Saturday 16 January 2021

ಆ ಬಿ.ಎಡ್. ವಿದ್ಯಾರ್ಥಿ ಹಾಗೇಕೆ ಮಾಡಿದ?




ಪ್ರೀತಿ, ಪ್ರೇಮವೆಂಬ ಹರೆಯದ ತಲ್ಲಣಗಳಿಗೆ ಈ ದೇಶದಲ್ಲಿ ಬಲಿಯಾಗುತ್ತಿರುವ ಜೀವಗಳ ಸಂಖ್ಯೆ ಸಣ್ಣದಲ್ಲ. ‘ಪ್ರೇಮ ನಿರಾಕರಣೆ:  ಪ್ರೇಮಿಯಿಂದ ಚೂರಿ ಇರಿತ’, ‘ಯುವತಿಗೆ ಆ್ಯಸಿಡ್ ಎರಚಿದ ಯುವಕ’, ‘ಹೆತ್ತವರ ವಿರೋಧ: ಪ್ರೇಮಿಗಳ ಆತ್ಮಹತ್ಯೆ’,  ‘ಪ್ರೇಮಿಗಳಿಬ್ಬರೂ ಪರಾರಿ..’ ಇತ್ಯಾದಿ ಶೀರ್ಷಿಕೆಗಳಲ್ಲಿ ಪ್ರತಿದಿನ ವಾರ್ತೆಗಳನ್ನು ನಾವು ಓದುತ್ತಿರುತ್ತೇವೆ. ನಮ್ಮದೇ ಕಣ್ಣೆದುರು ಬೆಳೆದ  ಯುವಕ-ಯುವತಿಯರು ಹತ್ಯೆ, ಆತ್ಮಹತ್ಯೆ, ಪರಾರಿಯಂಥ ತೀವ್ರ ನಿರ್ಧಾರಕ್ಕೆ ಹೇಗೆ ಬಂದರು ಎಂಬುದಾಗಿ ಸ್ವಲ್ಪ ದಿನ ಚರ್ಚಿಸಿ  ಬಳಿಕ ಮರೆತು ಬಿಡುತ್ತೇವೆ. ಆದರೂ ಇಂಥ ಪ್ರಕರಣಗಳ ಸಂಖ್ಯೆಯಲ್ಲಿ ಕಡಿಮೆಯೇನೂ ಆಗುತ್ತಿಲ್ಲ. ಕಳೆದವಾರ ಇಂಥದ್ದೇ  ಒಂದು  ಪ್ರಕರಣದ ಬಗ್ಗೆ ರಾಜ್ಯ ಹೈಕೋರ್ಟು ವಿಶ್ಲೇಷಣೆ ನಡೆಸಿದೆ. 2009ರಲ್ಲಿ ಕಲಬುರ್ಗಿ ಜಿಲ್ಲೆಯ ಅಲಂದ ತಾಲೂಕಿನಲ್ಲಿ ನಡೆದ ದುರಂತ  ಪ್ರೇಮಕತೆಯನ್ನು ವಿಚಾರಣೆ ನಡೆಸುತ್ತಾ ಪ್ರೇಮ ನಿವೇದನೆಯನ್ನು ಸ್ವೀಕರಿಸುವ ಅಥವಾ ನಿರಾಕರಿಸುವ ಹೆಣ್ಣಿನ ಸ್ವಾತಂತ್ರ್ಯದ ಸುತ್ತ  ಚರ್ಚೆ ನಡೆಸಿದೆ.

ಅಳಂದ ತಾಲೂಕಿನ ನವಲಗದಲ್ಲಿ ವಾಸಿಸುತ್ತಿದ್ದ ಬಿಎಡ್ ವಿದ್ಯಾರ್ಥಿ ವಿಜೇಂದ್ರ ಎಂಬವನು ಕೈಯಲ್ಲಿ ಚೂರಿಯನ್ನು ಹಿಡಿದುಕೊಂಡು  18 ವರ್ಷದ ಪುಷ್ಪಾ ಎಂಬ ಯುವತಿಯ ಮನೆ ಪ್ರವೇಶಿಸಿದ್ದ. ಆ ಸಂದರ್ಭದಲ್ಲಿ ಓರ್ವ ಮಹಿಳೆಯೂ ಅಲ್ಲಿದ್ದರು. ತನ್ನನ್ನು  ಮದುವೆಯಾಗು ಎಂದು ಆತ ಪುಷ್ಪಾಳನ್ನು ಒತ್ತಾಯಿಸಿದ. ಆಕೆ ನಿರಾಕರಿಸಿದಳು. ಆತ ಚೂರಿಯಿಂದ ಪುಷ್ಪಾಳನ್ನು ಇರಿದ. ಆಕೆ  ಸಾವಿಗೀಡಾದಳು.

