Thursday, 26 June 2025

11 ವರ್ಷಗಳ ಮೋದಿ ಆಡಳಿತಕ್ಕೆ ಕನ್ನಡಿ ಹಿಡಿದ ಟ್ರಂಪ್ ಮತ್ತು ಎಪಿಸಿಆರ್




ಒಂದೇ ವಾರದೊಳಗೆ ಒಂದು ವರದಿ, ಒಂದು ತನಿಖಾ ವರದಿ ಮತ್ತು ಒಂದು ಹೇಳಿಕೆ ಬಿಡುಗಡೆಗೊಂಡಿದೆ. ಪ್ರಧಾನಿ ನರೇಂದ್ರ ಮೋದಿಯವರ ೧೧ ವರ್ಷಗಳ ಆಡಳಿತವನ್ನು ಅವಲೋಕನಕ್ಕೆ ಒಡ್ಡಬಹುದಾದ ಅತ್ಯಂತ ಮಹತ್ವದ ಬೆಳವಣಿಗೆಯಾಗಿ ಇದನ್ನು ಪರಿಗಣಿಸಬಹುದಾಗಿದೆ.

1. ಸ್ವಿಸ್ ಬ್ಯಾಂಕ್‌ನಲ್ಲಿ ಭಾರತೀಯರ ದುಡ್ಡು ಹಿಂದಿನ ವರ್ಷಗಳಿಗಿಂತ 3 ಪಟ್ಟು ಹೆಚ್ಚಳವಾಗಿದೆ. ೨೦೨೩ರಲ್ಲಿ ಸ್ವಿಸ್ ಬ್ಯಾಂಕ್‌ನಲ್ಲಿ ಭಾರತೀಯರು 9771 ಕೋಟಿ ರೂಪಾಯಿಯನ್ನು ಠೇವಣಿಯಾಗಿ ಇಟ್ಟಿದ್ದರು. 2024ರಲ್ಲಿ ಇದು 37600 ಕೋಟಿ ರೂಪಾಯಿಯಾಗಿ ಏರಿಕೆಯಾಗಿದೆ.

2. ಎ.ಪಿ.ಸಿ.ಆರ್. ಅಥವಾ ಅಸೋಸಿಯೇಶನ್ ಫಾರ್ ಪ್ರೊಟೆಕ್ಷನ್ ಸಿವಿಲ್ ರೈಟ್ಸ್ ಮತ್ತು ಕ್ವಿಲ್ ಫೌಂಡೇಶನ್ ಜಂಟಿಯಾಗಿ ಸಂಗ್ರಹಿಸಿದ ವರದಿಯ ಪ್ರಕಾರ, 2024 ಜೂನ್ 7ರಿಂದ 2025 ಜೂನ್ 7 ವರೆಗಿನ ಈ ಒಂದು ವರ್ಷದಲ್ಲಿ ದೇಶದಲ್ಲಿ 947 ರಷ್ಟು ದ್ವೇಷಾಧಾರಿತ ಘಟನೆಗಳು ನಡೆದಿವೆ. ಇದರಲ್ಲಿ 602ರಷ್ಟು ಅಪರಾಧ ಪ್ರಕರಣಗಳಾದರೆ ೩೪೫ ದ್ವೇಷಭಾಷಣಗಳು ನಡೆದಿವೆ.

3. ಭಾರತದಲ್ಲಿ ಅತ್ಯಾಚಾರ, ಲೈಂಗಿಕ ದೌರ್ಜನ್ಯ ಮತ್ತು ಅಪರಾಧ ಪ್ರಕರಣಗಳು ಹೆಚ್ಚಾಗುತ್ತಾ ಇದೆ. ಅದರಲ್ಲೂ ಲೈಂಗಿಕ ದೌರ್ಜನ್ಯಗಳು ಆತಂಕಕಾರಿ ಮಟ್ಟಕ್ಕೆ ಏರಿದೆ. ಆದ್ದರಿಂದ ಮಹಿಳೆಯರು ಒಂಟಿಯಾಗಿ ಪ್ರಯಾಣಿಸಬಾರದು. ಪ್ರವಾಸದ ಸಮಯದಲ್ಲಿ ಎಲ್ಲರೂ ಜಾಗರೂಕರಾಗಿ ಇರಬೇಕು ಎಂದು ಅಮೇರಿಕ ತನ್ನ ನಾಗರಿಕರಿಗೆ ಎಚ್ಚರಿಕೆ ನೀಡಿದೆ.

