Monday, 24 March 2025

ಕಾನೂನೊಂದೇ ವೃದ್ಧ ಹೆತ್ತವರಿಗೆ ಸುರಕ್ಪತೆಯನ್ನು ಒದಗಿಸಬಲ್ಲುದೇ?




ಮಕ್ಕಳಿಂದ ನಿರ್ಲಕ್ಷ್ಯಕ್ಕೆ ಒಳಗಾಗುವ ವೃದ್ಧ ಹೆತ್ತವರಿಗೆ ಆಸರೆಯಾಗಲು ರಾಜ್ಯ ಸರಕಾರ ನಿರ್ಧರಿಸಿದೆ. ವಯಸ್ಸಾದ ತಂದೆ- ತಾಯಿಯಿಂದ ಆಸ್ತಿಯನ್ನು ತಮ್ಮ ಹೆಸರಿಗೆ ಬರೆಸಿಕೊಂಡ ಬಳಿಕ ಅವರನ್ನು ನಿರ್ಲಕ್ಷಿಸುವ ಮಕ್ಕಳಿಗೆ ಪಾಠವಾಗುವ  ಸಂದೇಶವನ್ನು ಸಚಿವ ಕೃಷ್ಣ ಭೈರೇಗೌಡ ನೀಡಿದ್ದಾರೆ. ಹೀಗೆ ಮಾಡುವ ಮಕ್ಕಳ ಹೆಸರಲ್ಲಿರುವ ವಿಲ್ ಅಥವಾ ದಾನಪತ್ರವ ನ್ನು ರದ್ದು ಮಾಡುವುದಕ್ಕೆ 2007ರಲ್ಲಿ ಕೇಂದ್ರ ಸರಕಾರ ಜಾರಿಗೆ ತಂದಿರುವ ‘ಪೋಷಕರ ಕಲ್ಯಾಣ ಕಾಯ್ದೆ’ಯಲ್ಲಿ ಅವಕಾ ಶವಿದ್ದು, ಅದನ್ನು ಕಠಿಣವಾಗಿ ಜಾರಿ ಮಾಡಲಾಗುವುದು ಎಂದವರು ಹೇಳಿದ್ದಾರೆ. ಮುಖ್ಯವಾಗಿ ಬೆಳಗಾವಿ ಇನ್‌ಸ್ಟಿಟ್ಯೂಟ್  ಆಫ್ ಮೆಡಿಕಲ್ ಸೈನ್ಸ್ ಒಂದರಲ್ಲಿಯೇ ಹೀಗೆ ಮಕ್ಕಳಿಂದ ನಿರ್ಲಕ್ಷಿಸಲ್ಪಟ್ಟ ಹೆತ್ತವರ ಸಂಖ್ಯೆ 150ಕ್ಕಿಂತಲೂ ಹೆಚ್ಚಿದೆ ಎಂದು  ವರದಿಯಿದೆ. ರಾಜ್ಯದ ಇನ್ನಿತರ ಆಸ್ಪತ್ರೆಗಳಲ್ಲಿ ಲೆಕ್ಕ ಹಾಕಿದರೆ ಈ ಸಂಖ್ಯೆ ಬಹಳ ದೊಡ್ಡದಿರಬಹುದು. ನಿಜವಾಗಿ,

