Tuesday 2 April 2013

ಅಟೆನ್‍ಬರೋಗೆ ತೆರೆದ ವೃದ್ಧಾಶ್ರಮದ ಬಾಗಿಲು


   ಹಾಲಿವುಡ್‍ನ ಖ್ಯಾತ ಚಿತ್ರ ನಿರ್ದೇಶಕ, ನಟ ರಿಚರ್ಡ್ ಅಟೆನ್ ಬರೊ ತನ್ನ 89ನೇ ಇಳಿ ವಯಸ್ಸಿನಲ್ಲಿ ವೃದ್ಧಾಶ್ರಮ ಸೇರಿಕೊಂಡಿದ್ದಾರೆ. ಮರೆವಿನ ಕಾಯಿಲೆಗೆ ತುತ್ತಾಗಿರುವ ಅವರ ಪತ್ನಿ, ನಟಿ ಶೀಲಾ ಸಿಮ್ ಈಗಾಗಲೇ ವೃದ್ಧಾಶ್ರಮದಲ್ಲಿದ್ದಾರೆ. ಹಾಗಂತ ಈ ಪ್ರಸಿದ್ಧ ದಂಪತಿಗಳಿಗೆ ಮಕ್ಕಳು ಇಲ್ಲ ಎಂದಲ್ಲ. ಸಿನಿಮಾ ನಿರ್ದೇಶಕನಾಗಿರುವ ಮಗ ಮೈಕೆಲ್ ಮತ್ತು ನಟನೆಯಲ್ಲಿ ಬ್ಯುಸಿಯಾಗಿರುವ ಮಗಳು ಚಾರ್ಲೆಟ್ ಇದ್ದಾರೆ. ಆದರೆ ಹೃದ್ರೋಗಿಯಾಗಿರುವ, ಗಾಲಿ ಕುರ್ಚಿಯಲ್ಲಿ ಚಲಿಸುವ ಈ ಅಪ್ಪನನ್ನು ನೋಡಿಕೊಳ್ಳಲು ಮಕ್ಕಳಿಗೆ ಸಾಧ್ಯವಾಗುತ್ತಿಲ್ಲ. ಆದ್ದರಿಂದ ತನ್ನ ಮನೆ, ಎಸ್ಟೇಟು, ಕಲಾಕೃತಿಗಳನ್ನು ಮಾರಿ, ಪತ್ನಿ ಆಶ್ರಯ ಪಡಕೊಂಡಿರುವ ಲಂಡನ್ನಿನ ವೃದ್ಧಾಶ್ರಮವನ್ನು ಅಟೆನ್‍ಬರೋ ಸೇರಿಕೊಂಡಿದ್ದಾರೆ.
   ನಿಜವಾಗಿ, ಅಟೆನ್‍ಬರೋರ ಸ್ಥಾನದಲ್ಲಿ ಮೈಕೆಲೊ, ಫ್ರಾನ್ಸಿಸ್ಸೋ, ಕೆರ್ರಿಯೋ.. ಇರುತ್ತಿದ್ದರೆ ಅದು ಸುದ್ದಿಯಾಗುವ ಸಾಧ್ಯತೆಯೇ ಇರಲಿಲ್ಲ. ಆದರೆ ಇಲ್ಲಿ ವೃದ್ಧಾಶ್ರಮ ಸೇರಿಕೊಂಡಿರುವುದು ಪ್ರಸಿದ್ಧ ವ್ಯಕ್ತಿ. 1983ರಲ್ಲಿ ಇವರು ನಿರ್ದೇಶಿಸಿದ ‘ಗಾಂಧಿ' ಚಿತ್ರಕ್ಕೆ 8 ಆಸ್ಕರ್ ಪ್ರಶಸ್ತಿಗಳು ಬಂದಿವೆ. 50 ವರ್ಷಗಳಷ್ಟು ದೀರ್ಘ ಅವಧಿಯ ವರೆಗೆ ಹಾಲಿವುಡ್ಡನ್ನು ಆಳಿದ್ದಲ್ಲದೇ, ಯಂಗ್ ವಿನ್ಸ್‍ಟನ್, ವಾಟ್ ಎ ಲವ್ಲಿ ವಾರ್, ಚಾಪ್ಲಿನ್.. ಮುಂತಾಗಿ ಅನೇಕಾರು ಸಿನಿಮಾಗಳನ್ನು ಅಟೆನ್‍ಬರೋ ನಿರ್ದೇಶಿಸಿದ್ದರು. ನಟಿಸಿದ್ದರು. ಅಂಥ ವ್ಯಕ್ತಿಯೊಬ್ಬ ಬದುಕಿನ ಮುಸ್ಸಂಜೆಯಲ್ಲಿ ಎಲ್ಲವನ್ನೂ ಮಾರಿ ಗಾಲಿಕುರ್ಚಿಯಲ್ಲಿ ವೃದ್ಧಾಶ್ರಮ ಸೇರಿರುವುದು ಸಣ್ಣ ಸಂಗತಿಯಲ್ಲ. ಅವರು ಮನಸ್ಸು ಮಾಡಿದ್ದರೆ ಲಂಡನ್ನಿನ ಮನೆಯಲ್ಲೇ ಇರಬಹುದಿತ್ತು. ಸೇವೆಗೆ ಆಳುಗಳನ್ನು ನೇಮಿಸಿಕೊಳ್ಳಬಹುದಿತ್ತು. ತಾನು ನಿರ್ದೇಶಿಸಿದ ಸಿನಿಮಾಗಳನ್ನೋ ಮಗಳು ಚಾರ್ಲೆಟ್‍ಳ ನಟನೆಯನ್ನೋ ವೀಕ್ಷಿಸುತ್ತಾ ಮನೆಯಲ್ಲೇ ಕಾಲ ಕಳೆಯಬಹುದಿತ್ತು. ಆದರೂ ಅವರು ಆಸ್ತಿಯನ್ನೆಲ್ಲಾ ಮಾರಿ ವೃದ್ಧಾಶ್ರಮ ಸೇರಿಕೊಂಡಿದ್ದಾರೆಂದರೆ ಇವುಗಳಾಚೆಗಿನ ಇನ್ನಾವುದನ್ನೋ ಅವರು ಬಯಸುತ್ತಿದ್ದಾರೆ ಎಂದೇ ಅರ್ಥ. ಹಿರಿಪ್ರಾಯ ಯಾವಾಗಲೂ ಒಡನಾಡಿಗಳನ್ನು ಬಯಸುತ್ತದೆ. ತನ್ನವರು ತನ್ನ ಸುತ್ತ ಇರಬೇಕೆಂದು ಆಸೆ ಪಡುತ್ತದೆ. ಬಾಲ್ಯ, ಯೌವನ, ವೃದ್ಧಾಪ್ಯ.. ಎಲ್ಲವನ್ನೂ ತನ್ನವರೊಂದಿಗೆ ಹಂಚಿಕೊಳ್ಳುತ್ತಾ ದಿನಗಳೆಯುವ ಒಂದು ವಾತಾವರಣಕ್ಕಾಗಿ ತವಕಪಡುತ್ತದೆ. ಒಂದು ಕಾಲದಲ್ಲಿ ಪತ್ನಿ, ಮಕ್ಕಳು, ಉದ್ಯೋಗ ಅದು - ಇದು ಎಂದು ದಿನದ 24 ಗಂಟೆಯೂ ಬ್ಯುಸಿಯಾಗಿದ್ದ ವ್ಯಕ್ತಿ, ಇದೀಗ ದಿನದ 24 ಗಂಟೆಯೂ ಫ್ರೀಯಾಗಿರುವ ವ್ಯಕ್ತಿಯಾಗಿ ಬದಲಾಗಿರುವಾಗ, ತನ್ನ ಮಕ್ಕಳು, ಮರಿ ಮಕ್ಕಳು, ಆತ್ಮೀಯರ ಒಡನಾಟವನ್ನು ಬಯಸುವುದು ಸಹಜ. ಮಗಳು ಬಂದು ಅಪ್ಪನ ಸೇವೆ ಮಾಡುವುದಕ್ಕೂ ಆಳು ಸೇವೆ ಮಾಡುವುದಕ್ಕೂ ಪದಗಳಲ್ಲಿ ವಿವರಿಸಲಾಗದ ಅಂತರ ಇರುತ್ತದೆ. ತಮ್ಮ ಬೆಳವಣಿಗೆಯ ಒಂದು ಹಂತದ ವರೆಗೆ ಹೆತ್ತವರ ಆತ್ಮೀಯ ಒಡನಾಟ ಮಕ್ಕಳೊಂದಿಗಿರುತ್ತದೆ. ಅಪ್ಪ ತನ್ನ ಮಕ್ಕಳೊಂದಿಗೆ ಮಕ್ಕಳಾದ ಎಷ್ಟೋ ಸಂದರ್ಭಗಳಿರುತ್ತವೆ. ಅಪ್ಪ ಮಕ್ಕಳನ್ನು ಮಾರುಕಟ್ಟೆಗೆ ಕೊಂಡು ಹೋಗಿರುತ್ತಾರೆ. ಆಟದ ವಸ್ತುಗಳನ್ನು ಖರೀದಿಸಿ ಕೊಟ್ಟಿರುತ್ತಾರೆ. ಒಂದು ರೀತಿಯಲ್ಲಿ ಹೆತ್ತವರು