ಸ್ವಿಸ್ ಬ್ಯಾಂಕ್‌ನಲ್ಲಿರುವ ಕಪ್ಪು ಹಣವನ್ನು ಭಾರತಕ್ಕೆ ಮರಳಿ ತರುತ್ತೇನೆ ಎಂಬ ವಾಗ್ದಾನದೊಂದಿಗೆ ನರೇಂದ್ರ ಮೋದಿಯವರು 2014ರ ಚುನಾವಣೆಯನ್ನು ಎದುರಿಸಿದ್ದರು. ದೇಶದ ಪ್ರತಿ ರಸ್ತೆಯನ್ನೂ ಚಿನ್ನದ ರಸ್ತೆಯಾಗಿ ಮಾರ್ಪಡಿಸುವಷ್ಟು ದುಡ್ಡು ಸ್ವಿಸ್ ಬ್ಯಾಂಕ್‌ನಲ್ಲಿದೆ ಎಂದು ಅವರ ಬೆಂಬಲಿಗರು ಭಾಷಣ ಮಾಡಿದ್ದರು. ದೇಶ ಮೋದಿಯ ಕೈಗೆ ಚುಕ್ಕಾಣಿಯನ್ನು ಕೊಟ್ಟಿತು. ಕಪ್ಪು ಹಣವನ್ನು ಸ್ವಿಸ್ ಬ್ಯಾಂಕ್‌ ನಿಂದ  ತಂದು ಭಾರತದ ಪ್ರತಿ ನಾಗರಿಕರಿಗೂ ಹಂಚುತ್ತಾರೆ ಎಂಬ ನಿರೀಕ್ಷೆಯಿಂದ ಕಾಯತೊಡಗಿತು. ಮುಂದಿನ 2 ವರ್ಷಗಳ ವರೆಗೆ ಮೌನವಾದ ಅವರು 2016ರಲ್ಲಿ ಮತ್ತೊಮ್ಮೆ ಕಪ್ಪು ಹಣದ ಬಗ್ಗೆ ಮಾತನಾಡಿದರು. ನೋಟ್ ಬ್ಯಾನ್ ಮಾಡುವ ಮೂಲಕ ದೇಶದೊಳಗಿರುವ ಎಲ್ಲ ಕಪ್ಪು ಹಣವನ್ನೂ ನಿರ್ನಾಮ ಮಾಡುತ್ತಿರುವುದಾಗಿ ಘೋಷಿಸಿದರು. ಇದೀಗ 11 ವರ್ಷಗಳೇ ಕಳೆದು ಹೋಗಿವೆ. 2010ರಲ್ಲಿ ಸ್ವಿಸ್ ಬ್ಯಾಂಕ್‌ನಲ್ಲಿದ್ದುದು ಬರೇ 8500  ಕೋಟಿ ರೂಪಾಯಿ. ಆದರೆ ಈಗ ಅದು 37600  ಕೋಟಿ ರೂಪಾಯಿಯಾಗಿ ಏರಿಕೆಯಾಗಿದೆ. ಇನ್ನೊಂದು ಕಡೆ ಬ್ಯಾನ್ ಮಾಡಲಾದ ನೋಟುಗಳ ಪೈಕಿ 99% ನೋಟುಗಳೂ ಮರಳಿ ಬ್ಯಾಂಕ್‌ಗೆ ಸೇರಿವೆ ಎಂದು ಆರ್‌ಬಿಐ ವರದಿಗಳೇ ಹೇಳುತ್ತವೆ. ಅಂದರೆ ನೋಟ್ ಬ್ಯಾನ್‌ನಿಂದ ಯಾವ ಪ್ರಯೋಜನವೂ ಆಗಿಲ್ಲ ಎಂದೇ ಅರ್ಥ. ಹಾಗಿದ್ದರೆ,

