Wednesday, 6 February 2013

‘ಪಾಶಿ’ಗೆ ಒಳಗಾಗುವ ಮಕ್ಕಳ ಮಧ್ಯೆ ನಾವು-ನೀವು?

ಸ್ನೇಹ

  ವಿದ್ಯಾರ್ಥಿ- ಯುವಸಮೂಹದ ಬಗ್ಗೆ ಈ ದೇಶದಲ್ಲಿ ದೊಡ್ಡದೊಂದು ನಿರೀಕ್ಷೆಯಿದೆ. ಹೆತ್ತವರು, ಶಿಕ್ಷಕರು, ಸಂಘಟನೆಗಳು, ರಾಜಕೀಯ ಪಕ್ಷಗಳು.. ಎಲ್ಲರೂ ಈ ವರ್ಗದ ಮೇಲೆ ಬಣ್ಣ ಬಣ್ಣದ ಕನಸುಗಳನ್ನು ಕಟ್ಟಿಕೊಂಡು ಬದುಕುತ್ತಿದ್ದಾರೆ. ಭ್ರಷ್ಟಮುಕ್ತ, ಅತ್ಯಾಚಾರಮುಕ್ತ, ಕೆಡುಕು ಮುಕ್ತ ದೇಶವಾಗಿ ಭಾರತವನ್ನು ಕಟ್ಟಲು ಈ ಸಮೂಹಕ್ಕೆ ಸಾಧ್ಯವಾಗಲಿದೆ ಎಂಬ ನಂಬುಗೆಯನ್ನು ಆಗಾಗ ವ್ಯಕ್ತಪಡಿಸಲಾಗುತ್ತಿದೆ. ಆದರೆ ಇವೇ ಯುವ ಸಮೂಹ ಕೆಲವೊಮ್ಮೆ ಸುದ್ದಿ ಮಾಡುತ್ತಿರುವ ರೀತಿಯನ್ನು ನೋಡುವಾಗ ಆಘಾತವಾಗುತ್ತದೆ. ದೇಶ ಇಂಥವರ ಕೈಯಲ್ಲಿ ಸುರಕ್ಷಿತವಾಗಿ ಉಳಿಯ ಬಲ್ಲುದೇ ಅನ್ನುವ ಅನುಮಾನಗಳೂ ಕಾಡುತ್ತವೆ. 1. ಬೆಂಗಳೂರು ಸಮೀಪದ ರಾಮನಗರ ಜಿಲ್ಲೆಯ ಮೂವರು ಪಿಯುಸಿ ವಿದ್ಯಾರ್ಥಿಗಳು ಉಡುಪಿ ಜಿಲ್ಲೆಯ ಸಮುದ್ರ ಕಿನಾರೆಗೆ ಬಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರೀತಿಯೇ ಈ ಸಾವಿಗೆ ಕಾರಣ. 2. ಹೈಸ್ಕೂಲ್ ಮಟ್ಟದಲ್ಲೇ ಮಾದಕ ಚಟವನ್ನು ಅಂಟಿಸಿಕೊಂಡಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಸ್ನೇಹ ಎಂಬ ವಿಧ್ಯಾರ್ಥಿನಿ  ಆತ್ಮಹತ್ಯೆ ಮಾಡಿ ಕೊಂಡಿದ್ದಾಳೆ. ಡ್ರಗ್ಸ್ ಗೆ ಹೆತ್ತವರು ದುಡ್ಡು ಕೊಡದಿರುವುದೇ ಆತ್ಮಹತ್ಯೆಗೆ ಕಾರಣ..
  ಕಳೆದ ವಾರದ ಹತ್ತಾರು ಸುದ್ದಿಗಳ ಮಧ್ಯೆ ಅತ್ಯಂತ ಆಳವಾಗಿ ಇರಿದ ಎರಡು ಸುದ್ದಿಗಳಿವು. ನಿಜವಾಗಿ, ಸಂಪಾದಕೀಯಕ್ಕೆ ಈ ಎರಡು ಸುದ್ದಿಗಳನ್ನು ಆಯ್ಕೆ ಮಾಡಿಕೊಳ್ಳಬೇಕಾದ ಅಗತ್ಯವೇನೂ ಇರಲಿಲ್ಲ. ಒಂದೇ ದಿನ ನಡೆದ ಈ ಎರಡು ಘಟನೆಗಳು ಮಾಧ್ಯಮಗಳ ಮುಖಪುಟದಲ್ಲಿ ಪ್ರಕಟವಾಗಿಯೂ ಇರಲಿಲ್ಲ. ಆದರೆ ಸಾವಿಗೀಡಾದ ಈ ಮೂರು ಜೀವಗಳಿಗೆ 'ಮೂರು' ಎಂಬ ಗುರುತಿಗಿಂತ ಹೊರತಾದ ಮಗ್ಗುಲುಗಳಿವೆ. ಬದುಕಿನಲ್ಲಿ ಸಾಧನೆಗಳನ್ನೆಲ್ಲ ಮಾಡಿ ವೃದ್ಧಾಪ್ಯದಲ್ಲಿ ಸಾವಿಗೀಡಾಗುವ ಹಿರಿಯರಂಥಲ್ಲ ಈ ಮೂರು ಜೀವಗಳು. ನಿಜವಾಗಿ, ಪ್ರೇಮಕ್ಕೋ ಮಾದಕ ವ್ಯಸನಕ್ಕೋ ಬಲಿ ಬಿದ್ದು ಬದುಕನ್ನೇ ಕೊನೆಗೊಳಿಸುವ ದೊಡ್ಡದೊಂದು ಎಳೆಪ್ರಾಯದ ಗುಂಪು ನಮ್ಮ ಮಧ್ಯೆ ಇವೆ. ಅವು ಪತ್ರಿಕೆಗಳ ಮುಖಪುಟದಲ್ಲಿ ಸುದ್ದಿ ಮಾಡುವುದಿಲ್ಲ. ರಾಜಕೀಯ ವೇದಿಕೆಗಳಲ್ಲಿ ಚರ್ಚೆಗೊಳಗಾಗುವುದಿಲ್ಲ. ಸಂಪಾದಕೀಯಕ್ಕೆ ವಸ್ತುವಾಗುವುದಿಲ್ಲ.. ಹೀಗೆ ಯಾರ ಗಮನಕ್ಕೂ ಬಾರದೇ ಕಳೆದು ಹೋಗುವ ಮಕ್ಕಳ ಬಗ್ಗೆ ಗಂಭೀರ ಚರ್ಚೆಯಾಗಬೇಕಾದ ಅಗತ್ಯ ಇದೆ. ಅಂದಹಾಗೆ, ತಮಗೆ ತಾವೇ ಪಾಶಿ ಕೊಟ್ಟುಕೊಳ್ಳಬೇಕಾದಂಥ ಯಾವ ತಪ್ಪನ್ನೂ ಯಾವ ಮಕ್ಕಳೂ ಮಾಡಿರುವುದಿಲ್ಲ. ಹೆತ್ತವರು ಮಕ್ಕಳಿಗೆ ಬುದ್ಧಿವಾದ ಹೇಳುವುದು ಮಕ್ಕಳು ಆತ್ಮಹತ್ಯೆ ಮಾಡಿಕೊಳ್ಳಲಿ ಎಂದೂ ಅಲ್ಲ. ಒಂದು ವೇಳೆ ತಮ್ಮ ಬುದ್ಧಿವಾದದಿಂದ ಮಕ್ಕಳು ಆತ್ಮಹತ್ಯೆಗೆ ಪ್ರಯತ್ನಿಸಿಯಾರು ಎಂಬ ಸಣ್ಣ ಅನುಮಾನ ಬಂದರೂ ಸಾಕು, ಯಾವ ಹೆತ್ತವರೂ ತಮ್ಮ ಮಕ್ಕಳಿಗೆ ಬುದ್ಧಿವಾದ ಹೇಳಲಾರರು. ಯಾಕೆಂದರೆ, ಎಳೆಪ್ರಾಯದ ಮಕ್ಕಳ ಸಾವು ಅತ್ಯಂತ ಹೆಚ್ಚು ಬಾಧಿಸುವುದು ಹೆತ್ತವರನ್ನು. ಅವರು ಮಕ್ಕಳ ಮೇಲೆ ದೊಡ್ಡದೊಂದು ಕನಸಿನ ಗೋಪುರವನ್ನೇ ಕಟ್ಟಿರುತ್ತಾರೆ. ತಮ್ಮ ಮಗು ಸಮಾಜದಲ್ಲಿ ಇಂತಿಂಥ ಪಾತ್ರವನ್ನು ನಿರ್ವಹಿಸಬೇಕು ಎಂದು ಆಸೆ ಪಟ್ಟಿರುತ್ತಾರೆ. ವೃದ್ಧಾಪ್ಯದಲ್ಲಿ ಆಸರೆಯಾಗಬಹುದು ಎಂದು ನಿರೀಕ್ಷಿಸಿರುತ್ತಾರೆ. ಹೀಗಿರುವಾಗ, ಬುದ್ಧಿವಾದವು ಮಗುವಿನ ಪ್ರಾಣವನ್ನೇ ಕಸಿದುಕೊಳ್ಳುವುದಾದರೆ ಯಾರು ತಾನೇ ಅಂಥ ಬುದ್ಧಿವಾದಕ್ಕೆ ಮುಂದಾದಾರು?
