ಕಾಶ್ಮೀರದ ಪೆಹಲ್ಗಾಮ್‌ನಲ್ಲಿ ನಡೆದ ಕ್ರೌರ್ಯವು ಭಯೋತ್ಪಾದನೆಯ ಅಪಾಯವನ್ನು ಜಗತ್ತಿನೆದುರು ತೆರೆದಿಟ್ಟರೆ, ಆ ಬಳಿಕದ ಬೆಳವಣಿಗೆಯು ಕೇಂದ್ರ ಸರಕಾರದ ಬೂಟಾಟಿಕೆಯನ್ನೂ ಬೆತ್ತಲೆ ಮಾಡಿದೆ. ಪಾಕಿಸ್ತಾನಿ ಪ್ರೇರಿತ ಭಯೋತ್ಪಾದನೆಯನ್ನು ಜಾಗತಿಕ ರಾಷ್ಟ್ರಗಳಿಗೆ ಮನವರಿಕೆ ಮಾಡುವುದಕ್ಕಾಗಿ ಮೋದಿ ಸರಕಾರ ಸರ್ವ ಪಕ್ಷಗಳ 7 ನಿಯೋಗಗಳನ್ನು ರಚಿಸಿದೆ. ಇದರಲ್ಲಿ ಕಾಂಗ್ರೆಸ್, ಎಡಪಕ್ಷಗಳು, ಎನ್‌ಸಿಪಿ, ಶಿವಸೇನೆ, ಟಿಎಂಸಿ, ಡಿಎಂಕೆ, ಬಿಜೆಪಿ ಸೇರಿದಂತೆ ವಿವಿಧ ಪಕ್ಷಗಳ 59 ಸದಸ್ಯರಿದ್ದಾರೆ. ಈ ನಿಯೋಗಗಳು ಅಮೇರಿಕ, ಯುರೋಪಿಯನ್ ರಾಷ್ಟ್ರಗಳು, ಆಫ್ರಿಕಾ, ಗಲ್ಫ್ ರಾಷ್ಟ್ರಗಳು, ವಿಶ್ವಸಂಸ್ಥೆಗೆ ಭೇಟಿ ನೀಡಿ ಪಾಕಿಸ್ತಾನ ಪ್ರೇರಿತ ಭಯೋತ್ಪಾದನೆಯನ್ನು ಮನವರಿಕೆ ಮಾಡಿಸುವುದು ಮತ್ತು ಜಾಗತಿಕ ರಾಷ್ಟ್ರಗಳನ್ನು ಭಾರತದ ಪರ ಒಲಿಸುವ ಕೆಲಸವನ್ನು ಮಾಡಲಿದೆ. ಈ ನಿಯೋಗಗಳಲ್ಲಿರುವ ಸದಸ್ಯರನ್ನು ನೋಡಿದರೆ ಮೋದಿ ಸರಕಾರವು ಅತ್ಯಂತ ಬುದ್ಧಿವಂತಿಕೆಯಿಂದ ಈ ತಂಡ ರಚಿಸಿದೆ ಅನ್ನುವುದು ಗೊತ್ತಾಗುತ್ತದೆ. ಬಹುತ್ವದಲ್ಲಿ ಏಕತೆಯನ್ನು ಸಾರುವ ಮತ್ತು ಸಬ್‌ಕಾ ಸಾಥ್ ಘೋಷಣೆಯನ್ನು ಸಮರ್ಥಿಸುವ ರೂಪದಲ್ಲಿ ಈ ತಂಡವನ್ನು ರಚಿಸಲಾಗಿದೆ. ಈ 59 ಸದಸ್ಯರಲ್ಲಿ ಗುಲಾಮ್ ನಬಿ ಆಝಾದ್, ಸಲ್ಮಾನ್ ಖುರ್ಷಿದ್, ಇ.ಬಿ. ಮುಹಮ್ಮದ್ ಬಶೀರ್, ಮಿಯಾ ಅಲ್ತಾಫ್ ಅಹ್ಮದ್, ಎಂ.ಜೆ. ಅಕ್ಬರ್, ಅಸದುದ್ದೀನ್ ಓವೈಸಿ ಸಹಿತ 10 ಮಂದಿ ಮುಸ್ಲಿಮರಿದ್ದಾರೆ. ಪ್ರಶ್ನೆ ಇರೋದೇ ಇಲ್ಲಿ.
