Tuesday 20 January 2015

ಜಯೇಶ್ ಶೆಟ್ಟಿ, ವಿಶ್ವನಾಥ ಶೆಟ್ಟಿ, ಭಜನಾ ಮಂದಿರ ಮತ್ತು ಹಿಂದೂ ಹೃದಯ ಸಂಗಮ

    ಪುತ್ತೂರಿನಲ್ಲಿ ನಡೆದ ವಿರಾಟ್ ಹಿಂದೂ ಹೃದಯ ಸಂಗಮವನ್ನು ಹೃದಯ ಜೋಡಿಸುವ ಎರಡು ಘಟನೆಗಳಿಗಾಗಿ ಅಭಿನಂದಿಸಬೇಕಾಗಿದೆ. ಈ ಕಾರ್ಯಕ್ರಮವನ್ನು ಸಂಘಟಿಸಿದವರ ಉದ್ದೇಶ ಏನೆಂಬುದು ಪ್ರಜ್ಞಾಸಿಂಗ್ ಠಾಕೂರ್‍ಳ ಬೃಹತ್ ಕಟೌಟನ್ನು ಸಾರ್ವಜನಿಕ ಸ್ಥಳಗಳಲ್ಲಿ ನಿಲ್ಲಿಸಿದಾಗಲೇ ಜನರಿಗೆ ಮನವರಿಕೆಯಾಗಿತ್ತು. ಮಾಲೆಗಾಂವ್ ಮಸೀದಿಯ ದಫನ ಭೂಮಿಯಲ್ಲಿ ಮತ್ತು ಸಂಜೋತಾ ಎಕ್ಸ್ ಪ್ರೆಸ್‍ನಲ್ಲಿ ಬಾಂಬಿಟ್ಟ ಆರೋಪದಲ್ಲಿ ಜೈಲಲ್ಲಿರುವ ಶಂಕಿತ ಭಯೋತ್ಪಾದಕಿಯನ್ನು 'ಹಿಂದೂ ಹೃದಯ ಸಂಗಮ'ವು ಕಟೌಟ್‍ನಲ್ಲಿ ನಿಲ್ಲಿಸಿ ಗೌರವಿಸುತ್ತದೆಂದರೆ ಆ ಕಾರ್ಯಕ್ರಮವು ಹೇಗಿರಬಹುದು ಮತ್ತು ಅಲ್ಲಿನ ಭಾಷಣಗಳಲ್ಲಿ ಏನೆಲ್ಲ ತುಂಬಿರಬಹುದು ಎಂಬುದನ್ನು ಊಹಿಸುವುದು ಕಷ್ಟದ್ದೇನೂ ಆಗಿರಲಿಲ್ಲ. ತೊಗಾಡಿಯಾ ಮತ್ತು ಡಾ| ಪ್ರಭಾಕರ ಭಟ್ಟರ ಹೆಸರುಗಳು ಭಾಷಣಗಾರರ ಪಟ್ಟಿಯಲ್ಲಿ ಇರುವಾಗ ಆ ಕಾರ್ಯಕ್ರಮವು ಹಿಂದೂ ಮೌಲ್ಯಗಳ ಪ್ರತಿಪಾದನೆಗೆ ವಿೂಸಲಾಗಿರುತ್ತದೆ ಎಂದು ನಂಬುವುದಕ್ಕೆ ಸಾಧ್ಯವೂ ಇರಲಿಲ್ಲ. ಆದ್ದರಿಂದಲೇ, ಈ ಕಾರ್ಯಕ್ರಮಕ್ಕಿಂತ ಮೊದಲೇ ಪೊಲೀಸರು ಶಾಂತಿ ಸಭೆಯನ್ನು ನಡೆಸಿದ್ದರು. ಬಿಗಿ ಪೊಲೀಸ್ ಬಂದೋಬಸ್ತನ್ನು ಏರ್ಪಡಿಸಿದ್ದರು. ಒಂದು ಬಗೆಯ ಭೀತಿ ಮತ್ತು ಸೂತಕದ ವಾತಾವರಣವು ಜಿಲ್ಲೆಯನ್ನಿಡೀ ಆವರಿಸಿಕೊಂಡಿತ್ತು. ಇದಕ್ಕೆ ಪೂರಕವಾಗಿಯೇ ಕಾರ್ಯಕ್ರಮವೂ ನಡೆಯಿತು. ವೇದಿಕೆಯಿಂದ ತೂರಿಬಂದ ಭಾಷಣಗಳು ಎಷ್ಟು ಹರಿತ ಮತ್ತು ಪ್ರಚೋದನಕಾರಿಯಾಗಿತ್ತೆಂಬುದಕ್ಕೆ ಕಾರ್ಯಕ್ರಮವನ್ನು ಆಲಿಸಿ ಹೊರಟು ಹೋದವರ ದಾಂಧಲೆಯೇ ಸಾಕ್ಷಿಯಾಗಿತ್ತು. ಆದರೂ ಎರಡು ಘಟನೆಗಳಿಗಾಗಿ ನಾವು ಈ ಸಂಗಮವನ್ನು ಸದಾ ನೆನಪಿಟ್ಟುಕೊಳ್ಳಬೇಕಾಗಿದೆ. ಕಾರ್ಯಕ್ರಮ ಜರುಗಿದ ಪ್ರದೇಶದ ವ್ಯಾಪ್ತಿಯಲ್ಲೇ ಬರುವ ಕರಾಯ ಎಂಬಲ್ಲಿ ಬದ್ರಿಯಾ ಜುಮ್ಮಾ ಮಸೀದಿ ಮತ್ತು ಗೋಪಾಲ ಕೃಷ್ಣ ಭಜನಾ ಮಂದಿರವಿದೆ. ಇವು ಎದುರು-ಬದುರಾಗಿ ನಿಂತಿವೆ. ಹಿಂದೂ ಹೃದಯ ಸಂಗಮದಿಂದ ಮರಳಿದವರು ಈ ಮಸೀದಿಯ ಮೇಲೆ ದಾಳಿ ನಡೆಸಿದ್ದಾರೆ. ಮಸೀದಿಯ ಒಳಹೊಕ್ಕು ದಾಂಧಲೆ ನಡೆಸಿದ್ದಾರೆ. ಆದರೆ ಇದಕ್ಕೆ ಪ್ರತಿಯಾಗಿ ಒಂದೇ ಒಂದು ಕಲ್ಲು ಗೋಪಾಲ ಕೃಷ್ಣ ಭಜನಾ ಮಂದಿರದ ಮೇಲೆ ಬಿದ್ದಿಲ್ಲ. ಬಹುಶಃ ‘ಹೃದಯ ಸಂಗಮ’ದ ಸಂಘಟಕರು ಮತ್ತು ದಾಂಧಲೆಕೋರರಿಗೆ ನಿಜವಾದ ಧರ್ಮಭಕ್ತರು ರವಾನಿಸಿದ ಮೊದಲ ಧರ್ಮ ಸಂದೇಶ ಇದು. ಇನ್ನೊಂದು, ವಿಶ್ವನಾಥ ಶೆಟ್ಟಿ ಮತ್ತು ಜಯೇಶ್ ಶೆಟ್ಟಿಯವರದು. ದಾಂಧಲೆಕೋರರ ಆವೇಶಕ್ಕೆ ಬೆದರಿ ಓಡಿ ಬಂದ ಮುಹಮ್ಮದ್ ಬಾವಾರಿಗೆ ವಿಶ್ವನಾಥ್ ಶೆಟ್ಟಿಯವರು ತಮ್ಮ ಮನೆಯ ಬಾಗಿಲು ತೆರೆದು ರಕ್ಷಣೆ ಒದಗಿಸಿದರು. ಅವರ ಪತ್ನಿ ಮತ್ತು ಮಕ್ಕಳನ್ನು ಜಯೇಶ್ ಶೆಟ್ಟಿಯವರು ತಮ್ಮ ಮನೆಯೊಳಗೆ ಕೂರಿಸಿದರು. ನಿಜವಾಗಿ, ವಿರಾಟ್ ಹಿಂದೂ ಹೃದಯ ಸಂಗಮದ ಪ್ರಮುಖ ಮೈಲುಗಲ್ಲುಗಳಾಗಿ ಈ ಎರಡು ಘಟನೆಗಳನ್ನು ನಾವು ಪರಿಗಣಿಸಬೇಕಾಗಿದೆ. ಒಂದು ವೇಳೆ, ಈ ಎರಡು