ಸನ್ಮಾರ್ಗಕ್ಕೆ 47 ವರ್ಷಗಳು ತುಂಬಿವೆ. ಇದು 48ನೇ ವರ್ಷದ ಮೊದಲ ಸಂಚಿಕೆ. ಈ 2025ರ ನೆತ್ತಿಯಲ್ಲಿ ನಿಂತು 1978ರ ಬುಡದೆಡೆಗೆ ನೋಡಿದರೆ, ಹೆಮ್ಮೆಪಡುವುದಕ್ಕೆ ಹತ್ತು-ಹಲವು ಸಂಗತಿಗಳಿವೆ. ಈ 47 ವರ್ಷಗಳ ದೀರ್ಘ ಅವಧಿಯಲ್ಲಿ ಸವಾಲುಗಳೂ ಇದ್ದುವು. ಬೆನ್ನು ತಟ್ಟುವಿಕೆಗಳೂ ಇದ್ದುವು. ಸಿಹಿಯೂ ಇತ್ತು, ಕಹಿಯೂ ಇತ್ತು.
1978 ಎಪ್ರಿಲ್ 23ರಂದು ಸನ್ಮಾರ್ಗದ ಮೊದಲ ಸಂಚಿಕೆ ಬಿಡುಗಡೆಗೊಂಡಾಗ ಸಂಪಾದಕರಾಗಿದ್ದವರು ಇಬ್ರಾಹೀಮ್ ಸಈದ್. ಅವರಿಗೆ ಬೆನ್ನೆಲುಬಾಗಿದ್ದವರು ನೂರ್ ಮುಹಮ್ಮದ್ ಮತ್ತು ಸಾದುಲ್ಲಾ. ಈ ಮೂವರೂ ಆ ಕಾಲದ ಪದವೀಧರರು. ಸಣ್ಣದೊಂದು ಪ್ರಯತ್ನ ನಡೆಸಿರುತ್ತಿದ್ದರೂ ಈ ಮೂವರೂ ಉನ್ನತ ಸರಕಾರಿ ನೌಕರಿಯನ್ನು ಗಿಟ್ಟಿಸಿರುತ್ತಿದ್ದರು. ಇಬ್ರಾಹೀಮ್ ಸಈದ್ ಇಂಥದ್ದೊಂದು ಪ್ರಯತ್ನದಲ್ಲಿ ಯಶಸ್ವಿಯೂ ಆಗಿದ್ದರು. ಅವರಿಗೆ ಸರಕಾರಿ ಬ್ಯಾಂಕ್ ನೌಕರಿಯೂ ಸಿಕ್ಕಿತ್ತು. ಆದರೆ, ಯಾವಾಗ ಬಡ್ಡಿಯ ಕುರಿತಾದ ಕುರ್‌ಆನಿನ ತಾಕೀತುಗಳು ಅವರೊಳಗನ್ನು ಕೊರೆಯಲು ಪ್ರಾರಂಭಿಸಿತೋ ಬದುಕಿಗೆ ಏಕೈಕ ಆಧಾರವಾಗಿದ್ದ ನೌಕರಿಯನ್ನೇ ತೊರೆದರು. ಹಾಗಂತ,
ಇನ್ನೊಂದು ನೌಕರಿಯನ್ನು ದೃಢಪಡಿಸಿಕೊಂಡು ಅವರು ಹೀಗೆ ಬ್ಯಾಂಕ್ ನಿಂದ ಇಳಿದು ಬಂದಿರಲೂ ಇಲ್ಲ. ಅವರು ತನ್ನ ಅಂತರಾತ್ಮದ ಕರೆಯಂತೆ ನಡಕೊಂಡಿದ್ದರು. ಆ ಬಳಿಕ ಕ್ಷಿಪ್ರ ಬೆಳವಣಿಗೆಗಳಾದುವು. ಸನ್ಮಾರ್ಗ ಪತ್ರಿಕೆ ಪ್ರಾರಂಭಿಸುವ ಬಗ್ಗೆ ಚರ್ಚೆ, ಯೋಜನೆ, ಸಮಾಲೋಚನೆಗಳು ನಡೆದುವು. ಅಂತಿಮವಾಗಿ ಪತ್ರಿಕೆ ಪ್ರಾರಂಭಿಸುವುದೆಂದು ನಿರ್ಧಾರವಾಯಿತು. ಸನ್ಮಾರ್ಗ ಸಂಪಾದಕರಾಗಿ ಇಬ್ರಾಹೀಮ್ ಸಈದ್ ಆಯ್ಕೆಯಾದರು. ನೂರ್ ಮುಹಮ್ಮದ್ ಮತ್ತು ಸಾದುಲ್ಲಾ ಇವರ ಜೊತೆಗೂಡಿದರು. ಮಾತ್ರವಲ್ಲ, ಆರಂಭ ಕಾಲದಲ್ಲಿ ಈ ಮೂವರೂ ವೇತನದ ಹಂಗಿಲ್ಲದೇ ದುಡಿದರು. ೧೨ ಪುಟಗಳ ಡೆಮಿ ಗಾತ್ರದಲ್ಲಿ ಪ್ರಾರಂಭವಾದ ಪತ್ರಿಕೆಯ ಬೆಲೆ ಆಗ 40 ಪೈಸೆಯಾಗಿತ್ತು.
