Monday, 4 March 2013

ನರಭಕ್ಷಕ ತೋಳಗಳ ಹಿಂಡಿನಲ್ಲಿ ಮ್ಯಾನ್ನಿಂಗ್ ಎಂಬ ಜಿಂಕೆ ಮರಿ


   ಬ್ರಾಡ್ಲಿ ಮ್ಯಾನ್ನಿಂಗ್ ಅನ್ನುವ ಯೋಧನೊಬ್ಬ ಅಮೇರಿಕನ್ನರ ‘ಸಂಕಟ’ದ ಸಂಕೇತವಾಗಿ ಇವತ್ತು ಜಗತ್ತಿನ ಮುಂದಿದ್ದಾನೆ. ಮಾತ್ರವಲ್ಲ, ಜೀವನ ಪರ್ಯಂತ ಜೈಲಿನಲ್ಲೇ ಇರಬೇಕಾದ ಭೀತಿಯನ್ನೂ ಎದುರಿಸುತ್ತಿದ್ದಾನೆ. ಆತ ಮಾಡಿದ ಅಪರಾಧ ಏನೆಂದರೆ, ಅಮೇರಿಕದ ರಕ್ತದಾಹಿ ನೀತಿಯನ್ನು ಪ್ರಶ್ನಿಸಿದ್ದು. ಭಯೋತ್ಪಾದನಾ ವಿರೋಧಿ ಹೋರಾಟದ ನೆಪದಲ್ಲಿ ಅಮಾಯಕ ಜನರನ್ನು ಅಮೇರಿಕ ಹೇಗೆ ನಿರ್ಭಾವುಕವಾಗಿ ಸಾಯಿಸುತ್ತದೆ ಎಂದು ವಿವರಿಸಿದ್ದು. ಆ ಕುರಿತಾಗಿರುವ ದಾಖಲೆಗಳನ್ನು ಸೋರಿಕೆ ಮಾಡಿದ್ದು.
   ಕಳೆದ ವಾರ ಅಮೇರಿಕದ ಮಿಲಿಟರಿ ನ್ಯಾಯಾಲಯದಲ್ಲಿ ನಡೆದ ವಿಚಾರಣೆಯ ವೇಳೆ 35 ಪುಟಗಳ ಹೇಳಿಕೆಯನ್ನು ನ್ಯಾಯಾಧೀಶರೆದುರು ಬ್ರಾಡ್ಲಿ ಮ್ಯಾನ್ನಿಂಗ್ ಓದಿದ್ದಾನೆ. 2007ರಲ್ಲಿ ಅಮೇರಿಕದ ಅಪಾಚೆ ಹೆಲಿಕಾಪ್ಟರೊಂದು ಇರಾಕ್‍ನ ಬಗ್ದಾದಿನಲ್ಲಿ ಜನರ ಮೇಲೆ ಬಾಂಬು ಸುರಿಸುತ್ತದೆ. ಅದರಲ್ಲಿ ರಾಯಿಟರ್ಸ್ ಸುದ್ದಿ ಸಂಸ್ಥೆಯ ಇಬ್ಬರು ಪತ್ರಕರ್ತರೂ ಸೇರಿ ಅನೇಕ ಅಮಾಯಕರು ಸಾವಿಗೀಡಾಗುತ್ತಾರೆ. ಅಮೇರಿಕದ ಗುಪ್ತಚರ ವಿಭಾಗದ ವಿಶ್ಲೇಷಣಾಧಿಕಾರಿಯಾಗಿ ಇರಾಕ್‍ನ ಬಗ್ದಾದ್‍ನಲ್ಲಿ ಕರ್ತವ್ಯದಲ್ಲಿದ್ದ ನನ್ನನ್ನು ಆ ರಕ್ತದೋಕುಳಿ ತೀವ್ರವಾಗಿ ಘಾಸಿಗೊಳಿಸಿತು (Sikkened) ಎಂದಾತ ಹೇಳಿದ್ದಾನೆ. ಜನರನ್ನು