ಘಟನೆಗಳು ನಡೆಯದೇ ಇರುತ್ತಿದ್ದರೆ ಇಡೀ ‘ಹೃದಯ ಸಂಗಮ’ವು ದಾಂಧಲೆಗೆ, ವಿಷಕಾರಿ ಭಾಷಣಗಳಿಗೆ ಮತ್ತು ಧರ್ಮ ವಿರೋಧಿ ಆವೇಶಗಳಿಗಾಗಿ ಮಾತ್ರ ಸುದ್ದಿಗೀಡಾಗುತ್ತಿತ್ತು. ಎಷ್ಟು ಮಂದಿ ಸಾವಿಗೀಡಾದರು, ವಿಧವೆ, ಅನಾಥರಾದರು, ಬಂಧನಕ್ಕೀಡಾದರು, ಎಷ್ಟು ನಷ್ಟವಾಯಿತು.. ಎಂಬಿತ್ಯಾದಿಗಳ ಲೆಕ್ಕಾಚಾರಗಳಲ್ಲಿ ಕೊನೆಗೊಳ್ಳುತ್ತಿತ್ತು. ಬಹುಶಃ, ಇಂಥದ್ದೊಂದು ಲೆಕ್ಕಾಚಾರ ಮತ್ತು ವಾತಾವರಣವು ದಾಂಧಲೆಕೋರರ ಬಯಕೆಯೂ ಆಗಿತ್ತು. ಮಸೀದಿಗೆ ಅಥವಾ ಭಜನಾ ಮಂದಿರಕ್ಕೆ ಕಲ್ಲು ಬಿದ್ದಷ್ಟೂ ಜನರಲ್ಲಿ ಅಭದ್ರತೆ ಹೆಚ್ಚಾಗುತ್ತದೆ. ರಕ್ತ ಹರಿದಷ್ಟೂ ಅನುಮಾನ ಬಲಗೊಳ್ಳುತ್ತದೆ. ದಾಂಧಲೆಗಳು ಜನರನ್ನು ಧಾರ್ಮಿಕವಾಗಿ ಧ್ರುವೀಕರಣಗೊಳಿಸುತ್ತದೆ. ಈ ಧ್ರುವೀಕರಣವು ಆ ಬಳಿಕ ಓಟುಗಳಾಗಿಯೂ ಪರಿವರ್ತನೆಗೊಳ್ಳುತ್ತಿದೆ. ಅಷ್ಟಕ್ಕೂ, ವಿರಾಟ್ ಹಿಂದೂ ಸಂಗಮದ ಹಿಂದೆ ಯಾವ ರಾಜಕೀಯ ಪಕ್ಷದ ಹಿಡಿತವಿದೆ ಎಂಬುದನ್ನು ಅರಿತುಕೊಳ್ಳುವುದಕ್ಕೆ ವಿಶೇಷ ತನಿಖೆಯೇನೂ ಬೇಕಾಗಿಲ್ಲ. ಈ ಹಿಂದಿನ ಸಮಾಜೋತ್ಸವಗಳೇ ಇದಕ್ಕೆ ಅತ್ಯುತ್ತಮ ಪುರಾವೆ. ಈ ಕಾರ್ಯಕ್ರಮಕ್ಕಿಂತ ಎರಡು ವಾರಗಳ ಮೊದಲಷ್ಟೇ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಬೆಂಗಳೂರಿಗೆ ಬಂದಿದ್ದರು. ಕಾಂಗ್ರೆಸ್ ಸರಕಾರವನ್ನು ಕಿತ್ತೊಗೆಯುವುದು ಅವರ ಉದ್ದೇಶವಾಗಿತ್ತು. ಈ ಉದ್ದೇಶವನ್ನು ಜಾರಿಗೊಳಿಸುವುದು ಹೇಗೆ ಎಂಬುದನ್ನು ಅವರು ಕಳೆದ ಲೋಕಸಭಾ ಚುನಾವಣೆಯಲ್ಲಿಯೇ ತೋರಿಸಿಕೊಟ್ಟಿದ್ದರು.