ತನ್ನ ಮೇಲೆ ಕರುಣೆ ತೋರಬೇಕು ಎಂದು ಅಪರಾಧಿ ಇದೀಗ ಕೋರ್ಟಿನ ಮುಂದೆ ಕೋರಿಕೊಂಡಿದ್ದ. ತಕ್ಷಣದ ಪ್ರಚೋದನೆಯು  ತನ್ನನ್ನು ಆ ರೀತಿ ವರ್ತಿಸುವಂತೆ ಪ್ರೇರೇಪಿಸಿತು. ಆಕೆಯ ನಿರಾಕರಣೆಯಿಂದ ಅಚಾನಕ್ಕಾಗಿ ಆ ಅಪರಾಧ ಸಂಭವಿಸಿಬಿಟ್ಟಿತು ಎಂಬ  ಆತನ ಕೋರಿಕೆಯನ್ನು ಕೋರ್ಟು ವಿವಿಧ ರೂಪದಲ್ಲಿ ವಿಮರ್ಶೆಗೆ ಒಡ್ಡಿತು. ವಿಜೇಂದ್ರನ ಕೋರಿಕೆ ಯಾಕೆ ತಪ್ಪು ಅಂದರೆ, ಅದು  ಸಂತ್ರಸ್ತೆಗೆ ಆಯ್ಕೆಯ ಸ್ವಾತಂತ್ರ್ಯವನ್ನೇ ನಿರಾಕರಿಸುತ್ತದೆ. ತಾನು ಯಾರನ್ನು ಮದುವೆಯಾಗಬೇಕು, ಮದುವೆಯಾಗಬಾರದು ಎಂಬುದು  ವೈಯಕ್ತಿಕ ಸ್ವಾತಂತ್ರ್ಯ. ತಕ್ಷಣದ ಪ್ರಚೋದನೆಯ ಹೆಸರಲ್ಲಿ ಪುಷ್ಪಾಳಿಗೆ ಆ ಸ್ವಾತಂತ್ರ್ಯವನ್ನು ನಿರಾಕರಿಸಲಾಗದು. ಈ ಕೃತ್ಯದಲ್ಲಿ ಇ ನ್ನೊಂದು ಭಾವವೂ ಇದೆ. ಅದೇನೆಂದರೆ, ತಾನು ಗಂಡು ಎಂಬ ಅಹಮಿಕೆ. ಈ ಭಾವಕ್ಕೂ ಆ ಕ್ರೌರ್ಯದಲ್ಲಿ ಪಾಲು ಇದೆ.  ಒಂದುವೇಳೆ, ಪುಷ್ಪಾಳ ಹೆತ್ತವರು ಒಪ್ಪಿಕೊಳ್ಳದಿದ್ದರೂ ಆಕೆಯ ಪತಿ ಯಾರಾಗಬೇಕೆಂಬ ನಿರ್ಧಾರ ಸ್ವಾತಂತ್ರ್ಯವನ್ನು ಆಕೆಯಿಂದ  ನಿರಾಕರಿಸಲಾಗದು. ಆದ್ದರಿಂದ ತಕ್ಷಣದ ಪ್ರಚೋದನೆ ಎಂಬುದು ಇಲ್ಲಿ ಪರಿಗಣನೆಗೆ ಬರುವುದಿಲ್ಲ...’ ಎಂಬ ರೀತಿಯಲ್ಲಿ ಅಭಿಪ್ರಾಯ  ಹಂಚಿಕೊಂಡ ಕೋರ್ಟು, ಅಪರಾಧಿ ವಿಜೇಂದ್ರನಿಗೆ ಜೀವಾವಧಿ ಶಿಕ್ಷೆಯನ್ನು ನೀಡಿದೆ.

