Tuesday, 8 July 2014

ಪ್ರತಿ ಮನೆಯಲ್ಲೂ `ಮಾರ್ನಿಂಗ್ ಗ್ಲೋರಿ'ಗಳು ಅರಳಲಿ

   ವೃದ್ಧಾಪ್ಯಕ್ಕೆ ಕಾರಣವಾಗುವ ಜೀನನ್ನು ಪತ್ತೆ ಹಚ್ಚಿರುವುದಾಗಿ ಜಪಾನಿನ ಕೃಷಿ ಮತ್ತು ಆಹಾರ ಸಂಶೋಧನಾ ಸಂಸ್ಥೆಯ ಸಂಶೋಧಕರು ಬಹಿರಂಗಪಡಿಸಿದ ಸುದ್ದಿಯು ಮಾಧ್ಯಮಗಳಲ್ಲಿ ಪ್ರಕಟವಾದ (ಜುಲೈ 6) ಮರುದಿನವೇ, ‘ವಧುಗಳ ಕೊರತೆಯನ್ನು ಎದುರಿಸುತ್ತಿರುವ ಹರ್ಯಾಣಕ್ಕೆ ಬಿಹಾರದಿಂದ ವಧುಗಳನ್ನು ಕರೆ ತರುವ ವ್ಯವಸ್ಥೆ ಮಾಡುವೆನೆಂದು’ ಹರ್ಯಾಣದ ಬಿಜೆಪಿ ನಾಯಕ ಓ.ಪಿ. ಧನ್ಕರ್ ಹೇಳಿರುವ ಮಾತೂ ಮಾಧ್ಯಮಗಳಲ್ಲಿ ಪ್ರಕಟವಾಗಿದೆ.ಹರ್ಯಾಣದ ಬಿಜೆಪಿ ನಾಯಕ ಸುಶೀಲ್ ಮೋದಿಯವರೊಂದಿಗೆ ತನಗಿರುವ ಉತ್ತಮ ಭಾಂದವ್ಯವನ್ನು  ಬಳಸಿಕೊಂಡು ಈ ಭರವಸೆಯನ್ನು ನಾನು ಕಾರ್ಯಗತಗೊಳಿಸಬಲ್ಲೆನೆಂದು ಅವರು ಜನರಿಗೆ ಭರವಸೆ ನೀಡಿದ್ದಾರೆ.  ಹೊರನೋಟಕ್ಕೆ ಭಾರತದ ಹರ್ಯಾಣಕ್ಕೂ ಜಪಾನಿನ ಸಂಶೋಧನೆಗೂ ಯಾವ ಸಂಬಂಧವೂ ಇಲ್ಲ. ಮಾರ್ನಿಂಗ್ ಗ್ಲೋರಿ ಎಂಬ ಹೂವಿನ ಮೇಲೆ ಅಲ್ಲಿನ ವಿಜ್ಞಾನಿಗಳು ನಡೆಸಿದ ಪ್ರಯೋಗ ಮತ್ತು ಹೂವಿನ ವೃದ್ಧಾಪ್ಯವನ್ನು ಮುಂದೂಡಲು ಅವರು ಯಶಸ್ವಿಯಾಗಿರುವುದು ಸರ್ವತ್ರ ಶ್ಲಾಘನೆಗೆ ಒಳಗಾಗಿರುವ ಸಂದರ್ಭದಲ್ಲೇ ಹರ್ಯಾಣದಲ್ಲಿ ವಧುಗಳಿಗಿರುವ ಕೊರತೆಯು ಮತ್ತೊಮ್ಮೆ ಸುದ್ದಿಗೆ ಒಳಗಾಗಿದೆ. ನಿಜವಾಗಿ, ಜಪಾನಿನಲ್ಲಿ ಕೈಗೊಳ್ಳಲಾದ ಸಂಶೋಧನೆ ಸಹಜ ವೃದ್ಧಾಪ್ಯಕ್ಕೆ ಸಂಬಂಧಿಸಿದ್ದು. ಮಾರ್ನಿಂಗ್ ಗ್ಲೋರಿ ಎಂಬ ಹೂವಿನ ಮೇಲಿನ ಸಂಶೋಧನೆಯು ಮುಂದೊಂದು ದಿನ ಮನುಷ್ಯರ ಸಹಜ ವೃದ್ಧಾಪ್ಯವನ್ನು ಮುಂದೂಡುವ ಸಂಶೋಧನೆಗೆ ನೆರವಾಗಬಲ್ಲುದು ಎಂಬ ನಿರೀಕ್ಷೆ ವಿಜ್ಞಾನಿಗಳದು. ಆದರೆ ಹರ್ಯಾಣದ ಸಮಸ್ಯೆ ಸಹಜವಾದುದಲ್ಲ. ಹೆಣ್ಣು-ಗಂಡಿನ ನಡುವಿನ ಅನುಪಾತದಲ್ಲಿ ಒಂದು ಹಂತದ ವರೆಗೆ ಪ್ರಕೃತಿಯೇ ಸಮತೋಲನವನ್ನು ಕಾಪಾಡುತ್ತದೆ. ಹರ್ಯಾಣದಲ್ಲಿ ಆ ಸಮತೋಲನ ಕೆಟ್ಟಿದೆ ಎಂದರೆ ಅದಕ್ಕೆ ಕಾರಣ ಪ್ರಕೃತಿಯಲ್ಲ, ಮನುಷ್ಯ. ಹರ್ಯಾಣದಲ್ಲಿ ಹೆಣ್ಣು-ಗಂಡಿನ ಅನುಪಾತ ಇಡೀ ದೇಶದಲ್ಲಿಯೇ ಅತ್ಯಂತ ಕೆಳಮಟ್ಟದಲ್ಲಿದೆ. ಗಂಡನ್ನೇ ಬಯಸುವ ಮತ್ತು ಹೆಣ್ಣನ್ನು ಬಯಸದಿರುವ ವಾತಾವರಣ ಅಲ್ಲಿಯದು. ಇದರಿಂದಾಗಿ ಅಲ್ಲಿನ ಯುವಕರು ತೀವ್ರ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಇದು ಅಪಹರಣ, ಲೈಂಗಿಕ ಅಪರಾಧ ಕೃತ್ಯಗಳಿಗೆ ಕಾರಣವಾಗುತ್ತಿದೆ. ಯುವಕರನ್ನು ಅಸಹಿಷ್ಣುತೆಗೆ ದೂಡುತ್ತಿದೆ. ಮಾನಸಿಕ ಒತ್ತಡಗಳ ಪರಿಣಾಮವು ದೇಹದ ಮೇಲೂ ಆಗುತ್ತಿದೆ. ಇದಕ್ಕೆ ಜಪಾನಿನ ಸಂಶೋಧನೆ ಪರಿಹಾರ ಆಗಲಾರದು. ಅಷ್ಟಕ್ಕೂ, ಒಂದು ಪ್ರದೇಶದಲ್ಲಿ ಕಾಣಿಸಿಕೊಳ್ಳುವ ಇಂಥ ಪ್ರಾಕೃತಿಕ ಅಸಮತೋಲನಗಳು ಕೇವಲ ಆ ಪ್ರದೇಶದ ಸಮಸ್ಯೆಯಾಗಿಯಷ್ಟೇ ಉಳಿಯುವುದಿಲ್ಲ. ಅದರ ಪರಿಣಾಮವು ಪಕ್ಕದ ಪ್ರದೇಶಗಳ ಮೇಲೂ ಉಂಟಾಗುತ್ತದೆ. ಬಿಹಾರದಿಂದ ಹರ್ಯಾಣಕ್ಕೆ ವಧುಗಳನ್ನು ತರುವುದೆಂದರೆ, ಕಾರನ್ನೋ ಬಸ್ಸನ್ನೋ ತಿರುಗಿಸಿದಂತೆ ಅಲ್ಲವಲ್ಲ. ಯುವತಿಯೊಬ್ಬಳು ಹರ್ಯಾಣದ ಸೊಸೆಯಾಗುವುದು ಕೆಲವಾರು ಹಂತಗಳ ಪ್ರಕ್ರಿಯೆ. ಅಲ್ಲಿ ಮಧ್ಯವರ್ತಿಗಳ ಪ್ರವೇಶವಾಗಬಹುದು. ಮಾರಾಟ-ಚೌಕಾಶಿ, ಅಪಹರಣಗಳು, ಕೊಲೆಗಳೂ ನಡೆಯಬಹುದು. ದುರಂತ ಏನೆಂದರೆ, ಮನುಷ್ಯ ಸಹಜ ವೃದ್ಧಾಪ್ಯವನ್ನು ಮುಂದೂಡುವ ಬಗ್ಗೆ ಜಪಾನಿನ ಮಂದಿ ಆಲೋಚಿಸುತ್ತಿರುವಾಗ ಪ್ರಕೃತಿ ವಿರೋಧಿ ನಡವಳಿಕೆಗಳ ಕಾರಣದಿಂದಾಗಿ ಉದ್ಭವಿಸಿರುವ ಸಮಸ್ಯೆಗಳಿಗೆ ಪರಿಹಾರವನ್ನು ಹುಡುಕುವ ಪ್ರಯತ್ನದಲ್ಲಿ ನಾವಿದ್ದೇವೆ. ಮಾರ್ನಿಂಗ್ ಗ್ಲೋರಿ ಎಂಬುದು ಸುಂದರವಾದ ಹೂವಿನ ತಳಿಯ ಹೆಸರು. ಆದರೆ ಹೆಣ್ಣು ಪ್ರಕೃತಿ ಒದಗಿಸಿರುವ ಬರೇ ಹೂವು ಅಷ್ಟೇ ಅಲ್ಲ, ಅದ್ಭುತ ಸಂಪತ್ತು. ಈ ಸಂಪತ್ತಿನ ಮೌಲ್ಯವನ್ನು ತಿಳಿಯಲಾರದ ನಾವು ಕೈಯಾರೆ ಸಮಸ್ಯೆಗಳನ್ನು ಸೃಷ್ಟಿಸುತ್ತಿದ್ದೇವೆ.
 ಹೆಣ್ಣನ್ನು ವರ್ಣಿಸುವುದಕ್ಕೆ ಅದ್ಭುತ ಪದಗಳನ್ನು ಸಂಶೋಧಿಸಿ ಬಳಸಲಾಗುತ್ತಿರುವ ಈ ದೇಶದಲ್ಲಿಯೇ ಹೆಣ್ಣು ಅತ್ಯಂತ ಅವಮಾನಕರ ರೀತಿಯಲ್ಲಿ ಬದುಕುತ್ತಿದ್ದಾಳೆ.  ಈ ದೇಶದಲ್ಲಿ ಮಹಿಳೆಯರಿಗೆ ಅತ್ಯಂತ ಅಸುರಕ್ಷಿತ ಪಟ್ಟಣಗಳು ಯಾವುವು ಎಂಬ ವಿಷಯದ ಮೇಲೆ ಸವಿೂಕ್ಷೆ ನಡೆಸುವಷ್ಟರ ಮಟ್ಟಿಗೆ ಹೆಣ್ಣಿನ ಪರಿಸ್ಥಿತಿ ಹದಗೆಟ್ಟಿದೆ. ಕಳೆದ ವಾರ ಇಂಥದ್ದೊಂದು ಸವಿೂಕ್ಷಾ ವರದಿ ಬಿಡುಗಡೆಯಾಯಿತು. ಇಂಥ ಅಸುರಕ್ಷಿತ ಪ್ರಮುಖ 58 ಪಟ್ಟಣಗಳನ್ನು ಪಟ್ಟಿ ಮಾಡಲಾಯಿತಲ್ಲದೇ ದೆಹಲಿ ಅದರಲ್ಲಿ ಪ್ರಥಮ ಸ್ಥಾನ ಪಡೆಯಿತು. ಮುಂಬೈಗೆ ದ್ವಿತೀಯ. ಬೆಂಗಳೂರಿಗೆ ತೃತೀಯ. 2013ರಲ್ಲಿ ದೆಹಲಿಯಲ್ಲಿ 11,449 ಮಹಿಳಾ ದೌರ್ಜನ್ಯ ಪ್ರಕರಣಗಳು ಅಧಿಕೃತವಾಗಿ ನಡೆದಿವೆಯಂತೆ. ಬೆಂಗಳೂರಿನಲ್ಲಿ 2608. ಈ ಪಟ್ಟಿ ತುಂಬಾ ಉದ್ದ ಇದೆ. ವಿಷಾದವೇನೆಂದರೆ, ಮಹಿಳೆಯನ್ನು ವಿವಿಧ ಗೌರವಾರ್ಹ ಪದಗಳಿಂದ ಬಣ್ಣಿಸುವ ದೇಶದಲ್ಲೇ ‘ಮಹಿಳಾ ದೌರ್ಜನ್ಯ' ಎಂಬ ವಿಷಯದಲ್ಲಿ ಸವಿೂಕ್ಷೆ ಕೈಗೊಳ್ಳಲಾಗುತ್ತದೆ, ಸೆಮಿನಾರ್‍ಗಳು ನಡೆಯುತ್ತವೆ, ಹೆಣ್ಣು ಮಕ್ಕಳನ್ನು ಉಳಿಸಿ, ಗೌರವಿಸಿ ಎಂಬ ಹೆಸರಲ್ಲಿ ಜಾಗೃತಿ ಕಾರ್ಯಕ್ರಮಗಳು ಏರ್ಪಡುತ್ತವೆ ಎಂಬುದು. ಯಾಕಿಂಥ ವಿರೋಧಾಭಾಸ?
   ನಿಜವಾಗಿ, ಜಪಾನಿನ ವಿಜ್ಞಾನಿಗಳು ‘ಮಾರ್ನಿಂಗ್ ಗ್ಲೋರಿ'ಯ ಮೇಲೆ ನಡೆಸಿದ ಸಂಶೋಧನೆಯು ಇನ್ನೊಂದು ಕಾರಣಕ್ಕಾಗಿ ಈ ದೇಶದಲ್ಲೂ ಚರ್ಚೆಗೊಳಗಾಗಬೇಕಾದ ಅಗತ್ಯವಿದೆ. ಮಾರ್ನಿಂಗ್ ಗ್ಲೋರಿ ಹೂವುಗಳ ಆಯುಷ್ಯ ಹೆಚ್ಚಲಿ ಬಿಡಲಿ, ಆದರೆ ಈ ದೇಶದ ಹೆಣ್ಣು ಎಂಬ ಹೂವುಗಳ ಆಯುಷ್ಯ ಮತ್ತು ಗೌರವ ಹೆಚ್ಚಬೇಕಾಗಿದೆ. ಈ ದೇಶಕ್ಕೆ ವೃದ್ಧಾಪ್ಯ ಸಮಸ್ಯೆಯಾಗಿಲ್ಲ. ಆದರೆ ಹೆಣ್ಣು ಸಮಸ್ಯೆಯಾಗಿ ಬಿಟ್ಟಿದ್ದಾಳೆ. ನದಿ ನೀರನ್ನು ತಿರುಗಿಸುವಂತೆ ಆಕೆಯನ್ನು ಬಿಹಾರದಿಂದ ಹರ್ಯಾಣಕ್ಕೆ ತಿರುಗಿಸುವಷ್ಟು ಆಕೆ ಅಸುರಕ್ಷಿತವಾಗಿದ್ದಾಳೆ. ಆ ಅಸುರಕ್ಷಿತತೆಯನ್ನು ಸುರಕ್ಷಿತತೆಯನ್ನಾಗಿ ಪರಿವರ್ತಿಸುವ ಬಗ್ಗೆ ನಮ್ಮಲ್ಲಿ ಗಂಭೀರ ಚರ್ಚೆಗಳು ನಡೆಯಬೇಕು. ಅವರನ್ನು ಅಸುರಕ್ಷಿತಗೊಳಿಸುವ ಪುರುಷ ಜೀನನ್ನು ಪತ್ತೆ ಹಚ್ಚಿ ಅದರ ನಿರ್ಮೂಲನೆಗೆ ಪ್ರಯತ್ನಗಳು ನಡೆಯಬೇಕು. ಹರ್ಯಾಣದಲ್ಲಿ ಇವತ್ತು ಯಾವ ಹೆತ್ತವರು ತಮ್ಮ ಗಂಡು ಮಕ್ಕಳಿಗೆ ಹೆಣ್ಣು ಮಕ್ಕಳ ಹುಡುಕಾಟದಲ್ಲಿ ತೊಡಗಿರುವರೋ ಒಂದೊಮ್ಮೆ ಅವರೇ ಹೆಣ್ಣು ಮಕ್ಕಳ ಕೊಲೆಗಾರರೂ ಆಗಿರಬಹುದು. ತಮ್ಮ ಮನೆಯಲ್ಲಿ ಬೆಳಕಾಗಿ ಮಿಂಚಬೇಕಾದ ಹೆಣ್ಣು ಮಗುವನ್ನು ಅವರು ಹತ್ಯೆ ನಡೆಸಿದ ಅಪರಾಧಿಗಳೂ ಆಗಿರಬಹುದು. ಗಂಡು ಶ್ರೇಷ್ಠ, ಹೆಣ್ಣು ಕನಿಷ್ಠ ಎಂಬ ಸಿದ್ಧಾಂತವನ್ನು ಬಲವಾಗಿ ನಂಬಿರುವವರೂ ಇವರಲ್ಲಿರಬಹುದು. ಇವೆಲ್ಲಕ್ಕೂ ಬಿಹಾರದ ಹೆಣ್ಣು ಪರಿಹಾರ ಅಲ್ಲ. ಬಿಹಾರವೇನೂ ಹೆಣ್ಣು ಮಕ್ಕಳನ್ನು ಉತ್ಪಾದಿಸುವ ಕಾರ್ಖಾನೆ ಅಲ್ಲವಲ್ಲ. ನಾಳೆ ಈ ಸಮಸ್ಯೆ ಬಿಹಾರವನ್ನೂ ಕಾಡಬಹುದು. ಆಗ ಹೆಣ್ಣು ಅಕ್ಷರಶಃ ಮಾರಾಟದ ಸರಕಾಗಬಹುದು. ಬಡವರು ತಮ್ಮ ಮಕ್ಕಳನ್ನು ಮಾರಾಟ ಮಾಡುವ ಮತ್ತು ಉಳ್ಳವರು ಅವರನ್ನು ಖರೀದಿಸಿ ಗುಲಾಮರಂತೆ ನೋಡಿಕೊಳ್ಳುವ ಸಂದರ್ಭಗಳೂ ನಿರ್ಮಾಣವಾಗಬಹುದು. ಖರೀದಿಸುವ ಸಾಮರ್ಥ್ಯ

ಮಾರ್ನಿಂಗ್ ಗ್ಲೋರಿ ಫ್ಲವರ್
