Monday, 5 May 2025

ಧರ್ಮರಾಜಕಾರಣದ ಅಪಾಯವನ್ನು ಬಿಚ್ಚಿಟ್ಟ ದ.ಕ. ಜಿಲ್ಲೆ




ದಕ್ಷಿಣ ಕನ್ನಡ ಜಿಲ್ಲೆ  ಒಂದೇ ವಾರದಲ್ಲಿ ಎರಡು ಕಾರಣಗಳಿಗಾಗಿ ರಾಜ್ಯಮಟ್ಟದಲ್ಲಿ ಸುದ್ದಿಗೀಡಾಗಿದೆ. ಒಂದು- ಹಿಂಸೆಯ ಕಾರಣಕ್ಕಾದರೆ, ಇನ್ನೊಂದು- ಶೈಕ್ಷಣಿಕ ಸಾಧನೆಯ ಕಾರಣಕ್ಕೆ.

ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶದಲ್ಲಿ ದ.ಕ. ಜಿಲ್ಲೆ  ರಾಜ್ಯದಲ್ಲೇ  ಮೊದಲ ಸ್ಥಾನ ಪಡೆದಿದೆ. ಸಾಧಕ ವಿದ್ಯಾರ್ಥಿಗಳ ಶೇಕಡಾವಾರು ಅಂಕಗಳು ಮತ್ತು ಫೋಟೋಗಳು ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿವೆ. ಇನ್ನೊಂದು ಕಡೆ, ಹೆತ್ತವರು ತಮ್ಮ ಮಕ್ಕಳ ಭವಿಷ್ಯ ರೂಪಿಸುವ ಕಾಲೇಜುಗಳ ಹುಡುಕಾಟದಲ್ಲಿದ್ದಾರೆ. ಈ ಫಲಿತಾಂಶಕ್ಕಿಂತ  ನಾಲ್ಕೈದು  ದಿನಗಳ ಮೊದಲು ಇದೇ ಜಿಲ್ಲೆಯಲ್ಲಿ ಎರಡು ಹತ್ಯೆಗಳು ನಡೆದುವು. ಮಾನಸಿಕ ಅಸ್ವಸ್ಥನಾದ ಕೇರಳದ ಅಶ್ರಫ್ ಎಂಬವರನ್ನು ಕ್ರಿಕೆಟ್ ಆಡುತ್ತಿದ್ದ ಗುಂಪು ಥಳಿಸಿ ಹತ್ಯೆ ಮಾಡಿತು. ಈ ದುಷ್ಕರ್ಮಿಗಳಿಗೆ ಈ ಅಶ್ರಫ್‌ನ ಪರಿಚಯವೇ ಇರಲಿಲ್ಲ. ಈ ಅಶ್ರಫ್‌ಗೂ ಈ ಕ್ರಿಕೆಟಿಗರ ಪರಿಚಯವೇ ಇರಲಿಲ್ಲ. ಹೀಗೆ ಪರಸ್ಪರ ಪರಿಚಯವೇ ಇಲ್ಲದ ಮತ್ತು ದ್ವೇಷಭಾವ ಹೊಂದುವುದಕ್ಕೆ ಕಾರಣಗಳೇ ಇಲ್ಲದ ವ್ಯಕ್ತಿಯನ್ನು ಕೊಲೆ ಮಾಡುವುದಕ್ಕೆ ಅಶ್ರಫ್‌ನ ಧರ್ಮದ ಹೊರತಾಗಿ ಬೇರೆ ಯಾವ ಕಾರಣವೂ ಇರಲಿಲ್ಲ. ಈ ಹತ್ಯೆಗಿಂತ ವಾರ ಮೊದಲು ಕಾಶ್ಮೀರದಲ್ಲಿ ಭಯೋತ್ಪಾದಕರು 26 ಮಂದಿಯನ್ನು ಕೊಂದಿದ್ದರು. ಈ ಕ್ರೌರ್ಯದ ಬಳಿಕ ಮುಸ್ಲಿಮ್ ದ್ವೇಷದ ಪ್ರಚಾರವೊಂದು ಸೋಶಿಯಲ್ ಮೀಡಿಯಾದಲ್ಲಿ ಎಗ್ಗಿಲ್ಲದೇ ಹರಿದಾಡಿತ್ತು. ಟಿವಿ. ಚಾನೆಲ್‌ಗಳೂ ಈ ದ್ವೇಷ ಹರಡುವುದರಲ್ಲಿ ಹಿಂದೆ ಬಿದ್ದಿರಲಿಲ್ಲ. ಭಯೋತ್ಪಾದಕರ ಕೃತ್ಯಕ್ಕೆ 20 ಕೋಟಿ ಭಾರತೀಯ ಮುಸ್ಲಿಮರು ಹೊಣೆ ಹೊರಬೇಕು ಎಂಬ ರೀತಿಯ ಅತೀ ಅಪಾಯಕಾರಿ ವಾದವೊಂದನ್ನು ಕೋಮುವಾದಿಗಳು ತೇಲಿಬಿಟ್ಟಿದ್ದರು. ಈ ದ್ವೇಷದ ಪರಿಣಾಮವಾಗಿ ದೇಶದಾದ್ಯಂತ ಕಾಶ್ಮೀರಿಗಳು ಮತ್ತು ಇತರ ಮುಸ್ಲಿಮರು ಹಲ್ಲೆ, ನಿಂದನೆ, ದೌರ್ಜನ್ಯಕ್ಕೆ ತುತ್ತಾಗುತ್ತಿದ್ದಾಗಲೇ ಜಿಲ್ಲೆಯಲ್ಲಿ ಈ ಗುಂಪು ಹತ್ಯೆ ನಡೆದಿತ್ತು. ಆದರೆ,

