Monday 21 July 2014

ನಮ್ಮ ಹಬ್ಬದಲ್ಲಿ ಅವರ ನೋವುಗಳಿರಲಿ

   ಧಾರ್ಮಿಕ ಪಾಠಶಾಲೆಯಿಂದ ಹೊರಬರುತ್ತಿದ್ದ ಇಸ್ರೇಲ್‍ನ ವಿದ್ಯಾರ್ಥಿಗಳಾದ ಐಯಲ್ ಇಫ್ರಚ್, ಗಿಲಾದ್ ಶಾರ್, ನಫ್ತಲಿ ಫ್ರಾಂಕೆಲ್ ಮತ್ತು ಗಾಝಾದ ಬೀಚ್‍ನಲ್ಲಿ ಫುಟ್ಬಾಲ್ ಆಡುತ್ತಿದ್ದ 9 -12ರ ಪ್ರಾಯದ ಝಕರಿಯಾ ಬಕರ್, ಅಹ್ಮದ್ ಅತೀಫ್ ಬಕರ್, ಇಸ್ಮಾಈಲ್ ಮುಹಮ್ಮದ್ ಬಕರ್, ಮುಹಮ್ಮದ್ ರವಿೂಝ್ ಬಕರ್.. ಇವರು ಮತ್ತು ಇವರಂಥ ನೂರಾರು ಮಂದಿಯ ಹತ್ಯೆಯನ್ನು ಖಂಡಿಸಿ ಎಂಬಂತೆ ರಮಝಾನ್ ನಿರ್ಗಮಿಸುತ್ತಿದೆ. ಸಾವು ಯಹೂದಿಯದ್ದಾದರೂ ಮುಸ್ಲಿಮರದ್ದಾದರೂ ಶಿಯಾ-ಸುನ್ನಿಯದ್ದಾದರೂ ನೋವು ಒಂದೇ. ತಮ್ಮ ಮೂವರು ಮಕ್ಕಳನ್ನು ಅಪ್ಪಿ ಹಿಡಿದು ಕಣ್ಣೀರಿಳಿಸಿದ ರಾಶೆಲ್ ಫ್ರಾಂಕೆಲ್ ಅಥವಾ ಮುಹಮ್ಮದ್ ಬಕರ್‍ನ ತಂದೆ ರವಿೂಝ್ ಬಕರ್‍ರ ನೋವುಗಳಿಗೆ ಬಣ್ಣ ಹಚ್ಚಿ ನೋಡಲು ಸಾಧ್ಯವಿಲ್ಲ. ಒಂದೆಡೆ, ಗಾಝಾದಿಂದ ರಾಕೆಟ್‍ಗಳು ಹಾರುವಾಗ ಇನ್ನೊಂದೆಡೆ ಮಾರಕ ಬಾಂಬುಗಳ ಸುರಿಮಳೆಯಾಗುತ್ತಿದೆ. ವಿಶೇಷ ಏನೆಂದರೆ, ಗಾಝಾದ ರಾಕೆಟ್‍ಗಳಿಗೆ ಒಬ್ಬನೇ ಒಬ್ಬ ಇಸ್ರೇಲಿ ನಾಗರಿಕ ಬಲಿಯಾಗಿಲ್ಲ. (ಇಫ್ರಚ್, ಗಿಲಾದ್, ನಫ್ತಲಿಯರನ್ನು ಅಪಹರಿಸಿ ಗುಂಡಿಕ್ಕಿ ಕೊಲ್ಲಲಾಗಿತ್ತು.) ಗಾಝಾದಿಂದ ರಾಕೆಟ್ ಹಾರಿದ ತಕ್ಷಣ ಇಸ್ರೇಲಿನಲ್ಲಿ ಸೈರನ್ ಮೊಳಗುತ್ತದೆ. ರಾಕೆಟ್‍ಗಳಿಂದ ರಕ್ಷಣೆ ಪಡೆಯಲೆಂದೇ ನಿರ್ಮಿಸಲಾದ ಕಬ್ಬಿಣದ ಗುಂಬಜಗಳೊಳಗೆ ಇಸ್ರೇಲಿಗರು ಪ್ರವೇಶಿಸುತ್ತಾರೆ. ಅಲ್ಲದೇ ಇದೀಗ ಹೊಸ appನ್ನೂ (ತಂತ್ರಜ್ಞಾನ) ಆವಿಷ್ಕರಿಸಲಾಗಿದ್ದು, ಮೊಬೈಲ್‍ಗಳೂ ಅಪಾಯದ ಸೂಚನೆಯನ್ನು ಹೊರಡಿಸುತ್ತಿವೆ. ಹೀಗೆ, ತಾಂತ್ರಿಕವಾಗಿ ಸರ್ವ ರೀತಿಯಲ್ಲೂ ಪ್ರಬಲವಾಗಿರುವ ರಾಷ್ಟ್ರವೊಂದು ವಿಮೋಚನೆಯ ಬೇಡಿಕೆಯೊಂದಿಗೆ ಹಾರಿಸುವ ಅತಿ ದುರ್ಬಲವಾದ ರಾಕೆಟ್‍ಗಳ ನೆಪದಲ್ಲಿ ಹತ್ಯಾಕಾಂಡ ನಡೆಸುತ್ತಿದೆ. ಆದರೆ, ಇತ್ತೀಚೆಗಷ್ಟೇ ಸುಡಾನನ್ನು ಎರಡು ರಾಷ್ಟ್ರವಾಗಿ ಇಬ್ಭಾಗ ಮಾಡಿದ ವಿಶ್ವಸಂಸ್ಥೆಗೆ, ಯುಗೋಸ್ಲಾವಿಯಾದ ವಿವಾದವನ್ನು ಪರಿಹರಿಸಿದ ಜಗತ್ತಿಗೆ ಅಥವಾ ಪರಸ್ಪರ ಪ್ರತಿಸ್ಪರ್ಧಿಯಂತಾಡುತ್ತಿದ್ದ ವಿಭಜಿತ ಜರ್ಮನಿಯನ್ನು ಸಹೋದರತ್ವದ ಬಂಧದಲ್ಲಿ ಪೋಣಿಸಿದ ‘ದೊಡ್ಡಣ್ಣರಿಗೆ' ಈ ವಿವಾದವನ್ನು ಬಗೆಹರಿಸಲು ಸಾಧ್ಯವಾಗುತ್ತಿಲ್ಲವೆಂದರೆ ಏನೆನ್ನಬೇಕು? ಯಾರ ಮೇಲೆಯೂ ದಾಳಿ ಮಾಡದ ಮತ್ತು ಬಾಂಬು ಸುರಿಸದ ಇರಾನ್‍ನ ಮೇಲೆ ನಿರ್ಬಂಧ ಹೇರಿ ಮಣಿಸುವಷ್ಟು ಸಮರ್ಥವಿರುವ ಜಗತ್ತಿಗೆ ಇಸ್ರೇಲನ್ನು ಮಣಿಸಲೇಕೆ ಸಾಧ್ಯವಾಗುತ್ತಿಲ್ಲ? ನಿರ್ಬಂಧ, ದಾಳಿಗಳೆಲ್ಲ ಜಗತ್ತಿನ ದುರ್ಬಲ ರಾಷ್ಟ್ರಗಳ ಮೇಲೆಯೇ ಯಾಕೆ ಅಪ್ಪಳಿಸುತ್ತಿದೆ?