ಇಲ್ಲದವರು ಅತ್ಯಾಚಾರಕ್ಕೆ ಮುಂದಾಗಬಹುದು. ಲೈಂಗಿಕ ದಾಹವನ್ನು ತಣಿಸುವುದಕ್ಕಾಗಿ ಯುವಕರು ಅಸುರಕ್ಷಿತ ಮಾರ್ಗಗಳನ್ನು ಅವಲಂಬಿಸಲೂ ಬಹುದು. ಹೆಣ್ಣನ್ನು ಅಗೌವಿಸುವ ಸಮಾಜದಲ್ಲಿ ಹುಟ್ಟಿಕೊಳ್ಳುವ ಅಪಾಯಕಾರಿ ರೋಗಗಳು ಇವೆಲ್ಲ. ಆದ್ದರಿಂದ, ಈ ರೋಗಗಳಿಗೆ ಮದ್ದನ್ನು ಈ ಸಮಾಜವೇ ಅರೆಯಬೇಕು. ರೋಗ ಮೂಲವನ್ನು ಹುಡುಕಬೇಕು. ಹರ್ಯಾಣದ ಮಂದಿ ಹೆಣ್ಣು ಮಕ್ಕಳನ್ನು ಪ್ರೀತಿಸುವ ಮನಸ್ಥಿತಿಗೆ ಮರಳಬೇಕು. ಹೆಣ್ಣನ್ನು ಪ್ರೀತಿಸುವ ಮತ್ತು ಗೌರವಿಸುವ ಸಮಾಜದಲ್ಲಿ ಮಾತ್ರ ನೈತಿಕ ಶಿಷ್ಟಾಚಾರಗಳು ಕಾಣಿಸಿಕೊಳ್ಳಲು ಸಾಧ್ಯ. ಹೆಣ್ಣು ಪ್ರತಿ ಹೆತ್ತವರ ಹೃದಯದ ಹೂವಾಗಬೇಕು. ಈ ಹೂವಿನ ಅರಳುವಿಕೆಗೆ ಕಾಯುವ, ಸುವಾಸನೆಯಿಂದ ತನ್ಮಯಗೊಳ್ಳುವ ಹೆತ್ತವರು ಹೆಚ್ಚಾಗಬೇಕು. ಇದೇನು ಅಸಾಧ್ಯವಲ್ಲ. ಅಸಾಧ್ಯದಂತೆ ಕಾಣಿಸಿದ್ದ ವೃದ್ಧಾಪ್ಯದ ಜೀನನ್ನೇ ಪತ್ತೆ ಹಚ್ಚಲು ಮತ್ತು ಆ ಮೂಲಕ ಮಾರ್ನಿಂಗ್ ಗ್ಲೋರಿ ಹೂವು ಉದುರದಂತೆ ಕಾಪಾಡಲು ಈ ಜಗತ್ತಿನಲ್ಲಿ ಸಾಧ್ಯ ಎಂದಾದರೆ, ಹೆಣ್ಣನ್ನು ಗೌರವಿಸುವುದು ಯಾಕೆ ಅಸಾಧ್ಯವಾಗಬೇಕು? ಆಕೆಯನ್ನು ಮನೆಯ ಹೂವಾಗಿ ಬೆಳೆಸುವುದು ಯಾಕೆ ದುಸ್ತರ ಅನ್ನಿಸಿಕೊಳ್ಳಬೇಕು? ಆದ್ದರಿಂದ, ಹರ್ಯಾಣದ ವಧು ಪ್ರಕರಣವು ಹೆಣ್ಣಿನ ಕುರಿತಾದ ಸಮಾಜದ ದೃಷ್ಟಿಕೋನವನ್ನು ಬದಲಾಯಿಸುವುದಕ್ಕೆ ಪ್ರೇರಕವಾಗಲಿ. ಹೆಣ್ಣು ಮಕ್ಕಳು ಪ್ರತಿ ಮನೆ, ಮನದಲ್ಲೂ ಮಾರ್ನಿಂಗ್ ಗ್ಲೋರಿ ಹೂವಿನಂತೆ ಸದಾ ಅರಳುತ್ತಿರಲಿ.

No comments:

Post a Comment