Thursday, 26 June 2025

11 ವರ್ಷಗಳ ಮೋದಿ ಆಡಳಿತಕ್ಕೆ ಕನ್ನಡಿ ಹಿಡಿದ ಟ್ರಂಪ್ ಮತ್ತು ಎಪಿಸಿಆರ್




ಒಂದೇ ವಾರದೊಳಗೆ ಒಂದು ವರದಿ, ಒಂದು ತನಿಖಾ ವರದಿ ಮತ್ತು ಒಂದು ಹೇಳಿಕೆ ಬಿಡುಗಡೆಗೊಂಡಿದೆ. ಪ್ರಧಾನಿ ನರೇಂದ್ರ ಮೋದಿಯವರ ೧೧ ವರ್ಷಗಳ ಆಡಳಿತವನ್ನು ಅವಲೋಕನಕ್ಕೆ ಒಡ್ಡಬಹುದಾದ ಅತ್ಯಂತ ಮಹತ್ವದ ಬೆಳವಣಿಗೆಯಾಗಿ ಇದನ್ನು ಪರಿಗಣಿಸಬಹುದಾಗಿದೆ.

1. ಸ್ವಿಸ್ ಬ್ಯಾಂಕ್‌ನಲ್ಲಿ ಭಾರತೀಯರ ದುಡ್ಡು ಹಿಂದಿನ ವರ್ಷಗಳಿಗಿಂತ 3 ಪಟ್ಟು ಹೆಚ್ಚಳವಾಗಿದೆ. ೨೦೨೩ರಲ್ಲಿ ಸ್ವಿಸ್ ಬ್ಯಾಂಕ್‌ನಲ್ಲಿ ಭಾರತೀಯರು 9771 ಕೋಟಿ ರೂಪಾಯಿಯನ್ನು ಠೇವಣಿಯಾಗಿ ಇಟ್ಟಿದ್ದರು. 2024ರಲ್ಲಿ ಇದು 37600 ಕೋಟಿ ರೂಪಾಯಿಯಾಗಿ ಏರಿಕೆಯಾಗಿದೆ.

2. ಎ.ಪಿ.ಸಿ.ಆರ್. ಅಥವಾ ಅಸೋಸಿಯೇಶನ್ ಫಾರ್ ಪ್ರೊಟೆಕ್ಷನ್ ಸಿವಿಲ್ ರೈಟ್ಸ್ ಮತ್ತು ಕ್ವಿಲ್ ಫೌಂಡೇಶನ್ ಜಂಟಿಯಾಗಿ ಸಂಗ್ರಹಿಸಿದ ವರದಿಯ ಪ್ರಕಾರ, 2024 ಜೂನ್ 7ರಿಂದ 2025 ಜೂನ್ 7 ವರೆಗಿನ ಈ ಒಂದು ವರ್ಷದಲ್ಲಿ ದೇಶದಲ್ಲಿ 947 ರಷ್ಟು ದ್ವೇಷಾಧಾರಿತ ಘಟನೆಗಳು ನಡೆದಿವೆ. ಇದರಲ್ಲಿ 602ರಷ್ಟು ಅಪರಾಧ ಪ್ರಕರಣಗಳಾದರೆ ೩೪೫ ದ್ವೇಷಭಾಷಣಗಳು ನಡೆದಿವೆ.

3. ಭಾರತದಲ್ಲಿ ಅತ್ಯಾಚಾರ, ಲೈಂಗಿಕ ದೌರ್ಜನ್ಯ ಮತ್ತು ಅಪರಾಧ ಪ್ರಕರಣಗಳು ಹೆಚ್ಚಾಗುತ್ತಾ ಇದೆ. ಅದರಲ್ಲೂ ಲೈಂಗಿಕ ದೌರ್ಜನ್ಯಗಳು ಆತಂಕಕಾರಿ ಮಟ್ಟಕ್ಕೆ ಏರಿದೆ. ಆದ್ದರಿಂದ ಮಹಿಳೆಯರು ಒಂಟಿಯಾಗಿ ಪ್ರಯಾಣಿಸಬಾರದು. ಪ್ರವಾಸದ ಸಮಯದಲ್ಲಿ ಎಲ್ಲರೂ ಜಾಗರೂಕರಾಗಿ ಇರಬೇಕು ಎಂದು ಅಮೇರಿಕ ತನ್ನ ನಾಗರಿಕರಿಗೆ ಎಚ್ಚರಿಕೆ ನೀಡಿದೆ.