ತನ್ನ ಮೊದಲ ಸಂಚಿಕೆಯಲ್ಲೇ ಪತ್ರಿಕೆ ಕುರ್‌ಆನಿನ ಅನುವಾದವನ್ನು ಪ್ರಕಟಿಸಿತು. ಅಂದಿನ ಕಾಲಕ್ಕೆ ಸಂಬಂಧಿಸಿ ಇದು ಅತೀವ ಸವಾಲಿನದ್ದಾಗಿತ್ತು ಮತ್ತು ಕ್ರಾಂತಿಕಾರಿ ನಿರ್ಧಾರವಾಗಿತ್ತು. ಮುಸ್ಲಿಮ್ ಸಮುದಾಯ ಭಕ್ತಿಯಿಂದ ಓದಲಷ್ಟೇ ಕುರ್‌ಆನನ್ನು ಬಳಸುತ್ತಿದ್ದ ಕಾಲ. ಅರಬಿಯ ಹೊರತಾದ ಇನ್ನಾವುದೇ ಭಾಷೆಗೆ ಕುರ್‌ಆನನ್ನು ಅನುವಾದ ಮಾಡುವುದು ನಿಷಿದ್ಧ ಎಂದು ನಂಬಿಕೊಂಡಿದ್ದ ಕಾಲ. ಸನ್ಮಾರ್ಗ ಈ ನಂಬಿಕೆಯನ್ನು ಪ್ರಶ್ನಿಸಿತಲ್ಲದೇ, ಜನಸಾಮಾನ್ಯರಿಗೆ ಕುರ್‌ಆನಿನ ಅರ್ಥವನ್ನು ತಿಳಿಸುವ ಮಾಧ್ಯಮವಾಯಿತು. ಇದರೊಂದಿಗೆ ಆದ ಇನ್ನೊಂದು ಕ್ರಾಂತಿ ಏನೆಂದರೆ,
ಈ ಕುರ್‌ಆನ್ ಮೊದಲ ಬಾರಿ ಮುಸ್ಲಿಮೇತರರ ಬಳಿಯೂ ತಲುಪಿದ್ದು. ಕುರ್‌ಆನಿನ ಅನುವಾದವನ್ನು ಕನ್ನಡದಲ್ಲಿ ಓದುವುದರೊಂದಿಗೆ ಮುಸ್ಲಿಮೇತರರಲ್ಲಿದ್ದ ಹತ್ತು-ಹಲವು ತಪ್ಪು ಅಭಿಪ್ರಾಯಗಳು ದೂರವಾದುವು. ಇದರ ಜೊತೆಗೇ ಮುಸ್ಲಿಮರೂ ಕುರ್‌ಆನನ್ನು ಅರಿತು ಓದತೊಡಗಿದರು. ಆವರೆಗೆ ಪುಣ್ಯ ಸಂಪಾದನೆಗೆಂದು ಕುರ್‌ಆನನ್ನು ಓದುತ್ತಿದ್ದವರು, ಮೊದಲ ಬಾರಿ ಜೀವನ ಬದಲಾವಣೆಗಾಗಿ ಓದತೊಡಗಿದರು. ತಮ್ಮ ಈಗಿನ ಬದುಕು ಮತ್ತು ಕುರ್‌ಆನ್ ಹೇಳುವ ಬದುಕನ್ನು ಪರಸ್ಪರ ತಿಕ್ಕಿ ನೋಡಿ ಪಶ್ಚಾತ್ತಾಪಪಟ್ಟರು. ಹೊಸ ಜೀವನಕ್ರಮವನ್ನು ಅಳವಡಿಸಿಕೊಳ್ಳಲು ನಿರ್ಧರಿಸಿದರು. ಹಾಗಂತ,
