Tuesday 17 August 2021

ಪ್ರಧಾನಿಯನ್ನು ನೋಡಿ ನಗುತ್ತಿರುವ 230 ಕೋಟಿ ರೂಪಾಯಿ ಮತ್ತು ಕಪಿಲ್‌ದೇವ್




ಗುಜರಾತ್‌ನ ಮೊಟೇರಾ ಕ್ರಿಕೆಟ್ ಸ್ಟೇಡಿಯಂನಿಂದ ಹಿಡಿದು ಕೊರೋನಾ ವ್ಯಾಕ್ಸಿನೇಶನ್ ಸರ್ಟಿಫಿಕೇಟ್ ವರೆಗೆ ಎಲ್ಲೆಲ್ಲೂ ತನ್ನ ಫೋಟೋ  ಮತ್ತು ಹೆಸರನ್ನು ಛಾಪಿಸಿಕೊಂಡಿರುವ ಪ್ರಧಾನಿ ಮೋದಿಯವರು, ರಾಜೀವ್ ಗಾಂಧಿ ಖೇಲ್ ರತ್ನದ ಹೆಸರನ್ನು ‘ಮೇಜರ್ ಧ್ಯಾನ್‌ಚಂದ್  ಖೇಲ್ ರತ್ನ’ ಎಂದು ಬದಲಾಯಿಸಿರುವುದು ಅಗ್ಗದ ರಾಜಕೀಯವೇ ಹೊರತು ಇದರಲ್ಲಿ ಮುತ್ಸದ್ದಿತನವೂ ಇಲ್ಲ, ಕ್ರೀಡೆಗೆ ಪ್ರೋತ್ಸಾಹವೂ  ಇಲ್ಲ. ತಮಾಷೆ ಏನೆಂದರೆ,

 ಸ್ವತಃ ಮೋದಿಯವರೇ ಈ ಹೆಸರು ಬದಲಾವಣೆಯನ್ನು ಘೋಷಿಸಿದ್ದಾರೆ. ಅದೇವೇಳೆ, ಗುಜರಾತ್‌ನಲ್ಲಿರುವ  ಜಗತ್ತಿನ ಅತಿದೊಡ್ಡ ಕ್ರಿಕೆಟ್ ಸ್ಟೇಡಿಯಂಗೆ ತನ್ನದೇ ಹೆಸರಿಟ್ಟುಕೊಳ್ಳುವಾಗ ಈ ದೇಶಕ್ಕೆ ಮೊಟ್ಟಮೊದಲ ವಿಶ್ವಕಪ್ ಕ್ರಿಕೆಟ್ ಟ್ರೋಫಿಯನ್ನು  ತಂದುಕೊಟ್ಟ ಕಪಿಲ್ ದೇವ್ ಅವರ ನೆನಪಿಗೆ ಬಂದಿಲ್ಲ. ಒಂದು ಬಗೆಯ ಅತ್ಮರತಿ ಮನಸ್ಥಿತಿ ಇದು. ಹಾಕಿ ದಂತಕತೆ ಧ್ಯಾನ್‌ಚಂದ್‌ರನ್ನು  ಗೌರವಿಸಬೇಕೆಂದಿದ್ದರೆ ರಾಜೀವ್ ಗಾಂಧಿಯನ್ನು ಅವಮಾನಿಸಬೇಕಿಲ್ಲ. ರಾಜೀವ್ ಗಾಂಧಿಯೇನೂ ವೀರಪ್ಪನ್ ಅಲ್ಲವಲ್ಲ. ಜನರಿಂದಲೇ  ಆರಿಸಿ ಬಂದು ಪ್ರಧಾನಿಯಾದವರು. ದೇಶವನ್ನು ಐದು ವರ್ಷಗಳ ಕಾಲ ಅವರು ಆಳಿದ್ದಾರೆ. ದೂರ ಸಂಪರ್ಕ ಕ್ರಾಂತಿಯಿಂದ ತೊಡಗಿ  ರಾಷ್ಟ್ರೀಯ ಶಿಕ್ಷಣ ನೀತಿ, ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿವಿ, ಎಂ.ಟಿ.ಎನ್.ಎಲ್. ಮತ್ತು ವಿಎಸ್‌ಎನ್‌ಎಲ್‌ನಂಥ ಕೊಡುಗೆಗಳನ್ನು  ದೇಶಕ್ಕೆ ನೀಡಿದ್ದಾರೆ. ಮಾಲ್ದೀವ್ಸ್ ಮತ್ತು ಶ್ರೀಲಂಕಾಗಳ ಬಂಡಾಯದಲ್ಲಿ ಕ್ಷಿಪ್ರ ಮಧ್ಯಪ್ರವೇಶ ಮಾಡಿ ಅಮೇರಿಕ ಮತ್ತು ಚೀನಾಗಳ ಉಪಸ್ಥಿತಿಯನ್ನು ತಡೆದು ನೆರೆಯನ್ನು ಭಾರತದ ಪಾಲಿಗೆ ಸುರಕ್ಷಿತಗೊಳಿಸಿದ್ದಾರೆ. ಅವರ ಹತ್ಯೆಯಾಗಿರುವುದು ಕೂಡ ಈ ಕಾರಣಕ್ಕಾಗಿಯೇ.  ಒಂದುವೇಳೆ,

