ರೈಲು ಸ್ಫೋಟ ಇತ್ಯಾದಿಗಳಲ್ಲಿ ಹಿಂದುತ್ವ ಭಯೋತ್ಪಾದನೆಯ ಭಯಾನಕ ಪಾತ್ರವನ್ನು ದೇಶದ ಮುಂದೆ ತೆರೆದಿಟ್ಟ ಹೇಮಂತ್ ಕರ್ಕರೆ, ಕಾಮ್ಟೆ ಮತ್ತು ಸಾಲಸ್ಕರ್‍ರಂಥ ಪ್ರಮುಖ ಪೊಲೀಸ್ ಅಧಿಕಾರಿಗಳು ಸಾಲುಸಾಲಾಗಿ ಈ ದಾಳಿಯಲ್ಲಿ ಯಾಕೆ ಬಲಿಯಾದರು ಅನ್ನುವ ಪ್ರಶ್ನೆ ಆಗಲೇ ಎದ್ದಿತ್ತು. ಕಾಂಗ್ರೆಸ್ ಮುಖಂಡ ಎ.ಆರ್. ಅಂತುಳೆಯವರು ಹೀಗೆ ಪ್ರಶ್ನಿಸಿದವರಲ್ಲಿ ಒಬ್ಬರು. ಆ ಬಳಿಕ ಮಹಾರಾಷ್ಟ್ರ ಪೊಲೀಸ್ ಮಹಾ ನಿರೀಕ್ಷಕರಾದ ಎಸ್.ಎಂ. ಮುಶ್ರಿಫ್ ಅವರು ದೊಡ್ಡಮಟ್ಟದಲ್ಲಿಯೇ ಈ ಪ್ರಶ್ನೆಗೆ ಬಲ ನೀಡಿದರು. ಮುಂಬೈ ದಾಳಿಯ ಸಂದರ್ಭದಲ್ಲಿ ರಾತ್ರಿ ಹತ್ತು ಗಂಟೆಯ ಬಳಿಕ ಕರ್ಕರೆ ಮತ್ತು ಅವರ ತಂಡದ ಹತ್ಯೆಗೂ ಮುಂಬೈ ದಾಳಿಗೂ ನೇರ ಸಂಬಂಧ ಇದೆಯೇ? ದಾಳಿಕೋರರು ಕರ್ಕರೆಯವರನ್ನು ಕೊಲ್ಲುವ ಯೋಜನೆ ಹಾಕಿಕೊಂಡಿದ್ದರೆ ಅಥವಾ ಆ ದಾಳಿಯ ಮರೆಯಲ್ಲಿ ಕರ್ಕರೆ ಮತ್ತು ತಂಡವನ್ನು ಹತ್ಯೆಗೈಯುವ ಸಂಚೊಂದು ಒಳಗಿನಿಂದಲೇ ನಡೆಯಿತೇ? ಕರ್ಕರೆ ಮತ್ತು ತಂಡವನ್ನು ಹತ್ಯೆಗೈದು ಮಾಲೆಗಾಂವ್ ಸಹಿತ ಅವರು ಬೆಳಕಿಗೆ ತಂದ ಇಡೀ ತನಿಖಾ ಫಲಿತಾಂಶವನ್ನೇ ಮುಚ್ಚಿ ಹಾಕುವುದಕ್ಕೆ ಆ ಮೊದಲೇ ಷಡ್ಯಂತ್ರವೊಂದು ನಡೆದಿತ್ತೇ? ಮುಂಬೈ ದಾಳಿಯ ಸಂದರ್ಭದಲ್ಲಿ ಆ ಷಡ್ಯಂತ್ರವನ್ನು ಜಾರಿಗೊಳಿಸಲಾಯಿತೇ.. ಇಂಥ ಪ್ರಶ್ನೆಗಳು ಆಗಲೂ ಈಗಲೂ ಹಾಗೆಯೇ ಉಳಿದುಕೊಂಡಿದೆ. ಛತ್ರಪತಿ ಶಿವಾಜಿ ರೈಲು ನಿಲ್ದಾಣದಲ್ಲಿ ಉಗ್ರರು ಗುಂಡು ಹಾರಿಸಿ ಹೊರಟು ಹೋದ ದಾರಿಗೂ ಅವರನ್ನು ಎದುರಿಸುವುದಕ್ಕಾಗಿ ಕರ್ಕರೆ ಸಾಗಿ ಹೋದ ದಾರಿಗೂ ಸಂಬಂಧ ಇಲ್ಲ ಎಂದು ಹೇಳಲಾಗುತ್ತದೆ. ಅವರನ್ನು ಉದ್ದೇಶಪೂರ್ವಕವಾಗಿ ತಪ್ಪು ದಾರಿಯಲ್ಲಿ ಸಾಗಿಸಿ ಹತ್ಯೆಗೈಯಲಾಗಿದೆ ಎಂದೂ ಹೇಳಲಾಗುತ್ತದೆ. ಕರ್ಕರೆ ಮತ್ತು ಅವರ ತಂಡದ ಹುತಾತ್ಮತೆಯ ಹಿನ್ನೆಲೆಯಲ್ಲಿ ಇಂಥ ಅನುಮಾನಗಳು ಇನ್ನೂ ಉಳಿದುಕೊಂಡಿರುವ ಈ ಹೊತ್ತಿನಲ್ಲಿ ಈ ಅನುಮಾನಗಳಿಗೆ ಪುಷ್ಠಿ ನೀಡುವಂತೆ ಪ್ರಜ್ಞಾಸಿಂಗ್ ಹೇಳಿಕೆ ನೀಡಿದ್ದಾಳೆ. ಆಕೆ ಕರ್ಕರೆಯ ಸಾವನ್ನು ಸಂಭ್ರಮಿಸಿದ್ದಾಳೆ. ತನ್ನ ಶಾಪದಿಂದ ಕರ್ಕರೆ ಸಾವಿಗೀಡಾಗಿದ್ದಾರೆ ಎಂದು ಹೇಳಿದ್ದಾಳೆ. ನೀನು ನಾಶವಾಗುತ್ತೀ ಎಂದು ನಾನು ಕರ್ಕೆರೆಗೆ ಹೇಳಿದ್ದೆ  ಎಂದೂ ಹೇಳಿದ್ದಾಳೆ. ಬಿಜೆಪಿಯು ಆಕೆಯ ಹೇಳಿಕೆಯಿಂದ ಅಂತರ ಕಾಯ್ದುಕೊಂಡರೂ ತನ್ನ ಬೆಂಬಲಿಗರ ಮೂಲಕ ಆಕೆಯನ್ನು ಅದು ಪರೋಕ್ಷವಾಗಿ ಸಮರ್ಥಿಸುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರು ಆಕೆಯ ಅಭ್ಯರ್ಥಿತನವನ್ನು ಹೆಮ್ಮೆಯಿಂದ ಸಮರ್ಥಿಸಿಕೊಂಡಿದ್ದಾರೆ. ಅವರ ಜೀವನ ಚರಿತ್ರೆಯನ್ನು ಬರೆದಿರುವ ಮಧುಕೀಶ್ವರ್ ಎಂಬವರು ಮೋದಿಗಿಂತಲೂ ಒಂದು ಹೆಜ್ಜೆ ಮುಂದೆ ಹೋಗಿ, ‘ಕರ್ಕರೆ ಪಾಕಿಸ್ತಾನಕ್ಕಾಗಿ ಕೆಲಸ ಮಾಡುತ್ತಿದ್ದರು’ ಎಂದೂ ಹೇಳಿದ್ದಾರೆ. ಮುಂಬೈ ದಾಳಿಕೋರರನ್ನು ಸಾಯಿಸುವ ಹಾದಿಯಲ್ಲಿ ಜೀವವನ್ನೇ ಕಳಕೊಂಡ ಅಧಿಕಾರಿಯ ಬಗ್ಗೆ ಬಿಜೆಪಿಯ ಭಾವನೆ ಏನು ಅನ್ನುವುದು ಈ ಒಟ್ಟು ಬೆಳವಣಿಗೆಯು ಸ್ಪಷ್ಟಪಡಿಸುತ್ತದೆ. ನಿಜವಾಗಿ, ಕರ್ಕರೆ ಮತ್ತು ಅವರ ತಂಡದ ಸಾವಿನ ಬಗ್ಗೆ ಮೊಟ್ಟಮೊದಲು ಪ್ರಶ್ನೆ ಎತ್ತಬೇಕಾಗಿದ್ದುದು