ಜಿಲ್ಲೆಯಲ್ಲಿ ನಡೆದ ಈ ಮೊಟ್ಟಮೊದಲ ಗುಂಪು ಹತ್ಯೆಯನ್ನು ಮುಸ್ಲಿಮರು ಅತ್ಯಂತ ತಾಳ್ಮೆಂಯಿಂದ  ನಿಭಾಯಿಸಿದರು. ಅವರು ಜಿಲ್ಲಾ  ಬಂದ್‌ಗೆ ಕರೆ ಕೊಡಲಿಲ್ಲ. ಅಶ್ರಫ್ ಹತ್ಯೆಗೆ ಪ್ರತೀಕಾರವಾಗಿ ಹಿಂದೂಗಳ ಮೇಲೆ ಹಲ್ಲೆ  ನಡೆಸಿರಲಿಲ್ಲ. ಶವ ಮೆರವಣಿಗೆ ಮಾಡಲಿಲ್ಲ. ಒಂದೇ ಒಂದು ಪ್ರಚೋದನಕಾರಿ ಭಾಷಣ ಮಾಡಲಿಲ್ಲ. ಪಾಕಿಸ್ತಾನ್ ಝಿಂದಾಬಾದ್ ಎಂದು ಕೂಗಿದ ಕಾರಣಕ್ಕಾಗಿ ಈ ಹತ್ಯೆ ನಡೆಸಲಾಗಿದೆ ಎಂಬ ಅರ್ಥ ಬರುವಂತೆ ಗೃಹಸಚಿವ ಪರಮೇಶ್ವರ್ ಹೇಳಿಕೆ ಕೊಟ್ಟು ಸಮರ್ಥನೆಗಿಳಿದಾಗಲೂ ಮುಸ್ಲಿಮರು ಪ್ರಚೋದನೆಗೆ ಒಳಗಾಗಲಿಲ್ಲ. ಸ್ಥಳೀಯ ಶಾಸಕರಾಗಲಿ ಉಸ್ತುವಾರಿ ಸಚಿವರಾಗಲಿ ಸ್ಥಳಕ್ಕೆ ಆಗಮಿಸದೇ ಇದ್ದಾಗಲೂ ಮುಸ್ಲಿಮರು ಆಕ್ರೋಶದಿಂದ ಕಾನೂನು ಕೈಗೆತ್ತಿಕೊಳ್ಳಲಿಲ್ಲ. ಈ ಇಡೀ ಪ್ರಕರಣವನ್ನು ಮುಚ್ಚಿ ಹಾಕಲು ಸ್ಥಳೀಯ ಠಾಣಾಧಿಕಾರಿ ಪ್ರಯತ್ನಿಸಿದಾಗಲೂ ಮುಸ್ಲಿಮರು ಅಶಾಂತಿಗೆ ಕಾರಣವಾಗುವ ಏನನ್ನೂ ಮಾಡಲಿಲ್ಲ. ಆದರೆ,