   ಇವತ್ತು, ಫೇಸ್‍ಬುಕ್, ವ್ಯಾಟ್ಸಪ್, ಟ್ವೀಟರ್.. ಮುಂತಾದ ಎಲ್ಲೆಡೆಯೂ ಗಾಝಾ ತುಂಬಿಕೊಂಡಿದೆ. ಇಸ್ರೇಲ್‍ನ ಕ್ರೌರ್ಯ ಮತ್ತು ಗಾಝಾದ ಮಂದಿಯ ಪ್ರತಿರೋಧದ ಹಿನ್ನೆಲೆ, ಇತಿಹಾಸಗಳುಳ್ಳ ಧಾರಾಳ ಬರಹಗಳು ಈ ಜಾಲ ತಾಣಗಳಲ್ಲಿ ಪ್ರಕಟವೂ ಆಗುತ್ತಿವೆ. ಇನ್ನೊಂದೆಡೆ, ರಮಝಾನ್ ವಿದಾಯ ಹೇಳುತ್ತಿದೆ. ಹಬ್ಬದ ಸಂಭ್ರಮದಲ್ಲಿರಬೇಕಾದ ಉಪವಾಸಿಗರ ಮುಖದಲ್ಲಿ ಗಾಢ ವಿಷಾದ, ನೋವು ವ್ಯಕ್ತವಾಗುತ್ತಿದೆ. ದುರ್ಬಲ ಸಮೂಹವೊಂದರ ಮೇಲೆ ಬರ್ಬರ ದಾಳಿಯನ್ನು ಪ್ರಾರ್ಥನೆಯ ವಿನಃ ಖಂಡಿಸಲು ಸಾಧ್ಯವಿಲ್ಲದ ಅಸಹಾಯಕ ಸ್ಥಿತಿಯೊಂದು ನಿರ್ಮಾಣವಾಗಿಬಿಟ್ಟಿದೆ. ಇಂಥ ಸ್ಥಿತಿಯಲ್ಲಿ, ಭಾವುಕತೆಯಿಂದಲ್ಲದೇ ರಮಝಾನ್‍ಗೆ ಖುಷಿಯಿಂದ ವಿದಾಯ ಕೋರಲು ಸಾಧ್ಯವಿಲ್ಲ. ಒಂದು ತಿಂಗಳ ಕಾಲ ರಮಝಾನ್ ಕೊಟ್ಟ ತರಬೇತಿಯನ್ನು ಹೃದಯವೆಂಬ ಚೀಲದಲ್ಲಿ ಭದ್ರವಾಗಿಟ್ಟುಕೊಳ್ಳುವ ಮತ್ತು ಎಂದೆಂದೂ ಆ ಚೀಲದ ಕಟ್ಟು ಸಡಿಲಗೊಳ್ಳದಂತೆ ಹಾಗೂ ಕೆಡುಕುಗಳು ಒಳ ಪ್ರವೇಶಿಸದಂತೆ ನೋಡಿಕೊಳ್ಳುವ ಖಾತರಿಯನ್ನು ನೀಡುವ ಮೂಲಕ ನಾವು ರಮಝಾನ್‍ಗೆ ವಿದಾಯ ಕೋರಬೇಕಾಗಿದೆ. ಆ ‘ಚೀಲ'ದೊಳಗೆ ಐಯಲ್ ಇಫ್ರಚ್‍ಗೂ ಮುಹಮ್ಮದ್ ಬಕರ್‍ಗೂ ಸಮಾನ ಪ್ರೀತಿಯಿದೆ. ರಾಶೆಲ್ ಫ್ರಾಂಕೆಲ್‍ಗೂ ರವಿೂಝ್ ಬಕರ್‍ಗೂ ಸಮಾನ ಸಾಂತ್ವನವಿದೆ. ಜಗತ್ತಿನ ಎಲ್ಲ ಮರ್ದಿತರಿಗೂ ವಿಜಯದ ಸುವಾರ್ತೆಯಿದೆ. ನಮ್ಮ ಈದುಲ್ ಫಿತ್ರ್ ಅನ್ನು ಗಿಲಾದ್ ಶಾರ್, ನಫ್ತಲಿ ಫ್ರಾಂಕೆಲ್, ಝಕರಿಯ ಬಕರ್, ಅಹದ್ ಬಕರ್‍ರಂಥ ಮುದ್ದು ಮಕ್ಕಳಿಗೆ; ನೋವುಂಡ ಮತ್ತು ಸಾವಿಗೀಡಾದ ಜನರಿಗೆ ಪ್ರೀತಿಯಿಂದ ಅರ್ಪಿಸೋಣ. ನಮ್ಮ ಹಬ್ಬದಲ್ಲಿ ಅವರ ನೋವುಗಳಿರಲಿ, ಭಾವುಕ ಪ್ರಾರ್ಥನೆಯಿರಲಿ.

No comments:

Post a Comment