Monday 23 August 2021

ಜೊಲ್ಲೆಗೆ ವಕ್ಫ್, ಅಫ್ಸರ್ ಗೆ ಥಳಿತ: ಅನ್ಯಾಯವೇ ನ್ಯಾಯವೆನ್ನಿಸುವುದು ಏಕೆ?



 ಸನ್ಮಾರ್ಗ ಸಂಪಾದಕೀಯ 
ಕಳೆದವಾರ ಗಮನಿಸಲೇಬೇಕಾದ ಮೂರು ಘಟನೆಗಳು ನಡೆದುವು.


1. ಮುಂದಿನ ಪಂಚಾಯತ್ ಚುನಾವಣೆಯಲ್ಲಿ ಶೇ. 27ರಷ್ಟು ಸ್ಥಾನಗಳನ್ನು ಇತರ ಹಿಂದುಳಿದ ವಿಭಾಗಗಳಿಗೆ (OBC) ಮೀಸ ಲಿಡುವುದಾಗಿ ಒಡಿಸ್ಸಾದಲ್ಲಿ ಆಡಳಿತ ನಡೆಸುತ್ತಿರುವ ಬಿಜು ಜನತಾದಳ ಪಕ್ಷವು ಘೋಷಿಸಿದೆ. ಭಾರತದ ರಾಜಕೀಯ ಪಕ್ಷಗಳಲ್ಲೇ  ಇಂಥ  ಘೋಷಣೆ ಇದೇ ಮೊದಲು.

2. ದೆಹಲಿಯಲ್ಲಿ 9 ವರ್ಷದ ದಲಿತ ಹೆಣ್ಣು ಮಗಳ ಅತ್ಯಾಚಾರ ಮತ್ತು ಕ್ರೂರ ಹತ್ಯೆಯ ವಿರುದ್ಧ ರಾಜಕೀಯ ಪಕ್ಷಗಳೆಲ್ಲ ಧ್ವನಿಯೆತ್ತಿವೆ.  ಸಂತ್ರಸ್ತ ಕುಟುಂಬವನ್ನು ಭೇಟಿಯಾದ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ಆ ಕುರಿತಾದ ವೀಡಿಯೋವನ್ನು ಟ್ವಿಟರ್‍ ನಲ್ಲಿ  ಅ ಪ್‍ಲೋಡ್ ಮಾಡಿದರು. ಮಾತ್ರವಲ್ಲ, ಕಾಂಗ್ರೆಸ್‍ನ ರಾಷ್ಟ್ರೀಯ ದಲಿತ್ ಮುಖಂಡ ಉದಿತ್ ರಾಜ್ ಅವರು ಪತ್ರಿಕಾಗೋಷ್ಠಿ ನಡೆಸಿ, ಆ  ಘಟನೆಯ ವಿರುದ್ಧ ತೀವ್ರ ಆಕ್ರೋಶವನ್ನು ವ್ಯಕ್ತಪಡಿಸಿದರು. ಬಿಜೆಪಿ ಮತ್ತು ಸಂಘಪರಿವಾರದ ಯಾವ ನಾಯಕರೂ ಸಂತ್ರಸ್ತ ಕುಟುಂಬ  ವಾಸವಿರುವ ನಂಗಲ್ ಗ್ರಾಮಕ್ಕೆ ಭೇಟಿ ನೀಡಿಲ್ಲ. ದೆಹಲಿ ಕಂಟೈನ್ಮೆಂಟ್ ವಲಯದಲ್ಲೇ  ಈ ಪ್ರದೇಶವಿದ್ದರೂ ಆ ಕುಟುಂಬವನ್ನು  ಭೇಟಿಯಾಗಿ ಸಾಂತ್ವನ ವ್ಯಕ್ತಪಡಿಸಿಲ್ಲ. ಒಂದುವೇಳೆ, ಗೋವೊಂದು ಹತ್ಯೆಗೀಡಾಗಿದ್ದರೆ ಇವರ ಸಾವಿರಾರು ಮಂದಿ ಅಲ್ಲಿ ಸೇರುತ್ತಿದ್ದರು.  ಬಿಜೆಪಿ ಮತ್ತು ಪರಿವಾರವು ದಲಿತರಿಗೆ ಗೋವಿನಷ್ಟೂ ಬೆಲೆಯನ್ನು ನೀಡುತ್ತಿಲ್ಲ ಎಂದು ಸಿಟ್ಟಾದರು.

