Wednesday 24 April 2013

ಅಡ್ವಾಣಿ, ಸುಷ್ಮಾ, ರಾಹುಲ್‍ಗೆ ಮತ ಮಾರದಿರೋಣ


   ಗಗನಚುಂಬಿ ಕಟ್ಟಡಗಳು, ಮೆಟ್ರೋ ರೈಲು, ಆಧುನಿಕ ವಿಮಾನ ಯಾನ ಸೌಲಭ್ಯಗಳು, ಅಣ್ವಸ್ತ್ರಗಳಿರುವ; ಬಾಹ್ಯಾಕಾಶ ಯಾನಕ್ಕೆ ಸಿದ್ಧತೆ ನಡೆಸಿರುವ, ಮಾಹಿತಿ ತಂತ್ರಜ್ಞಾನದಲ್ಲಿ ಅಗ್ರ ಸ್ಥಾನದಲ್ಲಿರುವ ಮತ್ತು ಜಗತ್ತಿಗೇ ಸಡ್ಡು ಹೊಡೆಯುವಷ್ಟು ಶ್ರೀಮಂತರಿರುವ ದೇಶವೊಂದರಲ್ಲಿ 1 ರೂ.ಗೆ 30 ಕೆ.ಜಿ. ಅಕ್ಕಿ, 24 ಗಂಟೆ ನಿರಂತರ ವಿದ್ಯುತ್, ಶಾಲೆಗಳಿಗೆ ಇಂಟರ್‍ನೆಟ್ ಸವ್ಳಭ್ಯ, ದ್ವಿಪಥ ರಸ್ತೆ.. ಮುಂತಾದ ಭರವಸೆಗಳನ್ನು ರಾಜಕೀಯ ಪಕ್ಷಗಳು ತಮ್ಮ ಚುನಾವಣಾ ಪ್ರಣಾಳಿಕೆಯಾಗಿ ಜನರ ಮುಂದಿಡುತ್ತದೆಂದರೆ ಏನರ್ಥ, ಇದು ಅಸಂಬದ್ಧವಲ್ಲವೇ.. ಎಂಬೆಲ್ಲ ಅನುಮಾನ ಮೂಡುವುದು ಸಹಜ. ನಿಜವಾಗಿ, ಈ ದೇಶದ ರಾಜಕೀಯ ಪಕ್ಷಗಳಿಗೆ ಜನರ ನಾಡಿ-ಮಿಡಿತಗಳು ಚೆನ್ನಾಗಿ ಗೊತ್ತು. ಗಗನಚುಂಬಿ ಕಟ್ಟಡಗಳ ಆಚೆ, ಚತುಷ್ಪಥ ರಸ್ತೆಗಳ ಅಕ್ಕ-ಪಕ್ಕ, ಐಟಿ-ಬಿಟಿ ಅಬ್ಬರಗಳ ತುಸು ದೂರ ಕೋಟ್ಯಂತರ ಕಡು ಬಡವರಿದ್ದಾರೆ ಎಂಬುದೂ ಗೊತ್ತು. ಅವುಗಳು ಹೊರಡಿಸುವ  ಚುನಾವಣಾ ಪ್ರಣಾಳಿಕೆಗಳೇ ಇದನ್ನು ಸಾಬೀತುಪಡಿಸುತ್ತವೆ. ಹಾಗಿದ್ದ ಮೇಲೆ ಯಾಕೆ ಕೊಳೆಗೇರಿಗಳು ಅಭಿವೃದ್ಧಿ ಯಾಗುತ್ತಿಲ್ಲ? 40 ಕೋಟಿ ಕಡು ಬಡವರ (ವಿಶ್ವಬ್ಯಾಂಕ್ ವರದಿ) ಸಂಖ್ಯೆಯಲ್ಲಿ ವರ್ಷಂಪ್ರತಿ ಯಾಕೆ ಏರಿಕೆಯಾಗುತ್ತಿದೆ?