ಶ್ರೀಲಂಕಾದ ಎಲ್‌ಟಿಟಿಇ ಸಂಘರ್ಷದಲ್ಲಿ ಭಾರತ ಮಧ್ಯಪ್ರವೇಶ ಮಾಡದೇ ಇರುತ್ತಿದ್ದರೆ, ಅಮೇರಿಕನ್ ಸೇನೆ ಆ ಕಡಲ ದ್ವೀಪಕ್ಕೆ ತನ್ನ  ಸೇನೆಯನ್ನು ಕಳುಹಿಸಿಕೊಡುವುದಕ್ಕೆ ಸರ್ವ ಸನ್ನದ್ಧವಾಗಿತ್ತು ಎಂಬುದು ಆ ಬಳಿಕ ಬಹಿರಂಗವಾಗಿತ್ತು. ಇದು ನಡೆದಿದ್ದರೆ ಭಾರತದ  ಪಕ್ಕದಲ್ಲಿ ಶತ್ರುವಿನ ಉಪಸ್ಥಿತಿಗೆ ಜಾಗ ಬಿಟ್ಟು ಕೊಟ್ಟಂತಾಗುತ್ತಿತ್ತು. ಆ ಸಂದರ್ಭದಲ್ಲಿ ಭಾರತಕ್ಕೆ ರಷ್ಯಾದೊಂದಿಗಿದ್ದ ಸಂಬಂಧದಷ್ಟು ಒಳ್ಳೆಯ  ಸಂಬAಧ ಅಮೇರಿಕದ ಜೊತೆ ಇರಲಿಲ್ಲ ಎಂಬುದನ್ನೂ ಈ ಸಂದರ್ಭದಲ್ಲಿ ಗಮನದಲ್ಲಿಟ್ಟುಕೊಳ್ಳಬೇಕು. ಸ್ಯಾಮ್ ಪಿತ್ರೋಡರನ್ನು  ಬಳಸಿಕೊಂಡು ರಾಜೀವ್ ಗಾಂಧಿ ಈ ದೇಶದಲ್ಲಿ ಮಾಡಿದ ಸಂಪರ್ಕ ಕ್ರಾಂತಿಯ ಫಲವನ್ನೇ ಇವತ್ತು ಭಾರತೀಯರು ಉಣ್ಣುತ್ತಿದ್ದಾರೆ.  ಮಾಹಿತಿ ತಂತ್ರಜ್ಞಾನ ಕ್ಷೇತ್ರಕ್ಕೆ ರಾಜೀವ್ ಗಾಂಧಿ ಕೊಡುಗೆ ಬಲುದೊಡ್ಡದು. ಮಹಾನಗರ್ ಟೆಲಿಫೋನ್ ನಿಗಮ್ ಲಿಮಿಟೆಡ್ ಮತ್ತು  ವಿದೇಶ್ ಸಂಚಾರ್ ನೆಟ್‌ವರ್ಕ್ ಲಿಮಿಟೆಡ್ ಎಂಬೆರಡು ಯೋಜನೆಗಳ ಮೂಲಕ ದೇಶೀಯ ಮತ್ತು ಅಂತಾರಾಷ್ಟ್ರೀಯ ದೂರವಾಣಿ  ಕರೆಗಳಿಗೆ ಅವರು ನೀಡಿದ ಕೊಡುಗೆ ಅಪಾರವಾದುದು. ಕಮರ್ಷಿಯಲ್ ಏರ್‌ಲೈನ್ಸನ್ನು ಈ ದೇಶಕ್ಕೆ ಪರಿಚಯಿಸಿದ್ದು ಮತ್ತು ಆರ್ಥಿಕ  ಕ್ಷೇತ್ರದಲ್ಲಿ ವಿದೇಶಿ ಹೂಡಿಕೆಯನ್ನು ಪ್ರಾರಂಭಿಸಿದ್ದೂ ಅವರೇ. ರಾಜೀವ್ ಗಾಂಧಿ ಅಧಿಕಾರದಲ್ಲಿದ್ದುದು ಕೇವಲ 5 ವರ್ಷ. ಒಂದುವೇಳೆ,