ಸ್ವಿಸ್ ಬ್ಯಾಂಕ್‌ನಲ್ಲಿರುವ ಕಪ್ಪು ಹಣವನ್ನು ಭಾರತಕ್ಕೆ ಮರಳಿ ತರುತ್ತೇನೆ ಎಂಬ ವಾಗ್ದಾನದೊಂದಿಗೆ ನರೇಂದ್ರ ಮೋದಿಯವರು 2014ರ ಚುನಾವಣೆಯನ್ನು ಎದುರಿಸಿದ್ದರು. ದೇಶದ ಪ್ರತಿ ರಸ್ತೆಯನ್ನೂ ಚಿನ್ನದ ರಸ್ತೆಯಾಗಿ ಮಾರ್ಪಡಿಸುವಷ್ಟು ದುಡ್ಡು ಸ್ವಿಸ್ ಬ್ಯಾಂಕ್‌ನಲ್ಲಿದೆ ಎಂದು ಅವರ ಬೆಂಬಲಿಗರು ಭಾಷಣ ಮಾಡಿದ್ದರು. ದೇಶ ಮೋದಿಯ ಕೈಗೆ ಚುಕ್ಕಾಣಿಯನ್ನು ಕೊಟ್ಟಿತು. ಕಪ್ಪು ಹಣವನ್ನು ಸ್ವಿಸ್ ಬ್ಯಾಂಕ್‌ ನಿಂದ  ತಂದು ಭಾರತದ ಪ್ರತಿ ನಾಗರಿಕರಿಗೂ ಹಂಚುತ್ತಾರೆ ಎಂಬ ನಿರೀಕ್ಷೆಯಿಂದ ಕಾಯತೊಡಗಿತು. ಮುಂದಿನ 2 ವರ್ಷಗಳ ವರೆಗೆ ಮೌನವಾದ ಅವರು 2016ರಲ್ಲಿ ಮತ್ತೊಮ್ಮೆ ಕಪ್ಪು ಹಣದ ಬಗ್ಗೆ ಮಾತನಾಡಿದರು. ನೋಟ್ ಬ್ಯಾನ್ ಮಾಡುವ ಮೂಲಕ ದೇಶದೊಳಗಿರುವ ಎಲ್ಲ ಕಪ್ಪು ಹಣವನ್ನೂ ನಿರ್ನಾಮ ಮಾಡುತ್ತಿರುವುದಾಗಿ ಘೋಷಿಸಿದರು. ಇದೀಗ 11 ವರ್ಷಗಳೇ ಕಳೆದು ಹೋಗಿವೆ. 2010ರಲ್ಲಿ ಸ್ವಿಸ್ ಬ್ಯಾಂಕ್‌ನಲ್ಲಿದ್ದುದು ಬರೇ 8500  ಕೋಟಿ ರೂಪಾಯಿ. ಆದರೆ ಈಗ ಅದು 37600  ಕೋಟಿ ರೂಪಾಯಿಯಾಗಿ ಏರಿಕೆಯಾಗಿದೆ. ಇನ್ನೊಂದು ಕಡೆ ಬ್ಯಾನ್ ಮಾಡಲಾದ ನೋಟುಗಳ ಪೈಕಿ 99% ನೋಟುಗಳೂ ಮರಳಿ ಬ್ಯಾಂಕ್‌ಗೆ ಸೇರಿವೆ ಎಂದು ಆರ್‌ಬಿಐ ವರದಿಗಳೇ ಹೇಳುತ್ತವೆ. ಅಂದರೆ ನೋಟ್ ಬ್ಯಾನ್‌ನಿಂದ ಯಾವ ಪ್ರಯೋಜನವೂ ಆಗಿಲ್ಲ ಎಂದೇ ಅರ್ಥ. ಹಾಗಿದ್ದರೆ,

ಕಪ್ಪು ಹಣದ ಹೆಸರಲ್ಲಿ ದೇಶದ ನಾಗರಿಕರನ್ನು ನರೇಂದ್ರ ಮೋದಿ ವಂಚಿಸಿದ್ದಾರೆ ಎಂದೇ ಅರ್ಥವಲ್ಲವೇ? ಮನ್‌ಮೋಹನ್ ಸಿಂಗ್ ಅವಧಿಯಲ್ಲಿ ಸ್ವಿಸ್ ಬ್ಯಾಂಕ್‌ನಲ್ಲಿ 8500 ಕೋಟಿಯಷ್ಟಿದ್ದ ದುಡ್ಡು ಈ 11  ವರ್ಷಗಳ ಅವಧಿಯಲ್ಲಿ 37600  ಕೋಟಿ ರೂಪಾಯಿಯಷ್ಟು ಏರಿಕೆಯಾಗಿದೆ ಎಂದಾದರೆ ಅದಕ್ಕೆ ಯಾರು ಹೊಣೆ? ಕನಿಷ್ಠ ಸ್ವಿಸ್ ಬ್ಯಾಂಕ್‌ನಿAದ ಹಣವನ್ನು ಹಿಂದಕ್ಕೆ ತರುವುದು ಬಿಡಿ, ಅಲ್ಲಿ ಭಾರತೀಯರು ಹಣ ಠೇವಣಿಯಾಗಿ ಇರಿಸದಂತೆ ಈ 11 ವರ್ಷಗಳಲ್ಲಿ ತಡೆಯಲೂ ನರೇಂದ್ರ ಮೋದಿಗೆ ಆಗಿಲ್ಲ ಎಂದಾದರೆ ಇವರು ದುರ್ಬಲರು ಎಂದೇ ಅರ್ಥ ಅಲ್ಲವೇ? ಕಪ್ಪು ಹಣದ ಹೆಸರಲ್ಲಿ ಈ ದೇಶದ ನಾಗರಿಕರನ್ನು ವಂಚಿಸಿದ ಮೋದಿಯವರು ಭಾರತೀಯರ ಕ್ಷಮೆ ಯಾಚಿಸಬೇಡವೇ? ಇದೇವೇಳೆ,

ತನ್ನ ನಾಗರಿಕರಿಗೆ ಅಮೇರಿಕ ನೀಡಿರುವ ಸೂಚನೆಯು ನರೇಂದ್ರ ಮೋದಿ ಸರಕಾರದ 11 ವರ್ಷಗಳ ಆಡಳಿತಕ್ಕೆ ನೀಡಿರುವ ಸರ್ಟಿಫಿಕೇಟ್ ಎಂದೇ ಹೇಳಬಹುದು. ಭಾರತದಲ್ಲಿ ಮಹಿಳೆಯರು ಒಂಟಿಯಾಗಿ ಪ್ರಯಾಣಿಸುವುದು ಅಪಾಯಕಾರಿ, ಇಲ್ಲಿ ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರಗಳು ಆತಂಕಕಾರಿ ಮಟ್ಟದಲ್ಲಿದೆ ಎಂದು ಅದು ಬಹಿರಂಗ ಘೋಷಣೆ ಮಾಡಿದೆ. ಒಂದುಕಡೆ ನರೇಂದ್ರ ಮೋದಿ ಬೆಂಬಲಿಗರು ಇಸ್ರೇಲ್ ಮತ್ತು ಅಮೇರಿಕವನ್ನು ಬೆಂಬಲಿಸುತ್ತಾ ಮತ್ತು ಇರಾನನ್ನು ನಾಶವಾಗಬೇಕಾದ ರಾಷ್ಟ್ರ  ಎನ್ನುತ್ತಾ ವಾದಿಸುತ್ತಿರುವಾಗಲೇ ಅಮೇರಿಕದಿಂದ ಈ ಸರ್ಟಿಫಿಕೇಟ್ ಲಭ್ಯವಾಗಿದೆ. ಮಹಿಳೆಯರಿಗೆ ಸುರಕ್ಷಿತತೆಯನ್ನು ಖಾತರಿಪಡಿಸದ ಆಡಳಿತ ಮೋದಿಯವರದ್ದು ಎಂದು ಅಮೇರಿಕ ಪರೋಕ್ಷವಾಗಿ ಹೇಳಿಕೆ ನೀಡಿದಂತಾಗಿದೆ. ಇದೇ ಸಂದರ್ಭದಲ್ಲಿ,

ಎಪಿಸಿಆರ್ ಮತ್ತು ಕ್ವಿಲ್ ಫೌಂಡೇಶನ್ ಜಂಟಿಯಾಗಿ ಬಿಡುಗಡೆಗೊಳಿಸಿರುವ ವರದಿಯಲ್ಲೂ ಆತಂಕಕಾರಿ ಸಂಗತಿಗಳಿವೆ. ಕೇವಲ ಒಂದೇ ವರ್ಷದೊಳಗೆ ದ್ವೇಷಾಧಾರಿತ 947 ರಷ್ಟು ಪ್ರಕರಣಗಳು ಈ ದೇಶದಲ್ಲಿ ನಡೆದಿವೆ ಎಂಬುದು ನಿಜಕ್ಕೂ ಆಘಾತಕಾರಿ ಬೆಳವಣಿಗೆ. ಮುಸ್ಲಿಮ್ ದ್ವೇಷವನ್ನೇ ರಾಜಕೀಯ ಅಧಿಕಾರದ ಮೆಟ್ಟಿಲನ್ನಾಗಿ ಮಾಡಿಕೊಂಡಿರುವ ಬಿಜೆಪಿಯು ಈ ದೇಶಕ್ಕೆ ನೀಡಿರುವ ಕೊಡುಗೆ ಇದು ಎಂದೇ ಹೇಳಬೇಕು. ಅತ್ಯಾಚಾರಗಳಾಗಲಿ, ಅಪರಾಧ ಪ್ರಕರಣಗಳಾಗಲಿ ಎಲ್ಲವೂ ದ್ವೇಷ ಪ್ರಚಾರದ ಫಲಿತಾಂಶಗಳಾಗಿವೆ. ಮುಸ್ಲಿಮರನ್ನು ಹಿಂದೂ ಧರ್ಮದ ಶತ್ರುಗಳಂತೆ ಬಿಂಬಿಸುವುದರಿಂದ  ಬಿಜೆಪಿ ರಾಜಕೀಯ ಲಾಭವನ್ನೇನೋ ಪಡೆಯುತ್ತಿದೆ. ಆದರೆ, ಬಿಜೆಪಿಯ ಪ್ರಚೋದನೆಯಿಂದ ಪ್ರೇರಣೆ ಪಡೆದ ಬಿಸಿರಕ್ತದ ಯುವ ತಲೆಮಾರು ಮುಸ್ಲಿಮರ ಮೇಲೆ ಹಲ್ಲೆ ನಡೆಸಿ ಯಶಸ್ವಿಯಾದ ಧೈರ್ಯದಿಂದ ಇನ್ನಿತರ ಕ್ರಿಮಿನಲ್ ಕೃತ್ಯಗಳಿಗೂ ಧೈರ್ಯ ತೋರುತ್ತಾರೆ. ಆರಂಭದಲ್ಲಿ ಇಂಥ ಯುವಕರ ಗುರಿ ಮುಸ್ಲಿಮರೇ ಆಗಿದ್ದರೂ ಆ ಬಳಿಕ ಅವರು ತಮ್ಮ ಗಮನವನ್ನು ಇನ್ನಿತರ ಕಡೆಗಳಿಗೂ ಹರಿಸುತ್ತಾರೆ. ರಾಜಕಾರಣಿಗಳ ಪ್ರಭಾವ ಬಳಸಿ ಮುಸ್ಲಿಮ್ ಹಿಂಸೆಯ ಆರೋಪದಿಂದ ಸುಲಭದಲ್ಲೇ  ಹೊರಬರುವ ಸನ್ನಿವೇಶವು ಅವರನ್ನು ಹಫ್ತಾ ವಸೂಲಿ, ಬೆದರಿಕೆ, ಸುಪಾರಿ ಹತ್ಯೆಗಳಂಥ ಕ್ರಿಮಿನಲ್ ಕೃತ್ಯಗಳಲ್ಲೂ ಭಾಗಿಯಾಗುವಂತೆ ಮಾಡುತ್ತಿದೆ. ನಿಧಾನಕ್ಕೆ ಇಂಥವರು ಆಯಾ ಊರಿನ ಡಾನ್‌ಗಳಂತೆ ವರ್ತಿಸತೊಡಗುತ್ತಾರೆ. ಅಪರಾಧ ಕೃತ್ಯಗಳಲ್ಲಿ ಸಹಜವೆಂಬAತೆ ಭಾಗಿಯಾಗತೊಡಗುತ್ತಾರೆ. ಹೆಣ್ಣಿನ ಅಪಹರಣ, ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರಗಳಂಥ ಕೃತ್ಯಗಳಲ್ಲೂ ಇವರು ಭಾಗಿಯಾಗುತ್ತಾರೆ. ಅಂದಹಾಗೆ,

ನಿರ್ದಿಷ್ಟ ಉದ್ಯೋಗ ಇಲ್ಲದ ಇವರಿಗೆ ಆದಾಯ ಮೂಲವಾಗಿ ಇವುಗಳಲ್ಲಿ ಭಾಗಿಯಾಗಲೇಬೇಕಾದ ಅನಿವಾರ್ಯತೆಯೂ ಎದುರಾಗುತ್ತದೆ. ಇಂಥವರನ್ನೇ ಈ ದ್ವೇಷ ರಾಜಕೀಯದ ಮಂದಿ ತಮ್ಮ ಲಾಭಕ್ಕಾಗಿ ಆಗಾಗ್ಗೆ ಬಳಸಿಕೊಳ್ಳುತ್ತಾ ಇರುತ್ತಾರೆ. ಮಾತ್ರವಲ್ಲ, ಇವರನ್ನು ಸಾಕುವುದು ಕಷ್ಟ ಎಂದು ಅನಿಸಿದಾಗ ಕೈ ಕೊಡುತ್ತಾರೆ. ನಿಜವಾಗಿ,

ಒಂಟಿ ಮಹಿಳೆಯರು ಪ್ರಯಾಣಿಸಲಾಗದ ದೇಶ ಎಂದು ಟ್ರಂಪ್ ಸರಕಾರ ಭಾರತವನ್ನು ಅವಮಾನಿಸಿರುವುದರ ಸಂಪೂರ್ಣ ಹೊಣೆಯನ್ನು ಮೋದಿ ಸರಕಾರವೇ ಹೊತ್ತುಕೊಳ್ಳಬೇಕು. ಹೆಣ್ಣನ್ನು ದೇವತೆ ಎಂದು ಗುರುತಿಸುವ ದೇಶದಲ್ಲಿ ಹೆಣ್ಣು ಸುರಕ್ಷಿತವಲ್ಲ ಎಂದು ಟ್ರಂಪ್ ಸರಕಾರ ಘೋಷಿಸಿರುವುದು 140 ಕೋಟಿ ಭಾರತೀಯರಿಗೆ ಮಾಡಲಾದ ಅವಮಾನ. ಇಂಥದ್ದೊಂದು  ಅವಮಾನಕರ ಪರಿಸ್ಥಿತಿ ದೇಶದಲ್ಲಿ ಯಾಕಿದೆ ಎಂಬುದನ್ನು ದೇಶದ ನಾಗರಿಕರು ಅವಲೋಕನ ನಡೆಸಬೇಕು. ಬಿಜೆಪಿ ತನ್ನ ರಾಜಕೀಯ ಅಧಿಕಾರಕ್ಕೆ ನೆಟ್ಟು ಬೆಳೆಸಿದ ಮುಸ್ಲಿಮ್ ದ್ವೇಷಕ್ಕೆ ಇದರಲ್ಲಿ ಎಷ್ಟು ಪಾತ್ರ ಇದೆ ಎಂಬುದಾಗಿಯೂ ವಿಶ್ಲೇಷಣೆ ನಡೆಸಬೇಕು.

ನೀವು ಒಂದು ಬಾರಿ ಜನರಿಗೆ ದ್ವೇಷಿಸಲು ಕಲಿಸಿದರೆ ಆ ಬಳಿಕ ಅವರು ನೀವು ಸೂಚಿಸಿದವರನ್ನೇ ದ್ವೇಷಿಸುವುದಲ್ಲ, ನೀವು ಪ್ರೀತಿಸಬೇಕು ಎಂದವರನ್ನೂ ದ್ವೇಷಿಸತೊಡಗುತ್ತಾರೆ. ದ್ವೇಷ ಎಂಬುದು ಜನರನ್ನು ಕ್ರಿಮಿನಲ್ ಕೃತ್ಯದತ್ತ ಕೊಂಡೊಯ್ಯುವ ಅಫೀಮು. ಒಮ್ಮೆ ಈ ಅಫೀಮನ್ನು ತಿನ್ನಿಸಿದರೆ ಆ ಬಳಿಕ ಅದರ ಅಡ್ಡಪರಿಣಾಮದಿಂದ ಹೆಣ್ಣೂ ಸುರಕ್ಷಿತಳಲ್ಲ. ದೇಶವೂ ಸುರಕ್ಷಿತವಲ್ಲ. ಎಪಿಸಿಆರ್ ವರದಿಗೆ ಮತ್ತು ಅಮೇರಿಕದ ಘೋಷಣೆಗೆ ಈ ಅಫೀಮು ತಿಂದವರು ಮತ್ತು ತಿನ್ನಿಸಿದವರೇ ನೇರ ಹೊಣೆ.

Wednesday, 18 June 2025

ಶರೀಫ್ ಸಾಬ್‌ರನ್ನು ಸ್ಮರಿಸುತ್ತಾ...




ಜಮಾಅತೆ ಇಸ್ಲಾಮೀ ಹಿಂದ್ ರಾಜ್ಯ ಘಟಕದ ಸಲಹಾ ಸಮಿತಿಯ ಸದಸ್ಯರಾಗಿ, ಸನ್ಮಾರ್ಗ, ಅನುಪಮ ಮತ್ತು ಶಾಂತಿ ಪ್ರಕಾಶನಗಳ ಸ್ಥಾಪನೆಯಲ್ಲಿ ಬಹುಮುಖ್ಯ ಪಾತ್ರಧಾರಿಯಾಗಿ, ಹಿರಾ ಸಹಿತ ವಿವಿಧ ಶಿಕ್ಷಣ ಸಂಸ್ಥೆಗಳ ರೂವಾರಿಯಾಗಿ, ಜಮಾಅತ್ ಮಂಗಳೂರು ಸ್ಥಾನೀಯ ಘಟಕವನ್ನು 2 ದಶಕಗಳ ಕಾಲ ಮುನ್ನಡೆಸಿ, ಬಡ್ಡಿರಹಿತ ಬ್ಯಾಂಕಿಂಗ್  ವ್ಯವಸ್ಥೆಯಾದ ಕಾರುಣ್ಯದ ಬೆನ್ನೆಲುಬಾಗಿ ಮತ್ತು ಹತ್ತು ಹಲವು ಬಡವರು ಮತ್ತು ದುರ್ಬಲರಿಗೆ ಆಸರೆಯಾಗಿದ್ದ ಶರೀಫ್ ಸಾಬ್ ಅವರು ಪತ್ರಕರ್ತರೂ ಆಗಿರಲಿಲ್ಲ. ಪದವಿಗಳ ಮೇಲೆ ಪದವಿಗಳನ್ನು ಪಡೆದ ಶಿಕ್ಷಣ ತಜ್ಞರೂ ಆಗಿರಲಿಲ್ಲ. ಹಲವು ಕೃತಿಗಳನ್ನು ರಚಿಸಿದ ಸಾಹಿತಿಯೂ ಆಗಿರಲಿಲ್ಲ. ಬಿರುದಾಂಕಿತ ಆರ್ಥಿಕ ತಜ್ಞರೂ ಆಗಿರಲಿಲ್ಲ. ಆದ್ದರಿಂದಲೇ ಅವರ ಸಾಧನೆ ಮಹತ್ವದ್ದಾಗುತ್ತದೆ. 85 ವರ್ಷಗಳ ತುಂಬು ಜೀವನವನ್ನು ಸವೆಸಿ ಅವರು ಇಹಲೋಕಕ್ಕೆ ವಿದಾಯ ಕೋರಿ ಹೊರಟು ಹೋಗುವಾಗ ಈ ಮೇಲೆ ಉಲ್ಲೇಖಿತವಾದವುಗಳ ಹೊರತಾಗಿ ಅವರ ಖಾತೆಗೆ ಸೇರಿಸುವುದಕ್ಕೆ ಇನ್ನೂ ಅನೇಕ ಸಂಗತಿಗಳಿವೆ.

ಒಮ್ಮೆ ಅವರು ಸನ್ಮಾರ್ಗ ಕಚೇರಿಯಾದ ಹಿದಾಯತ್ ಸೆಂಟರ್‌ನ ಕೂಗಳತೆಯ ದೂರದಲ್ಲಿರುವ ಕಚ್ಚೀ ಮೇಮನ್ ಮಸೀದಿಯಲ್ಲಿ ನಮಾಜ್  ನಿರ್ವಹಿಸಿ ಕಚೇರಿಗೆ ಬಂದು ಸಿಬಂದಿಯನ್ನು ಕರೆದರು. ನಾನು ಮಸೀದಿ ಪಕ್ಕದ ಬಾಂಬೆ ಹೊಟೇಲ್‌ಗೆ ಹೋಗಿದ್ದೆ. ಹೊರ ಬರುವಾಗ ಒಬ್ಬರು ಹೊಟೇಲ್ ಹೊರಗಡೆ ನಿಂತಿದ್ರು. ಹಸಿವಾಗ್ತಾ ಇದೆ ಎಂದರು. ನಾನು ಅನುಮಾನದಿಂದ ಸೀದಾ ಬಂದೆ. ಆದರೆ, ನನಗೀಗ ಆ ವ್ಯಕ್ತಿಯ ಹಸಿವು ನಿಜವೂ ಆಗಿರಬಹುದು ಎಂದು ಅನಿಸ್ತಾ ಇದೆ. ಆದ್ದರಿಂದ ನೀವೊಂದು ಕೆಲಸ ಮಾಡಬೇಕು. ಆ ವ್ಯಕ್ತಿಗೆ ಊಟ ಕೊಟ್ಟು ಮತ್ತು ಕಿಸೆಗೊಂದಿಷ್ಟು ಹಣ ಹಾಕಿ ಬರಬೇಕು ಎಂದು ಹೇಳಿ ದುಡ್ಡು ಕೊಟ್ಟರು. ವ್ಯಕ್ತಿ ಇಂತಿಂಥ  ಬಣ್ಣದ ಶರ್ಟ್ ಮತ್ತು ಲುಂಗಿ ಉಟ್ಟಿದ್ದಾರೆ ಎಂದೂ ಹೇಳಿದರು. ನಿಜವಾಗಿ,

