Tuesday 13 January 2015

ಮುಸ್ಲಿಮ್ ಸಂವೇದನೆಯ ಅಭಾವದಲ್ಲಿ ಮಾಧ್ಯಮ

    ಫ್ರಾನ್ಸ್ ನ ಚಾರ್ಲಿ ಹೆಬ್ಡೋ ಪತ್ರಿಕಾ ಕಚೇರಿಯಲ್ಲಿ ನಡೆದ ಹತ್ಯಾಕಾಂಡ, ಭಟ್ಕಳದಲ್ಲಿ ನಡೆದ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಗಳು ಮತ್ತು ಇವುಗಳನ್ನು ಆಧಾರವಾಗಿಟ್ಟುಕೊಂಡು ಮಾಧ್ಯಮಗಳಲ್ಲಿ ಪ್ರತಿದಿನ ಪ್ರಕಟವಾಗುತ್ತಿರುವ ಸುದ್ದಿ-ವರದಿ-ವಿಶ್ಲೇಷಣೆಗಳನ್ನು ಗಮನಿಸುವಾಗ, ‘ಮಾಧ್ಯಮಗಳಲ್ಲಿ ಮುಸ್ಲಿಮ್ ಸಂವೇದನೆ' ಎಷ್ಟಿವೆ ಮತ್ತು ಎಷ್ಟಿರಬೇಕಿತ್ತು ಎಂಬ ವಿಷಯದ ಸುತ್ತ ಗಂಭೀರ ಚರ್ಚೆಯೊಂದು ನಡೆಯಲೇಬೇಕಾದ ಅಗತ್ಯವಿದೆಯೆಂದು ತೋರುತ್ತದೆ. ಸಾಹಿತ್ಯದಲ್ಲಿ ದಲಿತ ಸಂವೇದನೆ, ಮಹಿಳಾ ಸಂವೇದನೆ ಎಂಬುದರಿಂದ ತೊಡಗಿ ‘ಮಾಧ್ಯಮಗಳಲ್ಲಿ ದಲಿತ ಸಂವೇದನೆ’ ಎಂಬಲ್ಲಿವರೆಗೆ ಇವತ್ತು ವಿವಿಧ ಬಗೆಯ ಕಾರ್ಯಾಗಾರಗಳು ನಡೆಯುತ್ತವೆ.ಮಾಧ್ಯಮಗಳ ನಿರ್ಣಾಯಕ ಸ್ಥಾನದಲ್ಲಿ ದಲಿತರು ಎಷ್ಟಿದ್ದಾರೆ, ಇನ್ನಿತರ ವಿಭಾಗಗಳಲ್ಲಿ ಅವರ ಪಾಲು ಎಷ್ಟು... ಎಂಬುದನ್ನೆಲ್ಲ ವಿಶ್ಲೇಷಿಸುವುದಕ್ಕೆ ಚರ್ಚಾಗೋಷ್ಟಿಗಳು ನಡೆಯುತ್ತವೆ.  ಆದರೆ ‘ಮಾಧ್ಯಮಗಳಲ್ಲಿ ಮುಸ್ಲಿಮ್ ಸಂವೇದನೆ’ ಎಂಬುದರ ಸುತ್ತ ಚರ್ಚಾಗೋಷ್ಠಿಗಳು ಬಹುತೇಕ ನಡೆಯುತ್ತಲೇ ಇಲ್ಲ. ಈ ಕುರಿತಂತೆ ಮಾಧ್ಯಮಗಳು ಗಂಭೀರವೂ ಆಗಿಲ್ಲ. ನಿಜವಾಗಿ, ಮಾಧ್ಯಮಗಳೆಂಬುದು ಸಮಾಜಕ್ಕೆ ಹಿಡಿಯುವ ಕನ್ನಡಿ. ಈ ಕನ್ನಡಿಯಲ್ಲಿ ಹಿಂದೂ, ಮುಸ್ಲಿಮ್, ಕ್ರೈಸ್ತ ಎಂಬ ಭೇದ ಮತ್ತು ವಿಂಗಡಣೆಯಿಲ್ಲದೇ ಸರ್ವ ಸರಿ ಮತ್ತು ತಪ್ಪುಗಳೂ ಪ್ರತಿಫಲನವಾಗಬೇಕು. ಅಲ್ಲಿನ ಭಾವುಕತೆ, ಸಾಂಸ್ಕøತಿಕ ವೈಶಿಷ್ಟ್ಯತೆ, ತಲ್ಲಣ, ಹಾಸ್ಯ.. ಎಲ್ಲವುಗಳಿಗೂ ಸ್ಪೇಸ್ ಸಿಗಬೇಕು. ದುರಂತ ಏನೆಂದರೆ, ಮಾಧ್ಯಮಗಳಲ್ಲಿ ಮುಸ್ಲಿಮರ ಪ್ರಾತಿನಿಧ್ಯ ತೃಣಮಾತ್ರವಾಗಿರುವುದರಿಂದಲೋ ಏನೋ ಅವರ ಸಂವೇದನೆಗಳಿಗೆ ತೀರಾ ಕಡಿಮೆ ಜಾಗವಷ್ಟೇ ಸಿಗುತ್ತಿವೆ. ಮುಸ್ಲಿಮರ ತಪ್ಪುಗಳನ್ನು ಮಾತ್ರ ಹೆಚ್ಚಿನ ಬಾರಿ ಬಿಂಬಿಸುವ ಈ ಕನ್ನಡಿ, ಅದರಲ್ಲೂ ಸಾಕಷ್ಟು ಬಾರಿ ಅವರ ತಪ್ಪುಗಳನ್ನು ಉಬ್ಬಿಸಿಯೋ ಅಥವಾ ಅವರ ಹೆಸರಲ್ಲಿ ಸ್ವತಃ ತಪ್ಪುಗಳನ್ನು ಸೃಷ್ಟಿಸಿಯೋ ತೋರಿಸುತ್ತಿದೆ. ಮುಸ್ಲಿಮರ ತಪ್ಪುಗಳು ಅತಿ ವರ್ಣನೆಯಿಂದ ಕೂಡಿರಲೇಬೇಕು ಮತ್ತು ವ್ಯಕ್ತಿಯ ತಪ್ಪುಗಳನ್ನು ಅವನ ಧರ್ಮದ ತಪ್ಪುಗಳಾಗಿ ಬಿಂಬಿಸಲೇಬೇಕು ಎಂಬೊಂದು ಹಠವನ್ನೂ ಅದು ಪ್ರದರ್ಶಿಸುತ್ತಿದೆ. ಮಾಧ್ಯಮಗಳ ಈ ಪಕ್ಷಪಾತಿ ಧೋರಣೆಯನ್ನು ಖಂಡಿಸಿಯೇ ಎರಡ್ಮೂರು ವರ್ಷಗಳ  ಹಿಂದೆ ಭಟ್ಕಳದಲ್ಲಿ ಬಂದ್ ಆಚರಿಸಲಾಗಿತ್ತು. ವಿವಿಧ ವೇದಿಕೆಗಳಲ್ಲಿ ಈ ಕುರಿತಂತೆ ಧಾರಾಳ ಅಭಿಪ್ರಾಯಗಳು ಮಂಡನೆಯಾಗಿವೆ. ಪ್ರತಿಭಟನೆಗಳು ನಡೆದಿವೆ. ಆದರೂ ದೊಡ್ಡದೊಂದು ಬದಲಾವಣೆ ಮಾಧ್ಯಮ ಕ್ಷೇತ್ರದಲ್ಲಿ ಈವರೆಗೂ ಆಗಿಲ್ಲ. ಏನು ಕಾರಣ? ಮಾಧ್ಯಮ ಕ್ಷೇತ್ರದಲ್ಲಿ ಮುಸ್ಲಿಮ್ ಪ್ರಾತಿನಿಧ್ಯ ತೀರಾ ತೀರಾ ಕಡಿಮೆಯಾಗಿರುವುದಕ್ಕೆ ಮುಸ್ಲಿಮರಲ್ಲಿ ಪ್ರತಿಭೆ ಇಲ್ಲದಿರುವುದು ಕಾರಣವೋ ಅಥವಾ ಇದಕ್ಕೆ ಹೊರತಾದ ಕಾರಣಗಳಿವೆಯೋ? ಫ್ರಾನ್ಸಿನ ಮುಖ್ಯ ಮಸೀದಿಯ ಧಾರ್ಮಿಕ ಗುರು ಹಸನ್ ಚಲ್‍ಗೋಮಿಯವರು ಚಾರ್ಲಿ ಹೆಬ್ಡೋದ ಕಚೇರಿಯಲ್ಲಿ ಹೂವು ಇಟ್ಟು ಶ್ರದ್ಧಾಂಜಲಿ ಸಲ್ಲಿಸಿದ್ದರು. ಭಯೋತ್ಪಾದಕರು ತಮ್ಮನ್ನು ನರಕಕ್ಕೆ ಮಾರಿಕೊಂಡಿದ್ದಾರೆ ಎಂದೂ ಹೇಳಿದ್ದರು. ಫ್ರಾನ್ಸಿನ ಅಧ್ಯಕ್ಷ ಕರೆದ ಹೆಬ್ಡೋ ಐಕ್ಯತಾ ರಾಲಿಯಲ್ಲಿ ಸಾವಿರಾರು ಮುಸ್ಲಿಮರು ಭಾಗವಹಿಸಿದ್ದರು. ಭಯೋತ್ಪಾದಕರ ದಾಳಿಗೀಡಾಗಿ ಸಾವನ್ನಪ್ಪಿದ ಪೊಲೀಸಧಿಕಾರಿ ಅಹ್ಮದ್ ಮೆರಾಬೆಟ್‍ನ ಸಹೋದರ ಮಲಿಕ್ ಕೂಡ, ‘ಇಡೀ ಪ್ರಕರಣಕ್ಕೆ ಒಂದೇ ಬ್ರಶ್‍ನಿಂದ ಬಣ್ಣ ಬಳಿಯಬೇಡಿ’ ಎಂದು ಮಾಧ್ಯಮಗಳೊಂದಿಗೆ ವಿನಂತಿಸಿದ್ದರು. ನಿಜವಾಗಿ, ಮುಸ್ಲಿಮರ ಬಗ್ಗೆ ಅನುಮಾನ ಮತ್ತು ಅಸಹನೆಯ ಅಭಿಪ್ರಾಯಗಳು ಧ್ರುವೀಕರಣಗೊಳ್ಳುತ್ತಿರುವ ಸಂದರ್ಭದಲ್ಲಿ ಇಂಥ ಸುದ್ದಿಗಳಿಗೆ ಮಾಧ್ಯಮಗಳು ಪ್ರಾಶಸ್ತ್ಯ ನೀಡಬೇಕಾಗಿತ್ತು. ಇಂಥ ಸುದ್ದಿಗಳನ್ನು ಒತ್ತುಕೊಟ್ಟು ಪ್ರಕಟಿಸುವುದರಿಂದ ತಪ್ಪು ಸಂದೇಶಗಳು ರವಾನೆಯಾಗುವುದು ತಪ್ಪಬಹುದಿತ್ತು. ಆದರೆ ಮುದ್ರಣ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮದ ದೊಡ್ಡ ಗುಂಪು ಈ ವಿಷಯದಲ್ಲಿ ಎಡವಿತು.ಚಾರ್ಲಿ ಹೆಬ್ದೋದ ಮೇಲೆ ದಾಳಿ ಮಾಡಿದ ಆ ಇಬ್ಬರು ಭಯೋತ್ಪಾದಕರನ್ನು ಎತ್ತಿಕೊಂಡು ಇಡೀ ಇಸ್ಲಾಂ ಅನ್ನೇ ತೀವ್ರವಾದದ ಮೊನೆಯಲ್ಲಿಟ್ಟು  ತೂಗುತ್ತಿರುವಾಗಲೂ ಚಾರ್ಲಿ ಹೆಬ್ದೋ ಕಚೇರಿಯಲ್ಲಿ ಹತ್ಯೆಗೀಡಾದವರಲ್ಲಿ ಮುಸ್ತಫಾ ಅವ್ರಾದ್ ಎಂಬ ಮುಸ್ಲಿಂ ಉದ್ಯೋಗಿಯೂ ಇದ್ದ ಎಂಬುದನ್ನು ನೆನಪಿಸಿಕೊಳ್ಳಲೂ ಮರೆಯಿತು. ಆ ಇಬ್ಬರು ಭಯೋತ್ಪಾದಕರನ್ನು ಎತ್ತಿಕೊಂಡು ಇಸ್ಲಾಮನ್ನು ತೀವ್ರವಾದಿ ಎಂದು ಕರೆಯುವುದಾದರೆ ಮುಸ್ತಫಾನನ್ನು ಏನೆಂದು ಕರೆಯಬೇಕು? ಆತನೇಕೆ ಇಸ್ಲಾಮಿನ ಉದಾರವಾದದ ಸಂಕೇತವಾಗಬಾರದು?
     ಮಾಧ್ಯಮ ಕ್ಷೇತ್ರವು ಮುಸ್ಲಿಮ್ ಸಂವೇದನೆಗಳನ್ನು ಪರಿಣಾಮಕಾರಿಯಾಗಿ ಕಟ್ಟಿಕೊಡುತ್ತಿಲ್ಲ ಎಂಬ ಭಾವನೆಯು ಸಮಾಜದಲ್ಲಿ ನಿರಾಕರಿಸಲಾಗದಷ್ಟು ಆಳವಾಗಿ ಇವತ್ತು ಬೇರೂರಿದೆ. ಇದಕ್ಕೆ ಮಾಧ್ಯಮ ಕ್ಷೇತ್ರದ ಮೇಲಿನ ಅಸೂಯೆ ಖಂಡಿತ ಕಾರಣ ಅಲ್ಲ. ವರ್ಷಾಂತರಗಳಿಂದ ಅನುಭವಿಸುತ್ತಾ ಬಂದಿರುವ ಪಕ್ಷಪಾತದ ಅನುಭವಗಳೇ ಈ ದೂರುಗಳಿಗೆ ಕಾರಣ. ಈ ಹಿನ್ನೆಲೆಯಲ್ಲಿ, ಮಾಧ್ಯಮ ಕ್ಷೇತ್ರ ಸ್ವ ಅವಲೋಕನಕ್ಕೆ ಒಳಗಾಗಬೇಕಾದ ಅಗತ್ಯವಿದೆ. ಮುಸ್ಲಿಮ್ ಸಂವೇದನೆ ಅಂದರೇನು, ಅವರ ತಲ್ಲಣಗಳು ಮತ್ತು ಅಭಿಪ್ರಾಯಗಳೇನು, ಅವನ ಭಾವನೆ, ಧಾರ್ಮಿಕ ಚಿಂತನೆ ಗಳೇನು, ವಿವಿಧ ಘಟನೆಗಳ ಸಂದರ್ಭಗಳಲ್ಲಿ ಅವರ ನಿಲುವುಗಳೇನು ಎಂಬುದಕ್ಕೆಲ್ಲ ಮಾಧ್ಯಮ ಕ್ಷೇತ್ರ ಕನಿಷ್ಠ ಕಿವಿ ಕೊಡುವ ತಾಳ್ಮೆಯನ್ನಾದರೂ ಪ್ರದರ್ಶಿಸಬೇಕು. ಸದ್ಯದ ದಿನಗಳು ಹೇಗಿವೆಯೆಂದರೆ, ತಾಳ್ಮೆಯಿಲ್ಲದ ಮತ್ತು ಮಾಡುವ ಸುದ್ದಿಯ ಗಾಂಭೀರ್ಯತೆಯನ್ನು ಗ್ರಹಿಸಲಾಗದ ಮಂದಿಯಿಂದ ಈ ಕ್ಷೇತ್ರ ತುಂಬಿಹೋಗಿವೆಯೇನೋ ಎಂದು ಅನುಮಾನ ಪಡಬೇಕಾಗುತ್ತದೆ. ಈ ಕಾರಣದಿಂದಲೇ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಯ ಪ್ರಾಮಾಣಿಕತೆಯನ್ನು ಪ್ರಶ್ನಿಸಿ ಭಟ್ಕಳದಲ್ಲಿ ಮೊನ್ನೆ ಬಂದ್ ಗೆ  ಕರೆ ಕೊಡಲಾಯಿತು. ವ್ಯವಸ್ಥೆಯ ಪ್ರಾಮಾಣಿಕತೆಯನ್ನೇ ನಂಬದ ಸ್ಥಿತಿಯೊಂದು ಅಲ್ಲಿ ನಿರ್ಮಾಣವಾಗಿದೆ. ಮಾಧ್ಯಮಗಳ ಮತ್ತು ವ್ಯವಸ್ಥೆಯ ತಪ್ಪು ಹೆಜ್ಜೆಗಳು ಒಂದು ಇಡೀ ನಗರದ ಮನಸ್ಥಿತಿಯನ್ನೇ ಹೇಗೆ ಬದಲಿಸಿಬಿಡಬಲ್ಲುದು ಎಂಬುದಕ್ಕೆ ಇದುವೇ ಅತ್ಯುತ್ತಮ ಉದಾಹರಣೆ. ಇಂಥದ್ದೊಂದು ವಾತಾವರಣದ ಹಿನ್ನೆಲೆಯಲ್ಲಿ ಮುಸ್ಲಿಮ್ ಸಂವೇದನೆ ಅತ್ಯಂತ ಗಂಭೀರ ಚರ್ಚಾವಸ್ತುವಾಗುವ ಅಗತ್ಯವಿದೆ. ಮಾಧ್ಯಮಗಳಿಗೂ ಮುಸ್ಲಿಮ್ ಸಂವೇದನೆಗಳಿಗೂ ಎಷ್ಟರ ಮಟ್ಟಿಗೆ ಸಂಬಂಧ ಮತ್ತು ಅರಿವು ಇದೆ? ಭಯೋತ್ಪಾದನೆಯ ಬಗ್ಗೆ ಮಾಧ್ಯಮ ಕ್ಷೇತ್ರದ ಪ್ರತಿನಿಧಿಯೊಬ್ಬ ಸುದ್ದಿ ತಯಾರಿಸುವಾಗ ಮುಸ್ಲಿಮ್ ಸಂವೇದನೆಯನ್ನು ಎಷ್ಟರ ಮಟ್ಟಿಗೆ ಅರಿತುಕೊಂಡಿರುತ್ತಾನೆ/ಳೆ ಮತ್ತು ಅರಿತಿರಬೇಕು? ಒಂದು ಪ್ರದೇಶದಲ್ಲಾಗುವ ಸ್ಫೋಟದ ಬಗ್ಗೆ ಆ ಸಮಾಜದ ಆಲೋಚನೆಗಳು ಏನೆಲ್ಲ ಮತ್ತು ಹೇಗೆಲ್ಲ ಇವೆ ಎಂಬುದನ್ನೆಲ್ಲ ತೆರೆದ ಮನಸ್ಸಿನಿಂದ ತಿಳಿದುಕೊಳ್ಳುವ ದಾಹ ಮಾಧ್ಯಮ ಕ್ಷೇತ್ರದಲ್ಲಿ ಕಾಣಿಸಿಕೊಳ್ಳಬೇಕಾಗಿದೆ.
   ಮುಸ್ಲಿಮ್ ಪ್ರತಿಭೆಗಳಿಗೆ ಮಾಧ್ಯಮ ಕ್ಷೇತ್ರ ಬಾಗಿಲು ತೆರೆಯುವುದು ಎಷ್ಟು ಮುಖ್ಯವೋ ಪೂರ್ವಾಗ್ರಹ ಪೀಡಿತ ಆಲೋಚನೆಗಳಿಂದ ಮಾಧ್ಯಮ ಕ್ಷೇತ್ರ ಹೊರಬರಬೇಕಾದುದೂ ಅಷ್ಟೇ ಮುಖ್ಯ. ಮುಸ್ಲಿಮ್ ಆಲೋಚನೆಗಳಿಗೆ ಮಾಧ್ಯಮ ಕ್ಷೇತ್ರ ಹೆಚ್ಚೆಚ್ಚು ಸ್ಪೇಸ್ ಕೊಟ್ಟಂತೆಯೇ ಅವುಗಳ ಕುರಿತಾದ ಅನುಮಾನಗಳೂ ನಿಧಾನಕ್ಕೆ ದೂರ ಸರಿಯಬಲ್ಲುದು. ಆದ್ದರಿಂದ ಮುಸ್ಲಿಮ್ ಸಂವೇದನೆ'ಯು ಪತ್ರಿಕೆ ಮತ್ತು ಟಿ.ವಿ. ಮಾಧ್ಯಮಗಳ ಸಂಪಾದಕೀಯ ಸಭೆಗಳಲ್ಲೂ ಹೊರಗೂ ಚರ್ಚೆಗೀಡಾಗಲಿ ಮತ್ತು ಪರಸ್ಪರ ವಿಶ್ವಾಸ ವೃದ್ಧಿಸುವ ಹಾಗೂ ಪೂರ್ವಗ್ರಹ ರಹಿತ ಸತ್ಯಸುದ್ದಿಗಳ ಪ್ರಸಾರಕ್ಕೆ ಈ ಕ್ಷೇತ್ರ ತಮ್ಮನ್ನು ತೆರೆದುಕೊಳ್ಳಲಿ.

No comments:

Post a Comment