ಹೆಣ್ಣು ಮತ್ತು ಗಂಡಿನ ನಡುವೆ ಆಕರ್ಷಣೆ ಹೊಸತಲ್ಲ ಮತ್ತು ತನ್ನ ಮಗ ಅಥವಾ ಮಗಳಿಗೆ ಅತ್ಯುತ್ತಮ ಸಂಗಾತಿ ಸಿಗಲಿ ಎಂದು  ಪ್ರತಿ ಹೆತ್ತವರು ಬಯಸುವುದೂ ಹೊಸತಲ್ಲ. ಹೊಸತು ಏನೆಂದರೆ, ಹರೆಯದ ಆಕರ್ಷಣೆಯೇ ಎಲ್ಲವೂ ಅಲ್ಲ ಮತ್ತು ಈ  ಆಕರ್ಷಣೆಯ ಆಚೆಗೂ ಬದುಕು ಇದೆ ಎಂಬುದನ್ನು ವಿವಿಧ ಆಧುನಿಕ ಮಾಧ್ಯಮಗಳ ಮೂಲಕ ಪ್ರತಿ ಸೆಕೆಂಡೂ ಸಾರುತ್ತಿರುವುದರ  ಹೊರತಾಗಿಯೂ ಪ್ರೇಮದ ಹೆಸರಲ್ಲಿ ಹತ್ಯೆ ಮತ್ತು ಆತ್ಮಹತ್ಯೆಗಳ ಸಂಖ್ಯೆಯಲ್ಲಿ ಇಳಿಕೆಯಾಗುತ್ತಿಲ್ಲ ಎಂಬುದು. 5 ದಶಕಗಳ ಹಿಂದಿಗೂ ಇಂದಿಗೂ ತಂತ್ರಜ್ಞಾನಗಳಿಗೆ ಸಂಬಂಧಿಸಿ ಬಹುದೊಡ್ಡ ಅಂತರವಿದೆ. ಸಿನಿಮಾ, ನಾಟಕ, ಕಾದಂಬರಿ, ಕತೆ, ಟಿ.ವಿ.  ಧಾರಾವಾಹಿ, ರಿಯಾಲಿಟಿ ಶೋಗಳು, ಧಾರ್ಮಿಕ ಬೋಧನಗೆಳೆಲ್ಲ ಶರವೇಗದಲ್ಲಿ ಜನರನ್ನು ತಲುಪುವ ಕಾಲ ಇದು. ಇವತ್ತಿನ ಯುವ  ಸಮೂಹವೂ ಹಿಂದಿನಂತಲ್ಲ. ಕೆರಿಯರ್, ಅದೂ-ಇದೂ ಎಂದು ಚಿಕ್ಕಂದಿನಿಂದಲೇ ಗುರಿ ನಿಗದಿಪಡಿಸಿಕೊಂಡು ಓಡಾಡುತ್ತಿರುತ್ತವೆ.  ವಯಸ್ಸಿಗಿಂತ ಹೆಚ್ಚು ಪ್ರೌಢತೆಯನ್ನು ಆಧುನಿಕ ತಂತ್ರಜ್ಞಾನಗಳು ಯುವ ಸಮೂಹಕ್ಕೆ ತುಂಬಿಸುತ್ತಲೂ ಇವೆ. ಹಾಗಿದ್ದೂ ಪ್ರೇಮದ  ವಿಷಯದಲ್ಲಿ ಯುವ ಸಮೂಹ ಅಪ್ರಬುದ್ಧತೆಯಿಂದ ವರ್ತಿಸಲು ಕಾರಣವೇನು?

