Tuesday, 16 April 2013

ಕುಸುಮ ಎಂಬ ತಾಯಿಯೂ ಐವರು ಮಕ್ಕಳೂ


ಹೆಸರು: ಕುಸುಮ
ಪ್ರಾಯ: 80
ವಾಸ್ತವ್ಯ: ಉಡುಪಿ ಜಿಲ್ಲೆಯ ಪಡುಬಿದ್ರೆ ಸಮೀಪದ ಇನ್ನಾ ಬಸ್‍ಸ್ಟ್ಯಾಂಡ್‍ನಲ್ಲಿ..
   ವಿಧವೆಯಾಗಿರುವ ಕುಸುಮರಿಗೆ ಐವರು ಪುತ್ರರು ಮತ್ತು ಓರ್ವ ಪುತ್ರಿಯಿದ್ದಾರೆ. ಹಿರಿಯ ಪುತ್ರ ತಕ್ಕಮಟ್ಟಿನ ಶ್ರೀಮಂತರಾಗಿದ್ದು, ಉಳಿದವರು ದುಡಿಯುತ್ತಿದ್ದಾರೆ. ಮಕ್ಕಳೊಂದಿಗೆ ಸರದಿಯಂತೆ ಬದುಕುತ್ತಿದ್ದ ಈ ತಾಯಿ ಇತ್ತೀಚೆಗೆ ಜಾರಿ ಬಿದ್ದು ಸೊಂಟ ಮುರಿದುಕೊಂಡಿದ್ದಾರೆ. ನಡೆಯಲು ಕಷ್ಟಪಡುವಂತಾಗಿದೆ. ಹೀಗಿರುತ್ತಾ, ಮಕ್ಕಳು ಈ ತಾಯಿಯನ್ನು ಅಟೋ ರಿಕ್ಷಾದಲ್ಲಿ ಕೂರಿಸಿ ಬಸ್ ಸ್ಟ್ಯಾಂಡ್‍ನ ಬಳಿ ಇಳಿಸಿ ಹೋಗಿದ್ದಾರೆ. ಶೌಚಕ್ಕೆ ಹೋಗಲಾಗದೇ, ಊಟದ ವ್ಯವಸ್ಥೆಯಿಲ್ಲದೇ ಈ ತಾಯಿ ಕಣ್ಣೀರಿಳಿಸುತ್ತಿದ್ದಾರೆ..
    ಜೆಡಿಎಸ್ ಮತ್ತು ಕೆಜೆಪಿ ಪಕ್ಷಗಳ ಚುನಾವಣಾ ಪ್ರಣಾಳಿಕೆಯನ್ನು ಮುಖಪುಟದಲ್ಲಿ ತುಂಬಿಕೊಂಡು ಬಂದ ಎಪ್ರಿಲ್ 14ರ ಪತ್ರಿಕೆಯಲ್ಲಿ ಕಾಣಿಸಿಕೊಂಡ ಸುದ್ದಿ ಇದು. ಸುದ್ದಿಯನ್ನು ಓದುವಾಗ ಎದೆ ಭಾರವಾಗುತ್ತದೆ. ವೃದ್ಧ ತಂದೆ-ತಾಯಿಗೆ ಪ್ರತಿ ತಿಂಗಳು 15 ಸಾವಿರ ರೂಪಾಯಿ ಮಾಸಾಶನ ನೀಡುವಂತೆ ದೆಹಲಿ ಹೈಕೋರ್ಟು ಪುತ್ರನಿಗೆ ಆದೇಶಿಸಿದ್ದು ಇದಕ್ಕಿಂತ ಮೂರು ದಿನಗಳ ಮೊದಲಷ್ಟೇ ವರದಿಯಾಗಿತ್ತು. ಹೆತ್ತವರನ್ನು ಚೆನ್ನಾಗಿ ನೋಡಿಕೊಳ್ಳಿ ಅಂತ ಒಂದು ಕೋರ್ಟು ಆದೇಶಿಸುವಷ್ಟು ಕೌಟುಂಬಿಕ ಮೌಲ್ಯಗಳು ಪತನವಾಗಿವೆ ಎಂದರೆ, ಉಳಿದಂತೆ ಹೇಳುವುದಕ್ಕಾದರೂ ಏನಿದೆ? ಮಕ್ಕಳು ಮತ್ತು ಹೆತ್ತವರ ನಡುವಿನ ಸಂಬಂಧಗಳ ಪಾವಿತ್ರ್ಯತೆಯು ದಿನೇ ದಿನೇ ಕುಸಿಯುತ್ತಿರುವುದಕ್ಕೆ ಏನು ಕಾರಣ? ಆಧುನಿಕತೆಯೇ, ವೈಜ್ಞಾನಿಕ ಪ್ರಗತಿಯೇ ಅಥವಾ ಧಾರ್ಮಿಕ ಮೌಲ್ಯಗಳ ನಿರ್ಲಕ್ಷ್ಯವೇ?