ಹಸಿದವರಿಗೆ ಉಣಿಸುವವರಿಗೇನೂ ನಮ್ಮಲ್ಲಿ ಕಡಿಮೆ ಇಲ್ಲ. ಆದರೆ ಹಸಿದವನನ್ನು ಆ ಹೊಟೇಲ್‌ನಿಂದ ಕಚೇರಿಯವರೆಗೆ ಮನಸೊಳಗೆ ತುಂಬಿಕೊಂಡು  ಪಾಪಭಾವದಿಂದ ತಳಮಳಗೊಳ್ಳುವವರು ಕಡಿಮೆ. ಇದಕ್ಕೆ ತಾಯಿ ಹೃದಯ ಅನ್ನುತ್ತೇವೆ. ಆ ವ್ಯಕ್ತಿಗೆ ಇವರು ಉಣಿಸದೇ ಇರುತ್ತಿದ್ದರೆ ಅಪರಾಧಿಯೇನೂ ಆಗುತ್ತಿರಲಿಲ್ಲ. ಯಾಕೆಂದರೆ, ಹೀಗೆ ಹಸಿವು ಎಂದು ಹೇಳಿ ಯಾಮಾರಿಸುವವರೇ ಇವತ್ತು ಹೆಚ್ಚಿದ್ದಾರೆ ಮತ್ತು ಆ ವ್ಯಕ್ತಿ ಶರೀಫ್ ಸಾಬ್‌ರಿಗೆ ಪರಿಚಿತರೂ ಅಲ್ಲ. ಕುಟುಂಬಸ್ತರೂ ಅಲ್ಲ. ಆದ್ದರಿಂದ ಆ ವ್ಯಕ್ತಿಯನ್ನು ಅಲ್ಲೇ  ಮರೆತು ಮುಂದೆ ಹೋಗಬಹುದಿತ್ತು. ಆದರೆ ತಾಯಿ ಮನಸ್ಸು ಅದನ್ನು ಒಪ್ಪಿಕೊಳ್ಳಲಿಲ್ಲ. ಅಂದಹಾಗೆ,

ಸನ್ಮಾರ್ಗ ಟ್ರಸ್ಟ್ ಗೆ  ದೀರ್ಘಕಾಲ ಚೇರ್ಮನ್ ಆಗಿದ್ದವರು ಶರೀಫ್ ಸಾಬ್. 1978 ಎಪ್ರಿಲ್ 23ರಂದು ಸನ್ಮಾರ್ಗ ಪತ್ರಿಕೆಯ ಮೊದಲ ಸಂಚಿಕೆ ಬಿಡುಗಡೆಗೊಳ್ಳುವಾಗ ಇಬ್ರಾಹೀಮ್ ಸಈದ್ ಸಂಪಾದಕರಾಗಿದ್ದರೆ, ಈ ಶರೀಫ್ ಸಾಬ್ ಅದರ ಬೆವರಾಗಿದ್ದರು. ಮುಸ್ಲಿಮರಲ್ಲಿ ಮುಖ್ಯವಾಗಿ ಕರಾವಳಿಯ ಮುಸ್ಲಿಮರಲ್ಲಿ ಕನ್ನಡ ಎಂಬುದು ‘ಅನ್ಯ’ ಭಾಷೆಯಾಗಿ ಮತ್ತು ಒಂದು ರೀತಿಯಲ್ಲಿ ಅಲಿಖಿತ ಬಹಿಷ್ಕಾರಕ್ಕೆ ಒಳಗಾದ ಭಾಷೆಯಾಗಿ ಮಾರ್ಪಟ್ಟಿದ್ದ ವೇಳೆ ಅದೇ ಕನ್ನಡದಲ್ಲಿ ಪತ್ರಿಕೆಯನ್ನು ಪ್ರಾರಂಭಿಸುವುದೆಂದರೆ ಆಕಾಶಕ್ಕೆ ಏಣಿ ಇಟ್ಟಷ್ಟೇ ಸವಾಲಿನದ್ದು. ಒಂದು ಕಡೆ ಆರ್ಥಿಕ ಸವಾಲು ಎದುರಿದ್ದರೆ, ಕನ್ನಡದ ಬಗ್ಗೆ ಮುಸ್ಲಿಮರಲ್ಲಿರುವ ನಕಾರಾತ್ಮಕ ಭಾವ ಇನ್ನೊಂದು ಕಡೆಯಿತ್ತು. ಇದರ ಜೊತೆಗೆ ಕರಾವಳಿಯಿಂದ ಹೊರಬಂದು ರಾಜ್ಯದಾದ್ಯಂತ ಕನ್ನಡಿಗರಿಗೆ ಈ ಪತ್ರಿಕೆಯನ್ನು ತಲುಪಿಸಬೇಕಿತ್ತು. ಇಸ್ಲಾಮ್ ಮತ್ತು ಮುಸ್ಲಿಮರ ಬಗ್ಗೆ ಜನರಲ್ಲಿದ್ದ ಪ್ರಶ್ನೆಗಳಿಗೆ ಉತ್ತರಿಸುವುದು ಮತ್ತು ಅವರಲ್ಲಿರುವ ತಪ್ಪು ಭಾವನೆಗಳನ್ನು ಹೋಗಲಾಡಿಸುವುದು ಪತ್ರಿಕೆಯ ಗುರಿಯಾಗಿತ್ತು. ಇದರ ಜೊತೆಗೇ ಇಸ್ಲಾಮ್‌ನ ಹೆಸರಲ್ಲಿ ನಡೆಯುತ್ತಿದ್ದ ಹತ್ತು-ಹಲವು ತಪ್ಪು ಆಚರಣೆಗಳನ್ನು ತಿದ್ದುವುದೂ ಪತ್ರಿಕೆಯ ಉದ್ದೇಶವಾಗಿತ್ತು. ಆದರೆ,