ಮನಮೋಹನ್ ಸಿಂಗ್‍ರ ಕಾಂಗ್ರೆಸ್ ಸರಕಾರವನ್ನು ಪದಚ್ಯುತಗೊಳಿಸುವ ಉದ್ದೇಶದೊಂದಿಗೆ ಉತ್ತರ ಪ್ರದೇಶಕ್ಕೆ ಹೋದ ಅವರು ಅಲ್ಲಿ ‘ಮುಝಫ್ಫರ್ ನಗರ'ದ ಮೂಲಕ ತನ್ನ ಗುರಿಯನ್ನು ಮುಟ್ಟಿದ್ದರು. ಆದ್ದರಿಂದಲೇ, ಪುತ್ತೂರು ಹಿಂದೂ ಹೃದಯ ಸಂಗಮದ ಭಾಷಣಗಳು ಮತ್ತು ದಾಂಧಲೆಗಳ ಬಗ್ಗೆ ಅನುಮಾನ ಪಡಬೇಕಾಗಿದೆ. ಕರ್ನಾಟಕದಿಂದ ಕಾಂಗ್ರೆಸ್ ಸರಕಾರವನ್ನು ಪದಚ್ಯುತಗೊಳಿಸಬಲ್ಲ ಚಾರಿತ್ರ್ಯವಂತ ನಾಯಕರಾಗಲಿ, ನೀತಿವಂತ ವ್ಯಕ್ತಿಗಳಾಗಲಿ ಬಿಜೆಪಿಯಲ್ಲಿಲ್ಲ. ಕೆಡುಕು ಎಂಬ ಪದ ಯಾವೆಲ್ಲ ಮತ್ತು ಏನೆಲ್ಲ ಅಂಶಗಳನ್ನು ಧ್ವನಿಸುತ್ತದೆಯೋ ಅವೆಲ್ಲವನ್ನೂ ಇಡಿಯಾಗಿ ಧ್ವನಿಸುವ ಒಂದು ಪುಂಡರ ತಂಡವಷ್ಟೇ ರಾಜ್ಯ ಬಿಜೆಪಿಯಲ್ಲಿದೆ. ಈ ನಾಯಕರನ್ನಷ್ಟೇ ನಂಬಿಕೊಂಡು ಕಾಂಗ್ರೆಸ್ ರಹಿತ ಕರ್ನಾಟಕದ ಜಾರಿಗೆ ಇಳಿದರೆ ‘ಬಿಜೆಪಿ ರಹಿತ ಕರ್ನಾಟಕವಷ್ಟೇ’ ಸೃಷ್ಟಿಯಾದೀತು ಎಂಬ ಸತ್ಯವನ್ನು ಅಮಿತ್ ಶಾ ಈಗಾಗಲೇ ಕಂಡುಕೊಂಡಿದ್ದಾರೆ. ಆದ್ದರಿಂದ, ಈ ಕೊರತೆಯನ್ನು ತುಂಬುವುದಕ್ಕಾಗಿ ಹಿಂದೂ ಸಂಗಮದಂಥ ಕಾರ್ಯಕ್ರಮವನ್ನು ಬಳಸಿಕೊಳ್ಳುವುದು ಅಮಿತ್ ಶಾರ ಪಾಲಿಗೆ ಅನಿವಾರ್ಯವಾಗಿದೆ. ಒಂದು ರೀತಿಯಲ್ಲಿ, ಹಿಂದೂ ಸಮಾಜೋತ್ಸವಗಳು ಏರ್ಪಾಡಾಗುವುದೇ ರಾಜಕೀಯ ಲೆಕ್ಕಾಚಾರದಲ್ಲಿ. ಅಲ್ಲಿಂದ ಕೇಳಿ ಬರುವ ಭಾಷಣಗಳಲ್ಲಿ ಅತ್ಯಂತ ಹೆಚ್ಚು ಪ್ರಸ್ತಾಪವಾಗುವುದೂ ಅನ್ಯಧರ್ಮಗಳು ಮತ್ತು ಅದರ ಅನುಯಾಯಿಗಳೇ. ಪುತ್ತೂರಿನಲ್ಲಿ ನಡೆದಿರುವುದೂ ಇದೇ. ಆದರೆ ಜಯೇಶ್ ಮತ್ತು ವಿಶ್ವನಾಥ ಶೆಟ್ಟಿಯವರು ಈ ಮಾದರಿಯನ್ನು ಬಹಿರಂಗವಾಗಿಯೇ ಪ್ರಶ್ನಿಸಿದ್ದಾರೆ. ಮುಸ್ಲಿಮರನ್ನು ಮತ್ತು ಅವರ ಆರಾಧನಾಲಯಗಳನ್ನು ಕಾಣುವಾಗ ಆವೇಶಗೊಳ್ಳುವ ‘ಹಿಂದೂ ಹೃದಯ ಸಂಗಮ'ದ ಮಾದರಿಗೆ ಪರ್ಯಾಯವಾಗಿ ಮುಸ್ಲಿಮರಿಗೆ ರಕ್ಷಣೆ ಒದಗಿಸುವ ‘ಹೃದಯ ಸಂಗಮ’ದ ಮಾದರಿಯನ್ನು ಅವರು ಪ್ರಸ್ತುತಪಡಿಸಿದ್ದಾರೆ. ಆದ್ದರಿಂದ, ಈ ಎರಡು ಮಾದರಿಗಳನ್ನು ರಾಜ್ಯದ ಮಂದಿ ಮುಖಾಮುಖಿಗೊಳಿಸಿ ವಿಶ್ಲೇಷಿಸಬೇಕಾಗಿದೆ. ಈ ರಾಜ್ಯಕ್ಕೆ ಇವತ್ತು ಅಗತ್ಯವಿರುವ ಮಾದರಿ ಯಾವುದು? ಹಿಂದೂ ಹೃದಯ ಸಂಗಮಕ್ಕೆ ಯಾವ ಮಾದರಿ ಆಧಾರವಾಗಿರಬೇಕು? ಯಾರು ಅದರ ಪ್ರತಿನಿಧಿಗಳಾಗಬೇಕು- ಜಯೇಶ್ ಶೆಟ್ಟಿ, ವಿಶ್ವನಾಥ್ ಶೆಟ್ಟಿಯೋ ಅಥವಾ ತೊಗಾಡಿಯಾ, ಪ್ರಭಾಕರ ಭಟ್ಟರೋ? ಹಾಗೆಯೇ, ಮುಸ್ಲಿಮರೂ ಈ ಸಂದರ್ಭವನ್ನು  ಸ್ವಅವಲೋಕನಕ್ಕೆ ಬಳಸಿಕೊಳ್ಳಬೇಕು. ತಮಗೆ ಮಾದರಿಯಾಗಬೇಕಾದುದು ಯಾವುದು- ಯಾವ ಹಾನಿಯೂ ತಟ್ಟದ ಗೋಪಾಲಕೃಷ್ಣ ಭಜನಾ ಮಂದಿರವೋ ಅಥವಾ..