ಧ್ಯಾನ್‌ಚಂದ್ ರನ್ನು ಗೌರವಿಸಬೇಕೆಂಬ ಉದ್ದೇಶ ಪ್ರಧಾನಿ ನರೇಂದ್ರ ಮೋದಿಯವರಿಗೆ ಇದ್ದಿದ್ದೇ  ಆಗಿದ್ದಲ್ಲಿ ಹೊಸ ಕ್ರೀಡಾಂಗಣಗಳಿಗೆ  ಅವರ ಹೆಸರಿಡುವ ಮೂಲಕ ಅದನ್ನು ತೋರ್ಪಡಿಸಬಹುದಿತ್ತು ಅಥವಾ ಹಾಕಿಗೇ ಮೀಸಲಾದ ಪ್ರಶಸ್ತಿಯನ್ನು ಘೋಷಿಸಿ ಅವರ  ಹೆಸರಿಡಬಹುದಿತ್ತು. ಇನ್ನೂ ಹೆಚ್ಚೆಂದರೆ, ಹಾಕಿ ಆಟಗಾರರಿಗೆ ಧನಸಹಾಯ, ಹೊಸ ಕ್ರೀಡಾಂಗಣಗಳ ನಿರ್ಮಾಣ, ಹಾಕಿ ಆಟಗಾರರಿಗೆ  ಮೂಲ ಸೌಕರ್ಯ ಒದಗಿಸುವುದು ಮತ್ತು ಅತ್ಯುತ್ತಮ ಗುಣಮಟ್ಟದ ಕೋಚಿಂಗ್ ವ್ಯವಸ್ಥೆ ಇತ್ಯಾದಿಗಳನ್ನು ಮಾಡಬಹುದಿತ್ತು. ಅದುಬಿಟ್ಟು  ಅಸ್ತಿತ್ವದಲ್ಲಿರುವ ಜನಪ್ರಿಯ ಪ್ರಶಸ್ತಿಯ ಹೆಸರನ್ನು ಬದಲಿಸುವುದೆಂದರೆ, ಅದು ದ್ವೇಷ ರಾಜಕಾರಣದ ಭಾಗವಾಗಿ ಗುರುತಿಸಿಕೊಳ್ಳಬಹುದೇ  ಹೊರತು ಇನ್ನೇನಲ್ಲ. ದುರಂತ ಏನೆಂದರೆ,