ಪೋಷಕರ ಕಲ್ಯಾಣ ಕಾಯ್ದೆಯನ್ನು ಅತ್ಯಂತ ಬಿಗಿಯಾಗಿ ಜಾರಿಗೆ ತಂದ ಕೊಪ್ಪಳ ಉಪವಿಭಾಗಾಧಿ ಕಾರಿ ಸಿ.ಡಿ. ಗೀತಾ  ಅವರು 2019ರಲ್ಲಿ ಚರ್ಚೆಗೆ ಒಳಗಾಗಿದ್ದರು. ಕೊಪ್ಪಳದ ಗಂಗಾವತಿ ನಗರದ ಸತ್ಯನಾರಾಯಣ ಪೇಟೆಯ 68 ವರ್ಷದ  ಮನೋಹರ ದೇಸಾಯಿಯವರು ತಮ್ಮ ಹೆಸರಿನಲ್ಲಿದ್ದ 3 ಎಕರೆ ಭೂಮಿಯನ್ನು ಮಕ್ಕಳಾದ ರಾಘವೇಂದ್ರ, ಯೋಗೇಶ,  ವಿನಯ ದೇಸಾಯಿ ಅವರ ಹೆಸರಿಗೆ ವರ್ಗಾಯಿಸಿದ್ದರು. ಆದರೆ, ಆಸ್ತಿ ವರ್ಗಾವಣೆ ಆದ ಬಳಿಕ ಮಕ್ಕಳು ತಮ್ಮನ್ನು  ಸರಿಯಾಗಿ ನೋಡಿಕೊಳ್ಳುತ್ತಿಲ್ಲ, ವೈದ್ಯಕೀಯ ಖರ್ಚು-ವೆಚ್ಚಗಳಿಗೆ ಹಣ ನೀಡುತ್ತಿಲ್ಲ, ತಾನು ಹೃದಯ ಸಂಬAಧಿ  ಕಾಯಿಲೆಯಿಂದ ಬಳಲುತ್ತಿದ್ದು, ಶಸ್ತçಚಿಕಿತ್ಸೆಗೆ ಹಣ ಬೇಕಾಗಿದೆ, ಆದರೆ ಮಕ್ಕಳು ಅದಕ್ಕೆ ಬೇಕಾದ ವ್ಯವಸ್ಥೆ ಮಾಡುತ್ತಿಲ್ಲ,  ಆದ್ದರಿಂದ ಮಕ್ಕಳ ಹೆಸರಿಗೆ ವರ್ಗಾಯಿಸಿರುವ ಭೂಮಿಯನ್ನು ಪುನಃ ನನಗೇ ನೀಡಬೇಕು ಎಂದವರು ಅರ್ಜಿ ಸಲ್ಲಿಸಿದ್ದರು.  ಇದನ್ನು ಆಲಿಸಿದ ಉಪ ವಿಭಾಗಾಧಿಕಾರಿ ಗೀತಾ ನೇತೃತ್ವದ ನ್ಯಾಯಮಂಡಳಿಯು ಪೋಷಕರ ಕಲ್ಯಾಣ ಕಾಯ್ದೆಯನ್ನು  ಬಳಸಿ ಆಸ್ತಿ ದಾನಪತ್ರವನ್ನು ರದ್ದು ಮಾಡಿ ಮನೋಹರ ದೇಸಾಯಿಯವರಿಗೆ ವರ್ಗಾಯಿಸಿತ್ತು. ಇದಾಗಿ 6 ವರ್ಷಗಳ  ಬಳಿಕ ರಾಜ್ಯ ಸರಕಾರ ಈ ಕಾಯ್ದೆಯ ಬಗ್ಗೆ ವಿಧಾನಸಭೆಯಲ್ಲೇ  ಉಲ್ಲೇಖಿಸಿ ಕಾನೂನು ಜಾಗೃತಿಯ ಪಾಠ ಮಾಡಿದೆ.  ಅಂದಹಾಗೆ,

