Monday, 18 February 2013

`ಪಿಸ್ಟೋರಿಯಸ್’ಗಳನ್ನು ಆಯ್ಕೆ ಮಾಡಿಕೊಳ್ಳುವ ಮೊದಲು...


   ಈ ಜಗತ್ತಿನಲ್ಲಿ ದಿನ ಬೆಳಗಾಗುವುದರೊಳಗೆ ರೋಲ್ ಮಾಡೆಲ್‍ಗಳು ಉದಯಿಸುವುದಿದೆ. ನೂರು ಮೀಟರ್ ಓಟವನ್ನು ವಿಶ್ವದಾಖಲೆಯ ಸಮಯದೊಂದಿಗೆ ಓಡಿ ಮುಗಿಸಿದರೆ; ಕಾರ್ ರೇಸ್, ಸೈಕ್ಲಿಂಗ್ ರೇಸ್‍ನಲ್ಲಿ ವಿಶ್ವದಾಖಲೆ ಮಾಡಿದರೆ; ಕ್ರಿಕೆಟ್ಟು, ಟೆನ್ನಿಸ್‍ನಲ್ಲಿ ಅಮೋಘ ಸಾಧನೆ ಮಾಡಿದರೆ.. ಕ್ರೀಡಾ ಪಟುಗಳು ಮಾಧ್ಯಮಗಳನ್ನಿಡೀ ತುಂಬಿಕೊಳ್ಳುತ್ತಾರೆ. ಬ್ರೇಕಿಂಗ್ ನ್ಯೂಸೂ ಅವರೇ. ಎಕ್ಸ್ ಕ್ಲೂಸಿವ್ ನ್ಯೂಸೂ ಅವರೇ. ಅವರ ಬದುಕು, ಹಿನ್ನೆಲೆ, ಶ್ರಮ ಇತ್ಯಾದಿಗಳೆಲ್ಲವೂ ಮಾಧ್ಯಮಗಳಲ್ಲಿ ಚರ್ಚೆಗೊಳಗಾಗುತ್ತವೆ. ಕ್ರೀಡಾಪಟುಗಳೆಲ್ಲ ಯುವ ಪ್ರಾಯದವರೇ ಆಗಿರುವುದರಿಂದ ಯುವ ಸಮೂಹವು ಸಹಜವಾಗಿ ಈ ಚರ್ಚೆಗಳಿಂದ ಆಕರ್ಷಿತಗೊಳ್ಳುತ್ತದೆ. ಕ್ರಮೇಣ ಅವರೊಳಗೆ ಈ ಕ್ರೀಡಾಪಟುಗಳು ಚಿಕ್ಕದೊಂದು ಗೂಡು ಕಟ್ಟತೊಡಗುತ್ತಾರೆ. ಅವರನ್ನು ರೋಲ್ ಮಾಡೆಲ್‍ಗಳಂತೆ ಪ್ರೀತಿಸತೊಡಗುತ್ತಾರೆ. ತಮ್ಮ ಪುಸ್ತಕದಲ್ಲಿ, ಟೀ ಶರ್ಟು, ಫೇಸ್‍ಬುಕ್‍ನಲ್ಲಿ.. ಇವರನ್ನು ತುಂಬಿಸಿಕೊಳ್ಳುತ್ತಾರೆ. ಅವರ ಪ್ರಾಯ, ದೇಶ, ಸಾಧನೆಗಳು, ಅವರಿಗಿರುವ ಸಂಬಂಧಗಳು.. ಹೀಗೆ ಸಕಲ ಮಾಹಿತಿಗಳನ್ನೂ ಸಂಗ್ರಹಿಸಿಟ್ಟುಕೊಳ್ಳುವ ಅಪ್ಪಟ ಫ್ಯಾನ್ ಕ್ಲಬ್‍ಗಳೂ ಇರುತ್ತವೆ. ಸೈಕ್ಲಿಂಗ್‍ನಲ್ಲಿ ನಿಬ್ಬೆರಗಾಗುವ ಸಾಧನೆ ಮಾಡಿದ ಅಮೇರಿಕದ ಆರ್ಮ್ ಸ್ಟ್ರಾಂಗ್ ನಿಂದ ಎಷ್ಟು ಮಂದಿ ಪ್ರಭಾವಿತವಾಗಿಲ್ಲ? ಕ್ಯಾನ್ಸರ್ ರೋಗಿಯಾಗಿದ್ದಾಗ ಅವರು ತೋರಿದ ಅಪಾರ ಆತ್ಮವಿಶ್ವಾಸ, ಕೆಚ್ಚೆದೆಯ ಬಗ್ಗೆ ಎಷ್ಟು ಬಾರಿ ಪತ್ರಿಕೆಗಳು ಬರೆದಿಲ್ಲ? ಅಂದ ಹಾಗೆ ಆತ ಕ್ಯಾನ್ಸರ್‍ನಿಂದ ಹೊರಬಂದು ಸೈಕ್ಲಿಂಗ್ ರೇಸ್‍ನಲ್ಲಿ ಎಲ್ಲ ದಾಖಲೆಗಳನ್ನೂ ಅಳಿಸಿ ಹಾಕಿದ್ದು ಸಣ್ಣ ಸಾಧನೆಯೇನೂ ಆಗಿರಲಿಲ್ಲ. ಆದರೆ ಆ ಸಾಧನೆಯ ಹಿಂದೆ ನಿಷೇಧಿತ ಔಷಧಿಗಳ (ಡ್ರಗ್ಸ್) ಪ್ರಭಾವವಿತ್ತು ಎಂಬುದನ್ನು ಆತ ಒಂದು ತಿಂಗಳ ಹಿಂದೆ ಬಹಿರಂಗವಾಗಿಯೇ ಒಪ್ಪಿಕೊಂಡ. ನಿಷೇಧಿತ ಔಷಧಗಳನ್ನು ಸೇವಿಸದೇ ತಾನು ಅಂಥ ಸಾಧನೆ ಮಾಡುವುದಕ್ಕೆ ಸಾಧ್ಯವೇ ಇರಲಿಲ್ಲ ಎಂದೂ ಹೇಳಿದ. ಇದೀಗ ಆಸ್ಕರ್ ಪಿಸ್ಟೋರಿಯಸ್ ಎಂಬ ‘ಬ್ಲೇಡ್ ರನ್ನರ್’ ತಪ್ಪು ಮಾಡಿ ಜೈಲು ಸೇರಿದ್ದಾನೆ.
  ಕಳೆದ ಲಂಡನ್ ಒಲಿಂಪಿಕ್ಸ್ ನಲ್ಲಿ ಪಿಸ್ಟೋರಿಯಸ್ ಸಾಕಷ್ಟು ಸುದ್ದಿ ಮಾಡಿದ್ದ. ಎರಡೂ ಕಾಲುಗಳಿಲ್ಲದ ಈತ, ಕಾರ್ಬನ್ ಫೈಬರ್‍ನಿಂದ ತಯಾರಿಸಲಾದ ಕೃತಕ ಕಾಲುಗಳಿಂದ ಓಡಿ ಕಾಲುಳ್ಳವರನ್ನೂ ನಾಚಿಸಿದ್ದ. ಆತನ ಓಟ ಎಷ್ಟು ಆಕರ್ಷಣೀಯವೆಂದರೆ, ಕಾಲಿದ್ದವರೂ ಬೆರಗಾಗುವಷ್ಟು. ಆದ್ದರಿಂದಲೇ ನೂರು ಮೀಟರ್ ಓಟದ ವಿಶ್ವಚಾಂಪಿಯನ್ ಉಸೇನ್ ಬೋಲ್ಟ್ ನಂತೆಯೇ ಭಾರೀ ತಾರಾ ವರ್ಚಸ್ಸನ್ನು ಗಳಿಸಿಕೊಂಡ. ಬ್ಲೇಡ್‍ನಂತಹ ಕೃತಕ ಕಾಲುಗಳನ್ನು ಹೊಂದಿರುವುದರಿಂದ ‘ಬ್ಲೇಡ್ ರನ್ನರ್' ಅನ್ನುವ ಹೊಸ ಪದಪ್ರಯೋಗವೊಂದೂ ಆತನಿಗಾಗಿ ಹುಟ್ಟಿಕೊಂಡಿತು. ದಕ್ಷಿಣ ಆಫ್ರಿಕದಾದ್ಯಂತ ಆತನ ಬೃಹತ್ ಕಟೌಟ್‍ಗಳು, ಪ್ಲೆಕ್ಸ್ ಗಳೂ ಕಾಣಿಸಿಕೊಂಡವು. ಆತನ ಜೀವನೋತ್ಸಾಹ, ಆತ್ಮವಿಶ್ವಾಸಗಳೆಲ್ಲ ಭಾಷಣಗಳ ವಸ್ತುವಾಗಿ ಬಿಟ್ಟುವು. ಶಿಕ್ಷಕರು ಒಂದಲ್ಲ ಒಂದು ಸಂದರ್ಭದಲ್ಲಿ ಆತನನ್ನು ಉಲ್ಲೇಖಿಸಿ ವಿದ್ಯಾರ್ಥಿಗಳಿಗೆ ಪಾಠ ಮಾಡುವಷ್ಟು ಆತ ಖ್ಯಾತನಾಗಿ ಬಿಟ್ಟಿದ್ದ. ಆದರೆ ಇದೀಗ ಆತ ಕೊಲೆ ಆರೋಪಿಯಾಗಿ ಜೈಲು ಸೇರಿದ್ದಾನೆ. ಅದರ ಜೊತೆಗೇ ಆತನ ಬದುಕಿನ ಇನ್ನೊಂದು ಮಗ್ಗುಲೂ ತೆರೆದುಕೊಳ್ಳತೊಡಗಿದೆ. ತನ್ನ ಪ್ರೇಯಸಿ ರೀವಾ ಸ್ಟಿನ್‍ಕ್ಯಾಂಪ್‍ಳನ್ನು ಕಳೆದವಾರ ಗುಂಡಿಟ್ಟು ಕೊಂದ ಈ ಬ್ಲೇಡ್ ರನ್ನರ್‍ನ ವಯಸ್ಸು ಬರೇ 26. ಈ ಸಣ್ಣ ಪ್ರಾಯದಲ್ಲೇ ಈತನ ಬದುಕಿನಲ್ಲಿ 6 ಹೆಣ್ಣು ಮಕ್ಕಳ ಪ್ರವೇಶವಾಗಿದೆ. ಓರ್ವಳನ್ನು ಕೊಂದಿದ್ದಾನೆ. ಉಳಿದವರನ್ನು ಕೈಬಿಟ್ಟಿದ್ದಾನೆ. ಆತನ ಸಿಟ್ಟಿನ ಬಗ್ಗೆ, ಈ ಹಿಂದೆ ಜೈಲು ಶಿಕ್ಷೆ ಅನುಭವಿಸಿರುವುದರ ಬಗ್ಗೆಯೆಲ್ಲಾ ಮಾಧ್ಯಮಗಳಲ್ಲಿ ಇದೀಗ ಸುದ್ದಿಗಳು ಬರತೊಡಗಿವೆ..
