Monday 25 March 2013

ಹೋಳಿ ಆಚರಿಸುವ ವಿಧವೆಯರ ಮಧ್ಯೆ ಆ ಪ್ರವಾದಿ

ವೃಂದಾವನದ ಓರ್ವ ವಿಧವೆ
   ಮಥುರಾದ ವೃಂದಾವನದಲ್ಲಿರುವ ವಿಧವೆಯರು ಹೋಳಿ  ಆಚರಿಸಿದ ಸುದ್ದಿಯನ್ನು ಮಾಧ್ಯಮಗಳು ಭಾರೀ ಒತ್ತು ಕೊಟ್ಟು ಪ್ರಕಟಿಸಿವೆ. ದಿ ಹಿಂದೂವಿನಂಥ ಪ್ರಮುಖ ಪತ್ರಿಕೆಗಳು ಸುದ್ದಿಯನ್ನು ಪೋಟೋ ಸಹಿತ ಮುಖಪುಟದಲ್ಲೇ ಪ್ರಕಟಿಸಿವೆ. ನಿಜವಾಗಿ ಹೋಳಿಯಂಥ ಹಬ್ಬಗಳ ಆಚರಣೆಯು ಮಾಧ್ಯಮಗಳ ಮುಖಪುಟದಲ್ಲಿ ಸುದ್ದಿಯಾಗುವುದು ತೀರಾ ಕಡಿಮೆ. ಯಾಕೆಂದರೆ ಹಬ್ಬಾಚರಣೆ ತೀರ ಸಾಮಾನ್ಯ ಸುದ್ದಿ. ಅದು ಅಸಾಮಾನ್ಯವಾಗುವುದು ಯಾವಾಗ ಎಂದರೆ, ಆಚರಣೆಯ ಸಂದರ್ಭದಲ್ಲಿ ಏನಾದರೂ ಅನಾಹುತ ಸಂಭವಿಸಬೇಕು. ಆದರೆ ವೃಂದಾವನದಲ್ಲಿ ಅಂಥದ್ದೇನೂ ಸಂಭವಿಸಿಲ್ಲ. ಮಹಿಳೆಯರು ಒಟ್ಟು ಸೇರಿ ತೀರಾ ಸಾಮಾನ್ಯವಾಗಿ ಹೋಳಿ ಆಚರಿಸಿದ್ದಾರೆ. ಬಣ್ಣ ಎರಚಿಕೊಂಡಿದ್ದಾರೆ. ಆದರೂ ಅದು ಬ್ರೇಕಿಂಗ್ ನ್ಯೂಸ್ ಆಗುತ್ತದೆಂದರೆ, ಅದರ ಸಂಪೂರ್ಣ ಹೊಣೆಯನ್ನು ಈ ನಾಗರಿಕ ಸಮಾಜ ಹೊತ್ತುಕೊಳ್ಳಬೇಕು. ಒಂದು ವೇಳೆ ಆ ಮಹಿಳೆಯರು ವಿಧವೆಯರು ಆಗದಿರುತ್ತಿದ್ದರೆ, ಅದು ಪತ್ರಿಕೆಗಳ ಮುಖಪುಟಕ್ಕೆ ಬರುತ್ತಿತ್ತೇ? ವಿಧವೆಯರನ್ನು ಅಮಂಗಲೆಯರು, ಸಂತೋಷಪಡುವುದಕ್ಕೆ ಅನರ್ಹರು ಎಂದು ತೀರ್ಪಿತ್ತು, ಅಪರಾಧಿಗಳಂತೆ ಜೀವನ ಪೂರ್ತಿ ಬಾಳುವುದಕ್ಕೆ ಪ್ರಚೋದನೆ ಕೊಟ್ಟವರಾದರೂ ಯಾರು? ವಿಧವೆ ಆಗುವುದು ಯಾಕೆ ಅಪರಾಧ ಅನ್ನಿಸಿಕೊಳ್ಳಬೇಕು? ಹಾಗಾದರೆ ವಿಧುರತನವೂ ಅಪರಾಧವೇ ಆಗಬೇಕಲ್ಲವೇ? ಆದರೆ ಈ ನಾಗರಿಕ ಸಮಾಜದಲ್ಲಿ ವಿಧವೆಯರಿಗೆ ವೃಂದಾವನ ಇರುವಂತೆ ವಿಧುರರಿಗೆ ಯಾವ ನಿರ್ದಿಷ್ಟ ಜಾಗವೂ ಇಲ್ಲ. ಅವರು ಮತ್ತೆ ಮದುವೆಯಾಗುತ್ತಾರೆ. ಸಂತೋಷ ಕೂಟಗಳಲ್ಲಿ ಭಾಗಿಯಾಗುತ್ತಾರೆ. ಅವರನ್ನು ಅಮಂಗಲ ಎಂದು ಯಾರೂ ಪರಿಗಣಿಸುವುದಿಲ್ಲ. ಹೀಗಿರುವಾಗ ಹೆಣ್ಣು ಮಾತ್ರ ಗಂಡನನ್ನು ಕೊಂದ ಪಾತಕಿಯಂತೆ ತಲೆ ತಗ್ಗಿಸಿ, ಯಾಕೆ ಪರಿತ್ಯಾಗಿ ಜೀವನ ನಡೆಸಬೇಕು? ಈ 21ನೇ ಶತಮಾನದಲ್ಲೂ ವಿಧವೆಯರು ಹಬ್ಬ ಆಚರಿಸುವುದು ಬ್ರೇಕಿಂಗ್ ನ್ಯೂಸ್ ಆಗುತ್ತದೆಂದರೆ ಅದರ ಅರ್ಥವೇನು? ಒಂದು ಕಡೆ ಮಹಿಳಾ ದೌರ್ಜನ್ಯದ ವಿರುದ್ಧ ತಿಂಗಳುಗಟ್ಟಲೆ ಪ್ರತಿಭಟನೆ ನಡೆಯುತ್ತದೆ. ದೌರ್ಜನ್ಯ ನಡೆಸುವವರನ್ನು ನೇಣಿಗೇರಿಸಬೇಕು ಎಂದು ಒತ್ತಾಯಿಸಲಾಗುತ್ತದೆ. ಇನ್ನೊಂದು ಕಡೆ ಅದೇ ಮಹಿಳೆಗೆ ಸಹಜ ಬದುಕಿನ ಸ್ವಾತಂತ್ರ್ಯವನ್ನೂ ನಿಷೇಧಿಸಲಾಗುತ್ತದೆ. ಇಷ್ಟಕ್ಕೂ ವೃಂದಾವನದಲ್ಲಿ ಇದೇ ಮೊದಲ ಬಾರಿ 800ರಷ್ಟು ವಿಧವೆಯರು ಹೋಳಿ ಆಚರಿಸಿದ್ದಾರೆ. 16-17 ವರ್ಷಗಳಲ್ಲೇ ವಿಧವೆಯರಾದ ಹೆಣ್ಣು ಮಕ್ಕಳು ಆ ಬಳಿಕ ಜೀವನಪೂರ್ತಿ ಶ್ರೀ ಕೃಷ್ಣನ ಜನ್ಮ ಸ್ಥಾನವಾದ ವೃಂದಾವನದ ಆಶ್ರಮಗಳಲ್ಲೇ ಭಜನೆ, ಭಿಕ್ಷೆ ಬೇಡುತ್ತಾ ಬದುಕುವ ಪರಿಸ್ಥಿತಿ ಇದೆ. ಇವರ ದಾರುಣ ಬದುಕಿನ ಕತೆಯನ್ನು ಕಳೆದ ವರ್ಷ ಆಲಿಸಿದ ಸುಪ್ರೀಮ್ ಕೋರ್ಟು ತಲೆ ತಗ್ಗಿಸಿತ್ತು. ಸಾವಿಗೀಡಾಗುವ ವಿಧವೆಯರನ್ನು ಅಂತ್ಯಸಂಸ್ಕಾರ ಮಾಡಲು ದುಡ್ಡು ಸಾಕಾಗದೇ ಮೃತದೇಹವನ್ನು ಗೋಣಿ ಚೀಲಗಳಲ್ಲಿ ತುಂಬಿಸಿ ಎಸೆಯುತ್ತಿರುವ ಪತ್ರಿಕಾ ವರದಿಯನ್ನು ಓದಿ ಕೋರ್ಟು ದಿಗಿಲುಗೊಂಡಿತ್ತು. ವಿಧುರರಿಗಿಲ್ಲದ ಕ್ರೂರ ಕಟ್ಟುಪಾಡುಗಳನ್ನು ಕೇವಲ ವಿಧವೆಯರಿಗೆ ಮಾತ್ರ ಅಳವಡಿಸಿ ಈ ಸಮಾಜ ತಣ್ಣಗೆ ಕೂತಿರುವಾಗಲೇ, ಹೋಳಿಯ ಮೂಲಕ ವಿಧವೆಯರೆಂಬ ನಿಷ್ಪಾಪಿ ಮಹಿಳೆಯರು ಮತ್ತೆ ಸುದ್ದಿಗೊಳಗಾಗಿದ್ದಾರೆ. ಅವರನ್ನು ಆ ಕಟು ಬಂಧನದಿಂದ ಹೊರತರುವ ಎನ್‍ಜಿಓಗಳ ಪ್ರಯತ್ನದ ಫಲ ಈ ಆಚರಣೆಯೆಂದು ಮಾಧ್ಯಮಗಳು ಹೇಳುತ್ತಿವೆ.