ವಿಜೇಂದ್ರ ಬಿಎಡ್ ವಿದ್ಯಾರ್ಥಿ. ಆದ್ದರಿಂದ ಶಿಕ್ಷಣ ಕೊರತೆ ಇದಕ್ಕೆ ಕಾರಣ ಎಂದು ಹೇಳುವಂತಿಲ್ಲ. ಬಹುಶಃ ಪ್ರೇಮದ ಕುರಿತಂತೆ  ಅಥವಾ ಮಕ್ಕಳ ಮನಸ್ಸಿನಲ್ಲಾಗುವ ಪರಿವರ್ತಿನೆಯ ಸುತ್ತ ಹೆತ್ತವರು ಸೂಕ್ಷ್ಮವಾಗಿ ಗಮನಿಸದಿರುವುದಕ್ಕೂ ಇದರಲ್ಲಿ ಪಾತ್ರ  ಇರಬಹುದು ಎಂದು ತೋರುತ್ತದೆ. ಸುಮಾರು 17ರಿಂದ 22ರ ವರೆಗಿನ ಪ್ರಾಯ ಬಹಳ ನಾಜೂಕಿನದ್ದು. ದೈಹಿಕವಾಗಿ ಮಕ್ಕಳು ಇನ್ನೊಂದು ಮಜಲಿಗೆ ಪ್ರವೇಶಿಸುತ್ತಿರುವ ಮತ್ತು ವಿರುದ್ಧ ಲಿಂಗಗಳ ಬಗ್ಗೆ ಆಕರ್ಷಣೆಗೆ ಒಳಗಾಗುತ್ತಿರುವ ವಯಸ್ಸು. ಆ ಸಂದರ್ಭದಲ್ಲಿ  ಹೆತ್ತವರು ಮಕ್ಕಳನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಿರಬೇಕಾದ ಅಗತ್ಯ ಇದೆ. ಅವರಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಗುರುತಿಸಿ,  ಅವರು ಅಮ್ಮನಲ್ಲೋ  ಅಪ್ಪನಲ್ಲೋ  ಎಲ್ಲವನ್ನೂ ಹೇಳಿಕೊಳ್ಳುವಂತಹ ವಾತಾವರಣವನ್ನು ನಿರ್ಮಿಸಬೇಕಾದ ಅಗತ್ಯ ಇದೆ. ಮಕ್ಕಳು  ಹಾಗೆ ಹೆತ್ತವರಲ್ಲಿ ಹೇಳಿಕೊಳ್ಳಬೇಕೆಂದರೆ, ಮೊದಲು ಹೆತ್ತವರು ಸ್ವತಃ ಮಾನಸಿಕವಾಗಿ ಸಜ್ಜುಗೊಳ್ಳಬೇಕು. ಮಗ ಅಥವಾ ಮಗಳು  ಆಕರ್ಷಣೆಗೆ ಒಳಗಾಗಿರುವುದನ್ನು ಹೇಳಿಕೊಂಡಾಗ ಅವರು ಆ ಸಂಗತಿಯನ್ನು ಸಹಜವಾಗಿ ಸ್ವೀಕರಿಸಿ ಪ್ರಬುದ್ಧವಾಗಿ ವರ್ತಿಸುವುದಕ್ಕೆ  ತನ್ನನ್ನು ತಾನು ಸಜ್ಜುಗೊಳಿಸಬೇಕು. ಮಕ್ಕಳು ಆ ಕ್ಷಣದಲ್ಲಿ ತಾವೇ ಸರಿ ಎಂಬ ಭಾವದಲ್ಲಿರುತ್ತಾರೆ. ಹೆತ್ತವರು ತಮ್ಮ ಸರಿಯನ್ನು  ಅರ್ಥ ಮಾಡಿಕೊಳ್ಳುತ್ತಿಲ್ಲ ಎಂಬ ಸಿಟ್ಟಲ್ಲಿರುತ್ತಾರೆ. ಅದು ಆ ಹರೆಯದ ಸಮಸ್ಯೆ. ಅದಕ್ಕೆ ನಾಜೂಕಿನಿಂದ ಸ್ಪಂದಿಸಬೇಕೇ ಹೊರತು  ಕಡ್ಡಿಮುರಿದಂತೆ ಉತ್ತರಿಸುವುದರಿಂದ ಕೆಲವೊಮ್ಮೆ ಅನಾಹುತಕ್ಕೂ ಅದು ಕಾರಣವಾದೀತು.

