Wednesday 13 March 2013

36ನೇ ಹೆಜ್ಜೆಯಲ್ಲಿ ಖುಷಿಪಡುವುದಕ್ಕೆ ಕೆಲವು ಕಾರಣಗಳು


   36ನೇ ವರ್ಷದ ಈ ಪ್ರಥಮ ಸಂಚಿಕೆಯನ್ನು ಸನ್ಮಾರ್ಗ ಅತೀವ ಖುಷಿಯಿಂದ ಓದುಗರ ಕೈಗಿಡುತ್ತಿದೆ. ಸನ್ಮಾರ್ಗಕ್ಕೆ 35 ವರ್ಷಗಳು ತುಂಬಿತು ಎಂಬ ಕಾರಣಕ್ಕಾಗಿ ಪತ್ರಿಕೆ ಖುಷಿಪಡುತ್ತಿಲ್ಲ. ವರ್ಷಗಳು ಮನುಷ್ಯರಿಗೂ, ಪ್ರಾಣಿಗಳಿಗೂ ಕಲ್ಲು-ಮರಗಳಿಗೂ ತುಂಬುತ್ತಲೇ ಇರುತ್ತವೆ. ವರ್ಷಗಳು ತುಂಬಿದಂತೆಲ್ಲಾ ಜೀವ ವಿರೋಧಿ, ಮನುಷ್ಯ ವಿರೋಧಿ ಸ್ವಭಾವವನ್ನು ಹೆಚ್ಚುಗೊಳಿಸುತ್ತಾ ಹೋಗುವ ಮನುಷ್ಯರು ಸಮಾಜದಲ್ಲಿ ಧಾರಾಳ ಇದ್ದಾರೆ. ಆದ್ದರಿಂದಲೇ ಸನ್ಮಾರ್ಗ ಪ್ರಾಯ ತುಂಬುವುದನ್ನೇ ಸಾಧನೆಯೆಂದು ಎಂದೂ ಹೇಳಿಕೊಂಡಿಲ್ಲ. ಪ್ರಾಯ ಸಂಭ್ರಮಾರ್ಹ ಆಗುವುದು ಸಾಧನೆಯಿಂದ. ಸನ್ಮಾರ್ಗ ತನ್ನ ಹುಟ್ಟಿನ ಮೊದಲಿನಿಂದಲೂ ಒಂದು ಖಚಿತ ಅಭಿಪ್ರಾಯದೊಂದಿಗೆ ಓದುಗರ ಜೊತೆ ಮಾತಾಡಿದೆ. ಫ್ಯಾಸಿಝಮ್‍ನ ಬಗ್ಗೆ, ಕೋಮುವಾದ, ಭ್ರಷ್ಟಾಚಾರ, ಭಯೋತ್ಪಾದನೆ, ಬಡತನ ನಿರ್ಮೂಲನ, ಕೋಮು ಸೌಹಾರ್ದ, ಧರ್ಮ.. ಎಲ್ಲದರ ಬಗ್ಗೆಯೂ ಸನ್ಮಾರ್ಗ ಅತ್ಯಂತ ತಾರ್ಕಿಕವಾಗಿ ಮತ್ತು ಮೌಲ್ಯಯುತವಾಗಿ ತನ್ನ ಪುಟಗಳಲ್ಲಿ ಚರ್ಚಿಸಿದೆ. ಫ್ಯಾಸಿಝಮ್ ಮತ್ತು ಭ್ರಷ್ಟಾಚಾರದ ನಡುವೆ ಆಯ್ಕೆಯ ಸಂದರ್ಭ ಬಂದಾಗ ಫ್ಯಾಸಿಝಮ್ ಅನ್ನು ಅದು ಪ್ರಥಮ ಶತ್ರುವಾಗಿ ಪರಿಗಣಿಸಿದೆ. ಭಯೋತ್ಪಾದನೆ, ಜಿಹಾದ್..