   ನಿಜವಾಗಿ ಇವತ್ತು ರೋಲ್ ಮಾಡೆಲ್‍ಗಳ ಭಾರೀ ಕೊರತೆಯಿದೆ. ರಾಜಕಾರಣಿಗಳಂತೂ ರೋಲ್ ಮಾಡೆಲ್‍ಗಳ ಪಟ್ಟಿಯಿಂದ ಈಗಾಗಲೇ ಹೊರಬಿದ್ದಿದ್ದಾರೆ. ಸತ್ಯ, ಪ್ರಾಮಾಣಿಕತೆ, ಮನುಷ್ಯತ್ವಕ್ಕೆಲ್ಲಾ ರಾಜಕಾರಣಿಗಳ ಪಟ್ಟಿಯಲ್ಲಿ ಮಾದರಿಗಳು ಸಿಗಲು ಸಾಧ್ಯವೇ ಇಲ್ಲ ಅನ್ನುವ ನಂಬಿಕೆ ಸಾರ್ವತ್ರಿಕವಾಗಿ ಬಿಟ್ಟಿದೆ. ಹೀಗಿರುವಾಗ ರಾಜಕಾರಣಿಗಳನ್ನು ಬಿಟ್ಟರೆ ಉಳಿದಂತೆ ಮಾಧ್ಯಮಗಳಲ್ಲಿ ಅತ್ಯಂತ ಸುದ್ದಿಯಲ್ಲಿರುವುದು ಒಂದೋ ಸಿನಿಮಾ ತಾರೆಯರು ಇಲ್ಲವೇ ಕ್ರೀಡಾಪಟುಗಳು. ಇವರಿಗಾಗಿ ಎಲ್ಲ ಪತ್ರಿಕೆಗಳು ಪ್ರತಿದಿನವೂ ಪುಟಗಳನ್ನು ಮೀಸಲಿಟ್ಟಿರುತ್ತವೆ. ಟಿ.ವಿ. ಚಾನೆಲ್‍ಗಳಲ್ಲೂ ಇವರಿಗಾಗಿ ಜಾಗ ಇರುತ್ತವೆ. ಇಂಥ ಹೊತ್ತಲ್ಲಿ, ಯುವ ಪೀಳಿಗೆಯು ಇವರನ್ನು ರೋಲ್ ಮಾಡೆಲ್ ಆಗಿ ಆಯ್ಕೆ ಮಾಡಿಕೊಳ್ಳದೇ ಇನ್ನಾರನ್ನು ಆಯ್ಕೆ ಮಾಡಿಕೊಳ್ಳಬೇಕು? ಇಷ್ಟಕ್ಕೂ, ಇಂಥ ಮಾದರಿಗಳು  ಪಿಸ್ಟೋರಿಯಸ್‍ನಂತೆ ತಲೆತಗ್ಗಿಸಿ ಕೂತರೆ ಅವರನ್ನು ರೋಲ್ ಮಾಡೆಲ್ ಆಗಿ ಆಯ್ಕೆ ಮಾಡಿಕೊಂಡಿರುವ ಯುವ ಸಮೂಹದ ಮೇಲೆ ಅದು ಎಂಥ ಪರಿಣಾಮ ಬೀರಬಹುದು? ತಮ್ಮ ಮಾದರಿ ವ್ಯಕ್ತಿ ವಂಚನೆಯ ಮೂಲಕ ವಿಶ್ವದಾಖಲೆ ಮಾಡಿದ್ದಾನೆ ಎಂದು ಗೊತ್ತಾದರೆ ಅದು ಯುವ ಪೀಳಿಗೆಯನ್ನು, ‘ಎಲ್ಲರೂ ಹೀಗೆಯೇ’ ಅನ್ನುವ ಭಾವಕ್ಕೆ ಕೊಂಡೊಯ್ಯದೇ? ವಂಚನೆ, ಅನೈತಿಕ ಬದುಕು, ಕುಡಿತ.. ಮುಂತಾದುವುಗಳನ್ನೆಲ್ಲ ಹಗುರವಾಗಿ ಪರಿಗಣಿಸಲು, ಅವುಗಳನ್ನು ತಪ್ಪುಗಳ ಪಟ್ಟಿಯಿಂದ ಹೊರ ಹಾಕಿ ಬಿಡಲು ಕಾರಣವಾಗದೇ? ಪ್ರಸಿದ್ಧಿ ಪಡೆಯಬೇಕಾದರೆ ಸರಿ-ತಪ್ಪುಗಳ ಬಗ್ಗೆ ಅಷ್ಟಾಗಿ ತಲೆ ಕೆಡಿಸಿಕೊಳ್ಳಬಾರದು ಎಂದು ಅವು ತೀರ್ಮಾನಿಸದೇ?
