Monday, 8 April 2013

ಪಾಸಿಟಿವ್ ಸುದ್ದಿಗಳ ಪ್ರಾಬಲ್ಯಕ್ಕೆ ಪೂಜಾ ನೆಪವಾಗಲಿ

ಪೂಜಾ

   ಜಗತ್ತಿನ ಯಾವ ಭಾಗದಲ್ಲೂ ನಡೆಯಬಹುದಾದ, ತೀರಾ ಸಾಮಾನ್ಯ ಘಟನೆಯೊಂದು ಕಳೆದ ವಾರ ಪತ್ರಿಕೆಗಳಲ್ಲಿ ಪ್ರಮುಖ ಸುದ್ದಿಯಾಗಿ ಪ್ರಕಟವಾಯಿತು. ರಾಜಸ್ಥಾನದ ಬಿಕಾನೇರ್‍ನ ಪೂಜಾ ಎಂಬ 6ರ ಹೆಣ್ಣು ಮಗಳು ಪಾಕಿಸ್ತಾನದ ಗಡಿ ದಾಟಿದ್ದಳು. ಮನೆಯ ತುಸು ದೂರದಲ್ಲಿರುವ ಗಡಿಯ ಬಗ್ಗೆ, ಅದಕ್ಕೂ ದೇಶ ವಿಭಜನೆಗೂ ನಡುವೆ ಇರುವ ಸಂಬಂಧದ ಬಗ್ಗೆ ಆ ಹೆಣ್ಣು ಮಗುವಿಗೆ ಗೊತ್ತಿರುವ ಸಾಧ್ಯತೆಗಳು ತೀರಾ ಕಡಿಮೆ. ದೊಡ್ಡವರು ಸೇರಿ ಭೂಮಿಗೆ ಎಳೆದಿರುವ ಆ ಗೆರೆಗೆ ಆ ಮಗು, ತನ್ನ ಮನೆಯ ಸುತ್ತ ಹಾಕುವ ಬೇಲಿಯಷ್ಟೇ ಮಹತ್ವ ಕೊಟ್ಟಿರುವ ಸಾಧ್ಯತೆಯೂ ಇದೆ. ತಕ್ಷಣ ಭಾರತದ ಗಡಿ ರಕ್ಷಣಾ ಪಡೆಯ ಅಧಿಕಾರಿಗಳು ಪಾಕ್ ಅಧಿಕಾರಿಗಳಿಗೆ ಸುದ್ದಿ ಮುಟ್ಟಿಸಿದರು. ಕೇವಲ ಎರಡೇ ದಿನಗಳಲ್ಲಿ ಪೂಜಾಳನ್ನು ಪತ್ತೆ ಹಚ್ಚಿ ಅವರು ಭಾರತೀಯ ಅಧಿಕಾರಿಗಳಿಗೆ ಹಸ್ತಾಂತರಿಸಿದರು. ನಿಜವಾಗಿ, ಇದೊಂದು ಅಪರೂಪದ ಘಟನೆ. ಯಾಕೆಂದರೆ, ಹೀಗೆ ಗೊತ್ತಿಲ್ಲದೇ ಗಡಿ ದಾಟಿದ ಅನೇಕಾರು ಮಂದಿ ಉಭಯ ದೇಶಗಳ ಜೈಲುಗಳಲ್ಲಿ ಈಗಲೂ ಕೊಳೆಯುತ್ತಿದ್ದಾರೆ. ಅವರ ಅಪರಾಧ ಏನೆಂದರೆ, ಗಡಿ ಭಾಗದಲ್ಲಿ ಬದುಕುತ್ತಿರುವುದು ಮತ್ತು ತೀರಾ ಬಡವರಾಗಿರುವುದು. ಆಡು, ಕುರಿ, ದನಗಳನ್ನು ಮೇಯಿಸುತ್ತಾ ಗಡಿ ದಾಟಿ ಬಿಟ್ಟರೆ ಆ ಬಳಿಕ ವರ್ಷಗಟ್ಟಲೆ ಅವರ ಪತ್ತೆಯೇ ಇರುವುದಿಲ್ಲ. ಹೆಚ್ಚಿನ ಘಟನೆಗಳಲ್ಲಿ ಅಧಿಕಾರಿಗಳು ಅಂಥವರ ಮೇಲೆ ಗೂಢಚರ್ಯೆಯ ಆರೋಪವನ್ನು ಹೊರಿಸಿರುತ್ತಾರೆ. ಅಷ್ಟಕ್ಕೂ ಇಂಥ ಕುಟುಂಬಗಳೆಲ್ಲ ಮಾಧ್ಯಮಗಳು ಮತ್ತು ಮಾನವ ಹಕ್ಕು ಹೋರಾಟಗಾರರು ಸದಾ ಸುಳಿದಾಡುತ್ತಿರುವ ದೇಶದ ಪ್ರಮುಖ ನಗರಗಳಲ್ಲಿ ಬದುಕುತ್ತಿಲ್ಲವಲ್ಲ. ಹೀಗೆ ರಾಜಕೀಯ ದುರುದ್ದೇಶಗಳಿಗಾಗಿ ದೇಶವನ್ನು ವಿಭಜಿಸಿ ಅದರ ಫಲವನ್ನು ಈಗಲೂ ಕೊಯ್ಯುತ್ತಿರುವವರ ಮಧ್ಯೆ, ಯಾವ ದುರುದ್ದೇಶವೂ ಇಲ್ಲದೇ ಗಡಿ ದಾಟುವ ಬಡವರು ದೇಶವಿರೋಧಿಗಳಾಗಿ ಜೈಲು ಸೇರಬೇಕಾಗುತ್ತದೆ. ಇಂಥ ಹೊತ್ತಲ್ಲಿ ಪೂಜಾಳ ಪ್ರಕರಣ ಖಂಡಿತ ಬ್ರೇಕಿಂಗ್ ನ್ಯೂಸ್ ಆಗುವಷ್ಟು ತೂಕದ್ದು, ಮಹತ್ವದ್ದು.
