Saturday 16 January 2021

ಪಾಕ್‌ನಲ್ಲಿ ದೇಗುಲ ಒಡೆದರು...




ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತ ಹಿಂದೂಗಳು ಪರಮ ಸುಖಿಗಳಾಗಿ ಮತ್ತು ಸಂಪೂರ್ಣ ಹಕ್ಕು ಸ್ವಾತಂತ್ರ್ಯದೊಂದಿಗೆ ಬದುಕುತ್ತಿದ್ದಾರೆ ಎಂದು ಯಾರೂ ಹೇಳುತ್ತಿಲ್ಲ. ಅಲ್ಪಸಂಖ್ಯಾತ ಹಿಂದೂಗಳ ಮೇಲೆ ಬಹುಸಂಖ್ಯಾತರ ಅಹಂ ಸವಾರಿ ಮಾಡುತ್ತಿರುವ ಸುದ್ದಿಗಳನ್ನು ನಾವು ಆಗಾಗ ಓದುತ್ತಿರುತ್ತೇವೆ. ಆದರೆ ಕಳೆದವಾರ ನಡೆದ ಘಟನೆಯೊಂದು ಪಾಕ್ ಟೀಕಾಕಾರರನ್ನೇ ನಿಬ್ಬೆರಗುಗೊಳಿಸಿದೆ. ಪಾಕ್‌ನ ಖೈಬರ್ ಫಖ್ತೂನ್ ಪ್ರಾಂತದ ತರ‍್ರಿ ಎಂಬಲ್ಲಿಯ ಸಂತ ಪರಮ ಹಂಸಜೀ ಮಹಾರಾಜ್‌ರ ಮಂದಿರವನ್ನು ಭಾರೀ ಸಂಖ್ಯೆಯಲ್ಲಿದ್ದ ದುಷ್ಕರ್ಮಿಗಳು ಬೆಂಕಿಕೊಟ್ಟು ಸುಟ್ಟು ಹಾಕಿದ್ದರು. ಈ ಮಂದಿರ ಬಹಳ ಹಳೆಯದು. ಸ್ವಾತಂತ್ರ್ಯ  ಪೂರ್ವದ್ದು. 1947ರಲ್ಲಿ ಭಾರತವು ವಿಭಜನೆಯಾದಾಗ ಈ ಮಂದಿರದೊಂದಿಗೆ ಧಾರ್ಮಿಕ ಸಂಬಂಧ  ಇಟ್ಟುಕೊಂಡಿದ್ದ ಹಿಂದೂಗಳೆಲ್ಲ ಭಾರತಕ್ಕೆ ಓಡಿ ಬಂದರು. ಈ ಕಾರಣದಿಂದಾಗಿ ಈ ಮಂದಿರ 1947ರ ಬಳಿಕ ಪೂಜೆ-ಪುರಸ್ಕಾರಗಳಿಲ್ಲದೇ ಅನಾಥವಾಗಿತ್ತು. 4 ವರ್ಷಗಳ ಹಿಂದಷ್ಟೇ ಈ ಮಂದಿರವನ್ನು ಪಾಕ್ ಸುಪ್ರೀಮ್ ಕೋರ್ಟು ಹಿಂದೂಗಳಿಗೆ ಒಪ್ಪಿಸಿತ್ತು. ಆ ಬಳಿಕ ಈ ಮಂದಿರವು ಯಾತ್ರಾ ಸ್ಥಳವಾಗಿ ಮಾರ್ಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಈ ಮಂದಿರದ ಜೀರ್ಣೋದ್ದಾರ ಮತ್ತು ವಿಸ್ತರಣಾ ಕಾರ್ಯವೂ ಇತ್ತೀಚೆಗೆ ನಡೆಯುತ್ತಿತ್ತು. ಇದನ್ನು ಸಹಿಸದ ಮುಸ್ಲಿಮರ ದೊಡ್ಡದೊಂದು ಗುಂಪು ಮಂದಿರಕ್ಕೆ ದಾಳಿ ಮಾಡಿ ಸುಟ್ಟು ಹಾಕಿತು. ಆದರೆ ಈ ಘಟನೆಯ ಮೂರೇ ದಿನಗಳೊಳಗೆ ಪಾಕ್ ಸುಪ್ರೀಮ್ ಕೋರ್ಟ್ ಮತ್ತು ಖೈಬರ್ ಫಖ್ತೂನ್‌ನ ಸರಕಾರ ತೆಗೆದುಕೊಂಡ ಕ್ರಮ ಸರ್ವರ ಪ್ರಶಂಸೆಗೂ ಪಾತ್ರವಾಗಿದೆ. ಸುಪ್ರೀಮ್ ಕೋರ್ಟು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿತಲ್ಲದೇ, ತನಿಖೆ ನಡೆಸುವುದಕ್ಕಾಗಿ ಏಕ ಸದಸ್ಯ ಆಯೋಗವನ್ನು ನೇಮಿಸಿತು. ಪಾಕ್ ಪಾರ್ಲಿಮೆಂಟ್ ಸದಸ್ಯ ಡಾ| ರಮೇಶ್ ಕುಮಾರ್ ಜೊತೆ ಪಾಕ್ ಸುಪ್ರೀಮ್‌ನ ಮುಖ್ಯ ನ್ಯಾಯಾಧೀಶ ಗುಲ್ಝಾರ್ ಅಹ್ಮದ್ ಮಾತುಕತೆ ನಡೆಸುವ ಮೂಲಕ ಅಭೂತಪೂರ್ವ ಕಾಳಜಿ ಪ್ರಕಟಿಸಿದರು. ಪಾಕ್ ಸರಕಾರವು 100 ಮಂದಿಯನ್ನು ಬಂಧಿಸಿತಲ್ಲದೇ ಎಫ್‌ಐಆರ್‌ನಲ್ಲಿ 350 ಮಂದಿಯನ್ನು ಹೆಸರಿಸಿತು. ಅಲ್ಲದೆ ಸರಕಾರಿ ವೆಚ್ಚದಲ್ಲಿ ಸಂತ ಪರಮ ಹಂಸಜೀ ಮಹಾರಾಜ್ ಅವರ ಮಂದಿರವನ್ನು ಪುನರ್ ನಿರ್ಮಿಸಿಕೊಡುವುದಾಗಿ ವಾಗ್ದಾನ ಮಾಡಿತು. ಹಾಗಂತ,
ಇದು ಮೊದಲ ಪ್ರಕರಣ ಅಲ್ಲ.
2016 ರಲ್ಲೂ ಇಂಥದ್ದೇ ಧ್ವಂಸ ಕಾರ್ಯ ನಡೆದಿತ್ತು. ಕಮರ್ಷಿಯಲ್ ಕಟ್ಟಡ ಕಟ್ಟುವ ಉದ್ದೇಶದಿಂದ ರಹಸ್ಯವಾಗಿ ಮಂದಿರವೊಂದನ್ನು ಉರುಳಿಸಲಾಗಿದೆ ಎಂದು ಪೇಶಾವರದ ಹೈಕೋರ್ಟ್ ಗೆ  ಮುಜೀಬರ‍್ರಹ್ಮಾನ್ ಮತ್ತು ವಾಕಿಫ್ ಅಹ್ಮದ್‌ರು ದೂರು ಕೊಟ್ಟಿದ್ದರು. ಅಲ್ಪಸಂಖ್ಯಾತರ ಹಕ್ಕು ಮತ್ತು ಸ್ವಾತಂತ್ರ್ಯವನ್ನು ರಕ್ಷಿಸುವುದಾಗಿ ಈ ಸಂದರ್ಭದಲ್ಲಿ ಖೈಬರ್ ಫಖ್ತೂನ್‌ನ ಸರಕಾರವು ವಾಗ್ದಾನ ಮಾಡಿತ್ತು. ನಿಜವಾಗಿ,