   ಹೆತ್ತವರನ್ನು ಹತ್ತು-ಹಲವು ಬಗೆಯಲ್ಲಿ ವರ್ಣಿಸುವ, ಗೌರವಿಸುವ ದೇಶ ಇದು. ಆದರೂ ಪ್ರತಿದಿನ ಅವರ ಸಂಕಷ್ಟದ ಸುದ್ದಿಗಳು ಹೆಚ್ಚುತ್ತಲೇ ಇವೆ. ನಿಜವಾಗಿ, ಹೆತ್ತವರು ಎಂಬ ನಾಲ್ಕಕ್ಷರಕ್ಕೆ, ‘ಹುಟ್ಟಿಸಿದವರು’ ಎಂಬ ಏಕ ಮಾತ್ರ ಅರ್ಥವಷ್ಟೇ ಇರುವುದಲ್ಲ. ಅದರರ್ಥ ತುಂಬಾ ವಿಶಾಲವಾದದ್ದು. ಹುಟ್ಟಿದಂದಿನಿಂದ ಹಿಡಿದು ದೊಡ್ಡವರಾಗುವ ತನಕ ಹೆತ್ತವರನ್ನು ಬಿಟ್ಟು ಬೇರೊಂದು ಜಗತ್ತು ಮಗುವಿಗಿರುವುದಿಲ್ಲ. ಈ ಭೂಮಿಗೆ ಬರುವುದಕ್ಕಿಂತ ಮೊದಲು ಮಗು ತಾಯಿಯ ಹೊಟ್ಟೆ ಯನ್ನು ಮನೆ ಮಾಡಿಕೊಂಡಿರುತ್ತದೆ. ಆ ಸಂದರ್ಭದಲ್ಲಿ ಮಗುವಿಗೆ ಸ್ವಸಾಮರ್ಥ್ಯವಿರುವುದಿಲ್ಲ. ಅದು ಕುಸುಮರಷ್ಟೇ ದುರ್ಬಲ. ಒಂದು ವೇಳೆ, ತಾಯಿ ಮನಸ್ಸು ಮಾಡಿದರೆ ಯಾವ ಕ್ಷಣದಲ್ಲಿ ಬೇಕಾದರೂ ಆ ಮನೆಯಿಂದ ಅದನ್ನು ಹೊರಗಟ್ಟುವುದಕ್ಕೆ ಸಾಧ್ಯವಿದೆ. ಆದರೆ ಮಗುವನ್ನು ತಾಯಿ ಹೊಟ್ಟೆಯೆಂಬ ತನ್ನ ಮನೆಯಲ್ಲೇ  ಉಳಿಸಿಕೊಳ್ಳುವುದಲ್ಲದೇ ಅದಕ್ಕಾಗಿ ಹತ್ತು-ಹಲವು ಸಂಕಷ್ಟಗಳನ್ನು ಅನುಭವಿಸುತ್ತಾಳೆ. ದೈಹಿಕ, ಮಾನಸಿಕ ಏರುಪೇರುಗಳು ಅವಳಲ್ಲಿ ಉಂಟಾಗುತ್ತವೆ. ತಿನ್ನಲಾಗದೇ, ವಾಂತಿ ಮಾಡುತ್ತಾ, ನಿತ್ರಾಣವನ್ನು ಸಹಿಸುತ್ತಾ ಒಂಬತ್ತು ತಿಂಗಳ ಕಾಲ ಮಗುವನ್ನು ಮನೆಯಲ್ಲಿಟ್ಟು ಪೋಷಿಸುತ್ತಾಳೆ. ಇಷ್ಟಕ್ಕೂ, ತನ್ನೆಲ್ಲಾ ಸಮಸ್ಯೆಗಳಿಗೆ ತನ್ನ ಮನೆ ಸೇರಿರುವ ಈ ಮಗುವೇ ಕಾರಣ ಎಂದು ಸಿಟ್ಟಾಗಿ, ಮಗುವನ್ನು ಮನೆಯಿಂದ ಹೊರದಬ್ಬಲು ತಾಯಿ ತೀರ್ಮಾನಿಸಿರುತ್ತಿದ್ದರೆ ಏನಾಗುತ್ತಿತ್ತು? ಕುಸುಮರ ಐವರು ಗಂಡು ಮಕ್ಕಳಗೆ ಈ ಜಗತ್ತನ್ನು ನೋಡುವ ಭಾಗ್ಯ ಸಿಗುತ್ತಿತ್ತೇ? ಆದರೆ ಯಾವ ತಾಯಿಯೂ ತನ್ನ ಮನೆ ಸೇರಿರುವ ಶಿಶುವನ್ನು ಸಂಕಷ್ಟ ಎಂದು ಪರಿಗಣಿಸುವುದೇ ಇಲ್ಲ. ಇನ್ನು, ಮನೆಯಿಂದ ಭೂಮಿಗೆ ಬಂದ ಶಿಶುವನ್ನು ತಾಯಿ ನೋಡುವುದೂ ಅಕ್ಕರೆಯಿಂದಲೇ. ಬಿದ್ದ ಮಗುವನ್ನು ಎಬ್ಬಿಸುವುದು, ಗಾಯಕ್ಕೆ ಚಿಕಿತ್ಸೆ ಮಾಡಿಸುವುದು, ತಾವು ಉಣ್ಣದೇ ಮಗುವಿಗೆ ಉಣಿಸುವುದು.. ಹೀಗೆ ಹೆತ್ತವರು ಎಂಬ ಎರಡು ಜೀವಗಳು ಒಂದು ಮಗುವಿನ ಬದುಕಿನಲ್ಲಿ ದೊಡ್ಡದೊಂದು ತ್ಯಾಗವನ್ನು ಮಾಡಿರುತ್ತವೆ. ಆದ್ದರಿಂದಲೇ ಪವಿತ್ರ ಕುರ್‍ಆನ್, ‘ತಾಯಿಯು ನಿತ್ರಾಣದ ಮೇಲೆ ನಿತ್ರಾಣವನ್ನು ಸಹಿಸಿ ನಿಮ್ಮನ್ನು ತನ್ನ ಗರ್ಭದಲ್ಲಿರಿಸಿದಳು. ಆದ್ದರಿಂದ ಆಕೆಗೆ ಕೃತಜ್ಞತೆ ಸಲ್ಲಿಸಿ ಎಂದು ಮಕ್ಕಳೊಂದಿಗೆ ಹೇಳಿದ್ದು. ಹೆತ್ತವರ ಹಕ್ಕುಗಳನ್ನು ತಿಳಿದುಕೊಳ್ಳಿ (31:14) ಎಂದು ಆದೇಶಿಸಿದ್ದು. ವೃದ್ಧರಾಗಿರುವ ಹೆತ್ತವರನ್ನು ಬಸ್ ಸ್ಟ್ಯಾಂಡ್‍ಗಳಲ್ಲಿ ಬಿಟ್ಟು ಬಿಡುವುದು ಬಿಡಿ, ‘ಛೆ’ ಎಂಬ ಪದವನ್ನು ಕೂಡ ಅವರ ವಿರುದ್ಧ ಬಳಸಬಾರದು (17: 23) ಎಂದು ತಾಕೀತು ಮಾಡಿದ್ದು. ಹೆತ್ತವರ ಸಿಟ್ಟಿಗೆ, ಅವರ ಕಣ್ಣೀರಿಗೆ ಕಾರಣವಾಗುವ ಮಕ್ಕಳು ಅವರು ಎಷ್ಟೇ ದೊಡ್ಡ ಧರ್ಮಿಷ್ಟರಾಗಿದ್ದರೂ ನಮಾಝ್, ಉಪವಾಸ, ಹಜ್ಜ್ ಮಾಡುವ ಮುಲ್ಲಾ ಆಗಿದ್ದರೂ ಸ್ವರ್ಗ ಪ್ರವೇಶಿಸುವುದಿಲ್ಲ ಎಂದು ಪ್ರವಾದಿ ಮುಹಮ್ಮದ್(ಸ) ಹೇಳಿದ್ದು.