   ಒಂದು ದೇಶದ ಅಭಿವೃದ್ಧಿಗೆ ಅಲ್ಲಿನ ರಾಜಕೀಯ ಪಕ್ಷಗಳ ನಿಲುವು ಬಹಳ ಮುಖ್ಯ ಪಾತ್ರ ವಹಿಸುತ್ತವೆ. ಅವು ದೇಶದ ಸಮಸ್ಯೆಗಳನ್ನು ಹೇಗೆ ಮತ್ತು ಎಷ್ಟರ ಮಟ್ಟಿಗೆ ಅರ್ಥ ಮಾಡಿಕೊಂಡಿವೆ ಎಂಬುದರ ಆಧಾರದಲ್ಲಿ ಅಭಿವೃದ್ಧಿಯ ನಿರ್ಧಾರವಾಗುತ್ತದೆ. ಈ ನಿಟ್ಟಿನಲ್ಲಿ ಹೇಳುವುದಾದರೆ, ಈ ದೇಶದ ರಾಜಕೀಯ ಪಕ್ಷಗಳು ಪಾಸ್ ಆಗಿವೆ. ಈ ದೇಶದಲ್ಲಿ ಎಷ್ಟು ಕಡು ಬಡವರಿದ್ದಾರೆ, ವಿದ್ಯುತ್, ರಸ್ತೆ, ನೀರು, ಶಾಲೆ, ಆಸ್ಪತ್ರೆ, ಶೌಚಾಲಯ.. ಇಲ್ಲದ ಎಷ್ಟು ಹಳ್ಳಿಗಳಿವೆ ಎಂಬುದನ್ನೆಲ್ಲ   ಅವುಗಳ ಪ್ರಣಾಳಿಕೆಗಳು ಚೆನ್ನಾಗಿಯೇ ವಿವರಿಸುತ್ತವೆ. ಆದ್ದರಿಂದ ಈ ಪ್ರದೇಶಗಳು 5 ವರ್ಷಗಳ ಆಡಳಿತದ ಬಳಿಕವೂ ಅಭಿವೃದ್ಧಿ ಹೊಂದಿಲ್ಲ ಎಂದಾದರೆ ಅದರರ್ಥ, ಅಲ್ಲಿನ ಜನ ಪ್ರತಿನಿಧಿಗಳಿಗೆ ಆ ಬಗ್ಗೆ ಅರಿವಿಲ್ಲ ಎಂದಲ್ಲ, ಅವರು ಉದ್ದೇಶಪೂರ್ವಕವಾಗಿ ನಿರ್ಲಕ್ಷಿಸಿದ್ದಾರೆ ಎಂದರ್ಥ. ಹೀಗಿರುವಾಗ ಇಂಥ ಜನಪ್ರತಿನಿಧಿಗಳಿಗೆ ಇಲ್ಲವೇ ಪಕ್ಷಕ್ಕೆ ನಾವು ಯಾಕೆ ಮತ್ತೆ ಓಟು ಹಾಕಬೇಕು ಎಂದು ಮತ ಚಲಾಯಿಸುವ ಮುನ್ನ ಪ್ರತಿಯೊಬ್ಬರೂ ಸ್ವಯಂ ಪ್ರಶ್ನಿಸಿಕೊಳ್ಳಬೇಕು.
   ಪ್ರಜಾಪ್ರಭುತ್ವಕ್ಕೆ ಈ ದೇಶದ ಸಂವಿಧಾನ ಕೊಡುವ ವ್ಯಾಖ್ಯಾನಗಳೇನೇ ಇರಲಿ, ಹೆಂಡಕ್ಕೆ, ಸೀರೆಗೆ, ಅಕ್ಕಿಗೆ, ಕೋಮು ಆಧಾರಿತ ರಾಜಕೀಯ ಸಿದ್ಧಾಂತಕ್ಕೆ ಓಟು ಸಿಗುವ ವರೆಗೆ ಪ್ರಜಾಪ್ರಭುತ್ವವು ಅಪಹಾಸ್ಯಕ್ಕೆ ಒಳಗಾಗುತ್ತಲೇ ಇರುತ್ತದೆ. ಒಂದು ಓಟು ಒಂದು ರಾಜಕೀಯ ಬಿರುಗಾಳಿಯನ್ನೇ ಎಬ್ಬಿಸುವಷ್ಟು ತೂಕಭರಿತವಾಗುವುದು, ಆ ಓಟು ಹಾಕುವ ವ್ಯಕ್ತಿ ಪ್ರಜ್ಞಾವಂತನಾಗಿರುವಾಗ ಮಾತ್ರ. ಸದ್ಯ ಈ ದೇಶದಲ್ಲಿ ಇಂಥದ್ದೊಂದು ಪ್ರಜ್ಞಾವಂತ ಮತದಾರ ವರ್ಗ ಎಷ್ಟು ಶೇಕಡಾ ಇದೆ ಎಂಬುದು ಎಲ್ಲ ರಾಜಕೀಯ ಪಕ್ಷಗಳಿಗೂ ಗೊತ್ತು. ಆದ್ದರಿಂದಲೇ ರಮ್ಯ, ರಕ್ಷಿತಾ, ದರ್ಶನ್ ರಂಥ ಸಿನಿಮಾ ತಾರೆಯರು ಚುನಾವಣಾ ಪ್ರಚಾರಕ್ಕೆ ಇಳಿದಿರುವುದು. ತಮ್ಮ  ಎಲ್ಲ ವೈಫಲ್ಯಗಳನ್ನೂ ಕೆಲವು ತಾರೆಯರು ಮುಚ್ಚಿ ಬಿಡುತ್ತಾರೆ ಎಂಬ ನಂಬುಗೆ ರಾಜಕೀಯ ಪಕ್ಷಗಳಲ್ಲಿ ಈಗಲೂ ಇವೆ. ಅಷ್ಟಕ್ಕೂ ಅಡ್ವಾಣಿ, ಸುಶ್ಮಾ ಸ್ವರಾಜ್, ರಾಜನಾಥ್ ಸಿಂಗ್‍ರಂಥ ನಾಯಕರು ದೆಹಲಿಯಿಂದ ರಾಜ್ಯಕ್ಕೆ ಬಂದಿರುವುದರ ಉದ್ದೇಶವಾದರೂ ಏನು? ಅವರನ್ನು ನೋಡಿ ರಾಜ್ಯದ ಮತದಾರರು ಬಿಜೆಪಿ ದುರಾಡಳಿತವನ್ನು ಮರೆಯಲಿ ಎಂದೇ ಅಲ್ಲವೇ? ಹಾಗಂತ, ಕಳೆದ 5 ವರ್ಷಗಳಲ್ಲಿ ಮೂವರು ಮುಖ್ಯಮಂತ್ರಿಗಳ ಮೂಲಕ ವಿಫಲ ಆಡಳಿತವನ್ನು ನಡೆಸಿದ ನಾಯಕರು ಯಾರೂ ದೆಹಲಿಯವರಲ್ಲವಲ್ಲ. ಯಡಿಯೂರಪ್ಪ, ಹಾಲಪ್ಪ, ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಜನಾರ್ಧನ ರೆಡ್ಡಿ.. ಮುಂತಾದ ಹತ್ತು-ಹಲವು ಭ್ರಷ್ಟ ನಾಯಕರು  ಕನ್ನಡಿಗರಾಗಿದ್ದರಲ್ಲವೇ?  5 ವರ್ಷಗಳ ಹಿಂದೆ ಅವರನ್ನೆಲ್ಲ ರಾಜ್ಯ ವಿಧಾನಸಭೆಗೆ ಮತದಾರರು ಆರಿಸಿ ಕಳುಹಿಸಿದ್ದು ಅಡ್ವಾಣಿಯನ್ನೋ ರಾಜನಾಥ್‍ರನ್ನೋ ನೋಡಿಯೂ ಅಲ್ಲವಲ್ಲ. ಹೀಗಿರುವಾಗ, ಈಗ ಮತದಾರರ ಮುಂದೆ ಮಾತಾಡಬೇಕಾದದ್ದು ಯಾರು, ರಾಜ್ಯ ನಾಯಕರಲ್ಲವೇ? ಆದರೆ  ಅವರು ಹಾಗೆ ಮಾಡದೆ ದೆಹಲಿಯಿಂದ ನಾಯಕರನ್ನು ಆಮದು ಮಾಡಿಕೊಳ್ಳುತ್ತಾರೆಂದರೆ, ಅದರರ್ಥ, ಜನರನ್ನು ಎದುರಿಸುವ ಧೈರ್ಯ ಇಲ್ಲ ಎಂದೇ ಅಲ್ಲವೇ? ತಮ್ಮ ವೈಫಲ್ಯವನ್ನು ಅಡ್ವಾಣಿಯ ಬಲದಿಂದಲೋ ಸುಷ್ಮಾರ ಮಾತಿನಿಂದಲೋ ಅಡಗಿಸಿಡಬಹುದು ಎಂಬ ನಂಬಿಕೆಯಿಂದಲ್ಲವೇ? ನಿಜವಾಗಿ, ಬಿಜೆಪಿ ಎಂದಲ್ಲ, ಯಾವ ಪಕ್ಷವೂ ಸ್ಥಳೀಯ ಅಭ್ಯರ್ಥಿಗಳ ಮೂಲಕವೇ ಓಟು ಕೇಳಬೇಕು. ಯಾರ್ಯಾರದ್ದೋ ವರ್ಚಸ್ಸು, ಮಾತಿನ ಬಲ, ವ್ಯಕ್ತಿತ್ವವನ್ನು ಪ್ರದರ್ಶಿಸಿ ಮತ ಯಾಚಿಸುವುದು ಒಂದು ರೀತಿಯಲ್ಲಿ ಜನರನ್ನು ವಂಚಿಸಿದಂತೆ. ಒಂದು ಪ್ರದೇಶದ ಸಮಸ್ಯೆ, ಸಂಕಟಗಳು ಚೆನ್ನಾಗಿ ಗೊತ್ತಿರುವುದು ಆಯಾ ಪ್ರದೇಶದ ಅಭ್ಯರ್ಥಿಗೇ ಹೊರತು ಆಮದಿತ ನಾಯಕರಿಗಲ್ಲ.  