3. ಅಫ್ಸರ್ ಅಹ್ಮದ್ ಎಂಬ ರಿಕ್ಷಾ ಚಾಲಕನನ್ನು ಉತ್ತರ ಪ್ರದೇಶದ ಕಾನ್ಪುರದಲ್ಲಿ ಸಂಘಪರಿವಾರಕ್ಕೆ ಸೇರಿದ ಮಂದಿ ಥಳಿಸಿದರು.  ಥಳಿಸುತ್ತಾ ರಸ್ತೆಯಲ್ಲಿ ಮೆರವಣಿಗೆ ನಡೆಸಿದರು. ಜೈಶ್ರೀರಾಮ್ ಎಂದು ಆತನಿಂದ ಹೇಳಿಸಿದರು. ಈ ಎಲ್ಲ ಕ್ರೌರ್ಯವೂ ಅಫ್ಸರ್ ಅಹ್ಮದ್‍ರ  7 ವರ್ಷದ ಪುಟ್ಟ ಮಗಳ ಮುಂದೆಯೇ ನಡೆಯಿತು. ಮಗು ಅಪ್ಪನನ್ನು ಅಪ್ಪಿ ಹಿಡಿದು ಅಳುತ್ತಿತ್ತು ಮತ್ತು ಥಳಿಸಬೇಡಿ ಎಂದು  ಹ¯್ಲÉಕೋರರೊಂದಿಗೆ ವಿನಂತಿಸುತ್ತಿತ್ತು. ಆ ಬಳಿಕ ಪೊಲೀಸರು ಅಜಯ್, ರಾಹುಲ್ ಕುಮಾರ್ ಮತ್ತು ಅಮನ್ ಗುಪ್ತಾ ಎಂಬವರನ್ನು  ಬಂಧಿಸಿದರು ಮತ್ತು 24 ಗಂಟೆಯೊಳಗಡೆ ಜಾಮೀನಿನ ಮೇಲೆ ಬಿಡುಗಡೆಗೊಳಿಸಿದರು. ಆರೋಪಿಗಳನ್ನು ಬಿಡುಗಡೆಗೊಳಿಸುವಂತೆ  ಪೊಲೀಸು ಠಾಣೆಯ ಮುಂದೆ ಸಂಘಪರಿವಾರದ ಮಂದಿ ಪ್ರತಿಭಟನೆಯನ್ನೂ ನಡೆಸಿದ್ದರು.