ಮತ್ತು ಮಕ್ಕಳ ಸಂಬಂಧದಲ್ಲಿ ಹೇಳಿಕೊಳ್ಳಲಾಗದ ಏನೇನೋ ಇವೆ. ಮಗನದ್ದೋ ಮಗಳದ್ದೋ  ಮುಖ ಕಂಡ ಕೂಡಲೇ ಆಸ್ಪತ್ರೆಯ ಮಂಚದಲ್ಲಿ ಅಸಾಧ್ಯ ಸಂಕಟದಿಂದ ನರಳುತ್ತಿದ್ದರೂ ಅಪ್ಪನ ಮುಖ ಅರಳುತ್ತದೆ. ಅಮ್ಮನ ನಿಸ್ತೇಜ ಕಣ್ಣು ತೆರೆದುಕೊಳ್ಳುತ್ತದೆ. ಕೈಗಳು ಚಲಿಸುತ್ತವೆ. ಮಕ್ಕಳು ಹೆತ್ತವರಲ್ಲಿ ಧೈರ್ಯ ತುಂಬುತ್ತಾರೆ. ಬಾಯಿಗೆ ಪ್ರೀತಿಯಿಂದ ತುತ್ತಿಡುತ್ತಾರೆ. ಇವು ಆಳಿನಿಂದ ಆಗುವ ಮಾತೇ? ಆಳನ್ನು ನೋಡುವಾಗ ವೃದ್ಧ ಜೀವಗಳಿಗೆ ಮಗನನ್ನೋ ಮಗಳನ್ನೋ ನೋಡಿದ ಅನುಭವವಾಗಬಲ್ಲುದೇ? ಮಕ್ಕಳು ತಮ್ಮ ಹೆತ್ತವರನ್ನು ಸ್ಪರ್ಶಿಸುವಾಗ ಆಗುವ ಅನುಭವಕ್ಕೂ ಆಳಿನ ಅನುಭವಕ್ಕೂ ವ್ಯತ್ಯಾಸ ಇದೆಯಲ್ಲವೇ? ಬಹುಶಃ ವೃದ್ಧಾಶ್ರಮ ಸೇರಿಕೊಳ್ಳುವ ಅಟೆನ್‍ಬರೋರ ನಿರ್ಧಾರಕ್ಕೆ ಇವೆಲ್ಲ ಕಾರಣವಾಗಿರುವ ಸಾಧ್ಯತೆಯಿದೆ. ಆಳುಗಳನ್ನಿಟ್ಟುಕೊಂಡು ವೃದ್ಧಾಪ್ಯದ ಸಂಕಟಗಳನ್ನು ಒಂಟಿಯಾಗಿ ಅನುಭವಿಸುವುದಕ್ಕಿಂತ ವೃದ್ಧಾಶ್ರಮದ ವೃದ್ಧರ ಜೊತೆ ಭಾವನೆಗಳನ್ನು ಹಂಚಿಕೊಳ್ಳುತ್ತಾ ಬದುಕು ಮುಗಿಸಲು ಅವರು ಯೋಚಿಸಿರಬಹುದು.
   ನಿಜವಾಗಿ, ಮೌಲ್ಯವನ್ನು ನಿರ್ಲಕ್ಷಿಸುತ್ತಿರುವ ಆಧುನಿಕ ಪೀಳಿಗೆಯ ಮನಸ್ಥಿತಿಯನ್ನು ತರಾಟೆಗೆತ್ತಿ ಕೊಳ್ಳುವ ಸಂಕೇತವಾಗಿ ಅಟೆನ್‍ಬರೋರರನ್ನು ನಾವು ಪರಿಗಣಿಸಬೇಕಾಗಿದೆ. ಅವರು ಒಂಟಿಯಲ್ಲ. ಈ ಜಗತ್ತಿನಲ್ಲಿ ಹೆಸರು, ವಿಳಾಸ ಗೊತ್ತಿಲ್ಲದ ಎಷ್ಟೋ ಅಟೆನ್‍ಬರೋಗಳು ವೃದ್ಧಾಶ್ರಮಗಳಲ್ಲಿ, ಬಸ್ಸು, ರೈಲು ನಿಲ್ದಾಣಗಳಲ್ಲಿ, ಬೀದಿಗಳಲ್ಲಿ ನಿತ್ಯ ಕಾಣಸಿಗುತ್ತಾರೆ. ಅವರ ತಪ್ಪು ಏನೆಂದರೆ, ವೃದ್ಧರಾಗಿರುವುದು. ಇಂಥ ವೃದ್ಧರ ಕುರಿತಾದ ಚರ್ಚೆಯೊಂದಕ್ಕೆ ಅಟೆನ್‍ಬರೋ ಪ್ರಚೋದನೆ ಕೊಟ್ಟಿದ್ದಾರೆ.