ದೈಹಿಕವಾಗಿ ಶಕ್ತರಾಗಿರುವವರೆಗೆ ಸಮಸ್ಯೆಗಳು ಕಡಿಮೆ ಅಥವಾ ಯಾವುದೇ ಸಮಸ್ಯೆ ಎದುರಾದರೂ ಅದನ್ನು ಎದುರಿಸುವ  ಧೈರ್ಯ ಮತ್ತು ಛಲ ವ್ಯಕ್ತಿಯಲ್ಲಿ ಇರುತ್ತದೆ. ಏನಿಲ್ಲವೆಂದರೂ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟಿಸುವ ಮೂಲಕ  ಸಾರ್ವಜನಿಕ ಗಮನ ಸೆಳೆಯುವುದಕ್ಕೆ ಅವಕಾಶ ಇರುತ್ತದೆ. ಮಾಧ್ಯಮಗಳ ಗಮನ ಸೆಳೆದು ತನ್ನ ಸಮಸ್ಯೆ ಸಾರ್ವಜನಿಕವಾಗಿ  ಚರ್ಚೆಯಾಗುವಂತೆ ನೋಡಿಕೊಳ್ಳುವುದಕ್ಕೂ ಸವಲತ್ತು ಇರುತ್ತದೆ. ಆದರೆ, ವೃದ್ಧರು ಹಾಗಲ್ಲ. ಈ ಯಾವ ಅವಕಾಶವನ್ನೂ  ಬಳಸಿಕೊಳ್ಳಲು ಸಾಧ್ಯವಾಗದಷ್ಟು ಅವರು ದುರ್ಬಲರಾಗಿರುತ್ತಾರೆ. ಒಂದು ಸಾರ್ವಜನಿಕ ಪ್ರತಿಭಟನೆ ಹಮ್ಮಿಕೊಳ್ಳುವುದಕ್ಕೆ  ಬೇಕಾದ ದೈಹಿಕ ಶಕ್ತಿಯಾಗಲಿ, ಸಂಪರ್ಕವಾಗಲಿ ಇರುವುದಿಲ್ಲ. ಈ ಅಸಾಮರ್ಥ್ಯವು ಅವರನ್ನು ಮಾನಸಿಕವಾಗಿ  ಕುಗ್ಗಿಸುತ್ತಿರುತ್ತದೆ. ತಮಗೆ ಎದುರಾಗುವ ಎಲ್ಲ ರೀತಿಯ ಕಿರುಕುಳ ಮತ್ತು ಹಿಂಸೆಯನ್ನೂ ಬಾಯಿ ಮುಚ್ಚಿ ಅ ನುಭವಿಸಬೇಕೆಂಬ ಭಾವವು ದಿನೇ ದಿನೇ ಅವರನ್ನು ಕಂಗಾಲುಗೊಳಿಸುತ್ತಿರುತ್ತದೆ. ಮನೆಗೆ ಬಂದವರಲ್ಲಿ ಈ ಸಂಕಟವನ್ನು  ಹೇಳಿಕೊಳ್ಳೋಣವೆಂದರೆ, ಎಲ್ಲಿ ಮಕ್ಕಳು ಹಗೆ ತೀರಿಸುತ್ತಾರೋ ಅನ್ನುವ ಭಯ. ಹೀಗೆ ಯಾರಲ್ಲೂ ಹೇಳಿಕೊಳ್ಳಲಾಗದ  ಮತ್ತು ಹೇಳದೆಯೂ ಇರಲಾಗದ ಸ್ಥಿತಿಯೊಂದು ವೃದ್ಧ ಹೆತ್ತವರz್ದÁಗಿರುತ್ತದೆ. ಈ ಬಗ್ಗೆ ಸರ್ವೇ ನಡೆಸಿರುವ ಹೆಲ್ಪ್ ಏಜ್  ಇಂಡಿಯಾವು 2022ರಲ್ಲಿ ಬಿಡುಗಡೆಗೊಳಿಸಿರುವ ವರದಿಯಲ್ಲಿ ಆಘಾತಕಾರಿ ಅಂಶಗಳಿವೆ. ಮುಖ್ಯವಾಗಿ,

ಈ ದೇಶದ ವೃದ್ಧ ಹೆತ್ತವರ ಪೈಕಿ 82% ಮಂದಿಯೂ ತಮ್ಮ ಮಕ್ಕಳೊಂದಿಗೆ ವಾಸಿಸುತ್ತಿದ್ದಾರೆ. ಆದರೆ ಇವರಲ್ಲಿ 35% ವೃದ್ಧ  ಹೆತ್ತವರು ತಮ್ಮ ಗಂಡು ಮಕ್ಕಳಿಂದ ನಿಂದನೆಯನ್ನು ಎದುರಿಸುತ್ತಿದ್ದಾರೆ ಮತ್ತು 21% ವೃದ್ಧರು ತಮ್ಮ ಸೊಸೆಯಂದಿರಿಂದ   ನಿಂದನೆ ಮತ್ತು ಕಟು ಮಾತುಗಳನ್ನು ಅನುಭವಿಸುತ್ತಿದ್ದಾರೆ. ಮನೆಕೆಲಸಗಾರ್ತಿಯಿಂದ 2% ವೃದ್ಧರು ನಿಂದನೆಯನ್ನು  ಎದುರಿಸುತ್ತಿದ್ದಾರೆ ಎಂದು ಹೆಲ್ಪ್ ಏಜ್ ಇಂಡಿಯಾ ಬಿಡುಗಡೆಗೊಳಿಸಿರುವ ವರದಿಯಲ್ಲಿ ಹೇಳಲಾಗಿದೆ. ಬ್ರಿಡ್ಜ್ ದಿ ಗ್ಯಾಪ್:  ಅಂಡರ್‌ಸ್ಟ್ಯಾಂಡಿಂಗ್  ಎಲ್ಡರ್ ನೀಡ್ಸ್ ಎಂಬ ಹೆಸರಲ್ಲಿ ಬಿಡುಗಡೆಗೊಳಿಸಲಾಗಿರುವ ಈ ವರದಿಯಲ್ಲಿ 22 ನಗರಗಳ  300ರಷ್ಟು ವೃದ್ಧರನ್ನು ಸಂದರ್ಶಿಸಲಾಗಿತ್ತು. ಅಂದಹಾಗೆ,