ಬಿಜೆಪಿ. ಯಾಕೆಂದರೆ, ಮುಂಬೈ ದಾಳಿಗೆ ಪ್ರತೀಕಾರವಾಗಿ ಪಾಕಿಸ್ತಾನದ ಮೇಲೆ ಯುದ್ಧ ಸಾರಬೇಕು ಎಂಬ ಭಾಷೆಯಲ್ಲಿ ಅಂದು ಇದೇ ಬಿಜೆಪಿ ಮಾತಾಡಿತ್ತು. ಮನ್‍ಮೋಹನ್ ಸಿಂಗ್ ಸರಕಾರವನ್ನು ಅತ್ಯಂತ ತೀವ್ರವಾಗಿ ಅದು ತರಾಟೆಗೆ ತೆಗೆದುಕೊಂಡಿತ್ತು. ಪಾಕಿಸ್ತಾನದ ವಿರುದ್ಧ ಕಟು ಮಾತುಗಳನ್ನಾಡಿತ್ತು. ಆದರೆ, ಈ ದೇಶದ ಬಹು ಬೆಲೆಬಾಳುವ ಕರ್ಕರೆ ಮತ್ತು ಅವರ ತಂಡದ ಸಾವಿಗೆ ಕಾರಣಗಳೇನು ಎಂಬ ಬಗ್ಗೆ ಪ್ರತ್ಯೇಕ ತನಿಖೆಗೆ ಅದು ಅಂದಿನಿಂದ ಇಂದಿನ ವರೆಗೆ ಒತ್ತಾಯಿಸಿಯೇ ಇಲ್ಲವಲ್ಲ, ಯಾಕೆ? ಕರ್ಕರೆಗೆ ದುರ್ಬಲ ಗುಂಡು ನಿರೋಧಕ ಜಾಕೆಟನ್ನು ಒದಗಿಸಿರುವ ಕುರಿತಂತೆ ಬಲವಾದ ಪ್ರಶ್ನೆಯನ್ನು ಅದು ಎಬ್ಬಿಸದೇ ಇರುವುದಕ್ಕೆ ಕಾರಣಗಳೇನು? ಇದರರ್ಥ ಈ ಘಟನೆಯಲ್ಲಿ ಬಿಜೆಪಿಗೆ ಪಾತ್ರ ಇದೆ ಎಂದಲ್ಲ. ಅದನ್ನು ತೀರ್ಮಾನಿಸಬೇಕಾದುದು ಈ ದೇಶದ ನ್ಯಾಯಾಂಗ. ಆದರೆ, ಸಾಧ್ವಿಯನ್ನು ತನ್ನ ಅಭ್ಯರ್ಥಿಯಾಗಿ ಘೋಷಿಸಿರುವುದು ಮತ್ತು ಕರ್ಕರೆಯವರ ಹತ್ಯೆಯನ್ನು ಸಂಭ್ರಮಿಸಿ ಆಕೆ ಹೇಳಿಕೆ ನೀಡಿರುವುದನ್ನು ನೋಡುವಾಗ ಬಿಜೆಪಿ ಸಹಜವಾಗಿ ಕಟಕಟೆಯಲ್ಲಿ ನಿಲ್ಲುತ್ತದೆ. ಒಂದುವೇಳೆ, ಕರ್ಕರೆಯವರ ಪತ್ನಿ ಇವತ್ತು ಜೀವಂತವಿರುತ್ತಿದ್ದರೆ ಈ ಎಲ್ಲ ಬೆಳವಣಿಗೆಗಳ ಬಗ್ಗೆ ಏನನ್ನುತ್ತಿದ್ದರೋ? ಸಾಧ್ವಿ ಪ್ರಜ್ಞಾ ಸಿಂಗ್‍ಳ ಬಗ್ಗೆ ಕರ್ಕರೆಗಿದ್ದ ಅಭಿಪ್ರಾಯ ಮತ್ತು ಒಟ್ಟು ಭಯೋತ್ಪಾದನಾ ಕೃತ್ಯಗಳ ಒಳ ಸತ್ಯಗಳ ಕುರಿತಾಗಿ ಓರ್ವ ದಕ್ಷ ಅಧಿಕಾರಿಯ ಪತ್ನಿಯೆಂಬ ನೆಲೆಯಲ್ಲಿ ಅವರು ಮಾಹಿತಿಗಳನ್ನು ಹಂಚಿಕೊಳ್ಳುತ್ತಿದ್ದರೋ?