ಈ ಮೂರೂ ಘಟನೆಗಳಲ್ಲಿ ಎದ್ದು ಕಾಣುವ ಕೆಲವು ಅಂಶಗಳಿವೆ. ಪಾರ್ಲಿಮೆಂಟ್‍ನಲ್ಲಾಗಲಿ, ರಾಜ್ಯ ವಿಧಾನಸಭೆಗಳಲ್ಲಾಗಲಿ ಮುಸ್ಲಿಮರ  ಪ್ರಾತಿನಿಧ್ಯ ಚುನಾವಣೆಯಿಂದ ಚುನಾವಣೆಗೆ ಇಳಿಮುಖವಾಗುತ್ತಾ ಬರುತ್ತಿದೆ. 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 6 ಮಂದಿ  ಮುಸ್ಲಿಮ್ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದಿದ್ದರೂ ಒಬ್ಬರೂ ಗೆಲ್ಲಲಿಲ್ಲ. ಈಗಿರುವ 27 ಮುಸ್ಲಿಮ್ ಸಂಸದರಲ್ಲಿ 5 ಮಂದಿ ತೃಣಮೂಲ  ಕಾಂಗ್ರೆಸ್‍ನಿಂದ ಆಯ್ಕೆಯಾಗಿದ್ದರೆ, 4 ಮಂದಿ ಕಾಂಗ್ರೆಸ್‍ನಿಂದ ಮತ್ತು ತಲಾ ಮೂರು ಮಂದಿ ಸಮಾಜವಾದಿ ಪಾರ್ಟಿ, ಬಹುಜನ  ಸಮಾಜವಾದಿ ಪಾರ್ಟಿ, ಎನ್‍ಸಿಪಿ ಮತ್ತು ಮುಸ್ಲಿಮ್ ಲೀಗ್‍ನಿಂದ ಆಯ್ಕೆಯಾಗಿದ್ದಾರೆ. 2014ರ ಲೋಕಸಭೆಯಲ್ಲಿ 23 ಮುಸ್ಲಿಮ್  ಸಂಸದರಷ್ಟೇ ಇದ್ದರು ಎಂಬುದನ್ನು ಪರಿಗಣಿಸಿದರೆ ಈಗಿನ 27 ಸಂಖ್ಯೆ ಖಂಡಿತ ಹೆಚ್ಚೇ. ಆದರೂ ಇವರಲ್ಲಿ ಒಬ್ಬರೂ ಆಡಳಿತಾರೂಢ  ಬಿಜೆಪಿ ಪಕ್ಷದವರಿಲ್ಲ ಎಂಬುದೂ ಗಮನಾರ್ಹ ಸಂಗತಿ. ಹಾಗೆಯೇ, ತನ್ನ 303 ಸಂಸದರ ಪೈಕಿ ಒಬ್ಬನೇ ಒಬ್ಬ ಮುಸ್ಲಿಮ್ ಸಂಸದರ  ಇಲ್ಲ ಎಂಬ ಬಗ್ಗೆ ಬಿಜೆಪಿಗೆ ಯಾವ ಕಳವಳದ ಭಾವವೂ ಇಲ್ಲ ಎಂಬುದು ಬಹು ಆತಂಕದ ಸಂಗತಿ. ಇದೇವೇಳೆ,

ವಿಧಾನಸಭೆಗಳಲ್ಲಂತೂ ಮುಸ್ಲಿಮ್ ಶಾಸಕರ ಇಳಿಮುಖವನ್ನು ಪದೇಪದೇ ದಾಖಲಿಸುತ್ತಲೇ ಬರುತ್ತಿದೆ. 2018ರಲ್ಲಿ ಕರ್ನಾಟಕ ವಿಧಾನ  ಸಭೆಗೆ ನಡೆದ ಚುನಾವಣೆಯಲ್ಲಿ ಕೇವಲ 7 ಮುಸ್ಲಿಮ್ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಎಲ್ಲರೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು.  ಕಳೆದ 10 ವರ್ಷಗಳಲ್ಲೇ  ಅತ್ಯಂತ ಕಡಿಮೆ ಸಂಖ್ಯೆ ಇದು. 90 ಲಕ್ಷದಷ್ಟು ಮುಸ್ಲಿಮರು ರಾಜ್ಯದಲ್ಲಿದ್ದರೂ ಒಬ್ಬನೇ ಒಬ್ಬ ಮುಸ್ಲಿಮ್  ಅಭ್ಯರ್ಥಿಯನ್ನು ಬಿಜೆಪಿ ಸ್ಪರ್ಧೆಗಿಳಿಸಲಿಲ್ಲ. ಕಾಂಗ್ರೆಸ್ 17 ಮಂದಿ ಮುಸ್ಲಿಮ್ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿದ್ದರೆ ದೇವೇಗೌಡರ ಜನತಾ  ದಳವು 8 ಮಂದಿಗೆ ಟಿಕೆಟ್ ನೀಡಿತ್ತು. 2013ರಲ್ಲಿ 11 ಮುಸ್ಲಿಮ್ ಶಾಸಕರು ರಾಜ್ಯ ವಿಧಾನಸಭೆಯಲ್ಲಿದ್ದರು. ಈಗಿನ ಮುಖ್ಯಮಂತ್ರಿ  ಬಸವರಾಜ್ ಬೊಮ್ಮಾಯಿ ಅವರ ಸಚಿವ ಸಂಪುಟದಲ್ಲಿ ಒಬ್ಬನೇ ಒಬ್ಬ ಮುಸ್ಲಿಮ್ ವ್ಯಕ್ತಿಯಿಲ್ಲ. ಮುಸ್ಲಿಮರಿಗೇ ಸಂಬಂಧಿಸಿದ ಹಜ್ಜ್ ಮತ್ತು ವಕ್ಫ್  ಖಾತೆಯನ್ನು ಶಶಿಕಲಾ ಜೊಲ್ಲೆ  ನಿರ್ವಹಿಸುತ್ತಿದ್ದಾರೆ. ಆದರೂ,

