ಸಿಇಟಿ ಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿಗಳ ಜನಿವಾರವನ್ನು ಕಳಚಿದ ಪ್ರಕರಣಕ್ಕೆ ಸಂಬಂಧಿಸಿ ಬೀದರ್ ಮತ್ತು ಶಿವಮೊಗ್ಗದ ನಾಲ್ವರು ಅಧಿಕಾರಿಗಳ ಮೇಲೆ ಒಂದೇ ದಿನದೊಳಗೆ ಕ್ರಮ ಕೈಗೊಳ್ಳಲಾಗಿದೆ. ಜನಿವಾರ ತೆಗೆದು ಸಿಇಟಿ ಪರೀಕ್ಷೆ ಬರೆಯಲು ಒಪ್ಪಿಕೊಳ್ಳದ ಸುಚಿವೃತ ಕುಲಕರ್ಣಿ ಎಂಬ ವಿದ್ಯಾರ್ಥಿಗೆ ಉಚಿತ ಇಂಜಿನಿಯರಿಂಗ್ ಸೀಟ್ ಕೊಡಿಸುವುದಾಗಿ ಸಚಿವ ಈಶ್ವರ ಖಂಡ್ರೆ ಭರವಸೆ ನೀಡಿದ್ದಾರೆ. ಈ ಪ್ರಕರಣವನ್ನು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಖಂಡಿಸಿದ್ದಾರೆ. ಶಿಕ್ಷಣ ಸಚಿವ ಮಧು ಬಂಗಾರಪ್ಪ ಪ್ರಬಲ ವಿರೋಧವನ್ನು ವ್ಯಕ್ತಪಡಿಸಿದ್ದಲ್ಲದೇ, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ತಕ್ಷಣ ಕ್ರಮ ಕೈಗೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಬೀದರ್‌ನ ಸಾಯಿ ಸ್ಫೂರ್ತಿ ಕಾಲೇಜಿನ ಮುಖ್ಯಸ್ಥರಿಗೆ ಜಿಲ್ಲಾಧಿಕಾರಿ ಶಿಲ್ಪಾ ಶರ್ಮ ತಕ್ಷಣ ನೋಟೀಸು ಜಾರಿ ಮಾಡಿದ್ದಾರೆ. ಶಿವಮೊಗ್ಗ ಸಾಗರದ ಸರಕಾರಿ ಪದವಿ ಪೂರ್ವ ಕಾಲೇಜಿನ ವಿರುದ್ಧ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ತನಿಖೆಗೆ ಆದೇಶಿಸಿದ್ದಾರೆ. ಈ ಎಲ್ಲದರ ನಡುವೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಮಾಜಿ ಗೃಹಸಚಿವ ಆರಗ ಜ್ಞಾನೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಕರಾವಳಿಯ ಶಾಸಕ ಭರತ್ ಶೆಟ್ಟಿ ಸಹಿತ ಹತ್ತು-ಹಲವು ಜನಪ್ರತಿನಿಧಿಗಳು ಘಟನೆಯನ್ನು ಖಂಡಿಸಿ ಹೇಳಿಕೆಗಳನ್ನು ನೀಡಿದ್ದಾರೆ. ರಾಜ್ಯದ ಕಾಂಗ್ರೆಸ್ ಸರಕಾರಕ್ಕೆ ಬ್ರಾಹ್ಮಣರ ಶಾಪ ತಟ್ಟಲಿದೆ ಎಂದು ಶಾಸಕ ಭರತ್ ಶೆಟ್ಟಿ ಹೇಳಿದ್ದಾರೆ. ಈ ನಡುವೆ ಬೆಂಗಳೂರು, ಬೀದರ್ ಮತ್ತು ಕಲಬುರ್ಗಿಯಲ್ಲಿ ಬ್ರಾಹ್ಮಣ ಸಮುದಾಯದಿಂದ ಬೃಹತ್ ಪ್ರತಿಭಟನೆ ನಡೆದಿದೆ. ಕಲಬುರ್ಗಿಯಲ್ಲಿ ಬೈಕ್‌ಗೆ ಬೆಂಕಿ ಹಚ್ಚಿ ಪ್ರತಿಭಟನಾಕಾರರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
2022 ಜನವರಿಯಲ್ಲಿ ಉಡುಪಿಯ ಹೆಣ್ಣು ಮಕ್ಕಳ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಇದಕ್ಕೆ ಸಮಾನವಾದ ಘಟನೆ ನಡೆದಿತ್ತು. ಶಿರವಸ್ಟ್ರ ಧರಿಸಿದ ಕಾರಣಕ್ಕಾಗಿ ವಿದ್ಯಾರ್ಥಿನಿಯರಿಗೆ ತರಗತಿ ಪ್ರವೇಶ ನಿರಾಕರಿಸಲಾಯಿತು. ಹಾಗಂತ, ಆಗ ರಾಜ್ಯಾದ್ಯಂತ ಹಿಜಾಬ್‌ಗೆ ನಿಷೇಧವೇನೂ ಇರಲಿಲ್ಲ. ಸರಕಾರಿ ಶಾಲೆ-ಕಾಲೇಜುಗಳಲ್ಲಿ ಹಿಜಾಬ್ ಧರಿಸಿ ಹೋಗುವವರಿಗೂ ಅನುಮತಿ ಇತ್ತು. ಕೈನೂಲು, ಹಣೆಗೆ ಕುಂಕುಮ, ಮೂಗುತಿ, ಹಣೆಬೊಟ್ಟು, ಸಿಕ್ಖರ ಪೇಟ ಇತ್ಯಾದಿ ಧಾರ್ಮಿಕ-ಸಾಂಸ್ಕೃತಿಕ ಅಸ್ಮಿತೆಗಳನ್ನು ಧರಿಸುವವರಿಗೂ ತರಗತಿಗೆ ಪ್ರವೇಶವಿತ್ತು. ಆದರೆ,
ಉಡುಪಿಯ ಬಿಜೆಪಿ ಶಾಸಕ ರಘುಪತಿ ಭಟ್ ಅವರ ಅಧ್ಯಕ್ಷತೆಯಲ್ಲಿದ್ದ ಹೆಣ್ಣು ಮಕ್ಕಳ ಸರಕಾರಿ ಕಾಲೇಜು ಹಿಜಾಬ್ ನಿಷೇಧದ ಪರವಾಗಿ ನಿಂತಿತು. ವಿದ್ಯಾರ್ಥಿನಿಯರು ಪರಿಪರಿಯಾಗಿ ವಿನಂತಿಸಿದರೂ ಜಗ್ಗಲಿಲ್ಲ. ಸುಮಾರು ಒಂದು ತಿಂಗಳ ಕಾಲ ಈ ವಿದ್ಯಾರ್ಥಿನಿಯರು ಕಾಲೇಜಿನ ಮೆಟ್ಟಿಲಲ್ಲಿ ಮತ್ತು ವರಾಂಡದಲ್ಲಿ ಕುಳಿತು ಅಭ್ಯಾಸ ಮಾಡಿದರು. ಆಡಳಿತ ಮಂಡಳಿಯ ಒಪ್ಪಿಗೆಗಾಗಿ ಕಾದರು. ಈಗ ಜನಿವಾರ ಪ್ರಕರಣವನ್ನು ಖಂಡಿಸಿರುವ ಇದೇ ಬಸವರಾಜ್ ಬೊಮ್ಮಾಯಿಯವರು ಆಗ ಮುಖ್ಯಮಂತ್ರಿಯಾಗಿದ್ದರೆ, ಇದೇ ಆರಗ ಜ್ಞಾನೇಂದ್ರ ಗೃಹಸಚಿವರಾಗಿದ್ದರು. ಪ್ರಹ್ಲಾದ ಜೋಶಿ ಆಗಲೂ ಕೇಂದ್ರ ಸಚಿವರಾಗಿದ್ದರು. ಆದರೆ, ಇವರೆಲ್ಲ ಆಗ ಈ ವಿದ್ಯಾರ್ಥಿನಿಯರಿಗೆ ತರಗತಿ ಪ್ರವೇಶ ನಿರಾಕರಿಸಿದುದನ್ನು ಸಮರ್ಥಿಸಿಕೊಂಡಿದ್ದರು. ಸರಕಾರಕ್ಕೆ ಬ್ರಾಹ್ಮಣರ ಶಾಪ ತಟ್ಟಲಿದೆ ಎಂದು ಈಗ ಹೇಳುತ್ತಿರುವ ಭರತ್ ಶೆಟ್ಟಿಯವರು ಆಗ ಹಿಜಾಬ್ ನಿಷೇಧಕ್ಕೆ ಬೆಂಬಲ ಸೂಚಿಸಿದ್ದರು. ಹೀಗೆ ತಿಂಗಳ ಕಾಲ ಕಾದ ಬಳಿಕ ಸಾರ್ವಜನಿಕ ಆಕ್ರೋಶ ವ್ಯಕ್ತವಾಯಿತು. ಪ್ರತಿಭಟನೆಗಳು ನಡೆದುವು. ಆ ವಿದ್ಯಾರ್ಥಿನಿಯರು ನ್ಯಾಯವನ್ನು ಅಪೇಕ್ಷಿಸಿ ನ್ಯಾಯಾಲಯದ ಬಾಗಿಲು ಬಡಿದರು. ಆಗಲೂ ಬೊಮ್ಮಾಯಿ ಸರಕಾರ ಹಿಜಾಬ್ ನಿಷೇಧದ ಪರ ನ್ಯಾಯಾಲಯದಲ್ಲಿ ವಾದಿಸಿತು. ನಿಜವಾಗಿ,
ಹಿಜಾಬ್ ಆಗಲಿ, ಜನಿವಾರ, ಬಿಂದಿ, ಕರಿಮಣಿ, ಪೇಟ ಇತ್ಯಾದಿ ಯಾವುವೂ ವಿದ್ಯಾರ್ಥಿಗಳ ಕಲಿಕೆಗೆ ಅಡ್ಡಿ ಎಂದೋ ಅವರ ಬುದ್ಧಿಮತ್ತೆಯನ್ನು ಕುಗ್ಗಿಸುವ ಅಪಾಯಕಾರಿ ಅಸ್ಮಿತೆಗಳೆಂದೋ ಯಾವ ಸಂಶೋಧಕರೂ ಹೇಳಿಲ್ಲ. ಅಂಥದ್ದೊಂದು ವೈಜ್ಞಾನಿಕ ವರದಿಯೂ ಬಂದಿಲ್ಲ. ತಲೆತಲಾಂತರಗಳಿಂದ ವಿವಿಧ ಸಮುದಾಯಗಳು ಪಾಲಿಸಿಕೊಂಡು ಬರುತ್ತಿರುವ ಈ ಬಗೆಯ ಧಾರ್ಮಿಕ ಸಂಕೇತಗಳನ್ನು ಆಧುನಿಕತೆಗೆ ಅನ್ಯವಾಗಿಯೋ ವಿದ್ಯಾರ್ಥಿ ಸಮಾನತೆಯ ವಿರೋಧಿಯಾಗಿಯೋ ನೋಡಬೇಕಾಗಿಯೂ ಇಲ್ಲ. ಇವೆಲ್ಲ ಸಾಮಾಜಿಕವಾಗಿ ಅತಿ ಶಕ್ತಿಯುತವಾಗಿ ಬಳಕೆಯಾಗುತ್ತಿರುವಾಗ, ತರಗತಿಯಲ್ಲಿ ಮಾತ್ರ ನಿಷೇಧಿಸುವುದರಿಂದ ಸಮಾನತೆಯನ್ನು ತಂದಂತೆಯೂ ಆಗುವುದಿಲ್ಲ. ನಿಜವಾಗಿ,
ಅಸ್ಮಿತೆಗಳನ್ನು ಸಮಾನತೆಯ ವಿರೋಧಿ ಎಂಬ ದೃಷ್ಟಿಯಲ್ಲಿ ನೋಡುವುದಕ್ಕಿಂತ ವೈವಿಧ್ಯತೆಯ ಸೊಗಸು ಎಂಬ ನೆಲೆಯಲ್ಲೇ ನೋಡಬೇಕಾಗಿದೆ. ಸಮಾನತೆಯನ್ನು ವಿದೇಶಿ ಕಣ್ಣಲ್ಲಿ ವ್ಯಾಖ್ಯಾನಿಸದೇ ದೇಶಿ ಜೀವನ ಕ್ರಮದ ಆಧಾರದಲ್ಲಿ ನೋಡದೇ ಇರುವುದೇ ಈ ಎಲ್ಲ ಸಮಸ್ಯೆಗಳಿಗೆ ಕಾರಣ ಎಂದು ಹೇಳಬೇಕಾಗುತ್ತದೆ. ಒಂದುವೇಳೆ, ಹಿಜಾಬ್ ಆಗಲಿ, ಬಿಂದಿ, ಪೇಟ, ಜನಿವಾರವೇ ಆಗಲಿ ಸಾಮಾಜಿಕ ನ್ಯಾಯ, ಏಕತೆ, ಸಮಾನತೆ ಇತ್ಯಾದಿ ಸಾಂವಿಧಾನಿಕ ಮೌಲ್ಯಗಳನ್ನು ಉಲ್ಲಂಘಿಸುತ್ತದೆ ಎಂದಾಗಿದ್ದರೆ, ತರಗತಿಯಿಂದಷ್ಟೇ ಅಲ್ಲ, ಇಡೀ ಸಾರ್ವಜನಿಕ ಜೀವನ ಕ್ರಮದಿಂದಲೇ ಅದಕ್ಕೆ ನಿಷೇಧ ಹೇರಬೇಕಾಗುತ್ತದೆ. ಆದರೆ, ಈ ಯಾವ ಧಾರ್ಮಿಕ ಅಸ್ಮಿತೆಗಳಿಗೂ ಸಂವಿಧಾನ ವಿರೋಧಿ ಎಂಬ ಹಣೆಪಟ್ಟಿ ಇಲ್ಲ ಮತ್ತು ಸಾರ್ವಜನಿಕವಾಗಿ ನಿಷೇಧವೂ ಇಲ್ಲ. ಹೀಗಿರುವಾಗ ಬರೇ ತರಗತಿಯಲ್ಲಿ ಅಥವಾ ಪರೀಕ್ಷೆಯ ವೇಳೆ ಮಾತ್ರ ಇದನ್ನು ಅಪಾಯಕಾರಿಯಂತೆ ಕಾಣುವುದಕ್ಕೆ ಅರ್ಥವೂ ಇಲ್ಲ. ಅಂದಹಾಗೆ,
ಜನಿವಾರ ವಿವಾದವು ಮತ್ತೊಮ್ಮೆ ನಮ್ಮನ್ನು ಹಿಜಾಬ್ ವಿವಾದದ ಕಡೆಗೆ ಕೊಂಡೊಯ್ಯಬೇಕಿದೆ. ನಿಜಕ್ಕೂ, ಹಿಜಾಬನ್ನು ವಿವಾದವನ್ನಾಗಿ ಮಾಡಬೇಕಿತ್ತೇ? ಅದು ತರಗತಿಯಲ್ಲಾಗಲಿ, ಶಾಲಾ ಕ್ಯಾಂಪಸ್‌ನಲ್ಲಾಗಲಿ ಯಾರಿಗಾದರೂ ತೊಂದರೆ ಮಾಡಿತ್ತೇ? ತರಗತಿಯೊಳಗೆ ಹಿಜಾಬ್ ನಿಷೇಧಿಸಿದ ಉಪನ್ಯಾಸಕರನ್ನು ಕರೆದು ವಿಚಾರಿಸಿ, ಅಗತ್ಯ ಬಿದ್ದರೆ ಶಿಸ್ತು ಕ್ರಮ ಕೈಗೊಂಡು ಅಲ್ಲಿಗೇ ಮುಗಿಸ ಬಹುದಾಗಿದ್ದ ಪ್ರಕರಣವನ್ನು ವಾರಗಟ್ಟಲೆ ಜೀವಂತ ಉಳಿಸಿಕೊಂಡದ್ದು ಏಕೆ? ಜನಿವಾರ ಪ್ರಕರಣವನ್ನು ತಕ್ಷಣ ನಿರ್ವಹಿಸಿದಂತೆ ಹಿಜಾಬ್ ಪ್ರಕರಣವನ್ನು ನಿಭಾಯಿಸದೇ ಇದ್ದುದು ಯಾವ ಕಾರಣಕ್ಕೆ? ಅವರ ಉದ್ದೇಶ ಏನಾಗಿತ್ತು? ಸಾರ್ವಜನಿಕರಿಗೆ ಸಮಸ್ಯೆಯೇ ಅಲ್ಲದ ಒಂದು ತುಂಡು ಬಟ್ಟೆಯು ರಾಜ್ಯದ 6 ಕೋಟಿ ಕನ್ನಡಿಗರ ಸಮಸ್ಯೆಯಾಗಿ ಪರಿವರ್ತನೆಯಾದುದು ಹೇಗೆ? ಏಕೆ? ಇಂಥದ್ದೊಂದು ಅವಲೋಕನ ಸಾರ್ವಜನಿಕವಾಗಿ ನಡೆಯಬೇಕಿದೆ. ನಿಜವಾಗಿ,