ಗಳ ಬಗ್ಗೆ ಸಮಾಜದಲ್ಲಿರುವ ಗೊಂದಲಗಳನ್ನು ನಿವಾರಿಸುವುದಕ್ಕಾಗಿ ಸನ್ಮಾರ್ಗ ಅನೇಕಾರು ಲೇಖನ, ಸಂಪಾದಕೀಯಗಳನ್ನು ಪ್ರಕಟಿಸಿದೆ. ನಿಜವಾಗಿ, ಕಳೆದ ನಾಲ್ಕೈದು ವರ್ಷಗಳಲ್ಲಿ ಸನ್ಮಾರ್ಗಕ್ಕೆ ದೊಡ್ಡದೊಂದು ಸವಾಲು ಎದುರಾಯಿತು. ಆ ವರೆಗೆ ಪೂರ್ಣ ಪ್ರಮಾಣದಲ್ಲಿ ಅಧಿಕಾರದ ರುಚಿ ಪಡೆದಿರದ ಫ್ಯಾಸಿಸ್ಟ್, ಕೋಮುವಾದಿ ವಿಚಾರಧಾರೆಗೆ ಈ ಸಂದರ್ಭದಲ್ಲಿ ಅದು ಲಭ್ಯವಾಯಿತು. ಸನ್ಮಾರ್ಗ ನಿರಂತರವಾಗಿ ಈ ವಿಚಾರಧಾರೆಯ ಅಪಾಯವನ್ನು ಓದುಗರ ಮುಂದಿಡುತ್ತಲೇ ಬಂದಿತು. ಫ್ಯಾಸಿಝಮ್ ವಿಚಾರಧಾರೆಯಿಂದ ಪ್ರಭಾವಿತವಾಗಿರುವ ಒಂದು ಸಚಿವ ಸಂಪುಟ, ಹೇಗೆ ತನ್ನ ಅಧಿಕಾರಿ ವರ್ಗವನ್ನು ಮತ್ತು ಕಾನೂನನ್ನು ದುರ್ಬಳಕೆ ಮಾಡಿಕೊಳ್ಳಬಹುದು ಎಂಬುದರ ಬಗ್ಗೆಯೂ ಎಚ್ಚರಿಸುತ್ತಾ ಬಂದಿತು. 6 ತಿಂಗಳ ಹಿಂದೆ ಮುತೀಉರ್ರಹ್ಮಾನ್ ಎಂಬ ಪತ್ರಕರ್ತನನ್ನು ಭಯೋತ್ಪಾದನೆಯ ನೆಪದಲ್ಲಿ ಬಂಧಿಸಿದಾಗ ಸನ್ಮಾರ್ಗ ಪ್ರಬಲವಾಗಿ ಪ್ರತಿಭಟಿಸಿದ್ದೂ ಇದೇ ಕಾರಣದಿಂದ. ಅದಕ್ಕಿಂತ ತುಸು ಸಮಯ ಮೊದಲು ಪ್ರವೀಣ್ ಸೂರಿಂಜೆ ಎಂಬ ಯುವ ಪತ್ರಕರ್ತರನ್ನೂ ಇದೇ ಮಾನಸಿಕತೆ ಜೈಲಿಗೆ ತಳ್ಳಿತ್ತು. ಫ್ಯಾಸಿಸ್ಟ್ ವಿಚಾರಧಾರೆಯ ಮಂದಿ ಹೆಣ್ಣು ಮಕ್ಕಳ ಮೇಲೆ ಮಾಡಿದ ದೌರ್ಜನ್ಯವನ್ನು (ಮಂಗಳೂರು ಹೋಮ್‍ಸ್ಟೇ ದಾಳಿ ಪ್ರಕರಣ) ಧೈರ್ಯದಿಂದ ವರದಿ ಮಾಡಿದ ತಪ್ಪಿಗೆ ಸೂರಿಂಜೆಯನ್ನು ಜೈಲಿಗೆ ಕಳುಹಿಸಲಾಯಿತು. ಸನ್ಮಾರ್ಗ ಈ ಎಲ್ಲ ಸಂದರ್ಭಗಳಲ್ಲೂ ತನ್ನ ತೀವ್ರ ಆಕ್ಷೇಪವನ್ನು ವ್ಯಕ್ತ ಪಡಿಸಿತು. ಮಾತ್ರವಲ್ಲ, ಈ ವಿಚಾರಧಾರೆಗೆ ಕನ್ನಡಿಗರನ್ನು ಪ್ರತಿನಿಧಿಸುವ ಮತ್ತು ಆಳುವ ಅರ್ಹತೆಯಿಲ್ಲ ಎಂದು ಪುಟಪುಟಗಳಲ್ಲೂ ಪ್ರತಿಪಾದಿಸುತ್ತಾ ಬಂದಿತು. ಭ್ರಷ್ಟಾಚಾರಕ್ಕಿಂತ ಈ ವಿಚಾರಧಾರೆ ಹೆಚ್ಚು ಅಪಾಯಕಾರಿಯಾಗಿರುವುದರಿಂದ ಜನರು ಈ ವಿಚಾರಧಾರೆಯನ್ನು ಅಧಿಕಾರದಿಂದ ಕಿತ್ತು ಹಾಕಬೇಕೆಂದು ನಿರಂತರ ಒತ್ತಾಯಿಸುತ್ತಲೇ ಬಂದಿತ್ತು. ಇದೀಗ ಸನ್ಮಾರ್ಗಕ್ಕೆ ಖುಷಿಪಡುವ ಸಂದರ್ಭ ಒದಗಿ ಬಂದಿದೆ. ತನ್ನ 36ನೇ ವರ್ಷದ ಈ ಪ್ರಥಮ ಸಂಚಿಕೆಯಲ್ಲೇ ಫ್ಯಾಸಿಸ್ಟ್ ವಿಚಾರ ಧಾರೆಗೆ ಚುನಾವಣೆಯಲ್ಲಿ ಸೋಲಾಗಿರುವ ಸುದ್ದಿಯನ್ನು ಹಂಚಿಕೊಳ್ಳುವಂತಾಗಿದೆ. ಸ್ಥಳೀಯ ಸಂಸ್ಥೆ ಗಳ ಚುನಾವಣೆಯಲ್ಲಿ ಜನರು ಈ ವಿಚಾರಧಾರೆಯಿಂದ ಕಳಚಿಕೊಳ್ಳಲು ನಿರ್ಧರಿಸಿರುವುದನ್ನು ಫಲಿತಾಂಶಗಳೇ ಸ್ಪಷ್ಟಪಡಿಸುತ್ತಿವೆ. ಈ ಫಲಿತಾಂಶದೊಂದಿಗೆ ಸನ್ಮಾರ್ಗದ 35 ವರ್ಷಗಳ ಲೇಖನಿ ಸಮರಕ್ಕೂ ಪಾಲು ಇದೆ ಎಂದೇ ಪತ್ರಿಕೆ ನಂಬುತ್ತದೆ.