   ಇಷ್ಟಕ್ಕೂ, ಹೆಣ್ಣಿನ ಕುರಿತಂತೆ ಅನೇಕಾರು ಗೌರವಪೂರ್ಣ ಪದಗಳು, ಕೊಂಡಾಟದ ನುಡಿಮುತ್ತುಗಳು, ಕೌತುಕಪೂರ್ಣ ಕತೆಗಳು ಈ ದೇಶದಲ್ಲಿ ಧಾರಾಳ ಇವೆ. ದುರಂತ ಏನೆಂದರೆ, ಅವ್ಯಾವುವೂ ಪ್ರಾಯೋಗಿಕವಾಗಿ ಜಾರಿಯಲ್ಲಿಲ್ಲ ಅನ್ನುವುದು. ವೈಧವ್ಯ ಕೂಡ ಹಾಗೆಯೇ. ಗಂಡ ಮೃತಪಟ್ಟರೆ ಪತ್ನಿಯಾದವಳು ಆ ಬಳಿಕ ಜೀವನಪೂರ್ತಿ ಅಲಂಕಾರ ರಹಿತಳಾಗಿ, ಮರು ಮದುವೆಯಿಲ್ಲದೇ ಬಾಳಬೇಕು ಎಂಬ ನಿಯಮ ಸಮಾಜದಲ್ಲಿದೆ. ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ವರ್ಷದ ಹಿಂದೆ ವಿಧವೆಯರಿಂದಲೇ ವಿಗ್ರಹದ ತೇರು ಎಳೆಸುವ ಮೂಲಕ ಅವರನ್ನು ಮುಖ್ಯವಾಹಿನಿಗೆ ತರುವ ಪ್ರಯತ್ನ ನಡೆಯಿತು. ಇದೀಗ ‘ಹೋಳಿ' ಮೂಲಕ ಇನ್ನೊಂದು ಪ್ರಯತ್ನವನ್ನು ನಡೆಸಲಾಗಿದೆ.
   ನಿಜವಾಗಿ, ಓರ್ವ ಹೆಣ್ಣು ಮಗಳು ವಿಧವೆಯಾಗುವುದು ಅಪರಾಧವೋ, ಅಮಂಗಲವೋ ಖಂಡಿತ ಅಲ್ಲ. ಪ್ರಕೃತಿ ಸಹಜವಾದ ಸಾವು-ಬದುಕನ್ನು ಅಮಂಗಲ-ಮಂಗಲ ಎಂದು ವಿಭಜಿಸುವುದೇ ತಪ್ಪು. ಇಸ್ಲಾಮ್ ಇಂಥದ್ದೊಂದು ವಿಭಜನೆಯನ್ನೇ ತಿರಸ್ಕರಿಸುತ್ತದೆ. ವಿಧುರನಿಗೆ ಏನೆಲ್ಲ ಅವಕಾಶಗಳು ಇವೆಯೋ ಅವೆಲ್ಲವನ್ನೂ ವಿಧವೆಗೂ ಅದು ನೀಡುತ್ತದೆ. ವಿಧವೆ ಮಹಿಳೆಗೂ ಇತರ ಮಹಿಳೆಯರಂತೆ ಮರು ಮದುವೆಯಾಗುವ, ಅಲಂಕಾರ ಭೂಷಿತಳಾಗುವ, ಸಭೆ-ಸಮಾರಂಭಗಳಲ್ಲಿ ಭಾಗವಹಿಸುವ ಸಕಲ ಹಕ್ಕುಗಳನ್ನೂ ಅದು ನೀಡುತ್ತದೆ. ಆದ್ದರಿಂದಲೇ ಪ್ರವಾದಿ ಮುಹಮ್ಮದ್‍ರು(ಸ) ಮೊತ್ತಮೊದಲು ಮದುವೆಯಾದದ್ದೇ ತನಗಿಂತ 14 ವರ್ಷ ಹಿರಿಯಳಾದ, ಮೂರು ಮಕ್ಕಳ ತಾಯಿಯಾದ ವಿಧವೆಯನ್ನು. ಅವರು ಮದುವೆಯಾಗುವ ಸಂದರ್ಭದಲ್ಲಿ ಆ ಸಮಾಜ ವಿಧವೆಯರನ್ನು ಅಮಂಗಲೆ ಎಂದೇ ಪರಿಗಣಿಸುತ್ತಿತ್ತು. ಮದುವೆ ನಿಶ್ಚಿತಾರ್ಥಕ್ಕೋ ಗೃಹ ಪ್ರವೇಶಕ್ಕೋ ಅವಳು