ಕುಸಿಯುತ್ತಿರುವ ಮುಸ್ಲಿಮ್ ಪ್ರಾತಿನಿಧ್ಯದ ಬಗ್ಗೆ ಆತಂಕವನ್ನಾಗಲಿ ಅಥವಾ ಪ್ರಾತಿನಿಧ್ಯವನ್ನು ಹೆಚ್ಚುಗೊಳಿಸುವುದಕ್ಕಾಗಿ ಯೋಜನೆಗಳನ್ನು  ಘೋಷಿಸುವುದನ್ನಾಗಲಿ ಯಾವ ಪಕ್ಷವೂ ಮಾಡುತ್ತಿಲ್ಲ. ಇತರ ಹಿಂದುಳಿತ ವರ್ಗಗಳಿಗೆ ಬಿಜು ಜನತಾ ದಳ ಘೋಷಿಸಿದ  ಮೀಸಲಾತಿಯಂತೆ, ಮುಸ್ಲಿಮ್ ಮತ್ತು ಕ್ರೈಸ್ತ ವಿಭಾಗಗಳಿಗೆ ಯಾಕೆ ರಾಜಕೀಯ ಪಕ್ಷಗಳು ಮೀಸಲಾತಿಯನ್ನು ಘೋಷಿಸಬಾರದು? ರಾಜ್ಯ ವಿಧಾ ನಸಭೆಯಲ್ಲಾಗಲಿ ಲೋಕಸಭೆಯಲ್ಲಾಗಲಿ ಮುಸ್ಲಿಮ್ ಜನಪ್ರತಿನಿಧಿಯನ್ನು ಹೊಂದಿರದ ಬಿಜೆಪಿ ಯಾಕೆ ಈ ನಿಟ್ಟಿನಲ್ಲಿ ಮೊದಲ ಹೆಜ್ಜೆ  ಇಡಬಾರದು? ಹಾಗಂತ,