ಕಪ್ಪು ಹಣದ ಹೆಸರಲ್ಲಿ ದೇಶದ ನಾಗರಿಕರನ್ನು ನರೇಂದ್ರ ಮೋದಿ ವಂಚಿಸಿದ್ದಾರೆ ಎಂದೇ ಅರ್ಥವಲ್ಲವೇ? ಮನ್‌ಮೋಹನ್ ಸಿಂಗ್ ಅವಧಿಯಲ್ಲಿ ಸ್ವಿಸ್ ಬ್ಯಾಂಕ್‌ನಲ್ಲಿ 8500 ಕೋಟಿಯಷ್ಟಿದ್ದ ದುಡ್ಡು ಈ 11  ವರ್ಷಗಳ ಅವಧಿಯಲ್ಲಿ 37600  ಕೋಟಿ ರೂಪಾಯಿಯಷ್ಟು ಏರಿಕೆಯಾಗಿದೆ ಎಂದಾದರೆ ಅದಕ್ಕೆ ಯಾರು ಹೊಣೆ? ಕನಿಷ್ಠ ಸ್ವಿಸ್ ಬ್ಯಾಂಕ್‌ನಿAದ ಹಣವನ್ನು ಹಿಂದಕ್ಕೆ ತರುವುದು ಬಿಡಿ, ಅಲ್ಲಿ ಭಾರತೀಯರು ಹಣ ಠೇವಣಿಯಾಗಿ ಇರಿಸದಂತೆ ಈ 11 ವರ್ಷಗಳಲ್ಲಿ ತಡೆಯಲೂ ನರೇಂದ್ರ ಮೋದಿಗೆ ಆಗಿಲ್ಲ ಎಂದಾದರೆ ಇವರು ದುರ್ಬಲರು ಎಂದೇ ಅರ್ಥ ಅಲ್ಲವೇ? ಕಪ್ಪು ಹಣದ ಹೆಸರಲ್ಲಿ ಈ ದೇಶದ ನಾಗರಿಕರನ್ನು ವಂಚಿಸಿದ ಮೋದಿಯವರು ಭಾರತೀಯರ ಕ್ಷಮೆ ಯಾಚಿಸಬೇಡವೇ? ಇದೇವೇಳೆ,

ತನ್ನ ನಾಗರಿಕರಿಗೆ ಅಮೇರಿಕ ನೀಡಿರುವ ಸೂಚನೆಯು ನರೇಂದ್ರ ಮೋದಿ ಸರಕಾರದ 11 ವರ್ಷಗಳ ಆಡಳಿತಕ್ಕೆ ನೀಡಿರುವ ಸರ್ಟಿಫಿಕೇಟ್ ಎಂದೇ ಹೇಳಬಹುದು. ಭಾರತದಲ್ಲಿ ಮಹಿಳೆಯರು ಒಂಟಿಯಾಗಿ ಪ್ರಯಾಣಿಸುವುದು ಅಪಾಯಕಾರಿ, ಇಲ್ಲಿ ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರಗಳು ಆತಂಕಕಾರಿ ಮಟ್ಟದಲ್ಲಿದೆ ಎಂದು ಅದು ಬಹಿರಂಗ ಘೋಷಣೆ ಮಾಡಿದೆ. ಒಂದುಕಡೆ ನರೇಂದ್ರ ಮೋದಿ ಬೆಂಬಲಿಗರು ಇಸ್ರೇಲ್ ಮತ್ತು ಅಮೇರಿಕವನ್ನು ಬೆಂಬಲಿಸುತ್ತಾ ಮತ್ತು ಇರಾನನ್ನು ನಾಶವಾಗಬೇಕಾದ ರಾಷ್ಟ್ರ  ಎನ್ನುತ್ತಾ ವಾದಿಸುತ್ತಿರುವಾಗಲೇ ಅಮೇರಿಕದಿಂದ ಈ ಸರ್ಟಿಫಿಕೇಟ್ ಲಭ್ಯವಾಗಿದೆ. ಮಹಿಳೆಯರಿಗೆ ಸುರಕ್ಷಿತತೆಯನ್ನು ಖಾತರಿಪಡಿಸದ ಆಡಳಿತ ಮೋದಿಯವರದ್ದು ಎಂದು ಅಮೇರಿಕ ಪರೋಕ್ಷವಾಗಿ ಹೇಳಿಕೆ ನೀಡಿದಂತಾಗಿದೆ. ಇದೇ ಸಂದರ್ಭದಲ್ಲಿ,