ರಾಜಕೀಯದ ಸುತ್ತ ಕೇಂದ್ರೀಕೃತಗೊಂಡಿರುವ ಮಾಧ್ಯಮ ಚರ್ಚೆಗಳು ಆಗಾಗ ಇಂಥ ಸಾವುಗಳ ಸುತ್ತವೂ ತಿರುಗಬೇಕಾದ ಅಗತ್ಯ ಇದೆ. ರಾಜಕೀಯವನ್ನು ಒಂದು ದಿನದ ಮಟ್ಟಿಗೆ ಬದಿಗಿರಿಸಿ, ಎಳೆಯರ ‘ಪಾಶಿ’ಗಳಿಗೆ ಮುಖಪುಟವನ್ನು ಮೀಸಲಿರಿಸಿದರೆ ಖಂಡಿತ ಓದುಗರ ಚರ್ಚಾವಸ್ತುವೇ ಬದಲಾಗುವುದಕ್ಕೆ ಸಾಧ್ಯವಿದೆ. ಇಷ್ಟಕ್ಕೂ, ದೆಹಲಿಯಲ್ಲಿ ನಡೆದ ಅತ್ಯಾಚಾರ ಘಟನೆಯನ್ನು ಮಾಧ್ಯಮಗಳು ವಾರಗಟ್ಟಲೆ ಮುಖಪುಟದಲ್ಲಿಟ್ಟು ಚರ್ಚಿಸಿದ್ದರಿಂದಲೇ ವ್ಯಾಪಕ ಪ್ರತಿಭಟನೆಗೆ, ವರ್ಮಾ ಆಯೋಗದ ನೇಮಕಕ್ಕೆ ಮತ್ತು ಅದರ ಶಿಫಾರಸ್ಸುಗಳಿಗೆ ಕೇಂದ್ರ ಸಚಿವ ಸಂಪುಟ ಅನುಮತಿ ನೀಡುವುದಕ್ಕೆ ಕಾರಣವಾಗಿದೆಯಲ್ಲವೇ? ಒಂದು ವೇಳೆ, ಆ ಘಟನೆಗೆ ಆ ಮಟ್ಟದಲ್ಲಿ ಮಾಧ್ಯಮ ಪ್ರಚಾರ ಸಿಗದೇ ಇರುತ್ತಿದ್ದರೆ, ಇಷ್ಟು ಶೀಘ್ರವಾಗಿ ಕಾನೂನೊಂದು ನಿರ್ಮಾಣವಾಗುವುದಕ್ಕೆ ಸಾಧ್ಯವಿತ್ತೇ?