   ಭ್ರಷ್ಟಾಚಾರ, ಅತ್ಯಾಚಾರ, ಅಶ್ಲೀಲತೆಗಳ ಕುರಿತಂತೆ ಸಾಕಷ್ಟು ಚರ್ಚೆಗಳಾಗುತ್ತಿರುವ ಸಂದರ್ಭ ಇವತ್ತಿನದು. ಭ್ರಷ್ಟಾಚಾರ, ಅತ್ಯಾಚಾರಕ್ಕೆಲ್ಲ ಪ್ರಬಲ ಕಾನೂನುಗಳ ರಚನೆಯು ಬಿರುಸುಗೊಂಡ ದಿನಗಳಿವು. ಆದರೂ ಭ್ರಷ್ಟಾಚಾರದ ನಿರ್ಮೂಲನೆಯ ಬಗ್ಗೆ ಸಾರ್ವಜನಿಕರಲ್ಲಿ ಯಾವ ನಿರೀಕ್ಷೆಯೂ ಕಾಣಿಸುತ್ತಿಲ್ಲ. ಅತ್ಯಾಚಾರ ಪ್ರಕರಣಗಳಲ್ಲಿ ಇಳಿಕೆಯೂ ಆಗುತ್ತಿಲ್ಲ. ಒಂದು ರೀತಿಯಲ್ಲಿ, ಕಾನೂನುಗಳೂ ಅಪರಾಧಗಳೂ ಹೆಚ್ಚುತ್ತಿರುವ ಈ ಕಾಲದಲ್ಲಿ, ಹೆತ್ತವರೂ ಸಮಸ್ಯೆಯ ಭಾಗವಾಗುತ್ತಿದ್ದಾರೆ. ಮಕ್ಕಳು, ಮೊಮ್ಮಕ್ಕಳ ಜೊತೆ ತಮ್ಮ ದಿನವನ್ನು ಕಳೆಯಬೇಕಾಗಿದ್ದ ವೃದ್ಧ ಹೆತ್ತವರು ಬಸ್ ಸ್ಟ್ಯಾಂಡ್ ಗಳಲ್ಲೋ ಬೀದಿ, ಆಶ್ರಮಗಳಲ್ಲೋ ಕಾಣಿಸಿಕೊಳ್ಳುತ್ತಿದ್ದಾರೆ. ಆದ್ದರಿಂದಲೇ, ಈ ಬಗ್ಗೆ ಸಾರ್ವಜನಿಕವಾಗಿ ಗಂಭೀರ ಚರ್ಚೆಯೊಂದು ನಡೆಯಬೇಕಾಗಿದೆ. ವೃದ್ಧರಿಗೆ ಮಾಸಾಶನವನ್ನು ತಮ್ಮ ಪ್ರಣಾಳಿಕೆಯಲ್ಲಿ ಸೇರಿಸಿ ರಾಜಕೀಯ ಪಕ್ಷಗಳು ತೆಪ್ಪಗಾಗುವಂತೆ ನಾವು ವೃದ್ಧರನ್ನು ಬಸ್‍ಸ್ಟ್ಯಾಂಡ್‍ಗಳಲ್ಲಿ ನೋಡಿ ಸುಮ್ಮನಾಗಬಾರದು. ಸಭೆ, ವಿಚಾರಗೋಷ್ಠಿ, ಸಂವಾದಗಳನ್ನು ಏರ್ಪಡಿಸಿ, ಹೆತ್ತವರಿಗೂ ಮತ್ತು ಆಧ್ಯಾತ್ಮಿಕತೆಗೂ ನಡುವೆ ಇರುವ ಸಂಬಂಧ, ಅವರ ತ್ಯಾಗ-ಪರಿಶ್ರಮಗಳು ಸಾರ್ವಜನಿಕ ಚರ್ಚೆಯಾಗುವಂತೆ ನೋಡಿಕೊಳ್ಳಬೇಕು. ಇಷ್ಟಕ್ಕೂ, ಹೆತ್ತವರನ್ನು ಆದರಿಸುವಂತೆ ಮಾಡಲು ಕೋರ್ಟಿನ ಆದೇಶದಿಂದ ಸಾಧ್ಯವೇ? ಮಕ್ಕಳು ಹೆತ್ತವರನ್ನು ಆರೈಕೆ ಮಾಡಬೇಕಾದದ್ದು ಮನಸಂತೃಪ್ತಿಯಿಂದ. ಇವರನ್ನು ಆರೈಕೆ ಮಾಡಿದರೆ ತನಗೆ ಸ್ವರ್ಗ ಸಿಗುತ್ತದೆ ಎಂಬ ಆಧ್ಯಾತ್ಮಿಕ ಪ್ರಜ್ಞೆಯಿಂದ. ಅವರು ಕಣ್ಣೀರಾದರೆ ತನಗೆ ನರಕ ಶತಃಸಿದ್ಧ ಎಂಬ ಭೀತಿಯಿಂದ. ಈ ಆಧ್ಯಾತ್ಮಿಕ ಪ್ರಜ್ಞೆ ಸಮಾಜದಲ್ಲಿ ಬೆಳೆದು ಬರದ ಹೊರತು ಹೆತ್ತವರು ನೆಮ್ಮದಿಯಾಗಿರಲು ಸಾಧ್ಯವಿಲ್ಲ.

No comments:

Post a Comment