ವರ್ಷಾoಪ್ರತಿ   ವೃದ್ಧಾಶ್ರಮಗಳ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿರುವುದು ಮತ್ತು ಮಕ್ಕಳ ನಿರ್ಲಕ್ಷ್ಯವನ್ನು ಆರೋಪಿಸಿ ವೃದ್ಧರು  ನ್ಯಾಯಾಲಯದ ಬಾಗಿಲು ತಟ್ಟುತ್ತಿರುವ ಸಂಖ್ಯೆಯಲ್ಲೂ ಅಧಿಕವಾಗುತ್ತಿರುವುದು ಆಶಾದಾಯಕ ಬೆಳವಣಿಗೆಯೇನೂ ಅಲ್ಲ.  ಹಾಗಂತ, ದೇಶದ ವೃದ್ಧರ ಪೈಕಿ 82% ಮಂದಿ ಕೂಡಾ ಮನೆಯಲ್ಲೇ  ಇದ್ದಾರೆ ಎಂಬುದಕ್ಕಾಗಿ ನಾವು ಸಂತಸಪಡುವ  ಹಾಗೂ ಇಲ್ಲ. ಹೀಗೆ ಮನೆಯಲ್ಲೇ  ಇರುವ ವೃದ್ಧ ಹೆತ್ತವರು ಹೇಗೆ ಬದುಕುತ್ತಿದ್ದಾರೆ, ಅವರನ್ನು ಮಕ್ಕಳು ಮತ್ತು  ಸೊಸೆಯಂದಿರು ಹೇಗೆ ನೋಡಿಕೊಳ್ಳುತ್ತಿದ್ದಾರೆ ಎಂಬುದೂ ಬಹಳ ಮುಖ್ಯ. ಅನೇಕ ಬಾರಿ ಹೀಗೆ ಮನೆಯಲ್ಲಿರುವ ವೃದ್ಧ  ಹೆತ್ತವರು ವೃದ್ಧಾಶ್ರಮವನ್ನು ಬಯಸುವಷ್ಟು ಮನೆಯ ವಾತಾವರಣ ಕ್ರೂರವಾಗಿರುತ್ತದೆ. ಮಕ್ಕಳು ಅವರನ್ನು ಹೊರೆಯಂತೆ  ಕಾಣುವುದು ಮತ್ತು ದಿನಾ ನಿಂದಿಸುವುದು ನಡೆಯುತ್ತಿರುತ್ತದೆ. ಇಂಥ ಬೆಳವಣಿಗೆಯನ್ನು ವಿಲ್ ಅಥವಾ ದಾನಪತ್ರವನ್ನು  ರದ್ದುಗೊಳಿಸುವುದರಿಂದ ಪರಿಹರಿಸಬಹುದೇ ಎಂಬ ಪ್ರಶ್ನೆಯಿದೆ. ಇದು ಒಂದು ಪರಿಹಾರ ಮಾರ್ಗ ಆಗಬಹುದಾದರೂ  ಮಕ್ಕಳ ಮನಸ್ಥಿತಿಯಲ್ಲಿ ಬದಲಾವಣೆ ತರದ ಹೊರತು ಇದಕ್ಕೆ ಬೇರೆ ಯಾವುದೂ ಪೂರ್ಣ ಪರಿಹಾರ ಆಗಲಾರದು ಎಂದೇ  ಹೇಳಬೇಕಾಗುತ್ತದೆ. ಮಕ್ಕಳ ಹೆಸರಿಗೆ ವರ್ಗಾಯಿಸಿದ ಆಸ್ತಿಯನ್ನು ಮರಳಿ ಪಡೆಯಲು ಹೆತ್ತವರಿಗೆ ಅವಕಾಶ  ಮಾಡಿಕೊಡಲಾಗುವ ಕಾನೂನು ಹೆತ್ತವರನ್ನೇ ಅಪಾಯಕ್ಕೆ ದೂಡುವ ಸಾಧ್ಯತೆಗೂ ಕಾರಣವಾಗಬಹುದು. ದೈಹಿಕವಾಗಿ  ದುರ್ಬಲರಾಗಿರುವ ಹೆತ್ತವರನ್ನು ನಿರ್ದಯಿ ಮಕ್ಕಳು ಸಾಯಿಸಲೂ ಬಹುದು. ಆದ್ದರಿಂದಲೇ ಮಕ್ಕಳ ಮನಸ್ಥಿತಿಯನ್ನು  ಬದಲಾಯಿಸುವ ಪರಿಹಾರ ಮುಖ್ಯ ಅನಿಸುವುದು.