ಇದು ಕೇವಲ ಮುಸ್ಲಿಮ್ ಪ್ರಾತಿನಿಧ್ಯಕ್ಕೆ ಮಾತ್ರ ಕೇಳಬೇಕಾದ ಪ್ರಶ್ನೆಯಲ್ಲ, ಕಾನ್ಪುರದ ಅಫ್ಸರ್ ಅಹ್ಮದ್‍ಗೆ ಸಂಬಂಧಿಸಿಯೂ ಇವೇ ಪ್ರ ಶ್ನೆಗಳನ್ನು ಕೇಳಬೇಕಾಗುತ್ತದೆ. ದೆಹಲಿಯ ದಲಿತ ಹೆಣ್ಣು ಮಗಳ ಅತ್ಯಾಚಾರ-ಹತ್ಯೆಯನ್ನು ಗಟ್ಟಿ ಧ್ವನಿಯಲ್ಲಿ ಕಾಂಗ್ರೆಸ್‍ನ ದಲಿತ  ಮುಖಂಡರು ಪ್ರಶ್ನಿಸುತ್ತಾರೆ. ಬಿಜೆಪಿಯನ್ನು ತರಾಟೆಗೆ ಎತ್ತಿಕೊಳ್ಳುತ್ತಾರೆ. ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿಯವರು ಸಂತ್ರಸ್ತ  ಕುಟುಂಬವನ್ನು ಭೇಟಿಯಾಗುತ್ತಾರೆ. ಉತ್ತರ ಪ್ರದೇಶದ ಹಾಥರಸ್ ಘಟನೆಯಲ್ಲೂ ಇಂಥದ್ದೇ  ಬೆಳವಣಿಗೆ ನಡೆದಿತ್ತು. ಕಾಂಗ್ರೆಸ್ ಅತ್ಯಂತ  ಮುಂಚೂಣಿಯಲ್ಲಿ ನಿಂತು ಆ ಕ್ರೌರ್ಯವನ್ನು ಪ್ರಶ್ನಿಸಿತು. ರಾಹುಲ್ ಮತ್ತು ಪ್ರಿಯಾಂಕಾ ಗಾಂಧಿಯವರು ಸರ್ವ ತಡೆಯನ್ನೂ ಬೇಧಿಸಿ  ಹಾಥರಸ್‍ಗೆ ಭೇಟಿ ಕೊಟ್ಟರು. ಇದು ಆಗಬೇಕಾದದ್ದೇ. ಆದರೆ ಕಾನ್ಪುರದ ಅಫ್ಸರ್ ಅಹ್ಮದ್ ಸಹಿತ ಮುಸ್ಲಿಮರ ಮೇಲೆ ಪದೇ ಪದೇ ಈ  ದೇಶದ ವಿವಿಧ ಭಾಗಗಳಲ್ಲಿ ಹಲ್ಲೆ, ಥಳಿತ, ಅವಮಾನಗಳಾಗುತ್ತಿದ್ದರೂ ಬಿಜೆಪಿ ಸಹಿತ ರಾಜಕೀಯ ಪಕ್ಷಗಳು ತೀರಾ ನಿರ್ಲಕ್ಷ್ಯ  ಭಾವದಲ್ಲಿ  ಪ್ರತಿಕ್ರಿಯೆ ವ್ಯಕ್ತಪಡಿಸುತ್ತಿರುವಂತೆ ಕಾಣಿಸುತ್ತಿದೆ. ಎಲ್ಲ ಅವಮಾನಗಳನ್ನೂ ಸಹಿಸಿಕೊಂಡು ಶರಣಾಗತ ಭಾವದಲ್ಲಿ ಬದುಕಬೇಕಾದ  ಸಮುದಾಯ ಎಂಬ ರೀತಿಯಲ್ಲಿ ಅವು ವರ್ತಿಸುತ್ತಿವೆ. ದೆಹಲಿಯ ಘಟನೆಗೆ ಸಂಬಂಧಿಸಿ ದಲಿತ ಮುಖಂಡ ಉದಿತ್ ರಾಜ್ ವ್ಯಕ್ತ ಪಡಿಸಿದಷ್ಟು ಗಟ್ಟಿ ಧ್ವನಿಯಲ್ಲಿ ಮತ್ತು ಸ್ಪಷ್ಟ ಮಾತಿನಲ್ಲಿ ಅಫ್ಸರ್ ಅಹ್ಮದ್ ಘಟನೆಗೆ ಪ್ರತಿಕ್ರಿಯೆ ವ್ಯಕ್ತಪಡಿಸಲು ಯಾವೊಬ್ಬ ಮುಸ್ಲಿಮ್  ಸಂಸದರೂ ಮುಂದೆ ಬಂದಿಲ್ಲವೇಕೆ? ಬಿಜೆಪಿಯೇಕೆ ಮೌನವಾಗಿದೆ? ಮೂವರು ಆರೋಪಿಗಳು 24 ಗಂಟೆಯೊಳಗೆ ಸ್ಟೇಷನ್ ಜಾಮೀನಿನ ಮೂಲಕ ಬಿಡುಗಡೆಗೊಂಡುದುದನ್ನು ಯಾಕೆ ಅದು ಪ್ರಶ್ನಿಸಿಲ್ಲ? ಮುಸ್ಲಿಮರ ಹಿತ ಕಾಯುವ ಮತ್ತು ಓಲೈಕೆ ಮಾಡದ ನೈಜ ಪಕ್ಷ  ತಮ್ಮದು ಎಂದು ಹೇಳಿಕೊಳ್ಳುವ ಬಿಜೆಪಿಯು, ಹಿತ ಕಾಯಬೇಕಾದ ಸಂದರ್ಭದಲ್ಲಿ ಅಹಿತ ಬಯಸುವವರ ಜೊತೆಗೆ  ನಿಂತುಕೊಂಡಿರುವುದೇಕೆ?