ಮಾಲೆಗಾಂವ್, ಸಂಜೋತಾ, ಮಕ್ಕಾ ಮತ್ತು ಅಜ್ಮೀರ್ ಮಸೀದಿಗಳ ಸ್ಫೋಟ ಪ್ರಕರಣದಲ್ಲಿ ಪ್ರಜ್ಞಾಸಿಂಗ್ ಮಾತ್ರ ಆರೋಪಿಯಲ್ಲ. ಲೆ. ಕರ್ನಲ್ ಪುರೋಹಿತ್, ಅಸೀಮಾನಂದ, ಸುನೀಲ್ ಜೋಷಿ, ಕಲ್‍ಸಿಂಗ್ರಾ ಸಹಿತ ಅನೇಕರಿದ್ದಾರೆ. ಸಾಧ್ವಿಯಿಂದ ಲೆಫ್ಟಿನೆಂಟ್ ಕರ್ನಲ್ ತನಕ ಚಾಚಿರುವ ಈ ಸಂಬಂಧದ ಕೊಂಡಿ ಅತ್ಯಂತ ಭಯಾನಕವಾದುದು. ಸೇನೆಯ ಉನ್ನತ ಸ್ಥಾನದಲ್ಲಿರುವ ವ್ಯಕ್ತಿಯೋರ್ವ ಭಯೋತ್ಪಾದನಾ ಕೃತ್ಯದ ಆರೋಪಿಯಾಗಿ ವರ್ಷಗಳ ಕಾಲ ಜೈಲಲ್ಲಿರುವುದು ಮತ್ತು ಸಾಧ್ವಿಯೋರ್ವಳೊಂದಿಗೆ ಸೇರಿಕೊಂಡು ಕ್ರೌರ್ಯವೊಂದರ ಸಂಚಿನಲ್ಲಿ ಭಾಗಿಯಾಗುವುದೆಂದರೆ ಅದು ಇನ್ನಿತರ ಭಯೋತ್ಪಾದನಾ ಕೃತ್ಯಗಳಿಗಿಂತ ಖಂಡಿತ ಭಿನ್ನವಾದುದು. ಇದನ್ನು ತನಿಖಿಸುವುದು ಸುಲಭ ಅಲ್ಲ. ಸೇನೆಯಲ್ಲಿರುವ ಪ್ರಭಾವಿ ವ್ಯಕ್ತಿಯೋರ್ವರ ಮೇಲೆ ಅನುಮಾನ ಪಡುವುದೇ ಒಂದು ಧೈರ್ಯದ ಕೆಲಸ. ಆ ಅನುಮಾನವನ್ನು ಸಾಬೀತುಪಡಿಸುವುದೆಂದರೆ ಇನ್ನಷ್ಟು ಸಾಹಸದ ಕೆಲಸ. ಯಾಕೆಂದರೆ, ಸಾಮಾನ್ಯ ನಾಗರಿಕರಿಗೆ ಇಲ್ಲದ ರಕ್ಷಣಾ ವಲಯವೊಂದು ಸಾಧ್ವಿಗಳಿಗೆ ಮತ್ತು ಸೇನೆಯ ಅಧಿಕಾರಿಗಳಿಗೆ ಖಂಡಿತ ಇರುತ್ತದೆ. ಇದನ್ನು ಭೇದಿಸಿಕೊಂಡು ಅವರ ಮೇಲೆ ಕ್ರಮ ಕೈಗೊಳ್ಳುವ ಧೈರ್ಯ ಪ್ರದರ್ಶಿಸುವಾಗ ಅನೇಕಾರು ಅಡೆತಡೆಗಳು ಎದುರಾಗಲೇಬೇಕು. ಹಾಗೆ ತನಿಖಿಸುವ ಧೈರ್ಯ ಪ್ರದರ್ಶಿಸುವವರ ವಿರುದ್ಧ ಸಂಚು, ಷಡ್ಯಂತ್ರ, ತಂತ್ರಗಳೆಲ್ಲ ಖಂಡಿತ ನಡೆದೇ ನಡೆದಿರುತ್ತದೆ. ಸಾಧ್ವಿ ಪ್ರಜ್ಞಾಸಿಂಗ್, ಪುರೋಹಿತ್, ಅಸೀಮಾನಂದ ಮುಂತಾದವರ ಮೇಲೆ ಆರೋಪ ಪಟ್ಟಿ ತಯಾರಿಸುವಾಗ, ಅವರನ್ನು ಬಂಧಿಸುವಾಗ ಮತ್ತು ಅವರ ವಿಚಾರಣೆ ನಡೆಸುವಾಗಲೆಲ್ಲ ಕರ್ಕರೆ ಮತ್ತು ತಂಡ ಇಂಥದ್ದೊಂದು  ಸವಾಲನ್ನು ಎದುರಿಸಿಯೇ ಇರಬಹುದು. ಸಾಧ್ವಿ ನೀಡಿರುವ ‘ನೀನು ನಾಶವಾಗುತ್ತೀಯ’ ಅನ್ನುವ ಹೇಳಿಕೆಯಲ್ಲಿ ಅಡಗಿರುವುದು ಇದೇ ಧ್ವನಿ. ಕರ್ಕರೆಯವರು ಎಂಥ ಹುತ್ತಕ್ಕೆ ಕೈ ಹಾಕಿದ್ದರು ಎಂಬುದನ್ನು ಇದು ಸ್ಪಷ್ಟಪಡಿಸುತ್ತದೆ. ನಿಜಕ್ಕೂ, ಸಾಧ್ವಿ ನೀಡಿರುವುದು ಬರೇ ಹೇಳಿಕೆ ಮಾತ್ರವೋ ಅಥವಾ ಕರ್ಕರೆಯವರ ನಾಶಕ್ಕೆ ಸಂಚು ಹೆಣೆದು ಯಶಸ್ವಿಯಾದ ಕತೆಯೂ ಆ ಹೇಳಿಕೆಯಲ್ಲಿ ಇದೆಯೇ? ಕರ್ಕರೆ ಮತ್ತು ತಂಡವನ್ನು ನಾಶ ಮಾಡುವುದಕ್ಕೆ ಗುಂಪೊಂದನ್ನು ರಚಿಸಿಕೊಂಡು ಅದರ ಜಾರಿಗಾಗಿ ಸೂಕ್ತ ಸಂದರ್ಭಕ್ಕಾಗಿ ಕಾಯಲಾಗುತ್ತಿತ್ತೇ? ಈ ಹಿನ್ನೆಲೆಯಲ್ಲಿ, ಮುಂಬೈ ದಾಳಿ ಪ್ರಕರಣವನ್ನು ದೇಶ ಮರುತನಿಖೆ ನಡೆಸಬೇಕಾಗಿದೆಯೇ? ಇದರ ಹಿಂದೆ ಈಗಾಗಲೇ ಗೊತ್ತಿರುವ ಸಂಗತಿಗಿಂತ ಗೊತ್ತಿರದ ಸಂಗತಿಗಳು ಇವೆಯೇ? ಕರ್ಕರೆಯವರ ಹುತಾತ್ಮತೆಗೆ ಇಂಥ ತನಿಖೆಯನ್ನು ಉತ್ತರ ಸಿಗಬಲ್ಲುದೇ? ಬಹುಶಃ,
ಸಾಧ್ವಿಯನ್ನು ತನ್ನ ಅಭ್ಯರ್ಥಿಯಾಗಿ ಘೋಷಿಸುವ ಮೂಲಕ ಭಯೋತ್ಪಾದನಾ ಕೃತ್ಯಗಳ ಮರು ಅವಲೋಕನವೊಂದಕ್ಕೆ ಬಿಜೆಪಿ ಬಾಗಿಲನ್ನು ತೆರೆದಿದೆ. ಈ ಬಾಗಿಲು ಮುಚ್ಚದಿರಲಿ.

No comments:

Post a Comment