ಪ್ರಜಾತಂತ್ರ ಗಣರಾಜ್ಯವಾಗಿ ಗುರುತಿಸಿಕೊಂಡಿರುವ ಭಾರತ ಮತ್ತು ಇಸ್ಲಾಮಿಕ್ ರಾಷ್ಟçವಾಗಿ ಗುರುತಿಸಿಕೊಂಡಿರುವ ಪಾಕಿಸ್ತಾನವು ಅಲ್ಪಸಂಖ್ಯಾತರಿಗೆ ನ್ಯಾಯವನ್ನು ಕೊಡುವಲ್ಲಿ ಪದೇ ಪದೇ ವಿಫಲವಾಗುತ್ತಿವೆ ಎಂಬುದಕ್ಕೆ 1947ರ ಬಳಿಕದ ಹತ್ತು ಹಲವು ಘಟನೆಗಳೇ ಸಾಕ್ಷಿ. ಭಾರತವು ವಿಭಜನೆಯಾದಾಗ ಸಾವಿರಾರು ಹಿಂದೂಗಳು ಪಾಕ್‌ನಿಂದ ಭಾರತಕ್ಕೆ ಓಡೋಡಿ ಬಂದರು. ಭಾರತದಿಂದ ಅತ್ತ ಪಾಕಿಸ್ತಾನಕ್ಕೆ ಅಂಥದ್ದೇ ಒಂದು ಪಲಾಯನ ಮುಸ್ಲಿಮರಿಂದಲೂ ನಡೆಯಿತು. ಈ ಎರಡೂ ಪಲಾಯನಗಳ ಹಿಂದೆ ಇದ್ದುದೂ ಭೀತಿ. ಭಾರತದಲ್ಲಿ ಬಹುಸಂಖ್ಯಾತ ಹಿಂದೂಗಳು ನಮ್ಮನ್ನು ಕ್ಷೇಮದಿಂದ ಇರಲು ಬಿಡಲಾರರು ಎಂದು ಮುಸ್ಲಿಮರೂ, ಪಾಕಿಸ್ತಾನದಲ್ಲಿ ಬಹುಸಂಖ್ಯಾತ ಮುಸ್ಲಿಮರು ತಮ್ಮ ಸುಖಕ್ಕೆ ಅಡ್ಡಿಯಾದಾರು ಎಂದು ಹಿಂದೂಗಳೂ ಭಾವಿಸಿದರು. ಹಾಗಂತ, ಇಂಥದ್ದೊಂದು  ಭೀತಿ ಅಕಾರಣವಾಗಿ ಹುಟ್ಟಿಕೊಂಡಿತು ಎಂದು ಹೇಳುವಂತಿಲ್ಲ. ಸ್ವಾತಂತ್ರ್ಯ ಹೋರಾಟದ ಸಮಯದಲ್ಲೇ ಭಾರತದಲ್ಲಿ ಹಿಂದೂ-ಮುಸ್ಲಿಮರ ನಡುವೆ ತಕರಾರುಗಳಿದ್ದುವು. ಕೋಮುಸಂಘರ್ಷಗಳಾಗಿದ್ದುವು. ಭಾರತವನ್ನು ತುಂಡರಿಸಿ ಪಾಕ್ ಎಂಬ ಭೂಪ್ರದೇಶ ಹುಟ್ಟಿಕೊಂಡದ್ದೇ  ಈ ಹಿನ್ನೆಲೆಯಲ್ಲಿ. ಆದರೆ ಮುಸ್ಲಿಮರ ಪೈಕಿ ದೊಡ್ಡದೊಂದು ಗುಂಪು ಭಆರತದ ಹಿಂದೂಗಳ ಮೇಲೆ ಭರವಸೆ ಇಟ್ಟಿತು. ಭಾರತವು ತಮ್ಮ ಜನ್ಮ ಮತ್ತು ಕರ್ಮಭೂಮಿ ಎಂದು ಘೋಷಿಸಿತು. ಧರ್ಮದ ಆಧಾರದಲ್ಲಿ ರಚನೆಯಾದ ಪಾಕ್‌ಗಿಂತ ಜಾತ್ಯಾತೀತತೆಯ ಆಧಾರದಲ್ಲಿ ರಚನೆಯಾಗುವ ಭಾರತದಲ್ಲೇ  ಇರಬಯಸಿತು. ಅತ್ತ ಪಾಕ್‌ನಲ್ಲೂ ಇಂಥದ್ದೇ  ಬೆಳವಣಿಗೆ ನಡೆಯಿತು. ಹಿಂದೂಗಳು ಪಾಕ್ ಮುಸ್ಲಿಮರ ಮೇಲೆ ಭರವಸೆ ಇರಿಸಿದರು. ತಾವು ಹುಟ್ಟಿದ ನೆಲದಲ್ಲೇ  ಬದುಕಲು ಪಣ ತೊಟ್ಟರು. ನಿಜವಾಗಿ,
ಈ ಎರಡೂ ದೇಶಗಳ ಬಹುಸಂಖ್ಯಾತರ ಬಹುದೊಡ್ಡ ಜವಾಬ್ದಾರಿ ಏನೆಂದರೆ, ತಮ್ಮ ಮೇಲೆ ಭರವಸೆ ಇಟ್ಟ ಈ ಜುಜುಬಿ ಸಂಖ್ಯೆಯ ಜನರ ರಕ್ಷಕರಾಗಿ ಪರಿವರ್ತಿತವಾಗುವುದು. ಅವರ ಹಕ್ಕು, ಸ್ವಾತಂತ್ರ‍್ಯಕ್ಕೆ ಕಾವಲು ನಿಲ್ಲುವುದು, ಯಾವ ಕಾರಣಕ್ಕೂ ಅವರ ಆರಾಧನಾ ಕೇಂದ್ರಗಳು, ಧಾರ್ಮಿಕ ವಿಧಿ-ವಿಧಾನಗಳು. ಹಕ್ಕುಗಳಿಗೆ ಭಂಗ ಬಾರದಂತೆ ನೋಡಿಕೊಳ್ಳುವುದು. ಇಸ್ಲಾಮಿಕ್ ರಾಷ್ಟ್ರವಾಗಿ ಗುರುತಿಸಿಕೊಂಡಿರುವ ಪಾಕ್‌ನ ಮೇಲಂತೂ ಈ ಜವಾಬ್ದಾರಿ ಇನ್ನಷ್ಟು ಹೆಚ್ಚು. ಯಾಕೆಂದರೆ, ಇಸ್ಲಾಮಿಕ್ ದೇಶವೊಂದರಲ್ಲಿ ನಡೆಯುವ ಪ್ರತಿ ಬೆಳವಣಿಗೆಯನ್ನೂ ಇಸ್ಲಾಮಿಕ್ ಕನ್ನಡಕದೊಂದಿಗೆ ನೋಡಲಾಗುತ್ತದೆ. ಆ ದೇಶದಲ್ಲಿ ನಡೆಯುವ ತಪ್ಪುಗಳನ್ನು ಇಸ್ಲಾಮಿಕ್ ತಪ್ಪುಗಳಾಗಿ ಪರಿಗಣಿಸಲಾಗುತ್ತದೆ. ಹಿಂದೂಗಳನ್ನು ನ್ಯಾಯಯುತವಾಗಿ ನಡೆಸಿಕೊಳ್ಳದಿದ್ದರೆ ಅದು ಇಸ್ಲಾಮಿನ ನೀತಿ ನಿಯಮಗಳಾಗಿ ವ್ಯಾಖ್ಯಾನಕ್ಕೆ ಒಳಗಾಗುತ್ತದೆ. ಪಾಕ್‌ನ ಹೆಸರು ಈಗಾಗಲೇ ಈ ದಿಶೆಯಲ್ಲಿ ಸಾಕಷ್ಟು ಹಾಳಾಗಿದೆ. ವಿಷಾದ ಏನೆಂದರೆ,
ಯಾವುದೇ ಧರ್ಮದ ರಾಷ್ಟ್ರವಾಗಿ ಗುರುತಿಸಿಕೊಳ್ಳದ ಮತ್ತು ಸರ್ವರನ್ನೂ ಒಳಗೊಳ್ಳುವ ಸಂವಿಧಾನವನ್ನೇ ರಾಷ್ಟ್ರ  ಧರ್ಮವಾಗಿ ಅಂಗೀಕರಿಸಿಕೊಂಡ  ಈ ದೇಶದಲ್ಲೂ ಅಲ್ಪಸಂಖ್ಯಾತರನ್ನು ಭೀತಿಗೆ ತಳ್ಳುವ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿವೆ ಎಂಬುದು. ಅಲ್ಪಸಂಖ್ಯಾತರನ್ನು ದೇಶದ್ರೋಹಿಗಳಂತೆ, ವಂಚಕರಂತೆ, ಮತಾಂತರಿಗಳಂತೆ ಬಿಂಬಿಸುವ ಮತ್ತು ಅಪಪ್ರಚಾರ ನಡೆಸುವ ಪ್ರಯತ್ನಗಳು ಎಗ್ಗಿಲ್ಲದೇ ನಡೆಯುತ್ತಿವೆ. ಅಲ್ಪಸಂಖ್ಯಾತರ ಮೇಲೆ ಹಲ್ಲೆ, ಹತ್ಯೆ, ಅವರ ಆರಾಧನಾ ಕೇಂದ್ರಗಳ ಮೇಲೆ ದಾಳಿಯೂ ನಡೆಯುತ್ತಿದೆ. ಹಾಗಂತ,