ಕೇಂದ್ರ ಸಚಿವ ಸಂಪುಟದಲ್ಲಿ ಒಬ್ಬನೇ ಒಬ್ಬ ಮುಸ್ಲಿಮರನ್ನು ಸೇರಿಸಿಕೊಳ್ಳದ ಮೋದಿ ಸರಕಾರವು ವಿದೇಶಿ ರಾಷ್ಟ್ರಗಳಲ್ಲಿ ಭಾರತದ ವರ್ಚಸ್ಸನ್ನು ಹೆಚ್ಚಿಸುವ ತಂಡಕ್ಕೆ ಮುಸ್ಲಿಮರನ್ನು ಆರಿಸಿದ್ದೇಕೆ? ವಿದೇಶಿಯರನ್ನು ಪ್ರಭಾವಿತಗೊಳಿಸಬಲ್ಲಷ್ಟು ತಜ್ಞರು ಮತ್ತು ನಿಪುಣ ನಾಯಕರು ಮುಸ್ಲಿಮ್ ಸಮುದಾಯದಲ್ಲಿ ಇದ್ದಾರೆ ಎಂದಾದರೆ, ಅವರನ್ನೇಕೆ ಸಚಿವ ಸಂಪುಟದಿಂದ ಹೊರಗಿಡಲಾಗಿದೆ? ಹಾಗಂತ,
ಬಿಜೆಪಿಯ 240ರಷ್ಟು ಸಂಸದರಲ್ಲಿ ಒಬ್ಬನೇ ಒಬ್ಬ ಮುಸ್ಲಿಮ್ ಸಂಸದ ಇಲ್ಲದೇ ಇರುವುದರಿಂದ ಸಂಪುಟಕ್ಕೆ ಅವರನ್ನು ಆಯ್ಕೆ ಮಾಡಲಾಗಿಲ್ಲ ಎಂದು ವಾದಿಸುವ ಹಾಗೆಯೂ ಇಲ್ಲ. ನಿರ್ಮಲಾ ಸೀತಾರಾಮನ್ ಕೂಡಾ ಪಾರ್ಲಿಮೆಂಟ್‌ಗೆ ಆಯ್ಕೆಯಾಗಿಲ್ಲ. ಜೆಪಿ ನಡ್ಡಾ ಕೂಡಾ ಪಾರ್ಲಿಮೆಂಟ್‌ಗೆ ಚುನಾಯಿತರಾಗಿಲ್ಲ. ಎಸ್. ಜೈಶಂಕರ್, ಅಶ್ವಿನಿ ವೈಷ್ಣವ್, ಹರ್‌ದೀಪ್ ಸಿಂಗ್ ಪುರಿ ಕೂಡಾ ಚುನಾವಣಾ ರಾಜಕೀಯದಲ್ಲಿ ಆಯ್ಕೆಯಾಗಿ ಬಂದವರಲ್ಲ. ಇವರನ್ನೆಲ್ಲ ರಾಜ್ಯಸಭಾ ಸದಸ್ಯರನ್ನಾಗಿ ಮಾಡಿ ಆ ಬಳಿಕ ಕೇಂದ್ರ ಸಚಿವ ಸಂಪುಟದಲ್ಲಿ ಸೇರಿಸಿಕೊಳ್ಳಲಾಗಿದೆ. ಹೀಗಿರುವಾಗ ಮುಸ್ಲಿಮರನ್ನು ಮಾತ್ರ ಇಂಥ ಪ್ರಕ್ರಿಯೆಯಿಂದ ಹೊರಗಿಟ್ಟಿರುವುದೇಕೆ? ಸಮರ್ಥ ಮುಸ್ಲಿಮ್ ನಾಯಕರನ್ನು ರಾಜ್ಯಸಭೆಗೆ ಆಯ್ಕೆ ಮಾಡಿ ಬಳಿಕ ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಬಹುದಿತ್ತಲ್ಲವೇ? ಇಂಥ ಅವಕಾಶ ಇದ್ದೂ ಮುಸ್ಲಿಮರನ್ನು ಸೇರಿಸಿಕೊಳ್ಳದ ಮೋದಿ ಸರಕಾರವು