Wednesday 19 June 2013

ಹೇಮಾವತಿಯ ಮನೆಯಿಂದ ಜಿಯಾಖಾನ್ ಳ ಮನೆಯವರೆಗೆ

   ಮನೆ, ಶಾಲೆ, ಹಾಸ್ಟೆಲ್ಲು, ಆಸ್ಪತ್ರೆ, ವೃದ್ಧಾಶ್ರಮ, ಹೊಟೇಲು, ಕಚೇರಿ.. ಹೀಗೆ ಗುರುತಿಸಿಕೊಳ್ಳುವ ಅಸಂಖ್ಯ ಕಟ್ಟಡಗಳು ನಮ್ಮ ಸುತ್ತು-ಮುತ್ತು ಇವೆ. ಈ ಕಟ್ಟಡಗಳ ವಿಶೇಷತೆ ಏನೆಂದರೆ, ಇವೆಲ್ಲ ಒಂದೇ ಬಗೆಯ ವಸ್ತುಗಳಿಂದ ನಿರ್ಮಾಣಗೊಂಡಿರುವುದು. ಶಾಲೆಯನ್ನು ಕಟ್ಟುವುದಕ್ಕೆ ಕಲ್ಲು, ಸಿಮೆಂಟು, ಹೈಗೆ, ಕಬ್ಬಿಣದಂಥ ವಸ್ತುಗಳನ್ನು ಹೇಗೆ ಬಳಸಲಾಗುತ್ತದೋ ಹಾಗೆಯೇ ಮನೆಯನ್ನು ಕಟ್ಟುವುದಕ್ಕೂ ಇವೇ ವಸ್ತುಗಳನ್ನು ಬಳಸಲಾಗುತ್ತದೆ. ಇವಷ್ಟೇ ಅಲ್ಲ, ವೃದ್ಧಾಶ್ರಮ ಎಂದು ಬೋರ್ಡು ತಗುಲಿಸಿಕೊಂಡ, ಆಸ್ಪತ್ರೆಯಾಗಿ, ಹೊಟೇಲಾಗಿ ಗುರುತಿಸಿಕೊಳ್ಳುವ ಎಲ್ಲವನ್ನೂ ನಿರ್ಮಿಸಿರುವುದು ಇವೇ ವಸ್ತುಗಳಿಂದ. ಹಾಗಿದ್ದರೂ ಕೆಲವು ಕಟ್ಟಡಗಳು ಮನೆಯಾಗಿ, ಕೆಲವು ಕಚೇರಿಗಳಾಗಿ, ಕೆಲವು ಇನ್ನೇನೋ ಆಗಿ ಯಾಕೆ ಗುರುತಿಸಿಕೊಳ್ಳುತ್ತವೆ? ಅದಕ್ಕಿರುವ ಕಾರಣಗಳು ಏನು? ಕಟ್ಟಡದ ಆಕೃತಿಯೇ? ಕಿಟಕಿ, ಬಾಗಿಲುಗಳ ಸಂಖ್ಯೆಯೇ? ಒಂದು ಕಟ್ಟಡದ ಎದುರು 'ಆಸ್ಪತ್ರೆ' ಎಂದು ಬೋರ್ಡು ತಗುಲಿಸಿದ ಮಾತ್ರಕ್ಕೇ ಅದು ಆಸ್ಪತ್ರೆಯಾಗಿ ಬಿಡಲು ಸಾಧ್ಯವಿಲ್ಲವಲ್ಲ. ಮನೆ ಎಂಬ ಬೋರ್ಡಿನಿಂದಾಗಿ ಮನೆಯಾಗುವುದು, ವೃದ್ಧಾಶ್ರಮ ಎಂಬ ಫಲಕದಿಂದಾಗಿ ವೃದ್ಧಾಶ್ರಮವಾಗುವುದು, ಹೊಟೇಲು ಎಂಬ ಗುರುತು ಚಿಹ್ನೆಯಿಂದಾಗಿ ಹೊಟೇಲು ಆಗುವುದೆಲ್ಲ ಸಾಧ್ಯವೇ? ಇಲ್ಲ ಎಂದಾದರೆ ಒಂದು ಕಟ್ಟಡದ ಮನೆಯಾಗಿ ಗುರುತಿಸಿಕೊಳ್ಳುವುದಕ್ಕೆ ಇರುವ ಅರ್ಹತೆಗಳೇನು?