ಈ ಹತ್ಯೆ ನಡೆದ ನಾಲ್ಕೈದು  ದಿನಗಳ ಬಳಿಕ ರೌಡಿ ಶೀಟರ್ ಸುಹಾಸ್ ಶೆಟ್ಟಿಯ ಹತ್ಯೆ ಇದೇ ಜಿಲ್ಲೆಯಲ್ಲಿ ನಡೆದಾಗ ಇಡೀ ಚಿತ್ರಣವೇ ಬದಲಾಯಿತು. ಈತ ಫಾಝಿಲ್ ಎಂಬ ಅಮಾಯಕ ಯುವಕನ ಕೊಲೆಯ ನಂಬರ್ ವನ್ ಆರೋಪಿ. ಕೀರ್ತಿ ಎಂಬ ಯುವಕನ ಹತ್ಯೆಯ ಆರೋಪಿ. ಅಲ್ಲದೇ ಐದರಷ್ಟು ಕ್ರಿಮಿನಲ್ ಪ್ರಕರಣಗಳ ಆರೋಪಿ. ಈತನ ವಿರುದ್ಧ ಬಿಜೆಪಿ ಸರಕಾರವೇ ರೌಡಿಶೀಟರ್ ಪಟ್ಟಿ ತೆರೆದಿತ್ತು. ಈಗಿನ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರೇ ಆಗ ಗೃಹಸಚಿವರಾಗಿದ್ದರು. ಆದರೆ, ಸುಹಾಸ್ ಶೆಟ್ಟಿಯ ಹತ್ಯೆಯ ಬೆನ್ನಿಗೇ ಇದೇ ಅಶೋಕ್ ಜಿಲ್ಲೆಗೆ ದೌಡಾಯಿಸಿದರು. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಆಗಮಿಸಿದರು. ಈತ ಇನ್ನೊಂದು ಗ್ಯಾಂಗ್‌ನಿಂದ  ಹತ್ಯೆಗೆ ಒಳಗಾಗಿದ್ದರೂ ಬಿಜೆಪಿ ರಾಜ್ಯಾಧ್ಯಕ್ಷರಿಂದ ಹಿಡಿದು ಸ್ಥಳೀಯ ಬಿಜೆಪಿ ಶಾಸಕರವರೆಗೆ ಎಲ್ಲರೂ ಇದನ್ನು ಜಿಹಾದಿ ಕೃತ್ಯ, ಇಸ್ಲಾಮಿಕ್ ಆತಂಕವಾದ ಎಂದೆಲ್ಲಾ ಹೇಳಿಕೆ ಕೊಟ್ಟರು. ಸಂಘಪರಿವಾರ ಜಿಲ್ಲಾ ಬಂದ್‌ಗೆ ಕರೆ ಕೊಟ್ಟಿತು. ಜಿಲ್ಲೆಯ ನಾಲ್ಕೈದು  ಕಡೆ ಮುಸ್ಲಿಮರನ್ನು ಚೂರಿಯಿಂದ ಇರಿಯಲಾಯಿತು. ಬೆಳ್ತಂಗಡಿಯ ಶಾಸಕ ಹರೀಶ್ ಪೂಂಜಾ ಅಂತೂ ಅತ್ಯಂತ ಪ್ರಚೋದನಕಾರಿಯಾಗಿ ಭಾಷಣ ಮಾಡಿದರು. ಮುಸ್ಲಿಮರನ್ನು ಹೀನಾಯವಾಗಿ ನಿಂದಿಸಿದರು.