ವಿದೇಶಕ್ಕೆ ಕಳುಹಿಸುವ ತಂಡದಲ್ಲಿ ಮುಸ್ಲಿಮರನ್ನು ಸೇರಿಸಿಕೊಂಡಿರುವುದರ ಅರ್ಥ ಏನು? ಜಗತ್ತನ್ನು ಮೂರ್ಖಗೊಳಿಸುವುದೇ? ತನ್ನ ಸರಕಾರವು ಬಹುತ್ವದಲ್ಲಿ ಏಕತೆಯನ್ನು, ಸಾಮಾಜಿಕ ನ್ಯಾಯವನ್ನು, ಸಮಾನ ಪ್ರಾತಿನಿಧ್ಯವನ್ನು ಭಾರತದಲ್ಲಿ ನೀಡುತ್ತಿದೆ ಮತ್ತು ಎಲ್ಲರನ್ನೂ ಒಳಗೊಳಿಸಿಕೊಂಡು ಹೋಗುತ್ತಿದೆ ಎಂಬ ಸಂದೇಶವನ್ನು ಸಾರುವುದೇ? ಇದು ಬೂಟಾಟಿಕೆ ಅಲ್ಲವೇ? ದೇಶದಲ್ಲಿ ಅಂಥದ್ದೊಂದು ಪರಿಸ್ಥಿತಿ ಇದೆಯೇ? 20 ಕೋಟಿ ಬೃಹತ್ ಜನಸಂಖ್ಯೆಯ ಮುಸ್ಲಿಮ್ ಸಮುದಾಯವನ್ನು ಎಲ್ಲ ರೀತಿಯಿಂದಲೂ ದಬ್ಬಾಳಿಕೆ ಮತ್ತು ಅಂಚಿಗೆ ತಳ್ಳುವ ನೀತಿಯನ್ನು ಪಾಲಿಸುತ್ತಾ ವಿದೇಶಕ್ಕೆ ತೆರಳುವ ತಂಡದಲ್ಲಿ ಮುಸ್ಲಿಮರನ್ನು ಸೇರಿಸಿಕೊಳ್ಳುವುದು ಕಣ್ಣೊರೆಸುವ ತಂತ್ರವಲ್ಲವೇ? ನಿಜವಾಗಿ,
ವಿದೇಶಕ್ಕೆ ತೆರಳುವ ತಂಡದಲ್ಲಿ 10 ಮಂದಿ ಮುಸ್ಲಿಮರನ್ನು ಸೇರಿಸಿಕೊಳ್ಳುವ ಮೂಲಕ ಮೋದಿ ಸರಕಾರ ಮತ್ತು ಬಿಜೆಪಿ ಒಂದನ್ನಂತೂ ಒಪ್ಪಿಕೊಂಡಂತಾಗಿದೆ. ಅದೇನೆಂದರೆ, ಭಾರತೀಯ ಮುಸ್ಲಿಮರನ್ನು ದೇಶದ್ರೋಹಿಗಳು, ಪಾಕಿಸ್ತಾನಿ ಬೆಂಬಲಿಗರು ಎಂದೆಲ್ಲಾ ತಾವೇ ಪ್ರಚಾರ ಮಾಡುತ್ತಾ ಬಂದಿರುವುದೆಲ್ಲ ಸುಳ್ಳು ಎಂದು ಬಹಿರಂಗವಾಗಿ ಒಪ್ಪಿಕೊಂಡಂತಾಗಿದೆ. ಅದರಲ್ಲೂ ಹೈದರಾಬಾದ್ ಸಂಸದ ಅಸದುದ್ದೀನ್ ಓವೈಸಿಯನ್ನು ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರು ಎಂದೂ ದೇಶಪ್ರೇಮಿಯಾಗಿ ಕಂಡದ್ದೇ ಇಲ್ಲ. ಅವರನ್ನು ಸದಾ ಹಿಂದೂ ವಿರೋಧಿಯಾಗಿ ಮತ್ತು