ಎಪಿಸಿಆರ್ ಮತ್ತು ಕ್ವಿಲ್ ಫೌಂಡೇಶನ್ ಜಂಟಿಯಾಗಿ ಬಿಡುಗಡೆಗೊಳಿಸಿರುವ ವರದಿಯಲ್ಲೂ ಆತಂಕಕಾರಿ ಸಂಗತಿಗಳಿವೆ. ಕೇವಲ ಒಂದೇ ವರ್ಷದೊಳಗೆ ದ್ವೇಷಾಧಾರಿತ 947 ರಷ್ಟು ಪ್ರಕರಣಗಳು ಈ ದೇಶದಲ್ಲಿ ನಡೆದಿವೆ ಎಂಬುದು ನಿಜಕ್ಕೂ ಆಘಾತಕಾರಿ ಬೆಳವಣಿಗೆ. ಮುಸ್ಲಿಮ್ ದ್ವೇಷವನ್ನೇ ರಾಜಕೀಯ ಅಧಿಕಾರದ ಮೆಟ್ಟಿಲನ್ನಾಗಿ ಮಾಡಿಕೊಂಡಿರುವ ಬಿಜೆಪಿಯು ಈ ದೇಶಕ್ಕೆ ನೀಡಿರುವ ಕೊಡುಗೆ ಇದು ಎಂದೇ ಹೇಳಬೇಕು. ಅತ್ಯಾಚಾರಗಳಾಗಲಿ, ಅಪರಾಧ ಪ್ರಕರಣಗಳಾಗಲಿ ಎಲ್ಲವೂ ದ್ವೇಷ ಪ್ರಚಾರದ ಫಲಿತಾಂಶಗಳಾಗಿವೆ. ಮುಸ್ಲಿಮರನ್ನು ಹಿಂದೂ ಧರ್ಮದ ಶತ್ರುಗಳಂತೆ ಬಿಂಬಿಸುವುದರಿಂದ  ಬಿಜೆಪಿ ರಾಜಕೀಯ ಲಾಭವನ್ನೇನೋ ಪಡೆಯುತ್ತಿದೆ. ಆದರೆ, ಬಿಜೆಪಿಯ ಪ್ರಚೋದನೆಯಿಂದ ಪ್ರೇರಣೆ ಪಡೆದ ಬಿಸಿರಕ್ತದ ಯುವ ತಲೆಮಾರು ಮುಸ್ಲಿಮರ ಮೇಲೆ ಹಲ್ಲೆ ನಡೆಸಿ ಯಶಸ್ವಿಯಾದ ಧೈರ್ಯದಿಂದ ಇನ್ನಿತರ ಕ್ರಿಮಿನಲ್ ಕೃತ್ಯಗಳಿಗೂ ಧೈರ್ಯ ತೋರುತ್ತಾರೆ. ಆರಂಭದಲ್ಲಿ ಇಂಥ ಯುವಕರ ಗುರಿ ಮುಸ್ಲಿಮರೇ ಆಗಿದ್ದರೂ ಆ ಬಳಿಕ ಅವರು ತಮ್ಮ ಗಮನವನ್ನು ಇನ್ನಿತರ ಕಡೆಗಳಿಗೂ ಹರಿಸುತ್ತಾರೆ. ರಾಜಕಾರಣಿಗಳ ಪ್ರಭಾವ ಬಳಸಿ ಮುಸ್ಲಿಮ್ ಹಿಂಸೆಯ ಆರೋಪದಿಂದ ಸುಲಭದಲ್ಲೇ  ಹೊರಬರುವ ಸನ್ನಿವೇಶವು ಅವರನ್ನು ಹಫ್ತಾ ವಸೂಲಿ, ಬೆದರಿಕೆ, ಸುಪಾರಿ ಹತ್ಯೆಗಳಂಥ ಕ್ರಿಮಿನಲ್ ಕೃತ್ಯಗಳಲ್ಲೂ ಭಾಗಿಯಾಗುವಂತೆ ಮಾಡುತ್ತಿದೆ. ನಿಧಾನಕ್ಕೆ ಇಂಥವರು ಆಯಾ ಊರಿನ ಡಾನ್‌ಗಳಂತೆ ವರ್ತಿಸತೊಡಗುತ್ತಾರೆ. ಅಪರಾಧ ಕೃತ್ಯಗಳಲ್ಲಿ ಸಹಜವೆಂಬAತೆ ಭಾಗಿಯಾಗತೊಡಗುತ್ತಾರೆ. ಹೆಣ್ಣಿನ ಅಪಹರಣ, ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರಗಳಂಥ ಕೃತ್ಯಗಳಲ್ಲೂ ಇವರು ಭಾಗಿಯಾಗುತ್ತಾರೆ. ಅಂದಹಾಗೆ,