   ರಾಜಕೀಯ ಪಕ್ಷಗಳು ಮತ್ತು ಮಾಧ್ಯಮಗಳು ಪರಸ್ಪರ ‘ದೋಸ್ತ್' ಆಗಿಬಿಟ್ಟರೆ ಅದರಿಂದಾಗಿ ದೊಡ್ಡ ಹಾನಿ ತಟ್ಟುವುದು ಓದುಗರಿಗೆ. ಓದುಗರು ಒಂದು ಪತ್ರಿಕೆಯನ್ನು ಓದುವುದು ಸತ್ಯ ಸುದ್ದಿಗಾಗಿ. ಆದರೆ ಕೆಲವೊಂದು ಪತ್ರಿಕೆಗಳು ಸತ್ಯವನ್ನು ಕೊಂದೇ ಇವತ್ತು ಬದುಕುತ್ತಿವೆ ಎಂಬುದೇನೂ ಗುಟ್ಟಾಗಿಲ್ಲ. ದುರಂತ ಏನೆಂದರೆ, ಓದುಗರಿಗೆ ಈ ಕೊಲೆಗಾರ ಪತ್ರಿಕೆಗಳನ್ನು ಗುರುತಿಸಲು ಸಾಧ್ಯವಾಗದೇ ಹೋಗಿರುವುದು. ಅಕ್ಷರ ಲೋಕವನ್ನು ಅವು ಎಷ್ಟು ಕಲುಷಿತಗೊಳಿಸಿಬಿಟ್ಟಿವೆ ಎಂದರೆ ಒಂದು ಸುದ್ದಿಯನ್ನು ಸತ್ಯವೋ ಸುಳ್ಳೋ ಎಂದು ತಿಳಿದುಕೊಳ್ಳುವುದಕ್ಕೆ ಒಂದಕ್ಕಿಂತ ಹೆಚ್ಚು ಪತ್ರಿಕೆಯನ್ನು ಓದಿ ಖಚಿತಪಡಿಸಿಕೊಳ್ಳಬೇಕಾದಂಥ ಪರಿಸ್ಥಿತಿ ಬಂದಿದೆ. ಕೋಮುವಾದಿಗಳು, ಮನುಷ್ಯ ವಿರೋಧಿಗಳೆಲ್ಲ ಅಕ್ಷರ ಜಗತ್ತಿನಲ್ಲಿರುವ ಈ ‘ಅಡ್ಡ ಕಸುಬಿನ' ಪತ್ರಿಕೋದ್ಯಮಿಗಳನ್ನು ಧಾರಾಳ ಬಳಸಿಕೊಳ್ಳುತ್ತಾರೆ. ತಮ್ಮ ವಿಚಾರಧಾರೆಯನ್ನು ಜನರ ಮೇಲೆ ಹೇರುವುದಕ್ಕಾಗಿ ಇವರ ಮೂಲಕ ಶ್ರಮಿಸುತ್ತಾರೆ. ಕನ್ನಡ ನಾಡಿನಲ್ಲಿ ಇಂಥ ಪ್ರಯತ್ನಗಳು ಧಾರಾಳ ನಡೆದಿವೆ. ಒಂದು ಧರ್ಮವನ್ನು ಮತ್ತು ಅದರ ವಿಚಾರಧಾರೆಯನ್ನು ‘ಶಂಕಿತ'ಗೊಳಿಸಲು ಅನೇಕ ಬಾರಿ ಪುಟಗಳನ್ನು ಮೀಸಲಿಟ್ಟ ಪತ್ರಿಕೆಗಳಿವೆ. ಆದರೆ ಸನ್ಮಾರ್ಗ ಈ ಎಲ್ಲ ಸಂದರ್ಭಗಳಲ್ಲಿ ತನ್ನ ಸಾಮರ್ಥ್ಯ ವನ್ನೂ ಮೀರಿ ನಿಜದ ಧ್ವನಿಯಾಗಿದೆ. ಅಸತ್ಯದ ಅಕ್ಷರಗಳು ಮತ್ತು ಅದರ ಹಿಂದಿರುವ ಫ್ಯಾಸಿಸ್ಟ್ ಆಲೋಚನೆಗಳ ಕುರಿತಂತೆ ಕನ್ನಡಿಗರನ್ನು ಎಚ್ಚರಿಸುತ್ತಾ ಬಂದಿದೆ. ಆದ್ದರಿಂದಲೇ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶವನ್ನು ಸನ್ಮಾರ್ಗ ಸೈದ್ಧಾಂತಿಕ ಗೆಲುವೆಂದು ಪರಿಗಣಿಸುವುದು. ಸನ್ಮಾರ್ಗ ಯಾವೊಂದು ಪಕ್ಷದ ವೈರಿಯೂ ಅಲ್ಲ. ಅದು ಅಸತ್ಯದ, ಅನ್ಯಾಯದ, ಭ್ರಷ್ಟಾಚಾರದ, ಫ್ಯಾಸಿಝಮ್‍ನ, ಕೋಮುವಾದದ.. ವೈರಿ. ಇವು ಸಮಾಜದಲ್ಲಿ ಪ್ರಾಬಲ್ಯ ಸ್ಥಾಪಿಸುತ್ತಾ ಹೋದರೆ ಅಮೌಲ್ಯದ, ಮನುಷ್ಯ ವಿರೋಧಿಯಾದ ವ್ಯವಸ್ಥೆ ಖಂಡಿತ ಜಾರಿಗೆ ಬರುತ್ತದೆ. ಅದನ್ನು ತಪ್ಪಿಸಿ ಈ ಮಣ್ಣನ್ನು ಸರ್ವರೂ ಸ್ವಾಭಿಮಾನದಿಂದ ಬಾಳುವಂತೆ ಮಾಡುವ ಗುರಿಯೊಂದಿಗೆ ಸನ್ಮಾರ್ಗ ಕಳೆದ 35 ವರ್ಷಗಳಿಂದಲೂ ಪ್ರಕಟವಾಗುತ್ತಲೇ ಬಂದಿದೆ. 36ನೇ ವರ್ಷದ ಈ ಪ್ರಥಮ ಸಂಚಿಕೆಯಲ್ಲೂ ಅದರ ನಿಲುವು ಬದಲಾಗಿಲ್ಲ. ಆಗುವುದೂ ಇಲ್ಲ. ಪ್ರಾಯ ಎಷ್ಟೇ ತುಂಬಲಿ, ಸಂಚಿಕೆ ಎಷ್ಟೇ ಹೊರ ಬರಲಿ, ಹುಟ್ಟುವಾಗಿನ ಮೂಲತತ್ವಗಳನ್ನು ಕೈ ಬಿಡದೇ ಸಮಾಜವನ್ನು ತಿದ್ದುವ, ಅಗತ್ಯ ಸಂದರ್ಭಗಳಲ್ಲಿ ಮಾರ್ಗದರ್ಶನ ಮಾಡುವ ಮತ್ತು ಮುಲಾಜಿಲ್ಲದೇ ತಪ್ಪನ್ನು ತಪ್ಪೆಂದೂ ಸುಳ್ಳನ್ನು ಸುಳ್ಳೆಂದೂ ಹೇಳುವ ಸ್ವಾತಂತ್ರ್ಯವನ್ನು ಸನ್ಮಾರ್ಗ ಎಂದೂ ಯಾರಿಗೂ ಬಿಟ್ಟುಕೊಡುವುದಿಲ್ಲ. ಸ್ಥಳೀಯ ಸಂಸ್ಥೆಗಳಲ್ಲಿ ಗೆದ್ದ ಅಭ್ಯರ್ಥಿಗಳ ಕುರಿತಂತೆ ಸನ್ಮಾರ್ಗದ ನಿಲುವೂ ಇದುವೇ.

1 comment:

  1. ಅಧ್ಭುತ ನಿಮ್ಮ ಮಾರ್ಗ ಹೀಗೆ ಯಶಸ್ಸಿನ ಹಾದಿಯಲ್ಲಿ ಮುಂದು ವರೆಯಲ್ಲಿ ಇಲ್ಲಿಯವರೆಗೂ ಉತ್ತಮ ಲೇಖನಗಳನ್ನು ನೀಡಿದ್ದೀರಿ ಮುಂದೆಯು ನೀಡಲಿ ಎಂದು ವಿನಂತಿ

    ReplyDelete