2021-22ರ ಬಜೆಟ್‌ನಲ್ಲಿ ಕ್ರೀಡಾ ಕ್ಷೇತ್ರವನ್ನು ಕೇಂದ್ರ ಸರಕಾರ ಕಡೆಗಣಿಸಿದೆ. 2020-21ರ ಬಜೆಟ್‌ನಲ್ಲಿ ಮೀಸಲಿಟ್ಟಿದ್ದ ಮೊತ್ತಕ್ಕಿಂತ ಈ  ಬಾರಿ 230.78 ಕೋಟಿ ರೂಪಾಯಿಯನ್ನು ಕಡಿತಗೊಳಿಸಿದೆ. ಅದೂ ಒಲಿಂಪಿಕ್ಸ್ ನಡೆಯುವ ಈ ವರ್ಷದಲ್ಲೇ. ಒಂದು ಕಡೆ ಒಲಿಂಪಿಕ್ಸ್ ನಲ್ಲಿ ಪದಕ ವಿಜೇತರಿಗೆ ಕರೆ ಮಾಡಿ ಧನ್ಯವಾದ ತಿಳಿಸುವ ಮೋದಿ, ಇನ್ನೊಂದೆಡೆ ಕ್ರೀಡಾಕ್ಷೇತ್ರಕ್ಕೆ ಉತ್ತೇಜನ ನೀಡುವುದರ ಬದಲು  ಹಣವನ್ನು ಕಡಿತಗೊಳಿಸುತ್ತಿದ್ದಾರೆ. ಆದರೆ, ಪದಕ ವಿಜೇತರೊಂದಿಗೆ ನಡೆಯುವ ಮಾತುಕತೆಯನ್ನು ಚಿತ್ರೀಕರಿಸಿಕೊಂಡು ಅಗ್ಗದ ಪ್ರಚಾರಕ್ಕೆ  ಇಳಿದಿದ್ದಾರೆ.

2014ರಲ್ಲಿ ಮೋದಿ ಅಧಿಕಾರಕ್ಕೆ ಬಂದ ಬಳಿಕ ನಿರ್ದಿಷ್ಟ ಹೆಸರು ಬದಲಾವಣೆಯ ಕ್ರಮ ಚಾಲ್ತಿಯಲ್ಲಿದೆ. ವಿಶೇಷವಾಗಿ ಇಸ್ಲಾಮಿಕ್  ಪರಂಪರೆಯ ಹೆಸರುಗಳನ್ನು ದೊಡ್ಡ ಪ್ರಚಾರದೊಂದಿಗೆ ಬದಲಿಸಲಾಗಿದೆ. ಅಲಹಾಬಾದ್‌ನ ಹೆಸರನ್ನು ಪ್ರಯಾಗ್‌ರಾಜ್ ಎಂದು ಬದಲಿಸಲಾಗಿದೆ. ಫೈಝಾಬಾದ್ ಜಿಲ್ಲೆಯು ಅಯೋಧ್ಯ ಜಿಲ್ಲೆಯಾಗಿ ಬದಲಾಗಿದೆ. ಮುಗಲ್‌ಸರಾಯಿ ರೈಲ್ವೆ ನಿಲ್ದಾಣವು ದೀನ್‌ದಯಾಳ್ ಉಪಾಧ್ಯಾಯ್ ನಗರವಾಗಿ ಪರಿವರ್ತಿತವಾಗಿದೆ. ಇದಲ್ಲದೇ, ವಾಜಪೇಯಿ ಹೆಸರನ್ನು ಕ್ರೀಡಾಂಗಣಕ್ಕೆ ಮತ್ತಿತರ ಯೋಜನೆಗಳಿಗೂ  ಇಡಲಾಗಿದೆ. ಒಂದುವೇಳೆ, ರಾಜೀವ್ ಗಾಂಧಿಯವರ ಹೆಸರಿನಲ್ಲಿ ಖೇಲ್‌ರತ್ನ ಪ್ರಶಸ್ತಿ ತಪ್ಪು ಎಂದಾದರೆ, ಮೊಟೇರಾ ಕ್ರೀಡಾಂಗಣಕ್ಕೆ  ಪ್ರಧಾನಿ ನರೇಂದ್ರ ಮೋದಿಯವರ ಹೆಸರೂ ತಪ್ಪೇ ಅಲ್ಲವೇ? ಕೊರೋನಾ ವ್ಯಾಕ್ಸಿನನ್ನು ಸಂಶೋಧಿಸಿದ್ದು ಪ್ರಧಾನಿ ಮೋದಿ ಅಲ್ಲವಲ್ಲ.  ಮತ್ತೇಕೆ ಸರ್ಟಿಫಿಕೇಟ್‌ನಲ್ಲಿ ಅವರ ಹೆಸರು? ಪೆಟ್ರೋಲ್ ಪಂಪ್‌ನ ಬಳಿ ತನ್ನ ಆಳೆತ್ತರದ ಕಟೌಟನ್ನು ತೂಗು ಹಾಕುವಂತೆ ಮೋದಿ  ನೋಡಿಕೊಂಡಿರುವುದೇಕೆ? ಪೆಟ್ರೋಲ್ ಸಂಶೋಧನೆಯಲ್ಲಿ ಅವರ ಪಾತ್ರವೇನು? ಪೆಟ್ರೋಲಿಯಂ ಕ್ಷೇತ್ರಕ್ಕೆ ಅವರ ಕೊಡುಗೆಯೇನು?  ವಾಜಪೇಯಿಯವರಿಗೆ ಸಂಬಂಧಿಸಿಯೂ ಇವೇ ಪ್ರಶ್ನೆಗಳನ್ನು ಎತ್ತಬಹುದು. ಒಂದುರೀತಿಯಲ್ಲಿ,