ಸನ್ಮಾರ್ಗ ಕೇವಲ ಕುರ್‌ಆನ್ ಅನುವಾದವೊಂದನ್ನಷ್ಟೇ ಪ್ರಕಟಿಸುತ್ತಾ ಇದ್ದುದಲ್ಲ. ಹದೀಸ್‌ಗಳ ಪ್ರಕಟನೆಯನ್ನೂ ಪ್ರಾರಂಭಿಸಿತು. ಇಸ್ಲಾಮೀ ಇತಿಹಾಸವನ್ನೂ ಪ್ರಕಟಿಸತೊಡಗಿತು. ಮಹಿಳೆಯರ ಹಕ್ಕುಗಳ ಬಗ್ಗೆ ಕುರ್‌ಆನ್ ಮತ್ತು ಪ್ರವಾದಿ ಚರ್ಯೆ ಏನು ಹೇಳುತ್ತದೆಂಬುದರ ಬಗ್ಗೆ ಅರಿವಿಲ್ಲದ ಹಾಗೂ ಅಂದಿನ ಸಾಮಾಜಿಕ ರೀತಿ-ನೀತಿಗಳನ್ನೇ ಅಳವಡಿಸಿಕೊಂಡಿದ್ದ ಮುಸ್ಲಿಮರಿಗೆ ಇಸ್ಲಾಮ್ ಮಹಿಳೆಗೆ ನೀಡಿರುವ ಸ್ಥಾನ ಮಾನಗಳನ್ನು ಪರಿಪರಿಯಾಗಿ ವಿವರಿಸಿಕೊಟ್ಟಿತು. ಹೆಣ್ಣಿಗೆ ಆಸ್ತಿಯಲ್ಲಿ ಹಕ್ಕಿಲ್ಲ, ವರದಕ್ಷಿಣೆ ಇಸ್ಲಾಮ್ ನ ಭಾಗ, ಹೆಣ್ಣು ಶಿಕ್ಷಣ ಪಡೆಯಬೇಕಾಗಿಲ್ಲ, ಹೆಣ್ಣು ಮಸೀದಿ ಪ್ರವೇಶಿಸುವಂತಿಲ್ಲ, ಆಕೆ ಗಂಡಿನ ಗುಲಾಮಳು... ಇತ್ಯಾದಿ ಇತ್ಯಾದಿ ಸ್ಥಾಪಿತ ನಿಲುವುಗಳಿಗೆ ಪ್ರಬಲ ಏಟನ್ನು ಕೊಟ್ಟದ್ದು ಸನ್ಮಾರ್ಗವೇ. ಮುಸ್ಲಿಂ ಮಹಿಳೆಯನ್ನು ಸಂಕೋಲೆಗಳಿಂದ ಬಿಡಿಸಿದ್ದಲ್ಲದೇ ಹಿಜಾಬ್ ನ ಮಹತ್ವ, ತಾಯ್ತನದ ಮಹತ್ವ, ಕೌಟುಂಬಿಕ ಹೊಣೆಗಾರಿಕೆಗಳು, ದಾಂಪತ್ಯದ ಹಕ್ಕು- ಬಾಧ್ಯತೆಗಳು.. ಇತ್ಯಾದಿಯಾಗಿ ಹತ್ತು ಹಲವು ಸಂಗತಿಗಳನ್ನು ಕುರ್ ಆನ್ ಮತ್ತು ಹದೀಸ್ ಗಳ ಆಧಾರದಲ್ಲಿ ವಿವರಿಸುತ್ತಾ, ಇದನ್ನು ಅನುಸರಿಸುವ ಒಂದಿಡೀ ಹೊಸ ತಲೆಮಾರನ್ನೇ ಸೃಷ್ಟಿಸಿತು. ಇದರ ಜೊತೆಗೆ, ಸನ್ಮಾರ್ಗ ಮಾಡಿದ ಇನ್ನೊಂದು ಮಹತ್ವಪೂರ್ಣ ಕಾರ್ಯವೆಂದರೆ ಸಂದೇಶ ಪ್ರಚಾರದ ಪ್ರಜ್ಞೆಯನ್ನು ಸಮುದಾಯದಲ್ಲಿ ಮೂಡಿಸಿದ್ದು.