ದೇಶದ್ರೋಹಿಯಾಗಿ ಅದು ಪ್ರತಿಬಿಂಬಿಸಿದೆ. ಹಾಗೆಯೇ ಇಂಡಿಯನ್ ಯೂನಿಯನ್ ಮುಸ್ಲಿಮ್ ಲೀಗ್ ಪಕ್ಷವನ್ನು ಅದು ಭಾರತೀಯ ಎಂದು ಒಪ್ಪಿಕೊಂಡದ್ದೇ ಕಡಿಮೆ. ಈ ಪಕ್ಷದ ನಿಷ್ಠೆಯನ್ನು ಪಾಕಿಸ್ತಾನದೊಂದಿಗೆ ಜೋಡಿಸಿ ಸದಾ ಅದು ಮಾತಾಡುತ್ತಲೇ ಬಂದಿದೆ. ಅದರ ಹಸಿರು ಧ್ವಜವನ್ನು ಎತ್ತಿಕೊಂಡು ಹಲವು ಬಾರಿ ಪಾಕಿಸ್ತಾನದ ಧ್ವಜ ಎಂದು ಸೋಶಿಯಲ್ ಮೀಡಿಯಾದಲ್ಲಿ ಅಪಪ್ರಚಾರವನ್ನು ನಡೆಸಿದೆ. ಲೀಗ್‌ನ ಜೊತೆ ರಾಜಕೀಯ ಮೈತ್ರಿ ಮಾಡಿಕೊಂಡಿರುವುದಕ್ಕಾಗಿ ಅದು ಕಾಂಗ್ರೆಸನ್ನು ಟೀಕಿಸುತ್ತಲೂ ಇದೆ. ಆದರೆ ವಿದೇಶಕ್ಕೆ ತೆರಳುವ ನಿಯೋಗದಲ್ಲಿ ಅದೇ ಮುಸ್ಲಿಮ್ ಲೀಗ್‌ನ ಇ.ಟಿ. ಮುಹಮ್ಮದ್ ಬಶೀರ್‌ರನ್ನು ಇದೇ ಮೋದಿ ಸರಕಾರ ಸೇರಿಸಿಕೊಂಡಿದೆ. ಒಂದುರೀತಿಯಲ್ಲಿ,
ಬಿಜೆಪಿಗೆ ಮುಸ್ಲಿಮರೆಂದರೆ, ಬಕೆಟ್ ತುಂಬಾ ಹಾಲು ಕೊಡುವ ಕಾಮದೇನು. ಅವರನ್ನು ಬೈದು ದೂರ ಇಟ್ಟರೆ ಓಟು ಸಿಗುತ್ತದೆ. ಸೇರಿಸಿಕೊಂಡರೆ ಅಂತಾರಾಷ್ಟ್ರೀಯವಾಗಿ ಅದರ ವರ್ಚಸ್ಸು ವೃದ್ಧಿಯಾಗುತ್ತದೆ. ಮೋದಿ ಸರಕಾರ ಕಳೆದ 11 ವರ್ಷಗಳಿಂದ ದೇಶವನ್ನು ಆಳುತ್ತಿದೆ. ಕಳೆದ ಲೋಕಸಭಾ ಚುನಾವಣೆಯ ಸಮಯದಲ್ಲಿ ಪ್ರಧಾನಿ ಮೋದಿಯವರು 173 ಚುನಾವಣಾ ಭಾಷಣ ಮಾಡಿದ್ದರು. ಇದರಲ್ಲಿ 110 ಭಾಷಣಗಳೂ ಇಸ್ಲಾಂಫೋಬಿಕ್ (ಇಸ್ಲಾಮ್ ಭೀತಿಯನ್ನು) ಹರಡುವಂಥದ್ದಾಗಿತ್ತು ಎಂದು ಹ್ಯೂಮನ್ ರೈಟ್ಸ್ ವಾಚ್ ಹೇಳಿರುವುದನ್ನು 2024 ಆಗಸ್ಟ್ 14ರಂದು ದಿ ಹಿಂದೂ ಪತ್ರಿಕೆ ಪ್ರಕಟಿಸಿತ್ತು. ಇದು ಓರ್ವ ಪ್ರಧಾನಿಯ ಸ್ಥಿತಿಯಾದರೆ, ಇನ್ನು ಅದರ ಬೆಂಬಲಿಗರ ಸ್ಥಿತಿ ಏನಿರಬಹುದು? ಈ ದೇಶದ 17 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಒಂದೋ ಬಿಜೆಪಿ ಸರಕಾರವಿದೆ ಅಥವಾ ಸರಕಾರದ ಪಾಲುದಾರ ಪಕ್ಷವಾಗಿ ಅಧಿಕಾರದಲ್ಲಿದೆ. ಈ ಸರಕಾರಗಳಲ್ಲಿ ಮುಸ್ಲಿಮರ ಪ್ರಾತಿನಿಧ್ಯ ಶೂನ್ಯ ಅನ್ನುವಷ್ಟು ಕಡಿಮೆಯಿದೆ. ಮುಸ್ಲಿಮರಿಗೆ ಮಾತ್ರ ಸಂಬಂಧಿಸಿರುವ ಹಜ್ಜ್ ಮತ್ತು ವಕ್ಫ್ ಇತ್ಯಾದಿ ಖಾತೆಗಳನ್ನೂ ಮುಸ್ಲಿಮರಿಗೆ ನೀಡದೇ ಬಹಿರಂಗ ಉದ್ಧಟತನವನ್ನು ಬಿಜೆಪಿ ಸರಕಾರಗಳು ಪ್ರದರ್ಶಿಸುತ್ತಿವೆ. ಇವತ್ತು ಕೇಂದ್ರ ಸಚಿವ ಸಂಪುಟದಲ್ಲಿ ಅಲ್ಪಸಂಖ್ಯಾತ ಖಾತೆಯನ್ನು ನಿಭಾಯಿಸುವುದೂ ಅಲ್ಪಸಂಖ್ಯಾತರೇ ಅಲ್ಲದ ಕಿರಣ್ ರಿಜಿಜು. ಈ ಹಿಂದಿನ ಸರಕಾರದಲ್ಲಿ ಇದೇ ಖಾತೆಯನ್ನು ಸ್ಮೃತಿ ಇರಾನಿ ನಿಭಾಯಿಸಿದ್ದರು. ಹೀಗಿರುವಾಗ ವಿದೇಶಕ್ಕೆ ತೆರಳುವ ನಿಯೋಗಗಳಲ್ಲಿ ಮಾತ್ರ 10 ಮಂದಿ ಮುಸ್ಲಿಮರನ್ನು ಸೇರಿಸಿಕೊಂಡಿರುವುದರ ಅರ್ಥವೇನು? ಕನಿಷ್ಠ ಮುಸ್ಲಿಮರಿಗೆ ಮಾತ್ರ ಸಂಬಂಧೋಇಸಿರುವ ಖಾತೆಗಳಿಗೂ ಮುಸ್ಲಿಮರನ್ನು ನೇಮಿಸಿದ ಮೋದಿ ಸರಕಾರದ ಈ ನಡೆಯಲ್ಲಿ ಪ್ರಾಮಾಣಿಕತೆಯನ್ನು ಹುಡುಕುವುದು ಹೇಗೆ? ನಿಜ ಏನೆಂದರೆ,
ಬಿಜೆಪಿಗೆ ಅಧಿಕಾರ ಬೇಕು. ಅದು ಕೈಗೂಡಬೇಕಾದರೆ ಮುಸ್ಲಿಮರನ್ನು ದ್ವೇಷಿಸಬೇಕು. ಅವರನ್ನು ಹಿಂದೂ ವಿರೋಧಿಗಳಂತೆ, ಪಾಕಿಸ್ತಾನಿಗಳಂತೆ, ದೇಶದ್ರೋಹಿಗಳಂತೆ ಸದಾ ಬಿಂಬಿಸುತ್ತಾ ಅದನ್ನೇ ಚರ್ಚಾ ವಿಷಯವಾಗಿ ಬಳಸಿಕೊಳ್ಳಬೇಕು. ತನ್ನ ಬೆಂಬಲಿಗರನ್ನು