ಅತಿಕೆಟ್ಟ ಪರಂಪರೆಯೊಂದಕ್ಕೆ ಪ್ರಧಾನಿ ಮೋದಿ ನಾಂದಿ ಹಾಡಿದ್ದಾರೆ. ನಾಳೆ ಇನ್ನೊಂದು ಪಕ್ಷ ಅಧಿಕಾರಕ್ಕೆ ಬಂದು ಈಗಿನ ನಾಮಕರಣಕ್ಕೆ  ಮರು ನಾಮಕರಣ ಮಾಡಲು ಹೊರಟರೆ ಏನಾದೀತು? ಆಗ ಅದನ್ನು ಖಂಡಿಸುವುದಕ್ಕೆ ಬಿಜೆಪಿಗೆ ಏನು ನೈತಿಕತೆಯಿರುತ್ತದೆ? ಈ  ನಡುವೆ ಇಂದಿರಾ ಕ್ಯಾಂಟೀನ್‌ಗೆ ಅನ್ನಪೂರ್ಣೇಶ್ವರಿ ಕ್ಯಾಂಟೀನ್ ಎಂದು ಮರುನಾಮಕರಣ ಮಾಡುವ ಇರಾದೆಯನ್ನು ರಾಜ್ಯ ಬಿಜೆಪಿ  ವ್ಯಕ್ತಪಡಿಸಿದೆ. ಒಂದುಕಡೆ, ಇಂದಿರಾ ಕ್ಯಾಂಟೀನ್‌ನ ಕತ್ತು ಹಿಸುಕುವುದನ್ನು ಮಾಡುತ್ತಲೇ ಇನ್ನೊಂದೆಡೆ ಹೆಸರು ಬದಲಾವಣೆಯ ಪುಕಾರ ನ್ನು ತೇಲಿ ಬಿಡುವುದರ ಅರ್ಥವೇನು? ಸಾಧ್ಯವಿದ್ದರೆ, ಇಂದಿರಾ ಕ್ಯಾಂಟೀನ್‌ಗಿಂತಲೂ ಉತ್ತಮ ಮತ್ತು ಜನಸ್ನೇಹಿಯಾಗಿರುವ ಯೋಜನೆಯನ್ನು ಆರಂಭಿಸಿ ಇದಕ್ಕೆ ತಮ್ಮಿಷ್ಟದ ಹೆಸರಿಡುವುದಕ್ಕೆ ಅರ್ಥವಿದೆ. ಅದುಬಿಟ್ಟು ಇರುವ ಹೆಸರನ್ನೇ ಬದಲಿಸುವುದರಿಂದ ಏನನ್ನೂ ಸಾ ಧಿಸಲು ಸಾಧ್ಯವಿಲ್ಲ. ನಿಜವಾಗಿ,