ಮುಸ್ಲಿಂ ಸಮುದಾಯದಲ್ಲಿ ಸಂದೇಶ ಪ್ರಚಾರದ ಪ್ರಜ್ಞೆ ಶೂನ್ಯ ಅನ್ನುವಷ್ಟು ಕಡಿಮೆಯಿತ್ತು. ಇಸ್ಲಾಮಿನಂತೆ ಬದುಕುವುದಕ್ಕೆ ಬೇಕಾದ ಮಾರ್ಗದರ್ಶನಗಳೇ ಅಸ್ಪಷ್ಟವಾಗಿದ್ದ ಕಾಲದಲ್ಲಿ ಸಂದೇಶ ಪ್ರಚಾರದ ಪ್ರಜ್ಞೆ ಮೂಡುವುದಕ್ಕೆ ಸಾಧ್ಯವೂ ಇರಲಿಲ್ಲ. ಸನ್ಮಾರ್ಗ ನಿರಂತರ ಈ ಬಗ್ಗೆ ಸಮುದಾಯವನ್ನು ಎಚ್ಚರಿಸುವ ಬರಹಗಳನ್ನು ಪ್ರಕಟಿಸತೊಡಗಿತು. ಪ್ರವಾದಿಯ(ಸ) ದೌತ್ಯವನ್ನು ಜನರ ಮುಂದಿಟ್ಟಿತು. ಕುರ್‌ಆನಿನ ಉದ್ದೇಶವನ್ನು ಪದೇ ಪದೇ ನೆನಪಿಸತೊಡಗಿತು. ಹೀಗೆ ಕ್ರಾಂತಿಯೊಂದಕ್ಕೆ ಸಮಾಜವನ್ನು ನಿಧಾನಕ್ಕೆ ಒಗ್ಗಿಸುತ್ತಾ ಬರತೊಡಗಿತು. ಇದರ ಜೊತೆಜೊತೆಗೇ,
ಕಾಲದ ಬದಲಾವಣೆಗಳಿಗೂ ತನ್ನನ್ನು ಒಡ್ಡಿಕೊಳ್ಳಬೇಕಾದ ಅನಿವಾರ್ಯತೆಯೂ ಸನ್ಮಾರ್ಗಕ್ಕಿತ್ತು. ಬ್ಲ್ಯಾಕ್ ಅಂಡ್ ವೈಟ್‌ನಿಂದ ಡಬಲ್ ಕಲರ್‌ಗೆ ಅದು ತನ್ನನ್ನು ಬದಲಿಸಿಕೊಂಡಿತು. ೧೨ ಪುಟಗಳ ಸಣಕಲು ಗಾತ್ರವು ಇನ್ನಷ್ಟು ಪುಟಗಳೊಂದಿಗೆ ದಷ್ಟಪುಷ್ಟವಾದುವು. ಹಾಗೆಯೇ ತಂತ್ರಜ್ಞಾನದಲ್ಲಾದ ಕ್ರಾಂತಿಕಾರಿ ಬದಲಾವಣೆಗೂ ಸನ್ಮಾರ್ಗ ಒಗ್ಗಿಕೊಳ್ಳಬೇಕಾಗಿತ್ತು. ಆ ಕಾರಣದಿಂದಲೇ 2019ರಲ್ಲಿ ವೆಬ್‌ಪೋರ್ಟಲನ್ನು ಪ್ರಾರಂಭಿಸುವ ಮೂಲಕ ಸನ್ಮಾರ್ಗ ಇತರ ಪತ್ರಿಕೆಗಳಿಗೆ ಸಮಸಮವಾಗಿ ಬೆಳೆಯಿತು. 