ದೇಶದಲ್ಲಿ ಸದ್ಯ ಎಂಥ ವಾತಾವರಣವನ್ನು ಸೃಷ್ಟಿ ಮಾಡಲಾಗಿದೆಯೆಂದರೆ, ಮುಸ್ಲಿಮರ ಮೇಲೆ ಬಹಿರಂಗವಾಗಿ ಅನ್ಯಾಯ  ಮಾಡಲಾಗುತ್ತಿದ್ದರೂ ಅದನ್ನು ಪ್ರಶ್ನಿಸುವ ಹಾಗಿಲ್ಲ. ಪ್ರಶ್ನಿಸಿದರೆ ಅದು ಮುಸ್ಲಿಮ್ ಓಲೈಕೆಯಾಗುತ್ತದೆ. ಯಾವ ರಾಜಕೀಯ ಪಕ್ಷ  ಅಂಥದ್ದೊಂದು  ಪ್ರಯತ್ನ ಮಾಡುತ್ತದೋ ಅದನ್ನು ಮುಸ್ಲಿಮ್ ಪರ ಮತ್ತು ಹಿಂದೂ ವಿರೋಧಿ ಎಂದು ಕರೆಯಲಾಗುತ್ತದೆ. ಇಂಥ  ಮುದ್ರೆಯೊತ್ತುವ ಅಭಿಯಾನವನ್ನು ಆರಂಭಿಸಿರುವುದು ಬಿಜೆಪಿಯೇ. ಅದರದೇ ಬೆಂಬಲಿಗರು ಮುಸ್ಲಿಮರನ್ನು ಥಳಿಸುವ ಮತ್ತು  ಹಿಂಸಿಸುವ ಕೃತ್ಯದ ಆರೋಪಿಗಳಾಗಿರುತ್ತಾರೆ. ದನದ ಹೆಸರಲ್ಲಿ, ಮತಾಂತರ, ಚುಡಾವಣೆ ಮತ್ತಿನ್ನೇನೋ ಸಿದ್ಧ ಆರೋಪಗಳನ್ನು ಹೊರಿಸಿ  ಮುಸ್ಲಿಮರ ಮೇಲೆ ಅನ್ಯಾಯವೆಸಗುತ್ತಾರೆ. ಯಾರಾದರೂ ಈ ಅನ್ಯಾಯವನ್ನು ಪ್ರಶ್ನಿಸಿದರೆ ತಕ್ಷಣ ಅವರಿಗೆ ದೇಶವಿರೋಧಿ, ಮುಸ್ಲಿಮ್  ಓಲೈಕೆಯ ಪಟ್ಟ ಕಟ್ಟುತ್ತಾರೆ. ಇದು ಅತ್ಯಂತ ಆಘಾತಕಾರಿ ಬೆಳವಣಿಗೆ.

ಒಂದು ಸಮುದಾಯವನ್ನು ಅನ್ಯಾಯದ ಬೇಗುದಿಗೆ ತಳ್ಳಿ ಯಾವುದೇ ದೇಶ ಅಭಿವೃದ್ಧಿಯಾಗಲು ಸಾಧ್ಯವಿಲ್ಲ. ದೇಶದ ಅಭಿವೃದ್ಧಿಯಲ್ಲಿ  ಸರ್ವ ಸಮುದಾಯಗಳ ಪಾಲು ಅತೀ ಅಗತ್ಯ. ಶಾಸಕಾಂಗದಿಂದ ಹಿಡಿದು ಎಲ್ಲ ಕ್ಷೇತ್ರಗಳಲ್ಲೂ ಎಲ್ಲ ಸಮುದಾಯಗಳೂ ಸಮಾನ  ಪ್ರಾತಿನಿಧ್ಯವನ್ನು ಹೊಂದುವುದು ಮತ್ತು ಸಮಾನ ನ್ಯಾಯ ಎಲ್ಲ ಸಮುದಾಯಗಳಿಗೂ ದಕ್ಕುವುದು ಬಹುಮುಖ್ಯ. ದೇಶದ ಅಭಿವೃದ್ಧಿಗೆ  ಯಾವುದೇ ಸಮುದಾಯ ಕೊಡುಗೆಯನ್ನು ನೀಡಬೇಕಾದರೆ ನ್ಯಾಯ ವಿತರಣೆಯ ದೃಷ್ಟಿಯಿಂದ ಆ ಸಮುದಾಯ ತೃಪ್ತಿಯಿಂದಿರಬೇಕು.  ಸಂತ್ರಸ್ತ ಭಾವವು ದೇಶಕ್ಕೇ ಹೊರೆ ಮತ್ತು ಅಪಾಯಕಾರಿ.

No comments:

Post a Comment