ದೆಹಲಿಯಿಂದ ಬರುವ ಸೋನಿಯಾಗೆ, ರಾಹುಲ್‍ಗೆ ಒಂದು ವಿಧಾನ ಸಭಾ ಕ್ಷೇತ್ರದಲ್ಲಿ ಎಷ್ಟು ಶಾಲೆ, ಆಸ್ಪತ್ರೆ, ಶೌಚಾಲಯಗಳಿವೆ ಎಂಬುದು ಗೊತ್ತಿರುತ್ತದೆಯೇ? ಅವರು ನಾಲ್ಕು ಮರುಳು ಮಾತುಗಳನ್ನು ಆಡಿ, ಕೈ ಎತ್ತಿ ಹೊರಟು ಹೋಗುತ್ತಾರೆ. ನಿಜವಾಗಿ, ಇಂಥ ಆಮದು ನಾಯಕರಿಗೆ ಜನರು ಮರುಳಾಗುವುದರಿಂದಲೇ, ಸಮಸ್ಯೆಗಳು ಸಮಸ್ಯೆಗಳಾಗಿಯೇ ಉಳಿಯುವುದು. ಅತ್ಯಂತ ಅನರ್ಹ ಅಭ್ಯರ್ಥಿ ಕೂಡ ಗೆದ್ದ ಬರುವುದು. ಆದ್ದರಿಂದ ಈ ಬಾರಿಯ ಚುನಾವಣೆಯು ಆಮದು ನಾಯಕರ ವರ್ಚಸ್ಸಿನಲ್ಲಿ ಕೊಚ್ಚಿ ಹೋಗದಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನು ಮತದಾರರು ಹೊತ್ತುಕೊಳ್ಳಬೇಕಾಗಿದೆ. ತನ್ನ ಪ್ರಾಮಾಣಿಕತೆ, ಜನಪರ ಕಾಳಜಿ, ಮೌಲ್ಯ ಬದ್ಧತೆಯನ್ನು ಆಧಾರವಾಗಿಸಿಯೇ ಓರ್ವ ಅಭ್ಯರ್ಥಿ ಓಟು ಕೇಳಬೇಕೇ ಹೊರತು ಅಡ್ವಾಣಿಯನ್ನೋ ಮೋದಿಯನ್ನೋ ರಾಹುಲ್‍ರನ್ನೋ ತೋರಿಸಿ ಅಲ್ಲ. ಅವರಿಂದ ಕ್ಷೇತ್ರದ ಸಮಸ್ಯೆಯನ್ನು ಪರಿಹರಿಸಲು ಸಾಧ್ಯವೂ ಇಲ್ಲ. ಆದ್ದರಿಂದ ರಾಜ್ಯದ ಮತದಾರರು ಈ ಬಾರಿ ಪಕ್ವ ನಿರ್ಧಾರವನ್ನು ತಳೆಯ ಬೇಕಾಗಿದೆ. ಭ್ರಷ್ಟಾಚಾರ, ಕೋಮುವಾದ, ಜಾತಿವಾದ, ಅನೈತಿಕತೆಗಳ ವಕ್ತಾರರನ್ನು ಮುಲಾಜಿಲ್ಲದೇ ಸೋಲಿಸಬೇಕಾಗಿದೆ. ಈ ರಾಜ್ಯಕ್ಕೆ ಇವತ್ತು ಬೇಕಾಗಿರುವುದು ಜಾತಿ, ಕೋಮುಗಳ ಆಧಾರದಲ್ಲಿ ಆಡಳಿತ ನಡೆಸದ, ಬಡವರು-ದುರ್ಬಲರನ್ನು ಅವರ ಧರ್ಮ ನೋಡದೇ ಮೇಲೆತ್ತಲು ಯತ್ನಿಸುವ ಪ್ರಾಮಾಣಿಕ ಜನಪ್ರತಿನಿಧಿಗಳು. ಕಳೆದ 5 ವರ್ಷಗಳು ಈ ನಿಟ್ಟಿನಲ್ಲಿ ಸಂಪೂರ್ಣ ವೈಫಲ್ಯವನ್ನು ಕಂಡಿವೆ. ಮುಂದಿನ 5 ವರ್ಷಗಳು ಹಾಗಾಗದಂತೆ ಎಚ್ಚರಿಕೆ ವಹಿಸಬೇಕಾದದ್ದು ನಮ್ಮೆಲ್ಲರ ಕರ್ತವ್ಯವಾಗಿದೆ.

No comments:

Post a Comment