ಸಾಮಾನ್ಯವಾಗಿ ಪ್ರೇಮದ ಕಾರಣಕ್ಕಾಗಿ ಆತ್ಮಹತ್ಯೆಯೋ ಹತ್ಯೆಯೋ ನಡೆದಾಗ ಅದಕ್ಕೆ ಯುವ ಸಮೂಹದಲ್ಲಿ ವ್ಯಕ್ತವಾಗುವ ಪ್ರತಿಕ್ರಿಯೆ  ಮತ್ತು ಹಿರಿಯರಿಂದ ವ್ಯಕ್ತವಾಗುವ ಪ್ರತಿಕ್ರಿಯೆಗಳಲ್ಲಿ ಯಾವಾಗಲೂ ವ್ಯತ್ಯಾಸ ಇರುತ್ತದೆ. ಯುವಸಮೂಹದ ಪ್ರತಿಕ್ರಿಯೆಯಲ್ಲಿ ಆವೇಶ  ಇದ್ದರೆ ಹಿರಿಯ ತಲೆಮಾರಿನ ಪ್ರತಿಕ್ರಿಯೆಯಲ್ಲಿ ಸಹನೆ ಮತ್ತು ಕಾಳಜಿ ವ್ಯಕ್ತವಾಗುತ್ತದೆ. ಹಿರಿಯರು ಮತ್ತು ಕಿರಿಯರ ನಡುವಿನ  ಪ್ರಾಯದ ವ್ಯತ್ಯಾಸ ಮತ್ತು ಅನುಭವದ ವ್ಯತ್ಯಾಸವೇ ಈ ಪ್ರತಿಕ್ರಿಯೆಗಳ ವ್ಯತ್ಯಾಸಕ್ಕೆ ಕಾರಣ. ಸದ್ಯ ಹಿರಿಯರ ಈ ಅನುಭವದ ಪಾಠವು  ಕಿರಿಯ ತಲೆಮಾರಿಗೆ ಪರಿಣಾಮಕಾರಿಯಾಗಿ ವರ್ಗಾವಣೆಯಾಗುವುದಕ್ಕೆ ರಂಗ ಸಜ್ಜುಗೊಳ್ಳಬೇಕಿದೆ. ಪ್ರೇಮದ ವಿಷಯದಲ್ಲಿ  ಕಿರಿಯರಿಗೆ ತರಬೇತಿ ಕೊಡುವುದಕ್ಕಿಂತಲೂ ಹಿರಿಯರಿಗೆ ತರಬೇತಿ ಕೊಡುವ ಅಗತ್ಯವಿದೆ. ತಮ್ಮ ಮನೆಯ ಮಕ್ಕಳನ್ನು ಹೇಗೆ  ವಿಶ್ವಾಸಕ್ಕೆ ಪಡೆದುಕೊಳ್ಳಬೇಕು, ಅವರು ಎಲ್ಲವನ್ನೂ ಮನೆಯಲ್ಲಿ ಹಂಚಿಕೊಳ್ಳುವಂತಹ ವಾತಾವರಣವನ್ನು ಹೇಗೆ ನಿರ್ಮಿಸಬೇಕು  ಮತ್ತು ಅಂಥ ಸಂದರ್ಭದಲ್ಲಿ ಹೆತ್ತವರಾಗಿ ತಾವು ಹೇಗೆ ವರ್ತಿಸಬೇಕು ಎಂಬ ಬಗ್ಗೆ ಹಿರಿಯರಿಗೆ ತರಬೇತಿ ನೀಡಬೇಕಾದ  ಅಗತ್ಯವಿದೆ. 

ಹಿರಿಯರಲ್ಲಿ ಅನುಭವವಿದೆ. ಆದರೆ ಅದರ ಸಂಪೂರ್ಣ ಲಾಭವು ಕಿರಿಯರಿಗೆ ಲಭ್ಯವಾಗುತ್ತಿಲ್ಲ. ಅನುಭವದ ಪಾಠವನ್ನು  ಕಿರಿಯರಿಗೆ ತಲುಪಿಸುವುದಕ್ಕೆ ಪೂರಕವಾಗಿ ಮನೆಯ ವಾತಾವರಣವನ್ನು ಸಜ್ಜುಗೊಳಿಸುವುದಕ್ಕೆ ಹೆಚ್ಚಿನ ಬಾರಿ ಹಿರಿಯರು  ವಿಫಲವಾಗುತ್ತಲೂ ಇದ್ದಾರೆ. ಈ ದಿಸೆಯಲ್ಲಿ ಗಂಭೀರ ಪ್ರಯತ್ನಗಳಾಗಬೇಕಿದೆ. ಯುವಸಮೂಹ ಅಪಾಯಕಾರಿ ನಿರ್ಧಾರಗಳನ್ನು  ತೆಗೆದುಕೊಳ್ಳದಂತೆ ಮಾಡುವುದು ನಮ್ಮೆಲ್ಲರ ಜವಾಬ್ದಾರಿ. ಪ್ರೇಮವೇ ಬದುಕಲ್ಲ ಎಂಬುದನ್ನು ಯುವಸಮೂಹಕ್ಕೆ ಅರ್ಥ  ಮಾಡಿಸಬೇಕಿದೆ.

No comments:

Post a Comment