   ದುರಂತ ಏನೆಂದರೆ, ಮಾಧ್ಯಮಗಳಲ್ಲಿ ಅಥವಾ ಇನ್ನಿತರ ಸಭೆ, ಸೆಮಿನಾರ್‍ಗಳಲ್ಲಿ ಇಂಥ ಪಾಸಿಟಿವ್ ಸುದ್ದಿಗಳಿಗೆ ಜಾಗ ಸಿಗುತ್ತಿಲ್ಲ ಅನ್ನುವುದು. ಗುಜರಾತ್ ಹತ್ಯಾಕಾಂಡದಿಂದಾಗಿ ಊರು ತೊರೆದವರು ಬಳಿಕ ಊರಿಗೆ ಮರಳಿದಾಗ ಅವರನ್ನು  ಉರಿದು ಹೋದ ಮನೆಯ ಅವಶೇಷಗಳು ಸ್ವಾಗತಿಸಿತ್ತು. ಪ್ರೀತಿಯಿಂದ ಬೆಳೆಸಿದ್ದ ಕೈತೋಟಗಳು, ಕೃಷಿ ಬೆಳೆಗಳು ನಾಶವಾಗಿದ್ದುವು. ಬಾವಿಗಳನ್ನು ಕಸ ಕಡ್ಡಿಗಳಿಂದ ತುಂಬಲಾಗಿತ್ತು. ಅಲ್ಲದೇ, ಈ ಎಲ್ಲ ಅನಾಹುತಗಳಿಗೆ ಕಾರಣವಾದವರು ಪಕ್ಕದ ಮನೆಯಲ್ಲೇ ಇದ್ದರು. ಈಗ ಮತ್ತೆ ಅವರು ಎದುರು-ಬದುರಾಗುವ ಸನ್ನಿವೇಶ ನಿರ್ಮಾಣವಾದಾಗ, ಮತ್ತೆ ದ್ವೇಷವನ್ನು ಮುಂದುವರಿಸುವುದಕ್ಕೆ ಹೆಚ್ಚಿನ ಕುಟುಂಬಗಳು ಇಷ್ಟಪಡಲಿಲ್ಲ. ಹಿಂದೂಗಳ ಮನೆ ನಿರ್ಮಾಣದಲ್ಲಿ ಮುಸ್ಲಿಮರು ಕೈ ಜೋಡಿಸಿದರು. ಮುಸ್ಲಿಮರು ನೆಲೆ ಕಂಡುಕೊಳ್ಳಲು ಹಿಂದೂಗಳೂ ಸಹಕರಿಸಿದರು. ನಿನ್ನೆ ಬೆಂಕಿಯಿಟ್ಟವನನ್ನು ಇವತ್ತು ಕ್ಷಮಿಸಲು ಸಂತ್ರಸ್ತರು ಮನಸ್ಸು ಮಾಡಿದರು. ಇಂಥ ಘಟನೆಗಳು ಗುಜರಾತ್‍ನಲ್ಲಿ ಧಾರಾಳ ನಡೆದಿವೆಯೆಂದು ಕಳೆದ ವಾರ, ‘ರಿಕಾನ್ಸಿಲಿಯೇಶನ್ ಬೈ ಶೇರ್‍ಡ್ ಕೇರಿಂಗ್’ ಎಂಬ ಲೇಖನದಲ್ಲಿ ಹರ್ಷ ಮಂದರ್ ಬರೆದಿದ್ದರು. ಹಿಂದೂ-ಮುಸ್ಲಿಮ್ ಸಂತ್ರಸ್ತರೇ ಹೆಚ್ಚಿರುವ, ಅಮನ್ ಪಥಿಕ್ ಮತ್ತು ನ್ಯಾಯ್ ಪಥಿಕ್ ಎಂಬ ತಂಡಗಳು ಇಂಥ ಪ್ರಯತ್ನಗಳನ್ನು ಸಾಕಷ್ಟು ನಡೆಸಿವೆ ಎಂದು, ಗುಜರಾತ್ ಹತ್ಯಾಕಾಂಡದಲ್ಲಿ ಮೋದಿಯ ಪಾತ್ರವನ್ನು ಖಂಡಿಸಿ ಸರಕಾರಿ ಹುದ್ದೆಯನ್ನು ತೊರೆದಿರುವ ಮಂದರ್, ದಿ ಹಿಂದೂವಿನಲ್ಲಿ ಉಲ್ಲೇಖಿಸಿದ್ದರು.