ಶರೀಫ್ ಸಾಬ್‌ರ ನೇತೃತ್ವದಲ್ಲಿದ್ದ ಉತ್ಸಾಹಿ ತಂಡ ಬರಹದ ಹೊಣೆಯನ್ನು ಸಂಪಾದಕೀಯ ಮಂಡಳಿಗೆ ವಹಿಸಿಕೊಟ್ಟು ಪತ್ರಿಕೆಯ ಪ್ರಸಾರ ಮತ್ತು ಆರ್ಥಿಕ ಹೊಣೆಗಾರಿಕೆಯನ್ನು ಸ್ವಯಂ ವಹಿಸಿಕೊಂಡಿತು. ಈ ಪತ್ರಿಕೆಯನ್ನು ರಾಜ್ಯದ ಮೂಲೆಮೂಲೆಗೂ ತಲುಪಿಸುವುದಕ್ಕಾಗಿ ಊರೂರು ಸುತ್ತಿತು. ಒಂದು ಕಡೆ ಆರ್ಥಿಕ ಸಂಕಷ್ಟ ಎದುರಾಗದಂತೆ ನೋಡಿಕೊಳ್ಳುವುದು ಮತ್ತು ಇನ್ನೊಂದು ಕಡೆ ಪತ್ರಿಕೆ ನಿರಂತರ ಪ್ರಕಟವಾಗುವಂತೆ ನೋಡಿಕೊಳ್ಳುವುದಕ್ಕೆ ಆದ್ಯತೆ ನೀಡಿತು. ಸನ್ಮಾರ್ಗ ಕಳೆದ 48 ವರ್ಷಗಳಿಂದ ನಿರಂತರವಾಗಿ ಪ್ರಕಟವಾಗುತ್ತಾ ಬಂದಿದ್ದರೆ ಅದರ ಹಿಂದೆ ಶರೀಫ್ ಸಾಬ್‌ರ ದೂರದೃಷ್ಟಿ, ಬುದ್ಧಿವಂತಿಕೆ, ತಂತ್ರಗಾರಿಕೆ ಮತ್ತು ಪ್ರಾಮಾಣಿಕತೆಗೆ ಬಹುದೊಡ್ಡ ಪಾತ್ರವಿದೆ. ಅವರು ಹಿದಾಯತ್ ಸೆಂಟರನ್ನು ಅತಿಯಾಗಿ ಪ್ರೀತಿಸಿದ್ದರು. ವೇತನ ಆಗಿದೆಯೇ ಎಂದು ಸಿಬಂದಿಗಳಲ್ಲಿ ವಿಚಾರಿಸುವುದು ರೂಢಿಯಾಗಿತ್ತು. ಯಾವುದೇ ಸಂಸ್ಥೆ ನಿಂತ ನೀರಾಗಬಾರದು ಎಂಬುದು ಅವರ ನೀತಿಯಾಗಿತ್ತು. ಆದ್ದರಿಂದಲೇ,

ಆಧುನಿಕ ತಂತ್ರಜ್ಞಾನಗಳನ್ನು ಬಳಸುವಲ್ಲೂ ಮತ್ತು ಅದರ ಉಪಯೋಗದಿಂದ ಸಂಸ್ಥೆಯನ್ನು ವಿಸ್ತರಿಸುವಲ್ಲೂ ಅವರು ಮುಂಚೂಣಿ ವಕ್ತಾರರಾದರು. ಶಾಂತಿ ಪ್ರಕಾಶನದ ಪುಸ್ತಕಗಳನ್ನು ಊರೂರು ತಲುಪಿಸುವುದಕ್ಕಾಗಿ ಮೊಬೈಲ್ ಪುಸ್ತಕಾಲಯದ ಪರ ನಿಂತರು. ಸಣ್ಣದೊಂದು ಕಚೇರಿಗೆ ಸೀಮಿತಗೊಂಡಿದ್ದ ಬಡ್ಡಿರಹಿತ ಬ್ಯಾಂಕಿಂಗ್  ವ್ಯವಸ್ಥೆಗೆ ವಿಸ್ಟ್ರತ ರೂಪವನ್ನು ಕೊಟ್ಟು ದೊಡ್ಡ ಸಂಖ್ಯೆಯಲ್ಲಿ ಜನರನ್ನು ಆಕರ್ಷಿಸುವುದರ ಪರ ನಿಂತರು. ಸಣ್ಣ ಕಟ್ಟಡದಲ್ಲಿ ಆರಂಭವಾಗಿದ್ದ ಹಿರಾ ಕಾಲೇಜನ್ನು ದ.ಕ. ಜಿಲ್ಲೆಯಲ್ಲೇ  ಮಹತ್ವದ ಹಿರಾ ಸಮೂಹ ಶಿಕ್ಷಣ ಸಂಸ್ಥೆಯಾಗಿ ಮಾರ್ಪಡಿಸುವಲ್ಲಿ ಅವರ ದೂರದೃಷ್ಟಿ ಮತ್ತು ತಂತ್ರಗಾರಿಕೆಯ ಪಾತ್ರ ಬಹಳ ಹಿರಿದು. 

2019ರವರೆಗೆ ಬರೇ ಮುದ್ರಣ ಮಾಧ್ಯಮವಾಗಿಯಷ್ಟೇ ಗುರುತಿಸಿಕೊಂಡಿದ್ದ ಸನ್ಮಾರ್ಗವನ್ನು ಡಿಜಿಟಲ್ ಯುಗಕ್ಕೆ ಪರಿವರ್ತಿಸುವಲ್ಲೂ ಶರೀಫ್ ಸಾಬ್ ಮುಂಚೂಣಿ ಪಾತ್ರ ನಿರ್ವಹಿಸಿದರು. 2019ರಲ್ಲಿ ಸನ್ಮಾರ್ಗ ವೆಬ್‌ಪೋರ್ಟಲ್ ಪ್ರಾರಂಭಿಸಿದ್ದಲ್ಲದೇ, 2020ರಲ್ಲಿ ಸನ್ಮಾರ್ಗ ನ್ಯೂಸ್ ಚಾನೆಲನ್ನೂ ಆರಂಭಿಸಲಾಯಿತು. ಎರಡು ವರ್ಷಗಳಲ್ಲಿ ತೆಗೆದುಕೊಳ್ಳಲಾದ ಈ ಎರಡು ಮಹತ್ವದ ನಿರ್ಧಾರಗಳ ಹಿಂದೆ ಶರೀಫ್ ಸಾಬ್ ಇದ್ದರು. ನಿರಂತರ ಸಲಹೆ ಮತ್ತು ಮಾರ್ಗದರ್ಶನಗಳ ಮೂಲಕ ಈ ಎರಡನ್ನೂ ಬೆಳೆಸುವಲ್ಲಿ ಅವರು ಕೊಡುಗೆಯನ್ನು ನೀಡಿದರು. ಇದರ ಜೊತೆಗೇ ಜಿಲ್ಲೆಯಲ್ಲಿ ಹತ್ತಕ್ಕಿಂತಲೂ ಅಧಿಕ ಶಿಕ್ಷಣ ಸಂಸ್ಥೆಗಳ ಪ್ರಾರಂಭಕ್ಕೂ ಮತ್ತು ಯಶಸ್ವಿ ನಿರ್ವಹಣೆಗೂ ಮಾರ್ಗದರ್ಶಕರಾದರು. ಅಂದಹಾಗೆ,