2020ರಲ್ಲಿ ಡಿಜಿಟಲ್ ನ್ಯೂಸ್ ಚಾನೆಲನ್ನೂ ಆರಂಭಿಸಿತು. ಇವತ್ತು ಇವು ಇರಡೂ ಅತ್ಯಂತ ಜನಪ್ರಿಯ ಮಾಧ್ಯಮವಾಗಿ ಗುರುತಿಸಿಕೊಂಡಿದೆ ಮತ್ತು ಕಾಲದ ಬದಲಾವಣೆಗೆ ಅತ್ಯಂತ ಶೀಘ್ರವಾಗಿ ಸ್ಪಂದಿಸಿದ ಕ್ರಾಂತಿಕಾರಿ ಹೆಜ್ಜೆಯಾಗಿ ಶ್ಲಾಘನೆಗೆ ಒಳಗಾಗಿದೆ. ಅಲ್ಲದೇ, ಎರಡು ದಶಕಗಳ ಹಿಂದೆ ಅನುಪಮ ಪತ್ರಿಕೆಯನ್ನು ಆರಂಭಿಸಿದ ಹೆಗ್ಗಳಿಕೆಯೂ ಸನ್ಮಾರ್ಗಕ್ಕಿದೆ. ಆದರೆ,
1978ರಲ್ಲಿ ಯಾರು ಸನ್ಮಾರ್ಗ ಪತ್ರಿಕೆಯ ರೂವಾರಿಗಳಾಗಿದ್ದರೋ ಆ ಮೂವರೂ ಇವತ್ತು ನಮ್ಮ ಜೊತೆ ಇಲ್ಲ. ಇವರ ಜೊತೆಗೇ, ಈ ಪತ್ರಿಕೆಯ ಚಂದಾದಾರಿಕೆಗಾಗಿ ರಾಜ್ಯದಾದ್ಯಂತ ಹಗಲಿರುಳೂ ಸುತ್ತಿದವರು, ಚಂದಾ ನೀಡಿ ಬೆಂಬಲಿಸಿದವರು, ಆರ್ಥಿಕವಾಗಿ ನೆರವಾದವರು ಮತ್ತು ಪತ್ರಿಕೆಯ ಏಳಿಗೆಗಾಗಿ ದುಡಿದವರಲ್ಲಿ ಅನೇಕರು ಇವತ್ತು ನಮ್ಮ ಜೊತೆ ಇಲ್ಲ. ಈ 48ರ ಪ್ರಾಯದಲ್ಲಿ ಸನ್ಮಾರ್ಗ ಅವರೆಲ್ಲರನ್ನೂ ನೆನಪಿಸಿಕೊಳ್ಳುತ್ತದೆ. ಹಾಗೆಯೇ, ಅಂದಿನಿಂದ ಈ ಹೊತ್ತಿನವರೆಗೂ ಪ್ರತಿಫಲಾಪೇಕ್ಷೆಯಿಲ್ಲದೇ ಸನ್ಮಾರ್ಗದ ಅಭಿವೃದ್ಧಿಗಾಗಿ ಮತ್ತು ಬೆಳವಣಿಗೆಗಾಗಿ ಆರ್ಥಿಕವಾಗಿಯೂ ಬೌದ್ಧಿಕವಾಗಿಯೂ ದೈಹಿಕವಾಗಿಯೂ ಕೊಡುಗೆ ನೀಡುತ್ತಿರುವ ಎಲ್ಲ ಸಹೃದಯರನ್ನೂ ಈ ಸಂದರ್ಭದಲ್ಲಿ ಸನ್ಮಾರ್ಗ ಸ್ಮರಿಸಿಕೊಳ್ಳುತ್ತದೆ. ಇವರೆಲ್ಲರಿಗೂ ಅಲ್ಲಾಹನು ತಕ್ಕ ಪ್ರತಿಫಲವನ್ನು ನೀಡಲಿ.