    ನಿಜವಾಗಿ, ಇಂಥ ಪ್ರಶ್ನೆಗಳು ನಮ್ಮನ್ನು ಎದುರುಗೊಂಡಾಗಲೇ ನಾವು ಏನು ಮತ್ತು ನಮ್ಮ ವರ್ತನೆಗಳು ಹೇಗಿರಬೇಕು ಎಂಬುದಕ್ಕೆ ಉತ್ತರ ಸಿಗುವುದು. ಇವತ್ತಿನ ದಿನಗಳಲ್ಲಿ ಮನೆಗಳು ಮತ್ತೆ ಮತ್ತೆ ಚರ್ಚೆಗಳಗಾಗುತ್ತಲೇ ಇವೆ. ನಾಲ್ಕು ವರ್ಷಗಳಿಂದ ಗೃಹಬಂಧನದಲ್ಲಿದ್ದ ಬೆಂಗಳೂರಿನ ಹೇಮಾವತಿಯ ಮನೆಯಿಂದ ಹಿಡಿದು ಚಿತ್ರ ನಟಿ ಜಿಯಾಖಾನ್‍ಳ ಮನೆಯ ವರೆಗೆ ಅಸಂಖ್ಯ ಮನೆಗಳು ಸುದ್ದಿಯಲ್ಲಿವೆ. ಮನೆ ಅಂದ ಕೂಡಲೇ ನಮ್ಮ ಮುಂದೆ ಕೆಲವು ಸಿದ್ಧ ಮಾದರಿಗಳು ಮೂಡಿ ಬರುತ್ತವೆ. ಹಿರಿಯರು, ಕಿರಿಯರು, ಮಕ್ಕಳು ಮುಂತಾಗಿ ಪರಸ್ಪರ ಕರುಳಬಳ್ಳಿ ಸಂಬಂಧ ಇರುವ ಒಂದು ಗುಂಪು. ಆ ಗುಂಪಿನ ಮಧ್ಯೆ ಭಾವನಾತ್ಮಕ ಸಂಬಂಧ ಇರುತ್ತದೆ. ಮಗು ಎಡವಿ ಬಿದ್ದಾಗ ಎತ್ತಿಕೊಳ್ಳುವುದಕ್ಕೆ ಆ ಮಗುವಿನ ತಾಯಿಯಷ್ಟೇ ವೇಗವಾಗಿ ಅಜ್ಜನೋ ಅಜ್ಜಿಯೋ ತಮ್ಮನೋ ಬಂದಿರುತ್ತಾರೆ. ಒಬ್ಬರ ನೋವನ್ನು ಇನ್ನೊಬ್ಬರು ಅಷ್ಟೇ ತೀವ್ರವಾಗಿ ಅನುಭವಿಸುವ ಸಂಬಂಧವೊಂದು ಮನೆಯೊಳಗೆ ನೆಲೆಸಿರುತ್ತದೆ. ತಂದೆ ಅಸೌಖ್ಯದಿಂದ ಮಲಗಿದ್ದರೆ ಮನೆಯ ಇತರ ಸದಸ್ಯರ ಮಾತು-ಕೃತಿಗಳಲ್ಲಿ ಅದು ಪ್ರಕಟವಾಗುತ್ತಿರುತ್ತದೆ. ಮನೆಯಲ್ಲಿ ಮಗನಿಗೋ ಮಗಳಿಗೋ ಮದುವೆಯ ಬಗ್ಗೆ ಚರ್ಚೆಗಳಾಗುತ್ತವೆ. ಸೂಕ್ತ ಸಂಬಂಧಕ್ಕಾಗಿ ಹುಡುಕಾಟ ನಡೆಯುತ್ತದೆ. ಶಾಲೆಗೆ ಹೋಗುವ ಮಕ್ಕಳ ಹೋಮ್ ವರ್ಕ್, ಟಿಫಿನ್ ಬಾಕ್ಸ್, ಶಾಲಾ ಬಸ್ಸಿನ ಬಗ್ಗೆ ಕೇವಲ ಆ ಮಕ್ಕಳ ಹೆತ್ತವರು ಮಾತ್ರ ಕಾಳಜಿ ತೋರುವುದಲ್ಲ, ಮನೆಯ ಇತರ ಸದಸ್ಯರೂ ಆ ಬಗ್ಗೆ ಎಚ್ಚರಿಸುತ್ತಿರುತ್ತಾರೆ. ಬಟ್ಟೆ ಹೊಲಿಸುವಾಗ, ಟೂರ್ ಹೋಗುವಾಗ, ಆಹಾರ ತಯಾರಿಸುವಾಗ.. ಮನೆಯ ಎಲ್ಲರ ಅಭಿರುಚಿಗಳನ್ನು ಪರಿಗಣಿಸಲಾಗುತ್ತದೆ. ಒಂದು ರೀತಿಯಲ್ಲಿ, ಇವು ಮತ್ತು ಇಂಥ ಇನ್ನೂ ಅನೇಕ ಗುರುತುಗಳು ಒಂದು ಕಟ್ಟಡವನ್ನು ಮನೆಯಾಗಿಸುತ್ತದೆಯೇ ಹೊರತು ಸಾವಿರಾರು ರೂಪಾಯಿಗಳನ್ನು ಖರ್ಚು ಮಾಡಿ 'ನಿಲಯ' ಎಂದು ಚಂದದ ಬೋರ್ಡು ತೂಗು ಹಾಕುವುದರಿಂದಲ್ಲ. ಕಟ್ಟಡವೊಂದು ಹೊಟೇಲ್ ಆಗುವುದಕ್ಕೂ ಕೆಲವು ಮುಖ್ಯ ಗುರುತುಗಳಿರಬೇಕು. ವಿವಿಧ ಬಟ್ಟೆಗಳನ್ನು ಧರಿಸಿದ, ವಿವಿಧ ಅಂತಸ್ತಿನ ನೂರಾರು ಮಂದಿ ಒಂದೇ ಟೇಬಲಿನಲ್ಲಿ ಪರಸ್ಪರ ಎದುರು-ಬದುರು ಕೂತಿದ್ದರೂ ಮಾತಾಡದೇ, ಭಾವನೆಗಳನ್ನು ಹಂಚಿಕೊಳ್ಳದೇ ಹೋಗುವ ತಾಣ ಅದು. ಓರ್ವ ಅತಿ ದುಬಾರಿ ಆಹಾರವನ್ನು ತಿನ್ನುವಾಗ, ಆತನ ಎದುರೇ ಕೂತವ ಸಾದಾ ಉಪ್ಪಿಟ್ಟು ತಿಂದು ಎದ್ದೇಳುತ್ತಾನೆ. ಹಾಗಂತ, ದುಬಾರಿ ಮನುಷ್ಯ ಈ ಉಪ್ಪಿಟ್ಟು ಮನುಷ್ಯನಿಗೆ ತನ್ನದನ್ನು ಹಂಚುವುದಿಲ್ಲ. ಉಪ್ಪಿಟ್ಟಿನ ಬಿಲ್ ಅನ್ನೂ ಪಾವತಿಸುವುದಿಲ್ಲ. ಒಟ್ಟಿಗೆ ಇದ್ದೂ ಒಂಟಿಯಾಗಿರುವ, ಗುಂಪಿನಲ್ಲಿದ್ದೂ ಪರಸ್ಪರ ಕಾಳಜಿ ತೋರದ ಒಂದು ಕಟ್ಟಡವಾಗಿದೆ ಹೊಟೇಲು. ವೃದ್ಧಾಶ್ರಮ, ಶಾಲೆ, ಕಚೇರಿಗಳಿಗೂ ಕೂಡ ಅವುಗಳದ್ದೇ ಆದ ಭಿನ್ನ ಭಿನ್ನ ಗುರುತುಗಳಿವೆ..