ಮುಹಮ್ಮದ್ ಷರೀಫ್  ಎಂಬ ಸಾಮಾನ್ಯ ವ್ಯಕ್ತಿ ಈ ಮಟ್ಟದಲ್ಲಿ ಅಸಾಮಾನ್ಯ ವ್ಯಕ್ತಿಯಾಗಿ ಬೆಳೆದಿರುವುದರ ಹಿಂದೆ ಅವರ ಓದಿನ ಪಾತ್ರ ಇದೆ. ಬಡತನ ಕಲಿಸಿದ ಪಾಠ ಇದೆ. ಉದ್ಯಮಕ್ಕೆ ಕೈ ಹಾಕುವ ಮೂಲಕ ಪಡೆದ ಸಾಹಸ ಪ್ರವೃತ್ತಿಯ ಅನುಭವವಿದೆ. ಮಗನನ್ನೇ ಕಳೆದುಕೊಳ್ಳುವಷ್ಟು ಅತೀವ ದುಃಖದ ಮತ್ತು ಮಕ್ಕಳು ಸ್ಥಿತಿವಂತರಾಗಿ ಪಡೆದ ಸುಖದ ಅನುಭವವೂ ಇದೆ. ಅವರು ಬಡತನದಲ್ಲಿ ಪಡೆದ ಪಾಠ ಅವರನ್ನು ಎಷ್ಟು ಉದಾರಿಯಾಗಿಸಿತೆಂದರೆ, ಬಳಿಕ ಅವರಿಂದ ಆರ್ಥಿಕ ಲಾಭ ಪಡೆದವರ ಸಂಖ್ಯೆ ಸಾಕಷ್ಟಿದೆ. ಅವರು ಕಿರಿಯರೊಂದಿಗೆ ಕಿರಿಯರಾಗಿ ಅಭಿಪ್ರಾಯಗಳನ್ನು ಆಲಿಸುತ್ತಿದ್ದರು. ಹಿರಿಯ ಗುಂಪಿನಲ್ಲಿ ಅಷ್ಟೇ ಗಂಭೀರವಾಗಿಯೂ ನಡಕೊಳ್ಳುತ್ತಿದ್ದರು ಮತ್ತು ವ್ಯಕ್ತವಾದ ಅಭಿಪ್ರಾಯಗಳಲ್ಲಿ ಅತ್ಯುತ್ತಮವಾದುದನ್ನು ಹೆಕ್ಕಿಕೊಳ್ಳುವ ಮತ್ತು ಅದರ ಜಾರಿಗಾಗಿ ಕೊನೆತನಕವೂ ಶ್ರಮಪಡುವ ವಿಶೇಷ ಪ್ರತಿಭೆ ಅವರಲ್ಲಿತ್ತು. ಸನ್ಮಾರ್ಗ ಪಬ್ಲಿಕೇಶನ್ ಟ್ರಸ್ಟ್ ನ  ಚೇರ್ಮನ್ ಆಗಿದ್ದ ಕಾಲದಲ್ಲೂ ಮತ್ತು ಆ ಬಳಿಕವೂ ತನ್ನ ನಿಲುವನ್ನು ಸಂಪಾದಕೀಯ ಮಂಡಳಿಯ ಮೇಲೆ ಹೇರಿದವರಲ್ಲ. ಅದೇವೇಳೆ, ಸನ್ಮಾರ್ಗದ ಮೇಲೆ ಪ್ರಕರಣಗಳು ದಾಖಲಾದಾಗ ವಕೀಲರನ್ನು ನಿಯುಕ್ತಿಗೊಳಿಸುವುದರಿಂದ ಹಿಡಿದು ನ್ಯಾಯಾಲಯದ ವರೆಗೆ ಪ್ರತಿ ಹಂತದಲ್ಲೂ ಸಂಪಾದಕೀಯ ಮಂಡಳಿಯ ಜೊತೆಗೇ ಇದ್ದರು.

 ಅವರೋರ್ವ ಅತ್ಯುತ್ತಮ ನಾಯಕ, ಅತ್ಯುತ್ತಮ ಸಂಘಟಕ, ಅತ್ಯುತ್ತಮ ಪ್ರತಿಭಾ ಪೋಷಕರಾಗಿದ್ದರು. 85 ವರ್ಷಗಳ ತುಂಬು ಜೀವನವನ್ನು ನಡೆಸಿ ವಿದಾಯ ಕೋರಿದಾಗ ನೆನಪಿಸಿಕೊಳ್ಳುವುದಕ್ಕೆ ಅವರು ಧಾರಾಳ ಒಳಿತುಗಳನ್ನು ಉಳಿಸಿ ಹೋಗಿದ್ದಾರೆ.  ಅಲ್ಲಾಹನು ಶರೀಫ್ ಸಾಬ್‌ರಿಗೆ ಸ್ವರ್ಗವನ್ನು ದಯಪಾಲಿಸಲಿ. ಆಮೀನ್.