ನಿಜವಾಗಿ, ಈ ಎರಡೂ ಘಟನೆಗಳಲ್ಲಿ ಒಂದಂತೂ  ಸ್ಪಷ್ಟವಾಗಿದೆ. ಮುಸ್ಲಿಮರು ಶಾಂತಿಭಂಗ  ಮಾಡುವವರು, ಕಾನೂನು ಭಂಜಕರು, ಹಿಂದೂ ವಿರೋಧಿಗಳು ಎಂಬ ಬಿಜೆಪಿ ಮತ್ತು ಅವರ ಬೆಂಬಲಿಗರ ವಾದ ಅಪ್ಪಟ ಸುಳ್ಳು ಅನ್ನುವುದನ್ನು ಈ ಘಟನೆಗಳು ತೋರಿಸಿವೆ. ಸರಕಾರದಿಂದ ಹಿಡಿದು ಸ್ಥಳೀಯ ಪೊಲೀಸರ ವರೆಗೆ ಎಲ್ಲರೂ ನ್ಯಾಯಯುತವಾಗಿ ನಡಕೊಳ್ಳದಿರುವಾಗಲೂ ಮುಸ್ಲಿಮರು ಕಾನೂನನ್ನು ಕೈಗೆತ್ತಿಕೊಳ್ಳಲೇ ಇಲ್ಲ. ಹಿಂಸೆಗೂ ಇಳಿಯಲಿಲ್ಲ. ಇದೇವೇಳೆ, ಸುಹಾಸ್ ಶೆಟ್ಟಿಯ ವಿಷಯದಲ್ಲಿ ಬಿಜೆಪಿ ಮತ್ತು ಅದರ ಬೆಂಬಲಿಗರು ಕಾನೂನುಬಾಹಿರವಾಗಿ ನಡಕೊಂಡರು. ಪ್ರಚೋದನಕಾರಿ ಭಾಷಣ ಮಾಡಿದರು. ಮುಸ್ಲಿಮರು ಇರಿತಕ್ಕೂ ಒಳಗಾದರು. ಆದ್ದರಿಂದ,

ನಾಗರಿಕ ಸಮಾಜ ಈ ಎರಡನ್ನೂ ತಾಳ್ಮೆಯಿಂದ ಅವಲೋಕನಕ್ಕೆ ಒಳಪಡಿಸಬೇಕು. ಸಮಾಜದ ಶಾಂತಿಯನ್ನು ಕದಡಲು ಯಾರು ಶ್ರಮಿಸುತ್ತಿದ್ದಾರೆ ಮತ್ತು ಅವರ ಗುರಿ ಯಾವುದು ಎಂಬುದರ ಬಗ್ಗೆ ನಿಷ್ಪಕ್ಷ ಪಾತವಾಗಿ ಚಿಂತನೆ ನಡೆಸಬೇಕು. ತಮ್ಮ ರಾಜಕೀಯ ದುರುದ್ದೇಶವನ್ನು ಈಡೇರಿಸಿಕೊಳ್ಳುವುದಕ್ಕಾಗಿ ಮತ್ತು ತಮ್ಮ ಕಾನೂನುಬಾಹಿರ ದಂಧೆಗಳನ್ನು ಅಡಗಿಸುವುದಕ್ಕಾಗಿ ಮುಸ್ಲಿಮರನ್ನು ಸದಾ ಕಟಕಟೆಯಲ್ಲಿ ನಿಲ್ಲಿಸುವ ಪ್ರಯತ್ನಗಳು ನಡೆಯುತ್ತಿವೆಯೇ ಎಂಬುದಾಗಿ ಆಲೋಚಿಸಬೇಕು. ಯಾಕೆಂದರೆ,

ಸುಸಜ್ಜಿತ ವಿಮಾನ ನಿಲ್ದಾಣ, ರೈಲ್ವೇ ನಿಲ್ದಾಣ ಮತ್ತು ಬಂದರು ನಿಲ್ದಾಣವನ್ನು ಹೊಂದಿರುವ ಹೊರತಾಗಿಯೂ ದ ಕ ಜಿಲ್ಲೆ   ಉದ್ಯೋಗವನ್ನು ಸೃಷ್ಟಿಸುತ್ತಿಲ್ಲ. ಕಂಪೆನಿಗಳು ಜಿಲ್ಲೆಗೆ ಬರುತ್ತಿಲ್ಲ. ಎಂಜಿನಿಯರಿಂಗ್  ಮತ್ತು ಮೆಡಿಕಲ್ ಕಾಲೇಜುಗಳು ಧಾರಾಳ ಇದ್ದರೂ ಇಲ್ಲಿ ಕಲಿತ ಮಕ್ಕಳು ಉದ್ಯೋಗಕ್ಕಾಗಿ ಹೊರದೇಶಕ್ಕೋ ಹೊರ ರಾಜ್ಯಗಳಿಗೋ ಹೋಗಬೇಕಾದ ಅನಿವಾರ್ಯತೆ ಇದೆ. ವಿದೇಶದಲ್ಲಿ ದುಡಿಯುತ್ತಿರುವ ಮಗ ಅಥವಾ ಮಗಳೊಂದಿಗೆ ದಿನಾ ವೀಡಿಯೋ ಕರೆ ಮೂಲಕ ಮಾತಾಡಿ ತೃಪ್ತಿಪಟ್ಟುಕೊಳ್ಳಬೇಕಾದಂಥ ಹಿರಿಯ ಹೆತ್ತವರು ಜಿಲ್ಲೆಯಲ್ಲಿದ್ದಾರೆ. ಇದಕ್ಕೆ ಧರ್ಮದ ಮುಖವಾಡ ತೊಟ್ಟು ರಾಜಕೀಯ ಗುರಿ ಈಡೇರಿಸಿಕೊಳ್ಳುತ್ತಿರುವ ರಾಜಕಾರಣಿಗಳೇ ಕಾರಣ. ಅವರ ಮಕ್ಕಳಾರೂ ಈ ಹಿಂಸಾಕೃತ್ಯಗಳಲ್ಲಿ ಭಾಗಿಯಾಗುವುದಿಲ್ಲ. ತಮ್ಮ ಮಕ್ಕಳನ್ನು ವಿದೇಶದಲ್ಲೋ  ಹೊರರಾಜ್ಯದಲ್ಲೋ  ಓದಿಸುತ್ತಾ ಮತ್ತು ನೌಕರಿಗಾಗಿ ವಿದೇಶಕ್ಕೆ ಕಳುಹಿಸಿಕೊಡುತ್ತಾ ಜಿಲ್ಲೆಯ ಬಡಪಾಯಿ ಯುವಕರನ್ನು ಅಪರಾಧ ಕೃತ್ಯಗಳಿಗೆ ಈ ರಾಜಕಾರಣಿಗಳು ಬಳಸಿಕೊಳ್ಳುತ್ತಿದ್ದಾರೆ. ಹತ್ಯೆಗೀಡಾದ ಸುಹಾಸ್ ಶೆಟ್ಟಿಯ ಬದುಕಿನಲ್ಲೂ ಇದಕ್ಕೆ ಆಧಾರವಿದೆ. 31 ವರ್ಷವಾಗಿಯೂ ಮದುವೆಯಾಗಿಲ್ಲದ, ಅನಾರೋಗ್ಯ ಪೀಡಿತ ಹೆತ್ತವರೊಂದಿಗೆ ಬಡತನದ ಬದುಕನ್ನೇ ಬದುಕುತ್ತಿದ್ದ ಸುಹಾಸ್ ಶೆಟ್ಟಿಯನ್ನು ಒಂದು ಕಡೆ ತಮ್ಮ ರಾಜಕೀಯ ಗುರಿ ಸಾಧನೆಗಾಗಿ ಬಳಸಿಕೊಳ್ಳುತ್ತಲೇ ಇನ್ನೊಂದು ಕಡೆ ರೌಡಿಶೀಟರ್ ಖಾತೆಯನ್ನೂ ಇವೇ ರಾಜಕಾರಣಿಗಳು ತೆರೆದರು. ಅಪರಾಧ ಜಗತ್ತಿಗೆ ಇಳಿದ ಸುಹಾಸ್ ಶೆಟ್ಟಿಗೆ ಸಹಜವಾಗಿಯೇ ವೈರಿಗಳೂ ಹುಟ್ಟಿಕೊಂಡರು. ರಾಜಕಾರಣಿಗಳ ಮಕ್ಕಳಂತೆ ಚೆನ್ನಾಗಿ ಓದದೆ, ಕೈತುಂಬಾ ಸಂಬಳ ಪಡೆಯುವ ಉದ್ಯೋಗವನ್ನೂ ಮಾಡಲಾಗದೇ ಮತ್ತು ವೃದ್ಧ ಹೆತ್ತವರನ್ನು ಚೆನ್ನಾಗಿ ನೋಡಿಕೊಳ್ಳಲಾಗದೇ ಕೊನೆಗೆ ಎದುರಾಳಿ ಗ್ಯಾಂಗ್‌ನಿಂದ  ಆತ ಹತ್ಯೆಗೀಡಾದ. ಸದ್ಯ,