   ಆದರೆ ಇಂಥ ಪಾಸಿಟಿವ್ ಸಂಗತಿಗಳು ಸುದ್ದಿಯೇ ಆಗುತ್ತಿಲ್ಲ. ಮೋದಿಯ ಅಸಭ್ಯ ಭಾಷೆ ಮತ್ತು ಆಕ್ರಮಣಕಾರಿ ನಿಲುವುಗಳಿಗೆ ಮಾಧ್ಯಮಗಳಲ್ಲಿ ಸಿಗುವಷ್ಟು ಕವರೇಜು ಸಭ್ಯ ಭಾಷೆಯ ಭಾಷಣಗಳಿಗೆ ಸಿಗುತ್ತಿಲ್ಲ. ಒಂದು ವೇಳೆ ರಾಜಕಾರಣಿಗಳ ಕೊಳಕು ಭಾಷೆ ಮತ್ತು ವಿಚಾರಗಳು ಸಾರ್ವಜನಿಕವಾಗಿ ಅಮುಖ್ಯ ಅನ್ನಿಸಿಕೊಂಡರೆ ಏನಾಗಬಹುದು? ನಮ್ಮ ಸೆಮಿನಾರ್‍ಗಳು, ಸಂವಾದ ಕೂಟಗಳಲ್ಲೆಲ್ಲ ನೆಗೆಟಿವ್ ಸಂಗತಿಗಳಿಗೆ ಮಹತ್ವ ಲಭಿಸದೇ ಹೋದರೆ ಏನು ಸಂಭವಿಸಬಹುದು? ಭ್ರಷ್ಟಾಚಾರಿಗಳ ಪಟ್ಟಿಯನ್ನು ಹೇಳುತ್ತಾ ಹೋಗುವುದಕ್ಕಿಂತ ಶುದ್ಧಾಚಾರಿಗಳ ವಿವರವನ್ನು ಮತ್ತು ಅವರ ಮಾದರಿ ಬದುಕನ್ನು ಮಂಡಿಸುತ್ತಾ ಹೋಗುವುದರಲ್ಲಿ ಇರುವ ವ್ಯತ್ಯಾಸವನ್ನೇಕೆ ನಾವು ಪರಿಗಣಿಸುತ್ತಿಲ್ಲ? ಅಂದಹಾಗೆ, ಇದರರ್ಥ ಸಮಾಜದಲ್ಲಿರುವ ಕೆಡುಕುಗಳನ್ನು ಉಲ್ಲೇಖಿಸಬಾರದೆಂದಲ್ಲ. ಆದರೆ ಕೆಡುಕುಗಳೇ ಮುಖ್ಯವಾಗಿ, ಭರವಸೆಯೇ ಸತ್ತು ಹೋಗುವಷ್ಟು ಅವು ಆವರಿಸಿಕೊಳ್ಳಬಾರದಲ್ಲ.