ಅಲ್ಪಸಂಖ್ಯಾತರ ರಕ್ಷಣೆಗೆ ಇಲ್ಲಿನ ಹಿಂದೂಗಳು ನಿಂತೇ ಇಲ್ಲ ಎಂದಲ್ಲ. ಇಂಥ ಬೆಳವಣಿಗೆಗಳು ಸಾವಿರಾರು ನಡೆದಿವೆ. ದುಷ್ಕರ್ಮಿಗಳ ಕೈಯಿಂದ ತಪ್ಪಿಸಿಕೊಂಡು ಬಂದವರಿಗೆ ಹಿಂದೂಗಳು ಆಶ್ರಯ ಕೊಟ್ಟಿದ್ದಾರೆ. ಆರ್ಥಿಕ ಸಹಾಯ ಮಾಡಿದ್ದಾರೆ. ಮುಸ್ಲಿಮರ ಹಕ್ಕು, ಸ್ವಾತಂತ್ರ‍್ಯದ ರಕ್ಷಣೆಗಾಗಿ ತಮ್ಮ ಜೀವವನ್ನೇ ಮುಡಿಪಾಗಿಟ್ಟ ಹಿಂದೂಗಳು ಅಸಂಖ್ಯ ಇದ್ದಾರೆ. ಅಂಥ ಬೆಳವಣಿಗೆಗಳು ಈಗಲೂ ನಡೆಯುತ್ತಿವೆ. ಆದರೆ, ಅದರ ಜೊತೆಜೊತೆಗೇ ಇಂಥ ಪ್ರೇಮಮಯಿ ಸಂಬಂಧಕ್ಕೆ ಕನ್ನ ಕೊರೆಯುವ ಪ್ರಯತ್ನವೂ ಬಿರುಸಾಗಿ ನಡೆಯುತ್ತಿದೆ. ಸಾಮಾಜಿಕ ಜಾಲತಾಣಗಳ ಮೂಲಕ ಅಲ್ಪಸಂಖ್ಯಾತರ ಬಗ್ಗೆ ಸುಳ್ಳು ಸುದ್ದಿಗಳನ್ನು ಹರಡುತ್ತಾ, ದ್ವೇಷ ಭಾವವನ್ನು ಹುಟ್ಟು ಹಾಕುತ್ತಾ ನಡೆಯುವ ಗುಂಪೂ ಇದೆ. ಈ ಬಗ್ಗೆ ಜನರು ಜಾಗೃತರಾಗಬೇಕು. ಸರಕಾರ ಇಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಈ ಹಿನ್ನೆಲೆಯಲ್ಲಿ ಪಾಕ್‌ನ ಸುಪ್ರೀಮ್ ಕೋರ್ಟ್ ತಳೆದ ನಿಲುವು ಶ್ಲಾಘನಾರ್ಹ. ನ್ಯಾಯದ ಮುಂದೆ ಎಲ್ಲರೂ ಸಮಾನರಾದಾಗಲೇ ಶಾಂತಿಪೂರ್ಣ ಸಮಾಜ ನಿರ್ಮಾಣವಾಗಬಲ್ಲುದು.
ನ್ಯಾಯ ನಿಮ್ಮ ಹೆತ್ತವರ ವಿರುದ್ಧವಿದ್ದರೆ ನೀವು ನ್ಯಾಯಪರ ನಿಲ್ಲಬೇಕು ಎಂದು ಪವಿತ್ರ ಕುರ್‌ಆನ್ (4:135) ಹೇಳಿರುವುದನ್ನೂ ಈ ಸಂದರ್ಭದಲ್ಲಿ ಸ್ಮರಿಸಿಕೊಳ್ಳಬಹುದು.

No comments:

Post a Comment