ಜಿಲ್ಲೆಯ ನಾಗರಿಕರು ಪ್ರಜ್ಞಾವಂತರಾಗಬೇಕಿದೆ. ಧರ್ಮದ ಹೆಸರಲ್ಲಿ ಯುವಕರನ್ನು ಅಪರಾಧ ಜಗತ್ತಿಗೆ ತಳ್ಳುವ ರಾಜಕಾರಣಿಗಳ ಕುತಂತ್ರವನ್ನು ಬಹಿರಂಗವಾಗಿ ಪ್ರಶ್ನಿಸುವ ಧೈರ್ಯವನ್ನು ತೋರಿಸಬೇಕಿದೆ. ನಿಮ್ಮ ಮಕ್ಕಳ ನೇತೃತ್ವದಲ್ಲೇ  ಈ ಧರ್ಮರಕ್ಷಣೆಯ ಕೆಲಸ ಪ್ರಾರಂಭವಾಗಲಿ ಎಂದು ಯಾವಾಗ ನಾಗರಿಕರು ಧ್ವನಿ ಎತ್ತರಿಸಿ ರಾಜಕಾರಣಿಗಳಲ್ಲಿ ಹೇಳಲು ಪ್ರಾರಂಭಿಸುತ್ತಾರೋ ಅಂದಿನಿಂದ  ಜಿಲ್ಲೆಯಲ್ಲಿ ಶಾಂತಿಯ ಪರ್ವ ಆರಂಭವಾಗಬಹುದು. ಮಾತ್ರವಲ್ಲ, ಯಾವಾಗ ಧರ್ಮದ್ವೇಷಿಗಳನ್ನು ಮತ್ತು ಪ್ರಚೋದನಕಾರಿ ಭಾಷಣಗಾರರನ್ನು ಸ್ಥಳದಲ್ಲೇ  ಪ್ರಶ್ನಿಸುವ ಧೈರ್ಯವನ್ನು ಜನರು ತೋರುತ್ತಾರೋ ನಿಧಾನಕ್ಕೆ ಧರ್ಮ ರಾಜಕಾರಣ ಬದಿಗೆ ಸರಿದು ಅಭಿವೃದ್ಧಿ ರಾಜಕಾರಣ ಮುನ್ನೆಲೆಗೆ ಬರಬಹುದು. ಬಡಪಾಯಿ ಯುವಕರ ಜೀವದೊಂದಿಗೆ ಚೆಲ್ಲಾಟ ನಡೆಸುವ ಧರ್ಮ ರಾಜಕಾರಣಕ್ಕೆ ಜನರು ಬೆನ್ನು ತಿರುಗಿಸದ ಹೊರತು ಜಿಲ್ಲೆಯಲ್ಲಿ ಶಾಂತಿ ಸಾಧ್ಯವಿಲ್ಲ. ಶಾಂತಿಯೇ ಇಲ್ಲದ ಜಿಲ್ಲೆಯಲ್ಲಿ ಉದ್ಯೋಗ ಸೃಷ್ಟಿಯೂ ಸಾಧ್ಯವಿಲ್ಲ.

No comments:

Post a Comment