ಆದ್ದರಿಂದ, ಬೆಳೆದ ಮಕ್ಕಳು ವೃದ್ಧ ಹೆತ್ತವರನ್ನು ನಿರ್ಲಕ್ಷಿಸುವುದಕ್ಕೆ ಆಧುನಿಕ ಜೀವನ ಕ್ರಮಗಳು ಕಾರಣವೋ ಅಥವಾ ಹೆತ್ತವರು ಕಾರಣವೋ ಎಂಬ ಬಗ್ಗೆ ಗಂಭೀರ ಚರ್ಚೆಯೊಂದು ನಡೆಯಬೇಕಾಗಿದೆ. ಇಸ್ಲಾಮ್, ಹೆತ್ತವರು ಮಕ್ಕಳ ಪಾಲಿನ ಸ್ವರ್ಗ ಅಥವಾ ನರಕವಾಗಿದ್ದಾರೆ ಎಂದು ಪ್ರತಿಪಾದಿಸುತ್ತದೆ. ವೃದ್ಧರಾದ ಹೆತ್ತವರು ಮನೆಯಲ್ಲಿದ್ದೂ ಯಾರಿಗಾದರೂ ಸ್ವರ್ಗ ಸಿಗುವುದಿಲ್ಲ ಎಂದಾದರೆ ಅವರು ಮಹಾ ನತದೃಷ್ಟರು ಎಂದು ಪ್ರವಾದಿ ಮುಹಮ್ಮದ್(ಸ) ಹೇಳಿದ್ದಾರೆ. ಹೆತ್ತವರ ಸೇವೆ ಮಾಡುವುದು ಬರೇ ಅವರ ಸೇವೆಯಷ್ಟೇ ಅಲ್ಲ, ಅದು ಸ್ವರ್ಗದ ಕೀಲಿಕೈಯೂ ಹೌದು ಎಂಬುದು ಇಸ್ಲಾಮಿನ ನಿಲುವು. ಆದ್ದರಿಂದಲೇ ವೃದ್ಧ ಹೆತ್ತವರನ್ನು ಆಶ್ರಮಕ್ಕೆ ಅಟ್ಟುವುದು ಬಿಡಿ, ‘ಛೆ' ಎಂಬ ಪದವನ್ನು ಕೂಡ ಅವರ ವಿರುದ್ಧ ಬಳಸಬಾರದು ಎಂದು ಕುರ್‍ಆನ್ (17: 23) ಆಜ್ಞಾಪಿಸಿರುವುದು. ಓರ್ವ ಎಷ್ಟೇ ದೊಡ್ಡ ನಮಾಝಿಗ, ಉಪವಾಸಿಗ, ಹಜ್ಜ್ ಕರ್ಮ ನಿರ್ವಹಿಸಿದವನಾದರೂ ತಂದೆ-ತಾಯಿಯ ಸಿಟ್ಟಿಗೆ ಪಾತ್ರನಾಗಿದ್ದರೆ, ಆತನ ಆ ಕರ್ಮಗಳೆಲ್ಲ ನಿಷ್ಫಲ ಎಂಬ ಉಗ್ರ ತಾಕೀತು ಕೊಟ್ಟಿರುವುದು ಇಸ್ಲಾಮ್ ಮಾತ್ರ. ಬಹುಶಃ ಮುಸ್ಲಿಮ್ ರಾಷ್ಟ್ರಗಳಲ್ಲಿ ವೃದ್ಧಾಶ್ರಮಗಳು ಇಲ್ಲದೇ ಇರುವುದಕ್ಕೆ ಕಾರಣ, ಹೆತ್ತವರಿಗೆ ಇಸ್ಲಾಮ್ ಕೊಟ್ಟಿರುವ ಈ ಮಹತ್ವ ಎಂದೇ ಹೇಳಬೇಕಾಗಿದೆ.
     ಏನೇ ಆಗಲಿ, ಅಟೆನ್‍ಬರೋರನ್ನು ನೆಪವಾಗಿಟ್ಟುಕೊಂಡಾದರೂ ಈ ಸಮಾಜದಲ್ಲಿ ‘ಹೆತ್ತವರು' ಚರ್ಚೆಗೊಳಗಾಗಬೇಕಾಗಿದೆ. ಮಾತ್ರವಲ್ಲ, ಅವರು ಮಕ್ಕಳ ಪಾಲಿನ ಸ್ವರ್ಗ ಮತ್ತು ಅನುಗ್ರಹ ಎಂಬ ಆಧ್ಯಾತ್ಮಿಕ ಪ್ರಜ್ಞೆಯನ್ನು ಬೆಳೆಸಬೇಕಾಗಿದೆ. ಇಲ್ಲದಿದ್ದರೆ ವೃದ್ಧಾಪ್ಯವನ್ನು ಭಯಪಡುವ ತಲೆಮಾರು ಬೆಳೆದುಬಂದೀತು.

No comments:

Post a Comment