   ದುರಂತ ಏನೆಂದರೆ, ಇವತ್ತಿನ ಮನೆಗಳು 'ಮನೆ'ಯಾಗಿ ಗುರುತಿಸಿಕೊಳ್ಳುವಲ್ಲಿ ತೀವ್ರ ವೈಫಲ್ಯವನ್ನು ಕಾಣುತ್ತಿವೆ ಅನ್ನುವುದು. ಎಷ್ಟೋ ಮನೆಗಳ ಒಳಗಿನ ವಾತಾವರಣ ಹೇಗಿದೆ ಎಂದರೆ, ಅವು ಮನೆಗಳಾಗಿರದೇ ವೃದ್ಧಾಶ್ರಮಗಳೋ, ಜೈಲುಗಳೋ, ಹೊಟೇಲುಗಳೋ ಆಗಿ ಮಾರ್ಪಟ್ಟಿವೆ. ಒಂದೇ ಮನೆಯಲ್ಲಿದ್ದರೂ ಅಣ್ಣ-ತಮ್ಮಂದಿರು, ಅತ್ತೆ-ಸೊಸೆಯಂದಿರು ಪರಸ್ಪರ ಮಾತಾಡುತ್ತಿಲ್ಲ. ಒಂದೇ ಮನೆಯಲ್ಲಿ ಒಂದಕ್ಕಿಂತ ಹೆಚ್ಚು ಒಲೆಗಳು ಉರಿಯುತ್ತವೆ. ಹೆತ್ತವರನ್ನು ಮಾತಾಡಿಸದ, ಕಾಳಜಿ ತೋರದ ಮಕ್ಕಳಿದ್ದಾರೆ. ಪತ್ನಿಯ ಮೇಲೆ ದೌರ್ಜನ್ಯ ಎಸಗುವ ಪತಿಯಿದ್ದಾನೆ. ವರದಕ್ಷಿಣೆಗಾಗಿಯೋ ಇನ್ನಿತರ ಬೇಡಿಕೆಗಳನ್ನು ಮುಂದಿಟ್ಟೋ ಹೆಣ್ಣು ಮಗಳನ್ನು ಶೋಷಿಸುವ ಮನುಷ್ಯರಿದ್ದಾರೆ. ಆತ್ಮಹತ್ಯೆ ಮಾಡಿಕೊಳ್ಳುವ ಮಕ್ಕಳಿದ್ದಾರೆ.. ಹೀಗೆ ಹೊರಗೆ ಮನೆ ಎಂದು ಗುರುತಿಸಿಕೊಳ್ಳುವ ಆದರೆ ಆಂತರಿಕವಾಗಿ, ಹೊಟೇಲೋ, ಜೈಲೋ, ಆಸ್ಪತ್ರೆಯೋ ಆಗಿ ಮಾರ್ಪಟ್ಟಿರುವ ಅಸಂಖ್ಯ ಕಟ್ಟಡಗಳ ಮಧ್ಯೆ ನಾವೆಲ್ಲ ಬದುಕುತ್ತಿದ್ದೇವೆ. ಆದ್ದರಿಂದಲೇ, ಮನೆಗಳನ್ನು ನಿಜ ಅರ್ಥದಲ್ಲಿ ಮನೆಗಳಾಗಿಸುವ ಜಾಗೃತಿ ಕಾರ್ಯಕ್ರಮವೊಂದರ ಅಗತ್ಯ ತಲೆದೋರಿರುವುದು. ಮನೆ ನೆಮ್ಮದಿಯಾಗಿದ್ದರೆ ಸಮಾಜ ನೆಮ್ಮದಿಯಾಗಿರುತ್ತದೆ. ಅಂಗಳ ಸ್ವಚ್ಛವಾಗಿದ್ದರೆ ಪರಿಸರ ಸ್ವಚ್ಛವಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಮನೆಗಳನ್ನು ನೆಮ್ಮದಿಯ ಕೇಂದ್ರವಾಗಿಸುವ ಪ್ರಯತ್ನಗಳಲ್ಲಿ ಎಲ್ಲರೂ ಗಂಭೀರವಾಗಿ ತೊಡಗಿಸಿಕೊಳ್ಳಬೇಕು. ಇವತ್ತು ಟಿ.ವಿ.ಗಳು, ಇಂಟರ್‍ನೆಟ್‍ಗಳೆಲ್ಲಾ ನಮ್ಮ ನಮ್ಮ ಬದುಕುವ ವಿಧಾನವನ್ನೇ ಬದಲಿಸಿವೆ.  ಒಬ್ಬರನ್ನೊಬ್ಬರು ಮೀರಿ ಹೋಗುವ, ಮೌಲ್ಯಗಳನ್ನು ಲೆಕ್ಕಿಸದ, ಸ್ವತಂತ್ರ ಮನಸ್ಥಿತಿಯ ಪೀಳಿಗೆಯನ್ನು ಇವು ನಿತ್ಯ ಬೆಳೆಸುತ್ತಿವೆ. ಇಂಥ ಹೊತ್ತಲ್ಲಿ ಮನೆಯನ್ನು 'ಮನೆ'ಯಾಗಿಯೇ ಉಳಿಸಿಕೊಳ್ಳುವ ಮೂಲಕ ಸಮಾಜದ ನೆಮ್ಮದಿಯನ್ನು ಕಾಪಾಡಿಕೊಳ್ಳಬೇಕಾದ ಹೊಣೆಗಾರಿಕೆಯನ್ನು ಎಲ್ಲರೂ ವಹಿಸಿಕೊಳ್ಳಬೇಕು.