   ನಿಜವಾಗಿ, ವಿರಾಟ್ ಹಿಂದೂ ಹೃದಯ ಸಂಗಮ ಎಂಬ ಧ್ಯೇಯವಾಕ್ಯ ಮತ್ತು ಅದು ಧ್ವನಿಸುವ ಸಂದೇಶವು ಖಂಡಿತ ಅಪಾಯಕಾರಿಯಲ್ಲ. ಹಿಂದೂ ಧರ್ಮೀಯರನ್ನು ಒಂದೆಡೆ ಸೇರಿಸುವುದು, ಹಿಂದೂ ಧರ್ಮದ ಮೌಲ್ಯಗಳ ಬಗ್ಗೆ ಚರ್ಚಿಸುವುದು, ಹೃದಯಗಳನ್ನು ಜೋಡಿಸುವುದೆಲ್ಲ ಯಾವುದೇ ಸಮಾಜದ ಪಾಲಿಗೆ ಆತಂಕಕಾರಿ ಸಂಗತಿಗಳಲ್ಲ. ಆದರೆ, ಆತಂಕವನ್ನು ಹುಟ್ಟಿಸುವುದಕ್ಕಾಗಿ ಇಂಥ ಸಭೆಗಳನ್ನು ಏರ್ಪಡಿಸಲಾಗುತ್ತಿದೆಯೋ ಎಂದು ಅನುಮಾನಿಸಲೇಬೇಕಾದ ರೀತಿಯಲ್ಲಿ ಘಟನೆಗಳು ನಡೆಯುತ್ತಿರುವುದನ್ನು ನೋಡುವಾಗ ಧ್ಯೇಯವಾಕ್ಯದ ಪ್ರಾಮಾಣಿಕತೆಯನ್ನೇ ಸಂಶಯಿಸಬೇಕಾಗುತ್ತದೆ. ಹಿಂದೂ ಹೃದಯ ಸಂಗಮದ ವೇದಿಕೆಯಿಂದ ಕೇಳಿ ಬರುವ ಮಾತುಗಳು ಮತ್ತು ಅದನ್ನು ಆಲಿಸಿದ ಮಂದಿಯ ದಾಂಧಲೆಗಳನ್ನು ಅವಲೋಕಿಸುವಾಗ ಆ ಧ್ಯೇಯವಾಕ್ಯಕ್ಕೂ ಹಿಂದೂ ಧರ್ಮಕ್ಕೂ ಏನು ಸಂಬಂಧ ಎಂದು ಪ್ರಶ್ನಿಸಬೇಕಾಗುತ್ತದೆ. ಹಿಂದೂಗಳ ಹೃದಯವನ್ನು ಜೋಡಿಸುವುದಕ್ಕೆ ಮುಸ್ಲಿಮರ ಹೃದಯವನ್ನು ಒಡೆಯಬೇಕೇ? ಇನ್ನೊಂದು ಧರ್ಮೀಯರನ್ನು ಮತ್ತು ಅವರ ಆರಾಧನಾಲಯಗಳನ್ನು ಘಾಸಿಗೊಳಿಸುವುದರಲ್ಲಿ ಹಿಂದೂ ಧರ್ಮದ ಹಿತ ಅಡಗಿದೆಯೇ? ಯಾರು ಹಿಂದೂ ಧರ್ಮಕ್ಕೆ ಇಂಥದ್ದೊಂದು ಕಳಂಕವನ್ನು ಹಚ್ಚುತ್ತಿರುವುದು? ಅವರ ಉದ್ದೇಶವೇನು? ಅವರಿಂದ ಹಿಂದೂ ಧರ್ಮಕ್ಕೆ ಎಷ್ಟರ ಮಟ್ಟಿಗೆ ಹಿತವಿದೆ? ಅವರನ್ನೇಕೆ ಹಿಂದೂ ಸಮಾಜ ತರಾಟೆಗೆ ಎತ್ತಿಕೊಳ್ಳಬಾರದು? ಕೊರಳಪಟ್ಟಿ ಹಿಡಿದು ಹಿಂದೂ ಧರ್ಮದ ನಿಜ ಮೌಲ್ಯವನ್ನು ಅವರಿಗೆ ತಿಳಿ ಹೇಳಬಾರದು? ಹಿಂದೂ ಸಮಾಜವು ಈ ಕುರಿತಂತೆ ಗಂಭೀರವಾಗಿ ಆಲೋಚಿಸುವ ಅಗತ್ಯವಿದೆ.
 

No comments:

Post a Comment