ನಿರ್ದಿಷ್ಟ ಉದ್ಯೋಗ ಇಲ್ಲದ ಇವರಿಗೆ ಆದಾಯ ಮೂಲವಾಗಿ ಇವುಗಳಲ್ಲಿ ಭಾಗಿಯಾಗಲೇಬೇಕಾದ ಅನಿವಾರ್ಯತೆಯೂ ಎದುರಾಗುತ್ತದೆ. ಇಂಥವರನ್ನೇ ಈ ದ್ವೇಷ ರಾಜಕೀಯದ ಮಂದಿ ತಮ್ಮ ಲಾಭಕ್ಕಾಗಿ ಆಗಾಗ್ಗೆ ಬಳಸಿಕೊಳ್ಳುತ್ತಾ ಇರುತ್ತಾರೆ. ಮಾತ್ರವಲ್ಲ, ಇವರನ್ನು ಸಾಕುವುದು ಕಷ್ಟ ಎಂದು ಅನಿಸಿದಾಗ ಕೈ ಕೊಡುತ್ತಾರೆ. ನಿಜವಾಗಿ,

ಒಂಟಿ ಮಹಿಳೆಯರು ಪ್ರಯಾಣಿಸಲಾಗದ ದೇಶ ಎಂದು ಟ್ರಂಪ್ ಸರಕಾರ ಭಾರತವನ್ನು ಅವಮಾನಿಸಿರುವುದರ ಸಂಪೂರ್ಣ ಹೊಣೆಯನ್ನು ಮೋದಿ ಸರಕಾರವೇ ಹೊತ್ತುಕೊಳ್ಳಬೇಕು. ಹೆಣ್ಣನ್ನು ದೇವತೆ ಎಂದು ಗುರುತಿಸುವ ದೇಶದಲ್ಲಿ ಹೆಣ್ಣು ಸುರಕ್ಷಿತವಲ್ಲ ಎಂದು ಟ್ರಂಪ್ ಸರಕಾರ ಘೋಷಿಸಿರುವುದು 140 ಕೋಟಿ ಭಾರತೀಯರಿಗೆ ಮಾಡಲಾದ ಅವಮಾನ. ಇಂಥದ್ದೊಂದು  ಅವಮಾನಕರ ಪರಿಸ್ಥಿತಿ ದೇಶದಲ್ಲಿ ಯಾಕಿದೆ ಎಂಬುದನ್ನು ದೇಶದ ನಾಗರಿಕರು ಅವಲೋಕನ ನಡೆಸಬೇಕು. ಬಿಜೆಪಿ ತನ್ನ ರಾಜಕೀಯ ಅಧಿಕಾರಕ್ಕೆ ನೆಟ್ಟು ಬೆಳೆಸಿದ ಮುಸ್ಲಿಮ್ ದ್ವೇಷಕ್ಕೆ ಇದರಲ್ಲಿ ಎಷ್ಟು ಪಾತ್ರ ಇದೆ ಎಂಬುದಾಗಿಯೂ ವಿಶ್ಲೇಷಣೆ ನಡೆಸಬೇಕು.

ನೀವು ಒಂದು ಬಾರಿ ಜನರಿಗೆ ದ್ವೇಷಿಸಲು ಕಲಿಸಿದರೆ ಆ ಬಳಿಕ ಅವರು ನೀವು ಸೂಚಿಸಿದವರನ್ನೇ ದ್ವೇಷಿಸುವುದಲ್ಲ, ನೀವು ಪ್ರೀತಿಸಬೇಕು ಎಂದವರನ್ನೂ ದ್ವೇಷಿಸತೊಡಗುತ್ತಾರೆ. ದ್ವೇಷ ಎಂಬುದು ಜನರನ್ನು ಕ್ರಿಮಿನಲ್ ಕೃತ್ಯದತ್ತ ಕೊಂಡೊಯ್ಯುವ ಅಫೀಮು. ಒಮ್ಮೆ ಈ ಅಫೀಮನ್ನು ತಿನ್ನಿಸಿದರೆ ಆ ಬಳಿಕ ಅದರ ಅಡ್ಡಪರಿಣಾಮದಿಂದ ಹೆಣ್ಣೂ ಸುರಕ್ಷಿತಳಲ್ಲ. ದೇಶವೂ ಸುರಕ್ಷಿತವಲ್ಲ. ಎಪಿಸಿಆರ್ ವರದಿಗೆ ಮತ್ತು ಅಮೇರಿಕದ ಘೋಷಣೆಗೆ ಈ ಅಫೀಮು ತಿಂದವರು ಮತ್ತು ತಿನ್ನಿಸಿದವರೇ ನೇರ ಹೊಣೆ.

No comments:

Post a Comment