   ಈ ದೇಶದಲ್ಲಿ ಪೂಜಾಳಂಥ ಪ್ರಕರಣಗಳು ಧಾರಾಳ ನಡೆಯುತ್ತಿವೆ. ತಪ್ಪು ಮಾಡುತ್ತಾ ಮತ್ತು ಪರಸ್ಪರ ಕ್ಷಮಿಸಿಕೊಳ್ಳುತ್ತಾ ಬದುಕನ್ನು ಸಂತಸದಿಂದ ಕಳೆಯುತ್ತಿರುವ ಅಸಂಖ್ಯ ಮಂದಿ ಈ ದೇಶದಲ್ಲಿದ್ದಾರೆ. ಅವರಿಗೆ ಪರಸ್ಪರ ಭಾವನೆಗಳನ್ನು ಹಂಚಿಕೊಳ್ಳುವುದಕ್ಕೆ, ಸುಖ-ದುಃಖಗಳನ್ನು ವಿನಿಮಯಿಸಿಕೊಳ್ಳುವುದಕ್ಕೆ ಅವರ ಧರ್ಮಗಳು ಅಡ್ಡಿಯಾಗುತ್ತಿಲ್ಲ. ಆದರೆ ರಾಜಕೀಯ ದುರುದ್ದೇಶಗಳನ್ನು ಇರಿಸಿಕೊಂಡ ಮಂದಿ ಇಂಥವರ ಮಧ್ಯೆ ಜಾತಿ-ಧರ್ಮದ ಆಧಾರದಲ್ಲಿ ವಿಭಜನೆಯನ್ನು ಬಯಸುತ್ತಿದ್ದಾರೆ. ಚುನಾವಣೆ ಹತ್ತಿರ ಬಂದಂತೆಯೇ ಈ ವಿಭಜನೆಯ ಪ್ರಯತ್ನಗಳು ಇನ್ನಷ್ಟು ಹೆಚ್ಚಾಗುತ್ತವೆ. ಭಾಷೆಯಲ್ಲಿ ನಂಜು ಕಾಣಿಸಿಕೊಳ್ಳುತ್ತದೆ. ಮಾಧ್ಯಮಗಳು ಇದಕ್ಕೆ ಮಹತ್ವ ಕೊಟ್ಟು ಪ್ರಕಟಿಸುವಾಗ, ಆ ನಂಜು ಸುಲಭದಲ್ಲಿ ಸಾರ್ವಜನಿಕವಾಗಿ ಪಸರಿಸಿಬಿಡುತ್ತದೆ. ನಂಜಿಲ್ಲದವರ ಎದೆಗೂ ಕೆಲವೊಮ್ಮೆ ನಂಜು ಅಂಟಿ ಬಿಡುತ್ತದೆ. ಆದ್ದರಿಂದ, ಪೂಜಾಳಂಥ ಘಟನೆಗಳಿಗೆ ಮಾಧ್ಯಮಗಳಲ್ಲಿ ಹೆಚ್ಚೆಚ್ಚು ಪ್ರಾಮುಖ್ಯತೆ ಲಭಿಸಬೇಕು. ತನ್ನನ್ನು ತೀವ್ರವಾಗಿ ಹಿಂಸಿಸಿ, ಊರಿನಿಂದಲೇ ವಲಸೆ ಹೋಗುವಂತೆ ಮಾಡಿದ್ದ ಮಕ್ಕಾದ ಜನತೆಯ ಮೇಲೆ ಪ್ರವಾದಿ ಮುಹಮ್ಮದ್‍ರು(ಸ) ಪ್ರಾಬಲ್ಯ ಪಡೆದಾಗ, ಅವರನ್ನೆಲ್ಲ ಕ್ಷಮಿಸಿದ್ದರು. ಅವರ ಬಗ್ಗೆ ಪಾಸಿಟಿವ್ ಆಗಿ ಆಲೋಚಿಸಿದ್ದರು. ಆದ್ದರಿಂದಲೇ, ‘ಪೂಜಾ ಘಟನೆ’ ಮುಖ್ಯವಾಗುತ್ತದೆ. ಇಂಥ ಸುದ್ದಿಗಳು ಮಾಧ್ಯಮಗಳಲ್ಲಿ ಹೆಚ್ಚೆಚ್ಚು ಪ್ರಕಟಗೊಂಡರೆ ಜನರ ನಡುವಿನ ಸಂಬಂಧಗಳು ಹೆಚ್ಚೆಚ್ಚು ಬಲಗೊಳ್ಳುತ್ತಾ ಹೋಗುತ್ತದೆ. ಪಾಕಿಸ್ತಾನದ ಹೆಸರಲ್ಲಿ, ದೇಶಭಕ್ತಿಯ ನೆಪದಲ್ಲಿ ಜನರನ್ನು ವಿಭಜಿಸುವವರಿಗೆ ಸೋಲು ಎದುರಾಗುತ್ತಾ ಹೋಗುತ್ತದೆ.
   ಪೂಜಾಳಂಥ ಘಟನೆಗಳು ಈ ದೇಶದಲ್ಲಿ ಹೆಚ್ಚೆಚ್ಚು ನಡೆಯಲಿ ಮತ್ತು ಅವುಗಳು ಸಮಾಜದಲ್ಲಿ ಸುದ್ದಿಗೀಡಾಗಲಿ ಎಂದೇ ಹಾರೈಸೋಣ.

No comments:

Post a Comment