ಹಾಗಂತ, ಸನ್ಮಾರ್ಗ ಲಾಭದಾಯಕ ಮಾಧ್ಯಮವಲ್ಲ. ತಂಬಾಕು, ಬ್ಯಾಂಕು, ಸಿನಿಮಾ ಇತ್ಯಾದಿ ಜಾಹೀರಾತುಗಳಿಗೆ ಸ್ವಯಂ ನಿರ್ಬಂಧ ಹೇರಿಕೊಂಡಿರುವ ಸನ್ಮಾರ್ಗಕ್ಕೆ ಆರಂಭದಿಂದ ಇಂದಿನವರೆಗೂ ಆರ್ಥಿಕ ಸವಾಲು ಹೊಸತೂ ಅಲ್ಲ. ಎಷ್ಟೇ ಕಷ್ಟ ಎದುರಾದರೂ ‘ಧರ್ಮ ನಿಷಿದ್ಧ’ ಜಾಹೀರಾತುಗಳನ್ನು ಸ್ವೀಕರಿಸಲಾರೆ ಎಂಬ ನಿಲುವಿನಲ್ಲಿ ಅದು ಈ ವರೆಗೂ ರಾಜಿ ಮಾಡಿಕೊಂಡೂ ಇಲ್ಲ. ಒಂದುವೇಳೆ ಈ ವಿಷಯದಲ್ಲಿ ಮಾಡುವ ಸಣ್ಣ ರಾಜಿಯೂ ಸನ್ಮಾರ್ಗವನ್ನು ಇವತ್ತು ಆರ್ಥಿಕವಾಗಿ ಬಲಿಷ್ಠವಾಗಿಡುತ್ತಿತ್ತೋ ಏನೋ? ಆದರೆ, ಸನ್ಮಾರ್ಗ ಎಂದೂ ಈ ವಿಷಯದಲ್ಲಿ ರಾಜಿ ಮಾಡುವುದಿಲ್ಲ. ಈ ಕಾರಣದಿಂದಲೇ ಸನ್ಮಾರ್ಗ ದಾನಿಗಳಿಂದ ನೆರವನ್ನು ಕೋರುತ್ತದೆ. ಪತ್ರಿಕೆ, ವೆಬ್‌ಪೋರ್ಟಲ್ ಮತ್ತು ನ್ಯೂಸ್ ಚಾನೆಲ್- ಈ ಮೂರನ್ನೂ ಏಕಕಾಲದಲ್ಲಿ ನಡೆಸುವುದೆಂದರೆ ಅದು ಸಣ್ಣ ಸವಾಲಲ್ಲ. ಪ್ರತಿಯೊಂದೂ ದುಬಾರಿಯಾಗಿರುವ ಈ ಕಾಲದಲ್ಲಿ ಸಿಬಂದಿಗಳ ವೇತನದಿಂದ ಹಿಡಿದು ಪತ್ರಿಕೆಯ ಮುದ್ರಣದವರೆಗೆ, ಕ್ಯಾಮರಾದಿಂದ ಹಿಡಿದು ಕಂಪ್ಯೂಟರ್ ವರೆಗೆ ಎಲ್ಲವೂ ತುಟ್ಟಿಯೇ. ಈ ಸವಾಲುಗಳನ್ನು ಮೆಟ್ಟಿ ನಿಲ್ಲಬೇಕಾದರೆ ನಿಮ್ಮೆಲ್ಲರ ನೆರವಿನ ಅಗತ್ಯವಿದೆ. ಕೇವಲ ಆರ್ಥಿಕ ನೆರವು ಮಾತ್ರವಲ್ಲ, ಬೌದ್ಧಿಕ ನೆರವು ಮತ್ತು ದೈಹಿಕ ಶ್ರಮದ ಅಗತ್ಯವೂ ಇದೆ. ಈ ಪಯಣದಲ್ಲಿ ನಿಮ್ಮೆಲ್ಲರ ಭಾಗೀದಾರಿಕೆಯನ್ನು ಸನ್ಮಾರ್ಗ ಅಪೇಕ್ಷಿಸುತ್ತದೆ. ಸುಳ್ಳು ಮತ್ತು ದ್ವೇಷಗಳೇ ಆಳುವ ಈ ಕಾಲದಲ್ಲಿ ಸನ್ಮಾರ್ಗ ದುರ್ಬಲವಾಗದಂತೆ ಕಾಪಾಡುವ ಜವಾಬ್ದಾರಿಯನ್ನು ನೀವೆಲ್ಲ ವಹಿಸಿಕೊಳ್ಳಬೇಕು ಎಂದು ವಿನಂತಿಸುತ್ತದೆ.
No comments:
Post a Comment