ಹೆತ್ತವರನ್ನು ನಿರ್ಲಕ್ಷಿಸುವ ಮಕ್ಕಳನ್ನು ಪವಿತ್ರ ಕುರ್‌ಆನ್ ದೇವಭಯ ಮತ್ತು ವಿಚಾರಣೆಯ ಭಯದ ಆಧಾರದಲ್ಲಿ  ತಿದ್ದುವುದಕ್ಕೆ ಆದ್ಯತೆ ನೀಡಿದೆ. ನೀವು ಸ್ವರ್ಗಕ್ಕೋ ಅಥವಾ ನರಕಕ್ಕೋ ಎಂಬುದನ್ನು ನಿರ್ಧರಿಸುವುದು ನೀವು ನಿಮ್ಮ ವೃದ್ಧ  ಹೆತ್ತವರೊಂದಿಗೆ ಹೇಗೆ ನಡಕೊಂಡಿದ್ದೀರಿ ಎಂಬುದನ್ನು ಆಧರಿಸಿರುತ್ತದೆ ಎಂದು ಇಸ್ಲಾಮ್ ಬೋಧಿಸುತ್ತದೆ. ಹೆತ್ತವರಿಗೆ ‘ಛೆ’  ಎಂಬ ಪದವನ್ನೂ ಬಳಸಬಾರದು ಎಂದೂ ಕುರ್‌ಆನ್ ಎಚ್ಚರಿಸುತ್ತದೆ. ಚಿಕ್ಕಂದಿನಲ್ಲಿ ನಮ್ಮನ್ನು ಪ್ರೀತಿ ವಾತ್ಸಲ್ಯದಿಂದ  ನೋಡಿಕೊಂಡಂತೆಯೇ ಅವರ ವೃದ್ಧಾಪ್ಯದಲ್ಲಿ ಅವರನ್ನು ಅನುಗ್ರಹಿಸು ಎಂದು ದೇವನಲ್ಲಿ ಪ್ರಾರ್ಥಿಸುವಂತೆ ಕುರ್‌ಆನ್  ಮಕ್ಕಳಿಗೆ ಆದೇಶಿಸುತ್ತದೆ. ಸಂಕಷ್ಟಗಳ ಮೇಲೆ ಸಂಕಷ್ಟವನ್ನು ಅನುಭವಿಸಿ ತಾಯಿ ನಿಮ್ಮನ್ನು ಪ್ರಸವಿಸಿದ್ದಾಳೆ ಎಂದು  ತಾಯಿಯ ಮಹತ್ವವನ್ನು ಸಾರುತ್ತಾ ಕುರ್‌ಆನ್ ಮಕ್ಕಳನ್ನು ಎಚ್ಚರಿಸುತ್ತದೆ. ವೃದ್ಧರಾದ ಹೆತ್ತವರ ಸೇವೆ ಮಾಡುವುದು  ಧರ್ಮಯುದ್ಧದಲ್ಲಿ ಭಾಗವಹಿಸುವುದಕ್ಕೆ ಸಮಾನವಾದುದು ಎಂದು ಪ್ರವಾದಿ(ಸ) ಹೇಳಿದ್ದಾರೆ. ಹೆತ್ತವರ ಕೋಪಕ್ಕೆ  ತುತ್ತಾಗುವ ಮಕ್ಕಳು ಎಷ್ಟೇ ಧರ್ಮಿಷ್ಟರಾದರೂ ಸ್ವರ್ಗ ಪ್ರವೇಶಿಸಲಾರರು ಎಂಬುದಾಗಿಯೂ ಇಸ್ಲಾಮ್ ಎಚ್ಚರಿಸುತ್ತದೆ.  ಇಸ್ಲಾಮ್ ಇಂಥ ಬೋಧನೆಗಳ ಮೂಲಕವೇ ಸಮಾಜವನ್ನು ತಿದ್ದುವ ಪ್ರಯತ್ನ ನಡೆಸಿದೆ. ಸದ್ಯದ ಅಗತ್ಯ ಏನೆಂದರೆ,

ಕಾನೂನಿನ ಕಣ್ಣು ತಪ್ಪಿಸಲು ಸಾಧ್ಯವಾದರೂ ದೇವನ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂಬ ಪ್ರಜ್ಞೆಯೊಂದಿಗೆ  ಬದುಕುವ ಸಮಾಜವನ್ನು ನಿರ್ಮಿಸುವುದು. ಅಷ್ಟೇ.

No comments:

Post a Comment