ಅಂದಹಾಗೆ

ಪ್ರೀತಿ, ಕರುಣೆ, ನೈತಿಕತೆಯಂಥ ಮೌಲ್ಯಗಳ ಕಾರಣಕ್ಕಾಗಿ ಎಲ್ಲ ಮನೆಗಳೂ ಸುದ್ದಿಗೀಡಾಗಲಿ. ಹೇಮಾವತಿ, ಜಿಯಾಖಾನ್‍ಳಂಥವರಿಗಾಗಿ ಯಾವ ಮನೆಗಳೂ ಸುದ್ದಿಗೀಡಾಗದಿರಲಿ.

1 comment:

  1. ಮನೆಯೊಂಬುದು ಮನೆಯಲ್ಲ......
    ಮಾನ್ಯರೇ,
    ಈ ಸಂಪಾದಕೀಯದ ಮೂಲಕ ’ಮನೆ’ ಎನ್ನುವ ಎರಡಕ್ಷರದ ಒಳಹುವನ್ನು ಬಿಚ್ಚಿಟ್ಟಿದ್ದೀರಿ. ಧನ್ಯವಾದಗಳು. ನಿಜಕ್ಕೂ ಇಂದಿನ ದಿನಗಳಲ್ಲಿ ಮನೆಯೊಂಬುದು ಮನೆಯಾಗಿ ಉಳಿದಿಲ್ಲ.ಅದು ಬೇರೇನೋ ಆಗಿರಬಹುದು ಮನೆಯಂತೋ ಖಂಡಿತವಾಗಿ ಮನೆಯಾಗಿ ಉಳಿದಿಲ್ಲ ಎನ್ನುವ ಸತ್ಯ ನಿಮ್ಮ ಈ ಸಂಪಾದಕೀಯ ಲೇಖನದಿಂದ ಬಯಲಾದಂತಾಗಿದೆ.
    ಈ ಸಂದರ್ಭದಲ್ಲಿ ನನಗೆ ಕನ್ನಡ ಸಿನೆಮಾ ಹಾಡೊಂದು ನೆನಪಿಗೆ ಬರುತ್ತಿದೆ."ಕೇಳು ಸಂಸಾರದಲ್ಲಿ ರಾಜಕೀಯ ತಾನು ತನ್ನ ಮನೆಯಲ್ಲಿ ಪರಕೀಯಾ ಇಲ್ಲಿ ಅತ್ತಿಯ ಹಣ್ಣು ಬಿಚ್ಚು ನೋಡಿದರೆ ಬಳಿ ಹುಳುಕು ತುಂಬಿಹುದು ಕೇಳು ದೊರೆ" ಎನ್ನುವ ಹಾಡು ಎಷ್ಟು ಅರ್ಥಗರ್ಬಿತವಾಗಿದೆ ಅಲ್ಲವೆ? ಮನೆ ಎನ್ನುವುದು ರಾಜಕೀಯ ಕ್ಷೇತ್ರವಾಗಿ ಮಾರ್ಪಟ್ಟಿದೆ. ಅತ್ತಿ ಹಣ್ಣು ನೋಡಲು ಬಲು ಸುಂದರವಾಗಿ ಕಾಣಿಸುತ್ತದೆ. ಅದನ್ನು ಬಿಚ್ಚಿ ನೋಡಿದಾಗ ಅದರಲ್ಲಿ ಹುಳುಕು ತುಂಬಿರುವುದು ಗೋಚರಿಸುತ್ತದೆ. ಒಟ್ಟಿನಲ್ಲಿ ಇಂದಿನ ಮನೆಯ ಸ್ಥಿತಿಯು ಹೀಗೆಯೆ ಆಗಿದೆ. ಸುಂದರ ಕಟ್ಟಡಗಳ ಒಳಗೆ ಹುಳುಕು ತುಂಬಿರುವಂತಹ ವಾತವರಣದಲ್ಲಿ ಮನುಷ್ಯ ಬದುಕುತ್ತಿದ್ದಾನೆ. ಎನ್ನುವುದು ಮಾತ್ರ ವಾಸ್ತವಿಕ.
    ಎಮ್ಮಾರ‍್

    ReplyDelete