ದ್ವೇಷ ರಾಜಕಾರಣದ ಆಯುಷ್ಯ ಸಣ್ಣದು. ಯಾಕೆಂದರೆ, ಅದು ಮೆದುಳಿನಿಂದ ಅಲೋಚಿಸುವುದಿಲ್ಲ ಮತ್ತು ಹೃದಯದಿಂದ  ಮಾತಾಡುವುದಿಲ್ಲ. ಇದರಿಂದಾಗಿಯೇ ಬಾರಿಬಾರಿಗೂ ತಪ್ಪುಗಳು ಸಂಭವಿಸುತ್ತಲೇ ಇರುವುದು. ತನ್ನದೇ ಹೆಸರನ್ನು ಗುಜರಾತ್‌ನ  ಮೊಟೇರಾ ಕ್ರೀಡಾಂಗಣಕ್ಕೆ ಇಟ್ಟು ಖೇಲ್‌ರತ್ನ ಪ್ರಶಸ್ತಿಯಿಂದ ರಾಜೀವ್ ಗಾಂಧಿ ಹೆಸರನ್ನು ಮೋದಿ ಕಿತ್ತು ಹಾಕಿರುವುದು ಇದಕ್ಕೊಂದು  ಪುರಾವೆ. ಬಿಜೆಪಿಯ ಭ್ರಷ್ಟ ನಾಯಕರ ವಿರುದ್ಧ ಒಂದೇ ಒಂದು ದಾಳಿಯನ್ನೂ ಮಾಡದ ಕೇಂದ್ರದ ಇ.ಡಿ. ಮತ್ತು ಐಟಿ ಇಲಾಖೆಗಳು  ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳ ನಾಯಕರ ಮೇಲೆ ಪದೇ ಪದೇ ದಾಳಿ ಮಾಡುತ್ತಿರುವುದೂ ಇದಕ್ಕೆ ಪುರಾವೆ. ಮುಸ್ಲಿಮರ  ತ್ರಿವಳಿ ತಲಾಕ್ ಕ್ರಮವನ್ನು ಕ್ರಿಮಿನಲ್ ರೀತಿಯ ವಿಚಾರಣೆಗೆ ಒಳಪಡಿಸುವ ಕಾನೂನು ತರುತ್ತಲೇ, ಹಿಂದೂಗಳ ವಿಚ್ಛೇದನವನ್ನು ಸಿವಿಲ್  ವಿಚಾರಣಾ ಕ್ರಮದಲ್ಲಿರುವಂತೆ ನೋಡಿಕೊಂಡಿರುವುದೂ ಇದಕ್ಕೆ ಪುರಾವೆ. ವಿದೇಶಕ್ಕೆ ಗೋಮಾಂಸ ರಫ್ತು ಮಾಡುತ್ತಲೇ ದೇಶದಲ್ಲಿ  ಗೋಹತ್ಯಾ ನಿಷೇಧದ ಬಗ್ಗೆ ಮಾತಾಡುತ್ತಿರುವುದೂ ಇದಕ್ಕೆ ಪುರಾವೆ. ತನ್ನದೇ ಆಡಳಿತ ಇರುವ ಈಶಾನ್ಯ ಮತ್ತು ಗೋವಾ ರಾಜ್ಯಗಳಲ್ಲಿ  ಗೋವಧೆ ಮತ್ತು ಗೋಮಾಂಸ ಮಾರಾಟಕ್ಕೆ ಅನುಮತಿ ನೀಡುತ್ತಲೇ ಕರ್ನಾಟಕ, ಉತ್ತರ ಪ್ರದೇಶದಂಥ ರಾಜ್ಯಗಳಲ್ಲಿ ಗೋಮಾಂಸ  ನಿಷೇಧದ ಕಠಿಣ ಕಾನೂನನ್ನು ಜಾರಿಗೆ ತಂದಿರುವುದೂ ಇದಕ್ಕೊಂದು ಪುರಾವೆ.

ದ್ವೇಷವೇ ರಾಜಕೀಯವಾದಾಗ ತಪ್ಪುಗಳೇ ಕಾನೂನಾಗಿ ಜಾರಿಯಾಗುತ್ತದೆ. ಗುಜರಾತ್‌ನ ಮೊಟೇರಾಕ್ಕೆ ಹೆಸರಿಡುವಾಗ ಮೋದಿಯವರಿಗೆ  198ರ ಹೀರೋ ಕಪಿಲ್ ದೇವ್ ಕಾಣಿಸಲಿಲ್ಲ. ಆದರೆ, ಖೇಲ್ ರತ್ನಕ್ಕೆ ಧ್ಯಾನ್‌ಚಂದ್ ಕಾಣಿಸಿದರು. ಮೋದಿಯ ಸಣ್ಣತನಕ್ಕೆ ಈ ದ್ವಂದ್ವವೇ  ಸಾಕ್ಷಿ. 

No comments:

Post a Comment