ಮುಸ್ಲಿಮರ ವಿರುದ್ಧ ಛೂ ಬಿಡುವುದು ಮತ್ತು ಮುಸ್ಲಿಮರ ಮೇಲಿನ ಹಲ್ಲೆ -ಹತ್ಯೆಗಳಿಗೆ ಪರೋಕ್ಷ ಬೆಂಬಲ ಸಾರುವುದನ್ನೂ ಮಾಡುತ್ತಿರಬೇಕು. ತನ್ನದೇ ಬೆಂಬಲಿಗರ ಒಂದು ತಂಡದಿಂದ ಮುಸ್ಲಿಮ್ ದ್ವೇಷಭಾಷಣ ಮಾಡಿಸುತ್ತಿರಬೇಕು. ಗೋಹತ್ಯೆ, ಲವ್ ಜಿಹಾದ್, ಲ್ಯಾಂಡ್ ಜಿಹಾದ್, ವ್ಯಾಪಾರ ಬಹಿಷ್ಕಾರ ಇತ್ಯಾದಿ ಇತ್ಯಾದಿಗಳನ್ನು ಆಗಾಗ ಪ್ರಚಾರಕ್ಕೆ ತರುತ್ತಿರಬೇಕು. ಇಂಥ ಅಪಪ್ರಚಾರಗಳನ್ನು ಚಾಲ್ತಿಯಲ್ಲಿಟ್ಟರೆ ತನ್ನ ಬೆಂಬಲಿಗರು ಇತರ ವಿಷಯಗಳತ್ತ ಗಮನ ಹರಿಸುವುದನ್ನು ನಿಲ್ಲಿಸುತ್ತಾರೆ ಎಂಬ ತಂತ್ರ ಅದರದು. ಆದರೆ,
ಆಂತರಿಕವಾಗಿ ಬಿಜೆಪಿ ನಾಯಕತ್ವಕ್ಕೆ ಇವೆಲ್ಲ ಸುಳ್ಳು ಅನ್ನುವುದು ಗೊತ್ತಿದೆ. ಮುಸ್ಲಿಮರು ದೇಶಪ್ರೇಮಿಗಳು, ಹಿಂದೂ ವಿರೋಧಿಗಳಲ್ಲ ಅನ್ನುವುದೂ ತಿಳಿದಿದೆ. ಆದರೆ ಇದನ್ನೆಲ್ಲ ಬಹಿರಂಗವಾಗಿ ಹೇಳಿದರೆ ಎಲ್ಲಿ ತನ್ನ ಅಸ್ತಿತ್ವಕ್ಕೆ ಧಕ್ಕೆಯಾಗುತ್ತದೋ ಎಂಬ ಭೀತಿ ಅದರದು. ಆದ್ದರಿಂದಲೇ, ದೇಶದೊಳಗೆ ಮುಸ್ಲಿಮರನ್ನು ದ್ವೇಷಿಸುತ್ತಾ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮುಸ್ಲಿಮರನ್ನು ಒಳಗೊಳಿಸುತ್ತಾ ಬೂಟಾಟಿಕೆಯಿಂದ ಅದು ನಡೆದುಕೊಳ್ಳುತ್ತಿದೆ. ದುರಂತ ಏನೆಂದರೆ, ಬಿಜೆಪಿಯ ತಳಮಟ್ಟದ ಕಾರ್ಯಕರ್ತರಿಗೆ ಈ ಬೂಟಾಟಿಕೆ ಅರ್ಥವೇ ಆಗಿಲ್ಲ. ಅವರು ಸೋಶಿಯಲ್ ಮೀಡಿಯಾದಲ್ಲೂ ಬಹಿರಂಗವಾಗಿಯೂ ಮುಸ್ಲಿಮ್ ದ್ವೇಷವನ್ನು ಹಂಚುತ್ತಾ ತಿರುಗುತ್ತಿದ್ದಾರೆ.
No comments:
Post a Comment