ಹಿಜಾಬ್ ಪ್ರಕರಣವನ್ನು ರಾಜ್ಯ ಸರಕಾರವು ಆ ಕಾಲೇಜಿನ ಸಮಸ್ಯೆ ಮಾತ್ರವಾಗಿ ಕಂಡು ಅಲ್ಲಿಯೇ ಪರಿಹರಿಸಿ ಬಿಡದೇ ಇದ್ದುದರ ಹಿಂದೆ ರಾಜಕೀಯ ದುರುದ್ದೇಶ ಇತ್ತು ಅನ್ನುವುದನ್ನು ಆ ಬಳಿಕದ ಬೆಳವಣಿಗೆಗಳು ಸಾರಿ ಸಾರಿ ಹೇಳಿವೆ. ಹಿಜಾಬ್ ಹೆಸರಲ್ಲಿ ಮುಸ್ಲಿಮ್ ದ್ವೇಷ ಭಾವನೆಯನ್ನು ಕೆರಳಿಸುವುದು ಮತ್ತು ಆ ಮೂಲಕ ಹಿಂದೂಗಳನ್ನು ಧ್ರುವೀಕರಿಸುವುದು ಉದ್ದೇಶವಾಗಿತ್ತು. ಅದಕ್ಕಾಗಿ ಉಡುಪಿಯ ವಿದ್ಯಾರ್ಥಿನಿಯರನ್ನು ಬಲಿ ನೀಡಲು ಸರಕಾರ ಮುಂದಾಯಿತು. ಹಿಜಾಬ್ ವಿರುದ್ಧ ರಾಜ್ಯದಾದ್ಯಂತ ವಿದ್ಯಾರ್ಥಿಗಳನ್ನು ಸರಕಾರ ಪ್ರಚೋದಿಸಿತು. ಬೀದಿಗಿಳಿಸಿತು. 6 ಕೋಟಿ ಕನ್ನಡಿಗರನ್ನು ಹಿಂದೂ-ಮುಸ್ಲಿಮ್ ಎಂಬುದಾಗಿ ವಿಭಜಿಸಿತು.
ಆದರೆ ಇವತ್ತು ಅದೇ ಮಂದಿ ಜನಿವಾರ ನಿರಾಕರಣೆಯನ್ನು ಪ್ರಶ್ನಿಸುತ್ತಿದ್ದಾರೆ. ಪರೀಕ್ಷೆಗೂ ಜನಿವಾರಕ್ಕೂ ಏನು ಸಂಬಂಧ ಎಂದು ಪ್ರಶ್ನಿಸುತ್ತಿದ್ದಾರೆ. ಆದರೆ, ಯುನಿಫಾರ್ಮ್ ನ ಭಾಗಿವಾಗಿ ಭುಜದಲ್ಲಿರುವ ಶಾಲನ್ನು ತಲೆಗೆ ಹಾಕಿಕೊಂಡರೆ ಏನು ತೊಂದರೆ ಎಂದು ಮೂರು ವರ್ಷಗಳ ಹಿಂದೆ ವಿದ್ಯಾರ್ಥಿನಿಯರು ಪ್ರಶ್ನಿಸಿದಾಗ ಇದೇ ಮಂದಿ ಈ ಪ್ರಶ್ನೆಯನ್ನೇ ಕಟಕಟೆಯಲ್ಲಿ ನಿಲ್ಲಿಸಿದ್ದರು. ಸಮಾನತೆಯ ವಿರೋಧಿ ಎಂದಿದ್ದರು. ಅಂದಹಾಗೆ,
ದ್ವೇಷದ ಆಧಾರದಲ್ಲಿ ನ್ಯಾಯವನ್ನು ವಿತರಿಸಲು ಹೊರಟರೆ ಅಂತಿಮವಾಗಿ ದ್ವೇಷಕ್ಕೇ ಮುಖಭಂಗವಾಗುತ್ತದೆ ಅನ್ನುವುದನ್ನು ಈ ಜನಿವಾರ ಪ್ರಕರಣ ಎತ್ತಿ ತೋರಿಸಿದೆ.
No comments:
Post a Comment