   ಯಾವುದೇ ಒಂದು ಪೀಳಿಗೆ ದೇಶದ ಪಾಲಿಗೆ ಪ್ರಯೋಜನಕಾರಿಯಾಗಬೇಕಾದರೆ ಅದು ಆಯ್ಕೆ ಮಾಡಿಕೊಳ್ಳುವ ಮಾದರಿ ವ್ಯಕ್ತಿತ್ವಗಳು ಎಲ್ಲ ರೀತಿಯಲ್ಲೂ ಮಾದರಿಗಳಾಗಿರಬೇಕಾದುದು ಬಹಳ ಅಗತ್ಯ. ತಪ್ಪು ವ್ಯಕ್ತಿತ್ವಗಳು ಯುವ ಸಮೂಹದ ಮಾದರಿ ಪಟ್ಟಿಯಲ್ಲಿ ಸೇರಿಕೊಂಡರೆ ತಪ್ಪು ವ್ಯಕ್ತಿತ್ವಗಳ ತಯಾರಿಗಷ್ಟೇ ಅದು ಪ್ರೇರಕವಾದೀತು. ದುರಂತ ಏನೆಂದರೆ, ಇಂದಿನ ಜಗತ್ತಿನಲ್ಲಿ ಪಿಸ್ಟೋರಿಯಸ್‍ನಂಥ ತಪ್ಪು ವ್ಯಕ್ತಿತ್ವಗಳೇ ಯುವ ಸಮೂಹಕ್ಕೆ ಮಾದರಿಗಳಾಗುತ್ತಿದ್ದಾರೆ ಅನ್ನುವುದು. ಆದ್ದರಿಂದ ಯುವ ಪೀಳಿಗೆಯನ್ನು ಅತ್ಯಂತ ಜಾಗರೂಕತೆಯಿಂದ ಬೆಳೆಸಬೇಕಾಗಿದೆ. ಮಾದರಿಗಳನ್ನು ಆಯ್ಕೆ ಮಾಡಿಕೊಳ್ಳಬಹುದಾದ ಪ್ರಾಯದಲ್ಲಿ ಸಿನಿಮಾ, ಕ್ರೀಡೆ ಮತ್ತಿತರ ಕ್ಷೇತ್ರಗಳಲ್ಲಿರುವವರ ಮಿತಿಗಳ ಬಗ್ಗೆಯೂ ಅವರಿಗೆ ಮನವರಿಕೆ ಮಾಡಿಸಬೇಕಾಗಿದೆ. ಮಾಧ್ಯಮಗಳ ನಿರ್ದಿಷ್ಟ ಪುಟಗಳಲ್ಲಿ ಪ್ರತಿ ದಿನವೂ ಕಾಣಿಸಿಕೊಳ್ಳುವ ಮಾಡೆಲ್‍ಗಳು ಯಾವ ಸಂದರ್ಭದಲ್ಲೂ ಕುಸಿದು ಬೀಳುವ ಸಾಧ್ಯತೆ ಇರುವುದರಿಂದ ಅವರಾಚೆಗಿನ ಚಾರಿತ್ರಿಕ ವ್ಯಕ್ತಿತ್ವಗಳನ್ನು ಮಾದರಿಯಾಗಿ ಯುವ ಸಮೂಹಕ್ಕೆ ಪರಿಚಯಿಸಬೇಕಾಗಿದೆ. ಇಲ್ಲದಿದ್ದರೆ ಯೌವನವನ್ನು ನಾಶಪಡಿಸಿಕೊಂಡ ಅನೇಕಾರು ಪಿಸ್ಟೋರಿಯಸ್‍ಗಳು ನಮ್ಮಲ್ಲೂ ಉದಯಿಸಿಯಾರು.

No comments:

Post a Comment