ಆಗಮಿಸುವುದನ್ನು ಅನಿಷ್ಠ ಎಂದು ಸಾರಿತ್ತು. ಪ್ರವಾದಿ ಮುಹಮ್ಮದರು(ಸ) ವಿಧವೆ ಖದೀಜರನ್ನು ವರಿಸುವ ಮೂಲಕ ಆ ಸಂಪ್ರದಾಯವನ್ನು ಮುರಿದರು. ಖದೀಜ ನಿಧನರಾಗುವ ವರೆಗೆ ಅವರು ಇನ್ನೊಂದು ಮದುವೆಯಾಗಲಿಲ್ಲ. ಪ್ರವಾದಿಯವರು 50 ವರ್ಷಗಳನ್ನು ದಾಟಿದ ಬಳಿಕ 10 ಮದುವೆಯಾದರಾದರೂ ಅವರಲ್ಲಿ ಒಂಬತ್ತು ಮಂದಿಯೂ ವಿಧವೆಯರಾಗಿದ್ದರು. ಅವರ ಪತ್ನಿಯರಲ್ಲಿ ಕನ್ಯೆಯಾಗಿದ್ದವರು ಒಬ್ಬರೇ. ಆ ಮೂಲಕ ಪ್ರವಾದಿ(ಸ) ಒಂದಿಡೀ ಸಮಾಜದ ಆಲೋಚನೆಯನ್ನೇ ಬದಲಿಸಿದರು. ಅಮಂಗಲೆಯರನ್ನು ಮಂಗಲೆಯರನ್ನಾಗಿಸಿದರು. ಯಾರಿಗಾದರೂ ಇಬ್ಬರು ಹೆಣ್ಣು ಮಕ್ಕಳಿದ್ದು, ಅವರು ಆ ಮಕ್ಕಳನ್ನು ಮೌಲ್ಯವಂತರಾಗಿ ಬೆಳೆಸಿ, ವಿವಾಹ ಮಾಡಿ ಕೊಟ್ಟರೆ ಆ ಹೆತ್ತವರು ಸ್ವರ್ಗ ಪಡೆಯುತ್ತಾರೆ ಎಂದರು. ಹೆಣ್ಣಿನ ಸೇವೆ ಮಾಡಿದವರು ಸ್ವರ್ಗ ಪ್ರವೇಶಿಸುತ್ತಾರೆ ಅಂದರು. ಒಂದು ರೀತಿಯಲ್ಲಿ ಪ್ರವಾದಿ ಮುಹಮ್ಮದ್‍ರು(ಸ), ತೇರು ಎಳೆಸದೆಯೇ ‘ಹೋಳಿ' ಆಚರಿಸದೆಯೇ ವಿಧವೆಯರಿಗೆ ಗೌರವವನ್ನು ಮರಳಿ ದೊರಕಿಸಿಕೊಟ್ಟರು. ಮಹಿಳೆಯರನ್ನು ದೌರ್ಜನ್ಯದಿಂದ ಮುಕ್ತಗೊಳಿಸುವ ಹತ್ತು-ಹಲವು ‘ಕ್ರಾಂತಿ' ಮಾರ್ಗಗಳನ್ನು ಪರಿಚಯಿಸಿದರು. ಆಸ್ತಿಯಲ್ಲಿ ಹಕ್ಕನ್ನು ಒದಗಿಸಿಕೊಟ್ಟರು.
   ಆದ್ದರಿಂದ ಮಹಿಳೆಯರನ್ನು ಮತ್ತು ವಿಧವೆಯರನ್ನು ದೌರ್ಜನ್ಯ ಮುಕ್ತಗೊಳಿಸುವುದಕ್ಕಾಗಿ ಪ್ರವಾದಿ ಮುಹಮ್ಮದ್‍ರ(ಸ) ‘ಕ್ರಮಗಳು' ಪ್ರಸ್ತುತವೇ ಎಂಬ ಬಗ್ಗೆ ಈ ಸಮಾಜ ಅಧ್ಯಯನ ನಡೆಸಬೇಕಾದ ಅಗತ್ಯವಿದೆ. ಅಂದಹಾಗೆ, 14ನೇ ಶತಮಾನದಲ್ಲಿ ಅವರ ಆಲೋಚನೆಗಳು ಮಹಿಳೆಗೆ ಗೌರವ, ಸುರಕ್ಷಿತತೆಯನ್ನು ತಂದು ಕೊಟ್ಟಿದ್ದರೆ ಈ 21ನೇ ಶತಮಾನದಲ್ಲಿ ಯಾಕೆ ಅದು ಅನ್ಯ ಅನ್ನಿಸಿಕೊಳ್ಳಬೇಕು?

No comments:

Post a Comment