  ಯುವಸಮೂಹವನ್ನು ದೇಶದ ಭವಿಷ್ಯ ಎಂದು ಕೊಂಡಾಡುವಾಗ ಈ ಸಮೂಹವನ್ನು ಜವಾಬ್ದಾರಿಯುತ ವರ್ಗವಾಗಿ ಬೆಳೆಸಬೇಕಾದ ಜವಾಬ್ದಾರಿಯನ್ನೂ ಹೊತ್ತುಕೊಳ್ಳಬೇಕಾಗಿದೆ. ಮದ್ಯ, ಡ್ರಗ್ಸ್, ಪ್ರೀತಿ-ಪ್ರೇಮಗಳ ಸುಳಿಯಲ್ಲಿ ಈ ಸಮೂಹ ಕಳೆದುಹೋಗದಂತೆ ಜಾಗರೂಕತೆ ಪಾಲಿಸಬೇಕಾದ ತುರ್ತಿದೆ. ಕೆಡುಕು, ಅಶ್ಲೀಲತೆಗಳು, ಜಾಗತಿಕವಾಗಿ ವ್ಯಾಪಿಸಿಕೊಂಡಿರುವ ಸಂದರ್ಭ ಇದು. ಮಕ್ಕಳು ಕೆಡುವುದಕ್ಕೆ ನೂರಾರು ದಾರಿಗಳು ನಮ್ಮ ಸುತ್ತ-ಮುತ್ತಲೇ ತೆರೆದುಕೊಂಡಿರುವಾಗ ಅವುಗಳಿಂದ ತಪ್ಪಿಸಿ ಬೆಳೆಸುವ ಹೆತ್ತವರ ಹೊಣೆಗಾರಿಕೆ ಸಣ್ಣದೇನಲ್ಲ. ಇಂಥ ಸಂದರ್ಭಗಳಲ್ಲಿ ಹೆತ್ತವರು ಮತ್ತು ಶಿಕ್ಷಕರು ಸಂಯಮದಿಂದ ವರ್ತಿಸಬೇಕು. ಯಾಕೆಂದರೆ ಮಕ್ಕಳಿಗೆ ತಪ್ಪು ಮಾಡಲು ಗೊತ್ತಿರುತ್ತದೆಯೇ ಹೊರತು, ಎದುರಾಗುವ ಸವಾಲುಗಳಿಗೆ ಉತ್ತರಿಸುವುದು ಗೊತ್ತಿರುವುದಿಲ್ಲ. ಒಂದು ರೀತಿಯಲ್ಲಿ ಹೆತ್ತವರ ಶಿಕ್ಷೆಯ ಬಗ್ಗೆ ಹತ್ತು-ಹಲವು 'ಭಯ'ಗಳನ್ನು ಮನದಲ್ಲಿ ಪೋಷಿಸುತ್ತಾ ಅವು ಬದುಕುತ್ತವೆ. ಅಂಥ ಭಯಗಳನ್ನು ಇಮ್ಮಡಿಗೊಳಿಸುವ ರೂಪದಲ್ಲಿ ಹೆತ್ತವರ ವರ್ತನೆ ಇರಬಾರದು. ತಪ್ಪನ್ನು ತಿದ್ದಿಕೊಳ್ಳುವುದಕ್ಕೆ ಅವಕಾಶ ಮಾಡಿಕೊಡಬೇಕು. ಪ್ರೀತಿಯಿಂದ ಮಾತಾಡಿಸಿ ಆಪ್ತತೆ ಬೆಳೆಸಿಕೊಳ್ಳಬೇಕು.
  ಏನೇ ಆಗಲಿ, ಸಮುದ್ರ ಕಿನಾರೆಯಲ್ಲೋ ಫ್ಯಾನಿನಲ್ಲೋ  ನೇತಾಡಿಕೊಂಡು ಕಳೆದು ಹೋಗಬೇಕಾದವರಲ್ಲ ನಮ್ಮ ಮಕ್ಕಳು. ಅವರು ಈ ಸಮಾಜದ ಮುತ್ತುಗಳು. ಅವರನ್ನು ಈ ದೇಶ ಅವಲಂಬಿಸಿಕೊಂಡಿದೆ. ಹೆತ್ತವರು, ಸಮಾಜ, ಸಂಘಟನೆಗಳು.. ಎಲ್ಲವೂ ಅವರ ಮೇಲೆ ಭರವಸೆ ಇಟ್ಟು ಬದುಕುತ್ತಿವೆ. ಆದ್ದರಿಂದ, ಯುವ ಸಮೂಹವನ್ನು ಜತನದಿಂದ ಕಾಪಾಡಬೇಕಾದ ಹೊಣೆಗಾರಿಕೆಯನ್ನು ಎಲ್ಲರೂ ಹೊತ್ತುಕೊಳ್ಳಬೇಕಿದೆ. ಹೆತ್ತವರಿಗೋ ಸಮಾಜಕ್ಕೋ ಹೆದರಿ ಪಾಶಿಗೆ ಮುಂದಾಗುವ ಮಕ್ಕಳಿಗೆ ಧೈರ್ಯ ತುಂಬಿ ತಿದ್ದಬೇಕಿದೆ. ‘ಸಾವು ಯಾವುದಕ್ಕೂ ಪರಿಹಾರ ಅಲ್ಲ..’ ಎಂಬ ಜಾಗೃತಿ ಪ್ರಜ್ಞೆಯನ್ನು ಯುವ ಪೀಳಿಗೆಯಲ್ಲಿ ತುಂಬಬೇಕಿದೆ.

No comments:

Post a Comment