ಎಗ್ಗಿಲ್ಲದೇ ಕೊಲ್ಲುವ, ಹಿಡಿದು ಥಳಿಸುವ ಮತ್ತು ಗುರಿ ರಹಿತವಾಗಿ ಓಡುವ ಅಮೇರಿಕನ್ ಸೇನೆಯನ್ನು ನೋಡಿ ನಾನು ತೀವ್ರ ಹತಾಶೆಗೊಂಡಿದ್ದೆ. ಅಮೇರಿಕನ್ ನಾಗರಿಕರಿಗೆ ಈ ಯುದ್ಧದ ಶೈಲಿ ಮತ್ತು ಖರ್ಚು ಗೊತ್ತಾಗಲಿ, ಆ ಮುಖಾಂತರ ಅವರು ಆಕ್ರಮಣವನ್ನು ಪ್ರತಿಭಟಿಸಲಿ ಎಂಬ ಸದುದ್ದೇಶದಿಂದ ನಾನು ರಹಸ್ಯ ದಾಖಲೆಗಳನ್ನು ವಿಕಿಲೀಕ್ಸ್ ಗೆ 2010ರಲ್ಲಿ ಸೋರಿಕೆ ಮಾಡಿದೆ. ವೀಡಿಯೋಗಳನ್ನು ಹಸ್ತಾಂತರಿಸಿದೆ.. ಎಂದಾತ ಸ್ವಯಂ ಹೇಳಿಕೊಂಡಿದ್ದಾನೆ. (ದಿ ಹಿಂದೂ  02, 03, 2013)             
   ಆತನ ವಿಚಾರಣೆ ಮುಂದುವರಿಯುತ್ತಿದೆ.ಅದರ ಪಲಿತಾಂಶ ಏನೇ ಇರಲಿ, ಅಮೇರಿಕದ ಯುದ್ಧ ನೀತಿಯನ್ನು ಜಗತ್ತು ವಿಚಾರಣೆಗೆ ಒಳಪಡಿಸಲೇ ಬೇಕು ಎಂಬ ಒತ್ತಾಯವನ್ನು ಈ ಮೂಲಕ  ಬ್ರಾಡ್ ಮ್ಯಾನ್ನಿಂಗ್ ಪರೋಕ್ಷವಾಗಿ ಮಂಡಿಸಿದ್ದಾನೆ. ನಿಜವಾಗಿ, ಅಮೇರಿಕದ ‘ಯುದ್ಧನೀತಿ' ಪ್ರಶ್ನೆಗೊಳಗಾಗಿರುವುದು ಇದೇ ಮೊದಲಲ್ಲ. ಎರಡನೇ ವಿಶ್ವಯುದ್ಧದಿಂದಲೇ ಅಮೇರಿಕ ವಿವಾದಿತ ರಾಷ್ಟ್ರವಾಗಿದೆ. ತನಗೆ ಸರಿ ಕಾಣದ್ದನ್ನು ಬಲವಂತದಿಂದ ಸರಿಪಡಿಸುವ,ತನ್ನ ಮೂಗಿನ ನೇರಕ್ಕೇ ಸರಿ-ತಪ್ಪುಗಳನ್ನು ತೀರ್ಮಾನಿಸುವ ಚಾಳಿಯನ್ನು ಅದು ತೋರ್ಪಡಿಸುತ್ತಲೇ ಬಂದಿದೆ. ಅಫಘಾನ್ ಮತ್ತು ಇರಾಕ್‍ಗಳ ಮೇಲಿನ ದಾಳಿ ಈ ಮಾನಸಿಕತೆಯ ಮುಂದುವರಿಕೆಯಷ್ಟೇ. ಒಂದು ವೇಳೆ ಮ್ಯಾನ್ನಿಂಗ್‍ನಂಥವರು ಅಪರೂಪಕ್ಕೊಮ್ಮೆ ಅಮೇರಿಕದ ಕ್ರೌರ್ಯವನ್ನು ಬಿಚ್ಚಿಡದೇ ಹೋಗಿದ್ದರೆ, ಅಸಾಂಜೆಯಂಥ ಪತ್ರಕರ್ತರು ವಿಕಿಲೀಕ್ಸ್ ನ ಮುಖಾಂತರ ಅಮೇರಿಕದ ನಿಜ ಮುಖವನ್ನು ತೋರಿಸುವ ಧೈರ್ಯ ಮಾಡದೇ ಇರುತ್ತಿದ್ದರೆ ಏನಾಗುತ್ತಿತ್ತು? ಜಗತ್ತಿನ ಹೆಚ್ಚಿನ ಮಾಧ್ಯಮ ಕೇಂದ್ರಗಳು ಇವತ್ತು ಅಮೇರಿಕನ್ ಹಿತಾಸಕ್ತಿಗಳ ಹಿಡಿತದಲ್ಲಿವೆ. ಇವು ಸೆನ್ಸಾರ್ ಮಾಡಿ, ಒಪ್ಪಿಗೆ ಸೂಚಿಸಿದ ಸುದ್ದಿಗಳಷ್ಟೇ ಸುದ್ದಿ ಮಾಧ್ಯಮಗಳಲ್ಲಿ ಕಾಣಿಸಿಕೊಳ್ಳುವುದು. ಅವು ಹೇಗಿರುತ್ತವೆ ಎಂಬುದೂ ನಮಗೆ ಗೊತ್ತು. ಅಮೇರಿಕದ ಡ್ರೋನ್ ಕ್ಷಿಪಣಿಯೊಂದು ಅಫಘನ್ನಿನಲ್ಲಿ ನಡೆಯುವ ಮದುವೆ ಸಮಾರಂಭಕ್ಕೋ, ಅಂತ್ಯ ಸಂಸ್ಕಾರಕ್ಕೆ ಸೇರಿದ ಜನಸಂದಣಿಗೋ ಬಿದ್ದರೆ, ತಕ್ಷಣ ಆ ಡ್ರೋನನ್ನು ಸಮರ್ಥಿಸುವುದಕ್ಕೆ ವಿವಿಧ ನೆವನಗಳನ್ನು ಮಾಧ್ಯಮಗಳು ಹುಡುಕುತ್ತವೆ. ಅದರಲ್ಲಿ ಯಾವ ತಾಲಿಬಾನ್ ಮುಖಂಡ ಭಾಗವಹಿಸಿದ್ದ ಎಂಬ ವಿವರವುಳ್ಳ ಪತ್ರಿಕಾ ಹೇಳಿಕೆಯನ್ನು ಅಮೇರಿಕ ಬಿಡುಗಡೆಗೊಳಿಸುತ್ತದೆ. ಎಲ್ಲೋ ಬಂದೂಕು ಹಿಡಿದು, ಗಡ್ಡ-ಮುಂಡಾಸು ಧರಿಸಿ, ಕುರ್ತಾ-ಪೈಜಾಮ ತೊಟ್ಟ ಅಫಘಾನಿಯನ್ನು ತೋರಿಸಿ ಮಾಧ್ಯಮಗಳು ಆ ಸುದ್ದಿಯನ್ನು ಇನ್ನಷ್ಟು ಕಲುಷಿತಗೊಳಿಸಿ ಬಿಡುತ್ತವೆ. 'ಬಂದೂಕು, ಕೂದಲು, ಮುಂಡಾಸು, ಗಡ್ಡ, ಪೈಜಾಮ.. ಇವೆಲ್ಲ ಅಫಘಾನಿಯರ ಸಂಸ್ಕ್ರಿತಿ, ಅದು ಭಯೋತ್ಪಾದನೆಯ ಸಂಕೇತವಲ್ಲ' ಎಂದು ಜನರನ್ನು ತಿದ್ದುವ ಪ್ರಯತ್ನಗಳನ್ನು ಹೆಚ್ಚಿನ ಮಾಧ್ಯಮಗಳು ಮಾಡುವುದೂ ಇಲ್ಲ. ನಿಜವಾಗಿ, ಅಫಘನ್ನಿನ ಮೇಲೆ ದಾಳಿ ಮಾಡಿದ ಬಳಿಕ ಅಮೇರಿಕ ಮೊತ್ತಮೊದಲು ಮಾಡಿದ್ದೇ ಈ ತಿರುಚುವ ಕೆಲಸವನ್ನು. ಸಾಮಾನ್ಯ ಅಫಘಾನಿಯರ ವಿವಿಧ ಭಂಗಿಯ ಚಿತ್ರವನ್ನು ಬಿಡುಗಡೆಗೊಳಿಸಿ, ಇದು ‘ಭಯೋತ್ಪಾದಕ' ಅಂದಿತು. ಬುದ್ಧ ವಿಗ್ರಹಗಳು ಧ್ವಂಸಗೊಂಡ, ಯಾರದಾದರೂ ಕೈ-ಕಾಲು ಕತ್ತರಿಸಿದ ಸುದ್ದಿಗಳನ್ನಷ್ಟೇ ಅಫಘನ್ನಿನಿಂದ ಆಲಿಸುತ್ತಿದ್ದ ಜಗತ್ತು ಅಮೇರಿಕ ಬಿಡುಗಡೆಗೊಳಿಸುತ್ತಿರುವ ಈ ಹೊಸ ಮನುಷ್ಯ ಭಯೋತ್ಪಾದಕನೆಂದೇ ನಂಬಿಬಿಟ್ಟಿತು. ಆದ್ದರಿಂದ ಅಮೇರಿಕದ ಬಾಂಬುಗಳಿಗೆ ಅಫಘಾನಿಯರು ಬಲಿಯಾದಾಗಲೆಲ್ಲಾ ಭಯೋತ್ಪಾದಕರ ನಾಶವಾಯಿತು ಎಂದು ಜಗತ್ತು ಸಂಭ್ರಮಪಟ್ಟಿತು.
    ನಿಜವಾಗಿ, ಅಮೇರಿಕನ್ ಯೋಧರು ಗ್ವಾಂಟೆನಾಮೋದಲ್ಲಿ, ಅಫಘನ್ನಿನಲ್ಲಿ ನಡೆಸುತ್ತಿರುವ ಕ್ರೌರ್ಯದ ವೀಡಿಯೋಗಳನ್ನು ವಿಕಿಲೀಕ್ಸ್ ಗೆ ಹಸ್ತಾಂತರಿಸುವಾಗ ಬ್ರಾಡ್ಲಿ  ಮ್ಯಾನ್ನಿಂಗ್‍ಗೆ ತಾನೇನು ಮಾಡುತ್ತಿದ್ದೇನೆಂಬುದು ಚೆನ್ನಾಗಿ ಗೊತ್ತಿತ್ತು. ಅದರ ಪರಿಣಾಮ ಏನಾಗಬಹುದು ಎಂಬುದರ ಅರಿವೂ ಇತ್ತು. ಒಂದು ದೇಶ ಎಷ್ಟೇ ಅನ್ಯಾಯದಲ್ಲಿ ತೊಡಗಿರಲಿ, ಆ ದೇಶದ ಯೋಧನೊಬ್ಬ ಆ  ಅನ್ಯಾಯದ ದಾಖಲೆಗಳನ್ನು ಬಿಡುಗಡೆಗೊಳಿಸುವುದೆಂದರೆ, ದೇಶದ್ರೋಹವನ್ನು ಎಸಗಿದಂತೆ.ಅದಕ್ಕೆ ಮರಣದಂಡನೆ ಇಲ್ಲವೇ ಜೀವಾವಧಿ ಶಿಕ್ಷೆ ಸಿಗುವ ಸಾಧ್ಯತೆಯೇ ಹೆಚ್ಚು.  ಹೀಗಿದ್ದೂ, ಅಮೇರಿಕದ ಮುಖವನ್ನು ಬಹಿರಂಗಪಡಿಸಲು ಬ್ರಾಡ್ಲಿ  ಮ್ಯಾನ್ನಿಂಗ್  ಮುಂದಾದನೆಂದರೆ, ಅದು ಖಂಡಿತ ಸಣ್ಣ ಸಾಹಸವಲ್ಲ. ಅದನ್ನು ಅಮೇರಿಕ ದೇಶದ್ರೋಹತನ ಎಂದು ಪರಿಗಣಿಸಿದರೂ ಜಗತ್ತು ಹಾಗೆ ಪರಿಗಣಿಸಬೇಕಾದ ಅಗತ್ಯವೂ ಇಲ್ಲ. ಭಾರತದ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಜಲಿಯನ್ ವಾಲಾಬಾಗ್‍ನಲ್ಲಿ ಹತ್ಯಾಕಾಂಡ ನಡೆದಿತ್ತಲ್ಲವೇ? ಆ  ಹತ್ಯಾಕಾಂಡಕ್ಕೆ ಬ್ರಿಟಿಷ್ ಜನರಲ್  ಡಯರ್ ಆದೇಶ ಕೊಟ್ಟದ್ದಾದರೂ ಆ ಆದೇಶ ಜಾರಿಗೊಂಡದ್ದು ಬ್ರಿಟಿಷ್ ಇಲಾಖೆಯಲ್ಲಿದ್ದ ಭಾರತೀಯ ಪೊಲೀಸ ರಿಂದಲೇ ಎಂದು ಇತಿಹಾಸ ಹೇಳುತ್ತದೆ. ಭಾರತೀಯ ಸ್ವಾತಂತ್ರ್ಯ ಹೋರಾಟಗಾರರ ಮೇಲೆ ಭಾರತೀಯ ಪೊಲೀಸರೇ ಗುಂಡು ಹಾರಿಸಿದ್ದರು. ಸಾಮಾನ್ಯವಾಗಿ ವ್ಯವಸ್ಥೆಯ ಕ್ರೌರ್ಯವನ್ನು ಅದರ ಭಾಗವೇ ಆಗಿರುವ ಅಧಿಕಾರಿಗಳಾಗಲಿ, ಸೈನಿಕರಾಗಲಿ ಪ್ರಶ್ನಿಸುವುದೇ ಇಲ್ಲ. ಶಿಕ್ಷೆಗೆ ಹೆದರಿ ಅವರೆಲ್ಲಾ ಸುಮ್ಮನಾಗುತ್ತಾರೆ.
   ಏನೇ ಆಗಲಿ, ಬ್ರಾಡ್ಲಿ  ಮ್ಯಾನ್ನಿಂಗ್ ಎಂಬ ಯೋಧನೊಬ್ಬ ಅಮೇರಿಕದ ಕ್ರೌರ್ಯದ ಮುಖವನ್ನು ಎಲ್ಲ ಅಪಾಯಗಳ ಮಧ್ಯೆಯೂ ಜಗತ್ತಿನ ಮುಂದಿಡುವ ಧೈರ್ಯ ಪ್ರದರ್ಶಿಸಿದ್ದಾನೆ. ಅಮೇರಿಕ ಆತನನ್ನು ದೇಶದ್ರೋಹಿ ಎಂದು ಕರೆದರೂ ಅಫಘಾನ್, ಇರಾಕ್‍ನ ಮಂದಿ ಆತನನ್ನು ಮನುಷ್ಯಪ್ರೇಮಿ ಎಂದೇ ಕರೆದಾರು. ನರಭಕ್ಷಕ ತೋಳಗಳ ಹಿಂಡಿನಲ್ಲಿ ಕಾಣಿಸಿಕೊಂಡ ಈ ಜಿಂಕೆ ಮರಿಗಾಗಿ ಅವರು ಖಂಡಿತ ಹೆಮ್ಮೆ ಪಟ್ಟಾರು.

No comments:

Post a Comment